varthabharthi


ಸಂಪಾದಕೀಯ

ವಿರೋಧಿಸುವವರ ಮುಂದೆ ವಿಕ್ರಮ ರೂಪ ತಳೆಯುತ್ತಿರುವ ಟಿಪ್ಪು

ವಾರ್ತಾ ಭಾರತಿ : 2 Nov, 2019

ವಿಷ ಬೀಜವನ್ನು ಬಿತ್ತಿ ಅದಕ್ಕೆ ನೀರೂಡಿ ಅಮೃತ ಫಲಗಳನ್ನು ನೀಡುತ್ತಿಲ್ಲ ಎಂದು ಕೊರಗಿದರೆ ಹೇಗೆ? ಇತಿಹಾಸವನ್ನು ತಿರುಚಿ, ಸಮಾಜವನ್ನು ಒಡೆದು, ಜನರ ಭಾವನಾತ್ಮಕ ವಿಷಯಗಳಲ್ಲಿ ಚೆಲ್ಲಾಟವಾಡುತ್ತಾ ಅಧಿಕಾರ ಹಿಡಿದ ನಾಯಕರಿಂದ ಅಭಿವೃದ್ಧಿಯ ಫಲವನ್ನು ನಿರೀಕ್ಷಿಸಿದರೆ ಅದು ಯಾರ ತಪ್ಪು? ದೇಶಾದ್ಯಂತ ನಿರುದ್ಯೋಗ ಹೆಚ್ಚುತ್ತಿವೆ. ಅರ್ಥ ವ್ಯವಸ್ಥೆ ಸಂಪೂರ್ಣ ಕುಸಿದು ಕೂತಿದೆ. ಆರು ವರ್ಷಗಳಲ್ಲಿ ದೇಶ 90 ಲಕ್ಷ ಉದ್ಯೋಗಗನ್ನ್ನು ಕಳೆದುಕೊಂಡಿದೆ ಎಂದು ವರದಿಯೊಂದು ತಿಳಿಸಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದು ಅತ್ಯಧಿಕವಾಗಿದೆ. ಆದರೆ ಇದಕ್ಕೆಲ್ಲ ಸರಕಾರ ತಲೆಕೆಡಿಸಿಕೊಂಡಂತಿಲ್ಲ. ಜನರು ತಮ್ಮಿಂದ ಉದ್ಯೋಗ, ಶಿಕ್ಷಣ, ಆರೋಗ್ಯದಂತಹ ವಿಷಯಗಳನ್ನು ನಿರೀಕ್ಷಿಸುತ್ತಿಲ್ಲ ಎಂದು ಇದು ಬಲವಾಗಿ ನಂಬಿಕೊಂಡಿದೆೆ. ಅಭಿವೃದ್ಧಿಗೆ ಸಂಬಂಧಿಸಿ ಕೇಳುವ ಪ್ರಶ್ನೆಗಳಿಗೆಲ್ಲ ಅದು ಮೊಗಲರು, ನೆಹರೂ, ಇಂದಿರಾಗಾಂಧಿ, ಮನಮೋಹನ್ ಸಿಂಗ್ ಕಡೆಗೆ ಕೈತೋರಿಸುತ್ತಿದೆ. ಜೊತೆಗೆ ಉದ್ಯೋಗ, ಶಿಕ್ಷಣ, ಆಹಾರ, ಆರೋಗ್ಯಗಳನ್ನು ಕೇಳಿದವರಿಗೆ, ರಾಮಮಂದಿರ, ಎನ್‌ಆರ್‌ಸಿ, ಕಾಶ್ಮೀರ ಇತ್ಯಾದಿ ವಿಷಯಗಳನ್ನು ಮುಂದಿಟ್ಟು ಸಮಾಧಾನಿಸುತ್ತಿದೆೆ.

