varthabharthi


ನಿಮ್ಮ ಅಂಕಣ

ಭಾರತದ ಸಂವಿಧಾನವನ್ನು ಬದಲಾಯಿಸುವುದೇ ಸಂಘಪರಿವಾರದ ಮೂಲ ಅಜೆಂಡಾ..!

ವಾರ್ತಾ ಭಾರತಿ : 19 Nov, 2019
ಪ್ರದೀಪ್ ಎನ್. ವಿ. ಸಂಶೋಧಕರು, ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರ, ಮಾನಸಗಂಗೋತ್ರಿ, ಮೈಸೂರು

ಬಹುಜನರು ಒಂದೇ ಬ್ಯಾನರ್‌ನಡಿಯಲ್ಲಿ ಜಾಗೃತರಾಗಬೇಕು, ಚಿಂತಿಸಬೇಕು, ಹೋರಾಟ ರೂಪಿಸಿಬೇಕು. ಇಲ್ಲವೆಂದರೆ ಈ ಸಂಘಪರಿವಾರ ನಮ್ಮ ಕಣ್ಣೆದುರಿಗೇ ಅಂಬೇಡ್ಕರ್ ಸಂವಿಧಾನವನ್ನು ಬದಲಾಯಿಸುತ್ತದೆ. ಮತ್ತೆ ಮನುಧರ್ಮಶಾಸ್ತ್ರದಡಿಯಲ್ಲಿ ಬಹುಜನರನ್ನು ಆಳುತ್ತಾರೆ ಎಂಬುದುದಲ್ಲಿ ಅನುಮಾನವಿಲ್ಲ. ಏಕೆಂದರೆ ಎಲ್ಲಾ ಆಯಕಟ್ಟಿನ ಜಾಗಗಳಿಗೆ ಸಂಘಪರಿವಾರದಲ್ಲಿ ಮಣ್ಣು ಹೊತ್ತವರನ್ನೇ ನಾವೂ ಚುನಾಯಿಸುತ್ತಿದ್ದೇವೆ ಎಂಬ ಎಚ್ಚರ ಬಹುಜನರಿಗೆ ತುರ್ತಾಗಿ ಅರಿವಾಗಬೇಕಿದೆ. ನಮ್ಮ ಅಂತ್ಯ ನಮ್ಮ ಕೈಯಲ್ಲಿಯೇ ಇದೆ, ಹಾಗೆಯೇ ಏಳಿಗೆಯೂ ಕೂಡ.


 ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯು 2019ರ ನವೆಂಬರ್ 26 ರಂದು ಭಾರತ ಸಂವಿಧಾನದ ದಿನಾಚರಣೆಯನ್ನು ಆಚರಿಸಲು ಮುಂದಾಗಿದೆ. ಈ ದಿನಾಚರಣೆಯನ್ನು ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿಯೂ ಆಚರಿಸುವಂತೆ ಕಡ್ಡಾಯ ಆದೇಶ ನೀಡಿದೆ. ಈ ದಿನಕ್ಕಾಗಿ CMCA (Children’s Movement for civic Awarness) ಎಂಬ ಖಾಸಗಿ ಸಂಸ್ಥೆಯಿಂದ ಸಂವಿಧಾನದ ಕೈಪಿಡಿಯೊಂದನ್ನು ಸಿದ್ಧಪಡಿಸಿದೆ. ಈ ಕೈಪಿಡಿಯಲ್ಲಿ ಅಂಬೇಡ್ಕರ್ ಒಬ್ಬರೇ ಸಂವಿಧಾನವನ್ನು ರಚಿಸಿಲ್ಲ ಎಂದು ದಾಖಲಿಸುವ ಮೂಲಕ ವಿವಾದವನ್ನು ಸೃಷ್ಟಿಸಿದೆ. ಇದರ ವಿರುದ್ಧವಾಗಿ ಬಹುತೇಕ ಪ್ರಜ್ಞಾವಂತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಕಾರಣಕ್ಕಾಗಿ ಸರಕಾರ ಆ ಕೈಪಿಡಿಯನ್ನು ವಾಪಸ್ ಪಡೆದಿದೆ. ಮಾನ್ಯ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಈ ಪ್ರಕರಣವನ್ನು ಕುರಿತಾಗಿ ಹೀಗೆ ಹೇಳುತ್ತಾರೆ: ‘‘ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಸಂವಿಧಾನ ದಿನದ ಬಗ್ಗೆ ಒಂದಷ್ಟು ಕಾರ್ಯಕ್ರಮಗಳನ್ನು ರೂಪಿಸಿದ್ದ್ದೇವೆ. ಸಿಎಂಸಿಎ ಖಾಸಗಿ ಸಂಸ್ಥೆಗೆ ಭಾರತ ಸಂವಿಧಾನದ ಬಗ್ಗೆ ಮಕ್ಕಳಿಗೆ ಅರ್ಥವಾಗುವಂತೆ ಒಂದು ಕೈಪಿಡಿಯನ್ನು ರಚಿಸುವಂತೆ ವಹಿಸಲಾಗಿತ್ತು. ಅವರು ತಯಾರಿಸಿಕೊಟ್ಟ ಕೈಪಿಡಿಯನ್ನು ತಜ್ಞರ ಸಮಿತಿಯ ಪರಿಶೀಲನೆಗೆ ಒಳಪಡಿಸದೆ ಯಾರೋ ಅಧಿಕಾರಿಗಳು ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ’’ ಎಂದು ಹೇಳಿದರು.

ಅಪ್ಲೋಡ್ ಮಾಡಿದ ನಾಲ್ವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಾರೆ. ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ಐಎಎಸ್ ಅಧಿಕಾರಿ ಉಮಾಶಂಕರ್ ಅವರೂ ಕ್ಷಮೆಯಾಚಿಸಿದ್ದಾರೆ. ಇಷ್ಟಾದರೂ ಕೂಡ ಕೆಲವು ಪ್ರಶ್ನೆಗಳು ಉಳಿಯುತ್ತದೆ: ಶಿಕ್ಷಣ ಇಲಾಖೆಯ ಗಮನಕ್ಕೆ ಬಾರದೆ ಯಾವುದೇ ಆದೇಶಗಳು ಶಾಲಾ-ಕಾಲೇಜುಗಳನ್ನು ತಲುಪುವುದಕ್ಕೆ ಸಾಧ್ಯವೇ? ಈ ಖಾಸಗಿ ಸಂಸ್ಥೆಗೆ ಕೈಪಿಡಿ ರಚಿಸುವುದಕ್ಕೆ ಅನುಮತಿ ಕೊಟ್ಟವರು ಯಾರು? ಇವೆಲ್ಲವೂ ಕಣ್ತಪ್ಪಿನಿಂದ ನಡೆಯುವುಕ್ಕೆ ಹೇಗೆ ಸಾಧ್ಯ? ಸಿಎಂಸಿಎ ಎಂಬ ಸಾಮಾಜಿಕ ಸೇವಾ ಸಂಸ್ಥೆ ಬಗ್ಗೆ ಒಂದಷ್ಟು: ಈ ಸಂಸ್ಥೆ ಸಂವಿಧಾನ ದಿನಾಚರಣೆಯಂದು ನಡೆಯುತ್ತಿರುವ ಅಭಿಯಾನದಲ್ಲಿ ಅಂಬೇಡ್ಕರ್ ಅವರನ್ನು ಗೌಣವಾಗಿಸುವ ಹಾಗೂ ಅವರೊಬ್ಬರೇ ಸಂವಿಧಾನವನ್ನು ಬರೆಯಲಿಲ್ಲ ಎಂಬ ತಪ್ಪುಮಾಹಿತಿಗಳನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಿತ್ತಲು ಪ್ರಯತ್ನಿಸಿತು.

