varthabharthi


ಅನುಗಾಲ

ಮಾಧ್ಯಮ ವ್ಯಾಯೋಗ

ವಾರ್ತಾ ಭಾರತಿ : 5 Feb, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಸಾರ್ವಜನಿಕ ಶುಚಿತ್ವದ ಬಗ್ಗೆ ದೇಶವಿಡೀ ಅಭಿಯಾನ ನಡೆಯುತ್ತಿದೆ. ಆದರೆ ಮಾತು, ಕೃತಿ ಇವುಗಳ ಶುಚಿತ್ವದ ಬಗ್ಗೆ ಯಾರಿಗೂ ಗಮನವಿಲ್ಲ ಮಾತ್ರವಲ್ಲ, ಕೈ-ಬಾಯಿ ಇಂದು ಹೊಲಸಾಗುತ್ತಿರುವಷ್ಟು ಹಿಂದೆಂದೂ ಆಗಿರಲಿಲ್ಲ. ಇದರಲ್ಲಿ ಮಾಧ್ಯಮದ, ರಾಜಕಾರಣದ, ಅಧಿಕಾರದ ಪಾಲೆಷ್ಟು ಎಂದು ಅಳೆಯಲು ಅವಮಾನದಂಡಗಳೇ ಇಲ್ಲ. ಆದ್ದರಿಂದ ಭೌತಿಕ ಕಸವನ್ನು ದೂರ ಎಸೆದಷ್ಟೂ ಬೌದ್ಧಿಕ, ಮಾನಸಿಕ ಕಸ ಈ ಮೂರು ವರ್ತುಲಗಳಲ್ಲೂ ಹೆಚ್ಚುಹೆಚ್ಚು ಸೃಷ್ಟಿಯಾಗುತ್ತಿದೆ.


ಕರ್ನಾಟಕದ ಸಂಸತ್ ಸದಸ್ಯರೊಬ್ಬರು ಹೇಳಿದರೆಂಬ ಮಾತುಗಳ ಕುರಿತು ಮಾಧ್ಯಮದಲ್ಲಿ ಅನೇಕ ತರದ ವರದಿಗಳು ಬಂದಿವೆ; ಬರುತ್ತಿವೆ. ಅವರಿಗೆ ಇದೇನೂ ಹೊಸದಲ್ಲ. ಇಂತಹ ಮಾತಿನ ಮಾಣಿಕ್ಯಗಳನ್ನು ಅವರು ಸದಾ ಕೈ-ಬಾಯಲ್ಲಿ ಹಿಡಿದೇ ಓಡಾಡುವವರು! ಈ ಸಂಸದರು ಸಾವರ್ಕರ್ ಅವರ ಕುರಿತು ವ್ಯವಸ್ಥೆಯಾದ ಸಮಾರಂಭವೊಂದರಲ್ಲಿ ಗಾಂಧಿಯನ್ನು ಹಳಿದರಂತೆ. ಈ ‘ಅಂತೆ’ ಏಕೆಂದರೆ ಇದರಲ್ಲಿ ಸತ್ಯವ್ಯಾವುದು, ಮಿಥ್ಯವ್ಯಾವುದು ಎಂಬುದು ಗೋಚರವಾಗುವುದಿಲ್ಲ. ತಮ್ಮ ತಮ್ಮ ಅನುಕೂಲಕ್ಕೆ ಸರಿಯಾಗಿ ಏನು ಬೇಕಾದರೂ ಮಾತನಾಡಬಹುದೆಂಬ ನ್ಯಾಯ ಈಗ ಸಾಮಾಜಿಕ ಮತ್ತು ರಾಜಕೀಯ ವ್ಯವಹಾರದಲ್ಲಿ ಸಲ್ಲುತ್ತಿದೆ. ದೇಶ, ಸರಕಾರ ಮತ್ತು ಆಡಳಿತ ಪಕ್ಷಗಳ ನಡುವಣ ವ್ಯತ್ಯಾಸವನ್ನು ರಾಜಕಾರಣಿಗಳೂ ಮಾಧ್ಯಮಿಗಳೂ ಮತ್ತು ಮುಖ್ಯವಾಗಿ ಕಾನೂನನ್ನು ಅನುಷ್ಠಾನಗೊಳಿಸಬೇಕಾದ ಸರಕಾರಿ ಯಂತ್ರ ಮರೆತಿವೆ. ಆದ್ದರಿಂದ ಯಾವುದೇ ಸರಕಾರಿ/ಆಡಳಿತ ಕೇಂದ್ರವನ್ನು ಟೀಕಿಸಿದರೆ ಅದು ದೇಶದ್ರೋಹವಾಗುವ ಅಪಾಯವಿದೆ; ಮತ್ತು ಆಳುವವರು, ಅಧಿಕಾರಿಗಳು ಇತರರನ್ನು ಟೀಕಿಸಿದರೆ ಅದು ಅವರ ವೈಯಕ್ತಿಕ ಅಭಿಪ್ರಾಯ ಇಲ್ಲವೇ ದೇಶಭಕ್ತಿ ಎಂದೇ ಸಮರ್ಥನೆಯಾಗುವ ಅನುಕೂಲವಿದೆ. ಒಬ್ಬ ಮಂತ್ರಿ ಜನರನ್ನು ರೊಚ್ಚಿಗೆಬ್ಬಿಸಿ ಅವರಿಂದ ಹಿಂಸೆ ನಡೆದರೆ ಆ ರಾಜಕಾರಣಿಯ ವಿರುದ್ಧ ಪ್ರಕರಣ ದಾಖಲಾಗುವುದಿಲ್ಲ. ಎಲ್ಲವನ್ನೂ ಅಧಿಕಾರವೇ ನಿರ್ಧರಿಸುತ್ತದೆ.

 ಈಚೆಗೆ ಒಂದು ಶಾಲೆಯ ವಿದ್ಯಾರ್ಥಿಗಳು ಅಯೋಧ್ಯೆಯ ಬಾಬರಿ ಮಸೀದಿಯನ್ನು ಪುಂಡರು ದೇಶಭಕ್ತಿಯ, ಧರ್ಮರಕ್ಷಣೆಯ ಹೆಸರಿನಲ್ಲಿ ಉರುಳಿಸುವ ದೃಶ್ಯವನ್ನು ಒಂದು ಸಾಂಸ್ಕೃತಿಕ ಕಾರ್ಯಕ್ರಮವನ್ನಾಗಿ ಅಭಿನಯಿಸಿದರು. ಆ ಬಗ್ಗೆ ನಮ್ಮ ಕಾನೂನುದಾಸರು ನಾಮ್ಕೇವಾಸ್ತೇ ಪ್ರಕರಣ ನೋಂದಾಯಿಸಿಕೊಂಡು ಕೆಟ್ಟುಹೋದ ಯಂತ್ರದಂತೆ ಅಲ್ಲೇ ನಿಂತುಹೋಗಿ ಕೈತೊಳೆದುಕೊಂಡವು. ಬೀದರ್‌ನಲ್ಲಿ ವಿದ್ಯಾರ್ಥಿಗಳು ಇನ್ನೊಂದು ನಾಟಕದಲ್ಲಿ ಪ್ರಧಾನಿಯನ್ನು ಟೀಕಿಸಿದರೆಂದು ಪ್ರಕರಣ ದಾಖಲಾಗಿ ತನಿಖಾ ಅಂಗವಾಗಿ ಪುಟ್ಟ ಮಕ್ಕಳನ್ನು ನಾಲ್ಕು ಗಂಟೆ ವಿಚಾರಿಸಿದರಂತೆ. ಇದೇ ರೀತಿ ಮುಂದುವರಿದರೆ ಈ ಪ್ರಕರಣವು ಇನ್ನೂ ದೇಶದ್ರೋಹದ ಗಂಭೀರ ಮತ್ತು ಅಪಾಯಕಾರಿ ತಿರುವುಗಳ ಸಾಧ್ಯತೆಯನ್ನು ಸನಿಹಕ್ಕೆ ತರುವಂತಿದೆ. ಗಾಂಧಿಯನ್ನು ಬೈದರೆ ಯಾರಿಗೂ ಅಪಾಯವಿಲ್ಲ. (ಗಾಂಧಿಗೂ ಇಲ್ಲ!) ಏಕೆಂದರೆ ಗಾಂಧಿ ಯಾವುದೇ ಒಂದು ಗೂಂಡಾತಂಡದ ನಾಯಕರಲ್ಲ; ಪುಂಡುಪೋಕರಿತನದ ಪ್ರತೀಕವೂ ಅಲ್ಲ. ಆದರೂ ಅವರನ್ನು ಬೈದದ್ದಕ್ಕೆ ಆ ಸಂಸದೀಯನ ವಿರುದ್ಧ ಅವರ ಮಾತುಗಳನ್ನು ಅಶಿಸ್ತೆಂದು ಪರಿಗಣಿಸಿ ಅವರದೇ ಪಕ್ಷವು ಕಾರಣ ಕೇಳುವ ನೋಟೀಸು ನೀಡಿದೆ; ಸಂಸದೀಯ ಸಭೆಗೆ ನಿಷೇಧ ಹೇರಿದೆ. ತಮಾಷೆಯೆಂದರೆ ಅವರು ತಾನು ಹೀಗೆ ಹೇಳಲೇ ಇಲ್ಲವೆಂದು ಮತ್ತು ತನ್ನ ಮಾತುಗಳನ್ನು ಮಾಧ್ಯಮಗಳು ತಿರುಚಿವೆಯೆಂಬ ರಕ್ಷಣಾತ್ಮಕ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕ ಸ್ಮರಣೆಯು ತತ್ಕಾಲದ್ದಾದ್ದರಿಂದ ಇನ್ನೊಂದೆರಡು ದಿನಗಳಲ್ಲಿ ಈ ನಾಟಕ ಮುಗಿದು ಎಲ್ಲವೂ ತಣ್ಣಗಾಗಬಹುದು. ಪ್ರಾಯಃ ಇದರೊಂದಿಗೆ ಅವರಿಗೂ ಗಾಂಧಿಗೂ ಮುಕ್ತಿ ಸಿಗಬಹುದು.

ಪಕ್ಷರಾಜಕೀಯದ ರಾಜಕಾರಣ ಹೇಗಿದೆಯೆಂದರೆ ಯಾವುದೇ ಆಕ್ಷೇಪಾರ್ಹ ಅಥವಾ ವಿವಾದಾಸ್ಪದ ನಡೆ-ನುಡಿ ವೈಯಕ್ತಿಕ. ಇದರಿಂದಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುವ ಅಪಾಯವಿಲ್ಲ. ಪಕ್ಷಕ್ಕೆ ವೈಯಕ್ತಿಕ ಮತ್ತು ಸಾಮೂಹಿಕ ಎಂಬ ಎರಡು (ಅ)ನೈತಿಕ ನೆಲೆಗಟ್ಟುಗಳು ಸ್ಥಾಪಿತವಾದಂತಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ತಮ್ಮ ವರದಿ(ಗಳು) ಸರಿಯಾಗಿವೆ, ಸತ್ಯವಾಗಿವೆ, ಅವುಗಳನ್ನು ಸಾಬೀತು ಮಾಡುತ್ತೇವೆ ಎಂದು ಹೇಳುವ ಕನಿಷ್ಠ ಲಜ್ಜೆಯನ್ನಾಗಲೀ ಸ್ವಾಭಿಮಾನವನ್ನಾಗಲೀ ತೋರಿಸುತ್ತಿಲ್ಲ. ಇನ್ನು ಕೆಲವು ಮಾಧ್ಯಮಿಗಳು ಬಾಡಿಗೆ ಬಂಟರಂತೆ ಅಥವಾ ಪೀಕದಾನಿಗಳಂತೆ ಎಲ್ಲ ಹೇಳಿಕೆಗಳನ್ನು ನಿರ್ಮಮವಾಗಿ ದಾಖಲಿಸುವ ಯಂತ್ರಗಳಾಗಿವೆ. ‘ಹೀಗೆ ಹೇಳಿದರು’ ಎಂದು ಪ್ರತ್ಯಕ್ಷದರ್ಶಿ ವರದಿ ಮಾಡುವವರೂ ಅವರೇ; ತಾವೇ ವರದಿ ಮಾಡಿದ ಮಾತುಗಳ ಪ್ರಕಟನೆಯ ಆನಂತರ ‘ಹೀಗೆ ಹೇಳಿಲ್ಲವೆಂದು ಸ್ಪಷ್ಟೀಕರಿಸಿದರು’ ಎಂದು ವರದಿಮಾಡುವವರೂ ಅವರೇ!

ಇವೆಲ್ಲದರ ಹಿಂದೆ ಒಂದು ಇತಿಹಾಸ ಅಥವಾ ಹಿನ್ನೆಲೆಯಿದ್ದೇ ಇದೆ. ಅದನ್ನು ಸೂಕ್ಷ್ಮವಾಗಿ ವಿವೇಚಿಸಬಹುದು:
ರಾಜಕಾರಣಿಗಳಿಂದ- ಅವರು ಸಂಸದರೇ ಇರಲಿ, ಶಾಸಕರೇ ಇರಲಿ, ಅವರು ನೇರವಾಗಿ ಇಲ್ಲವೇ ಪರೋಕ್ಷವಾಗಿ ನಮ್ಮಿಂದಲೇ ಆಯ್ಕೆಯಾಗಿ ಹೋಗುವವರು. ಹೀಗಾಗಿ ಅವರ ಅಭಿವ್ಯಕ್ತಿಗಳನ್ನು ನಮ್ಮ ಅಭಿವ್ಯಕ್ತಿಗಳೆಂದೇ ತಿಳಿಯಬೇಕಾಗಿದೆ. ಒಂದು ಕಾಲವಿತ್ತು. ರಾಜಕೀಯದ ಎಲ್ಲ ಕೊಳಕುಗಳ ನಡುವೆಯೂ ಅನೇಕ ಒಳ್ಳೆಯವರು ಆಯ್ಕೆಯಾಗುತ್ತಿದ್ದರು. ಅವರಿಗೊಂದು ಲಕ್ಷಣವಿತ್ತು; ಗೌರವವಿತ್ತು. ಅವರಿಂದ ಜನಸಾಮಾನ್ಯರು ಕಲಿಯುವುದು ಬೇಕಷ್ಟಿತ್ತು. ಆಡಳಿತ, ಜನಸಂಪರ್ಕ, ಸಾಮಾಜಿಕ ಸುಧಾರಣೆ ಇತ್ಯಾದಿಗಳಲ್ಲಿ ಅವರು ಮಾದರಿಗಳೂ ಮಾರ್ಗದರ್ಶಕರೂ ಆಗಿರುತ್ತಿದ್ದರು. ಈ ಪೈಕಿ ಕೆಲವರು ಅಸಾಧಾರಣ ವಾಗ್ಮಿಗಳೂ ಅಥವಾ ಹೆಚ್ಚಿನ ವಿದ್ಯಾವಂತರೂ ಆಗಿರುತ್ತಿದ್ದರು. ಹೀಗಲ್ಲದೇ ಇದ್ದವರೂ ತಮ್ಮ ಸರಳ ನಡೆನುಡಿ ಮತ್ತು ತಮ್ಮ ನಾಯಕತ್ವದ ಗುಣಗಳಿಂದ ಜನಾಕರ್ಷಕರಾಗಿರುತ್ತಿದ್ದರು. ಅಕ್ಷರಾಭ್ಯಾಸವಿಲ್ಲದವರೂ ಅನುಭವದಿಂದ ಜನಮನ ಗೆಲ್ಲುತ್ತಿದ್ದರು.

ಈಗಲೂ ಅನೇಕ ಒಳ್ಳೆಯ ಜನಪ್ರತಿನಿಧಿಗಳಿದ್ದಾರೆ. ಆದರೆ ಅವರು ಅಲ್ಪಸಂಖ್ಯಾತರು ಮಾತ್ರವಲ್ಲ ಅಪರೂಪವಾಗುತ್ತಿದ್ದಾರೆ; ಕ್ಷೀಣದನಿಗಳಾಗಿದ್ದಾರೆ. ಸಾತ್ವಿಕತೆಯಿಂದ ಭೂಷಣರಾಗಿರುತ್ತಿದ್ದವರಿಗೆ ಆಯ್ಕೆಯಾಗುವ ಅದೃಷ್ಟ ತೀರ ಕಡಿಮೆಯಾಗಿದೆ. ಬಾಹುಬಲ, ಹಣಬಲ, ಇವುಗಳೇ ಶಕ್ತಿಕೇಂದ್ರಗಳಾಗಿ ಬದಲಾಗಿವೆ. ಅಕ್ಷರಾಭ್ಯಾಸವಿದ್ದವರೂ ತಾವು ಕಲಿತದ್ದನ್ನು ಒಳ್ಳೆಯದಕ್ಕೆ, ಜನಹಿತಕ್ಕೆ ವ್ಯಯಿಸುವುದನ್ನು ಮರೆತು ವೈಯಕ್ತಿಕ ಲಾಭಕ್ಕೆ ಬಳಸುತ್ತಿದ್ದಾರೆ. ಇದರಿಂದಾಗಿ ಯಾವುದು ವರ್ಜ್ಯವಾಗಬೇಕಾಗಿತ್ತೋ ಅದೇ ರಸಗವಳವಾಗುತ್ತಿದೆ. ಸಾಮಾಜಿಕ ಮೂಲವೆಂಬ ಕೆಸರಿನಿಂದ ತಾವರೆ ಹುಟ್ಟುವುದರ ಬದಲಾಗಿ ತಾವರೆಯೋ ಇನ್ನೊಂದೋ ಅಂತೂ ಪ್ರಕೃತಿಯಿಂದ ಕೆಸರು ಹುಟ್ಟುತ್ತಿದೆ.

ಮಾಧ್ಯಮವು ರಾಜಕಾರಣದ ಹುಳುಕುಗಳನ್ನು ಅನಾವರಣಗೊಳಿಸಿ ಸಮಾಜದ ಹಿತವನ್ನೂ ಆರೋಗ್ಯವನ್ನೂ ಸುಸ್ಥಿರಗೊಳಿಸುವುದೆಂದು ನಂಬಲಾಗಿತ್ತು. ಮಾಧ್ಯಮದಲ್ಲಿ ಬಂದದ್ದನ್ನು ಜನರು ನಂಬುತ್ತಿದ್ದರು. ಬಹುತೇಕ ಪತ್ರಕರ್ತರ ನಡೆನುಡಿಯೂ ಒಳ್ಳೆಯ ರಾಜಕಾರಣಿಗಳಂತೆ ಮಾರ್ಗದರ್ಶಕವಾಗಿರುತ್ತಿತ್ತು. ಅವರು ಸಾಮಾನ್ಯವಾಗಿ ಯಾವ ಆಮಿಷಕ್ಕೂ ಒಳಗಾಗುತ್ತಿರಲಿಲ್ಲ. ‘‘ಒಂದೂರಿನಲ್ಲಿ ಒಬ್ಬ ಬಡ ಬ್ರಾಹ್ಮಣನಿದ್ದ’’ ಎಂದು ಕತೆ ಆರಂಭವಾಗುವಂತೆ ‘‘ಒಂದು ಪಟ್ಟಣದಲ್ಲಿ ಒಬ್ಬ ಬಡ ಪತ್ರಕರ್ತನಿದ್ದ’’ ಎಂದು ಬರೆದರೆ ಅದು ಸತ್ಯವಾದ ಹೇಳಿಕೆಯಾಗಿರುತ್ತಿತ್ತು. ಯಾವೊಂದು ಸಭೆ, ಸಮಾರಂಭ, ಕಾರ್ಯಕ್ರಮಗಳನ್ನು ಸದ್ದಿಲ್ಲದೆ ಹಾಜರಿದ್ದು ವರದಿಮಾಡುತ್ತಿದ್ದ. ಹೀಗೆ ವರದಿ ಮಾಡಿದ ಪತ್ರಕರ್ತ ಯಾರೆಂದು ಸಾರ್ವಜನಿಕರಿಗೆ ಗೊತ್ತಾಗುತ್ತಿರಲಿಲ್ಲ. ಗೊತ್ತಾದಾಗ ಅವನ ನಿರಾಡಂಬರ ಬದುಕನ್ನು ಮತ್ತು ವೃತ್ತಿಕೌಶಲ್ಯವನ್ನು ಕಂಡು ಜನ ಬೆರಗಾಗುತ್ತಿದ್ದರು. ರಾಜಕಾರಣಿಯೊಬ್ಬ ಎಷ್ಟೇ ಶಕ್ತನಾಗಿರಲಿ, ಮಾಧ್ಯಮಕ್ಕೆ ಹೆದರುತ್ತಿದ್ದ. ಇದರಿಂದಾಗಿ ಬಹಿರಂಗ ವ್ಯವಹಾರದಲ್ಲಿ, ಸಾರ್ವಜನಿಕ ಜೀವನದಲ್ಲಿ ಕನಿಷ್ಠ ಮಟ್ಟದ ಪಾವಿತ್ರ್ಯವಾದರೂ ಉಳಿದಿತ್ತು. ಇದೇ ಮೌಲ್ಯಗಳು ಅಧಿಕಾರ ರಾಜಕಾರಣಕ್ಕೂ ಅನ್ವಯಿಸುತ್ತದೆ. ಮಾಸ್ತಿಯಂಥವರು ಅಧಿಕಾರದಲ್ಲಿದ್ದರೆ ಅದಕ್ಕೂ ಶೋಭೆ ಬರುತ್ತದೆ. ವ್ಯಕ್ತಿಯಿಂದ ಸ್ಥಾನಕ್ಕೆ ಗೌರವವಲ್ಲದೆ ಸ್ಥಾನದಿಂದ ವ್ಯಕ್ತಿಗೆ ಗೌರವವಿಲ್ಲ. ಅಧಿಕಾರವಿಲ್ಲದೆಯೂ ಗೌರವಕ್ಕೆ ಪಾತ್ರರಾಗಬೇಕಾದರೆ ಗಾಂಧಿಯಂತಹ ವ್ಯಕ್ತಿತ್ವ ಬೇಕು ಅಥವಾ ಅವರಿಗಿಂತ ಕಿಂಚಿತ್ ಕಡಿಮೆಯೆನಿಸಿದ ಬಹುಶ್ರುತರೋ, ಬಹುಮಾನ್ಯರೋ ಆಗಿರಬೇಕು.

ಕಾಯಕವೇ ಕೈಲಾಸವೆಂಬಂತೆ ಸಾಮಾಜಿಕ ಹಿತಚಿಂತನೆಯ ಧ್ಯೇಯದೊಂದಿಗೆ ದುಡಿದವರಾಗಿರಬೇಕು. ಜಯಪ್ರಕಾಶ ನಾರಾಯಣರಾಗಲೀ, ಹರೇಕಳ ಹಾಜಬ್ಬರಾಗಲೀ ಯಾವ ಅಧಿಕಾರದಲ್ಲೂ ಇದ್ದವರಲ್ಲದಿದ್ದರೂ ಅವರಿಗೆ ಸಮಾಜ ಮನ್ನಣೆ ನೀಡಿದೆ. ಇವೆಲ್ಲ ಯುಗಾಂತರದ ಕಲ್ಪನೆಗಳೆಂಬಂತೆ ಭಾಸವಾಗುತ್ತಿದೆ. ಇಂದು ಮಾಧ್ಯಮವೆಂಬುದು ರಾಜಕಾರಣದಂತೆ ಹಣ ಮಾಡುವ, ಅಧಿಕಾರ ಲಾಲಸೆಯ ಮೆಟ್ಟಲುಗಳಾಗಿವೆ ಅಥವಾ ಆಗುತ್ತಿವೆ. ರಾಜಕಾರಣಿಗಳೂ (ಅಧಿಕಾರಿಗಳೂ!) ಮಾಧ್ಯಮಗಳೂ ಒಂದೇ ನಾಣ್ಯದ ಎರಡು ಮುಖಗಳಂತೆ ವರ್ತಿಸುತ್ತಿವೆ ಮತ್ತು ನಡೆದುಕೊಳ್ಳುತ್ತಿವೆ. ರಾಜಕಾರಣವು ಮಾಧ್ಯಮದ ಗುರುತರ ಅಂಗವಾಗಿದ್ದು ಶಿವನ ದೇವಾಲಯದಲ್ಲಿ ಆತನಿಗಭಿಮುಖವಾಗಿ ನಂದಿ ಕುಳಿತಂತೆ ಮಾಧ್ಯಮಿಗಳು ಸದಾ ರಾಜಕೀಯಶಿವನನ್ನೇ ನೋಡುತ್ತ ಇತರರಿಗೆ ಬೆನ್ನು ಹಾಕಿ ಕುಳಿತಂತಿವೆ. ರಾಜಕಾರಣಿಗಳು ಇನ್ನೇನನ್ನು ಮರೆತರೂ ಮಾಧ್ಯಮಿಗಳನ್ನು ಹೊಗಳುವುದನ್ನು ಇಲ್ಲವೇ ಸ್ಮರಿಸುವುದನ್ನು ಮಾತ್ರ ಮರೆಯಲಾರರು. ಅಷ್ಟೇ ಅಲ್ಲ, ಯಾವುದೇ ಸಭೆ ಸಮಾರಂಭದಲ್ಲಿ ದೇವದೇವತೆಗಳಿಗೆ ಪೂಜೆಪುನಸ್ಕಾರಗಳಲ್ಲಿಟ್ಟಂತೆ ಪ್ರತ್ಯೇಕವಾದ ಸುಖಾಸೀನಗಳನ್ನು ನೀಡದಿದ್ದರೆ ಅದೇ ಒಂದು ವಿವಾದವಾಗುವಂತಿದೆ.

ರಾಜಕೀಯೇತರ, ಅಧಿಕಾರೇತರ ವ್ಯಕ್ತಿಗಳು ಎಷ್ಟೇ ಹಿರಿಯರಾಗಿರಲಿ, ವಿದ್ವಾಂಸರಾಗಿರಲಿ, ಸಾಂಸ್ಕೃತಿಕ ಸಂಪನ್ನರಾಗಿರಲಿ, ರಾಜಕಾರಣಿಯೊಬ್ಬನಿದ್ದರೆ ಮರುದಿನದ ವರದಿಯಲ್ಲಿ ರಾಜಕಾರಣಿಗೇ ಮಣೆ. ಆತನದ್ದೇ ಫೋಟೊ. ಆತನ ನುಡಿಮುತ್ತುಗಳಿಗೇ ಅಗ್ರಪೂಜೆ. ವಚನಕಾರರಿಂದ ಮೊದಲ್ಗೊಂಡು ಕ್ರೀಡಾಸಮಾಚಾರದ ವರೆಗೆ ರಾಜಕಾರಣಿಗಳು ಎಲ್ಲ ಕಡೆಗಳಲ್ಲೂ ಹೀಗೆ ಹೇಳಿದರು ಎಂಬ ವರದಿಯೊಂದಿಗೆ ವಿಜೃಂಭಿಸಿದರೆ ಅದಕ್ಕೆ ಮಾಧ್ಯಮಗಳೇ ಕಾರಣ. ಈಚೀಚೆಗೆ ವರ್ಷವಿಡೀ ವಿವಿಧ ಪೌರಾಣಿಕ- ಚಾರಿತ್ರಿಕ-ಜಾತೀಯ-ಮತಧರ್ಮಗಳ ನಾಯಕರುಗಳನ್ನು ಸ್ಮರಿಸುವ ಕಾಟಾಚಾರದ ಸರಕಾರಿ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳೋ ಸರಕಾರಿ ಅಧಿಕಾರಿಗಳೋ ಇದ್ದರೆ ಅವರು ಮಾತನಾಡಿದ ಹುಸಿಮುತ್ತುಗಳು ಮತ್ತೆ ಮಾಧ್ಯಮದಲ್ಲಿ ನುಡಿಮುತ್ತುಗಳಾಗಿ ದುರಸ್ತಿಗೊಂಡು ಪ್ರಕಟವಾಗುತ್ತವೆ. ಒಬ್ಬ ರಾಜಕಾರಣಿ- ಬಹಿರಂಗವಾಗಿಯೇ ಭ್ರಷ್ಟನೆನಿಸಿಕೊಂಡವನು- ಬಸವಣ್ಣನನ್ನು ಎಲ್ಲರೂ ಅನುಸರಿಸಬೇಕೆಂದು ಚೀಟಿಯನ್ನು ಹಿಡಿದುಕೊಂಡು ಮಾತನಾಡಿದ್ದರೂ ಅದೇ ಮಂತ್ರಬಿನ್ನಹವೆಂಬಂತೆ ಮಾಧ್ಯಮದಲ್ಲಿ ವರದಿಯಾಗುತ್ತದೆ. ಅದೇ ಸಮಾರಂಭದಲ್ಲಿ ಬಸವಣ್ಣನಂತೆಯೇ ಕರ್ಮಯೋಗಿಯಾಗಿದ್ದವರೊಬ್ಬರು ಭಾಗವಹಿಸಿ ತನ್ನ ಕಾಯಕದ ಕುರಿತು ಮಾರ್ಮಿಕವಾಗಿಯೇ ಮತ್ತು ಪ್ರಭಾವಶಾಲಿಯಾಗಿಯೇ ಮಾತನಾಡಿದರೂ ಅವರ ಮಾತುಗಳ ಒಂದೂ ವಾಕ್ಯವು ವರದಿಯಾಗುವುದಿಲ್ಲ. ಬದಲಾಗಿ ಅವರೂ ಮಾತನಾಡಿದರು ಎಂದು ಉಲ್ಲೇಖವಾಗುತ್ತದೆ.

ರಾಜಕಾರಣಿಗಳೂ ಅಧಿಕಾರಸ್ಥರೂ ಬಹುತೇಕ ಮಾಧ್ಯಮಿಗಳಿಗೆ ‘ಗೂಗಲ್’ನಂತೆ. ಎಲ್ಲ ಜ್ಞಾನಕ್ಕೂ ಆಗರ; ಆಧಾರ. ಮಾಧ್ಯಮಿಗಳು, ರಾಜಕಾರಣಿಗಳು ಮತ್ತು ಅಧಿಕಾರಿಗಳು ಇಂದು ಒಂದು ಭ್ರಷ್ಟ ತ್ರಿಕೋನದ ಮೂರು ಮೂಲೆಗಳಂತೆ ವರ್ತಿಸುತ್ತಿರುವುದನ್ನು ಗುರುತಿಸಬಹುದು. ಈಗಿನ ಖಾಸಗೀ/ವಿದ್ಯುನ್ಮಾನ ಮಾಧ್ಯಮಿಗಳು ವಿದ್ಯೆಯ ಪರ್ವತಗಳಂತೆ ಮಾತನಾಡುವುದನ್ನು ಮತ್ತು ಇತರರ ಮಾತುಗಳನ್ನು ತಿರುಚಿ ತಮ್ಮ ಕಲ್ಪನಾಶಕ್ತಿಯನ್ನೂ ಸೃಜನಶೀಲತೆಯನ್ನೂ ಪ್ರದರ್ಶಿಸುವುದನ್ನು ಕಂಡರೆ ಈ ವಿಜ್ಞಾನ ಯಾಕಾದರೂ ಟಿವಿ ಮುಂತಾದ ಮಾಧ್ಯಮಗಳನ್ನು ಸಂಶೋಧಿಸಿತೋ ಎಂಬ ಮರುಕ ಹುಟ್ಟುತ್ತದೆ. ಸೂರ್ಯನ ಬೆಳಕಿನಷ್ಟೇ ಸ್ಪಷ್ಟವಿರುವ ಈ ವಿಚಾರದ ಬಗ್ಗೆ ಹೇಗೆ/ಎಷ್ಟು ಹೇಳಿದರೂ ಕಡಿಮೆಯೇ. ಸಾರ್ವಜನಿಕ ಶುಚಿತ್ವದ ಬಗ್ಗೆ ದೇಶವಿಡೀ ಅಭಿಯಾನ ನಡೆಯುತ್ತಿದೆ. ಆದರೆ ಮಾತು, ಕೃತಿ ಇವುಗಳ ಶುಚಿತ್ವದ ಬಗ್ಗೆ ಯಾರಿಗೂ ಗಮನವಿಲ್ಲ ಮಾತ್ರವಲ್ಲ, ಕೈ-ಬಾಯಿ ಇಂದು ಹೊಲಸಾಗುತ್ತಿರುವಷ್ಟು ಹಿಂದೆಂದೂ ಆಗಿರಲಿಲ್ಲ. ಇದರಲ್ಲಿ ಮಾಧ್ಯಮದ, ರಾಜಕಾರಣದ, ಅಧಿಕಾರದ ಪಾಲೆಷ್ಟು ಎಂದು ಅಳೆಯಲು ಅವಮಾನದಂಡಗಳೇ ಇಲ್ಲ. ಆದ್ದರಿಂದ ಭೌತಿಕ ಕಸವನ್ನು ದೂರ ಎಸೆದಷ್ಟೂ ಬೌದ್ಧಿಕ, ಮಾನಸಿಕ ಕಸ ಈ ಮೂರು ವರ್ತುಲಗಳಲ್ಲೂ ಹೆಚ್ಚುಹೆಚ್ಚು ಸೃಷ್ಟಿಯಾಗುತ್ತಿದೆ.

ಯೋಗಿಗಳು, ಸ್ವಾಮಿಗಳು ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬುದನ್ನು ಗೌರವದಿಂದ ಕಾಣುವ ಸುವರ್ಣಯುಗವೊಂದಿತ್ತು. ಮಹಾಭಾರತವನ್ನು ಯೋಗೀಶ್ವರರ ತತ್ವವಿಚಾರವೆಂದು ಹೇಳುವುದಿತ್ತು. ಆದರೆ ಇಂದು ಇಂತಹ ಗೌರವಾರ್ಹ ಸ್ಥಾನಗಳಲ್ಲಿ ಕುಳಿತುಕೊಂಡವರು ಸ್ವತಃ ರಾಜಕಾರಣಿಗಳಾಗಿ ಹೇಳುವ ಮಾತುಗಳು, ನಡೆಸುವ ಕೃತ್ರಿಮಗಳು, ಮಾಡುವ ಅನಾಚಾರಗಳು ಭಾರತೀಯವೆಂದು ನಾವು ಬೀಗಿಕೊಳ್ಳುವ ಸಂಸ್ಕೃತಿಯನ್ನು ಆಳ-ಪಾತಾಳಕ್ಕೆ ತಳ್ಳಿವೆ. ಮಕ್ಕಳು ಕೇಳಬಾರದ ಮಾತು-ಕತೆಗಳು ಈ ಮಂದಿಯಿಂದ ರೂಪುಗೊಂಡಿವೆ. ಇದು ಹೀಗೇ ಬೆಳೆದರೆ ಇವರ ಜೀವನಕತೆಗಳು ಮುಂದೆ ಕಾಲಾಂತರದಲ್ಲಿ ಪಠ್ಯಪುಸ್ತಕವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಸ್ಥಿತಿ-ಗತಿ ಇಷ್ಟು ಶೋಚನೀಯವಾಗುತ್ತದೆಂದು ಒಂದೆರಡು ದಶಕಗಳ ಹಿಂದೆ ಯಾರೂ ಊಹಿಸಿರಲಿಕ್ಕಿಲ್ಲ. ಇವುಗಳನ್ನು ಸರಿಪಡಿಸುವಲ್ಲಿ ಜನರಿಗೆ ಆಯ್ಕೆಯೇ ಇಲ್ಲವೇನೋ? ಜಲಪ್ರಳಯವಾಗಿ ಹಳೆಯ ಯುಗವು ಮುಳುಗಿ ಮುಗಿದು ಹೊಸ ಯುಗ ಸೃಷ್ಟಿಯಾದಂತೆ ಎಲ್ಲವೂ ನಾಶವಾಗಿಯೇ ಹೊಸ ಬೆಳಕು ಮೂಡಬೇಕಾದರೆ ಅದಕ್ಕಿಂತ ದುರಂತ ಸಾಧ್ಯತೆ ಬೇರೆ ಇಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)