varthabharthi


ಕ್ರೀಡೆ

ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್

ಸಾತ್ವಿಕ್-ಚಿರಾಗ್ ಸೆಮಿ ಫೈನಲ್‌ಗೆ

ವಾರ್ತಾ ಭಾರತಿ : 9 Nov, 2019

ಫುಝೌ, ನ.8: ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ. ಈ ಮೂಲಕ ಬಿಡಬ್ಲುಎಫ್ ವರ್ಲ್ಡ್ ಟೂರ್ ಸೂಪರ್ 750 ಇವೆಂಟ್‌ನಲ್ಲಿ ಭಾರತದ ಸವಾಲನ್ನು ಜೀವಂತವಾಗಿಸಿದ್ದಾರೆ.

ಇಲ್ಲಿ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 43 ನಿಮಿಷಗಳ ಹೋರಾಟದಲ್ಲಿ ಶ್ರೇಯಾಂಕರಹಿತ ಭಾರತದ ಜೋಡಿ ಸಾತ್ವಿಕ್-ಚಿರಾಗ್ ಚೀನಾ ಆಟಗಾರರಾದ ಲಿ ಜುನ್ ಹುಯ್ ಹಾಗೂ ಲಿಯು ಯು ಚೆನ್‌ರನ್ನು 21-19, 21-15 ಗೇಮ್‌ಗಳ ಅಂತರದಿಂದ ಮಣಿಸಿತು. ಸಾತ್ವಿಕ್ ಹಾಗೂ ಚಿರಾಗ್ ಶನಿವಾರ ನಡೆಯಲಿರುವ ಸೆಮಿ ಫೈನಲ್‌ನಲಿ ಇಂಡೋನೇಶ್ಯದ ಅಗ್ರ ಶ್ರೇಯಾಂಕದ ಹಾಗೂ ವಿಶ್ವದ ನಂ.1 ಮರ್ಕಸ್ ಫೆರ್ನಾಲ್ಡಿ ಗಿಡಿಯೊನ್ ಹಾಗೂ ಕೆವಿನ್ ಸಂಜಯ ಸುಕಮುಲ್ಜೊರನ್ನು ಎದುರಿಸಲಿದ್ದಾರೆ. ವಿಶ್ವದ ನಂ.9ನೇ ಡಬಲ್ಸ್ ಆಟಗಾರರಾದ ಸಾತ್ವಿಕ್ ಹಾಗೂ ಚಿರಾಗ್ ಕಳೆದ ತಿಂಗಳು ನಡೆದ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಗಿಡಿಯೊನ್-ಸುಕಮುಲ್ಜೊ ವಿರುದ್ಧ ಸೋತಿದ್ದರು.

ಸಾತ್ವಿಕ್ ಹಾಗೂ ಚಿರಾಗ್ ಆಗಸ್ಟ್‌ನಲ್ಲಿ ಚೊಚ್ಚಲ ಸೂಪರ್-500 ಪ್ರಶಸ್ತಿಯನ್ನು ಜಯಿಸಿದ್ದರು. ಕಳೆದ ತಿಂಗಳು ಫ್ರೆಂಚ್ ಓಪನ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದ ಈ ಜೋಡಿ ಟೂರ್ನಿಯಲ್ಲಿ ಕಣದಲ್ಲಿರುವ ಭಾರತದ ಏಕೈಕ ಸ್ಪರ್ಧಿಯಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)