varthabharthi


ಅನುಗಾಲ

ನಾಗರಿಕತ್ವದ ನಾಗರಿಕತೆ

ವಾರ್ತಾ ಭಾರತಿ : 29 Jan, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕಳೆದ ಐದಾರು ವರ್ಷಗಳಲ್ಲಿ ಭಾರತದಲ್ಲಿ ಜನರನ್ನು ಕೆಣಕುವ ಮತ್ತು ಸಂಕುಚಿತ ದೃಷ್ಟಿಕೋನವನ್ನಿಟ್ಟುಕೊಂಡು ಧಾರ್ಮಿಕ ಮನೋಭಾವವನ್ನು ಪ್ರಚೋದಿಸುವ ಘಟನೆಗಳು, ಕಾಯ್ದೆಗಳು, ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಮಾಡಿವೆ. ಇನ್ನೊಂದು ದೇಶದ ಸಾರ್ವಭೌಮತ್ವ ಮತ್ತು ಘನತೆಯನ್ನು ಗೌರವಿಸುವ ದೃಷ್ಟಿಯಿಂದಲೇ ಇರಬೇಕು, ಕಾಶ್ಮೀರದ ಕುರಿತ ಸಂವಿಧಾನದ 370ನೇ ವಿಧಿಯ ವಿಸರ್ಜನೆಯಂತಹ ಭಾರೀ ಬದಲಾವಣೆಗಳಿಗೂ ಪರದೇಶಗಳಾಗಲೀ ವಿಶ್ವಸಂಸ್ಥೆಯಾಗಲೀ ಆಕ್ಷೇಪಿಸಲಿಲ್ಲ. ಅಯೋಧ್ಯೆಯ ಮಹತ್ವದ ತೀರ್ಪೂ ಇಲ್ಲಿ ಮತೀಯ ಗಲಭೆಯನ್ನೆಬ್ಬಿಸಲಿಲ್ಲ. ಆದರೆ ನಾಗರಿಕತ್ವ ತಿದ್ದುಪಡಿ ಕಾಯ್ದೆ, 2019 ದೇಶದಲ್ಲಿ ಮಾತ್ರವಲ್ಲ ವಿಶ್ವಮಟ್ಟದಲ್ಲಿ ಭಾರೀ ಧೂಳೆಬ್ಬಿಸಿದೆ.


ಕಳೆದ ಅನೇಕ ವಾರಗಳಿಂದ ದೇಶಾದ್ಯಂತ ಸಿಎಎ ಕುರಿತು ಪ್ರತಿಭಟನೆ ನಡೆಯುತ್ತಲೇ ಇದೆ. ಇನ್ನೊಂದೆಡೆ ಕೇಂದ್ರ ಸರಕಾರ ಮತ್ತು ಅದು ಆಡಳಿತ ಪಕ್ಷವಾಗಿರುವ ರಾಜ್ಯ ಸರಕಾರಗಳು ಹಾಗೂ ಈ ಸರಕಾರ ಮತ್ತು ಪಕ್ಷದ ಅಧಿಕೃತ ಮತ್ತು ಅನಧಿಕೃತ ಅಂಗಸಂಸ್ಥೆಗಳು ಇನ್ನಿಲ್ಲದಂತೆ ಸಿಎಎ ಪರವಾದ ಪ್ರಚಾರದಲ್ಲಿ ಮತ್ತು ಪ್ರತಿಭಟನೆಯನ್ನು ಮತೀಯ ಹೋರಾಟವೆಂದು ಬಿಂಬಿಸಲು ತೊಡಗಿವೆ. ಸ್ವಭಾವತಃ ಪ್ರಚಾರ ಮತ್ತು ಜಾಹೀರಾತನ್ನು ನೋಡಿಯೇ ಬದುಕನ್ನು ನಿರ್ಧರಿಸುವ ಗ್ರಾಹಕ ಮನಸ್ಸಿನ ಭಾರತೀಯರ ಪೈಕಿ ವಿವೇಚನೆಯನ್ನು ಬಳಸಿ ನಿರ್ಧರಿಸುವವರು ಎಷ್ಟೆಂಬುದು ಭವಿಷ್ಯದ ಚುನಾವಣೆಯಲ್ಲಿ ನಿರ್ಣಯವಾಗಬೇಕು. 1975ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ತಂದಾಗ ಇದೇ ರೀತಿಯ ಪ್ರತಿಭಟನೆ ನಡೆಯಿತು. ಆಕೆ ಈ ಪ್ರತಿಭಟನೆಯನ್ನು ತಹಬಂದಿಗೆ ತರಲು ಪ್ರಯತ್ನಿಸಿ ಕೊನೆಗೆ (ಯಾರ ಸಲಹೆಯನ್ನು ಪಾಲಿಸಿದರೋ-ಅವರಿಗೆ -ಅಥವಾ ಸ್ವತಃ ಅಂತಹ ನಿರ್ಣಯ ಕೈಗೊಂಡಿದ್ದಲ್ಲಿ ನೇರ ಇಂದಿರಾ ಗಾಂಧಿಯವರಿಗೇ- ದೇಶ ಋಣಿಯಾಗಬೇಕು!) 