varthabharthi


ಸಂಪಾದಕೀಯ

ಉಪಚುನಾವಣೆಗೆ ಮುನ್ನವೇ ರಾಜ್ಯ ಸರಕಾರ ಇಕ್ಕಟ್ಟಿನಲ್ಲಿ

ವಾರ್ತಾ ಭಾರತಿ : 5 Nov, 2019

ಯಡಿಯೂರಪ್ಪ ನೇತೃತ್ವದ ಸರಕಾರ ರಚನೆಯಾಗಿ ನೂರು ದಿನಗಳು ಸಂದಿವೆ. ಒಂದು ಸರಕಾರದ ಸಾಧನೆಯ ಮಾನದಂಡಕ್ಕೆ ನೂರು ದಿನಗಳು ಏನೇನೂ ಅಲ್ಲ. ನೂತನ ಸರಕಾರದ ವಿವಿಧ ಸಚಿವರು ತಮ್ಮ ತಮ್ಮ ಖಾತೆಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನೂರು ದಿನಗಳು ಸಾಕಾಗುವುದಿಲ್ಲ. ಆಡಳಿತದ ಪೂರ್ವ ಸಿದ್ಧತೆಗಳಿಗಾಗಿ ನೂರು ದಿನಗಳನ್ನು ಒಬ್ಬ ಮುಖ್ಯಮಂತ್ರಿ ಪರಿಣಾಮಕಾರಿಯಾಗಿ ಬಳಸಿಕೊಂಡರೆ, ಅದೇ ಅವರ ಹೆಚ್ಚುಗಾರಿಕೆ. ವಿಪರ್ಯಾಸವೆಂದರೆ, ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರ ಹಿಡಿಯಲು ಅನುಸರಿಸಿದ ದಾರಿಯೇ ಅವರ ಸರಕಾರವನ್ನು ಮುಂದೆ ಹೋಗದಂತೆ ತಡೆಯುತ್ತಿದೆ. ರಾಜ್ಯದಲ್ಲಿ ನೆರೆ ಸಂತ್ರಸ್ತರು ಪರಿಹಾರಕ್ಕಾಗಿ ಬೊಬ್ಬಿಡುತ್ತಿರುವಾಗ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಒಂದು ವೇಳೆ, ಈ ಸರಕಾರಕ್ಕೆ ಬಿಜೆಪಿಯೊಳಗಿನ ವರಿಷ್ಠರು ಪೂರ್ಣ ಪ್ರಮಾಣದ ಬೆಂಬಲವನ್ನು ನೀಡಿದಿದ್ದರೆ ಯಡಿಯೂರಪ್ಪ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದರೇನೋ. ಆದರೆ ಇಂದು ಯಡಿಯೂರಪ್ಪ ಸರಕಾರಕ್ಕೆ ದೊಡ್ಡ ಸವಾಲಾಗಿರುವುದು ವಿರೋಧಪಕ್ಷಗಳಲ್ಲ, ಅವರದೇ ಪಕ್ಷದೊಳಗಿರುವ ವಿರೋಧಿಗಳು. ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ವಿಷಯದಲ್ಲಿ ಕೇಂದ್ರ ಸರಕಾರ, ಬಹಳಷ್ಟು ಸತಾಯಿಸಿತು. ಪರಿಹಾರಕ್ಕಾಗಿ ಕೇಂದ್ರವನ್ನು ಒತ್ತಾಯಿಸಬೇಕಾಗಿದ್ದ ಬಿಜೆಪಿ ಸಂಸದರು, ‘ಕೇಂದ್ರ ಪರಿಹಾರ ಒದಗಿಸುವ ಅಗತ್ಯವಿಲ್ಲ’ ಎಂಬಂತಹ ಹೇಳಿಕೆಗಳನ್ನು ನೀಡಿ ಸರಕಾರವನ್ನು ಮುಜುಗರಕ್ಕೆ ಸಿಲುಕಿಸಿದರು. ಇದರ ಬೆನ್ನಿಗೇ ಉಪಚುನಾವಣೆ ಘೋಷಣೆಯಾಯಿತು. ಇದೀಗ ‘ಅನರ್ಹರಿಗೆ ಟಿಕೆಟ್ ನೀಡಬೇಕೋ ಬೇಡವೋ’ ಎನ್ನುವ ಚರ್ಚೆ ಸರಕಾರವನ್ನು ಮುಂದೆ ಹೋಗದಂತೆ ತಡೆದಿದೆ.

