varthabharthi


ನಿಮ್ಮ ಅಂಕಣ

‘ಮೂಕಜ್ಜಿಯ ಕನಸುಗಳು’ ಬಗ್ಗೆ ಪಿ. ಶೇಷಾದ್ರಿಯವರಿಗೊಂದು ಪತ್ರ

ವಾರ್ತಾ ಭಾರತಿ : 2 Dec, 2019
-ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು

ಪ್ರಿಯ ಶೇಷಾದ್ರಿ,
ನೀವು ಪ್ರೀತಿಯಿಂದ ಆಹ್ವಾನ ಕಳಿಸಿ ಮೈಸೂರಿನಲ್ಲಿ ನಿಮ್ಮ ಇತ್ತೀಚಿನ ‘ಸಿನೆಮಾ’ ತೋರಿಸಿದಿರಿ. ನಿಮ್ಮ ಪ್ರೀತಿಗಾಗಿ ಧನ್ಯವಾದಗಳು.
ಕಾರಂತರ ‘ಮೂಕಜ್ಜಿಯ ಕನಸುಗಳು’ ಕಾದಂಬರಿಯನ್ನು ತೆರೆಯಮೇಲೆ ದೃಶ್ಯರೂಪದಲ್ಲಿ ನೋಡಿದ್ದು ಒಂದು ಬಗೆಯ ‘ವೀಡಿಯೊ ಕಾದಂಬರಿ’ಯನ್ನು ಓದಿ ನೋಡಿದಂತೆ ಅನ್ನಿಸಿತು. ನಿಮಗೆ ಗೊತ್ತಿರುವಂತೆ ಡಿಜಿಟಲ್ ತಂತ್ರಜ್ಞಾನ ಬಂದಮೇಲೆ ಅನೇಕ ಸಾಹಿತ್ಯಕೃತಿಗಳ ಆಡಿಯೊ ಆವೃತ್ತಿಗಳು ಪ್ರಕಟಗೊಂಡಿವೆ. ಸಾಹಿತ್ಯಕೃತಿಗಳನ್ನು ಓದಿ ಅನುಭವಿಸುವುದು ಒಂದು ವಿಧಾನವಾದರೆ, ಅವುಗಳ ಆಡಿಯೊ ಆವೃತ್ತಿಗಳನ್ನು ಕಿವಿಯಿಂದ ಕೇಳಿ ಅನುಭವಿಸುವುದು ಮತ್ತೊಂದು ವಿಧಾನ. ಈ ಸರಣಿಯಲ್ಲಿ ಕಾರಂತರ ಪ್ರಸಿದ್ಧ ಸಾಹಿತ್ಯಕೃತಿಯಾದ ಮೂಕಜ್ಜಿಯ ಕನಸುಗಳು ಕೃತಿಯ ವೀಡಿಯೊ ಆವೃತ್ತಿಯನ್ನು ನೀವು ಸಾಕಷ್ಟು ಶ್ರಮ-ಹಣ ಹಾಕಿ ತಯಾರಿಸಿದ್ದೀರಿ. ಕನ್ನಡ ಸಾಹಿತ್ಯ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾದಂಬರಿಯನ್ನು ದೃಶ್ಯರೂಪದಲ್ಲಿ ನೋಡಬಯಸುವುದಾದರೆ ನಿಮ್ಮ ಹಣ-ಶ್ರಮ ಸಾರ್ಥಕವಾದೀತು.

ಶಿವರಾಮ ಕಾರಂತರು ಹರ್ಷ ಪ್ರಕಟಣಾಲಯದ ಮೂಲಕ ಕಾದಂಬರಿಗಳನ್ನು ಪ್ರಕಟಿಸುತ್ತಿದ್ದಾಗ ಹೇಳಿದ ಮಾತು ಈಗಲೂ ಸಂಗತವಾಗಿದೆ. ‘‘ಒಂದು ಕಾದಂಬರಿಯ 1,000 ಪ್ರತಿಗಳು ಖರ್ಚಾಗಲು ಸುಮಾರು 10 ವರ್ಷಗಳೇ ಬೇಕಾಗುತ್ತವೆ. ಬರವಣಿಗೆಯಿಂದಲೇ ಜೀವನ ಮಾಡಬಯಸುವ ಲೇಖಕನು ಏನು ಮಾಡಬೇಕು?’’ ಎಂಬುದು ಅವರ ವ್ಯಸನಪೂರಿತ ಪ್ರಶ್ನೆ ಆಗಿತ್ತು.

ಈಗ ಇಂಥದೇ ಪ್ರಶ್ನೆ ನಿಮ್ಮನ್ನು ಕಾಡುತ್ತಿರುವಂತಿದೆ. ಲಕ್ಷಗಟ್ಟಲೆ ಹಣ ಹಾಕಿ ಪ್ರಸಿದ್ಧ ಸಾಹಿತ್ಯಕೃತಿಯನ್ನು ದೃಶ್ಯೀಕರಿಸಿದಾಗ ಅದನ್ನು ಕನ್ನಡಿಗರು, ಅದರಲ್ಲೂ ಕಾರಂತರ ಹುಟ್ಟೂರು-ಜಿಲ್ಲೆಯ ಜನರೇ ನೋಡಲು ಉತ್ಸಾಹ ತೋರಿಸದಿದ್ದಾಗ ನಿರ್ದೇಶಕ-ನಿರ್ಮಾಪಕರು ಏನುಮಾಡಬೇಕು ಎಂಬುದು ನಿಮ್ಮ ಪತ್ರಿಕಾ ಹೇಳಿಕೆ, ಸಂದರ್ಶನಗಳಲ್ಲಿ ವ್ಯಕ್ತವಾಗಿರುವ ಪ್ರಶ್ನೆ. ವ್ಯತ್ಯಾಸವೆಂದರೆ, ತನ್ನ ಸಾಹಿತ್ಯಕೃತಿಯು ಕ್ಲುಪ್ತ ಅವಧಿಯಲ್ಲಿ ಮಾರಾಟವಾಗದಿದ್ದರೆ, ಸಾಹಿತಿಯು ಉಪವಾಸ ಬೀಳಬಹುದು. ಸಿನೆಮಾ ಹೆಸರಿನಲ್ಲಿ ಸಾಹಿತ್ಯಕೃತಿಗಳ ವೀಡಿಯೊ ಅವತರಣಿಕೆಗಳನ್ನು ತಯಾರಿಸುವವರು (ಅವರಿಗೆ ಆದಾಯದ ಬೇರೆ ಮೂಲಗಳು ಇರಬಹುದಾದರೆ) ಉಪವಾಸವೇನೂ ಬೀಳುವುದಿಲ್ಲ. ಆದರೆ ಮುಂದಿನ ಸಿನೆಮಾ ಅಥವಾ ಸಾಹಿತ್ಯದ ವೀಡಿಯೊ ಅವತರಣಿಕೆಯನ್ನು ತಯಾರಿಸಲು ಅವರ ಬಳಿ ಹಣವಿರುವುದಿಲ್ಲ, ಅಷ್ಟೆ.

ಯಾವುದೇ ಓದುಗ, ಪ್ರೇಕ್ಷಕ ತನಗಾಗಿ, ತನ್ನದೇ ಪ್ರಯೋಜನಗಳಿಗಾಗಿ ಓದುತ್ತಾನೆ, ನೋಡುತ್ತಾನೆ. ಕೇವಲ ತನ್ನ ಭಾಷಾಪ್ರೇಮಕ್ಕಾಗಿ ಅಲ್ಲ. ಹಾಗೆಯೇ ಶೇಷಾದ್ರಿಯವರು ಯಾರಿಗಾಗಿ ಅಲ್ಲ, ಯಾಕಾಗಿ, ಅವರು ಹೇಳುವ ‘ಸಿನೆಮಾ ತಯಾರಿಕೆ’ಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡರೆ, ಸಿನೆಮಾ ಎನ್ನುವುದಕ್ಕೂ ಸಾಹಿತ್ಯಕೃತಿಗಳ ದೃಶ್ಯ ಅವತರಣಿಕೆಗಳಿಗೂ ಇರುವ ವ್ಯತ್ಯಾಸ ಢಾಳಾಗಿ ಗೋಚರಿಸುತ್ತದೆ. ಅಲ್ಲಿಯವರೆಗೂ ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಾ ಒಮ್ಮೆ ಸಿಹಿ ಹಣ್ಣು ತಿಂದ ಸಂತೋಷಿಸುತ್ತಾ, ಮತ್ತೊಮ್ಮೆ ತಿಂದ ಹಣ್ಣು ಹುಳಿಯೆಂದು ದುಃಖಿಸುವ ಇಬ್ಬಗೆಯ ಭಾವನೆಗಳನ್ನು ಅನುಭವಿಸುತ್ತಲೇ ದ್ವಾ ‘ಸುಪರ್ಣಾ’ದ ನಿಶ್ಚಲ ಹಕ್ಕಿಯ ಸ್ಥಿತಿಯೆಡೆಗೆ ಸಾಗುವುದು ಅನಿವಾರ್ಯ.

ವ್ಯಾಪಾರಿ ಸಿನೆಮಾ-ಕಲಾತ್ಮಕ ಸಿನೆಮಾ, ಕೆಟ್ಟ ಸಿನೆಮಾ-ಒಳ್ಳೆಯ ಸಿನೆಮಾ, ಚಿಂತಲಶೀಲ ಸಿನೆಮಾ-ಮನೋರಂಜನೆಯ ಸಿನೆಮಾ ಮುಂತಾಗಿ ಹೇಗೆ ಭಾಗ ಮಾಡಿದರೂ ಅದು ಸಿನೆಮಾ ಆಗಿ ಸಹೃದಯರನ್ನು ತಲುಪಿದೆಯೇ ಎಂಬುದು ಮುಖ್ಯ ಪ್ರಶ್ನೆಯಾಗುತ್ತದೆ. ಒಂದು ದೃಶ್ಯ-ಶ್ರವ್ಯಕೃತಿ ‘ಸಿನೆಮಾ’ ಆದಾಗಲೂ ಅದೇನೂ ಮಾಡಿದವರಿಗೆ ಹಣ ತಂದುಕೊಡಬಲ್ಲ ಮಾಯಾದಂಡವೇನೂ ಆಗಿರಬೇಕಾದ್ದಿಲ್ಲ. ಲಾಭ ತಂದುಕೊಡದ ದೃಶ್ಯ-ಶ್ರವ್ಯ ಸರಕಿನ ವ್ಯಾಪಾರ ಕೆಟ್ಟ ವ್ಯಾಪಾರ. ಆದರೆ ‘ಸಿನೆಮಾ’ ಆಗಿದ್ದೂ ಹಣ ತಂದುಕೊಡದಿದ್ದರೆ, ಜನರು ನೋಡುವ ಉತ್ಸಾಹ ತೋರಿಸದಿದ್ದರೆ, ಅದೇನೂ ಕೆಟ್ಟ ಸಿನೆಮಾ ಅಲ್ಲ.

ಆದರೆ, ಇಲ್ಲಿರುವ ಮುಖ್ಯ ಪ್ರಶ್ನೆ ಶೇಷಾದ್ರಿಯವರ ಮೂಕಜ್ಜಿಯ ಕನಸುಗಳು ಸಿನೆಮಾ ಆಗಿದೆಯೇ ಎಂಬುದು. ಈ ಪ್ರಶ್ನೆಗೆ ಮುಖಾಮುಖಿಯಾಗದೆ, ಇದರಾಚೆ-ಈಚೆಗೆ ಏನೇ ಹೇಳಿದರೂ ಅದು ಕಾರಂತರ ಕಾದಂಬರಿಯ ಬಗ್ಗೆ ಹೇಳಿದ ಮಾತಾಗುತ್ತದೆಯೇ ಹೊರತು ಚಿತ್ರ ನಿರ್ದೇಶಕ ಪಿ. ಶೇಷಾದ್ರಿಯವರ ‘ವೀಡಿಯೊ ಕೃತಿ’ಯ ಬಗ್ಗೆ ಸಂಗತವಾದದ್ದೇನನ್ನೂ ಹೇಳಿದಂತಾಗುವುದಿಲ್ಲ ಎಂಬುದು ನನ್ನ ಅಭಿಮತ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)