varthabharthi


ಕರಾವಳಿ

‘ಸ್ಟ್ರೀಟ್ ಸಿಂಗರ್’ ವೈಕುಂಠ ಸಾವು : ಉಡುಪಿ ಜಿಲ್ಲಾಸ್ಪತ್ರೆ ವೈದ್ಯರ ವಿರುದ್ಧ ನಿರ್ಲಕ್ಷದ ಆರೋಪ

ವಾರ್ತಾ ಭಾರತಿ : 19 Nov, 2019

ಉಡುಪಿ, ನ.19: ತನ್ನದೇ ಶೈಲಿಯ ಹಾಡುಗಳಿಂದ ಮನರಂಜಿಸುತಿದ್ದ ಕುಂದಾಪುರದ ‘ಸ್ಟ್ರೀಟ್ ಸಿಂಗರ್’ ವೈಕುಂಠ (32) ನಿನ್ನೆ ರಾತ್ರಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ಬಹು ಅಂಗಗಳ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಇದೀಗ ಆತನಿಗೆ ಚಿಕಿತ್ಸೆ ನೀಡಿದ ವೈದ್ಯರ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಲಾಗಿದ್ದು, ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಲೇರಿದೆ.

ತೀವ್ರ ಅನಾರೋಗ್ಯದಿಂದ ಕುಂದಾಪುರದ ರಸ್ತೆಯ ಬದಿಯಲ್ಲಿ ನರಳುತಿದ್ದ ವೈಕುಂಠನನ್ನು ಆತನ ಅಭಿಮಾನಿಗಳು ಕಳೆದ ನ.13ರಂದು ಉಡುಪಿಯ ಜಿಲ್ಲಾಸ್ಪತ್ರೆಗೆ ಸೇರಿದ್ದರು. ಕುಂದಾಪುರದ ಬೀದಿಗಳಲ್ಲಿ ಸ್ವಚ್ಛಂಧವಾಗಿ ಹಾಡುತಿದ್ದ ಆತನ ಹಾಡನ್ನು ಕೇಳಿದ ಹಲವರು ಆತನಿಗೆ ಮದ್ಯದ ಆಮಿಷ ತೋರಿಸಿ ಆತನಿಂದ ಬಗೆಬಗೆಯ ಹಾಡನ್ನು ಹಾಡಿಸಿ ಅದನ್ನು ಯೂಟ್ಯೂಬ್‌ಗೆ ಹಾಕಿ ವೈರಲ್ ಮಾಡುತಿದ್ದರು. ಕುಡಿತದ ಚಟದಿಂದಾಗಿ ಆತನ ಆರೋಗ್ಯ ಕೈಕೊಟ್ಟು, ಚಿಕಿತ್ಸೆಯಿಂದಲೂ ಆತ ಬದುಕುಳಿಯಲಿಲ್ಲ.

ಆದರೆ ಇದೀಗ ಆತನಿಗೆ ಚಿಕಿತ್ಸೆ ನೀಡಿದ ಜಿಲ್ಲಾಸ್ಪತ್ರೆಯ ವೈದ್ಯ ಡಾ. ನಾಗೇಶ್ ಅವರ ನಿರ್ಲಕ್ಷ್ಯ ಧೋರಣೆಯಿಂದ ವೈರಲ್ ಸ್ಟಾರ್ ವೈಕುಂಠ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತನ ಹಿತೈಷಿಗಳು,ಅಭಿಮಾನಿಗಳು ಇಂದು ಆಸ್ಪತ್ರೆಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದ್ದರು.

ತೀವ್ರ ಅನಾರೋಗ್ಯದಿಂದ ನರಳುತಿದ್ದ ಹಾಡುಗಾರ ವೈಕುಂಠನನ್ನು ಕುಂದಾಪುರದ ರಂಜಿತ್ ಹಂಗಳೂರು ಎಂಬವರು 108 ಅಂಬುಲೆನ್ಸ್‌ನಲ್ಲಿ ನ.13ರ ಅಪರಾಹ್ನ ಜಿಲ್ಲಾಸ್ಪತ್ರೆಗೆ ಸೇರಿಸಿದ್ದರು. ಆದರೆ ಆಸ್ಪತ್ರೆಗೆ ದಾಖಲಿಸಲು ಬಂದಿದ್ದ ವೇಳೆ ಡಾ.ನಾಗೇಶ್, ಬೀದಿಯಲ್ಲಿರುವವರನ್ನೆಲ್ಲಾ ಸೇರಿಸಿಕೊಳ್ಳಲು ಇಂದು ಧರ್ಮಛತ್ರವಲ್ಲ. ನಮಗೆ ಊಟ ಮಾಡಲೂ ಅವಕಾಶ ಕೊಡುವುದಿಲ್ಲ ಎಂದೆಲ್ಲಾ ಅವಮಾನಕರ ರೀತಿಯಲ್ಲಿ ಬೈದು ರೋಗಿಯನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಇದನ್ನೆಲ್ಲಾ ಶೂಟಿಂಗ್ ಮಾಡಲು ಮುಂದಾದ ತಮ್ಮ ಮೊಬೈಲ್‌ನ್ನು ಕಿತ್ತುಕೊಂಡು ಹಾಳುಗೆಡವಿದ್ದರು ಎಂದು ರಂಜಿತ್ ಹಂಗಳೂರು ಹಾಗೂ ಪ್ರಸಾದ್ ಬೈಂದೂರು ಪತ್ರಕರ್ತರ ಬಳಿ ದೂರಿದ್ದರು.

