varthabharthi


ಸಂಪಾದಕೀಯ

ರೈತರಿಗೆ ದ್ವೇಷದ ಬೀಜಗಳನ್ನು ಹಂಚಿ ಹೋದ ಪ್ರಧಾನಿ

ವಾರ್ತಾ ಭಾರತಿ : 2 Jan, 2020

ತುಂಬಾ ದಿನಗಳ ಬಳಿಕ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಕಾಲಿಟ್ಟರು. ನೆರೆಯಿಂದ ತತ್ತರಿಸುತ್ತಿರುವಾಗ ರಾಜ್ಯ ಪ್ರಧಾನಿಯ ಆಗಮನದ ನಿರೀಕ್ಷೆಯಲ್ಲಿತ್ತು. ಆದರೆ ಅವರು ಒಲಿಯಲಿಲ್ಲ. ಕನಿಷ್ಠ ನೆರೆ ಪರಿಹಾರವನ್ನಾದರೂ ಕಳುಹಿಸಿಕೊಡುತ್ತಾರೆ, ಆ ಮೂಲಕ ಮತದಾರರ ಋಣವನ್ನು ತೀರಿಸಬಹುದು ಎಂದು ಜನರು ಭಾವಿಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಪರಿ ಪರಿಯಾಗಿ ಗೋಗರೆದರೂ ಪರಿಹಾರ ಸರಿಯಾದ ಸಮಯಕ್ಕೆ ಸಿಗಲಿಲ್ಲ. ಸಿದ್ದಗಂಗಾ ಸ್ವಾಮೀಜಿ ನಿಧನರಾದಾಗ ನರೇಂದ್ರ ಮೋದಿ ಆಗಮಿಸುತ್ತಾರೆ ಎಂದು ಭಾವಿಸಲಾಗಿತ್ತು. ಆಗಲೂ ನಾಡಿನ ಜನರಿಗೆ ‘ದೊರೆ’ ಒಲಿಯಲಿಲ್ಲ. ಇದೀಗ ಇಡೀ ದೇಶ ಆರ್ಥಿಕವಾಗಿ, ರಾಜಕೀಯವಾಗಿ ಅರಾಜಕತೆಯೆಡೆಗೆ ತಲುಪಿರುವ ಹೊತ್ತಿನಲ್ಲಿ ದೊರೆ ಕರ್ನಾಟಕದೆಡೆ ಮುಖ ಮಾಡಿದ್ದಾರೆ. ತುಮಕೂರಿನಲ್ಲಿ ಕೇಂದ್ರ ಸರಕಾರ ಹಮ್ಮಿಕೊಂಡಿರುವ ಕೃಷಿ ಸನ್ಮಾನ ಯೋಜನೆಯ ನಾಲ್ಕನೇ ಕಂತಿನ ಹಣ ಬಿಡುಗಡೆ ಹಾಗೂ ಕೃಷಿ ಕರ್ಮಣ್ಯೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಲು ಅವರು ಆಗಮಿಸಿದರು. ಈ ಸಂದರ್ಭದಲ್ಲಿ ಜನರಲ್ಲಿ ತೀರಾ ದೊಡ್ಡ ನಿರೀಕ್ಷೆಯಿಲ್ಲದೆ ಇದ್ದರೂ ರಾಜ್ಯದ ರೈತರ ಪರವಾಗಿ ಸಣ್ಣಪುಟ್ಟ ಉಡುಗೊರೆಗಳ ಜೊತೆಗೆ ಅವರು ಆಗಮಿಸಬಹುದು ಎಂದು ಭಾವಿಸಿದ್ದರು. ಆದರೆ ಎಂದಿನಂತೆಯೇ ಭಾಷಣಗಳಿಂದಲೇ ಜನರು ಸಂತೃಪ್ತಿ ಪಡುವಂತಾಗಿದೆ. ಈಗಾಗಲೇ ಘೋಷಣೆಯಾಗಿರುವ ಅಂತರ್ ಜಲ ಯೋಜನೆಯನ್ನು ಮತ್ತೆ ವೇದಿಕೆಯಲ್ಲಿ ಉಲ್ಲೇಖಿಸಿ, ನೆರೆದವರ ಮೂಗಿಗೆ ತುಪ್ಪ ಸವರಿಸಿದರು.

ಕರ್ನಾಟಕದ ರೈತರು ನೆರೆಯಿಂದಾಗಿ ಅಪಾರ ಹಾನಿಯನ್ನು ಅನುಭವಿಸಿದ್ದಾರೆ. ಅವರನ್ನು ಮೇಲೆತ್ತಬೇಕಾದರೆ ಕೇಂದ್ರ ಪರಿಹಾರ ಹಣವನ್ನು ಬಿಡುಗಡೆ ಮಾಡಬೇಕು. ನೆಲಕಚ್ಚಿ ಕೂತವರನ್ನು ಮೇಲೆತ್ತಿ ನಿಲ್ಲಿಸದೆ ರೈತರಿಂದ ಹೆಚ್ಚಿನ ಸಾಧನೆೆಗಳನ್ನು ನಿರೀಕ್ಷಿಸುವುದಾದರೂ ಹೇಗೆ? ಈ ಕಾರಣದಿಂದ ಯಡಿಯೂರಪ್ಪನವರು ಸಂದರ್ಭವನ್ನು ಬಳಸಿಕೊಂಡು ಪ್ರಧಾನಿಯವರ ಬಳಿ ಪ್ರಮುಖ ಬೇಡಿಕೆಗಳನ್ನು ಮುಂದಿರಿಸಿದರು. ಅದರಲ್ಲಿ ಮುಖ್ಯವಾಗಿ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ್ದು. ಹಲವು ದಶಕಗಳ ಹಿಂದೆ ಆರಂಭಿಸಿದ ಹಲವು ನೀರಾವರಿ ಯೋಜನೆಗಳು ಹಣದ ಕೊರತೆಯಿಂದ ಪೂರ್ತಿಯಾಗಿಲ್ಲ. ಇದಕ್ಕಾಗಿ 50,000 ಕೋಟಿ ರೂಪಾಯಿಯ ವಿಶೇಷ ಅನುದಾನವನ್ನು ನೀಡಬೇಕು ಎಂದು ಮನವಿ ಸಲ್ಲಿಸಿದ್ದರು. ಇಷ್ಟೇ ಅಲ್ಲ, ನೆರೆ ಹಾವಳಿಯಿಂದ154 ತಾಲೂಕುಗಳ 700 ಹಳ್ಳಿಗಳು ನೆಲೆ ಕಳೆದುಕೊಂಡು ಬೀದಿಯಲ್ಲಿವೆ. ಸುಮಾರು 30 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಪರಿಹಾರ ಬಿಡುಗಡೆ ಇನ್ನೂ ಆಗಿಲ್ಲ ಎಂದು ವಿವರಿಸಿದ್ದರು. ರೈತರೇ ಇರುವ ಸಮಾವೇಶದಲ್ಲಿ ಕರ್ನಾಟಕದ ರೈತರ ಸಮಸ್ಯೆಗಳಿಗೆ ಒಂದಿನಿತೂ ಸ್ಪಂದಿಸದೇ ಎಂದಿನಂತೆಯೇ ತಮ್ಮ ಓತಪ್ರೋತ ಭಾಷಣದ ಗೊಬ್ಬರಗಳನ್ನು ಸುರಿಸಿ ಪ್ರಧಾನಿ ವಿಮಾನ ಹತ್ತಿದರು. ಕನಿಷ್ಠ ಮುಖ್ಯಮಂತ್ರಿಯ ಕಾಳಜಿಗೆ ಸ್ಪಂದಿಸಿ, ಇದರ ಕುರಿತಂತೆ ಗಮನ ಹರಿಸುತ್ತೇನೆ ಎಂದಿದ್ದರೂ ಜನರಿಗೆ ಸಾಕಿತ್ತು. ಆ ಒಂದು ವಾಕ್ಯವನ್ನೂ ಉಚ್ಚರಿಸುವ ಸೌಜನ್ಯ ತೋರದೆ ನಾಡಿನ ಜನರಿಗೆ ದರ್ಶನ ನೀಡಿದ್ದೇ ಬಹುದೊಡ್ಡ ಕೊಡುಗೆ ಎಂಬಂತೆ ವರ್ತಿಸಿದರು.

ಬಹುಶಃ ಮೋದಿಯ ಭಾಷಣಗಳನ್ನೇ ಗೊಬ್ಬರವಾಗಿ ಬಳಸಿ ಕೃಷಿ ಮಾಡಲು ಸಾಧ್ಯವಾಗಿದ್ದಿದ್ದರೆ, ದೇಶದ ರೈತರು ಸಂಪತ್ಭರಿತರಾಗಿ ಬಿಡುತ್ತಿದ್ದರು. ದುರದೃಷ್ಟವಶಾತ್ ಭಾಷಣಗಳನ್ನು ಗೊಬ್ಬರಗಳಾಗಿ ಬಳಸುವುದಕ್ಕೂ ಸಾಧ್ಯವಿಲ್ಲ. ಹೇಳಿದ್ದನ್ನೇ ಹೇಳುವ ಅದೇ ಭಾಷಣ ಜನರಿಗೆ ಬೋರು ಹೊಡೆದು ಹೋಗಿರುವುದೂ ಮೋದಿಯವರಿಗೆ ಗೊತ್ತಿದ್ದಂತಿಲ್ಲ. ಇದೇ ಸಂದರ್ಭದಲ್ಲಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಅಲ್ಲಿನ ಮಕ್ಕಳನ್ನು ಉದ್ದೇಶಿಸಿ ಪಾಕಿಸ್ತಾನ, ಅರ್ಬನ್ ನಕ್ಸಲ್, ಎನ್‌ಆರ್‌ಸಿ ಎಂಬಿತ್ಯಾದಿ ರಾಜಕೀಯ ಭಾಷಣ ಮಾಡಿರುವುದೂ ಟೀಕೆಗೆ ಕಾರಣವಾಗಿದೆ.

ಯಾವುದೋ ಮೈದಾನದಲ್ಲಿ ನಿಂತು ಆಡುವ ಭಾಷಣವನ್ನು ಮಠದೊಳಗೆ ಮಾಡಿದ್ದಾರೆ. ಈಗಾಗಲೇ ಚುನಾವಣೆಯಲ್ಲಿ ಪದೇ ಪದೇ ಹೇಳಿದ ಪಾಕಿಸ್ತಾನ ವಿರೋಧಿ ಹೇಳಿಕೆಗಳನ್ನು ಮಠದಲ್ಲೂ ನೀಡಿದ್ದಾರೆ. ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ಮಾಡುವವರೆಲ್ಲ ಪಾಕಿಸ್ತಾನ ಪರವಾಗಿರುವವರು ಎಂದು ಮಠದೊಳಗೆ ಘೋಷಿಸಿದ್ದಾರೆ. ಪಾಕಿಸ್ತಾನದ ದೌರ್ಜನ್ಯಕ್ಕೊಳಗಾಗಿರುವ ಶೋಷಿತ ಜನರ ಪರವಾಗಿ ಮಾತನಾಡಿ, ಭಾರತದ ವಿರುದ್ಧ ಮಾತನಾಡಬೇಡಿ ಎಂದು ಮಠದೊಳಗೆ ನಿಂತು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ. ಇಷ್ಟಕ್ಕೂ ಮಠದೊಳಗೆ ಯಾವ ವಿದ್ಯಾರ್ಥಿಗಳೂ ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ಮಾಡಿರುವ ಉದಾಹರಣೆಯಿಲ್ಲ. ಪ್ರಧಾನಿಯ ಮಾತು ಅವರಿಗೆ ಎಷ್ಟರಮಟ್ಟಿಗೆ ತಲುಪಿರಬಹುದು? ಕನಿಷ್ಠ ಸಿದ್ದಗಂಗಾ ಸ್ವಾಮೀಜಿಗಳಿಗೆ ‘ಭಾರತ ರತ್ನ’ ಕೊಡುವ ಬಗ್ಗೆಯಾದರೂ ಒಂದು ಭರವಸೆಕೊಟ್ಟು ಹೋಗಿದ್ದರೆ ಮಠಕ್ಕೆ ನೀಡಿದ ಭೇಟಿ ಸಾರ್ಥಕವಾಗುತ್ತಿತ್ತು. ಆದರೆ ಆ ಸುದೀರ್ಘ ಬೇಡಿಕೆಯನ್ನು ಅವರು ಕಸದ ಬುಟ್ಟಿಗೆ ಹಾಕಿ, ಪಾಕಿಸ್ತಾನದ ಕಡೆ ಕೈ ತೋರಿಸಿ ಸ್ವಾಮೀಜಿಗಳನ್ನು ಯಾಮಾರಿಸಿದರು..
  
ಮಠದಲ್ಲಿ ಪ್ರಧಾನಿ ಮೋದಿ ಮಾಡಿರುವ ರಾಜಕೀಯ ದ್ವೇಷ ಭಾಷಣವನ್ನೇ ಮುಂದಿಟ್ಟು ಚರ್ಚೆ ಮಾಡೋಣ. ಪಾಕಿಸ್ತಾನವನ್ನು ಎಂದಿನಂತೆಯೇ ನಿಂದಿಸಿದ್ದಾರೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುವ ದೌರ್ಜನ್ಯಗಳನ್ನು ಪ್ರತಿಭಟಿಸಬೇಕು. ಆದರೆ ಅಲ್ಲಿ ದೌರ್ಜನ್ಯಕ್ಕೀಡಾಗಿ ನೊಂದು ಬಂದವರ ವಿರುದ್ಧ ದೇಶದ ಜನರು ಪ್ರತಿಭಟಿಸುತ್ತಿದ್ದಾರೆ ಎಂದು ತನ್ನ ವಿಷಾದವನ್ನು ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನವೇನೋ ದುಷ್ಟ ದೇಶ, ಅದಕ್ಕೆ ಅಲ್ಲಿನ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯ ಎಸಗುತ್ತಿದೆ. ಆದರೆ ಸದ್ಯಕ್ಕೆ ಭಾರತದಲ್ಲಿ ನಡೆಯುತ್ತಿರುವುದೇನು? ಅಲ್ಪಸಂಖ್ಯಾತರನ್ನೇ ಗುರಿಯಾಗಿಸಿ ಎನ್‌ಆರ್‌ಸಿಯನ್ನು ಜಾರಿಗೆ ತರುವ ಉದ್ದೇಶ, ಅವರನ್ನು ಅತಂತ್ರರನ್ನಾಗಿಸುವುದೇ ಆಗಿದೆ. ತನ್ನ ದೇಶದ ಅಲ್ಪಸಂಖ್ಯಾತರ ಕುರಿತಂತೆ ಕಾಳಜಿಯಿಲ್ಲದ ಸರಕಾರ, ಇನ್ನೊಂದು ದೇಶದ ಅಲ್ಪಸಂಖ್ಯಾತರ ಕುರಿತಂತೆ ವ್ಯಕ್ತಪಡಿಸುವ ಕಾಳಜಿ ನಂಬುವುದಕ್ಕೆ ಅರ್ಹವೇ? ವಿದೇಶದಿಂದ ಬಂದ ಅಲ್ಪಸಂಖ್ಯಾತರೆಲ್ಲ ನೇರವಾಗಿ ಡಿಟೆನ್ಶನ್ ಕ್ಯಾಂಪ್ ಸೇರಿಲ್ಲ. ಅವರ ಪೌರತ್ವವನ್ನು ಅನುಮಾನಿಸಿ ಬಂಧನ ಕೇಂದ್ರಕ್ಕೆ ರವಾನಿಸಿರುವುದೇ ಮೋದಿ ಸರಕಾರ.

ಈಗ ಬಂಧನ ಕೇಂದ್ರದಲ್ಲಿ ಲಕ್ಷಾಂತರ ಹಿಂದೂಗಳೇ ಇದ್ದಾರೆ. ಅವರ ಸ್ಥಿತಿ ಅತ್ಯಂತ ಭೀಕರವಾಗಿದೆ. ನಿಜಕ್ಕೂ ಹೊರ ದೇಶದ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಇದ್ದಿದ್ದರೆ ಅವರನ್ನು ಗುರುತಿಸಿ ಬಂಧನ ಕೇಂದ್ರಕ್ಕೆ ಯಾಕೆ ರವಾನಿಸಿತು? ಇಷ್ಟಕ್ಕೂ ಅವರು ಯಾರೂ ಉಗ್ರಗಾಮಿಗಳಲ್ಲ. ಕಾರ್ಮಿಕರು. ಹಲವು ತಲೆಮಾರಿನಿಂದ ಈ ನೆಲದಲ್ಲಿ ಬದುಕಿದವರು. ತಮ್ಮ ಪಾಡಿಗೆ ದುಡಿದು ತಿನ್ನುತ್ತಾ ಬದುಕುತ್ತಿದ್ದ ಆದಿವಾಸಿಗಳು, ಬುಡಕಟ್ಟು ಜನರನ್ನು ಬಂಧಿಸಿ ಬಂಧನಕೇಂದ್ರಕ್ಕೆ ನೂಕಿ, ಇದೀಗ ಅವರ ಪರವಾಗಿ ಮೋದಿ ಕರ್ನಾಟಕದಲ್ಲಿ ಕಣ್ಣೀರು ಸುರಿಸುತ್ತಿದ್ದಾರೆ. ಅಸ್ಸಾಮಿನಲ್ಲಿ ಬಂಧನಕೇಂದ್ರದಲ್ಲಿ ನರಕ ಅನುಭವಿಸುತ್ತಿರುವ ಲಕ್ಷಾಂತರ ಭಾರತೀಯರ ಸ್ಥಿತಿ, ಇಡೀ ದೇಶಕ್ಕೆ ಬರಬಾರದು ಎನ್ನುವ ಕಾರಣಕ್ಕೆ ದೇಶಾದ್ಯಂತ ಚಳವಳಿ ಆರಂಭವಾಗಿದೆ. ಇವರು ಪಾಕಿಸ್ತಾನದ ಅಲ್ಪಸಂಖ್ಯಾತರ ವಿರುದ್ಧವಾಗಿ ಹೋರಾಡುತ್ತಿಲ್ಲ, ಅವರನ್ನು ಬಂಧನ ಕೇಂದ್ರದಲ್ಲಿ ಹಾಕಿ ಅವರ ಬದುಕನ್ನು ನರಕ ಮಾಡಿದ ಸರಕಾರದ ನೀತಿಯ ವಿರುದ್ಧ ಹೋರಾಡುತ್ತಿದ್ದಾರೆ. ತನ್ನ ಶಿಕ್ಷಣದ ಅರ್ಹತೆಯ ಕುರಿತಂತೆಯೇ ಸರಿಯಾದ ದಾಖಲೆಗಳನ್ನು ಹೊಂದಿಲ್ಲದ ಪ್ರಧಾನಿ, ಸಿದ್ದಗಂಗಾ ಮಠದ ವಿದ್ಯಾರ್ಥಿಗಳ ಮುಂದೆ ಪಾಕಿಸ್ತಾನ, ದೇಶವಿರೋಧಿ ಎಂಬೆಲ್ಲ ರಾಜಕೀಯ ಪದಗಳನ್ನು ಆಡಿರುವುದು ಆ ಮಠಕ್ಕೆ ಮಾಡಿದ ಅವಮಾನವಾಗಿದೆ. ರೈತ ಪರವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಪ್ರಧಾನಿ, ದ್ವೇಷದ ಬೀಜಗಳನ್ನು ಹಂಚಿ, ಇದನ್ನೇ ಬಿತ್ತಿ ಬೆಳೆದು, ಉಣ್ಣಿರಿ ಎಂದು ನಾಡಿಗೆ ಕರೆಕೊಟ್ಟು ಹೋಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)