varthabharthi


ವೈವಿಧ್ಯ

ದಿಲ್ಲಿ ಸರಕಾರ ಜಾರಿಗೆ ತಂದ ’ಉದ್ಯಮಶೀಲ ಮನಸ್ಥಿತಿ ಪಠ್ಯಕ್ರಮ’ ದ ಮೇಲೆ ಒಂದು ಪಕ್ಷಿ ನೋಟ

ಉದ್ಯಮಶೀಲ ಮನಸ್ಥಿತಿ ಪಠ್ಯಕ್ರಮ: ಶಿಕ್ಷಣ ರಂಗದ ಸುಧಾರಣೆಯೋ? ಅಥವಾ ವಿದ್ಯಾರ್ಥಿಗಳಿಗೆ ಭಾರವೋ?

ವಾರ್ತಾ ಭಾರತಿ : 5 Nov, 2019
ತಲ್ಹ ಇಸ್ಮಾಯಿಲ್ ಬೆಂಗ್ರೆ, ಸಂಶೋಧಕರು, ಸೆಂಟರ್ ಫಾರ್ ಎಜುಕೇಷನಲ್ ರಿಸರ್ಚ್ ಆ್ಯಂಡ್ ಟ್ರೈನಿಂಗ್, ಹೊಸದಿಲ್ಲಿ

ಭಾಗ-1

ಕಳೆದ ಮೂರು ನಾಲ್ಕು ವರ್ಷಗಳಿಂದ ದಿಲ್ಲಿಯ ಆಮ್ ಆದ್ಮಿ ಸರಕಾರವು ಶಿಕ್ಷಣ ರಂಗದಲ್ಲಿ ವಿವಿಧ ರೀತಿಯ ಬದಲಾವಣೆಯನ್ನು ಮಾಡುವ ಉದ್ದೇಶದಿಂದ, ಹ್ಯಾಪಿನೆಸ್ ಮೈಂಡ್ ಸೆಟ್ ಕರಿಕ್ಯುಲಂ, (ಸಂತೋಷ ಮನಸ್ಸು ಪಠ್ಯಕ್ರಮ) ಅಂದರೆ ಶಾಲೆಗೆ ಹೋಗುವ ನರ್ಸರಿಯಿಂದ ಹಿಡಿದು ಎಂಟನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಅವರನ್ನು ಅಂದಿನ ಮುಖ್ಯ ಮತ್ತು ಕಷ್ಟಕರ ವಿಷಯಗಳ ಮೇಲೆ ಗಮನ ಹರಿಸುವಂತೆ ಮಾಡಲು, ಅರ್ಧ ಘಂಟೆಯ ಮಾನಸಿಕ ತಯಾರಿಯ ತರಗತಿಯನ್ನು ನಡೆಸುವ ಹೊಸ ವ್ಯವಸ್ಥೆ. ಇದರಲ್ಲಿ ಮಕ್ಕಳನ್ನು ಪಠ್ಯೇತರ ಚಟುವಟಿಕೆಯಂತೆ ಅಥವಾ ನೈತಿಕ ಕಥೆಗಳು ಹೇಳುವ ಮುಖಾಂತರ ಹುರಿದುಂಬಿಸಲಾಗುತ್ತದೆ, ದಿಲ್ಲಿಯ ಶಾಲೆಯಲ್ಲಿ ‘ಹ್ಯಾಪಿನೆಸ್’ ಪಾಠಮಾಡುವ ಶಿಕ್ಷಕರೊಬ್ಬರು ವಿವರಿಸುವಂತೆ, ವಿದ್ಯಾರ್ಥಿಗಳು ಈ ಹೊಸ ಶಿಕ್ಷಾ ವಿಧಾನವನ್ನು ಬಹಳ ಇಷ್ಟಪಡುತ್ತಿದ್ದಾರೆ. ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಸರಕಾರ ನಡೆಸುತ್ತಿರುವ ಈ ರೀತಿಯ ಹೊಸ ಬದಲಾವಣೆಯನ್ನು ಬಹಳ ನಿರೀಕ್ಷೆಯಿಂದ ಕಾಣುತ್ತಿದ್ದಾರೆಂಬುವುದು ಸತ್ಯ.

