varthabharthi


ಅಂತಾರಾಷ್ಟ್ರೀಯ

ಬ್ರಿಟನ್ ಚುನಾವಣೆ: ಬೊರಿಸ್ ಜಾನ್ಸನ್‌ಗೆ ಸವಾಲೊಡ್ಡುತ್ತಿರುವ ಯುವ ಮುಸ್ಲಿಮ್ ವಲಸಿಗ

ವಾರ್ತಾ ಭಾರತಿ : 7 Nov, 2019

ಲಂಡನ್, ನ. 7: ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಬುಧವಾರ ಸಂಸದೀಯ ಚುನಾವಣೆಗಾಗಿ ತನ್ನ ಕನ್ಸರ್ವೇಟಿವ್ ಪಕ್ಷದ ಪ್ರಚಾರವನ್ನು ಆರಂಭಿಸಿದ್ದಾರೆ. ಈ ಬಾರಿ ಅವರ ಕ್ಷೇತ್ರದಲ್ಲಿ ಅವರಿಗೆ ಸವಾಲು ಒಡ್ಡುತ್ತಿರುವುದು ಲೇಬರ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಓರ್ವ ಯುವ ಮುಸ್ಲಿಮ್ ವಲಸಿಗ. ವಾಯುವ್ಯ ಲಂಡನ್‌ನ ಉಪನಗರವಾಗಿರುವ ಅಕ್ಸ್‌ಬ್ರಿಜ್ ಕ್ಷೇತ್ರದಲ್ಲಿ ಈ ಬಾರಿ ಜಿದ್ದಾಜಿದ್ದಿನ ಮುಖಾಮುಖಿಯಿರುವ ಸೂಚನೆಗಳು ಲಭಿಸಿವೆ.

2017ರಲ್ಲಿ ನಡೆದ ಹಿಂದಿನ ಚುನಾವಣೆಯಲ್ಲಿ ಜಾನ್ಸನ್ ಈ ಕ್ಷೇತ್ರವನ್ನು ಕೇವಲ 5,034 ಮತಗಳ ಅಂತರದಿಂದ ಗೆದ್ದಿದ್ದಾರೆ. ಇಲ್ಲಿ 5 ಶೇಕಡ ಹೆಚ್ಚುವರಿ ಮತಗಳನ್ನು ತನ್ನತ್ತ ಸೆಳೆಯಲು ಲೇಬರ್ ಪಕ್ಷಕ್ಕೆ ಸಾಧ್ಯವಾದರೆ, ಪ್ರಧಾನಿ ಜಾನ್ಸನ್ ಭವಿಷ್ಯ ಅನಿಶ್ಚಿತವಾಗಲಿದೆ.

 ಲೇಬರ್ ಪಕ್ಷದ ಅಭ್ಯರ್ಥಿ 25 ವರ್ಷದ ಅಲಿ ಮಿಲಾನಿ ಇರಾನ್‌ನಿಂದ ಲಂಡನ್‌ಗೆ ವಲಸೆ ಬಂದವರು. ಅವರಿಗೆ 5 ವರ್ಷವಾಗಿದ್ದಾಗ ತಾಯಿ ಮತ್ತು ತಂಗಿ ಜೊತೆ ಅವರು ಇಲ್ಲಿಗೆ ಬಂದವರು. ಅವರು ಸಾರ್ವಜನಿಕ ಮನೆಯಲ್ಲಿ ವಾಸಿಸಿದವರು ಹಾಗೂ ಆಂಶಿಕ ವಿದ್ಯಾರ್ಥಿವೇತನದಲ್ಲಿ ಶಾಲೆಗೆ ಹೋದವರು.

55 ವರ್ಷದ ಜಾನ್ಸನ್ ನ್ಯೂಯಾರ್ಕ್‌ನಲ್ಲಿ ಜನಿಸಿದವರು. ರಾಜತಾಂತ್ರಿಕರಾಗಿದ್ದ ಅವರ ತಂದೆ ಸ್ವಲ್ಪ ಅವಧಿಗೆ ಬ್ರಸೆಲ್ಸ್‌ನಲ್ಲಿ ಸೇವೆ ಸಲ್ಲಿಸಿದ್ದರು. ಅವರು ರಾಜಕೀಯಕ್ಕೆ ಬರುವ ಮೊದಲು ಪತ್ರಕರ್ತರಾಗಿದ್ದರು.

ಜಾನ್ಸನ್ ತನ್ನ ಕ್ಷೇತ್ರದಲ್ಲಿ ವಾಸಿಸುತ್ತಿಲ್ಲ. ಆದರೆ, ಅವರು ಆಗಾಗ ಅಲ್ಲಿಗೆ ಭೇಟಿ ನೀಡುತ್ತಾರೆ.

ಇದು ಪ್ರತಿಸ್ಪರ್ಧಿ ಮಿಲಾನಿಗೆ ವರದಾನವಾಗಿದೆ. ಅವರು ತನ್ನನ್ನು ಸ್ಥಳೀಯನೆಂದು ಪರಿಚಯಿಸಿಕೊಳ್ಳುತ್ತಿದ್ದಾರೆ.

ಭರವಸೆ ಈಡೇರಿಸದ ಜಾನ್ಸನ್

ಹೀತ್ರೂ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಮೂರನೇ ರನ್‌ವೇಯನ್ನು ನಿಲ್ಲಿಸಲು ಜಾನ್ಸನ್ ವಿಫಲವಾಗಿರುವುದು ಅವರಿಗೆ ಚುನಾವಣೆಯಲ್ಲಿ ಹಿನ್ನಡೆಯಾಗಲಿದೆ ಎಂದು ಮಿಲಾನಿ ಹೇಳುತ್ತಾರೆ. ರನ್‌ವೇಯನ್ನು ನಿಲ್ಲಿಸುವುದಕ್ಕಾಗಿ ಬುಲ್‌ಡೋಝರ್ ಎದುರು ಮಲಗುವುದಾಗಿ ಜಾನ್ಸನ್ ವಾಗ್ದಾನ ಮಾಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)