ಈ ಪ್ರಯತ್ನಕ್ಕೆ ಕಾರಣವೇನು? ಕಾರಣವಿಷ್ಟೇ; 2019ರ ಲೋಕಸಭೆ ಚುನಾವಣೆಯಲ್ಲಿ ಮೋದಿ ನೇತೃತ್ವದಲ್ಲಿ 300ಕ್ಕೂ ಅಧಿಕ ಸ್ಥಾನಗಳಲ್ಲಿ ಎನ್‌ಡಿಎ ಜಯಶಾಲಿಯಾಗಲಿದೆ ಎಂಬ ಹೇಳಿಕೆ ನೀಡಿದ್ದ ಭಾರತದ ಪ್ರಖ್ಯಾತ ಹೂಡಿಕೆದಾರ ರಾಕೇಶ್ ಜುಂಜನ್‌ವಾಲಾ ಅವರು ತಮ್ಮ ಫೌಂಡೇಷನ್ ಮೂಲಕ ಸಿಎಂಸಿಎ ಸಂಸ್ಥೆಗೆ ದೇಣಿಗೆ ನೀಡಿದ್ದರು. ಇದಕ್ಕಾಗಿ ಈ ಸಂಸ್ಥೆಯೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಧನ್ಯವಾದಗಳನ್ನು ಸಹ ಅರ್ಪಿಸಿದೆ. ಈ ಸಂಸ್ಥೆಯ ಸದಸ್ಯರು ಹೀಗಿದ್ದಾರೆ: ಕರ್ನಾಟಕ ಪೊಲೀಸ್ ಇಲಾಖೆಯ ನಿವೃತ್ತ ಮಹಾನಿರ್ದೇಶಕ ಡಾ. ಅಜಯ್‌ಕುಮಾರ್ ಸಿಂಗ್, ಅರಣ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿ ಹಾಗೂ ಪರಿಸರವಾದಿ ಡಾ. ಎ. ಎನ್. ಯಲ್ಲಪ್ಪ ರೆಡ್ಡಿ, ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್‌ರಾವ್, ಬಿಇಎಲ್‌ನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಜಿ. ಗೋವರ್ಧನ್, ಚಿತ್ರನಟ ರಮೇಶ್ ಅರವಿಂದ್, ಖ್ಯಾತ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತ ಸಂವಿಧಾನದ ಪಿತಾಮಹ. ಅವರು ಈ ಸಂವಿಧಾನವನ್ನು ರಚಿಸಿದ್ದು ಸಮ-ಸಮಾಜದ ರಾಷ್ಟ್ರನಿರ್ಮಾಣಕ್ಕಾಗಿ. ಹಾಗಾಗಿಯೇ ಅವರ ವಿದ್ವತ್ತು, ಜ್ಞಾನ, ಪರಿಶ್ರಮ, ಸಾಮಾಜಿಕ ಬದ್ಧತೆ ಹಾಗೂ ದೇಶಪ್ರೇಮವನ್ನು ಕಂಡ ಪ್ರಜ್ಞಾವಂತರು ‘ವಿಶ್ವಜ್ಞಾನಿ’ ಎಂದು ಒಪ್ಪಿಕೊಂಡಿದ್ದಾರೆ. ಬಾಬಾಸಾಹೇಬರಿಗೆ ಡಾಕ್ಟರ್ ಆಫ್ ಲಾ ಪದವಿ ನೀಡಿದ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾನಿಲಯ 1952ರಲ್ಲಿ 'Former of Indian constitution' ಎಂದು ಗೌರವಿಸಿದೆ. ಭಾರತ ಸಂವಿಧಾನವನ್ನು ರಚಿಸುವ ಸಲುವಾಗಿ ಕರಡು ರಚನಾ ಸಮಿತಿಯನ್ನು ರಚಿಸಲಾಯಿತು. ಆ ರಚನಾ ಸಮಿತಿಯಲ್ಲಿ 7 ಜನ ಪ್ರಜ್ಞಾವಂತರನ್ನು ಆಯ್ಕೆಮಾಡಲಾಯಿತು. ಅದರಲ್ಲಿ ಎನ್. ಮಾಧವರಾವ್, ಸಯ್ಯದ್ ಮುಹಮ್ಮದ್ ಸಾದುಲ್ಲಾ, ಡಾ. ಬಿ. ಆರ್. ಅಂಬೇಡ್ಕರ್, ಕೃಷ್ಣಸ್ವಾಮಿ ಅಯ್ಯರ್ ಮತ್ತು ಸಲಹೆಗಾರರಾದ ಬಿ. ಎನ್. ರಾವ್, ಎಸ್. ಎಂ. ಮುಖರ್ಜಿ, ಜುಗಲ್ ಕಿಶೋರ್ ಖನ್ನಾ ಮತ್ತು ಕೇವಲ್ ಕೃಷ್ಣನ್ ಇವರೆಲ್ಲ ಇದ್ದರು.