ನ.13ರ ಘಟನೆಗೆ ಸಂಬಂಧಿಸಿದಂತೆ ಉಡುಪಿ ನಗರ ಠಾಣೆಯಲ್ಲಿ ದೂರು ಹಾಗೂ ಸಂಬಂಧಿತ ವೈದ್ಯರಿಂದ ಪ್ರತಿದೂರು ದಾಖಲಾಗಿದೆ.

ಇದೀಗ ವೈಕುಂಠನನ್ನು ಅಡ್ಮಿಟ್ ಮಾಡಿಕೊಂಡ ವೈದ್ಯರು ಬಳಿಕ ನಿರ್ಲಕ್ಷ್ಯ ತೋರಿದ್ದರಿಂದ ವೈಕುಂಠ ಮೃತರಾಗಿದ್ದಾರೆ. ಸಾವನ್ನಪ್ಪುವಂತಹ ಯಾವುದೇ ಖಾಯಿಲೆ ಅವರಿಗೆ ಇರಲಿಲ್ಲ. ಸರಕಾರಿ ಆಸ್ಪತ್ರೆಯ ವೈದ್ಯರು ಆತನನ್ನು ಚೆನ್ನಾಗಿ ನೋಡಿಕೊಳ್ಳದೇ ಇದ್ದುದರಿಂದಲೇ ಮೃತಪಟ್ಟಿದ್ದಾರೆ. ನಮಗೆ ನ್ಯಾಯಬೇಕು ಎಂದು ಕುಂದಾಪುರದ ಹಲವು ಮಂದಿ ಆತನ ಪರಿಚಿತರು, ಅಭಿಮಾನಿಗಳು ಅಳಲು ತೋಡಿಕೊಂಡರು.

ಕುಂದಾಪುರದಲ್ಲಿ ತನ್ನ ಪಾಡಿಗೆ ಹಾಡಿಕೊಂಡು ಜನಾನುರಾಗಿಯಾಗಿ ರಾಕ್‌ಸ್ಟಾರ್ ಎನಿಸಿಕೊಂಡಿದ್ದ ವೈಕುಂಠ, ತನ್ನದೇ ಶೈಲಿಯ ಹಾಡುಗಾರಿಕೆ ಯಿಂದಾಗಿ ಊರವರಿಗೂ ಪರಿಚಿತನಾಗಿದ್ದ. ಇದೀಗ ಈತನ ಸಾವಿನಿಂದ ನೊಂದಿರುವ ಸ್ಥಳೀಯರು, ಸ್ನೇಹಿತರು ಇಂದು ಆಸ್ಪತ್ರೆಗೆ ಆಗಮಿಸಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

ವೈದ್ಯರ ಪ್ರತಿಕ್ರಿಯೆ: ನ.13ರ ಘಟನೆ ಹಾಗೂ ವೈಕುಂಠ ಅವರ ಸಾವಿಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯ ಡಾ. ನಾಗೇಶ್, ಸರಕಾರಿ ಆಸ್ಪತ್ರೆ ಇರುವುದೇ ಬಡವರಿಗಾಗಿ. ನಾವು ವೈಕುಂಠನನ್ನು ಅಡ್ಮಿಟ್ ಮಾಡಿಕೊಂಡು ಸಿಟಿ ಸ್ಕಾನ್ ಸೇರಿದಂತೆ ಸಾಧ್ಯವಿರುವ ಎಲ್ಲಾ ಚಿಕಿತ್ಸೆ ನೀಡಿದ್ದೇವೆ. ಆದರೆ ವೆಂಟಿಲೇಟರ್‌ನಲ್ಲಿ ಇಟ್ಟ ನಂತರ ರೋಗಿ ಬದುಕುವ ಸಾಧ್ಯತೆ 50:50 ಮಾತ್ರ ಇರುತ್ತದೆ. ನಮ್ಮೆಲ್ಲಾ ಪ್ರಯತ್ನದ ಹೊರತಾಗಿಯೂ ಚಿಕಿತ್ಸೆಗೆ ಸ್ಪಂಧಿಸದೇ ಅವರು ಸಾವನ್ನಪ್ಪಿದ್ದಾರೆ. ಇದರಲ್ಲಿ ನಮ್ಮ ನಿರ್ಲಕ್ಷ್ಯ ಏನೂ ಇರುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)