ಉದ್ಯಮಶೀಲ ಮನಸ್ಥಿತಿ ಪಠ್ಯಕ್ರಮ:

      ಎರಡನೆಯ ಹೊಸ ಶಿಕ್ಷಣ ಶೈಲಿ ‘ಉದ್ಯಮಶೀಲ ಮನಸ್ಥಿತಿ ಪಠ್ಯಕ್ರಮ’ದಿಂದ ಸರಕಾರವು 9ರಿಂದ 12 ನೇ ತರಗತಿಯ ಮಕ್ಕಳ ಮನಸ್ಥಿತಿಯನ್ನು ಸಮಾಜದ ಭವಿಷ್ಯದ ಉದ್ಯಮಿಗಳಾಗಿ ಪರಿವರ್ತಿಸುವ ಕಡೆ ಗಮನ ಹರಿಸುತ್ತಿದೆ. ಪಠ್ಯ ಕ್ರಮದ ಟ್ಯಾಗ್ ಲೈನ್, ‘‘ಲಾಂಚಿಂಗ್ ಯಂಗ್ ಮೈಂಡ್ಸ್ ಟು ಥಿಂಕ್ ಬಿಗ್- ಕಾನ್ಫಿಡೆನ್ಸ್- ಕ್ರಿಯೇಟಿವಿಟಿ- ಕಂಪೇಟೆನ್ಸ್’’ (ಯುವ ಮನಸ್ಸುಗಳನ್ನು ದೊಡ್ಡದಾಗಿ ಚಿಂತಿಸುವಂತೆ ಪ್ರೇರೇಪಿಸುವುದು- ವಿಶ್ವಾಸ-ಸೃಜನಶೀಲತೆ-ಸಾಮರ್ಥ್ಯ) ಎಂದಾಗಿದೆ. ದಿಲ್ಲಿಯ ರಾಜ್ಯ ಸರಕಾರದ ಶಿಕ್ಷಣ ವಿಭಾಗದ ಪ್ರಕಾರ ಈ ಸರಕಾರವು ‘ಉದ್ಯಮಶೀಲ ಮನಸ್ಥಿತಿ ಪಠ್ಯಕ್ರಮ’ವನ್ನು ಸರಕಾರಿ ಶಾಲೆಗಳಲ್ಲಿ ಪರಿಚಯಿಸಲು ಈ ಮೂರು ಅತೀ ದೊಡ್ಡ ಪ್ರೇರಕ ವಿಚಾರಗಳಾಗಿವೆ. ಈ ಪಠ್ಯಕ್ರಮವನ್ನು ರಾಜ್ಯದ 1,024 ಸರಕಾರಿ ಶಾಲೆಗಳಲ್ಲಿ ಶ್ರೇಣೀಕರಿಸದ ವಿಷಯದ ರೂಪದಲ್ಲಿ, ಪ್ರತೀ ದಿನ 40 ನಿಮಿಷದ ವಿಷಯದಂತೆ ಬೋಧಿಸಲಾಗುವುದು. ಈ ವಿಷಯ ಬೋಧನೆಗೆ ಪ್ರತ್ಯೇಕ ಪುಸ್ತಕಗಳಿಲ್ಲ. ಬದಲಾಗಿ 15 ಪಾಠಗಳನ್ನು ಹೊಂದಿರುವ ಪಠ್ಯಕ್ರಮ, ಡ್ರೀಮ್ ಬಿಗ್(ದೊಡ್ಡ ಕನಸು ಕಾಣು), ರೆಕಾಗ್ನಿಜ್ ಒಪೋರ್ಚುನಿಟಿ (ಅವಕಾಶವನ್ನು ಗುರುತಿಸಿ), ಪ್ಲಾನಿಂಗ್ (ಯೋಜನೆ), ಲಿಸನಿಂಗ್ (ಕೇಳುವ), ಕಲಬರೇಷನ್ (ಸಹಯೋಗ) ಮತ್ತು ಬೌನ್ಸ್ ಬ್ಯಾಕ್ ಫ್ರಮ್ ಫೈಲ್ಯೂರ್ಸ್ (ವೈಫಲ್ಯಗಳಿಂದ ಹಿಂದಿರುಗಿ) ಎಂಬ ಆಕರ್ಷಿತ ಪಾಠಗಳಿರುವ, ಟೀಚರ್ಸ್ ಮಾನ್ಯುಯಲ್(ಶಿಕ್ಷಕರ ಕೈಪಿಡಿ) ಇದೆ.