ಭಾರತದ ಪ್ರಥಮ ರಾಷ್ಟ್ರಪತಿಗಳಾದ ಡಾ. ರಾಜೇಂದ್ರಪ್ರಸಾದ್ ಅವರು ಹೀಗೆ ಹೇಳುತ್ತಾರೆ: ‘‘ಡಾ. ಅಂಬೇಡ್ಕರ್‌ರವರ ಆರೋಗ್ಯ ತೀರಾ ಹದಗೆಟ್ಟಿದ್ದರೂ ಲೆಕ್ಕಿಸದೆ ಸಂವಿಧಾನ ರಚನೆಯಲ್ಲಿ ಅವರನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು ಹಾಗೂ ಅವರು ಎಷ್ಟೊಂದು ಶ್ರದ್ಧೆಯಿಂದಲೂ, ಉತ್ಸಾಹದಿಂದಲೂ ದುಡಿದರೆಂಬುದನ್ನು ಅವರ ದೈನಂದಿನ ನಡವಳಿಕೆಗಳನ್ನು ಕುರ್ಚಿಯಲ್ಲಿ ಕುಳಿತು ನನ್ನಷ್ಟು ಮಟ್ಟಿಗೆ ಕಣ್ಣಾರೆ ಕಂಡವರು ಇನ್ನೊಬ್ಬರಿಲ್ಲ. ಭಾರತ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಅವರನ್ನು ಚುನಾಯಿಸಬೇಕೆಂದು ನಾವು ತೆಗೆದುಕೊಂಡ ನಿರ್ಧಾರ ಎಷ್ಟೊಂದು ಅರ್ಥಪೂರ್ಣವಾಗಿದೆಯೋ ಅವರ ಕರ್ತವ್ಯ ಮತ್ತು ಶ್ರದ್ಧೆಯೂ ಅಷ್ಟೇ ಪರಿಣಾಮಕಾರಿಯಾದದು’’ ಎಂದು ತಮ್ಮ ಸಮಚಿತ್ತದಿಂದ ನೋಡಿ ಬಾಬಾಸಾಹೇಬರನ್ನು ಶ್ಲಾಘಿಸಿದ್ದಾರೆ. ಹಾಗೆಯೇ ಸಂವಿಧಾನ ಸಭೆಯ ಉಪಾಧ್ಯಕ್ಷರೂ, ಕರಡು ರಚನಾ ಸಮಿತಿಯ ಸದಸ್ಯರೂ ಆಗಿದ್ದ ಟಿ. ಟಿ. ಕೃಷ್ಣಮಾಚಾರಿ ಹೇಳುತ್ತಾರೆ: ‘‘ಸಂವಿಧಾನ ಕರಡು ಸಮಿತಿಗೆ ನೇಮಿಸಿದ 7 ಜನ ಸದಸ್ಯರಲ್ಲಿ ಒಬ್ಬರು ಮಧ್ಯದಲ್ಲಿ ರಾಜೀನಾಮೆ ನೀಡಿದರು ಮತ್ತು ಆ ಜಾಗವನ್ನು ಮತ್ತೆ ತುಂಬಲಾಯಿತು ಎಂಬುದು ಈ ಸದನಕ್ಕೆ ತಿಳಿದಿರಬಹುದು. ಆದರೆ ಒಬ್ಬರು ಮರಣವನ್ನಪ್ಪಿದರು ಮತ್ತೆ ಆ ಜಾಗಕ್ಕೆ ಯಾರನ್ನೂ ತುಂಬಲಿಲ್ಲ. ಮತ್ತೊಬ್ಬರು ಅಮೆರಿಕದಲ್ಲೇ ಇದ್ದರು; ಅವರ ಜಾಗವನ್ನು ಬೇರೆಯವರಿಂದ ತುಂಬಲಿಲ್ಲ. ಮತ್ತೊಬ್ಬರು ರಾಜ್ಯದ ಆಡಳಿತ ಕಾರ್ಯಗಳಲ್ಲಿ ನಿರತರಾಗಿದ್ದರು. ಮತ್ತೆ ಇಬ್ಬರು ದಿಲ್ಲಿಯಿಂದ ದೂರವೇ ಉಳಿದರು; ಕಾರಣ ಅವರ ಆರೋಗ್ಯ ಅವರನ್ನು ಅನುಮತಿಸಲಿಲ್ಲ. ಆನಂತರ ಸಂವಿಧಾನದ ಕರಡನ್ನು