varthabharthi


ಕರಾವಳಿ

ಸುರತ್ಕಲ್: ಜುಮಾ ಮಸೀದಿ, ಮದರಸದ ನವೀಕೃತ ಕಟ್ಟಡ ಉದ್ಘಾಟನೆ

ವಾರ್ತಾ ಭಾರತಿ : 8 Nov, 2019

ಸುರತ್ಕಲ್ : ಬಾಬರಿ ಮಸೀದಿಯ ತೀರ್ಪು ಯಾವುದೇ ಸಮುದಾಯದ ಪರವಾಗಿ ಬಂದರೂ ಭಾರತೀಯರಾಗಿರುವ ನಾವು ದೇಶದ ಉನ್ನತ ನ್ಯಾಯಾಲಯದ ತೀರ್ಪಿಗೆ ತಲೆಬಾಗಲೇಬೇಕಿದೆ. ಆದ್ದರಿಂದ ಯಾರೂ ಸೌಹಾರ್ದಕ್ಕೆ ಭಂಗ ಉಂಟಾಗುವಂತಹಾ ಯಾವುದೇ ಕಾರ್ಯಗಳಿಗೆ ಕೈಹಾಕಬಾರದು ಎಂದು ಇಂಡಿಯನ್ ಗ್ರಾಂಡ್ ಮುಫ್ತಿ, ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.

ಜನತಾ ಕಾಲನಿಯ ಹಯಾತುಲ್ ಇಸ್ಲಾಂ ಜುಮಾ ಮಸೀದಿಯ ವಠಾರದಲ್ಲಿ ಶುಕ್ರವಾರ ಸುರತ್ಕಲ್‌ನ ಮುಹಿಯುದ್ದೀನ್ ಜುಮಾ ಮಸೀದಿ ಮತ್ತು ಈದ್ಗಾ ಜುಮಾ ಮಸೀದಿಗಳ ಅಧೀನದಲ್ಲಿರುವ ಜನತಾ ಕಾಲನಿಯ ಹಯಾತುಲ್ ಇಸ್ಲಾಂ ಜುಮಾ ಮಸೀದಿ ಮತ್ತು ಮದರಸದ ನವೀಕೃತ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ತೀರ್ಪು ಯಾವುದೇ ಸಮುದಾಯದ ಪರವಾಗಿ ಬಂದರೂ ಸರಿ. ಯಾವುದೇ ರೀತಿಯ ಅಶಾಂತಿ ಹುಟ್ಟಿಸಬಹುದಾದ ಕಾರ್ಯಗಳನ್ನು ಮಾಡ ಬಾರದು. ಬಾಬರಿ ಮಸೀದಿಯ ತೀರ್ಪು ಮುಸಲ್ಮಾನರ ಪರವಾಗಿ ಬರಲೆಂದು ಪ್ರಾರ್ಥಿಸಿ ಎಂದು ಅವರು ನುಡಿದರು.

ಸಮಾರೋಪ ಸಮಾರಂಭದಲ್ಲಿ ದುವಾ ನೇತೃತ್ವವನ್ನು ಅಸೈಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೊಸಿ ತಂಙಳ್ ಕಿಲ್ಲೂರು ನೆರವೇರಿಸಿದರು. ಹಾಜಿ ಬಿ.ಎಚ್. ಅಸ್ಗರ್ ಅಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣಾಪುರದ ಖಾಝಿ ಅಲ್ ಹಾಜಿ ಇ.ಕೆ. ಇಬ್ರಾಹೀಂ ಮದನಿ, ಡಾ. ಎಂ.ಎಸ್.ಎಂ. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಸುರತ್ಕಲ್ ಎಂ.ಜೆ.ಎಂ ಜುಮಾ ಮಸೀದಿಯ ಖತೀಬ್ ಹಾಫಿಲ್ ಮುಹಿಯುದ್ದೀನ್ ರಝ್ವಿ ಅಲ್ ಅಂಜದಿ, ಬಿ.ಎಂ ಪಾರೂಕ್, ಮುಮ್ತಾಝ್ ಅಲಿ, ಜನತಾ ಕಾಲನಿ ಹಯಾತುಲ್ ಇಸ್ಲಾಮ್ ಜುಮಾ ಮಸೀದಿಯ ಅಧ್ಯಕ್ಷ ಇಸ್ಮಾಯೀಲ್ ಅಶ್ರಫ್, ಉಪಾಧ್ಯಕ್ಷ ಮುಹಮ್ಮದ್ ನವಾಝ್ ಮೊದಲಾದವರು ಉಪಸ್ಥಿತರಿದ್ದರು.

ಮಧ್ಯಾಹ್ನ ನಡೆದ ಮಸೀದಿಯ ಉದ್ಘಾಟನೆ ಮತ್ತು ಜುಮಾ ನೇತೃತ್ವವನ್ನು ಸೈಯ್ಯದ್ ಝೈನುಲ್ ಆಬಿದೀನ್ ಜಮಾಲುಲೈಲಿ ತಂಙಳ್ ಕಾಜೂರು ನೆರವೇರಿಸಿದರು. ಈ ಸಂದರ್ಭ ಉಡುಪಿ - ಚಿಕ್ಕಮಗಳೂರು ಸಂಯುಕ್ತ ಖಾಝಿ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ , ಶೈಖುನಾ ಅಝ್‌ಹರ್ ಫೈಝಿ ಬೊಳ್ಳೂರು ಉಸ್ತಾದ್, ಮುಕ್ಕ ಜುಮಾ ಮಸೀದಿಯ ಖತೀಬ್ ಎಂ.ಎಂ. ಆರೀಫ್ ಝುಹ್ರಿ ಮೊದಲಾದವರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)