varthabharthi


ಕ್ರೀಡೆ

ಫಿಫಾ ವಿಶ್ವಕಪ್

ಒಮಾನ್ ವಿರುದ್ಧ ಸೋಲು, ಅರ್ಹತಾ ಸ್ಪರ್ಧೆಯಿಂದ ಭಾರತ ನಿರ್ಗಮನ

ವಾರ್ತಾ ಭಾರತಿ : 20 Nov, 2019

ಮಸ್ಕತ್, ನ.20: ಒಮಾನ್ ವಿರುದ್ಧ 0-1 ಅಂತರದಿಂದ ಸೋಲುಂಡಿರುವ ಭಾರತೀಯ ಫುಟ್ಬಾಲ್ ತಂಡ 2020ರ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಸ್ಪರ್ಧೆಯಿಂದ ತಾತ್ವಿಕವಾಗಿ ನಿರ್ಗಮಿಸಿದೆ.

ಇಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಒಮಾನ್ ಪರ ಮೊಹ್ಸಿನ್ ಅಲ್ ಘಾಸ್ಸಾನಿ 33ನೇ ನಿಮಿಷದಲ್ಲಿ ಅತ್ಯಂತ ಪ್ರಮುಖ ಗೋಲು ಗಳಿಸಿದರು. ಒಮಾನ್ ಅರ್ಹತಾ ಸುತ್ತಿನಲ್ಲಿ ಎರಡನೇ ಬಾರಿ ಭಾರತವನ್ನು ಸದೆಬಡಿದಿದೆ.

ಗುವಾಹಟಿಯಲ್ಲಿ ಸೆಪ್ಟಂಬರ್‌ನಲ್ಲಿ ನಡೆದ ಮೊದಲ ಹಂತದ ಪಂದ್ಯದಲ್ಲಿ ಒಮಾನ್ ತಂಡ ಭಾರತವನ್ನು 2-1 ಅಂತರದಿಂದ ಸೋಲಿಸಿತ್ತು. ಐದು ಪಂದ್ಯಗಳಲ್ಲಿ ಕೇವಲ 3 ಅಂಕ ಗಳಿಸಿರುವ ಭಾರತ ‘ಈ’ ಗುಂಪಿನಲ್ಲಿ ನಾಲ್ಕನೇ ಸ್ಥಾನ ಕಾಯ್ದುಕೊಂಡಿದೆ. ಏಶ್ಯನ್ ಚಾಂಪಿಯನ್ ಖತರ್ ಐದು ಪಂದ್ಯಗಳಲ್ಲಿ 13 ಅಂಕ ಗಳಿಸಿ ಅಗ್ರ ಸ್ಥಾನದಲ್ಲಿದೆ. ಒಮಾನ್ ಒಟ್ಟು 12 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ.

‘ಈ’ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಒಮಾನ್‌ಗಿಂತ 9 ಅಂಕ ಅಂತರದಲ್ಲಿರುವ ಭಾರತ ಮೂರನೇ ಸುತ್ತಿನಲ್ಲಿ ಸ್ಥಾನ ಪಡೆಯುವುದರಿಂದ ಬಹುತೇಕ ಹೊರಬಿದ್ದಿದೆ. ಎರಡನೇ ಸುತ್ತಿನ ಪಂದ್ಯದಲ್ಲಿ ಕೇವಲ 3 ಪಂದ್ಯಗಳಲ್ಲಿ ಆಡಲಿರುವ ಭಾರತ ಗರಿಷ್ಠ 9 ಅಂಕಗಳನ್ನು ಪಡೆಯಬಹುದಾಗಿದೆ.

ರನ್ನರ್ಸ್ ಅಪ್ ತಂಡ ಕೂಡ ಅರ್ಹತಾ ಪಂದ್ಯದ ಮೂರನೇ ಸುತ್ತಿಗೇ ತಲುಪುವ ಖಾತ್ರಿ ಇಲ್ಲ. ಆದರೂ, ಭಾರತ 2023ರ ಏಶ್ಯನ್ ಕಪ್ ಕ್ವಾಲಿಫೈಯರ್‌ನ ಮೂರನೇ ಸುತ್ತಿನಲ್ಲಿ ಸ್ಥಾನ ಗಿಟ್ಟಿಸಲು ತನ್ನ ಬೇಟೆ ಮುಂದುವರಿಸಿದೆ.

ಫಿಫಾ ವಿಶ್ವಕಪ್ ಅರ್ಹತಾ ಪಂದ್ಯ 2023ರ ಏಶ್ಯನ್ ಕಪ್‌ಗೆ ಅರ್ಹತಾ ಪಂದ್ಯವಾಗಿದ್ದು,ಮೂರನೇ ಸ್ಥಾನ ಪಡೆಯುವ ತಂಡಗಳು ಹಾಗೂ 8 ಗುಂಪುಗಳ ಶ್ರೇಷ್ಠ ನಾಲ್ಕು ತಂಡಗಳು ಕಾಂಟಿನೆಂಟಲ್ ಚಾಂಪಿಯನ್‌ಶಿಪ್‌ನ ಮೂರನೇ ಸುತ್ತಿನ ಕ್ವಾಲಿಫೈಯರ್‌ಗೆ ಸಹಜವಾಗಿ ಅರ್ಹತೆ ಪಡೆಯಲಿದೆ.

ಭಾರತದ ಮುಖ್ಯ ಕೋಚ್ ಇಗೊರ್ ಸ್ಟಿಮ್ಯಾಕ್ ಅಫ್ಘಾನಿಸ್ತಾನ ವಿರುದ್ಧ ನ.14ರಂದು ಡುಶಾಂಬೆಯಲ್ಲಿ ನಡೆದ ಪಂದ್ಯದಲ್ಲಿ ಆಡಿದ್ದ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಿದ್ದರು. ಮನ್ವೀರ್ ಸಿಂಗ್, ಫಾರೂಖ್ ಚೌಧರಿ ಹಾಗೂ ನಿಶು ಕುಮಾರ್ ಅವರು ಪ್ರೀತಂ ಕೊಟಾಲ್, ಮಂದಾರ್ ರಾವ್ ಹಾಗೂ ಸಹಾಲ್ ಅಬ್ದುಲ್ ಸಮದ್ ಬದಲಿಗೆ ಆಡಿದ್ದರು.

ಭಾರತ ಏಳನೇ ನಿಮಿಷದಲ್ಲಿ ಎದುರಾಳಿ ಒಮಾನ್‌ಗೆ ಗೋಲು ಬಿಟ್ಟುಕೊಡುವ ಅಪಾಯ ಎದುರಿಸಿತ್ತು. ಆದರೆ, ಮೊಹ್ಸಿನ್ ಪೆನಾಲ್ಟಿ ಸ್ಪಾಟ್‌ನಲ್ಲಿ ಹೊಡೆದ ಗೋಲು ಗುರಿ ತಪ್ಪಿತು. ಪಟ್ಟುಬಿಡದ ಮೊಹ್ಸಿನ್ ಭಾರತದ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರನ್ನು ವಂಚಿಸಿ ಒಮಾನ್ ಪರ ಪ್ರಮುಖ ಗೋಲು ಗಳಿಸಿದರು.

ಮೊದಲಾರ್ಧದಲ್ಲಿ ಒಮಾನ್ ಗೋಲ್‌ಗಾಗಿ ಹೋರಾಟ ನಡೆಸಿದರೂ ಹೆಚ್ಚು ಅವಕಾಶ ಲಭಿಸಲಿಲ್ಲ. ಭಾರತ ಎದುರಾಳಿ ಗೋಲ್ ಮೇಲೆ ಹಲವು ಬಾರಿ ರೈಡ್ ಮಾಡಿದ್ದರೂ ಒಮಾನ್ ಗೋಲ್‌ಕೀಪರ್ ಅಲಿ ಅಲ್ ಹಬ್ಸಿಗೆ ಬೆದರಿಕೆಯಾಗಲು ವಿಫಲರಾದರು. ಭಾರತ ದ್ವಿತೀಯಾರ್ಧದಲ್ಲಿ ಗೋಲು ಗಳಿಸುವ ಗುರಿಯೊಂದಿಗೆ ಉತ್ತಮ ಪ್ರದರ್ಶನ ನೀಡಿತ್ತು. ಒಮಾನ್ 64ನೇ ನಿಮಿಷದಲ್ಲಿ ತನ್ನ ಮುನ್ನಡೆಯನ್ನು 2-0ಗೆ ಹೆಚ್ಚಿ ಸಿಕೊಳ್ಳುವ ಹಾದಿಯಲ್ಲಿತ್ತು. ಆದರೆ, ಭಾರತದ ಗೋಲ್‌ಕೀಪರ್ ಸಂಧು ಎದುರಾಳಿ ಒಮಾನ್‌ಗೆ ಗೋಲು ನಿರಾಕರಿಸಿದರು.

ಭಾರತ ಕೊನೆಯ ಮೂರು ಪಂದ್ಯಗಳನ್ನು ಮುಂದಿನ ವರ್ಷ ಆಡಲಿದೆ. ಮಾ.26ರಂದು ಖತರ್ ವಿರುದ್ಧ, ಜೂ.4ರಂದು ಬಾಂಗ್ಲಾದೇಶ ಹಾಗೂ ಜೂ.9ರಂದು ಅಫ್ಘಾನಿಸ್ತಾನ ವಿರುದ್ಧ ಆಡಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)