ರಚಿಸುವ ಭಾರ ಡಾ. ಅಂಬೇಡ್ಕರ್‌ರವರ ಮೇಲೆ ಬಿತ್ತು ಮತ್ತು ಅವರು ಆ ಕಾರ್ಯವನ್ನು ಒಂಟಿಯಾಗಿ ನಿಭಾಯಿಸಿದ ರೀತಿ ಶ್ಲಾಘನೀಯ ಮತ್ತು ನಾವೆಲ್ಲ ಯಾವುದೇ ಅನುಮಾನಗಳಿಲ್ಲದೆ ಅವರಿಗೆ ಚಿರಋಣಿಯಾಗಿರಬೇಕು’’ ಎಂದು ಹೇಳುತ್ತಾರೆ. ಎಲ್ಲದಕ್ಕಿಂತ ಮಿಗಿಲಾಗಿ ಭಾರತ ಸರಕಾರ ಪ್ರಕಟಿಸಿರುವ 'Dr. Ambedkar The Principle Architect of the Constitution of India' ಎಂಬ ಕೃತಿಯನ್ನು ಓದಿದರೆ ಭಾರತ ಸಂವಿಧಾನವನ್ನು ಬರೆದವರು ಡಾ. ಬಿ. ಆರ್. ಅಂಬೇಡ್ಕರ್ ಅವರು ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

ಗಮನಿಸಿ ನೋಡಿ; ಬಿಜೆಪಿ ಅಧಿಕಾರಕ್ಕೆ ಬಂದಾಗಲೇ ಸಂವಿಧಾನದ ಬಗ್ಗೆ ವಿವಾದಗಳು, ವಿರುದ್ಧವಾದ ಹೇಳಿಕೆಗಳು ಹೊರಬೀಳುತ್ತಿದ್ದಾವೆ ಅಲ್ಲವೇ? ಯಾಕೆ?. ಯಾಕೆಂದರೆ; ಬಿಜೆಪಿಯಲ್ಲಿರುವ ಪ್ರಧಾನ ಮಂತ್ರಿಯಿಂದ ಹಿಡಿದು ಮುಖ್ಯಮಂತ್ರಿ, ಮಂತ್ರಿ, ಶಾಸಕ, ಸಂಸದ ಹೀಗೆ ಎಲ್ಲರೂ ಸಂಘಪರಿವಾರದಲ್ಲಿ (ಆರೆಸ್ಸೆಸ್) ಪಾಠ ಕಲಿತವರೇ ಆಗಿದ್ದಾರೆ. ಬಿಜೆಪಿಯ ಹೆಸರಿನಲ್ಲಿ ದೇಶವನ್ನು ಆಳುತ್ತಿರುವುದು ಸಂಘಪರಿವಾರ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಧರ್ಮವನ್ನು ಅಪೀಮಾಗಿಸಿಕೊಂಡಿರುವ ಸಂಘಪರಿವಾರ ಹುಸಿದೇಶಪ್ರೇಮದ ಹೆಸರಿನಲ್ಲಿ ಮನುಷ್ಯ ವಿರೋಧಿ ಧಾರ್ಮಿಕ ನಿಲುವುಗಳನ್ನು ದಿನೇದಿನೇ ಪ್ರಬಲಪಡಿಸಿಕೊಂಡೇ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುತ್ತಿದೆ. ನಾನೇ ಶ್ರೇಷ್ಠ, ನಾನು ಮಾಡಿದ್ದೇ ಸರಿ ಎನ್ನುವ ಮನಸ್ಥಿತಿಯಲ್ಲಿ ನಡೆದುಕೊಳ್ಳುತ್ತಾ, ತನ್ನ ಹಿಂಬಾಲಕರಿಗೂ ಇದನ್ನೇ ಹೇಳಿಕೊಡುತ್ತಿದೆ. ಹಾಗಾದರೆ ಈ ಸಂಘಪರಿವಾರದ ಮೂಲ ಅಜೆಂಡಾವೇನು?