ಯಡಿಯೂರಪ್ಪ ನೇತೃತ್ವದ ನೂತನ ಸರಕಾರದ ಭವಿಷ್ಯವನ್ನು ಮುಂದೆ ನಡೆಯಲಿರುವ ಉಪಚುನಾವಣೆಯ ಫಲಿತಾಂಶ ನಿರ್ಧರಿಸಲಿದೆ ಎಂದು ಭಾವಿಸಲಾಗಿತ್ತು. ಆದರೆ ಸದ್ಯದ ಬೆಳವಣಿಗೆಗಳು ನೋಡಿದರೆ ಉಪಚುನಾವಣೆ ಘೋಷಣೆಗೆ ಮುನ್ನವೇ ಯಡಿಯೂರಪ್ಪ ಮಹತ್ವದ ನಿರ್ಧಾರವನ್ನು ತಳೆಯುವ ಸೂಚನೆಗಳು ಕಾಣಿಸುತ್ತಿವೆ. ಬಿಜೆಪಿ ಕೋರ್ ಕಮಿಟಿಯಲ್ಲಿ ಸ್ವತಃ ಯಡಿಯೂರಪ್ಪ ಅವರು ಆಡಿದ ಆಡಿಯೊ ಬಿಜೆಪಿಯೊಳಗಿರುವ ತಿಕ್ಕಾಟಗಳನ್ನು ಬಹಿರಂಗ ಪಡಿಸಿದೆೆ. ಈ ಆಡಿಯೊವನ್ನು ಯಡಿಯೂರಪ್ಪ ಆರಂಭದಲ್ಲಿ ಒಪ್ಪಿಕೊಂಡಿದ್ದರು. ಆದರೆ ಕೇಂದ್ರದ ವರಿಷ್ಠರ ಒತ್ತಡ ಬಿದ್ದ ಬಳಿಕ ಅದರಲ್ಲಿರುವ ಹೇಳಿಕೆಗಳನ್ನು ನಿರಾಕರಿಸಿದರು. ಆದರೆ ಮೇಲ್ನೋಟಕ್ಕೆ ಅದು ಯಡಿಯೂರಪ್ಪರ ಧ್ವನಿಯೆನ್ನುವುದು ಸಾಬೀತಾಗಿದೆ. ಮತ್ತು ಅದರಲ್ಲಿ ರಹಸ್ಯವಾದ ಯಾವ ವಿಷಯಗಳನ್ನೂ ಅವರು ಹಂಚಿಕೊಂಡಿಲ್ಲ. ಸರಕಾರ ಹೇಗೆ ರಚನೆಯಾಯಿತು ಎನ್ನುವ, ರಾಜ್ಯದ ಎಳೆ ಮಕ್ಕಳಿಗೂ ಗೊತ್ತಿರುವ ಅಂಶಗಳನ್ನೇ ಅವರು ಕೋರ್ ಕಮಿಟಿಯಲ್ಲಿ ಹೇಳಿಕೊಂಡಿದ್ದಾರೆ. ಅಧಿಕಾರ, ಹಣದ ಆಮಿಷದಿಂದಲೋ, ಅಥವಾ ಪಕ್ಷದೊಳಗಿನ ನಾಯಕರ ಮೇಲಿನ ಸಿಟ್ಟಿನಿಂದಲೋ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಹಲವು ಶಾಸಕರು ಏಕಾಏಕಿ ಬಿಜೆಪಿ ಸೇರಿಕೊಂಡಿದ್ದರು. ಈ ಸಂದರ್ಭದಲ್ಲಿ ಕೇಂದ್ರದ ವರಿಷ್ಠರನ್ನು ನಂಬಿ ಯಡಿಯೂರಪ್ಪ ಹಲವು ಭರವಸೆಗಳನ್ನು ಶಾಸಕರಿಗೆ ನೀಡಿದ್ದರು. ಆದರೆ ಇದೀಗ ಅವರು ‘ಅನರ್ಹ ಶಾಸಕ’ರಾಗಿ ತ್ರಿಶಂಕುಸ್ಥಿತಿ ಎದುರಿಸುತ್ತಿದ್ದಾರೆ. ಒಂದೆಡೆ ‘ಅನರ್ಹರು’ ಎನ್ನುವ ಕಳಂಕ, ಮಗದೊಂದೆಡೆ ಈ ಕಳಂಕವನ್ನು ಸುಪ್ರೀಂಕೋರ್ಟ್ ತೆಗೆದು ಹಾಕಿದರೂ, ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುತ್ತದೆಯೋ ಇಲ್ಲವೋ ಎನ್ನುವ ಆತಂಕ. ಇತ್ತ ಬಿಜೆಪಿಯೊಳಗಿರುವ ಕೆಲವು ನಾಯಕರು, ಈ ಸಂದರ್ಭವನ್ನು ಯಡಿಯೂರಪ್ಪ ಅವರ ವಿರುದ್ಧ ಬಳಸಲು ಹೊರಟಿದ್ದಾರೆ. ‘ಅನರ್ಹ ಶಾಸಕರಿಗೆ ಯೋಗ್ಯ ಸ್ಥಾನಮಾನ ನೀಡುವುದು, ಟಿಕೆಟ್ ನೀಡುವುದು’ ನಮ್ಮ ಹೊಣೆಗಾರಿಕೆಯಲ್ಲ ಎಂದು ಅವರು ಕೈಚೆಲ್ಲಿದ್ದಾರೆ. ಹಲವರು ಈಗಾಗಲೇ ‘ಅನರ್ಹರಿಗೆ ಟಿಕೆಟ್ ನೀಡುವ ಅಗತ್ಯವಿಲ್ಲ’ ಎಂಬ ಹೇಳಿಕೆಯನ್ನೂ ನೀಡಿದ್ದಾರೆ. ಇದನ್ನು ಮುಂದಿಟ್ಟು ಕೋರ್ ಕಮಿಟಿಯಲ್ಲಿ ಸಹಜವಾಗಿಯೇ ಯಡಿಯೂರಪ್ಪ ತಮ್ಮ ದುಃಖವನ್ನು ಹೇಳಿಕೊಂಡಿದ್ದಾರೆ. ‘‘ನಮ್ಮನ್ನು ನಂಬಿ ಅನರ್ಹರು ಬಂದ ಕಾರಣದಿಂದ ಸರಕಾರ ರಚಿಸಿದ್ದೇವೆ. ನಮ್ಮನ್ನು ನಂಬಿ ಅವರು ಮೂರ್ಖರಾಗಿದ್ದಾರೆ. ಮುಖ್ಯಮಂತ್ರಿಯಾಗಿ ನಾನು ತಪ್ಪು ಮಾಡಿದೆ...’’ ಎಂದು ಅಲವತ್ತುಕೊಂಡಿದ್ದಾರೆ. ಅಷ್ಟೇ ಅಲ್ಲ,‘ಬಂಡಾಯ ಶಾಸಕರನ್ನು ಮುಂಬೈಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ನಿಗಾದಲ್ಲಿ ಇಡಲಾಗಿತ್ತು’ ಎನ್ನುವ ಅಂಶವನ್ನು ಅವರು ಮನವರಿಕೆ ಮಾಡಿಸಲು ಪ್ರಯತ್ನಿಸಿದ್ದಾರೆ.

 ಇದೀಗ ಆ ಆಡಿಯೊ ನೂತನ ಸರಕಾರದ ಭವಿಷ್ಯವನ್ನು ನಿರ್ಧರಿಸಲಿದೆ. ಈ ಆಡಿಯೊವನ್ನು ಕಾಂಗ್ರೆಸ್ ಪಕ್ಷ ಸುಪ್ರೀಂಕೋರ್ಟ್‌ಗೆ ಕೊಂಡೊಯ್ದಿದೆ. ಈ ಬಗ್ಗೆ ವಿಚಾರಣೆಗೆ ಸುಪ್ರೀಂಕೋರ್ಟ್ ಕೂಡ ಒಪ್ಪಿಕೊಂಡಿದೆ. ಅನರ್ಹ ಶಾಸಕರ ಬಿಕ್ಕಟ್ಟು ನೇರವಾಗಿ ಅಮಿತ್ ಶಾ ಕುತ್ತಿಗೆಗೆ ಬಂದಿದೆ. ಕೋರ್‌ಕಮಿಟಿಯಲ್ಲಿ ನಡೆದ ಮಾತುಕತೆಗಳಾದುದರಿಂದ, ಇದನ್ನು ಬಹಿರಂಗ ಪಡಿಸಿದವರು ಬಿಜೆಪಿಯವರೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾರು ಬಹಿರಂಗ ಪಡಿಸಿರಬಹುದು? ಎನ್ನುವುದು ಈಗ ಚರ್ಚೆಯ ವಿಷಯವಾಗಿದೆ. ಬಿಜೆಪಿ ನಾಯಕರು ವಿರೋಧ ಪಕ್ಷದ ಕಡೆಗೆ ಬೆರಳು ತೋರಿಸುತ್ತಾರೆಯಾದರೂ, ಆ ಆರೋಪವನ್ನು ಒಪ್ಪಿಕೊಳ್ಳುವುದು ಕಷ್ಟ. ಯಾಕೆಂದರೆ, ಕೋರ್ ಕಮಿಟಿಯೊಳಗೆ ವಿರೋಧ ಪಕ್ಷಗಳಿಗೆ ಕೆಲಸವೇನಿದೆ? ಸರಳವಾಗಿ ಹೇಳುವುದಾಗಿದ್ದರೆ, ಯಡಿಯೂರಪ್ಪ ಅವರ ವಿರೋಧಿಗಳೇ ಬಹಿರಂಗ ಪಡಿಸಿ ಅವರನ್ನು ಮುಜುಗರಕ್ಕೆ ಸಿಲುಕಿಸಲು ಯತ್ನಿಸಿದ್ದಾರೆ. ಆದರೆ ಇನ್ನೊಂದು ಕೋನದಿಂದ ನೋಡಿದರೆ, ಯಡಿಯೂರಪ್ಪ ಅವರ ನಿರ್ದೇಶನದಲ್ಲೇ ಆ ಆಡಿಯೊ ಬಹಿರಂಗಗೊಂಡಿರುವ ಸಾಧ್ಯತೆಗಳು ಕಾಣುತ್ತಿವೆ. ತನ್ನ ಕುತ್ತಿಗೆಗೆ ಸುತ್ತಿಕೊಂಡಿರುವ ‘ಅನರ್ಹ ಶಾಸಕರ’ರನ್ನು ಈ ಮೂಲಕ ವರಿಷ್ಠರ ಕುತ್ತಿಗೆಗೆ ಸುತ್ತಿದ್ದಾರೆ. ಅನರ್ಹರು ಬೀದಿಗೆ ಬಿದ್ದರೆ ನಿಮ್ಮ ಹೆಸರು ಬಹಿರಂಗವಾಗಲಿದೆ ಎನ್ನುವ ಸಂದೇಶವನ್ನು ಪರೋಕ್ಷವಾಗಿ ಆಡಿಯೊ ಮೂಲಕ ಅಮಿತ್ ಶಾ ಅವರಿಗೆ ಯಡಿಯೂರಪ್ಪ ತಲುಪಿಸಿದ್ದಾರೆ. ಅನರ್ಹ ಶಾಸಕರ ಕುರಿತಂತೆ ಸುಪ್ರೀಂಕೋರ್ಟ್ ನೀಡುವ ತೀರ್ಪು, ಯಡಿಯೂರಪ್ಪರ ಭವಿಷ್ಯವನ್ನು ನಿರ್ಧರಿಸಲಿದೆ. ಅನರ್ಹರೆನ್ನುವುದನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದರೆ, ಯಡಿಯೂರಪ್ಪ ಒಂದಿಷ್ಟು ನಿರಾಳರಾಗುತ್ತಾರೆ. ‘ಸುಪ್ರೀಂಕೋರ್ಟ್ ಅರ್ಹರು ಎಂದು ಹೇಳಿದ್ದಿದ್ದರೆ ಟಿಕೆಟ್ ಕೊಡಿಸುತ್ತಿದ್ದೆ’ ಎಂದು ಸಂಬಂಧಕ್ಕೆ ತೇಪೆ ಹಾಕಬಹುದು. ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಅವರನ್ನು ‘ಅರ್ಹರು’ ಎಂದರೆ, ಟಿಕೆಟ್ ಕೊಡಿಸಲೇ ಬೇಕಾದ ಅನಿವಾರ್ಯಕ್ಕೆ ಯಡಿಯೂರಪ್ಪ ಸಿಕ್ಕಿ ಹಾಕಿಕೊಳ್ಳುತ್ತಾರೆ. ವರಿಷ್ಠರು ಈ ಸಂದರ್ಭದಲ್ಲಿ ಯಡಿಯೂರಪ್ಪರನ್ನು ಬದಿಗೆ ಸರಿಸಿ ತಮ್ಮದೇ ಪಕ್ಷದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದೇ ಆದಲ್ಲಿ, ಸರಕಾರ ಬೀಳುವ ಅಪಾಯವಿದೆ ಅಥವಾ ಬಿಜೆಪಿಯನ್ನೇ ಒಡೆದು, ಕುಮಾರಸ್ವಾಮಿ ಬೆಂಬಲದಿಂದ ಹೊಸದಾಗಿ ಸರಕಾರ ರಚಿಸಿದರೂ ಅದರಲ್ಲಿ ಅಚ್ಚರಿಯಿಲ್ಲ. ಒಟ್ಟಿನಲ್ಲಿ, ಉಪಚುನಾವಣೆಗಿಂತ ಪಕ್ಷದೊಳಗಿರುವ ಎದುರಾಳಿಗಳನ್ನು ಗೆಲ್ಲುವುದೇ ಯಡಿಯೂರಪ್ಪರ ಮುಂದಿರುವ ಸದ್ಯದ ಅತಿ ದೊಡ್ಡ ಸವಾಲು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)