ಅದೇ ಮಾರ್ಗವನ್ನು ರಾಜ್ಯದಲ್ಲಿ ಬಿಜೆಪಿಯೂ ಅನುಸರಿಸಲು ಹೊರಟಿದೆ. ರಾಜ್ಯ ನೆರೆಯಿಂದ ತತ್ತರಿಸಿದೆ. ಕೇಂದ್ರ ಸರಕಾರದ ಪೂರ್ಣ ಸಹಕಾರ ಸಿಗದ ಕಾರಣದಿಂದಾಗಿ ಸಂತ್ರಸ್ತರಿಗೆ ಸೂಕ್ತ ಪರಿಹಾರಗಳನ್ನು ಒದಗಿಸಲು ವಿಫಲವಾಗಿದೆ. ಇದೀಗ ಈ ವೈಫಲ್ಯವನ್ನು ಮುಚ್ಚಿ ಹಾಕಲು, ಮಾಧ್ಯಮಗಳಲ್ಲಿ ಸರಕಾರ ಬೇರೆಯೇ ಚರ್ಚೆಯೊಂದನ್ನು ಹುಟ್ಟು ಹಾಕಿದೆ. ಈವರೆಗೆ ಇದ್ದ ‘ಟಿಪ್ಪು ಜಯಂತಿ -ಬೇಕೇ ? ಬೇಡವೇ?’ ಎಂಬ ಚರ್ಚೆಯನ್ನು, ಟಿಪ್ಪು ಚರಿತ್ರೆ ಪಠ್ಯ ಪುಸ್ತಕಗಳಲ್ಲಿ ಬೇಕೇ ಬೇಡವೇ ಎಂಬ ಹಂತಕ್ಕೆ ಕೊಂಡೊಯ್ದಿದೆ. ನೆರೆ ಸಂತ್ರಸ್ತರು ಮಾಧ್ಯಮಗಳಲ್ಲಿ ತಮ್ಮ ಸುದ್ದಿಗಳಿಗೆ ಬದಲು, ಟಿಪ್ಪು ಪರ-ವಿರುದ್ಧವಾದ ಚರ್ಚೆಗಳನ್ನು ಓದಿ ಸಂತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಇಷ್ಟಕ್ಕೂ ಟಿಪ್ಪು ಇತಿಹಾಸದ ಬಗ್ಗೆ ಮಾತನಾಡಬೇಕಾದದವರು ರಾಜಕಾರಣಿಗಳಲ್ಲ; ಇತಿಹಾಸಕಾರರು, ಸಂಶೋಧಕರು. ಟಿಪ್ಪು ಸುಲ್ತಾನ್‌ನ ಸಾಧನೆಗಳ ಕುರಿತಂತೆ ರಾಜ್ಯದ ಅಷ್ಟೇ ಅಲ್ಲ, ದೇಶ ವಿದೇಶಗಳ ಇತಿಹಾಸಕಾರರು ಬರೆದಿದ್ದಾರೆ. ಆತನ ಆಡಳಿತ ಮತ್ತು ಯುದ್ಧಗಳ ಕುರಿತಂತೆ ಚರ್ಚೆ ನಡೆಸಿದ್ದಾರೆ. ಇಂದು ಈ ದೇಶ ಯಾವೆಲ್ಲ ರಾಜರನ್ನು ವೈಭವೀಕರಿಸುತ್ತಿದೆಯೋ ಆ ಎಲ್ಲಾ ರಾಜರೂ ಭಯಾನಕ ಯುದ್ಧಗಳಲ್ಲಿ ಭಾಗವಹಿಸಿದ್ದಾರೆ. ‘ಹಿಂದುತ್ವ’ದ ಕಣ್ಮಣಿಗಳಾಗಿರುವ ಚಿತ್ಪಾವನ ಪೇಶ್ವೆಗಳಂತೂ ಇತಿಹಾಸ ಪುಟಗಳಲ್ಲ ಲೂಟಿಕೋರರು ಎಂದೇ ಕುಖ್ಯಾತರಾಗಿದ್ದಾರೆ. ಒಂದು ರೀತಿಯಲ್ಲಿ ಈ ಪೇಶ್ವೆಗಳು ಜಾತ್ಯತೀತರು. ಅವರು ಲೂಟಿ ಮಾಡುವ ಸಂದರ್ಭದಲ್ಲಿ ದೇವಾಲಯ, ಮಸೀದಿ ಎಂದೆಲ್ಲ ಭೇದಭಾವ ಮಾಡಲಿಲ್ಲ. ಪಶ್ಚಿಮಬಂಗಾಳ, ಕರ್ನಾಟಕ ಸೇರಿದಂತೆ ಹಲವೆಡೆ ಇವರು ಹಿಂದೂ, ಮುಸ್ಲಿಮರೆನ್ನದೆ ಜಾತ್ಯತೀತವಾಗಿ ಹಿಂಸಾಚಾರವನ್ನು ಗೈದರು. ದಲಿತರು ಮತ್ತು ಮುಸ್ಲಿಮರನ್ನು ಜೊತೆಗಿಟ್ಟುಕೊಂಡು ಶಿವಾಜಿ ಮೊಗಲರನ್ನು ಎದುರಿಸಿ ಕಟ್ಟಿದ ರಾಜ್ಯವನ್ನು ಕಪಟತನದಿಂದ ತನ್ನದಾಗಿಸಿಕೊಂಡ ಈ ಪೇಶ್ವೆಗಳ ಕಾಲ ಜಾತೀ ಭೇದಗಳ ಉತ್ಕರ್ಷದ ಕಾಲ. ಈ ಕಾರಣದಿಂದಲೇ ಪೇಶ್ವೆ ಸಾಮ್ರಾಜ್ಯ ಕೇವಲ 500 ಮಂದಿ ಮಹಾರ್ ದಲಿತ ಸೇನಾನಿಗಳಿಂದ ಪತನಗೊಂಡಿತು.

ಆದರೂ ನಾವಿಂದು ಪೇಶ್ವೆಗಳ ಇತಿಹಾಸವನ್ನು, ಅವರ ಇತಿಹಾಸವನ್ನಾಧರಿಸಿದ ಸಿನೆಾಗಳನ್ನು ನೋಡುತ್ತೇವೆ. ಈ ದೇಶದ ಪಾಲಿನ ಆದರ್ಶವಾಗಿರುವ ಏಕೈಕ ಮಹಾ ಚಕ್ರವರ್ತಿ ಅಶೋಕ. ಒಂದು ಕಾಲದಲ್ಲಿ ಆತನೂ ಕ್ರೂರಿಯೇ ಆಗಿದ್ದ. ಚಕ್ರವರ್ತಿಯೊಬ್ಬ ಯುದ್ಧವನ್ನು ನಡೆಸದೇ ವಿಶಾಲ ಸಾಮ್ರಾಜ್ಯವನ್ನು ಕಟ್ಟುವುದಕ್ಕೆ ಸಾಧ್ಯವಿಲ್ಲ. ‘ಟಿಪ್ಪು ಸುಲ್ತಾನ ಯುದ್ಧ ಮಾಡಿದಾಗ ಮಾತ್ರ ರಕ್ತದ ಓಕುಳಿ ಹರಿಯಿತು, ಅಶೋಕ ಯುದ್ಧ ಮಾಡಿದಾಗ ರಕ್ತ ಸುರಿಯಲೇ ಇಲ್ಲ’ ಎನ್ನಲಾಗುತ್ತದೆಯೇ?’ ಕಳಿಂಗ ಯುದ್ಧದ ನರಮೇಧ ಸ್ವತಃ ಅಶೋಕನನ್ನೇ ಬೆಚ್ಚಿ ಬೀಳಿಸಿತು ಮತ್ತು ಯುದ್ಧಗಳಿಂದ ದೂರ ಉಳಿಯುವಂತೆ ಮಾಡಿತು. ಈ ದೇಶದೊಳಗೆ ವಿದೇಶಿಯರು ಕಾಲಿಡುವ ಮೊದಲು ರಾಜ-ರಾಜರ ನಡುವೆ ಯುದ್ಧ ನಡೆಯುತ್ತಿತ್ತು. ಶಿವಾಜಿಯ ಸೈನ್ಯ ಬೆಳವಡಿ ಮಲ್ಲಮ್ಮನ ಗಂಡನನ್ನು ಕೊಂದು ಹಾಕಿದ್ದು, ಆಕೆಯನ್ನು ಸೆರೆಹಿಡಿದುದನ್ನು ಏನೆಂದು ಕರೆಯೋಣ?ಚಿಕ್ಕವೀರ ರಾಜೇಂದ್ರನ ವಂಶಸ್ಥರು ನಡೆಸಿದ ಕ್ರೌರ್ಯಗಳನ್ನು ಯಾವ ಬಟ್ಟೆಯಿಂದ ಒರೆಸಿ ಹಾಕೋಣ? ಅಷ್ಟೇ ಏಕೆ, ಬೌದ್ಧರ ಮೇಲೆ ಶಂಕರಾಚಾರ್ಯರು ಮೆರೆದ ಕ್ರೌರ್ಯ, ಶೂದ್ರರೆಲ್ಲ ನರಕಕ್ಕೆ ಅರ್ಹರು ಎಂದ ಮಧ್ವಾಚಾರ್ಯರ ಕ್ರೌರ್ಯ, ತಮಿಳುನಾಡಿನಲ್ಲಿ ಶೈವ-ವೈಷ್ಣವರ ನಡುವಿನ ಹಿಂಸಾಚಾರ, ರಾಮಾನುಜಾಚಾರ್ಯರು ಪಲಾಯನ ಮಾಡಿ ಕರ್ನಾಟಕಕ್ಕೆ ಆಗಮಿಸಲು ಕಾರಣವಾದ ಕ್ರೌರ್ಯ, ಅವೆಲ್ಲ ಬೇಡ, ಕೇರಳದಲ್ಲಿ ನಂಬೂದಿರಿ ಬ್ರಾಹ್ಮಣರು ಶೂದ್ರರು ಮತ್ತು ದಲಿತರ ಮೇಲೆ ನಡೆಸಿದ ಅತ್ಯಾಚಾರ, 12ನೇ ಶತಮಾನದಲ್ಲಿ ವೈದಿಕರು ನಡೆಸಿದ ಬಸವಣ್ಣ ನೇತೃತ್ವದ ಲಿಂಗಾಯತರ ಸಾಮೂಹಿಕ ಹತ್ಯಾಕಾಂಡ....ಇವೆಲ್ಲವನ್ನು ಇತಿಹಾಸ ಪುಟಗಳಿಂದ ಹರಿದು ಹಾಕಲು ಸಾಧ್ಯವೇ? ಈ ಎಲ್ಲ ಯುದ್ಧ, ಹಿಂಸೆಗಳನ್ನು ಮುಂದಿಟ್ಟುಕೊಂಡು ಶಿವಾಜಿ, ಪೇಶ್ವೆ, ಅಶೋಕ, ಶಂಕರಾಚಾರ್ಯ, ಮಧ್ವಾಚಾರ್ಯ ಮೊದಲಾದವರನ್ನು ಅಧ್ಯಯನ ಮಾಡದೇ ಇರುವುದಕ್ಕೆ ಸಾಧ್ಯವೇ?

