varthabharthi


ಅನುಗಾಲ

ಸಾಹಿತ್ಯ-ಸಂಘಟನೆಯ ಮೊಗಸಾಲೆ

ವಾರ್ತಾ ಭಾರತಿ : 22 Jan, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಇಂಗ್ಲಿಷ್‌ನಲ್ಲಿ ಬಳಸುವ ‘still going strong’ ಎಂಬ ಪದಗಳು ಮೊಗಸಾಲೆಯವರಿಗೆ ಯಥಾಯೋಗ್ಯವಾಗಿವೆ. ಸಾಹಿತ್ಯ ಎಂದರೆ ಬರೆಯುವುದಷ್ಟೇ ಅಲ್ಲ, ಸಮಾಜದ ಸಾಂಸ್ಕೃತಿಕ ಭಾಗವಾಗಿ ಬದುಕುವುದೂ ಹೌದು ಎಂಬುದಕ್ಕೆ ಕನ್ನಡದಲ್ಲಿ ಅನೇಕ ಉದಾಹರಣೆಗಳು ಸಿಗುತ್ತವಾದರೂ ಈ ಪ್ರಮಾಣದಲ್ಲಿ ಬರೆಯುವುದು ಮತ್ತು ಬೆಳಕಿನಂತೆ ಬೆಳೆಯುವುದು ಎಲ್ಲರಿಗೂ ಸಾಧ್ಯವಾಗಲಾರದು. ಈ ಮತ್ತು ಇಂತಹ ಹಲವು ಕಾರಣಗಳಿಗಾಗಿ ಮೊಗಸಾಲೆ ಕನ್ನಡದ ಅಚ್ಚರಿ.


ಕನ್ನಡ ಸಾಂಸ್ಕೃತಿಕ ಮತ್ತು ಮುಖ್ಯವಾಗಿ ಸಾಹಿತ್ಯ ಜಗತ್ತಿನಲ್ಲಿ ಪರಿಚಿತರಾಗಿರುವ ಡಾ ನಾ.ಮೊಗಸಾಲೆಯವರು ತಮ್ಮ ಬದುಕಿನ 75 ವಸಂತಗಳನ್ನು ಪೂರೈಸಿದ್ದಾರೆ. ಈ ಹಂತದಲ್ಲಿ ‘ಮೊಗಸಾಲೆ- ಎಪ್ಪತ್ತೈದರ ಹೊತ್ತಿಗೆ’ ಎಂಬ ಕೃತಿಯನ್ನು ಸಾಹಿತಿ ಮತ್ತು ನಿವೃತ್ತ ಪ್ರಾಂಶುಪಾಲ ಡಾ ಬಿ.ಜನಾರ್ದನ ಭಟ್ ಅವರು ಕಾಂತಾವರದ ಕನ್ನಡ ಸಂಘದ ಪರವಾಗಿ ಸಂಪಾದಿಸಿದ್ದಾರೆ. ಈ ಕೃತಿಯ ಶೀರ್ಷಿಕೆಯ ಪದಗಳು ಅರ್ಥಗರ್ಭಿತ: ಮೊಗಸಾಲೆ ಎಂದರೆ ಮನೆಯ ಹೊರ ಮಂಟಪ. ಇಲ್ಲೇ ಅನೇಕರಿಗೆ ಆಸರೆ, ವಿಶ್ರಾಂತಿ, ತಣಿವು. ಸಾಹಿತ್ಯದ ಇಂತಹ ತಣ್ಣನೆಯ ಚಪ್ಪರದಂತಿರುವ ವ್ಯಕ್ತಿ ಮೊಗಸಾಲೆಯಲ್ಲದೆ ಇನ್ನೇನು? ಈ ಕೃತಿ ಮೊಗಸಾಲೆಯವರ ಎಪ್ಪತ್ತೈದರ ಹೊತ್ತಿಗೆ ಅಂದರೆ ಎಪ್ಪತ್ತೈದನೇ ವರ್ಷಾವಧಿಯ ಪೂರ್ಣತೆಯೊಂದಿಗೆ ಪ್ರಕಟವಾಗಿದೆ. ಹೊತ್ತಿಗೆ ಎಂದರೆ ಹೊತ್ತಗೆ ಅರ್ಥಾತ್ ಪುಸ್ತಕವೂ ಹೌದು. ಹೀಗೆ ಶೀರ್ಷಿಕೆಯಲ್ಲೇ ಪೂರ್ಣತೆಯನ್ನು ಆಶಯವಾಗಿಟ್ಟುಕೊಂಡ ಮತ್ತು ಪರಿಣತರು ಬರೆದ ಅವರ ಬದುಕು-ಬರಹಗಳ ಸಂಗಮದಂತಿರುವ ಈ ಕೃತಿ ಒಬ್ಬ ಸಾಹಿತ್ಯ ಪರಿಚಾರಕನಿಗೆ ಸಂದ ಅಪೂರ್ವ ಗೌರವ.

