varthabharthi


ಬೆಂಗಳೂರು

ರಾಜ್ಯದಲ್ಲಿ ಚುನಾವಣೆ ಎದುರಾದರೆ ಅದನ್ನು ಎದುರಿಸುವ ಶಕ್ತಿ ಜೆಡಿಎಸ್‍ಗೆ ಇಲ್ಲ: ಹೆಚ್.ಡಿ. ರೇವಣ್ಣ

ವಾರ್ತಾ ಭಾರತಿ : 7 Nov, 2019

ಹಾಸನ: ಈ ರಾಜ್ಯದಲ್ಲಿ ಇರುವುದು ಬೂಟಾಟಿಕೆಯ ಸೆಕ್ಯುಲರ್ ಮಾತ್ರವಾಗಿದ್ದು, ನಮಗೆ ಯಾವ ಒಳ ಒಪ್ಪಂದದ ಅವಶ್ಯಕತೆಯಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಸೋಲಿಸಲು ಯಾರು ಒಳ ಒಪ್ಪಂದವನ್ನು ಮಾಡಿಕೊಂಡಿದ್ದರು ಎಂದು ತಿಳಿದಿದ್ದು, ಮುಂದೆ ಬಹಿರಂಗಪಡಿಸುವುದಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಕ್ಯುಲರ್ ನಾವೆಲ್ಲಾ ಒಂದಾಗಿ ಕೋಮುವಾದಿಗಳನ್ನು ದೂರವಿಡಬೇಕು ಎನ್ನುತ್ತಾರೆ. ಇನ್ನೊಂದು ಕಡೆ ಸೆಕ್ಯುಲರ್ ಪಾರ್ಟಿಯನ್ನೆ ಹೊಡೆಯುವಂತಹ ಕಾರ್ಯಕ್ರಮ ಈ ರಾಜ್ಯದಲ್ಲಿ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ 7 ಜನ ಶಾಸಕರನ್ನು ಏನು ಮಾಡಲಾಯಿತು ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. 14 ತಿಂಗಳ ಮೈತ್ರಿ ಸರಕಾರದ ಬಗ್ಗೆ ವಿಮರ್ಶೆ ಮಾಡಲು ಹೋಗುವುದಿಲ್ಲ. ಕೆಲ ಕಾಂಗ್ರೆಸ್ ಮುಖಂಡರು ಜೆಡಿಎಸ್ ಸಹವಾಸ ಸಾಕು ಎಂದ ಮೇಲೆ ನಾವು ಮಾತನಾಡುವುದಿಲ್ಲ. ಮಾತನಾಡಿದರೆ ಅಪ್ಪ ಮಕ್ಕಳು ಸರಕಾರ ತೆಗೆದರು ಎನ್ನುತ್ತಾರೆ ಎಂದು ಅವರು ಹೇಳಿದರು.

ಹಿಂದೆ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಮೈತ್ರಿ ಸರ್ಕಾರ ಇದ್ದಾಗ ಬಿಜೆಪಿ ನಾಯಕರೊಬ್ಬರು ಕುಮಾರಸ್ವಾಮಿ ಅವರೇ 5 ವರ್ಷ ಸಿಎಂ ಆಗಿರಲಿ ಎಂದು ಹೇಳಿದ್ದರು. ನಂತರ ನಡೆದ ಘಟನೆ ಎಲ್ಲರಿಗೂ ಗೊತ್ತಿದೆ. 5 ವರ್ಷ ಸಿಎಂ ಆಗಿರಲಿ ಎಂದು ಹೇಳಿದ ನಾಯಕರ ಹೆಸರನ್ನು ನಾನು ಹೇಳುವುದಿಲ್ಲ. ಈಗ ಅದು ಮುಗಿದ ಅಧ್ಯಾಯ. ಈಗ ಕಾಂಗ್ರೆಸ್ ನಾಯಕರು ಜೆಡಿಎಸ್ ಹಾಗೂ ಬಿಜೆಪಿ ನಡುವೆ ಒಳ ಒಪ್ಪಂದ ನಡೆದಿದೆ ಎನ್ನುತ್ತಿದ್ದಾರೆ. ಆದರೆ ಆ ರೀತಿ ಯಾವುದೇ ಒಪ್ಪಂದ ನಡೆದಿಲ್ಲ. ರಾಜ್ಯದಲ್ಲಿ ಚುನಾವಣೆ ಎದುರಾದರೆ ಅದನ್ನು ಎದುರಿಸುವ ಶಕ್ತಿ ಜೆಡಿಎಸ್‍ಗೆ ಇಲ್ಲ. ಹೀಗಾಗಿ ನಾವು ಸದ್ಯ ಚುನಾವಣೆ ಬೇಡ ಎನ್ನುತ್ತಿದ್ದೇವೆ ಎಂದರು. 

ಕೆಲವರಿಗೆ ಪ್ರತಿನಿತ್ಯ ಜೆಡಿಎಸ್‍ಗೆ ಬಯ್ಯದಿದ್ದರೇ ಊಟವೇ ಸೇರುವುದಿಲ್ಲ. ಅಂದು ಉಪವಾಸ ಇರುತ್ತಾರೆನು ಗೊತ್ತಿಲ್ಲ. ಅವರೇ ಸಹವಾಸ ಬೇಡ ಎಂದಾಗ ನಾವು ಏನು ಮಾಡಲು ಸಾಧ್ಯ. ನಮ್ಮ ಪಾಡಿಗೆ ನಾವು ಇದ್ದು ಬಿಡುತ್ತೇವೆ. ಇಂದು ಕೂಡ ನಾವು ಎರಡು ರಾಷ್ಟ್ರೀಯ ಪಕ್ಷಗಳಿಂದ ದೂರ ಇದ್ದೇವೆ.  15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿ ಹಾಕುತ್ತೇವೆ. ನಮಗೆ ಯಾವ ಒಳ ಒಪ್ಪಂದದ ಅವಶ್ಯಕತೆ ಇಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)