varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 22 Dec, 2019
ಪಿ.ಎ.ರೈ

*ರಾಹುಲ್ ಗಾಂಧಿಯಿಂದಲೇ ಕಾಂಗ್ರೆಸ್ ಸರ್ವ ನಾಶ - ಜಗದೀಶ್ ಶೆಟ್ಟರ್, ಸಚಿವ.
ಬಿಜೆಪಿಯಿಂದ ದೇಶವೇ ಸರ್ವನಾಶ.

---------------------
  
ಬುದ್ಧ್ದಿವಂತಿಕೆಯ ವಿಚಾರದಿಂದಾಗಿ ಬ್ರಾಹ್ಮಣರು ಅತ್ಯುನ್ನತ ಸ್ಥಾನದಲ್ಲಿ ನಿಲ್ಲುತ್ತಾರೆ - ರಘುಪತಿ ಭಟ್, ಶಾಸಕ.
ನೂರಕ್ಕೆ ನೂರರಷ್ಟು ಸತ್ಯ.

---------------------
ರಾಹುಲ್ ಗಾಂಧಿ ಉದ್ಧವ್ ಠಾಕ್ರೆ ಆಗಬಹುದೇ ಹೊರತು, ದೇಶಭಕ್ತ ಸಾವರ್ಕರ್ ಆಗಲು ಸಾಧ್ಯವಿಲ್ಲ - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ.
ಆಗಲೂ ಬಾರದು. ಆದರೆ, ಸದ್ಯಕ್ಕೆ ಉದ್ಧವ್ ಠಾಕ್ರೆಯವರು ದೇಶ ಕಟ್ಟಿದ ನೆಹರೂ ಆಗುವ ಉತ್ಸಾಹದಲ್ಲಿದ್ದಾರೆ.

---------------------

ದೇಶದ ಜನರು ಮೋದಿಯನ್ನು ನಂಬಿದಷ್ಟು ಬೇರೆ ಯಾರನ್ನೂ ನಂಬಲಿಲ್ಲ. ಅದೇ, ಮೋದಿ ಮಾಡಿದಷ್ಟು ನಂಬಿಕೆ ದ್ರೋಹ ಬೇರೆ ಯಾರೂ ಮಾಡಲಿಲ್ಲ - ದೇವನೂರ ಮಹಾದೇವ, ಸಾಹಿತಿ.
ಅನಿಲ್ ಅಂಬಾನಿ ಇದನ್ನು ಒಪ್ಪುತ್ತಿಲ್ಲ.

---------------------

ಪೌರತ್ವ ತಿದ್ದುಪಡಿ ಕಾಯ್ದ್ದೆ ಸಾವರ್ಕರ್‌ಗೆ ಮಾಡಿದ ಅವಮಾನ - ಉದ್ಧವ್‌ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ.
 ಸಂವಿಧಾನ ಬರೆದಿರುವುದು ಸಾವರ್ಕರ್ ಆಗಿರಬಹುದೇ?

---------------------

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಯಾರು ಹಿಂಸಾಚಾರ ಹರಡುತ್ತಿದ್ದಾರೆ ಎಂಬುದನ್ನು ಅವರು ಧರಿಸಿರುವ ಬಟ್ಟೆಗಳಿಂದ ಸುಲಭವಾಗಿ ಪತ್ತೆ ಮಾಡಬಹುದು - ನರೇಂದ್ರ ಮೋದಿ, ಪ್ರಧಾನಿ.
ಪೊಲೀಸರ ಬಟ್ಟೆಗಳ ಕುರಿತಂತೆ ಹೇಳುತ್ತಿರಬೇಕು.

---------------------

ನನಗೆ ಉಪಮುಖ್ಯಮಂತ್ರಿ ಹುದ್ದೆ ಸಿಗಬೇಕು ಎಂಬುದು ಜನರ ಬೇಡಿಕೆ - ಶ್ರೀರಾಮುಲು, ಸಚಿವ.
ಬಳ್ಳಾರಿಯನ್ನು ಪ್ರತ್ಯೇಕ ರಾಜ್ಯ ಮಾಡಿದರೆ, ಮುಖ್ಯಮಂತ್ರಿಯೇ ಆಗಬಹುದು.

---------------------

ಮೂಲ ಬಿಜೆಪಿಗರು, ವಲಸೆ ಬಂದವರು ಎಂಬ ಭೇದ ಬಿಜೆಪಿಯಲ್ಲಿ ಇಲ್ಲ - ಸಿದ್ದೇಶ್ವರ, ಸಂಸದ.
ವಲಸೆ ಬಂದ ಆರ್ಯರು, ಮೂಲ ದ್ರಾವಿಡರು ಎಂಬ ಭೇದ ಮಾತ್ರ.