  ಇಷ್ಟಕ್ಕೂ ಟಿಪ್ಪು ಸುಲ್ತಾನ್ ಕರ್ನಾಟಕಕ್ಕೆ ಸೀಮಿತನಾದ ರಾಜನಲ್ಲ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಕರ್ನಾಟಕದ ಹೆಮ್ಮೆಯ ಅರಸ. ವಿದೇಶಗಳಲ್ಲಿ ಟಿಪ್ಪು ಗುರುತಿಸಿಕೊಂಡಿರುವುದು ತನ್ನ ಯುದ್ಧದ ಕಾರಣಕ್ಕಾಗಿಯೋ, ಸ್ವಾತಂತ್ರ ಹೋರಾಟದ ಕಾರಣಕ್ಕಾಗಿಯೋ ಅಲ್ಲ ಎನ್ನುವ ಅಂಶವನ್ನು ಗಮನಿಸಬೇಕು. ಕಿತ್ತೂರು ಚೆನ್ನಮ್ಮ, ಕೆಳದಿ ಚೆನ್ನಮ್ಮ, ಅಬ್ಬಕ್ಕ ಸೇರಿದಂತೆ ಹಲವು ರಾಜ ರಾಣಿಯರು ಬ್ರಿಟಿಷರ ವಿರುದ್ಧ ಹೋರಾಡಿರಬಹುದು. ಟಿಪ್ಪು ಸೇರಿದಂತೆ ಇವರೆಲ್ಲರೂ ತಮ್ಮ ತಮ್ಮ ಸಾಮ್ರಾಜ್ಯಗಳನ್ನು ಉಳಿಸುವುದಕ್ಕಾಗಿಯೇ ಹೋರಾಡಿದರು. ಝಾನ್ಸಿ ರಾಣಿ ಲಕ್ಷ್ಮೀಬಾಯಿಯಂತೂ, ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎನ್ನುವ ನೀತಿಯನ್ನು ಬ್ರಿಟಿಷರು ಜಾರಿಗೆ ತಂದ ಬಳಿಕ ಸಂಗ್ರಾಮಕ್ಕೆ ಇಳಿದರು. ಆದರೆ ಇಂದು ಟಿಪ್ಪು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವುದು ಆತನ ಅತ್ಯಾಧುನಿಕ ಚಿಂತನೆಗಳಿಗಾಗಿ. ಇಂದಿಗೂ ನಾಸಾದಲ್ಲಿ ಟಿಪ್ಪುವಿನ ರಾಕೆಟ್ ಚಿತ್ರವಿದೆ. ಇದು ಕರ್ನಾಟಕಕ್ಕೆ ಹೆಮ್ಮೆಯ ವಿಷಯ. ಚರಿತ್ರೆಯ ಪುಟಗಳಿಂದ ಟಿಪ್ಪುವನ್ನು ಅಳಿಸಿ ಹಾಕುವುದು ಅಷ್ಟು ಸುಲಭವಿಲ್ಲ. ಯಾಕೆಂದರೆ ಅವನನ್ನು ಅಳಿಸಿ ಹಾಕಿದರೆ ಅವನ ಜೊತೆ ಜೊತೆಗೆ, ಅವರು ಹೆಮ್ಮೆಯಿಂದ ಅಭಿವೃದ್ಧಿಪಡಿಸಿದ ಅಮೃತಮಹಲ್‌ರಾಸುಗಳ ಇತಿಹಾಸವನ್ನು ಅಳಿಸಬೇಕಾಗುತ್ತದೆ. ಚೀನಾದಿಂದ ರೇಷ್ಮೆ ಕರ್ನಾಟಕಕ್ಕೆ ಹೇಗೆ ಕಾಲಿಟ್ಟಿತು ಎನ್ನುವ ಇತಿಹಾಸವನ್ನು ಉಜ್ಜಿ ತೆಗೆಯಬೇಕಾಗುತ್ತದೆ. ಪ್ರಪ್ರಥಮವಾಗಿ ರಾಕೆಟ್ ಬಳಸಿದ ರಾಜನು ಯಾರು ಎನ್ನುವ ಪ್ರಶ್ನೆಯನ್ನೇ ಅಳಿಸಬೇಕಾಗುತ್ತದೆ. ಚನ್ನಪಟ್ಟಣದ ಗೊಂಬೆಗೆ 17ನೇ ಶತಮಾನದಲ್ಲಿ ಪ್ರೋತ್ಸಾಹ ಕೊಟ್ಟವನು ಯಾರು ಎಂಬ ಪ್ರಶ್ನೆ ಉತ್ತರವಿಲ್ಲದೆ ಬಿದ್ದುಕೊಳ್ಳುತ್ತದೆ.

ದಲಿತರಿಗೆ ಭೂಮಿಯನ್ನು ಕೊಟ್ಟ, ದಲಿತರನ್ನು ದಂಡನಾಯಕನನ್ನಾಗಿ ಮಾಡಿದ ಕರ್ನಾಟಕದ ಏಕೈಕ ಅರಸ ಟಿಪ್ಪು. ಇಂದಿಗೂ ಟಿಪ್ಪು ಕೊಟ್ಟ ಉಂಬಳಿಗಳು, ದತ್ತಿಗಳು ದಾಖಲೆಗಳಲ್ಲಿವೆ. ಅವುಗಳನ್ನೆಲ್ಲ ನಾಶ ಪಡಿಸಬೇಕಾಗುತ್ತದೆ. ಹಲವು ದೇವಸ್ಥಾನಗಳ ಹೆಬ್ಬಾಗಿಲಲ್ಲೇ ಟಿಪ್ಪುವನ್ನು ಸ್ಮರಿಸಲಾಗಿದೆ. ಅವುಗಳನ್ನು ಒಡೆದು ಹಾಕಬೇಕಾಗುತ್ತದೆ. ಅಷ್ಟೇ ಯಾಕೆ, ಕೃಷ್ಣರಾಜ ಸಾಗರ ಅಣೆಕಟ್ಟಿನ ಮುಂದೆ ಟಿಪ್ಪುವಿನ ಕಾಲದ ಶಾಸನವನ್ನು ಅಂಟಿಸಲಾಗಿದೆ. ಈ ಅಣೆಕಟ್ಟು ಟಿಪ್ಪುವಿನ ಕನಸಾಗಿತ್ತು ಎನ್ನುವುದನ್ನು ಅದು ಹೇಳುತ್ತದೆ. ಆ ಶಾಸನವನ್ನು ಇಲ್ಲವಾಗಿಸಬೇಕಾಗುತ್ತದೆ. ಕೇರಳದಲ್ಲಿ ಸ್ತನ ತೆರಿಗೆಯೆನ್ನುವ ಕರಾಳ ಕಾಯ್ದೆಯನ್ನು ತನ್ನ ಕತ್ತಿಯಲಗಿನ ಮೂಲಕವೇ ಇಲ್ಲವಾಗಿಸಿದ ಟಿಪ್ಪುವನ್ನು ಚರಿತ್ರೆಯ ಪುಟಗಳಿಂದ ಹರಿದು ಹಾಕುವುದು ಅಷ್ಟು ಸುಲಭವಿಲ್ಲ. ಯಾರೆಲ್ಲ ದಲಿತರ ಹಕ್ಕುಗಳ ವಿರೋಧಿಗಳೋ, ಯಾರೆಲ್ಲ ಸ್ತನ ತೆರಿಗೆಯನ್ನು ಬೆಂಬಲಿಸಿದ್ದರೋ, ಯಾರು ಬ್ರಿಟಿಷರ ಜೀತ ಮಾಡುತ್ತಿದ್ದರೋ, ಯಾರು ಜಮೀನ್ದಾರರ ಚೇಲಾಗಳಾಗಿದ್ದರೋ ಅವರಷ್ಟೇ ಟಿಪ್ಪುವನ್ನು ವಿರೋಧಿಸಬಲ್ಲರು. ಈ ಸರಕಾರ ಟಿಪ್ಪುವನ್ನು ಯಾಕೆ ವಿರೋಧಿಸುತ್ತಿದೆ ಎನ್ನುವುದನ್ನು ಅದರಲ್ಲೇ ಉತ್ತರವಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)