ಈ ಸಂಘಪರಿವಾರ ಸ್ಥಾಪನೆಗೊಂಡು 2025ಕ್ಕೆ ನೂರು ವರ್ಷಗಳಾಗುತ್ತಿದೆ. ತನ್ನ ಶತಮಾನೋತ್ಸವವನ್ನು ಆಚರಿಸಿಕೊಳ್ಳುವಷ್ಟರಲ್ಲಿ ಸಮಾನತೆಯನ್ನು ಸಾರುವ ಅಂಬೇಡ್ಕರ್ ಸಂವಿಧಾನವನ್ನು ಕಿತ್ತೆಸೆದು ಅಸಮಾನತೆಯನ್ನು ಸಾರುವ ಮನುಧರ್ಮಶಾಸ್ತ್ರವನ್ನು (ಮನುಸ್ಮತಿ) ಜಾರಿಗೆ ತರುವ ಉದೇಶವನ್ನು ತನ್ನ ಪ್ರಣಾಳಿಕೆಯಲ್ಲಿಯೇ ಹಾಕಿಕೊಂಡಿದೆ. ಅದಕ್ಕಾಗಿಯೇ ಬಿಜೆಪಿ ಸಂಸದ ಅನಂತಕುಮಾರ್ ‘‘ನಾವು ಬಂದಿರುವುದೇ ಸಂವಿಧಾನವನ್ನು ಬದಲಾಯಿಸುವುದಕ್ಕೆ’’, ಬಿಜೆಪಿ ಸದಸ್ಯ ಗೋವರ್ಧನ್ ‘‘ಅಂಬೇಡ್ಕರ್ ಬರೆದ ಸಂವಿಧಾನವನ್ನು ನಾವು ಒಪ್ಪುವುದಿಲ್ಲ’’, ಸಿಎಂಸಿಎ ಸಂಸ್ಥೆ ‘‘ಅಂಬೇಡ್ಕರ್ ಒಬ್ಬರೇ ಸಂವಿಧಾನವನ್ನು ರಚಿಸಲಿಲ್ಲ’’, ಚಿ. ನಾ. ರಾಮು ‘‘ಜನವರಿ 25, 2020ಕ್ಕೆ ಮೀಸಲಾತಿ ಅಂತ್ಯವಾಗುತ್ತೆ ಅದಕ್ಕಾಗಿ ಒಂದು ಕಮಿಟಿ ರಚನೆಯಾಗಿದೆ.’’ ಎಂದು ಬಿಜೆಪಿಯವರ ಮೂಲಕ ಹೇಳಿಸುತ್ತಿದ್ದಾರೆ. ರೀತಿ ವಿವಾದಗಳನ್ನು ಹುಟ್ಟುಹಾಕುವುದರಿಂದ ಅವರಿಗೇನು ಲಾಭ? ಲಾಭವಿಷ್ಟೇ; ಬಹುಜನ ಸಂಘಟನೆಗಳು (ಎಸ್ಸಿ, ಎಸ್ಟಿ, ಒಬಿಸಿ, ಆರ್‌ಎಂ), ಬಹುಜನ ವಿದ್ಯಾರ್ಥಿಗಳು ಯಾವತ್ತಿಗೂ ಬೀದಿಯಲ್ಲಿ ನಿಂತು ಹೋರಾಟಮಾಡುತ್ತಿರಬೇಕು, ಇವರೆಲ್ಲ ಒಂದೇ ಬ್ಯಾನರಿನಲ್ಲಿ ಸಂಘಟಿತರಾಗಬಾರದು, ಯೋಚಿಸಬಾರದು, ಜಾಗೃತರಾಗಬಾರದು. ಜಾತಿಯ ಹೆಸರಿನಲ್ಲಿ ವಿಗಂಡನೆಯಾಗುತ್ತಿರಬೇಕು.

