varthabharthi


ಕ್ರೀಡೆ

ಚೀನಾ ಓಪನ್

ಪಿ.ವಿ ಸಿಂಧು, ಸೈನಾ ನೆಹ್ವಾಲ್ ಗೆ ಪ್ರಶಸ್ತಿಯ ಮೇಲೆ ಕಣ್ಣು

ವಾರ್ತಾ ಭಾರತಿ : 5 Nov, 2019

►ಕಿಡಂಬಿ ಶ್ರೀಕಾಂತ್ ಹೊರಕ್ಕೆ   

ಫುಝೌವು, ನ.4: ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಆಟಗಾರ್ತಿಯರಾದ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಕಿಡಂಬಿ ಶ್ರೀಕಾಂತ್ ಹೊರಗುಳಿಯಲು ನಿರ್ಧರಿಸಿದ್ದಾರೆ.

ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನ ಮೆಂಟ್ ಮಂಗಳವಾರ ಆರಂಭವಾಗಲಿದೆ.

    ವಿಶ್ವದ ಮಾಜಿ ನಂಬರ್ ಒನ್ ಶ್ರೀಕಾಂತ್ ಅವರು ಎರಡು ಬಾರಿಯ ವಿಶ್ವ ಚಾಂಪಿಯನ್ ಜಪಾನ್‌ನ ಕೆಂಟೊ ಮೊಮೊಟಾ ಅವರನ್ನು ಮೊದಲ ಸುತ್ತಿನಲ್ಲಿ ಎದುರಿಸಬೇಕಾಗಿತ್ತು. ಆದರೆ ಶ್ರೀಕಾಂತ್ ಪಂದ್ಯಾವಳಿಯಿಂದ ಹೊರಗುಳಿ ಯಲು ನಿರ್ಧರಿಸಿದ್ದಾರೆ.

ಶ್ರೀಕಾಂತ್ ಈಗ ಮುಂದಿನ ವಾರ ಹಾಂಗ್‌ಕಾಂಗ್ ಓಪನ್ ವರ್ಲ್ಡ್‌ಟೂರ್ ಸೂಪರ್ 500ರಲ್ಲಿ ಕಾಣಿಸಿ ಕೊಳ್ಳಲಿದ್ದಾರೆ. ಈ ಕಾರಣಕ್ಕಾಗಿ ಅವರು ಚೀನಾ ಓಪನ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಸಿಂಧು ಮತ್ತು ಸೈನಾ ಈ ವಾರ ಉತ್ತಮ ಪ್ರದರ್ಶನ ನೀಡಲು ಮುಂದಾಗಿರುವುದರಿಂದ ಮತ್ತೊಮ್ಮೆ ಅವರಿಂದ ಪ್ರಶಸ್ತಿ ನಿರೀಕ್ಷಿಸಲಾಗಿದೆ.

 ಕಳೆದ ತಿಂಗಳು ನಡೆದ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ ಫೈನಲ್ ತಲುಪಿದ್ದ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರಿಂದಲೂ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ.

ಸಿಂಧು ಮತ್ತು ಸೈನಾ ಇಬ್ಬರೂ ಚೀನಾ, ಕೊರಿಯಾ ಮತ್ತು ಡೆನ್ಮಾರ್ಕ್‌ನಲ್ಲಿ ಸತತ ಮೂರು ಪಂದ್ಯಾವಳಿಗಳಲ್ಲಿ ಆರಂಭಿಕ ಹಂತದಲ್ಲೇ ನಿರ್ಗಮಿಸಿದ್ದರು. ಫ್ರೆಂಚ್ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿದ್ದರು. ಆಗಸ್ಟ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿರುವ ಆರನೇ ಶ್ರೇಯಾಂಕದ ಸಿಂಧು ಜರ್ಮನಿಯ ಯವೊನೆ ಲಿ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದ್ದರೆ, ಎಂಟನೇ ಶ್ರೇಯಾಂಕದ ಸೈನಾ ಅವರು ಚೀನಾದ ಕೈ ಯಾನ್ ಯಾನ್ ಅವರನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ. ಆರಂಭಿಕ ಸುತ್ತಿನಲ್ಲಿ ತೆರ್ಗಡೆಯಾದರೆ ಸಿಂಧು ಕ್ವಾರ್ಟರ್‌ಫೈನಲ್‌ನಲ್ಲಿ ಮೂರು ಬಾರಿ ವಿಶ್ವ ಚಾಂಪಿಯನ್ ಕೆರೊಲಿನಾ ಮರಿನ್ ಅಥವಾ ವಿಶ್ವದ ನಂಬರ್ ಒನ್ ತೈ ತ್ಸು ಯಿಂಗ್ ಅವರನ್ನು ಎದುರಿಸಲಿದ್ದಾರೆ.

 ಮತ್ತೊಂದೆಡೆ ಸೈನಾ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಎರಡನೇ ಶ್ರೇಯಾಂಕದ ಅಕಾನೆ ಯಮಗುಚಿ ಸವಾಲು ಎದುರಾಗಬಹುದು ಆದರೆ ಮೊದಲ ಎರಡು ಸುತ್ತುಗಳಲ್ಲಿ ಎದುರಾಳಿಗಳನ್ನು ಮಣಿಸಬೇಕಾಗಿದೆ.

 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದ ಬಿ ಸಾಯಿ ಪ್ರಣೀತ್ ಅವರು ಇಂಡೋನೇಶ್ಯದ ಟಾಮಿ ಸುಗಿಯಾರ್ಟೊ ಅವರನ್ನು ಎದುರಿಸಲಿದ್ದಾರೆ.

  ಸಮೀರ್ ವರ್ಮಾ ಅವರು ಹಾಂಕಾಂಗ್‌ನ ಲೀ ಚೆಯುಕ್ ಯಿ ಅವರ ವಿರುದ್ಧ ಸೆಣಸಲಿದ್ದಾರೆ. ಆದರೆ ಇತ್ತೀಚೆಗೆ ಡೆಂಗ್ ಜ್ವರದಿಂದ ತೊಂದರೆ ಅನುಭವಿಸಿದ್ದ ಎಚ್.ಎಸ್. ಪ್ರಣಯ್ ಅವರು ಡೆನ್ಮಾರ್ಕ್‌ನ ರಾಸ್‌ಮಸ್ ಜೆಮ್ಕೆ ವಿರುದ್ಧ ಸೆಣಸಾಡಲಿದ್ದಾರೆ.

 ಇಂಡಿಯಾ ಓಪನ್ ಮತ್ತು ಕೊರಿಯಾ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ್ದ ಕಾಮನ್‌ವೆಲ್ತ್ ಮಾಜಿ ಚಾಂಪಿಯನ್ ಪಾರುಪಲ್ಲಿ ಕಶ್ಯಪ್ ಆರಂಭಿಕ ಸುತ್ತಿನಲ್ಲಿ ಥಾಯ್ಲೆಂಡ್‌ನ ಸಿತಿಕೋಮ್ ಥಾಮ್ಮಸಿನ್ ಅವರನ್ನು ಎದುರಿಸಲಿದ್ದಾರೆ.

  ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್ ಮತ್ತು ಚಿರಾಗ್ ಅವರಿಗೆ ಕೊರಿಯಾದ ಕಿಟ್ ಗಿ ಜಂಗ್ ಮತ್ತು ಲೀ ಯೋಂಗ್ ಡೇ ಅವರ ಸವಾಲು ಎದುರಾಗಲಿದೆ.

ಮನು ಅತ್ರಿ ಮತ್ತು ಬಿ ಸುಮೀತ್ ರೆಡ್ಡಿ ಮೊದಲ ಸುತ್ತಿನಲ್ಲಿ ಮಲೇಶ್ಯದ ಆ್ಯರನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ ಅವರನ್ನು ಎದುರಿಸಲಿದ್ದಾರೆ.

 ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ಎನ್. ಸಿಕ್ಕಿ ರೆಡ್ಡಿ ಅವರು ಚೀನಾದ ಲಿ ವೆನ್ ಮೇ ಮತ್ತು ಝೆಂಗ್ ಯು ಅವರನ್ನು ಎದುರಿಸಲಿರುವರು. ಸಾತ್ವ್ವಿಕ್ ಮತ್ತು ಅಶ್ವಿನಿ ಕೆನಡಾದ ಜೋಡಿ ಜೋಶುವಾ ಹರ್ಲ್‌ಬರ್ಟ್-ಯು ಮತ್ತು ಜೋಸೆಫೀನೆ ಅವರನ್ನು ಮಿಶ್ರ ಡಬಲ್ಸ್‌ನಲ್ಲಿ ಎದುರಿಸಲಿದ್ದಾರೆ.

ಮತ್ತೊಂದು ಮಿಶ್ರ ಡಬಲ್ಸ್ ಜೋಡಿ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಸಿಕ್ಕಿ ಚೀನಾ ತೈಪೆಯ ವಾಂಗ್ ಚಿ-ಲಿನ್ ಮತ್ತು ಚೆಂಗ್ ಚಿ ಯಾ ವಿರುದ್ಧ ಸೆಣಸಾಡಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)