1977ರಲ್ಲಿ ಚುನಾವಣೆ ನಡೆಸಿದರು. ದೇಶದ ಭವಿಷ್ಯವನ್ನು ನಿರ್ಣಯಿಸುವ ಸರದಿ ಜನರಿಗೆ ಸಿಕ್ಕಾಗ ಅವರು ಆಕೆಯನ್ನು ಅಧಿಕಾರದಿಂದ ಕೆಳಗಿಳಿಸಿದ್ದು (ಮತ್ತು ಆನಂತರ ಪಶ್ಚಾತ್ತಾಪ ಪಟ್ಟು ಆಕೆಯನ್ನೇ ಆಯ್ಕೆ ಮಾಡಿದ್ದು) ಈಗ ಇತಿಹಾಸ. ಪ್ರಾಯಃ ಮೋದಿ ಸರಕಾರ ಈ ಸವಾಲನ್ನು ಎದುರಿಸಲು ಸಂಸತ್ತನ್ನು ವಿಸರ್ಜಿಸಿ ಮತ್ತೆ ಚುನಾವಣೆಯನ್ನು ಘೋಷಿಸು ವುದು ಅನುಮಾನ. ಏಕೆಂದರೆ ಅವರೂ ನರ್ವಸ್ ಆಗಿದ್ದಾರೆ. ಅಗತ್ಯ ಆತ್ಮವಿಶ್ವಾಸವನ್ನು ಹೊಂದಿಲ್ಲ. ಒಂದು ವೇಳೆ ಚುನಾವಣೆ ನಡೆದರೆ ಅದೊಂದು ರೀತಿಯಲ್ಲಿ ಸಿಎಎ ಕುರಿತ ಜನಾಭಿಪ್ರಾಯ ವಾಗಲೂಬಹುದು! ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಅಧಿಕಾರವೆನ್ನುವುದು ಸಂಗೀತ ಕುರ್ಚಿಯಾಟದಂತಿರುವುದರಿಂದ ಯಾರೂ ಕುರ್ಚಿ ತೊರೆಯಲು ಸಿದ್ಧರಿರುವುದಿಲ್ಲ!

ಮಾಧ್ಯಮಗಳಲ್ಲಿ ಸಿಎಎ ಕುರಿತಂತೆ ಮಾಹಿತಿಗಿಂತ ಅಭಿಪ್ರಾಯಗಳೇ ಹೆಚ್ಚು ಪ್ರಕಟವಾಗುತ್ತಿವೆ. ಇದರಿಂದಾಗಿ ಅರಿವು ವಿಸ್ತಾರವಾಗುವ ಅವಕಾಶವೇ ಜನರಿಗಿಲ್ಲದಾಗಬಹುದು. ರೊಚ್ಚಿಗೇಳಲು ಬೇಕಾದ ಹಿನ್ನೆಲೆ ಸಂಗೀತವಿದೆ; ಸಂಭಾಷಣೆಯಿದೆ; ಆದರೆ ವಿಚಾರದ ಬಗ್ಗೆ ಹೊಸಹೊಸ ಸಂಶಯಗಳೇ ಪುಂಖಾನುಪುಂಖವಾಗಿ ಉದ್ಭವಿಸುತ್ತವೆ. ಇವುಗಳ ನಡುವೆ ಅರಿವು ವಿಸ್ತರಿಸುವುದು ಹೇಗೆ? ಹುತ್ತವ ಬಡಿದಡೆ ಹಾವು ಸಾಯುವುದೇ? ಸಿಎಎ ಅಂದರೆ ಸಿಟಿಝನ್‌ಶಿಪ್ ಎಮೆಂಡ್‌ಮೆಂಟ್ ಏ್ಯಕ್ಟ್. ಇಂಗ್ಲಿಷನ್ನು ಯಥಾವತ್ತಾಗಿ ಬರೆಯುವಾಗ ಎ ಮತ್ತು ಅ ಅದಲುಬದಲಾಗುತ್ತಲೇ ಇರುತ್ತವೆ. ಎಮೆಂಡ್‌ಮೆಂಟ್ ಎಂಬುದು ಅಮೆಂಡ್‌ಮೆಂಟ್ ಎಂದೂ ಏ್ಯಕ್ಟ್ ಎಂಬುದು ಆ್ಯಕ್ಟ್ ಎಂದೂ ಅದಲುಬದಲಾಗಬಹುದು. ಇದು ಉಚ್ಚಾರಣೆಗೆ ಸಂಬಂಧಿಸಿದ ಸಮಸ್ಯೆ. ಆದರೆ ರೂಢಿಯಲ್ಲಿ ಬಳಸುವ ಇಂಗ್ಲಿಷ್ ಪದಗಳನ್ನು ಕನ್ನಡದಲ್ಲಿ ಬಳಸಿ ವಿವೇಚಿಸುವುದು ಮತ್ತಷ್ಟು ಸಂಶಯಗಳಿಗೆ ಕಾರಣವಾಗಬಹುದಾದ್ದರಿಂದ ಅದು ಸಿಎಎ ಎಂದೇ ಇರಲಿ. ಈ ಹಣೆಪಟ್ಟಿಯಡಿ ಶೋಧನೆ ಆರಂಭವಾಗಲಿ.

ಮೂಲದಲ್ಲಿ ಇದು 1955ರ ಸಿಟಿಝನ್‌ಶಿಪ್ ಆ್ಯಕ್ಟ್ ಅಥವಾ ನಾಗರಿಕತ್ವ ಕಾಯ್ದೆ. ಇದು ಭಾರತದ ಎಲ್ಲ ಸ್ವಾತಂತ್ರ್ಯೋತ್ತರ ಕಾಯ್ದೆಗಳಂತೆ ಅನೇಕ ತಿದ್ದುಪಡಿಗಳನ್ನು ಕಂಡಿದೆ. ತಿದ್ದುಪಡಿಗಳು ಯಾವ ಕಾಯ್ದೆಗೂ ಅವಮಾನವಲ್ಲ. ಆದರೆ ಬ್ರಿಟಿಷರು ತಮ್ಮ ಆಡಳಿತದಲ್ಲಿ ರಚಿಸಿದ ಸ್ವತಂತ್ರ ಭಾರತವು ಅಂಗೀಕರಿಸಿ ತನ್ನದಾಗಿಸಿಕೊಂಡ ಅನೇಕ (ಉದಾ: 1872ರ ಭಾರತೀಯ ಸಾಕ್ಷ್ಯ ಕಾಯ್ದೆ, ಭಾರತೀಯ ಒಪ್ಪಂದ ಕಾಯ್ದೆ, ಇತ್ಯಾದಿ) ಕಾಯ್ದೆಗಳು ತಿದ್ದುಪಡಿಗಳನ್ನು ಕಂಡಿವೆಯಾದರೂ ಅವು ಸಾಂದರ್ಭಿಕವೇ ಹೊರತು ರಾಜಕೀಯವಾಗಿರಲಿಲ್ಲ. ಇರಲಿ, ಇವನ್ನು ಅನಿವಾರ್ಯವೆಂದೇ ಬಗೆಯೋಣ. ಬಹುತೇಕ ಸರಕಾರಗಳು ಜನಪ್ರಿಯತೆ ಅಥವಾ ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಇಲ್ಲವೇ ತಮ್ಮ ಗುಪ್ತ ಕಾರ್ಯಸೂಚಿಗಳ ಈಡೇರಿಕೆಗಾಗಿ ಕಾಯ್ದೆಗಳನ್ನು ಮತ್ತು ತಿದ್ದುಪಡಿಗಳನ್ನು ತರುತ್ತವೆ. ಜನರ ಒತ್ತಡದಿಂದ ಅಥವಾ ಬೇಡಿಕೆಗಳಿಂದ ತಂದ ಕಾಯ್ದೆಗಳು ಅಪರೂಪ. ಇಲ್ಲವೆಂದಿಲ್ಲ. ಉದಾ: ಮೀಸಲಾತಿ, ಭೂಸುಧಾರಣೆ, ನ್ಯಾಯಾಂಗ ಸುಧಾರಣೆ ಇತ್ಯಾದಿ. ತೀರಾ ಕಳಪೆ ರಾಜಕಾರಣಗಳಿಗಾಗಿ ರಚಿಸಿದ ಕಾಯ್ದೆಗಳು ಅಂದರೆ ಜನಪ್ರತಿನಿಧಿಗಳ ಸಂಬಳ-ಸಾರಿಗೆ, ಸವಲತ್ತು, ನಿವೃತ್ತಿವೇತನ ಇತ್ಯಾದಿಗಳನ್ನು ಪದೇಪದೇ ಏರಿಸುವ ಕಾಯ್ದೆಗಳು, ವಿಶ್ವವಿದ್ಯಾನಿಲಯಗಳಿಗೆ ನೀಡುವ ಡೀಮ್ಡ್ ಸ್ಥಾನಮಾನ ಇವೆಲ್ಲವುಗಳಿಗೆ ಸಮರ್ಥನೆಗೆ ವಕೀಲರನ್ನು ನೇಮಿಸಬೇಕಷ್ಟೆ. ಒಂದು ವಿಚಾರವನ್ನು ಮನಗಾಣಬೇಕು. ಕಾನೂನಿನಡಿ ತೇರ್ಗಡೆಯಾಗುವ ಕಾಯ್ದೆಗಳೆಲ್ಲ ಸರಿಯೆಂದೇನಿಲ್ಲ. ನ್ಯಾಯಾಲಯಗಳು ಒಂದು ಸೀಮಿತ ಚೌಕಟ್ಟಿನಲ್ಲಿ ವಿಹರಿಸುತ್ತವೆಯೇ ವಿನಾ ಜನಮಾನಸದ ಅಥವಾ ಬಹುಮತದ ಭಾವನೆಗಳ ಆಧಾರದಲ್ಲಲ್ಲ. ಅವು ವಾಸ್ತವದ ಪ್ರತಿಬಿಂಬಗಳೆಂದೇನಿಲ್ಲ.

ನಾಗರಿಕತ್ವವು ಮೂಲತಃ ನಮ್ಮ ಸಂವಿಧಾನದ ಎರಡನೆಯ ಭಾಗದಲ್ಲಿ 5ರಿಂದ 10ನೇ ವಿಧಿಗಳಲ್ಲಿ ಉಲ್ಲೇಖವಾಗಿದೆ. ಅಚ್ಚರಿಯ ಮತ್ತು ತಲೆದೂಗಬಲ್ಲ ಅಂಶವೆಂದರೆ ಯಾವುದೇ ಕಾಯ್ದೆಯಿಲ್ಲದೆಯೂ ಸ್ವಯಂವೇದ್ಯವಾಗುವಷ್ಟು ಇವು ಸ್ಪಷ್ಟವಾಗಿವೆ. ಸ್ಥೂಲವಾಗಿ ಹೇಳುವುದಾದರೆ ಸಂವಿಧಾನದ ಪ್ರಾರಂಭದಲ್ಲಿನ ನಾಗರಿಕತ್ವ, ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ, ಅಥವಾ/ಮತ್ತು ಪಾಕಿಸ್ತಾನಕ್ಕೆ ವಲಸೆ ಹೋದ ಕೆಲವು ವ್ಯಕ್ತಿಗಳ ನಾಗರಿಕತ್ವದ ಹಕ್ಕುಗಳು, ಭಾರತದ ಹೊರಗೆ ವಾಸಿಸುತ್ತಿರುವ ಭಾರತೀಯ ಮೂಲದ ಕೆಲವು ವ್ಯಕ್ತಿಗಳಿಗೆ ನಾಗರಿಕತ್ವದ ಹಕ್ಕುಗಳು ಮತ್ತು ಸ್ವಂತ ಇಚ್ಛೆಯಿಂದ ವಿದೇಶಿ ರಾಜ್ಯದ ನಾಗರಿಕತ್ವವನ್ನು ಪಡೆದವರು ಭಾರತದ ನಾಗರಿಕರಲ್ಲ ಮುಂತಾದ ಅಂಶಗಳನ್ನು ಈ ವಿಧಿಗಳು ಒಳಗೊಂಡಿವೆ. ನಾಗರಿಕತ್ವ ಕಾಯ್ದೆಯು ಭಾರತೀಯ ನಾಗರಿಕತ್ವವನ್ನು ನೀಡುವ ಮತ್ತು ತೀರ್ಮಾನಿಸುವ ಆಶಯದೊಂದಿಗೆ 1955ರಲ್ಲಿ ಜಾರಿಗೆ ಬಂದಿತು. ಆಗ ಅವಿಭಜಿತ ಭಾರತವು ಅನೇಕ ಪ್ರಜೆಗಳ ನಾಗರಿಕತ್ವದ ಬಗ್ಗೆ ಗೊಂದಲವನ್ನು ಹೊಂದಿತ್ತು. ಉದಾಹರಣೆಗೆ ಈಗ ಪಾಕಿಸ್ತಾನದ ಭೂಭಾಗದಲ್ಲಿ ಹುಟ್ಟಿದ ವ್ಯಕ್ತಿಯೊಬ್ಬ ಅದನ್ನೇ ಹುಟ್ಟೂರಾಗಿ ಹೊಂದಿದ್ದರೂ ಸ್ವತಂತ್ರ ಭಾರತದ ಅಥವಾ ಅದರ ಪ್ರಾಂತ/ರಾಜ್ಯವೊಂದರಲ್ಲಿ ಉದ್ಯೋಗವನ್ನು ಮಾಡುತ್ತ ಇಲ್ಲೇ ಉಳಿಯಬಯಸಿದರೆ ಆತನನ್ನು ಹೇಗೆ ಪರಿಗಣಿಸಬೇಕು? ಅಥವಾ ಭಾರತೀಯ ಪ್ರಜೆಯೊಬ್ಬನ ಪತ್ನಿ ಅವಿಭಜಿತ ಭಾರತದ ನಿವಾಸಿಯಾಗಿದ್ದರೆ ಅವಳ ಅಥವಾ ಅವಳ/ರ ಮಕ್ಕಳ ನಾಗರಿಕತ್ವ ಏನಾಗಬೇಕು? ಅವಿಭಜಿತ ಭಾರತದ ಪ್ರಜೆಯೊಬ್ಬ ತನ್ನ ಆಯ್ಕೆಯ ನಾಗರಿಕತ್ವವನ್ನು ಪಡೆಯುವ ಬಗೆ ಹೇಗೆ? ಇಂತಹ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಜಾತ್ಯತೀತವಾದ ಅಥವಾ ಸರ್ವಧರ್ಮಸಮಭಾವದ ಬಹುತೇಕ ಪ್ರಕ್ರಿಯೆಗೆ ಸಂಬಂಧಿಸಿದ ನಿಯಮಗಳು ಕಾಯ್ದೆಯಲ್ಲಿದ್ದವು. ಯಾರೂ ತೀವ್ರವಾಗಿ ಆಕ್ಷೇಪಿಸಬಲ್ಲ ನಿಯಮಗಳು ಇರಲಿಲ್ಲ. ಈ ಕಾಯ್ದೆಯು 1956, 1960, 1983, 1985, 1986, 1987, 1992ರಲ್ಲಿ ಮತ್ತು ಈಗ 2019ರಲ್ಲಿ ತಿದ್ದುಪಡಿಯನ್ನು ಕಂಡಿದೆ. ಅವು ಗೌರವಪೂರ್ವಕವಾಗಿದ್ದವು ಮತ್ತು ಮೂಲದ ಸ್ವರೂಪವನ್ನು ಉದ್ದೇಶವನ್ನು ತಿರುಚಿರಲಿಲ್ಲ. ತಿದ್ದುಪಡಿಗಳೂ ವಿಧಿವಿಧಾನಗಳ ಕುರಿತು ಇದ್ದವಷ್ಟೇ ಹೊರತು ಮೂಲ ರಚನೆಯ ಕುರಿತಾಗಿರಲಿಲ್ಲ. ಈ ತಿದ್ದುಪಡಿಗಳು ಸಾಮಾಜಿಕ, ರಾಜಕೀಯ ಕ್ಷೋಭೆಗಳನ್ನು ಸೃಷ್ಟಿಸಲಿಲ್ಲ.

ಕಳೆದ ಐದಾರು ವರ್ಷಗಳಲ್ಲಿ ಭಾರತದಲ್ಲಿ ಜನರನ್ನು ಕೆಣಕುವ ಮತ್ತು ಸಂಕುಚಿತ ದೃಷ್ಟಿಕೋನವನ್ನಿಟ್ಟುಕೊಂಡು ಧಾರ್ಮಿಕ ಮನೋಭಾವವನ್ನು ಪ್ರಚೋದಿಸುವ ಘಟನೆಗಳು, ಕಾಯ್ದೆಗಳು, ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಮಾಡಿವೆ. ಇನ್ನೊಂದು ದೇಶದ ಸಾರ್ವಭೌಮತ್ವ ಮತ್ತು ಘನತೆಯನ್ನು ಗೌರವಿಸುವ ದೃಷ್ಟಿಯಿಂದಲೇ ಇರಬೇಕು, ಕಾಶ್ಮೀರದ ಕುರಿತ ಸಂವಿಧಾನದ 370ನೇ ವಿಧಿಯ ವಿಸರ್ಜನೆಯಂತಹ ಭಾರೀ ಬದಲಾವಣೆಗಳಿಗೂ ಪರದೇಶಗಳಾಗಲೀ ವಿಶ್ವಸಂಸ್ಥೆಯಾಗಲೀ ಆಕ್ಷೇಪಿಸಲಿಲ್ಲ. ಅಯೋಧ್ಯೆಯ ಮಹತ್ವದ ತೀರ್ಪೂ ಇಲ್ಲಿ ಮತೀಯ ಗಲಭೆಯನ್ನೆಬ್ಬಿಸಲಿಲ್ಲ. ಆದರೆ ನಾಗರಿಕತ್ವ ತಿದ್ದುಪಡಿ ಕಾಯ್ದೆ, 2019 ದೇಶದಲ್ಲಿ ಮಾತ್ರವಲ್ಲ ವಿಶ್ವಮಟ್ಟದಲ್ಲಿ ಭಾರೀ ಧೂಳೆಬ್ಬಿಸಿದೆ. ಇದರ ಕೆಲವು ಕಾರಣಗಳು, ಲಕ್ಷಣಗಳು ಈಗಾಗಲೇ ಬಹುಚರ್ಚಿತವಾಗಿವೆ. ಅವುಗಳನ್ನು ಪುನರಾವರ್ತಿಸದೆ ಮುಖ್ಯ ಲಕ್ಷಣವನ್ನಷ್ಟೇ ಹೇಳಬಹುದು.

ಕಾಯ್ದೆಯ 2ನೇ ಕಲಮಿಗೆ ಒಂದು ಹೊಸ ಶರತ್ತು ಅಥವಾ ಅಭಿಸಂಧಿಯನ್ನು ಸೇರಿಸಲಾಗಿದೆ. ಅದೆಂದರೆ ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಲ್ಲಿನ, ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಅತವಾ ಕ್ರೈಸ್ತ ಜನಾಂಗಕ್ಕೆ ಸೇರಿದ ಯಾವನೇ ಆಗಲೀ ಭಾರತವನ್ನು 31.12.2014ರ ಮೊದಲು ಪ್ರವೇಶಿಸಿದ್ದ, ಮತ್ತು ಅಂಥವರು ಕೇಂದ್ರ ಸರಕಾರ 1920ರ ಪಾಸ್‌ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯ್ದೆಯ ಕಲಮು 3 (2) (ಸಿ)ಯಡಿ ಅಥವಾ 1946ರ ವಿದೇಶೀಯರ ಕಾಯ್ದೆ ಅಥವಾ ಅದರಡಿ ಮಾಡಿದ ಯಾವುದೇ ನಿಯಮ ಅಥವಾ ಆದೇಶದಿಂದ ವಿನಾಯಿತಿ ಹೊಂದಿದ್ದಲ್ಲಿ, ಅಂಥವರನ್ನು ಈ ಕಾಯ್ದೆಯಡಿ ಅಕ್ರಮ ವಲಸಿಗರೆಂದು ಪರಿಗಣಿಸುವಂತಿಲ್ಲ. ಮುಖ್ಯವಾದ ಈ ತಿದ್ದುಪಡಿಗನುಗುಣವಾದ ವೈಧಾನಿಕ ತಿದ್ದುಪಡಿಗಳನ್ನು ಕಲಮು 6ಎ, 7ಡಿ, 18 ಮತ್ತು ಮೂರನೇ ಅನುಸೂಚಿಗೆ ಮಾಡಲಾಗಿದೆ. ಮೂರನೇ ಅನುಸೂಚಿಯಲ್ಲಿ ಕನಿಷ್ಠ ವಾಸದ ಅರ್ಹತೆ 11 ವರ್ಷಗಳಿದ್ದರೆ ಅದನ್ನು ಈಗ 5ಕ್ಕೆ ಇಳಿಸಲಾಗಿದೆ. ವಿಚಿತ್ರವೆಂದರೆ ನಾಗರಿಕತ್ವದ ಕಾಯ್ದೆಯಲ್ಲಿ ‘ಅಕ್ರಮ ವಲಸಿಗ’ ಎಂಬ ಪದವೇ ನಿರೂಪಿತವಾಗಿಲ್ಲ.

ಮೂಲ ಕಾಯ್ದೆಯಲ್ಲಿಲ್ಲದ ಮತ್ತು ತಿದ್ದುಪಡಿಯಲ್ಲಿಯೂ ನಿರೂಪಿತವಾಗದ ಈ ಪದವು ಕಾನೂನಿನಡಿ ಹೇಗೆ ಊರ್ಜಿತವಾದೀತು? ಅಷ್ಟೇ ಅಲ್ಲ, ಧಾರ್ಮಿಕ/ಮತೀಯ ದೌರ್ಜನ್ಯಕ್ಕೀಡಾದ ಎಂಬ ಹೇಳಿಕೆಗಳನ್ನು ಸಮರ್ಥಿಸುವ ಒಂದೇ ಒಂದು ಪದವೂ ತಿದ್ದುಪಡಿ ಕಾಯ್ದೆಯಲ್ಲಿಲ್ಲ. ಇದನ್ನು ಪ್ರಧಾನಿ-ಗೃಹಸಚಿವರು ಮತ್ತು ಅವರ ಅಪಾರ ಬೆಂಬಲಿಗರು ಏಕ ಕಂಠದಿಂದ ಹೇಳಿದರೂ ಅದು ಈರುಳ್ಳಿ ಸಿಪ್ಪೆ ಸುಲಿದಂತೆ ಕೊನೆ ಮಾತ್ರ ಶೂನ್ಯ. ಇದು ನಾಗರಿಕತ್ವದ ಹೆಸರಿನಲ್ಲಿ ಅನಾಗರಿಕತೆಯ ಪ್ರದರ್ಶನ. ಸರಕಾರವು ಜಾಣತನದಿಂದ (ಅಥವಾ ಕುತಂತ್ರದಿಂದ?) ಈ ಮೂರು ದೇಶಗಳನ್ನು ಹೆಸರಿಸಿದೆ ಮತ್ತು ದುರುದ್ದೇಶಪೂರ್ವಕವಾಗಿ ಮುಸ್ಲಿಮರನ್ನು ಕೈಬಿಟ್ಟಿದೆ. ಭಾರತಕ್ಕೆ ನೆರೆ ದೇಶಗಳಾದ ಶ್ರೀಲಂಕಾ, ಮ್ಯಾನ್ಮಾರ್, ನೇಪಾಳ, ಚೀನಾ, ಭೂತಾನ್‌ಗಳನ್ನು ಕೈಬಿಟ್ಟಿದೆ. ವಾಸ್ತವ ನೆರೆಯಲ್ಲದ ಗಡಿಯಲ್ಲದ ಅಫ್ಘಾನಿಸ್ತಾನ ಸೇರಿಕೊಂಡಿದೆ. (ತರ್ಕಕ್ಕಾಗಿ ಅಖಂಡ ಭಾರತವೆಂದು ಹೇಳಿದರೆ ಅಫ್ಘಾನಿಸ್ತಾನವೂ ನೆರೆಯ ದೇಶವೇ!) ಈ ದೇಶಗಳನ್ನು ಕೈಬಿಟ್ಟಿರುವುದರ ಉದ್ದೇಶವನ್ನು ಸರಕಾರ ಹೇಳಿಲ್ಲ ಮತ್ತು ಅದಕ್ಕೆ ಸಮರ್ಥನೀಯವಾದ ಕಾರಣವೂ ಇಲ್ಲ. ಮ್ಯಾನ್ಮಾರ್‌ನಿಂದ ಮುಸ್ಲಿಮರು, ಶ್ರೀಲಂಕಾದಲ್ಲಿ ತಮಿಳರು, ನೇಪಾಳ, ಭೂತಾನಿನಲ್ಲಿ ಕ್ರೈಸ್ತರೂ ಮುಸ್ಲಿಮರೂ ಮತೀಯ ದೌರ್ಜನ್ಯ ಕ್ಕೀಡಾಗುತ್ತಿದ್ದಾರೆ; ಭಾರತಕ್ಕೂ ಓಡಿ ಬರುತ್ತಿದ್ದಾರೆ; ಅವರಿಗೆ ಆಶ್ರಯವಿಲ್ಲ. ಯಾಕೆ ಈ ತಾರತಮ್ಯ? ಇಷ್ಟೇ ಅಲ್ಲ, ಪಾಕಿಸ್ತಾನದಲ್ಲಿ ಅಹಮದೀಯರ ಮೇಲೆ ದೌರ್ಜನ್ಯವಿದೆ. ಅವರಿಗೂ ಆಶ್ರಯವಿಲ್ಲ. ಹೀಗೆ ಮಾಡುವುದರಿಂದ ಮುಸ್ಲಿಮ್ ದೇಶಗಳನ್ನೇ ದೌರ್ಜನ್ಯಪಡಿಸುವ ದೇಶಗಳೆಂಬ ಮತ್ತು ಮುಸ್ಲಿಮರಿಗೆ ಇಲ್ಲಿ ಪ್ರವೇಶವಿಲ್ಲವೆಂಬ ಸೂಚನೆಯನ್ನು ಭಾರತವು ನೀಡಿದೆ.

