varthabharthi


ಅಂತಾರಾಷ್ಟ್ರೀಯ

ಆರ್‌ಸಿಇಪಿಗೆ ಸೇರದಿರಲು ಭಾರತದ ಕಳವಳಗಳನ್ನು ನಿವಾರಿಸಲಾಗುವುದು: ಚೀನಾ

ವಾರ್ತಾ ಭಾರತಿ : 5 Nov, 2019

ಬೀಜಿಂಗ್(ಚೀನಾ),ನ.5: ಬೀಜಿಂಗ್ ಸರಕಾರದ ಬೆಂಬಲಿತ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದಕ್ಕೆ ಸಹಿ ಹಾಕದಿರಲು ಭಾರತವು ಪ್ರಸ್ತಾಪಿಸಿರುವ ಕಳವಳಗಳನ್ನು ಬಗೆಹರಿಸಲು ‘ ಪರಸ್ಪರ ತಿಳುವಳಿಕೆ ಮತ್ತು ಅವಕಾಶ ’ನೀತಿಯನ್ನು ತಾನು ಅನುಸರಿಸುವುದಾಗಿ ಚೀನಾ ಮಂಗಳವಾರ ಹೇಳಿದೆ.

ಭಾರತವು ಶೀಘ್ರವೇ ಒಪ್ಪಂದಕ್ಕೆ ಸೇರ್ಪಡೆಗೊಳ್ಳುವುದನ್ನು ತಾನು ಸ್ವಾಗತಿಸುವುದಾಗಿಯೂ ಚೀನಾ ತಿಳಿಸಿದೆ.

ಸೋಮವಾರ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ 16 ರಾಷ್ಟ್ರಗಳ ಆರ್‌ಸಿಇಪಿ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು,ಒಪ್ಪಂದದ ಈಗಿನ ರೂಪವು ಅದರ ಮೂಲ ಉದ್ದೇಶವನ್ನು ಮತ್ತು ಒಪ್ಪಿತ ಮಾರ್ಗಸೂಚಿ ತತ್ತ್ವಗಳನ್ನು ಪೂರ್ಣವಾಗಿ ಪ್ರತಿಬಿಂಬಿಸುತ್ತಿಲ್ಲ ಎಂದು ಹೇಳುವ ಮೂಲಕ ಒಪ್ಪಂದದಲ್ಲಿ ಭಾಗಿಯಾಗದಿರುವ ಭಾರತದ ನಿರ್ಧಾರವನ್ನು ಪ್ರಕಟಿಸಿದ್ದರು.

ಅಗ್ಗದ ಚೀನಿ ಸರಕುಗಳು ತನ್ನ ದೇಶಿಯ ಉದ್ಯಮಗಳಿಗೆ ಮಾರಕವಾಗಲಿದೆ ಎಂಬ ಕಳವಳದಿಂದಾಗಿ ಭಾರತವು ಆರ್‌ಸಿಇಪಿಗೆ ಸೇರದಿರುವ ಕುರಿತು ಮಂಗಳವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್ ಶುಆಂಗ್ ಅವರು,ಭಾರತವು ಒಪ್ಪಂದಕ್ಕೆ ಸೇರುವುದನ್ನು ಚೀನಾ ಸ್ವಾಗತಿಸುತ್ತದೆ. ಆರ್‌ಸಿಇಪಿಯು ಮುಕ್ತವಾಗಿದೆ. ಭಾರತವು ಎತ್ತಿರುವ ಬಾಕಿಯುಳಿದಿರುವ ಸಮಸ್ಯೆಗಳನ್ನು ಬಗೆಹರಿಸಲು ಪರಸ್ಪರ ತಿಳುವಳಿಕೆ ಮತ್ತು ಅವಕಾಶ ನೀತಿಯನ್ನು ನಾವು ಅನುಸರಿಸಲಿದ್ದೇವೆ. ಆರ್‌ಸಿಇಪಿ ಪ್ರಾದೇಶಿಕ ವ್ಯಾಪಾರ ಒಪ್ಪಂದವಾಗಿದೆ ಮತ್ತು ಪರಸ್ಪರ ಲಾಭದಾಯಕವಾಗಿದೆ ಎಂದು ಹೇಳಿದರು.

 ಒಪ್ಪಂದಕ್ಕೆ ಅಂಕಿತ ಬಿದ್ದು ಅನುಷ್ಠಾನಗೊಂಡಿದ್ದರೆ ಭಾರತೀಯ ಸರಕುಗಳು ಚೀನಾ ಮತ್ತು ಇತರ ಸದಸ್ಯ ರಾಷ್ಟ್ರಗಳ ಮಾರುಕಟ್ಟೆಗಳನ್ನು ಪ್ರವೇಶಿಸಲು ಪೂರಕವಾಗುತ್ತಿತ್ತು. ಅದೇ ರೀತ ಚೀನಿ ಸರಕುಗಳು ಭಾರತ ಮತ್ತು ಇತರ ಸದಸ್ಯ ರಾಷ್ಟ್ರಗಳ ಮಾರುಕಟ್ಟೆಗಳನ್ನು ಪ್ರವೇಶಿಸಲು ನೆರವಾಗುತ್ತಿತ್ತು ಎಂದ ಅವರು,ಇದು ಸದಸ್ಯ ರಾಷ್ಟ್ರಗಳಿಗೆ ಪರಸ್ಪರ ಪೂರಕ ಒಪ್ಪಂದವಾಗಿದೆ. ಚೀನಾ ಮತ್ತು ಭಾರತ ಎರಡೂ ಪ್ರಮುಖ ಉದಯೋನ್ಮ್ಮುಖ ಆರ್ಥಿಕತೆಗಳಾಗಿವೆ.

2.7 ಶತಕೋಟಿ ಜನಸಂಖ್ಯೆಯ ಬೃಹತ್ ಮಾರುಕಟೆಯನ್ನು ನಾವು ಹೊಂದಿದ್ದು,ಇದು ಭಾರೀ ಸಾಮರ್ಥ್ಯವನ್ನು ಹೊಂದಿದೆ ಎಂದರು. ಮಂಗಳವಾರ ಶಾಂಘೈನಲ್ಲಿ ಚೀನಾ ಇಂಟರ್‌ನ್ಯಾಷನಲ್ ಇಂಪೋರ್ಟ್ ಎಕ್ಸ್‌ಪೋ ಉದ್ಘಾಟಿಸಿ ಮಾತನಾಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೂ ಆರ್‌ಸಿಇಪಿಯನ್ನು ಪ್ರಸ್ತಾಪಿಸಿದರಾದರೂ ಒಪ್ಪಂದದಿಂದ ಹೊರಗುಳಿಯುವ ಭಾರತದ ನಿರ್ಧಾರವನ್ನು ಉಲ್ಲೇಖಿಸಲಿಲ್ಲ.

ಆರ್‌ಸಿಇಪಿಯಲ್ಲಿ ಪಾಲ್ಗೊಂಡಿರುವ 15 ರಾಷ್ಟ್ರಗಳು ಆ ಕುರಿತು ಮಾತುಕತೆಗಳನ್ನು ಪೂರ್ಣಗೊಳಿಸಿವೆ ಮತ್ತು ಒಪ್ಪಂದಕ್ಕೆ ಶೀಘ್ರವೇ ಅಂಕಿತ ಬೀಳಲಿದೆ ಹಾಗೂ ಅದು ಅನುಷ್ಠಾನಗೊಳ್ಳಲಿದೆ ಎಂದು ತಾನು ಆಶಿಸಿದ್ದೇನೆ ಎಂದು ಕ್ಸಿ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)