varthabharthi


ಗಲ್ಫ್ ಸುದ್ದಿ

ದಮ್ಮಾಮ್: ಇಂಡಿಯನ್ ಸೋಷಿಯಲ್ ಫೋರಂನಿಂದ ಕನ್ನಡ ರಾಜ್ಯೋತ್ಸವ ಆಚರಣೆ

ವಾರ್ತಾ ಭಾರತಿ : 3 Nov, 2019

ದಮ್ಮಾಮ್: "ಭಾರತ ವಿವಿಧ ಜಾತಿ, ಧರ್ಮ, ಭಾಷೆ, ಮತ್ತು ಸಂಸ್ಕೃತಿಗೆ ತಾಯ್ನೆಲವಾಗಿದೆ. ಸ್ವಾತಂತ್ರ್ಯೋತ್ತರ 1950ರ ದಶಕದಲ್ಲಿ ರಾಜ್ಯ ರಚನೆಯ ವಿಷಯ ಪ್ರಸ್ತಾಪವಾದಾಗ ಆಯಾ ರಾಜ್ಯಗಳಲ್ಲಿ ಭಾಷಾವಾರು ವಿಂಗಡಣೆಗಾಗಿ ಚಳವಳಿಗಳು ನಡೆದು ಭಾಷೆಯ ಆಧಾರದಲ್ಲಿ ರಾಜ್ಯಗಳು ಸ್ಥಾಪನೆಯಾದವು. ಆದರೆ ಇಂದು ದೇಶದಲ್ಲಿ ಭಾಷಾ ವೈವಿಧ್ಯವನ್ನು ನಾಶಪಡಿಸಿ  ಏಕ ಭಾಷೆ, ಏಕಸಂಸ್ಕೃತಿಯನ್ನು ಹೇರುವಂತಹ ಪ್ರಯತ್ನಗಳು ನಡೆಯುತ್ತಿದ್ದು, ನಾವೆಲ್ಲರೂ ಒಕ್ಕೊರಲಿನ ದನಿಯೊಂದಿಗೆ ಇದನ್ನು ವಿರೋಧಿಸಬೇಕಾಗಿದೆ" ಎಂದು ಇಂಡಿಯನ್ ಸೋಶಿಯಲ್ ಫೋರಂ, ಕರ್ನಾಟಕ ಇದರ ಪೂರ್ವ  ಪ್ರಾಂತ್ಯದ ಅಧ್ಯಕ್ಷ ಮುಹಮ್ಮದ್ ಶರೀಫ್ ಜೋಕಟ್ಟೆ ಹೇಳಿದರು.

   ಕೆ.ಎಂ.ಟಿ. ಹಾಗೂ ಅಡ್ವಾನ್ಸಡ್ ಬ್ಲೂ ಲೈನ್ (ಎ.ಬಿ.ಎಲ್. ಗ್ರೂಪ್) ಪ್ರಾಯೋಜಕತ್ವದೊಂದಿಗೆ ಇಂಡಿಯನ್ ಸೋಷಿಯಲ್ ಫೋರಂ ವತಿಯಿಂದ ರಾಯಲ್ ಝಯ್ಕಾ ರೆಸ್ಟೋರೆಂಟ್  ಸಭಾಂಗಣದಲ್ಲಿ ನವೆಂಬರ್1ರಂದು ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
 

ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಯಲ್ ಝಯ್ಕಾ ಉಪಹಾರ ಗೃಹದ ಸತೀಶ್ ಕುಮಾರ್  ಮಾತನಾಡಿ ದೇಶದಲ್ಲಿ  ಹಿಂದಿ ಹೇರಿಕೆಯ ಪ್ರಯತ್ನವನ್ನು ವಿಫಲಗೊಳಿಸಬೇಕು ಮತ್ತು ಕರುನಾಡ ನೈಜ ಜಾತ್ಯತೀತ ತೆಯನ್ನು ಮರಳಿ ಪಡೆಯಲು ಪಣ ತೊಡಬೇಕು ಎಂದು ಕರೆ ನೀಡಿದರು.

ಇನ್ನೋರ್ವ ಮುಖ್ಯ ಅತಿಥಿ ಇಂಡಿಯಾ ಫ್ರಟರ್ನಿಟಿ ಫೋರಂ ನ ಪೂರ್ವ ವಲಯ ಜಿಲ್ಲಾಧ್ಯಕ್ಷ ಅಥಾವುಲ್ಲಾ ಉಚ್ಚಿಲ ಮಾತನಾಡುತ್ತ, ಪ್ರಾಂತೀಯ ಭಾಷಾ ಪ್ರೇಮದೊಂದಿಗೆ ವಿವಿಧತೆಯಲ್ಲಿ ಏಕತೆಯನ್ನು ಕಾಣಲು ಸಾಧ್ಯವಾಗಬೇಕು ಎಂದರು.

 ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕನ್ನಡದ ಇತಿಹಾಸವನ್ನು ಆಧರಿಸಿದ ಕಿರು ಪ್ರಹಸನಗಳು ನೆರೆದವರ ಮನಸೂರೆಗೊಂಡವು. ಐ.ಎಸ್.ಎಫ್ ಜುಬೈಲ್  ತಂಡವು  ಕರ್ನಾಟಕದ  ಐತಿಹಾಸಿಕ ವ್ಯಕ್ತಿಗಳನ್ನು ನೆನಪಿಸುತ್ತಾ ನಡೆಸಿದ ಸ್ವಾಗತ ಶೈಲಿಯು ಅತ್ಯಾಕರ್ಷಕ ವಾಗಿತ್ತು.
ಕರ್ನಾಟಕದ ಪ್ರಮುಖ ಇತಿಹಾಸ ಪುರುಷರಾದ ರಾಷ್ಟ್ರ ಕವಿ ಕುವೆಂಪು, ಕಿತ್ತೂರು ಚೆನ್ನಮ್ಮ, ಹಾಗೂ ಕರ್ನಾಟಕ ದ ಪುರಾತನ ಕಲೆಯಾದ  ಕುಂಬಾರನ ವೇಷ ಧರಿಸಿ ವೇದಿಕೆಯಲ್ಲಿ ಹೆಜ್ಜೆ ಇಟ್ಟ ಪುಟಾಣಿ ಮಕ್ಕಳು ಆಕರ್ಷಣೆಯ ಕೇಂದ್ರ ಬಿಂದುವಾದರು.

ಕಾರ್ಯಕ್ರಮದಲ್ಲಿ ಕರ್ನಾಟಕದ ಇತಿಹಾಸ ಮತ್ತು ಕನ್ನಡ ಭಾಷೆಯ ಕುರಿತ ರಸ ಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕರ್ನಾಟಕದ ಇತಿಹಾಸವನ್ನು ತಿಳಿಸುವ ಚಿತ್ರ ಮತ್ತು ಬರಹಗ ಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಸಮಾರಂಭಕ್ಕೆ ಬರುವ ಕನ್ನಡಾಭಿಮಾನಿಗಳಿಗೆ  ಸ್ವಾಗತ  ಕೋರುತ್ತಾ  ನಿಂತಿರುವ  ರೈತರ  ನೇಗಿಲ  ಯೋಗಿಯ ಸ್ತಬ್ಧ ಚಿತ್ರ ಎಲ್ಲರ ಗಮನ ಸೆಳೆಯಿತು.

 ಐ.ಎಸ್. ಎಫ್. ಪ್ರತಿ ವರ್ಷ ನಡೆಸಿಕೊಂಡು ಬರುವ ರಾಜ್ಯೋತ್ಸವ  ಸನ್ಮಾನ ಕಾರ್ಯವನ್ನು  ಪ್ರಸಕ್ತ ವರ್ಷದಲ್ಲಿ  ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟಿದ್ದು, ಅದರಂತೆ ಕಳೆದ ಹತ್ತು ವರುಷಗಳಿಂದ ದಮ್ಮಾಮ್ ಭಾರತೀಯ ರಾಯಭಾರಿ ಶಾಲೆಯಲ್ಲಿ  ಕರುನಾಡ ಮಕ್ಕಳಿಗೆ ಕನ್ನಡ ಭಾಷಾ ಶಿಕ್ಷಣವನ್ನು ನೀಡುತ್ತಿರುವ ಶಿಕ್ಷಕಿ ಸಂಧ್ಯಾ ಶಿರ್ವರನ್ನು  ಐ ಎಸ್ ಎಫ್ ಮಹಿಳಾ ಘಟಕದ ಸದಸ್ಯೆಯರು ಸನ್ಮಾನಿಸಿದರು. 

ಐಎಸ್ ಎಫ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮುಕ್ವೆ, ಎಬಿಎಲ್ ಗ್ರೂಪ್ ನ ಸಿಇಒ ಅಬೂಬಕರ್ ಸಿದ್ದೀಕ್, ಕೆಎಂಟಿ  ಸಿಇಒ ಅಬ್ದುಲ್ ರಹ್ಮಾನ್, ಐಎಸ್ ಎಫ್ ದಮ್ಮಾಮ್ ಘಟಕ ಅಧ್ಯಕ್ಷ ಶಬೀರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದಮ್ಮಾಮ್ ಘಟಕ ಕಾರ್ಯದರ್ಶಿ ಸಾಬಿತ್ ಪುತ್ತೂರು ಸ್ವಾಗತಿಸಿದರು. ಫೋರಂ ಸದಸ್ಯ ಅಬ್ದುಲ್ ಹಮೀದ್ ವಂದಿಸಿದರು. ಝೈನುದ್ದೀನ್ ಸಜೀಪ  ಕಾರ್ಯಕ್ರಮ ನಿರ್ವಹಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)