---------------------

ಇಂದಿನ ಜಗತ್ತಿನಲ್ಲಿ ಹೆಚ್ಚಿನ ಸಮಸ್ಯೆಗಳು ಅಧಿಕಾರಕ್ಕೆ ಅಂಟಿಕೊಂಡಿರುವ ಮುದುಕರಿಂದಾಗಿ ಹುಟ್ಟಿಕೊಂಡಿದೆ - ಬರಾಕ್ ಒಬಾಮ, ಅಮೆರಿಕ ಮಾಜಿ ಅಧ್ಯಕ್ಷ.  
ಪ್ರಶಸ್ತಿಗೆ ಅಂಟಿಕೊಂಡಿರುವ ಹಿರಿಯ ಸಾಹಿತಿಗಳಿಂದ ಎನ್ನುವ ಆರೋಪವೂ ಇದೆ.

---------------------

ನಾನೇ ಕಾಂಗ್ರೆಸ್‌ಗೆ ಕರೆತಂದು, ನಾನೇ ಸಚಿವರನ್ನಾಗಿಸಿದ್ದವರು ನನಗೇ ಟೋಪಿ ಹಾಕಿದರು - ಮಾರ್ಗರೆಟ್ ಆಳ್ವಾ, ಕಾಂಗ್ರೆಸ್ ನಾಯಕಿ.
ಜನರಿಗೆ ಟೋಪಿ ಹಾಕುವುದಕ್ಕಿಂತ ವಾಸಿ.

---------------------

ಕಾಂಗ್ರೆಸ್‌ನಲ್ಲಿರುವ ಎಲ್ಲರೂ ಸಮರ್ಥ ನಾಯಕರೇ ಆಗಿದ್ದಾರೆ - ಡಿ.ಕೆ. ಶಿವಕುಮಾರ್, ಮಾಜಿ ಸಚಿವ.
ಸಮರ್ಥ ಕಾರ್ಯಕರ್ತರ ಕೊರತೆ ಇದೆ.

---------------------

ಉಗ್ರಗಾಮಿ ಮನಸ್ಥಿತಿಯವರಿಗೆ ದೇಶವನ್ನು ಸ್ವಾಧೀನ ಪಡಿಸಿಕೊಳ್ಳಲು ಅವಕಾಶ ನೀಡುವುದಿಲ್ಲ
 - ಇಮ್ರಾನ್ ಖಾನ್, ಪಾಕ್ ಪ್ರಧಾನಿ.
ಮೊದಲು ಅವರಿಂದ ದೇಶವನ್ನು ಬಿಡಿಸಿಕೊಳ್ಳುವ ದಾರಿ ನೋಡಿ.

---------------------

ರಾಜ್ಯದಲ್ಲಿ ಉಪಮುಖ್ಯಮಂತ್ರಿ ಸ್ಥಾನದ ಅವಶ್ಯಕತೆ ಇಲ್ಲ - ರೇಣುಕಾಚಾರ್ಯ, ಶಾಸಕ.
ಮುಖ್ಯಮಂತ್ರಿ ಸ್ಥಾನದ ಅಗತ್ಯ ಇದೆಯೇ ಎಂದು ದಿಲ್ಲಿ ವರಿಷ್ಠರು ಕೇಳುತ್ತಿದ್ದಾರಂತೆ.

---------------------

ಯಾರೂ ಯಾರಿಗೂ ನೋವು ಕೊಡದ ಆಡಳಿತ ರಾಮ ರಾಜ್ಯದಲ್ಲಿತ್ತು - ರಾಘವೇಂದ್ರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ.
ಶಂಬೂಕನ ತಲೆಯನ್ನು ನೋವಾಗದ ರೀತಿಯಲ್ಲಿ ಕತ್ತರಿಸಲಾಯಿತಂತೆ.

---------------------

ಮಂತ್ರಿ ಸ್ಥಾನಕ್ಕೆ ಲಾಬಿ ಮಾಡಿಲ್ಲ. ಆದರೆ ಆಸೆ ಇದೆ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಯತ್ನಾಳ್ ಹೆಸರಿಗೆ ತಕ್ಕಂತೆ ಮರಳಿ ಯತ್ನ ಮಾಡಿ.

---------------------

ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ - ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ.
ಉಪಚುನಾವಣೆಯ ಫಲಿತಾಂಶವೇ ಅವರಿಗೆ ಆ ಅಧಿಕಾರ ನೀಡಿತು.

----------------  

ಮುಸ್ಲಿಮರನ್ನು ಕಾಂಗ್ರೆಸ್ ನಿರ್ಲಕ್ಷಿಸಿದ್ದರಿಂದಲೇ ಅವರು ಬಿಜೆಪಿಯತ್ತ ಒಲವು ಬೆಳೆಸಿಕೊಂಡಿದ್ದಾರೆ - ಸಿ.ಎಂ. ಇಬ್ರಾಹೀಂ, ವಿ.ಪ. ಸದಸ್ಯ.
ತಾವು ಬಿಜೆಪಿಯ ಕಡೆಗೆ ಒಲವು ತೋರಿಸುತ್ತಿದ್ದೀರಿ ಎಂದಾಯಿತು.

---------------------

ಪಾಕಿಸ್ತಾನ ಕಾಂಗ್ರೆಸ್‌ನ ಪಾಪದ ಕೂಸು - ಸಿ.ಟಿ.ರವಿ, ಸಚಿವ.
ಆರೆಸ್ಸೆಸ್ ಪಾಕಿಸ್ತಾನದ ಪಾಪದ ಕೂಸು ಎನ್ನುವ ಮಾತಿದೆ.

---------------------

ಮುಸ್ಲಿಮರಿಗೆ ವಿಶ್ವದಲ್ಲಿ ಅನೇಕ ದೇಶಗಳಿವೆ. ಹಿಂದೂಗಳಿಗೆ ಒಂದೇ ಒಂದು ದೇಶವೂ ಇಲ್ಲ - ನಿತಿನ್ ಗಡ್ಕರಿ, ಕೇಂದ್ರ ಸಚಿವ.
ಬೇರೆ ದೇಶ ಇಲ್ಲ ಎನ್ನುವ ಕಾರಣಕ್ಕೆ ನೀವು ಈ ದೇಶದಲ್ಲಿದ್ದೀರಿ ಎಂದಾಯಿತು.

---------------------

ಉಪಚುನಾವಣೆಯಲ್ಲಿ ನಾನು ಸೋತಿರಬಹುದು. ಆದರೆ, ಇನ್ನೂ ಸತ್ತಿಲ್ಲ - ಎಚ್. ವಿಶ್ವನಾಥ್, ಮಾಜಿ ಶಾಸಕ.

ಕೆಲವೊಮ್ಮೆ ಸೋಲು ಸಾವಿಗಿಂತ ಹೀನಾಯವಾಗಿರುತ್ತದೆ.

---------------------

ಮಂಗಳೂರಿನಲ್ಲಿ ಗೋಲಿಬಾರ್‌ಗೆ ಸರಕಾರ ಅನುಮತಿ ನೀಡಿರಲಿಲ್ಲ - ಯಡಿಯೂರಪ್ಪ, ಮುಖ್ಯಮಂತ್ರಿ.
ಬಹುಶಃ ಕಲ್ಲಡ್ಕ ಭಟ್ಟರು ಅನುಮತಿ ನೀಡಿರಬಹುದೇ?

---------------------

ಭಾರತದ ಶೇ.90ರಷ್ಟು ಮುಸ್ಲಿಮರು ಮೂಲತಃ ಮತಾಂತರಗೊಂಡ ಹಿಂದೂಗಳು - ಅಬ್ದುಲ್ ಅಝೀಂ, ಕರ್ನಾಟಕ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷ

ಆದರೆ, ಅವರಲ್ಲಿ ಆರ್ಯನ್ನರ ಡಿಎನ್‌ಎ ಇಲ್ಲದಿರುವುದೇ ಸಮಸ್ಯೆ.

---------------------

ವಿನಾಶದತ್ತ ಸಾಗುತ್ತಿದ್ದ ಭಾರತೀಯ ಆರ್ಥಿಕತೆಯನ್ನು ಕೇಂದ್ರ ಸರಕಾರ ರಕ್ಷಿಸಿದೆ - ನರೇಂದ್ರ ಮೋದಿ, ಪ್ರಧಾನಿ.
ಬಹುಶಃ ರಾಮ್‌ದೇವ್ ಅವರ ಪತಂಜಲಿ ಕಂಪೆನಿಯ ಆರ್ಥಿಕ ಸ್ಥಿತಿಯ ಬಗ್ಗೆ ಹೇಳುತ್ತಿರಬೇಕು.

---------------------

ಎದೆ ಸೀಳಿದರೆ ನಾಲ್ಕಕ್ಷರ ಇಲ್ಲದ ಪಂಕ್ಚರ್ ಹಾಕುವವರು ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಾರೆ - ತೇಜಸ್ವಿ ಸೂರ್ಯ, ಸಂಸದ
ಅಕ್ಕರೆಯಿಲ್ಲದ ಎದೆಯೊಳಗೆ ಅಕ್ಷರ ವಿದ್ದರೆ ಅವರು ಎದೆ ಸೀಳುವವರಾಗುತ್ತಾರೆಯೇ ಹೊರತು, ಜೋಡಿಸುವವರಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು