varthabharthi


ರಾಷ್ಟ್ರೀಯ

ಪಾದಚಾರಿಗಳೇ ಹುಷಾರ್... ರಸ್ತೆಗಳು ಎಷ್ಟು ಅಸುರಕ್ಷಿತ ಗೊತ್ತೇ ?

ವಾರ್ತಾ ಭಾರತಿ : 18 Nov, 2019

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಭಾರತದ ನಗರಗಳಲ್ಲಿ ನಡೆದಾಡುವುದು ಸುರಕ್ಷಿತವಲ್ಲ; ಇತ್ತೀಚಿನ ವರ್ಷಗಳಲ್ಲಂತೂ ಇದು ಅಪಾಯಕಾರಿಯಾಗಿ ಮಾರ್ಪಡುತ್ತಿದೆ. 2014 ರಿಂದ 2018ರ ಅವಧಿಯಲ್ಲಿ ಭಾರತದ ರಸ್ತೆಗಳಲ್ಲಿ ಮೃತಪಟ್ಟ ಪಾದಚಾರಿಗಳ ಸಂಖ್ಯೆ ಶೇಕಡ 84ರಷ್ಟು ಹೆಚ್ಚಿದೆ. 2014ರಲ್ಲಿ ಪ್ರತಿದಿನ 34 ಮಂದಿ ಪಾದಚಾರಿಗಳು ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುತ್ತಿದ್ದರೆ, ಈಗ ಆ ಪ್ರಮಾಣ 62ಕ್ಕೆ ಹೆಚ್ಚಿದೆ.

ಕೇಂದ್ರ ಸಾರಿಗೆ ಸಚಿವಾಲಯ ಪ್ರಕಟಿಸಿದ ರಸ್ತೆ ಅಪಘಾತಗಳಿಗೆ ಸಂಬಂಧಿಸಿದ ಇತ್ತೀಚಿನ ವರದಿಯ ಪ್ರಕಾರ, 2014ರಲ್ಲಿ ದೇಶದಲ್ಲಿ 12,330 ಮಂದಿ ಪಾದಚಾರಿಗಳು ಬಲಿಯಾಗಿದ್ದರು. 2015ರಲ್ಲಿ ಈ ಸಂಖ್ಯೆ 13,894, 2016ರಲ್ಲಿ 15,746, 2017ರಲ್ಲಿ 20,457 ಮತ್ತು 2018ರಲ್ಲಿ 22,656ಕ್ಕೇರಿದೆ.

ಭಾರತದಲ್ಲಿ ಪಾದಚಾರಿಗಳ ಹಕ್ಕಿನ ಬಗ್ಗೆ ತಿಳಿದಿಲ್ಲ ಅಥವಾ ರಸ್ತೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಾಗ ಹಾಗೂ ಸಂಚಾರ ಯೋಜನೆಗಳನ್ನು ರೂಪಿಸುವಾಗ ಇದನ್ನು ಪರಿಗಣಿಸುತ್ತಿಲ್ಲ. ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುವವರ ಪೈಕಿ ಶೇಕಡ 15ರಷ್ಟು ಮಂದಿ ಪಾದಚಾರಿಗಳು ಹಾಗೂ ಶೇಕಡ 2.4ರಷ್ಟು ಮಂದಿ ದ್ವಿಚಕ್ರ ಸವಾರರು ಎಂದು ರಸ್ತೆ ಸುರಕ್ಷತಾ ತಜ್ಞರು ಹೇಳುತ್ತಾರೆ.

ಜಾಗತಿಕವಾಗಿ ಪಾದಚಾರಿಗಳು ಅಪಘಾತಕ್ಕೆ ಈಡಾಗುವ ಸಾಧ್ಯತೆ ಅಧಿಕ ಎಂಬ ಕಾರಣಕ್ಕೆ ಪಾದಚಾರಿಗಳ ಗರಿಷ್ಠ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ರಸ್ತೆ ಅಪಘಾತಗಳ ವರಿಯ ಪ್ರಕಾರ 2018ರಲ್ಲಿ ಗರಿಷ್ಠ ಪಾದಚಾರಿಗಳು ಮೃತಪಟ್ಟಿರುವುದು ಪಶ್ಚಿಮ ಬಂಗಾಳದಲ್ಲಿ. ಈ ರಾಜ್ಯದಲ್ಲಿ 2618 ಮಂದಿ ಬಲಿಯಾಗಿದ್ದರೆ, ಮಹಾರಾಷ್ಟ್ರ (2515), ಆಂಧ್ರಪ್ರದೇಶ (1569) ನಂತರದ ಸ್ಥಾನಗಳಲ್ಲಿವೆ. ದೆಹಲಿಯಲ್ಲಿ 420 ಪಾದಚಾರಿಗಳು ಅಪಘಾತಗಳಲ್ಲಿ ಜೀವ ಕಳೆದುಕೊಂಡಿದ್ದು, ಈ ಪ್ರಮಾಣ ರಾಜಧಾನಿಯಲ್ಲಿ ಅಪಘಾತಗಳಲ್ಲಿ ಸಂಭವಿಸಿದ ಸಾವಿನ ಶೇಕಡ 25ರಷ್ಟು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)