ಇಂಗ್ಲಿಷ್‌ನಲ್ಲಿ ಬಳಸುವ ‘still going strong’ ಎಂಬ ಪದಗಳು ಮೊಗಸಾಲೆಯವರಿಗೆ ಯಥಾಯೋಗ್ಯವಾಗಿವೆ. ಸಾಹಿತ್ಯ ಎಂದರೆ ಬರೆಯುವುದಷ್ಟೇ ಅಲ್ಲ, ಸಮಾಜದ ಸಾಂಸ್ಕೃತಿಕ ಭಾಗವಾಗಿ ಬದುಕುವುದೂ ಹೌದು ಎಂಬುದಕ್ಕೆ ಕನ್ನಡದಲ್ಲಿ ಅನೇಕ ಉದಾಹರಣೆಗಳು ಸಿಗುತ್ತವಾದರೂ ಈ ಪ್ರಮಾಣದಲ್ಲಿ ಬರೆಯುವುದು ಮತ್ತು ಬೆಳಕಿನಂತೆ ಬೆಳೆಯುವುದು ಎಲ್ಲರಿಗೂ ಸಾಧ್ಯವಾಗಲಾರದು. ಈ ಮತ್ತು ಇಂತಹ ಹಲವು ಕಾರಣಗಳಿಗಾಗಿ ಮೊಗಸಾಲೆ ಕನ್ನಡದ ಅಚ್ಚರಿ.

ಮೊಗಸಾಲೆಯವರು ಏನು ಬರೆದಿದ್ದಾರೆ ಎಂಬುದಕ್ಕಿಂತ ಅವರು ಏನು ಬರೆಯಲಿಲ್ಲ ಎಂದು ಪ್ರಶ್ನಿಸುವುದು ಉಚಿತ. ಕಾವ್ಯ, ಕತೆ, ಕಾದಂಬರಿ, ವಿಮರ್ಶೆ ಮತ್ತಿತರ ಸಾಹಿತ್ಯ ಪರ ಸೃಜನಶೀಲ ಬರಹಗಳಲ್ಲಿ ಮೊಗಸಾಲೆ ಪ್ರಸಿದ್ಧರು. ಕಳೆದ ಸುಮಾರು 50 ವರ್ಷಗಳಿಂದ ಅವರು ಸತತ ತನ್ನ ಬರಹದ ಕಲೆಯನ್ನು ಅವಿಶ್ರಾಂತವಾಗಿ ಮುಂದುವರಿಸುತ್ತ, ಬೆಳೆಸುತ್ತ ಬಂದಿದ್ದಾರೆ. ಅವರೀಗ ಆಧುನಿಕ ಮತ್ತು ವರ್ತಮಾನ ಕನ್ನಡ ಸಾಹಿತ್ಯದ ಅವಿಭಾಜ್ಯ ಅಂಗ. ಪರಿಚಿತರ ಪರಿಚಯ ಔಪಚಾರಿಕವೇ. ಆದರೆ ಅನೇಕ ಬಾರಿ ನಾವು ಮಾತನಾಡುವುದು, ಬರೆಯುವುದು ತಿಳಿದವರಿಗಾಗಿ ಅಲ್ಲ; ತಿಳಿಯದವರಿಗೂ ಅಲ್ಲ. ತಿಳಿಯಬೇಕೆಂದು ಬಯಸುವವರಿಗೆ. ಚಿನ್ನದ ಆಭರಣಗಳನ್ನು ಅಗಾಗ ತೊಳೆದು ಹೊಳಪನ್ನು ತರಿಸುವಂತೆ ವ್ಯಕ್ತಿಗಳ ಯೋಗ್ಯತೆಯನ್ನು ಮಾಹಿತಿಪೂರ್ಣವಾಗಿ ಹೇಳುವುದರಿಂದ ಅವರನ್ನು ಬಲ್ಲವರಿಗೂ ಇತರರಿಗೂ ಸಂತೋಷ; ಸಮಾಧಾನ.

1944ರ ಆಗಸ್ಟ್ 27ರಂದು ಈಗ ಕೇರಳದಲ್ಲಿರುವ ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ಮೊಗಸಾಲೆ ಎಂಬಲ್ಲಿ ಹವ್ಯಕ ಮನೆತನದಲ್ಲಿ ಹುಟ್ಟಿದ ಮೊಗಸಾಲೆ ಕಾಂತಾವರದಲ್ಲಿ ನೆಲೆನಿಲ್ಲುವ, ಅಥವಾ ಸಾಹಿತಿಯಾಗುವ ಕನಸನ್ನು ಕಂಡಿರಲಿಕ್ಕಿಲ್ಲ. 5ನೇ ವರ್ಷಕ್ಕೆ ತಂದೆಯನ್ನು ಕಳೆದುಕೊಂಡ ಆಗಿನ್ನೂ ಮೊಗಸಾಲೆಯಾಗದ ನಾರಾಯಣ ಭಟ್ಟರು ಆಯುರ್ವೇದ ವೈದ್ಯರಾಗಿ ವೃತ್ತಿ/ಉದ್ಯೋಗ ಸಂಬಂಧ 1965ರಲ್ಲಿ ಕಾಂತಾವರಕ್ಕೆ ಬಂದರು. ತಾನಿರುವ ಜಾಗವನ್ನೇ ತನ್ನ ಜಗತ್ತಾಗಿ, ಜಗತ್ತಿನ ಕೇಂದ್ರಗಳಲ್ಲೊಂದಾಗಿ ಪರಿವರ್ತಿಸುವ ಶಕ್ತಿ ಎಲ್ಲರಿಗೂ ಇರಲಾರದು. ಪಂಪ ತನ್ನ ಬನವಾಸಿಯನ್ನು ತನ್ನ ಜಗತ್ತಾಗಿ ವರ್ಣಿಸಿದ. ವಿದ್ಯಾರಣ್ಯರು ಹಂಪೆಯನ್ನು ವಿಜಯನಗರವಾಗಿಸಿದರು. ಪಕ್ಕದ ಮೈಸೂರು ಪ್ರಖ್ಯಾತವಾಗಿತ್ತಾದರೂ ಹೈದರಲಿ ನೆರೆಯ ಪುಟ್ಟ ಊರು ಶ್ರೀರಂಗಪಟ್ಟಣವನ್ನು ಒಂದು ರಾಜ್ಯವಾಗಿಸಿದ; ಟಿಪ್ಪೂಅದನ್ನು ಬೆಳೆಸಿದ. ಆಧುನಿಕ ಸಾಂಸ್ಕೃತಿಕ ಜಗತ್ತಿಗೆ ಬಂದರೆ ಶಿವರಾಮ ಕಾರಂತರು ತಾವಿರುವ ಬಾಲವನವನ್ನು, ಕುವೆಂಪು ಕವಿಶೈಲ ಕುಪ್ಪಳ್ಳಿಯನ್ನು, ಕೆ.ವಿ.ಸುಬ್ಬಣ್ಣ ಹೆಗ್ಗೋಡನ್ನು ಒಂದು ಚಟುವಟಿಕೆಯ ಕೇಂದ್ರವಷ್ಟೇ ಅಲ್ಲದೆ ಪ್ರೇಕ್ಷಣೀಯ ಸ್ಥಳವಾಗಿಸಿದರು. ಹೀಗೆ ತಮ್ಮ ಕರ್ಮಭೂಮಿಯನ್ನು ಎಲ್ಲೆಡೆ ಜನಪ್ರಿಯಗೊಳಿಸುವ ಚಾತುರ್ಯ, ಶಕ್ತಿ ಮೊಗಸಾಲೆಯವರದ್ದು ಎಂಬುದನ್ನು ಕಾಂತಾವರವನ್ನು ಇಂದು ಕನ್ನಡ ಸಾಂಸ್ಕೃತಿಕ ವಿಶ್ವವನ್ನು ಉಪಗ್ರಹದಿಂದ ನೋಡಿದರೂ ಕಾಣುವ ಊರಾಗಿ ಪರಿವರ್ತಿಸಿ ನಿರೂಪಿಸಿದರು.

 ನಾನೊಮ್ಮೆ ಹೆಗ್ಗೋಡಿಗೆ ಹೋಗಿದ್ದೆ. ಆ ಊರು ತಲುಪುವವರೆಗೂ ಅಲ್ಲಿ ಕಲೆಯ ಬಲೆ ಇಷ್ಟೊಂದು ಬಲವಾಗಿ ನೆಲೆಗೊಂಡಿದೆಯೆಂದು ಕಾಣುವ ಕುರುಹುಗಳು ಕಾಣಸಿಗಲಿಲ್ಲ. ಬಸ್ಸಿಳಿದ ತಕ್ಷಣ ಒಂದು ಮಾಯಾ ಜಗತ್ತು ಸೃಷ್ಟಿಯಾಗಿತ್ತು. ಕಾಂತಾವರವೂ ಹೀಗೆಯೇ: ಆ ಊರಿನ ಸಮೀಪ ಹೋಗುವವರೆಗೂ ಇಂತಹ ಒಂದು ಸಾಂಸ್ಕೃತಿಕ ಜಗತ್ತು ಅಲ್ಲಿ ಕ್ರಿಯಾಶೀಲವಾಗಿರುತ್ತದೆಂದು ನಂಬಲಾರರು. ಆದರೆ ಅಲ್ಲಿನ ಪರಿಸರ, ಒಂದು ಸಾಹಿತ್ಯ ಸಂಭ್ರಮವನ್ನು, ವೈಭವವನ್ನು ಪರಿಚಯಿಸುತ್ತದೆ. ಮೊಗಸಾಲೆ ಕಾಂತಾವರದಲ್ಲಿ ತನ್ನ ಪಾಡಿಗೆ ಕವಿತೆಗಳನ್ನು ಬರೆದುಕೊಂಡು ಅವನ್ನು ಪ್ರಕಟಿಸುತ್ತ ಸುಮ್ಮನಿರಬಹುದಿತ್ತು. ಆ ಕಾಲದಲ್ಲೇ ಅವರು ಸಾಕಷ್ಟು ಕವಿತೆಗಳನ್ನು, ಕತೆಗಳನ್ನು ಪ್ರಕಟಿಸಿದ್ದರು. ಆದರೆ ಅವರು ಇಷ್ಟಕ್ಕೇ ಸುಮ್ಮನಾಗಲಿಲ್ಲ. ವೈದ್ಯರಾಗಿ ಜನಾನುರಾಗಿಯಾಗಿದ್ದರೂ, ತನ್ನ ಸುತ್ತಮುತ್ತ ಇದ್ದ ಜನರೊಂದಿಗೆ ಸಾಂಸ್ಕೃತಿಕವಾಗಿ ಬೆರೆಯುವ ಸಾಹಸ ಮಾಡಿದರು. ಸಾಮಾನ್ಯವಾಗಿ ಅಕಡೆಮಿಕ್ ವರ್ತುಲಕ್ಕಿಂತ ಹೊರಗಿನವರೊಬ್ಬರು ಇಂತಹ ಕಾರ್ಯಕ್ಕಿಳಿದರೆಂದರೆ ಅವರಿಂದ ಧನಸಂಗ್ರಹವೊಂದನ್ನೇ ಗುರಿಯಾಗಿಟ್ಟುಕೊಂಡು ತಾವು ಪ್ರಸಿದ್ಧರಾಗುವ, ಪ್ರಚಾರಪಡೆಯುವ ಅಕಡೆಮಿಕ್‌ಗಳೇ ಹೆಚ್ಚಿರುವ ಸಂದರ್ಭಗಳ ನಡುವೆ ಇದಕ್ಕೆ ಅಪವಾದವಾಗಿ, ಅಪರೂಪವಾಗಿ ಎಲ್ಲರೂ ಸಾರಸ್ವತ ಸೇವೆಯ ನೊಗಕ್ಕೆ ಹೆಗಲುಕೊಟ್ಟು ದುಡಿಯಲು ಮೊಗಸಾಲೆ ನಾಯಕರಾದರು. ವೇದಿಕೆಯಲ್ಲಿ ತಾವೇ ಕೂರುವ ಸಂಸ್ಕೃತಿಯನ್ನು ಕೈಬಿಟ್ಟು ಇತರರನ್ನು ಬರಮಾಡಿಕೊಂಡು ಅವರ ಮೂಲಕ ತಾವೂ ತಮ್ಮ ಊರೂ ಜನರು ಕೃತಾರ್ಥರಾಗುವಂತೆ, ಕೃಪಾರ್ಥರಾಗುವಂತೆ ಮಾಡಿದರು.

ಇವೆಲ್ಲದರ ಪರಿಣಾಮವಾಗಿ 1976ರಲ್ಲಿ ಕಾಂತಾವರ ಕನ್ನಡ ಸಂಘ ಸ್ಥಾಪನೆಯಾಯಿತು. 1966ರಲ್ಲಿ (ಅವರು ಕಾಂತಾವರ ರೈತ ಯುವಕ ವೃಂದದ ಸ್ಥಾಪನೆಗೆ ಕಾರಣರಾದರೆಂದು ಓದಿದ್ದೇನೆ.) ವೈದ್ಯ ಸಂಘವೋ, ಆಯುರ್ವೇದ ಕೇಂದ್ರವೋ ಅಥವಾ ಸಾಹಿತ್ಯ ಸಂಘವೋ ಹುಟ್ಟಿದ್ದರೆ ಅದು ಅಚ್ಚರಿಯ ಮಾತಾಗುತ್ತಿರಲಿಲ್ಲ. ಆದರೆ ಮೊಗಸಾಲೆ ನನಸಾಗಿಸಿದ್ದು ‘ಕನ್ನಡ’ ಸಂಘ. ಕನ್ನಡದ ವ್ಯಾಪ್ತಿ ಕನ್ನಡ ಸಾಹಿತ್ಯಕ್ಕಿಂತ ದೊಡ್ಡದು ಎಂಬುದನ್ನು ಸೂಚಿಸುವ, ಗೌರವಿಸುವ ಸಾಂಕೇತಿಕ ಮಹತ್ವವನ್ನು ಒಳಗೊಂಡ ವಿಚಾರವಿದು.

1978ರಲ್ಲಿ ಮೂಡುಬಿದರೆಯಲ್ಲಿ ವರ್ಧಮಾನ ಪ್ರಶಸ್ತಿ ಪೀಠದ ಸ್ಥಾಪನೆಗೂ ಮೊಗಸಾಲೆಯೇ ಕಾರಣ. ಅವರೇ ಸ್ಥಾಪಿಸಿದರು ಎಂದರೆ ಅವರ ದುಡಿಮೆಯ ಗೌರವಕ್ಕೆ ಅಪಚಾರ. ಏಕೆಂದರೆ ಅವರೆಂದೂ ‘ನಾನು’ ಅಲ್ಲ; ‘ನಾವು’. ಬೇಂದ್ರೆ ಹೇಳಿದ ಐದು ಐದೆಯರ ಮಡಿಲಿನಲ್ಲಿ ಬೆಳೆವ ಹಸುಗೂಸಿನಂತೆ ಅವರ ಪಯಣ. ಕಾವ್ಯಕ್ಕೆ ಮನ್ನಣೆ ನೀಡುವ ದೃಷ್ಟಿಯಿಂದ ಅವರು ಪ್ರೇರಕ ಶಕ್ತಿಯಾಗಿ 1979ರಲ್ಲಿ ಆರಂಭಿಸಿದ ‘ಮುದ್ದಣ ಕಾವ್ಯ ಪ್ರಶಸ್ತಿ’ ಆರಂಭವಾಗಿ ಅವಿರತವಾಗಿ ಮುಂದುವರಿದಿದೆೆ. ಅನೇಕ ಹಿರಿಯ-ಕಿರಿಯ ಕವಿಗಳು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2002ಲ್ಲಿ ಅವರ ವೃತ್ತಿ/ಉದ್ಯೋಗದ ಬದುಕು ನಿವೃತ್ತಿಯೊಂದಿಗೆ ಮುಗಿಯಿತು. ಎಲ್ಲ ನಿವೃತ್ತರಿಗೆ ಆನಂತರದ ಬದುಕು ಸಾಂಸಾರಿಕ ವಾನಪ್ರಸ್ಥವಾದರೆ ಮೊಗಸಾಲೆ ಮತ್ತೆ ಸಾಹಿತ್ಯದ ಚಿರಯುವಕರಾದರು. 2003ರಲ್ಲಿ ಕಾಂತಾವರದಲ್ಲಿ ಕನ್ನಡ ಭವನ ನಿರ್ಮಾಣವಾಯಿತು. 2008ರಲ್ಲಿ ಅಲ್ಲಮಪ್ರಭು ಪೀಠದ ಅನಾವರಣವಾಯಿತು. ಅರಿವೇ ಗುರು ಪರಂಪರೆಯ ಮೊಗಸಾಲೆಯೊಳಗಿನ ಅನ್ವೇಷಕನಿಗೆ ವರ್ಧಮಾನ, ಅಲ್ಲಮ, ಕನ್ನಡ, ಇವೆಲ್ಲ ಬದುಕಿನ ಜೈತ್ರಯಾತ್ರೆಯ ಸಂಗಮವಾಯಿತು.

 ಇವೆಲ್ಲದರ ನಡುವೆ ಅವರ ವೈಯಕ್ತಿಕ ಸಾಹಿತ್ಯ ಸಾಧನೆ ದಾಪುಗಾಲಿಟ್ಟು ಬೆಳೆಯುತ್ತಿತ್ತು. ಅವರ ಸುಮಾರು 50ಕ್ಕೂ ಮಿಕ್ಕಿ ಗದ್ಯ-ಪದ್ಯ ಕೃತಿಗಳು ನಾಡಿನಾದ್ಯಂತ ಜನಪ್ರಿಯ ಮಾತ್ರವಲ್ಲ, ಪುಟಗಟ್ಟಲೆ ಬರೆಯಬಹುದಾದಷ್ಟು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನವಾಗಿವೆ. 1977ರಲ್ಲಿ ಅವರ ‘ನನ್ನದಲ್ಲದ್ದು’ ಕಾದಂಬರಿಗೆ, 2004ರಲ್ಲಿ ಅವರ ‘ಇದಲ್ಲ ಇದಲ್ಲ’ ಕವನ ಸಂಗ್ರಹಕ್ಕೆ ಮತ್ತು 2008ರಲ್ಲಿ ‘ಉಲ್ಲಂಘನೆ’ ಕಾದಂಬರಿಯ ಮೂಲಕ 3ನೇ ಬಾರಿಗೆ, ಕರ್ನಾಟಕ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಲಭಿಸಿತು. ಇವೆಲ್ಲವುಗಳಿಗೆ ಕಿರೀಟವಿಟ್ಟಂತೆ ಅವರಿಗೆ 2004ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತು. ಮೊಗಸಾಲೆಯವರ ಕುರಿತು ಬಂದ ಅಭಿನಂದನ ಗ್ರಂಥಗಳಿವೆ; ಅವರನ್ನು ಅಭಿನಂದಿಸುವ ಕಾರ್ಯಕ್ರಮಗಳು ರಾಜ್ಯದ ಒಳಗೂ ಹೊರಗೂ ನಡೆದಿವೆ. ಅವರು ಸ್ವತಃ ಪಿಎಚ್‌ಡಿ ಪದವಿ ಪಡೆಯದಿದ್ದರೂ ಅವರ ಕೃತಿಗಳು ಪಿಎಚ್‌ಡಿ ಪದವಿಗೆ ವಸ್ತುಗಳಾಗಿವೆಯೆಂದು ಕೇಳಿದ್ದೇನೆ. ಪ್ರಶಸ್ತಿಗಳು ಕೃತಿಗಳ ಗುಣಮಟ್ಟಕ್ಕೆ ಒಂದು ಸ್ಥೂಲ ಸೂಚಕಪಟ್ಟಿಯಷ್ಟೇ. ಅವರ ಕೃತಿಗಳನ್ನು ಪರಿಶೀಲಿಸಿದರೆ ಅದೇ ಒಂದು ಮಹತ್ತರ ಮತ್ತು ಮಹತ್ವದ ಗ್ರಂಥವಾಗಬಹುದು.

ಪ್ರಾಯಃ ಮಾಸ್ತಿ, ಕಾರಂತ, ಹೀಗೆ ನಾನ್-ಅಕಡೆಮಿಕ್ ವಲಯದಿಂದ ಉದ್ಭವವಾದ ಆನಂತರದ ಪ್ರತಿಭೆಯೆಂದರೆ ಮೊಗಸಾಲೆಯೇ ಎಂಬುದನ್ನು ಯಾವ ಸಂಕೋಚವೂ ಇಲ್ಲದೆ ಹೇಳಬಹುದು. ಇದೇ ಕಾರಣವಿರಬಹುದು: ಅವರ ಕೃತಿಗಳು ಸರಳವಾದ ಆದರೆ ಸಮೃದ್ಧವಾದ ನಿರೂಪಣೆಯಲ್ಲಿ ಸಾಗುತ್ತವೆ. ಈ ದೃಷ್ಟಿಯಿಂದ ಅವರು ಕುವೆಂಪುವಿಗೆ ಸಮೀಪ. ಅವರ ಬರಹಗಳು ಬೌದ್ಧಿಕ ಸವಾಲಾಗಿ ಪರಿಣಮಿಸುವುದಿಲ್ಲ. ಅವರ ಕಾದಂಬರಿಗಳು ಸಾಕಷ್ಟು ವಿವರಣಾತ್ಮಕವಾಗಿದ್ದರೂ ಹೊರೆಯಾಗುವುದಿಲ್ಲ. ಎಂ.ಎಸ್.ಆಶಾದೇವಿಯವರು ಒಂದು ಕಡೆ ಸೂಚಿಸಿದಂತೆ ‘‘ಮೊಗಸಾಲೆಯವರ ಕಾದಂಬರಿ ಪ್ರಪಂಚ ನಮಗೆ ಮುಖ್ಯವಾಗುವುದು ಅದರ ವಸ್ತು ವೈವಿಧ್ಯ ಮತ್ತು ಪ್ರಾಮಾಣಿಕತೆಯಿಂದ; ಒದಗಿ ಬಂದ ವಸ್ತುಗಳಿಗೆ ಅವು ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಬೆಳೆಯಲು, ಅಭಿವ್ಯಕ್ತಿಗೊಳ್ಳಲು ಅವಕಾಶ ಮಾಡಿಕೊಟ್ಟ ಕಾರಣಕ್ಕಾಗಿ. ಅವುಗಳನ್ನು ಲೋಕ ಮೆಚ್ಚಲೆಂದು ಟ್ರಿಮ್ ಮಾಡದೆ ಅವುಗಳ ನಿಜಸ್ವರೂಪದಲ್ಲಿ ಕಂಡರಿಸಿದ್ದಕ್ಕಾಗಿ.’’ ಪ್ರಾಮಾಣಿಕತೆಯ ಪ್ರಜ್ಞೆಯು ವಿಮರ್ಶಕ ಮೊಗಸಾಲೆಯವರ ಅಭಿಪ್ರಾಯಗಳನ್ನು ಇತರರು ಖಂಡತುಂಡವಾಗಿ ವಿರೋಧಿಸಲೂ ಅವಕಾಶಮಾಡಿಕೊಟ್ಟಿದೆ. ಕನ್ನಡ ದಿನಪತ್ರಿಕೆಯೊಂದರ ಸಾಪ್ತಾಹಿಕದಲ್ಲಿ ಅವರು ಕನ್ನಡ ಸಾಹಿತ್ಯದ ಅತಿ ಮುಖ್ಯಸಮಸ್ಯೆಗಳನ್ನು ಎತ್ತಿದ್ದರಾದರೂ ವ್ಯವಸ್ಥೆಯ ಅಂಗವಾದ ಅನೇಕರು ಅವರನ್ನು ತುಳಿಯಲು ಸಿದ್ಧರಾದಂತೆ ಟೀಕಿಸಿದ್ದರು. ಮೊಗಸಾಲೆಯವರು ವಿಮರ್ಶಾ/ವೈಚಾರಿಕ ಲೇಖನಗಳಲ್ಲಿ ಆಗ ಇಷ್ಟು ಹಳಬರಾಗಿರಲಿಲ್ಲ. ಮೊಗಸಾಲೆಯವರು ಚಕ್ರವ್ಯೆಹವನ್ನು ಹೊಕ್ಕ ಅಭಿಮನ್ಯು ಅಲ್ಲಿ ದುಷ್ಟ ಚತುಷ್ಟಯದ ಸಂಚಿಗೆ ಬಲಿಯಾಗುವಂತೆ ಮತ್ತು ಅದರಿಂದ ಹೊರಬರಲು ಅಶಕ್ತರಾದಂತೆ ಕಂಡಾಗ ನಾನೇ ಅವರ ಪರ ವಿಮರ್ಶಾ ವಕಾಲತ್ತು ವಹಿಸಿದ್ದೆ. ಇದೇ ಪ್ರಾಮಾಣಿಕತೆ ಅವರ ಅನೇಕ ಟೀಕೆಗಳು ಅನುಚಿತವೋ ಎಂಬ ಹಂತಕ್ಕೂ ಹೋಗಿ ಅವರಿಗೆ ವೈರಿಗಳನ್ನು ಸೃಷ್ಟಿಸಿರಬಹುದು!

ಕಾವ್ಯದಲ್ಲಿ ಅವರು ಇಂಥದ್ದೇ ಮಾರ್ಗವನ್ನು ಅನುಸರಿಸಿದ್ದಾರೆಂದು ಹೇಳುವುದು ಕಷ್ಟ. ಪ್ರಭಾವಕ್ಕೊಳಗಾಗುವುದು ತಪ್ಪಲ್ಲ. ಅವರ ಮೇಲೂ ಹಿರಿಕಿರಿಯ ಕವಿಗಳ ಪ್ರಭಾವವಾಗಿದೆ. ಆದರೆ ಅವರು ಅಲ್ಲೇ ಉಳಿದು ಸವೆಯುವುದಿಲ್ಲ; ಪರಿತಪಿಸುವುದೂ ಇಲ್ಲ. ಸ್ವಲ್ಪಸಮಯದಲ್ಲೇ ಅಲ್ಲಿಂದ ಹೊರಬಂದು ಇನ್ನೊಂದು ಮರವನ್ನಾಶ್ರಯಿಸುತ್ತಾರೇನೋ ಎಂಬ ಮೇಲ್ನೋಟದ ಭ್ರಮೆಯನ್ನು ನೀಡುವಂತಿವೆ ಅವರ ಕವಿತೆಗಳು. ಆದರೆ ಅವರು ಅರಸುವುದು ವಿಶಾಲವಾದ ಆಕಾಶದಲ್ಲಿ ವಿಹರಿಸುವ ಸುಖವನ್ನು. ಅವರ ಒಂದು ಕವಿತೆಯಲ್ಲಿ ‘‘ನದಿ ಹೇಗೆ ಕಡಲಾಗಿ ಆಕಾಶ ಏರೀತು?’’ ಎಂಬ ಸಾಲಿದೆ. ಮೊಗಸಾಲೆ ಪುಟ್ಟ ತೊರೆಯಾಗಿದ್ದವರು ನದಿಯಾಗಿ ಕಡಲಾಗಿ ಆಕಾಶ ಏರುವ ಸಾಧ್ಯತೆಯನ್ನು ತೋರಿದ್ದಾರೆ. ಸದ್ದಿಲ್ಲದ ಕ್ರಾಂತಿಕಾರಿ ಅವರು. ಘೋಷಣೆಗಳ ಹೊರತೂ ಅವರ ಮೌನ ಕ್ರಾಂತಿಗೆ ಅವರ ಒಂದು ಪದ್ಯದ ಈ ಸಾಲುಗಳು ಸಮರ್ಥನೆ ನೀಡಬಹುದು: ‘‘ಈ ನನ್ನ ಹಳ್ಳಿಯೇ

ಒಮ್ಮೆ ನೀನು ನನ್ನ ಕವಿತೆಗೆ ಬಂದು
ಎತ್ತು ನಿನ್ನ ಎಡಗಾಲು

ಝಾಡಿಸಿ ಒದೆ ಮೊದಲು ರಥಕ್ಕೆ ಆ ಮೇಲೆ ಅದರ ಮೇಲೆ ಇರುವ ದೇವರಿಗೆ  
ರಾಜಧಾನಿಪ್ರಿಯ ಸಾಹಿತಿಗಳ ನಡುವೆ ನಿಜದ ಗ್ರಾಮಸ್ಥ ಮೊಗಸಾಲೆ. ಥಾಮಸ್ ಹಾರ್ಡಿಯ ವೆಸೆಕ್ಸ್‌ನಂತೆ ಮೊಗಸಾಲೆ ಕಾಂತಾವರವನ್ನು ತನ್ನ ಬದುಕಿನ ಕೇಂದ್ರವಾಗಿಸಿದರು. ಕಾಂತಾವರ ಸೀತಾಪುರವಾಗಬಹುದು. ಆದರೆ ಅವರ ಉಸಿರು ಕಾಂತಾವರದ ಅಂಗುಲಂಗುಲದಲ್ಲಿ ನಡೆದಾಡುತ್ತದೆ. ಒಂದು ಊರು ಒಂದು ಸೃಜನಶೀಲ ಮನಸ್ಸೊಂದರ ಹೊಕ್ಕಳು ಬಳ್ಳಿಯನ್ನು ತನ್ನಲ್ಲಿ ಊರಿಸಿಕೊಂಡಾಗ ಅದರ ಬೇರು ಸೃಷ್ಟಿಸಿದ ಪವಾಡ ಕಾಂತಾವರ ಮತ್ತು ಮೊಗಸಾಲೆ. ಮೊಗಸಾಲೆಯವರ ಮಾತು ಮತ್ತು ಕೃತಿ ಸರಳ. ಗೆಳೆತನವನ್ನು ಸಂಪಾದಿಸುವುದರಲ್ಲಿ ಅವರು ಅಗ್ರಗಣ್ಯರು. ಬಾಯ್ತುಂಬ, ಮುಖತುಂಬ ನಗುತ್ತ ವೈಯಕ್ತಿಕ ಮತ್ತು ಸಾಂಸ್ಕೃತಿಕ ಸಂಬಂಧಗಳ ನಾಡಿ ಅರಿತ ವೈದ್ಯರವರು. ಅವರ ಜೊತೆ ಭಿನ್ನಾಭಿಪ್ರಾಯವಿದ್ದಾಗಲೂ ಅವರೊಡನೆ ಜಗಳವಾಡುವುದು ಹೇಗೆಂದು ನನಗಂತೂ ಗೊತ್ತಿಲ್ಲ. ಜೀವೇಮ ಶರದಂ ಶತ: ಎಂದು ಸುಬ್ರಾಯ ಚೊಕ್ಕಾಡಿಯವರು ಹಾರೈಸಿದ ವರ್ತಮಾನದ ಈ ಮುಖ ನಿಜಕ್ಕೂ ಅನನ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)