varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 16 Dec, 2019
ಪಿ.ಎ.ರೈ

 *ಎಚ್.ವಿಶ್ವನಾಥ್ ಸೋತರೆ ಪ್ರಪಂಚ ಮುಳುಗುವುದಿಲ್ಲ - ಶ್ರೀನಿವಾಸ ಪ್ರಸಾದ್, ಸಂಸದ.
 ಗೆದ್ದಿದ್ದರೆ ಮುಳುಗುವ ಸಾಧ್ಯತೆ ಇತ್ತಂತೆ.

---------------------
 
ನಮ್ಮ ಪಕ್ಷ ಹಿಂದೆಯೂ ಆಪರೇಷನ್ ಕಮಲ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ - ನಳಿನ್ ಕುಮಾರ್ ಕಟೀಲು, ಸಂಸದ.
ಕನಿಷ್ಠ ಪಂಪ್‌ವೆಲ್‌ಗಾದರೂ ಒಂದು ಆಪರೇಷನ್ ಮಾಡಿ ಮುಗಿಸಿ.

---------------------

ಕೆಲವು ನಾಯಕರ ದುರಂಹಕಾರವೇ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ - ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ.
ಸಾಲು ಸಾಲು ಸೋಲನ್ನು ಕಂಡ ನಾಯಕರೊಬ್ಬರ ಅನುಭವದ ಮಾತು.

---------------------
ಯಡಿಯೂರಪ್ಪ ಸರಕಾರ ಸುಭದ್ರವಾಗಿದೆ ಹಾಗಾಗಿ ನನ್ನ ಸೋಲು ಕೂಡಾ ನನಗೆ ಸಂತೋಷ ತಂದಿದೆ - ಎಚ್.ವಿಶ್ವ್ವನಾಥ್, ಮಾಜಿ ಶಾಸಕ.
ಶಾಶ್ವತವಾಗಿ ಅನರ್ಹ ಶಾಸಕರಾಗಿ ಬದುಕಬಹುದು ಬಿಡಿ.

---------------------
ಇನ್ನು ನಮ್ಮ ಶಾಸಕರನ್ನು ಅನರ್ಹರು ಎನ್ನಬೇಡಿ - ಅರವಿಂದ ಲಿಂಬಾವಳಿ, ಬಿಜೆಪಿ ರಾಜ್ಯ ಪ್ರ.ಕಾರ್ಯದರ್ಶಿ.
 ಅರ್ಹ ಅನರ್ಹ ಶಾಸಕರು ಎನ್ನಬಹುದೆ ?

---------------------
ಉಪಚುನಾವಣೆಯಲ್ಲಿ ನನ್ನ ನೆರವಿಲ್ಲದೇ ಗೆದ್ದ ನನ್ನ ಮಗ ಶರತ್ ಬಚ್ಚೇಗೌಡನ ಬಗ್ಗೆ ಖುಷಿಯಿದೆ - ಬಚ್ಚೇಗೌಡ, ಸಂಸದ.
  ನೀವು ನೆರವು ನೀಡಿದ್ದಿದ್ದರೆ ಸೋಲುವ ಸಾಧ್ಯತೆಯಿತ್ತೇನೋ ?
---------------------

ಇಮ್ರಾನ್ ಖಾನ್‌ರ ತಹ್ರೀಕೆ ಇನ್ಸಾಫ್ ಪಕ್ಷ ಯುಪಿಎಯ ಹೊಸ ಪಾಲುದಾರನಂತೆ ಕಾಣುತ್ತಿದೆ - ಜಿ.ವಿ.ಎಲ್. ನರಸಿಂಹ ರಾವ್, ಬಿಜೆಪಿ ವಕ್ತಾರ.
ಆದರೆ ತಮ್ಮ ಪಕ್ಷ ದೇಶದ ಮೇಲೆ ಸೇಡು ತೀರಿಸಿಕೊಳ್ಳುತ್ತಿರುವುದು ನೋಡಿದರೆ, ಪಾಕಿಸ್ತಾನದ ಉಗ್ರ ಸಂಘಟನೆಗಳ ಪಾಲುದಾರರೋ ಎಂದೆನಿಸುತ್ತಿದೆ.

---------------------

ಒಳ್ಳೆಯ ಸರಕಾರ ಕೊಡಬೇಕಿದ್ದರೆ ಸಂಪುಟದಲ್ಲಿ ಒಳ್ಳೆಯ ಮಂತ್ರಿಯೂ ಇರಬೇಕು - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ.
ಅನರ್ಹರನ್ನೆಲ್ಲ ಸೇರಿಸಿಕೊಂಡರೇ ಅನರ್ಹ ಸರಕಾರಗಳೇ ರಚನೆಯಾಗುತ್ತದೆ.