ಶಿಕ್ಷಣದಲ್ಲಿ ಕೆಲಸ-ಸಂಬಂಧಿತ ಅನುಭವಗಳ ಪ್ರಾಮುಖ್ಯತೆ.

  ದಿಲ್ಲಿ ಸರಕಾರವು ತನ್ನ ಹೊಸ ಹೆಜ್ಜೆಯ ಸಮರ್ಥನೆಯಲ್ಲಿ ನ್ಯಾಷನಲ್ ಕರಿಕ್ಯುಲಂ ಫ್ರೇಂವರ್ಕ್ 2005ನ ಅಡಿಯಲ್ಲಿ ‘ಶಿಕ್ಷಣದ ಉದ್ದೇಶ’ ಎಂದು ಎರಡು ಪ್ರಮುಖ ಅಂಶಗಳನ್ನು ಉಲ್ಲೇಖಿಸಿದೆ.

1) ಚಿಂತನೆ ಮತ್ತು ಕ್ರಿಯೆಯ ಅನಿವಾರ್ಯವು ಸ್ವತಂತ್ರವಾಗಿ ಮತ್ತು ಸಾಮೂಹಿಕವಾಗಿ ಮೌಲ್ಯಯುತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಸೂಚಿಸುತ್ತದೆ.

2) ಶಿಕ್ಷಣವು ಆರ್ಥಿಕ ಪ್ರಕ್ರಿಯೆಗಳು ಮತ್ತು ಸಾಮಾಜಿಕ ಬದಲಾವಣೆಯಲ್ಲಿ ಕೆಲಸ ಮಾಡುವ ಮತ್ತು ಭಾಗವಹಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಇದು ಶಿಕ್ಷಣದೊಂದಿಗೆ ಕೆಲಸದ ಏಕೀಕರಣವನ್ನು ಅಗತ್ಯಗೊಳಿಸುತ್ತದೆ.ಕೆಲಸ-ಸಂಬಂಧಿತ ಅನುಭವಗಳು ಕೌಶಲ್ಯ ಮತ್ತು ವರ್ತನೆಗಳ ಆಧಾರದ ಮೇಲೆ ಸಾಕಷ್ಟು ವಿಶಾಲವಾಗಿವೆ, ಅವು ಸಾಮಾಜಿಕ-ಆರ್ಥಿಕ ಸಾಧನೆಗಳ ಬಗ್ಗೆ ತಿಳುವಳಿಕೆಯನ್ನು ಬೆಳೆಸುತ್ತವೆ ಮತ್ತು ಇತರರೊಂದಿಗೆ ಸಹಕಾರ ಮನೋಭಾವದಿಂದ ಕೆಲಸ ಮಾಡಲು ಪ್ರೋತ್ಸಾಹಿಸುವ ಮಾನಸಿಕ ಚೌಕಟ್ಟನ್ನು ಬೆಳೆಸಲು ಸಹಾಯ ಮಾಡುತ್ತವೆ. ಕೇವಲ ಕೆಲಸ ಮಾತ್ರ ಸಾಮಾಜಿಕ ಮನೋಭಾವವನ್ನು ಉಂಟುಮಾಡಬಹುದು.

 ಈ ಹೊಸ ಬದಲಾವಣೆಯಿಂದ ದಿಲ್ಲಿ ಸರಕಾರವು ನಿಜವಾಗಿಯೂ ಏನನ್ನು ಸಾಧಿಸಲು ಬಯಸುತ್ತವೆ?

‘‘ನಾವು ಯುವ ಮನಸ್ಸುಗಳಲ್ಲಿ ಉದ್ಯಮಶೀಲ ಮನಸ್ಥಿತಿ ಉಂಟುಮಾಡುವ ಮುಖಾಂತರ ನಾವು ಅವರನ್ನು ಉದ್ಯೋಗ ಪಡೆಯುವವರಲ್ಲ ಬದಲಾಗಿ ಉದ್ಯೋಗ ಕೊಡುವವರಾಗಿ ಮಾರ್ಪಡಿಸುವವರನ್ನಾಗಿಸ ಬಯಸುತ್ತೇವೆ’’ ಎಂದು ಕಳೆದ ಡಿಸೆಂಬರ್‌ನಲ್ಲಿ ರಾಜ್ಯದ ಉಪಮುಖ್ಯ ಮಂತ್ರಿ ಮತ್ತು ಶಿಕ್ಷಣ ಮಂತ್ರಿ ಹೇಳಿದ್ದರು. ಈ ಹೇಳಿಕೆಯನ್ನು ಗಮನಿಸಿದರೆ ದಿಲ್ಲಿ ಸರಕಾರವು ಎರಡು ಪ್ರಮುಖ ವಿಚಾರಗಳನ್ನು ಪಡೆಯ ಬಯಸುತ್ತಿದೆ ಎಂದು ತಿಳಿಯ ಬಹುದು.

 1) ಇದು ವಿದ್ಯಾರ್ಥಿಗಳು ವಿಮರ್ಶಾತ್ಮಕವಾಗಿ ಯೋಚಿಸುವ ಮತ್ತು ವೈಯಕ್ತಿಕವಾಗಿ ಮುಂದುವರಿಯುವಂತಹ ಮನಸ್ಥಿತಿಯತ್ತ ಸಾಗಿ ವಿಶ್ವಾಸದೊಂದಿಗೆ ವ್ಯವಹರಿಸುವಂತೆ ಮಾಡುತ್ತದೆ.

2) ಶಿಕ್ಷಣವು ವರ್ಲ್ಡ್ ಆಫ್ ವರ್ಕ್ (ಕೆಲಸದ ಪ್ರಪಂಚದೊಂದಿಗೆ) ಜೋಡಿಸುವಂತಿರಬೇಕು.

ಉದ್ಯಮಶೀಲ ಮನಸ್ಥಿತಿ ಪಠ್ಯಕ್ರಮವು ಸಮಸ್ಯೆ-ಪರಿಹರಿಸುವಿಕೆ, ನಿರ್ಧಾರ ತೆಗೆದುಕೊಳ್ಳುವಿಕೆ, ಅಪಾಯವನ್ನು ತೆಗೆದುಕೊಳ್ಳುವ ಸಾಮರ್ಥ್ಯಗಳಿಗೆ ಅಗತ್ಯವಾದ ಆಕಾಂಕ್ಷೆ ಮತ್ತು ಮನೋಧರ್ಮದ ಪ್ರಮುಖ ಅಂಶಗಳನ್ನು ಉದ್ಯಮಶೀಲದ ಚೇತನಕ್ಕೆ ಕಾರಣವಾಗುತ್ತದೆ. ಪಠ್ಯಕ್ರಮವು ನಾಲ್ಕು ಪಟ್ಟು ಚೌಕಟ್ಟನ್ನು ಆಧರಿಸಿರಬಹುದು ಎಂದು ದಿಲ್ಲಿ ಸರಕಾರ ಹೇಳಿದೆ.

♦ ಉದ್ಯಮಶೀಲತಾ ಪ್ರಯಾಣದ ಕಥೆಗಳು ಮತ್ತು ಕೇಸ್ ಸ್ಟಡಿಗಳ ಮೂಲಕ ಪ್ರೇರೇಪಿಸುವುದು.

♦ ಸ್ವಯಂ-ವಿನ್ಯಾಸಗೊಳಿಸಿದ ಸೂಕ್ಷ್ಮ್ಮ ಸಂಶೋಧನೆಯ ಮೂಲಕ ಶಿಕ್ಷಣ.

♦ ಸ್ಥಳೀಯ ಸಮುದಾಯದ ಪಾಲ್ಗೊಳ್ಳುವಿಕೆ ಮೂಲಕ.

♦ ಆಲೋಚನೆಗಳನ್ನು ಅಭಿವೃದ್ಧಿ ಪಡಿಸಿ ಯೋಜನೆಗಳಾಗಿ ಪರಿವರ್ತಿಸುವ ಮೂಲಕ.

 ಮೇಲೆ ನೀಡಲಾದ ಉದ್ದೇಶಗಳನ್ನು ಗಮನಿಸಿದಾಗ ದಿಲ್ಲಿ ಸರಕಾರದ ಈ ಹೊಸ ಪ್ರಯೋಗವು, ಶಿಕ್ಷಣ ಕ್ಷೇತ್ರದಲ್ಲಿ ಭರವಸೆಯಂತೆ ಮತ್ತು ಅದು ಹೊಸ ಹೊಮ್ಮಸ್ಸನ್ನು ಹುಟ್ಟಿಸುವಂತೆ ಕಾಣುತ್ತದೆ.

ಆದರೆ, ಕೆಲವರು ಈ ಹೊಸ ‘ಉದ್ಯಮಶೀಲ ಮನಸ್ಥಿತಿ ಪಠ್ಯಕ್ರಮ’ವನ್ನು 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪರಿಚಯಿಸಿದರ ಹಿಂದಿನ ಲಾಜಿಕ್ ಏನು? ಎಂಬ ಪ್ರಮುಖ ಪ್ರಶ್ನೆಗಳನ್ನು ಕೇಳುತ್ತಾರೆ. ಏಕೆಂದರೆ ಈ ವಯಸ್ಸಿನ ವಿದ್ಯಾರ್ಥಿಗಳ ಮೇಲೆ ಸಾಮಾನ್ಯವಾಗಿ ಕುಟುಂಬದ ಆರ್ಥಿಕ ಹೊರೆ ಇರುವುದಿಲ್ಲ ಮತ್ತು ಈ ಸಮಯವು ಯಾವುದೇ ಮಗುವಿನ ಕಲಿಕೆ ಮತ್ತು ಅದರ ಕೌಶಲ್ಯಗಳನ್ನು ಬೆಳೆಸುವ ಹಾಗೂ ಇತರ ಪ್ರಮುಖ ವಿಷಯಗಳಾದ ಗಣಿತಶಾಸ್ತ್ರ, ಸಮಾಜ ವಿಜ್ಞಾನ ಮತ್ತು ವಿವಿಧ ಭಾಷೆಯ ಮೇಲೆ ಸರಿಯಾದ ಗಮನವನ್ನು ನೀಡುವ ಪೂರ್ವಭಾವಿ ಸಮಯವಾಗಿದೆ. ಈ ಸಮಯದಲ್ಲಿ ಮಕ್ಕಳ ಮನಸ್ಸನ್ನು ಮುಖ್ಯ ವಿಷಯದಿಂದ ಬೇರೆಡೆಗೆ ತಿರುಗಿಸಲಾಗುತ್ತಿದೆ ಎಂಬ ಆತಂಕ ಸೃಷ್ಟಿಯಾಗಿದೆ, ಅದರಿಂದಾಗಿ ಅವರಿಗೆ ಇತರ ಮುಖ್ಯ ವಿಷಯಗಳ ಸಮಗ್ರ ಅಧ್ಯಯನ ನಡೆಸಲು ಕಡಿಮೆ ಅವಕಾಶಗಳು ದೊರೆಯಬಹುದು. ಈ ವಾದವು ಆರಂಭದಲ್ಲಿ ಪ್ರಸ್ತಾಪಿಸಲಾದ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ಸಾಮರ್ಥ್ಯ ಎಂಬ ಈ ಮೂರು ‘ರಾಷನಲ್ಸ್’ಗಳನ್ನು ಪರಿಗಣಿಸಿ ಈ ಪಠ್ಯಕ್ರಮವನ್ನು ಸಮರ್ಥಿಸಲು ನೋಡುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)