ಈ ರೀತಿಯಾಗಿ ಬಹುಜನರನ್ನು ಒಡೆದು ಆಳುವ ತಂತ್ರ ಸಂಘಪರಿವಾರದ್ದು. ಅದಕ್ಕಾಗಿಯೇ ವಿವಾದಗಳನ್ನು ಸೃಷ್ಟಿಸುತ್ತಿರುತ್ತಾರೆ. ಬಾಬಾಸಾಹೇಬರು 1950 ಜನವರಿ 26ರಂದು ದೇಶಕ್ಕೆ ಸಂವಿಧಾನವನ್ನು ಸಮರ್ಪಣೆ ಮಾಡುತ್ತ ಒಂದು ಮಾತನ್ನು ಹೇಳುತ್ತಾರೆ: ‘‘ಇಂದು ನಾವು ವೈರುಧ್ಯದ ಬದುಕಿಗೆ ಕಾಲಿಡುತ್ತಿದ್ದೇವೆ. ಒಂದು ವೋಟು ಒಂದು ಮೌಲ್ಯ ಇರುವ ರಾಜಕೀಯ ಸಮಾನತೆಯನ್ನು ಸಾಧಿಸಿದ್ದೇವೆ. ಆದರೆ ಸಾಮಾಜಿಕ, ಆರ್ಥಿಕ ಸಮಾನತೆಯನ್ನು ಸಾಧಿಸುತ್ತೇವೆಂಬ ನಂಬಿಕೆ ನನಗಿಲ್ಲ. ಏಕೆಂದರೆ ಸಂವಿಧಾನ ಜಾರಿಗೊಳಿಸುವ ಜಾಗದಲ್ಲಿ ಸಂವಿಧಾನ ವಿರೋಧಿಗಳು ಇದ್ದಾರೆ. ಹಾಗಾಗಿ ಅವರು ನನ್ನ ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡುತ್ತಾರೆ ಎಂಬ ನಂಬಿಕೆ ನನಗಿಲ್ಲ’’ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಈ ಆತಂಕ ಇವತ್ತಿಗೂ ಜೀವಂತವಾಗಿದೆ. ಇದಕ್ಕೆ ಕಾರಣಕರ್ತೃ ನಾವೇ ಅಲ್ಲವೇ?

ಬಹುಜನರು ಒಂದೇ ಬ್ಯಾನರಡಿಯಲ್ಲಿ ಜಾಗೃತರಾಗಬೇಕು, ಚಿಂತಿಸಬೇಕು, ಹೋರಾಟ ರೂಪಿಸಿಬೇಕು. ಇಲ್ಲವೆಂದರೆ ಈ ಸಂಘಪರಿವಾರ ನಮ್ಮ ಕಣ್ಣೆದುರಿಗೇ ಅಂಬೇಡ್ಕರ್ ಸಂವಿಧಾನವನ್ನು ಬದಲಾಯಿಸುತ್ತದೆ. ಮತ್ತೆ ಮನುಧರ್ಮಶಾಸ್ತ್ರದಡಿಯಲ್ಲಿ ಬಹುಜನರನ್ನು ಆಳುತ್ತಾರೆ ಎಂಬುದುದಲ್ಲಿ ಅನುಮಾನವಿಲ್ಲ. ಏಕೆಂದರೆ ಎಲ್ಲಾ ಆಯಕಟ್ಟಿನ ಜಾಗಗಳಿಗೆ ಸಂಘಪರಿವಾರದಲ್ಲಿ ಮಣ್ಣು ಹೊತ್ತವರನ್ನೇ ನಾವೂ ಚುನಾಯಿಸುತ್ತಿದ್ದೇವೆ ಎಂಬ ಎಚ್ಚರ ಬಹುಜನರಿಗೆ ತುರ್ತಾಗಿ ಅರಿವಾಗಬೇಕಿದೆ. ನಮ್ಮ ಅಂತ್ಯ ನಮ್ಮ ಕೈಯಲ್ಲಿಯೇ ಇದೆ, ಹಾಗೆಯೇ ಏಳಿಗೆಯೂ ಕೂಡ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)