varthabharthi


ಕ್ರೀಡೆ

ಇಂದು ಬಾಂಗ್ಲಾ ವಿರುದ್ಧ ಎರಡನೇ ಟ್ವೆಂಟಿ-20 ಪಂದ್ಯ

ಸರಣಿ ಸಮಬಲ ಸಾಧಿಸಲು ಭಾರತದ ಪ್ರಯತ್ನ

ವಾರ್ತಾ ಭಾರತಿ : 7 Nov, 2019

ರಾಜ್‌ಕೋಟ್, ನ.6: ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಎರಡನೇ ಟ್ವೆಂಟಿ ಪಂದ್ಯ ಗುರುವಾರ ರಾಜ್‌ಕೋಟ್‌ನಲ್ಲಿ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಗೆಲುವಿನೊಂದಿಗೆ ಸಮಬಲ ಸಾಧಿಸಲು ಎದುರು ನೋಡುತ್ತಿದೆ.

  ಈ ಪಂದ್ಯಕ್ಕೆ ಚಂಡಮಾರುತದ ಭೀತಿ ಎದುರಾಗಿದೆ. ಮೊದಲ ಪಂದ್ಯಕ್ಕೆ ದಿಲ್ಲಿಯಲ್ಲಿ ವಾಯುಮಾಲಿನ್ಯದ ಭೀತಿ ಇತ್ತು. ಆದರೆ ಈ ಪಂದ್ಯದಲ್ಲಿ ಬಾಂಗ್ಲಾದ ಆಟಗಾರರು ವಾತಾವರಣಕ್ಕೆ ಹೊಂದಿಕೊಳ್ಳಲು ಸಮಸ್ಯೆ ಎದುರಿಸಿದರು. ಇಬ್ಬರು ಆಟಗಾರರು ಅಸ್ವಸ್ಥಗೊಂಡರು. ಹೀಗಿದ್ದರೂ ಭಾರತವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದರು. ಮುಶ್ಫೀಕುರ್ರಹೀಂ (60) ಅಜೇಯ ಅರ್ಧಶತಕ ನೆರವಿನಲ್ಲಿ ಬಾಂಗ್ಲಾ ಸುಲಭವಾಗಿ ಗೆಲುವಿನ ದಡ ಸೇರಿತು.

 ಸ್ಟಾರ್ ಆಟಗಾರ ಶಾಕೀಬ್ ಅಲ್ ಹಸನ್ ಅನುಪಸ್ಥಿತಿಯಲ್ಲೂ ಬಾಂಗ್ಲಾದ ಆಟಗಾರರು ಚೆನ್ನಾಗಿ ಆಡಿ ಗೆಲುವಿನ ದಾಖಲೆ ಬರೆದರು. ಭಾರತ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‌ನಲ್ಲಿ ಅನುಭವಿಸಿದ ವೈಫಲ್ಯ ಸೋಲಿಗೆ ಕಾರಣವಾಯಿತು. ಒಂದೇ ಓವರ್‌ನಲ್ಲಿ ಮೂರು ಬಾರಿ ಡಿಆರ್‌ಎಸ್ ಮನವಿ ಅವಕಾಶವನ್ನು ಕಳೆದುಕೊಂಡಿರುವುದು ಮತ್ತು ಬಾಂಗ್ಲಾ ಗೆಲುವಿನ ಹೀರೊ ಮುಶ್ಫೀಕುರ್ರಹೀಂ ನೀಡಿದ ಕ್ಯಾಚ್‌ನ್ನು ಕೈ ಚೆಲ್ಲಿರುವುದು ತಂಡಕ್ಕೆ ಗೆಲುವಿಗೆ ಅಡ್ಡಿಯಾಯಿತು. ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಉಪನಾಯಕ ರೋಹಿತ್ ಶರ್ಮಾ ತಂಡವನ್ನು ನಾಯಕರಾಗಿ ಮುನ್ನಡೆಸಿದ್ದರು. ಭಾರತ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಮತ್ತೆ ಎಡವಿದೆ. ಮುಂದಿನ ವರ್ಷದ ವಿಶ್ವಕಪ್‌ಗೆ ತಯಾರಿ ನಡೆಸುತ್ತಿರುವ ಭಾರತ ಎರಡನೇ ಪಂದ್ಯದಲ್ಲಿ ಸೋತರೆ ಸರಣಿ ಬಾಂಗ್ಲಾದ ತೆಕ್ಕೆಗೆ ಜಾರಲಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 148 ರನ್ ಗಳಿಸಿತ್ತು. ಆದರೆ ಬಾಂಗ್ಲಾಕ್ಕೆ ಈ ಸವಾಲು ಕಠಿಣವೆನಿಸಲಿಲ್ಲ. ನಾಯಕ ರೋಹಿತ್ ಶರ್ಮಾ ಮೊದಲ ಓವರ್‌ನಲ್ಲಿ ಎರಡು ಬೌಂಡರಿ ಬಾರಿಸಿ ಸ್ಫೋಟಕ ಬ್ಯಾಟಿಂಗ್ ಸೂಚನೆ ನೀಡಿದರೂ ಅದೇ ಓವರ್‌ನಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದು ನಿರ್ಗಮಿಸಿದರು. ಇವರೊಂದಿಗೆ ಇನಿಂಗ್ಸ್ ಆರಂಭಿಸಿದ್ದ ಶಿಖರ್ ಧವನ್ 42 ಎಸೆತಗಳಲ್ಲಿ 41 ರನ್ ಗಳಿಸಿದ್ದರು. ಈ ಕಾರಣದಿಂದಾಗಿ ಅವರ ಸ್ಟ್ರೈಕ್ ರೇಟ್ ಮತ್ತು ಫಾರ್ಮ್ ನ ಬಗ್ಗೆ ಸಂದೇಹ ಮೂಡಿದೆ. ಟೆಸ್ಟ್ ತಂಡದಲ್ಲಿ ಅವಕಾಶ ಕಳೆದುಕೊಂಡಿರುವ ಲೋಕೇಶ್ ರಾಹುಲ್ ಇದೀಗ ಟ್ವೆಂಟಿ-20 ತಂಡದಲ್ಲಿ ಅವಕಾಶ ದೃಢಪಡಿಸುವ ಒತ್ತಡಕ್ಕೆ ಸಿಲುಕಿದ್ದಾರೆ. ಅವರಿಂದ ಕ್ರಿಕೆಟ್ ಅಭಿಮಾನಿಗಳು ಅಪಾರ ನಿರೀಕ್ಷೆಯನ್ನಿಟ್ಟುಕೊಂಡಿದ್ದರು. ಆದರೆ ಅವರು ಕಡಿಮೆ ಮೊತ್ತಕ್ಕೆ ವಿಕೆಟ್ ಕಳೆದುಕೊಂಡರು. ರಿಷಭ್ ಪಂತ್, ಕೃನಾಲ್ ಪಾಂಡ್ಯ ಮತ್ತು ಆಲ್‌ರೌಂಡರ್ ಶಿವಂ ದುಬೆ ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡು ಬರಲಿಲ್ಲ. ಮುಂದಿನ ಪಂದ್ಯದಲ್ಲಿ ದುಬೆಗೆ ಅವಕಾಶ ನೀಡುತ್ತಾರೋ ಅಥವಾ ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ಗೆ ಟೀಮ್ ಮ್ಯಾನೇಜ್‌ಮೆಂಟ್ ಅವಕಾಶ ನೀಡಲಿದೆಯೋ ಎನ್ನುವುದು ಕುತೂಹಲ ಕೆರಳಿಸಿದೆ. ಒಂದು ವೇಳೆ ಕರ್ನಾಟಕದ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ಅಂತಿಮ ಹನ್ನೊಂದರಲ್ಲಿ ಸೇರಿಕೊಂಡರೆ ಅವರಿಗೆ ಯಾರಾದರೂ ಒಬ್ಬರು ತಂಡದಲ್ಲಿ ಸ್ಥಾನ ತೆರವುಗೊಳಿಸಬೇಕಾಗುತ್ತದೆ. ಬೌಲಿಂಗ್ ವಿಭಾಗದಲ್ಲೂ ತಂಡಕ್ಕೆ ತಲೆನೋವು ಇದೆ. ವೇಗಿ ಖಲೀಲ್ ಅಹ್ಮದ್ 4 ಓವರ್‌ಗಳಲ್ಲಿ 37 ರನ್ ಬಿಟ್ಟುಕೊಟ್ಟಿದ್ದರು. ಈ ಕಾರಣದಿಂದಾಗಿ ಅವರ ಬದಲಿಗೆ ಶಾರ್ದೂಲ್ ಠಾಕೂರ್ ಅವಕಾಶ ಪಡೆಯುವ ಸಾಧ್ಯತೆ ಇದೆ.

ಶ್ರೇಯಸ್ ಅಯ್ಯರ್ 13 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 1 ಬೌಂಡರಿ ಸಹಾಯದಿಂದ 22 ರನ್ ಗಳಿಸಿದರು. ಚೊಚ್ಚಲ ಪಂದ್ಯವನ್ನಾಡಿದ ಶಿವಂ ದುಬೆ (1) ವಿಫಲರಾದರು. ವಿಕೆಟ್ ಕೀಪರ್ ರಿಷಭ್ ಪಂತ್ 27 ರನ್ ಗಳಿಸಿದರು. ಕೃನಾಲ್ ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್ ಮುರಿಯದ ಜೊತೆಯಾಟದಲ್ಲಿ 28 ರನ್ ಸೇರಿಸಿದ್ದರು.ಪಾಂಡ್ಯ ಔಟಾಗದೆ 15ರನ್(8ಎ, 1ಬೌ,1ಸಿ) ಮತ್ತು ಸುಂದರ್ ಔಟಾಗದೆ 14 ರನ್(5ಎ, 2ಸಿ) ಗಳಿಸಿದ್ದರು. ದಿಲ್ಲಿಯಲ್ಲಿ ಭಾರತದ ವಿರುದ್ಧ ಬಾಂಗ್ಲಾದೇಶ ತಂಡ ಆಡಿರುವ 9 ಪಂದ್ಯಗಳಲ್ಲಿ ಮೊದಲ ಜಯ ದಾಖಲಿಸಿತ್ತು. ಇದೀಗ ಭಾರತದ ನೆಲದಲ್ಲಿ ಸರಣಿ ಗೆಲುವಿಗಾಗಿ ಕಾಯುತ್ತಿದೆ. ಕೋಚ್ ರಸಲ್ ಡೋಮಿಂಗ್ ತಂಡದ ಗೆಲುವಿನಲ್ಲಿ ರಹೀಮ್ ದೊಡ್ಡ ಕೊಡುಗೆ ನೀಡಿದರು. ಅವರು ಹಿರಿಯ ಆಟಗಾರರಾದ ತಮೀಮ್ ಇಕ್ಬಾಲ್ ಮತ್ತು ಶಾಕೀಬ್ ಅಲ್ ಹಸನ್ ಅನುಪಸ್ಥಿತಿಯಲ್ಲಿ ಇನ್ನೊಂದು ಪಂದ್ಯದಲ್ಲಿ ಚೆನ್ನಾಗಿ ಆಡಿ ಸರಣಿ ಗೆಲುವು ದಾಖಲಿಸುವ ಯೋಜನೆಯಲ್ಲಿದ್ದಾರೆ. ಸ್ಪಿನ್ನರ್ ಆಮೀನುಲ್ ಇಸ್ಲಾಂ ಮತ್ತು ವೇಗಿ ಶಫೀಯುಲ್ ಇಸ್ಲಾಂ ಭಾರತದ ದೊಡ್ಡ ಮೊತ್ತದ ಸವಾಲು ಸೇರಿಸುವ ಯೋಜನೆಯನ್ನು ವಿಫಲಗೊಳಿಸಿದ್ದರು.

ಪಂದ್ಯದ ಸಮಯ: ರಾತ್ರಿ 7:00 ಗಂಟೆಗೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)