---------------------
ಶ್ರೀಲಂಕಾ ತಮಿಳು ನಿರಾಶ್ರಿತರನ್ನು ನಮ್ಮ ನೆರೆಯ ದೇಶದ ಪ್ರಜೆಗಳೆಂದು ಯಾವತ್ತೂ ಪರಿಗಣಿಸಬಾರದು - ರವಿಶಂಕರ್ ಗುರೂಜಿ, ಆರ್ಟ್ಸ್ ಆಫ್ ಲಿವಿಂಗ್ ಸ್ಥಾಪಕ.
 ತಮ್ಮ ಆಶ್ರಮದಲ್ಲಿರುವ ಅಕ್ರಮ ವಾಸಿಗಳನ್ನು ಏನು ಪರಿಗಣಿಸಬೇಕು ?

---------------------
ಭಾರತವು ಮೇಕ್ ಇನ್ ಇಂಡಿಯಾದಿಂದ ನಿಧಾನವಾಗಿ ‘ರೇಪ್ ಇನ್ ಇಂಡಿಯಾ’ ಆಗಿ ಬದಲಾಗುತ್ತಿದೆ - ಅಧೀರ್ ರಂಜನ್ ಚೌಧರಿ, ಕಾಂಗ್ರೆಸ್ ನಾಯಕ.

ಇಡೀ ದೇಶದ ಮೇಲೆಯೇ ರೇಪ್ ಮಾಡಲು ಹೊರಟಂತಿದೆ, ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ.

---------------------

ಡಿ.9ರಂದು ಸಿಹಿ ಸುದ್ದಿ ಕೊಡುತ್ತೇನೆ ಎಂದಷ್ಟೆ ಹೇಳಿದ್ದೆ, ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿರಲಿಲ್ಲ
- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ.
 ಒಟ್ಟಿನಲ್ಲಿ ಉಪಚುನಾವಣೆಯ ಸೋಲು ನಿಮ್ಮ ಪಾಲಿನ ಸಿಹಿ ಸುದ್ದಿಯೆ ?

---------------------

ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಜ್ಯೋತಿಷ್ಯಾಲಯಕ್ಕೆ ಬೀಗ ಹಾಕಿ ಮನೆಗೆ ಹೋಗುವುದು ಸೂಕ್ತ - ಆರ್.ಅಶೋಕ್, ಸಚಿವ.
ಉಪಚುನಾವಣೆಯಲ್ಲಿ ಅನರ್ಹರು ಗೆದ್ದ ಮೇಲೆ, ಈ ನಾಡಿನ ಭವಿಷ್ಯ ಹೇಳುವುದಕ್ಕೆ ಜ್ಯೋತಿಷ್ಯರ ಅಗತ್ಯವೇ ಇಲ್ಲ ಬಿಡಿ.

---------------------
ದೇಶದ ಬಗ್ಗೆ ಕೇವಲ ಬಿಜೆಪಿ ಮಾತ್ರ ಕಾಳಜಿ ಹೊಂದಿದೆ ಎಂಬುದು ಭ್ರಮೆ - ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ.
ಅದು ಕಾಳಜಿ ಹೊಂದಿದೆ ಎನ್ನುವುದೇ ಒಂದು ಭ್ರಮೆ.

---------------------
  
ದತ್ತಪೀಠವನ್ನು ಅಯೋಧ್ಯೆ ಮಾದರಿಯಲ್ಲಿ ಬಗೆಹರಿಸಲಾಗುವುದು - ಸಿ.ಟಿ.ರವಿ, ಸಚಿವ.
  ಅಂದರೆ ದರ್ಗಾವನ್ನು ಬಾಬರೀ ಮಸೀದಿಯಂತೆ ಧ್ವಂಸ ಮಾಡುವುದಿದೆಯೆ ?
---------------------
  
ಬಿಜೆಪಿಗರು ಓದುತ್ತಿರುವ ಶಾಲೆಯ ಮುಖ್ಯೋಪಾಧ್ಯಾಯ ನಾನು - ಸಂಜಯ ರಾವತ್, ಶಿವಸೇನೆ ಮುಖಂಡ.
ಅವರು ಶಾಲೆಯಲ್ಲಿ ಓದಿದ್ದು ಸುಳ್ಳು ಎನ್ನುವುದು ಸಾಬೀತಾಗಿದೆ.

---------------------
  
ನಾನು ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅಣ್ಣ -ತಮ್ಮ ಇದ್ದಂತೆ - ಎಚ್.ವಿಶ್ವನಾಥ್, ಮಾಜಿ ಶಾಸಕ.
ಧುರ್ಯೋಧನ-ಭೀಮ ಇದ್ದ ಹಾಗೆ ಎಂದರೆ ಚೆನ್ನಾಗಿತ್ತು.

---------------------

ಇಂದು ಬಿಜೆಪಿಯಲ್ಲಿರುವ ಅರ್ಧದಷ್ಟು ಮಂದಿ ದೇವೇಗೌಡರ ಕಾರ್ಖಾನೆಯಲ್ಲೇ ಬೆಳೆದವರು - ಎಚ್.ಡಿ. ರೇವಣ್ಣ, ಮಾಜಿ ಸಚಿವ.
ಅಂದರೆ ಅವರ ಕಾರ್ಖಾನೆಯಲ್ಲಿ ಅಯೋಗ್ಯರನ್ನಷ್ಟೇ ಉತ್ಪಾದನೆ ಮಾಡಲಾಗುತ್ತದೆ ಎಂದಾಯಿತು.

---------------------
  
ಸಂಸ್ಕೃತಿ ಉಳಿಯಬೇಕಿದ್ದಲ್ಲಿ ಸಂಸ್ಕೃತ ಭಾಷೆ ಅಗತ್ಯ - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ.
ಮೊತ್ತ ಮೊದಲು ಮಾನವೀಯ ಭಾಷೆಯ ಅಗತ್ಯವಿದೆ.

---------------------

ಉಪ ಚುನಾವಣೆಯಲ್ಲಿ ನಮ್ಮ 12 ಅಭ್ಯರ್ಥಿಗಳನ್ನು ಗೆಲ್ಲಿಸದಿದ್ದಲ್ಲಿ ನಾನು ನೆಮ್ಮದಿಯಾಗಿರಲು ಸಾಧ್ಯವಾಗುತ್ತಿರಲಿಲ್ಲ - ಯಡಿಯೂರಪ್ಪ, ಮುಖ್ಯಮಂತ್ರಿ.
  ನಾಡಿನ ನೆಮ್ಮದಿಯ ಗತಿ ?

---------------------
  ನನಗೆ 6th ಮತ್ತು 7th ಸೆನ್ಸ್ ಜಾಸ್ತಿ ಇದೆ. ನಾನು ಹೇಳಿದಂತೆ ಉಪ ಚುನಾವಣೆಯಲ್ಲಿ ಬಿಜೆಪಿಯ 12 ಮಂದಿ ಗೆದ್ದಿದ್ದಾರೆ - ಎಚ್.ನಾಗೇಶ್, ಸಚಿವ.
  6th ಮತ್ತು 7thನಲ್ಲಿ ನೀವು ಎರಡೆರಡು ಬಾರಿ ಫೇಲಾದ ಕಾರಣಕ್ಕಿರಬೇಕು.

---------------------

ನನಗೆ ಉಪಮುಖ್ಯಮಂತ್ರಿ ಹುದ್ದೆ ಬೇಡ, ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ - ಉಮೇಶ್ ಕತ್ತಿ, ಶಾಸಕ.
  ಅದಕ್ಕಾಗಿ ತನ್ನವರ ವಿರುದ್ಧವೇ ಕತ್ತಿ ಬೀಸುವುದೇ

---------------------

ಸಂಸ್ಕೃತ ಮಾತನಾಡುವುದರಿಂದ ಕೊಲೆಸ್ಟ್ರಾಲ್, ಮಧುಮೇಹ ನಿಯಂತ್ರಣ ಸಾಧ್ಯ - ಗಣೇಶ್ ಸಿಂಗ್, ಸಂಸದ.
ಆದರೆ ಮಾನಸಿಕ ಅಸ್ವಸ್ಥತೆ ಮಾತ್ರ ಹೆಚ್ಚುತ್ತದೆಯಂತೆ.

---------------------

ನಾವು ಪಕ್ಷ ಬದಲಾವಣೆ ಮಾಡಿದರೂ ಮಾಜಿ ಸಿಎಂ ಸಿದ್ದರಾಮಯ್ಯರೇ ನಮ್ಮ ನಾಯಕ - ರಮೇಶ್ ಜಾರಕಿಹೊಳಿ, ಶಾಸಕ.

  ಬಿಜೆಪಿಯಲ್ಲೇನಾದರೂ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶವಿದೆಯೆ

---------------------

ಸಾಹಿತ್ಯ ಸರ್ವರನ್ನು ಒಂದು ಗೂಡಿಸುವ ಬಹುದೊಡ್ಡ ವೇದಿಕೆ - ಸುನಿಲ್ ಕುಮಾರ್, ಶಾಸಕ.
ಹಾಗೆ ಒಗ್ಗೂಡಿದವರನ್ನು ಬೇರ್ಪಡಿಸಲು ನಿಮ್ಮ ರಾಜಕೀಯ ಇದೆಯಲ್ಲ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು

ಟಾಪ್ ಸುದ್ದಿಗಳು