ಇನ್ನೂ ಮುಖ್ಯವಾದ ವಿಚಾರವೀಗ ತಲೆಯೆತ್ತಿದೆ. ಈ ಕಾಯ್ದೆಯ ಕುರಿತು ವಿಶ್ವಸಂಸ್ಥೆ ಮತ್ತು ಅನೇಕ ಹೊರದೇಶಗಳು ಆಕ್ಷೇಪಿಸಿವೆ. ಆದರೆ ಭಾರತವು ಇದು ತನ್ನ ಆಂತರಿಕ ಮತ್ತು ಸಾರ್ವಭೌಮತ್ವದ ಪ್ರಶ್ನೆಯೆಂದಿದೆ. ವಿಶೇಷವೆಂದರೆ ಈ ಕಾಯ್ದೆಯ ಮೂಲಕ ಭಾರತವು ತಾನು ಹೆಸರಿಸಿದ ಮೂರು ದೇಶಗಳು ಧಾರ್ಮಿಕ ದೌರ್ಜನ್ಯವೆಸಗುತ್ತಿದೆಯೆಂದು ಹೇಳಿದೆಯಾದರೂ ಆ ದೇಶಗಳು ಇದನ್ನು ಒಪ್ಪಿಲ್ಲ. ಬಾಂಗ್ಲಾದೇಶವಂತೂ ತನ್ನಲ್ಲಿ ಮತೀಯ ದೌರ್ಜನ್ಯಗಳು ನಡೆದಿಲ್ಲವೆಂದು ಹೇಳಿದೆ. ಭಾರತವು ಎತ್ತಿರುವ ಈ ಪ್ರಶ್ನೆಯು ಈ ದೇಶಗಳ ಸಾರ್ವಭೌಮತ್ವದ ವಿಚಾರದಲ್ಲಿ ಹಸ್ತಕ್ಷೇಪವಲ್ಲವೇ? ನೆರೆಮನೆಯ ಅಬಲೆಗೆ ಆಕೆಯ ಗಂಡ ಹಿಂಸೆ ನೀಡಿದರೆ (ಉದಾಹರಣೆಗೆ ಮಾತ್ರ) ಅದನ್ನು ಸರಿಪಡಿಸಲು ಯತ್ನಿಸುವ ಅಥವಾ ಆ ಕುರಿತು ಶಾಸನಾತ್ಮಕವಾದ ದೂರು ನೀಡುವ ಬದಲು ಆಕೆ ನಮ್ಮ ಒಪ್ಪಿಗೆಯ ಜಾತಿಯವಳಾದರೆ ನಮ್ಮ ಮನೆಗೆ ಸೇರಿಸುವ ಕಾಯ್ದೆ ಇದು.

ಗಮನಿಸಬೇಕಾದ್ದೆಂದರೆ ಸರಕಾರವು ಕಾಶ್ಮೀರ, ಅಯೋಧ್ಯೆಗಳ ವಿಚಾರದಲ್ಲಿ ಮತೀಯ ಗಲಭೆಯಾಗುತ್ತದೆಂದು ನಿರೀಕ್ಷಿಸಿ ನಿರಾಶೆ ಹೊಂದಿದೆ. ಇಲ್ಲೂ ಮುಸ್ಲಿಮರಷ್ಟೇ ಬಾಧಿತರಾಗುತ್ತಾರೆ, ಮತೀಯ ಗಲಭೆಗಳಾಗುತ್ತವೆಂದು ನಿರೀಕ್ಷಿಸಿದ್ದರೆ ಮತ್ತೆ ಅದರ ಉತ್ಸಾಹಕ್ಕೆ ಜನ ತಣ್ಣೀರೆರಚಿದ್ದಾರೆ. ಭಾರತದ ಸರ್ವಧರ್ಮಸಮಭಾವ/ ಜಾತ್ಯತೀತತೆ ಎಲ್ಲರಲ್ಲೂ ಮತ್ತು ಮುಖ್ಯವಾಗಿ ಯುವಸಮುದಾಯದಲ್ಲಿ ಕೆಲಸಮಾಡುತ್ತಿದೆ. ಪ್ರತಿಭಟನೆ ನ್ಯಾಯವಾದದ್ದೇ. ಅದು ನ್ಯಾಯಾಲಯದಲ್ಲೂ ಇದೆ. ಇದಕ್ಕೆ ತಡೆಯಾಜ್ಞೆ ನೀಡಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದೆ. ವಿಶ್ವಸಂಸ್ಥೆಯ ಸಹಿತ ಜಾಗತಿಕ ಮಟ್ಟದಲ್ಲಿ ಭಾರತೀಯ ನ್ಯಾಯಪದ್ಧತಿಯ ಕುರಿತು ಅಚ್ಚರಿ ಮೂಡಿದೆ. ಬರಲಿರುವ ದಿನಗಳು ಭಾರತದ ಮಟ್ಟಿಗೆ 1975ಕ್ಕಿಂತಲೂ ವೈಶಿಷ್ಟ್ಯಪೂರ್ಣವಾಗಲಿದೆ. ನಾಗರಿಕತ್ವದ ಪ್ರಶ್ನೆಯಲ್ಲಿ ನಮ್ಮ ನಾಗರಿಕತೆ ಅಗ್ನಿಪರೀಕ್ಷೆಗೊಳಗಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)