varthabharthi


ಓ ಮೆಣಸೇ

ಓ ಮೆಣಸೇ ...

ವಾರ್ತಾ ಭಾರತಿ : 24 Nov, 2019
ಪಿ.ಎ.ರೈ

ಬಿಜೆಪಿಯಿಂದ ದೂರವಾಗಿರುವುದರಿಂದ ಶಿವಸೇನೆ ಈಗ ಕೋಮುವಾದಿಯಲ್ಲ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ.

ಕಾಂಗ್ರೆಸ್‌ಗೆ ಹತ್ತಿರವಾಗಿರುವುದರಿಂದ ಜನರು ಅದನ್ನು ತಿರಸ್ಕರಿಸಲೇ ಬೇಕಾಗುತ್ತದೆ.

---------------------

ಸಣ್ಣ ಪುಟ್ಟ ಭಿನ್ನಾಭಿಪ್ರಾಯ (ಎನ್‌ಡಿಎಯಲ್ಲಿ)ಗಳು ನಮ್ಮನ್ನು ಅತಂತ್ರಗೊಳಿಸಬಾರದು
- ನರೇಂದ್ರ ಮೋದಿ, ಪ್ರಧಾನಿ.

ದೇಶವನ್ನು ಅತಂತ್ರಗೊಳಿಸಿಯಾದರೂ ಎನ್‌ಡಿಎಯನ್ನು ಉಳಿಸುವ ಯೋಚನೆ.

---------------------
ಯೋಗ ಎನ್ನುವುದು ಒಂದು ಪುರುಷಾರ್ಥ ಸಾಧನೆ
- ಬಾಬಾ ರಾಮ್‌ದೇವ್, ಯೋಗ ಗುರು.

ನಿಮ್ಮ ಯೋಗವನ್ನು ನೋಡಿದರೆ ಪುರುಷಸ್ವಾರ್ಥ ಸಾಧನೆಯಿರಬೇಕು. ಅನ್ನಿಸುತ್ತದೆ.

---------------------
ನಾನು ಕಾಂಗ್ರೆಸ್‌ನಿಂದ ಸ್ಪರ್ಧಿಸಿದಾಗ ನನ್ನ ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿಯರೂ ನನಗೆ ಮತ ಹಾಕಿರಲಿಲ್ಲ
- ಆನಂದ ಸಿಂಗ್, ಅನರ್ಹ ಶಾಸಕ.
ಮತ್ತೆ ಇವಿಎಂ ಬಲದಿಂದ ಗೆದ್ದಿರಾ?

---------------------

ಶಿವಸೇನೆ ಸಂಸ್ಥಾಪಕ ಬಾಳಾಠಾಕ್ರೆ ಜನರಿಗೆ ಸ್ವಾಭಿಮಾನದ ವೌಲ್ಯ ಕಲಿಸಿದ್ದರು - ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ. 
ಆ ವೌಲ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ ಅವರ ಮಗ ನಿಮ್ಮಿಂದ ದೂರವಾಗಿದ್ದಾರೆ.

---------------------
ನಾನು ಅರ್ಜುನನಾಗಿ ಯುದ್ಧಕ್ಕೆ ಬರಬೇಕಿತ್ತು. ಆದರೆ ಶ್ರೀಕೃಷ್ಣನಾಗಿ ಚುನಾವಣೆಗೆ ಬಂದಿದ್ದೇನೆ
- ಆರ್.ಶಂಕರ್, ಅನರ್ಹ ಶಾಸಕ.

ಆದರೆ ನಿಮ್ಮ ವೇಷ ನೋಡಿದರೆ ಶಕುನಿಯ ನೆನಪಾಗುತ್ತದೆ. 

---------------------
ಕಾಂಗ್ರೆಸ್-ಜೆಡಿಎಸ್‌ಗೆ ರಾಜ್ಯಭಾರ ಮಾಡಲು ಬರುವುದಿಲ್ಲ
- ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ.
ರಾಜ್ಯಭಾರವೆಂದರೆ ರಾಜ್ಯವನ್ನು ದೋಚುವುದೇ?
---------------------

 ಜನರ ನೀರಿಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ
- ವೆಂಕಯ್ಯನಾಯ್ಡು, ಉಪರಾಷ್ಟ್ರಪತಿ.
  
ವಿಮರ್ಶೆ ಮಾಡುವುದಕ್ಕೆ ಮೊದಲು, ಆತ್ಮ ಎಲ್ಲಿದೆ ಎನ್ನುವುದನ್ನು ಹುಡುಕಿ.

---------------------
ಉಪಚುನಾವಣೆಯಲ್ಲಿ ಪಕ್ಷಕ್ಕೆ ದ್ರೋಹ ಎಸಗುವವರನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ
- ಯಡಿಯೂರಪ್ಪ, ಮುಖ್ಯಮಂತ್ರಿ.
ಬೇರೆ ಪಕ್ಷದ ಶಾಸಕರು ದ್ರೋಹ ಎಸಗಿ ಬಂದರೆ ಸರೀನಾ?

---------------------
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಬಿಜೆಪಿ ಸೇರಲು ಲೈನ್‌ನಲ್ಲಿ ನಿಂತಿದ್ದಾರೆ
- ಅನಂತಕುಮಾರ್ ಹೆಗಡೆ, ಸಂಸದ.

ಬಿಜೆಪಿ ಬಿಡುವವರ ಸಾಲಲ್ಲಿ ಯಡಿಯೂರಪ್ಪ ನಿಂತಿರುವುದನ್ನು ಒಮ್ಮೆ ಗಮನಿಸಿ.

---------------------
 ಐದು ವರ್ಷಗಳ ಹಿಂದೆ ಕೇಜ್ರಿವಾಲ್ ಮಾತ್ರ ಕೆಮ್ಮುತ್ತಿದ್ದರು, ಇಂದು ಇಡೀ ದಿಲ್ಲಿಗೆ ಅದು ಹರಡಿದೆ
- ರಮೇಶ್ ಬಿಧುರಿ, ಸಂಸದ.
ಇಡೀ ದೇಶ ಭ್ರಷ್ಟಾಚಾರದ ಕ್ಯಾನ್ಸರ್‌ನಿಂದ ಕೆಮ್ಮುತ್ತಿರುವುದರ ಬಗ್ಗೆ ಏನು ಹೇಳುತ್ತೀರಿ?

---------------------
  ಯಾರನ್ನು ಎಲ್ಲಿಡಬೇಕೋ ಅಲ್ಲಿ ಇಡುತ್ತೇವೆ
- ಕೆ.ಎಸ್. ಈಶ್ವರಪ್ಪ, ಸಚಿವ.
   ಯಡಿಯೂರಪ್ಪರನ್ನು ಈ ಬಾರಿ ಎಲ್ಲಿ ಇಡಬೇಕೆಂದು ನಿರ್ಧರಿಸಿದ್ದೀರಿ?

---------------------
  ಹುಲಿ ರಾಷ್ಟ್ರ ಪ್ರಾಣಿ ಆಗಿದ್ದಕ್ಕೆ ಭಾರತದಲ್ಲಿ ಭಯೋತ್ಪಾದನೆ ಹೆಚ್ಚಿದೆ
- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
  ನರಿಗಳನ್ನೇ ರಾಷ್ಟ್ರಪ್ರಾಣಿ ಮಾಡಿದರೆ ಹೇಗೆ?

---------------------
 ಸಾವರ್ಕರ್‌ಗೆ ಭಾರತರತ್ನ ನೀಡಲು ಯಾವುದೇ ಶಿಫಾರಸಿನ ಅಗತ್ಯವಿಲ್ಲ
- ನಿತ್ಯಾನಂದರಾಯ್, ಕೇಂದ್ರ ಸಚಿವ.
ಬ್ರಿಟಿಷರಿಗೆ ಅವರು ಬರೆದ ಕ್ಷಮಾಯಾಚನಾ ಪತ್ರವೇ ಅತಿ ದೊಡ್ಡ ಶಿಫಾರಸು.

---------------------
  ಅಂಬೇಡ್ಕರ್ ಬಗ್ಗೆ ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ನಾನು ತಪ್ಪಿತಸ್ಥನಾದರೆ ಚಾಮರಾಜನಗರ ವೃತ್ತದಲ್ಲಿ ನನ್ನನ್ನು ನೇಣಿಗೆ ಹಾಕಲಿ
- ಸುರೇಶ್‌ಕುಮಾರ್, ಸಚಿವ.
  ಬೇರೆಯವರೇಕೆ ನಿಮಗೆ ನೇಣು ಹಾಕಿ ಜೈಲಿಗೆ ಹೋಗುವುದು, ನೀವೇ ಹಾಕಿಕೊಳ್ಳಬಹುದಲ್ಲ?

---------------------
 ಜವಾಹರಲಾಲ್ ನೆಹರೂ ಹೆಸರು ಕೇಳಿದರೆ ಸಾಕು ಕೆಲವರ ರಕ್ತದೊತ್ತಡ ಹೆಚ್ಚಾಗುತ್ತದೆ
- ಅಶೋಕ್ ಗೆಹ್ಲೋಟ್, ರಾಜಸ್ಥಾನ ಮುಖ್ಯಮಂತ್ರಿ.
  ನೆಹರೂ ಈ ದೇಶದ ಆತ್ಮಸಾಕ್ಷಿಯಾಗಿರುವುದರಿಂದ ಇರಬೇಕು.

---------------------
 ಹೋರಿ ಜೊತೆ ಎಚ್ಚರದಿಂದಿರು ಎಂದು ಮುಖ್ಯಮಂತ್ರಿ ನನಗೆ ಸೂಚನೆ ನೀಡಿದ್ದಾರೆ
- ರೇಣುಕಾಚಾರ್ಯ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ.  
ಬಹುಶಃ ಲಿಂಬಾವಳಿಯವರ ಕುರಿತಂತೆ ಈ ಎಚ್ಚರಿಕೆ ನೀಡಿರಬೇಕು.

---------------------
 ರಾಜಕೀಯ ಜೀವನದಲ್ಲಿ ನಾನು ಅಧಿಕಾರ ಅನುಭವಿಸಿದ್ದು ಕಡಿಮೆ, ನೋವುಂಡದ್ದೇ ಜಾಸ್ತಿ
- ದೇವೇಗೌಡ, ಮಾಜಿ ಪ್ರಧಾನಿ
 ಬಹುಶಃ ಅಧಿಕಾರ ಕಳೆದುಕೊಂಡಾಗ ಉಂಟಾದ ನೋವಿರಬೇಕು.

--------------------
 ನರೇಂದ್ರ ಮೋದಿ ಎಷ್ಟು ವರ್ಷ ರಾಜಕಾರಣದಲ್ಲಿರುತ್ತಾರೋ ಅಲ್ಲಿ ತನಕ ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬರುವುದಿಲ್ಲ
- ಎಂಟಿಬಿ ನಾಗರಾಜ, ಅನರ್ಹ ಶಾಸಕ.
ಮಾರಿಕೊಳ್ಳಲು ತಮ್ಮಂಥವರು ಸಿದ್ಧರಿರುವವರೆಗೆ ಇನ್ನೇನಾಗುತ್ತದೆ?

---------------------
 ಗಾಂಧಿ ಟೋಪಿ ಇಟ್ಟವರಿಂದಲೇ ದೇಶಕ್ಕೆ ಟೋಪಿ
- ನಳಿನ್ ಕುಮಾರ್ ಕಟೀಲು, ಸಂಸದ
 ಅದಕ್ಕಾಗಿ ಪಂಪ್‌ವೆಲ್ ಬ್ರಿಡ್ಜ್‌ನ್ನು ತಲೆಯ ಮೇಲೆ ಹೊತ್ತುಕೊಂಡು ತಿರುಗುವುದು ಸರಿಯೇ?

---------------------
 ನಾನು ಒಬ್ಬನೇ ಇದ್ದಾಗ ಬೇಕಿದ್ದರೆ ನನಗೆ ಚಪ್ಪಲಿಯಲ್ಲಿ ಹೊಡೆಯಿರಿ
- ನಾರಾಯಣ ಗೌಡ, ಕೆ.ಆರ್.ಪೇಟೆ ಬಿಜೆಪಿ ಅಭ್ಯರ್ಥಿ
 ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಬಹುದೇ?
---------------------
 ಎಲ್ಲರಿಗೂ ನಾನೆಂದ್ರೆ ಭಯ
- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಕಾಂಗ್ರೆಸ್‌ನೊಳಗೂ ಆ ಭಯ ಇರುವುದು ವಿಪರ್ಯಾಸ.

---------------------

 ಭವಿಷ್ಯದಲ್ಲಿ ನಾನೂ ಮುಖ್ಯಮಂತ್ರಿಯಾಗುವೆ
- ಶ್ರೀರಾಮುಲು, ಸಚಿವ.
 ಬಳ್ಳಾರಿಯನ್ನು ಪ್ರತ್ಯೇಕ ರಾಜ್ಯವಾಗಿ ಘೋಷಿಸಬೇಕಾಗುತ್ತದೆ.

---------------------
 ಜೆಡಿಎಸ್ ಪಕ್ಷ ಹೊಟೇಲ್‌ನಲ್ಲಿ ಟುಡೇಸ್ ಸ್ಪೆಷಲ್ ಇದ್ದಂತೆ
- ಆರ್. ಅಶೋಕ್, ಸಚಿವ.   
ಬಿಜೆಪಿಯ ತಂಗಳನ್ನವನ್ನು ಬಿಸಿ ಮಾಡಿ ಜೆಡಿಎಸ್ ಜೊತೆಗೆ ಸೇರಿಸಿದರೆ ಟುಡೇಸ್ ಸ್ಪೆಶಲ್

---------------------

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು