varthabharthi


ಪ್ರಚಲಿತ

ಕನ್ನಡ ಸಾಹಿತ್ಯ ಜಾತ್ರೆಯ ಸುತ್ತಮುತ್ತ

ವಾರ್ತಾ ಭಾರತಿ : 10 Feb, 2020
ಸನತ್ ಕುಮಾರ್ ಬೆಳಗಲಿ

ಈಗಾಗಲೇ ಮಿಥಿಕ್ ಸೊಸೈಟಿಯಂತಹ ಪ್ರತಿಷ್ಠಿತ ಸಂಸ್ಥೆಗಳನ್ನು ಆಕ್ರಮಿಸಿರುವ ಈ ಕರಾಳ ಶಕ್ತಿಗಳು ಕನ್ನಡಿಗರ ಈ ಹೆಮ್ಮೆಯ ಸಂಸ್ಥೆಯನ್ನು ನುಂಗುವ ಅಪಾಯವಿದೆ. ಕಲಬುರಗಿ ಸಮ್ಮೇಳನದ ಮೊದಲ ದಿನದ ಉದ್ಘಾಟನಾ ಸಮಾರಂಭದಲ್ಲಿ ಮಾತಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ, ‘‘ಕನ್ನಡಾಂಬೆಯನ್ನು ಭಾರತ ಮಾತೆಯ ವಿರುದ್ಧ ಎತ್ತಿ ಕಟ್ಟಿದರೆ ಸಹಿಸಲ್ಲ’’ ಎಂದು ಪರೋಕ್ಷವಾಗಿ ಕನ್ನಡ ಅಸ್ಮಿತೆಯ ವಿರುದ್ಧ ಕನ್ನಡ ಚಳವಳಿಯ ವಿರುದ್ಧ ಬೆದರಿಕೆ ಭಾಷೆಯಲ್ಲಿ ಮಾತಾಡಿದ್ದು ಅವರ ಹಿಡನ್ ಅಜೆಂಡಾಕ್ಕೆ ಸಾಕ್ಷಿಯಾಗಿದೆ.


ಕನ್ನಡ ಸಾಹಿತ್ಯ ಸಮ್ಮೇಳನ ಎಂಬ ಜಾತ್ರೆಗೆ ಕಳೆದ 3 ದಶಕಗಳಿಂದ ಹೋಗುತ್ತಿರುವೆ. ಒಂದೆರಡು ಬಾರಿ ಕೆಲ ಗೋಷ್ಠಿಗಳಲ್ಲೂ ಪಾಲ್ಗೊಂಡಿದ್ದೆ. ಮೊದಲು ಸರಕಾರದ ಅನುದಾನ ಇಲ್ಲದಾಗ ಸಾವಿರ ಸಂಖ್ಯೆಯಲ್ಲಿ ಸೇರುತ್ತಿದ್ದ ಕನ್ನಡಿಗರ ಸಂಖ್ಯೆ ಈಗ ಲಕ್ಷಾಂತರವಾಗಿದೆ. ಈ ಬಾರಿ ಕಲಬುರಗಿ ಕನ್ನಡ ಜಾತ್ರೆಗೆ 5 ಲಕ್ಷದ ವರೆಗೆ ಜನ ಬಂದಿದ್ದರು. ಅಷ್ಟು ಜನರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.ಅಷ್ಟು ಬಿಟ್ಟರೆ ಈ ಸಮ್ಮೇಳನ ನೀಡಿದ ಸಂದೇಶವೇನು ಎಂದು ಹುಡುಕಲು ಹೊರಟರೆ ಶೂನ್ಯ ಗೋಚರಿಸುತ್ತದೆ. ನಾಡು, ನುಡಿ, ಸಾಹಿತ್ಯ, ಅಭಿವ್ಯಕ್ತಿ ಸ್ವಾತಂತ್ರದ ಪ್ರಶ್ನೆಯಲ್ಲಿ ಪ್ರತಿರೋಧದ ಧ್ವನಿಗಳಿದ್ದರೂ ಅಧಿಕೃತವಾಗಿ ಸಮ್ಮೇಳನ ಮೌನವಾಗಿತ್ತು.

ಕಸಾಪ ಮೌನವಾಗಿದ್ದರೂ ಸಮಾರೋಪ ಸಮಾರಂಭದಲ್ಲಿ ಮಾತಾಡಿದ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಾಹಿತಿಗಳ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಸರಕಾರದ ದಮನ ನೀತಿಯನ್ನು ಕಟುವಾಗಿ ಟೀಕಿಸಿದರು. ಅಷ್ಟೇ ಅಲ್ಲ, ಬೀದರ್‌ನ ಶಾಹೀನ್ ಶಾಲೆಯ ಮಕ್ಕಳ ನಾಟಕ ಪ್ರದರ್ಶನಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ತಕ್ಷಣ ವಾಪಸ್ ಪಡೆಯಲು ಒತ್ತಾಯಿಸಿದರು. ಈ ಕುರಿತು ಮಗುವಿನ ತಾಯಿ ಮತ್ತು ಶಿಕ್ಷಕಿಯ ಬಂಧನವನ್ನು ಅವರು ಖಂಡಿಸಿದರು. ಆದರೆ, ಈ ಕುರಿತು ಕಸಾಪ ಒಂದೇ ಒಂದು ನಿರ್ಣಯ ಕೈಗೊಳ್ಳುವ ಧೈರ್ಯ ತೋರಿಸಲಿಲ್ಲ.

ಸರಕಾರದ ಅನುದಾನದಲ್ಲಿ ನಡೆಯುವ ಸಾಹಿತ್ಯ ಜಾತ್ರೆ ಈ ಬಾರಿ ಅಲ್ಲಲ್ಲಿ ಕೇಸರಿಮಯವಾಗಿ ಗೋಚರಿಸಿತು. ನಗರದಲ್ಲಿ ಕಟ್ಟಿದ ಸ್ವಾಗತ ಕಮಾನುಗಳ ಬಣ್ಣ ಸಂಪೂರ್ಣ ಕೇಸರಿಮಯವಾಗಿತ್ತು. ಕನ್ನಡದ ಬಾವುಟಗಳನ್ನು, ಹಳದಿ, ಕೆಂಪು ಬಣ್ಣದ ಭಿತ್ತಿಚಿತ್ರಗಳು ಹುಡುಕಿದರೂ ಸಿಗುತ್ತಿರಲಿಲ್ಲ. ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರರ ಮೌನ ಸಮ್ಮತಿ ಇಲ್ಲದೆ ಇದು ನಡೆದಿರಲು ಸಾಧ್ಯವಿಲ್ಲ.

ಈ ಬಾರಿಯ ಸಾಹಿತ್ಯ ಸಮ್ಮೇಳನ ಅನೇಕ ಕಾರಣಗಳಿಂದ ವಿವಾದದ ಕೇಂದ್ರ ಬಿಂದುವಾಗಿತ್ತು. ಆರಂಭದಲ್ಲಿ ಸಮ್ಮೇಳನ ನಡೆಯುತ್ತದೋ ಇಲ್ಲವೊ ಎಂಬ ನಿರುತ್ಸಾಹದ ವಾತಾವರಣ ಕಾಣಿಸುತ್ತಿತ್ತು. ಆದರೆ, ಜಿಲ್ಲಾಧಿಕಾರಿ ಶರತ್ ಮತ್ತು ಅವರ ಸಿಬ್ಬಂದಿಯ ಪರಿಶ್ರಮದಿಂದ ಸಮ್ಮೇಳನ ಯಶಸ್ವಿಯಾಯಿತು.

ಈ ಸಮ್ಮೇಳನದ ಮೇಲೆ ಕಳೆದ ತಿಂಗಳು ಶೃಂಗೇರಿಯಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಮೋಡ ಕವಿದಿತ್ತು. ಅಲ್ಲಿ ಕಲ್ಕುಳಿ ವಿಠಲ್ ಹೆಗ್ಗಡೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದನ್ನು ಸಚಿವ ಸಿ.ಟಿ.ರವಿ ಆಕ್ಷೇಪಿಸಿದ್ದು ಮಾತ್ರವಲ್ಲ ಅನುದಾನ ಸ್ಥಗಿತಗೊಳಿಸಿದ್ದು ಅದಕ್ಕೆ ಕಸಾಪ ಅಧ್ಯಕ್ಷ ಮನು ಬಳಿಗಾರ್ ಮೌನ ಸಮ್ಮತಿ ನೀಡಿದ್ದು ಮತ್ತು ಬಾಂಬ್ ಬೆದರಿಕೆ ಹಾಕಿದ್ದು ಇವೆಲ್ಲ ಅಂಶಗಳು ಸಮ್ಮೇಳನದಲ್ಲಿ ಮಾರ್ದನಿಸಿದವು.

ಮೊದಲ ದಿನದ ಗೋಷ್ಠಿಯಲ್ಲಿ ಮಾತಾಡಿದ ಕೆ.ನೀಲಾ ಅವರು ‘ಆರು ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತನ್ನು ಆಳುವ ಪಕ್ಷದ ಅಡಿಯಾಳಾಗಿಸಿದ ಪರಿಷತ್‌ನ ಅಧ್ಯಕ್ಷ ಮನು ಬಳಿಗಾರ್ ರಾಜೀನಾಮೆ ಕೊಟ್ಟು ಹೋಗಲಿ’ ಎಂದು ವೇದಿಕೆಯಲ್ಲಿ ನೇರವಾಗಿ ಹೇಳಿದಾಗ ಸಭಿಕರು ಕರತಾಡನದಿಂದ ಸ್ವಾಗತಿಸಿದರು.

ಈ ವಿಷಯ ಮೂರೂ ದಿನ ಸಮ್ಮೇಳನದಲ್ಲಿ ಬಿರುಗಾಳಿ ಎಬ್ಬಿಸಿತು. ಎರಡನೇ ದಿನ, ಪ್ರೊ.ಆರ್.ಕೆ.ಹುಡಗಿ, ಆರ್.ಪೂರ್ಣಿಮಾ, ಮೂರನೇ ದಿನ ಸಿನೆಮಾ ನಿರ್ದೇಶಕ ಬಿ.ಸುರೇಶ್, ಪ್ರಭು ಖಾನಾಪುರೆ ಮುಂತಾದವರು ಈ ವಿಷಯ ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಂಡರು.

ಪೌರತ್ವ ತಿದ್ದುಪಡಿ ಕಾನೂನಿನ ಬಗ್ಗೆ ಪದ್ಯ ಬರೆದದ್ದಕ್ಕಾಗಿ ಕೊಪ್ಪಳದ ಕವಿ ಸಿರಾಜ್ ಬಿಸರಳ್ಳಿ ವಿರುದ್ಧ ಎಫ್‌ಐಆರ್ ಹಾಕಿರುವ ಕುರಿತೂ ಸಮ್ಮೇಳನದಲ್ಲಿ ಮಾತಾಡಿದ ಅನೇಕರು ಖಂಡಿಸಿದರು. ಕೊನೆಯ ದಿನ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಧಾನ ಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೂಡ ಈ ಬಗ್ಗೆ ಮಾತಾಡಿದರು. ‘‘ಕವಿ, ಸಾಹಿತಿಗಳ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ತರುವುದು ಸರಿಯಲ್ಲ’’ ಎಂದು ನೇರವಾಗಿ ಹೇಳಿದರು. ಎಫ್‌ಐಆರ್ ವಾಪಸ್ ಪಡೆಯದಿದ್ದರೆ ಸಾಹಿತಿಗಳು ಜೈಲ್ ಬರೋ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಕೇಸರಿ ಜುಬ್ಬಾ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರು ಲೇಖಕರ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ಬಂದಿರುವ ಬಗ್ಗೆ ತುಟಿ ಬಿಚ್ಚಲಿಲ್ಲ. ಶೃಂಗೇರಿ ಘಟನೆಯ ಬಗೆಗೂ ಅವರು ಜಾಣ ಮೌನ ತಾಳಿದರು. ಇದಕ್ಕೆ ಬದಲಾಗಿ, ‘‘ಸಂಸ್ಕೃತ ರಾಷ್ಟ್ರಭಾಷೆಯಾಗಬೇಕು’’ ಎಂದು ಕರೆ ನೀಡಿದರು. ಮೂರನೇ ದಿನ ಸಂವಾದ ಕಾರ್ಯಕ್ರಮದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಬಂದ ಪ್ರಶ್ನೆಗಳಿಗೆ ತೇಲಿಸಿ ಉತ್ತರ ನೀಡಿದ ಅವರು ಅದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿರುವ ಬಗ್ಗೆ ದಲಿತ ಬಂಡಾಯ ಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದ ಬಹುತೇಕ ಲೇಖಕರು, ಶೋಷಣೆ, ಅಸ್ಪಶ್ಯತೆ ಬಗ್ಗೆ ಮಾತಾಡಿದರೆ ದೇಶದ್ರೋಹದ ಪಟ್ಟ ಕಟ್ಟಲಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಮತಾಂತರ ದೇಶದ್ರೋಹವಲ್ಲ ಎಂದ ಗುಲಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಡಾ.ಎಚ್.ಟಿ. ಪೋತೆ, ಅದು ನಮ್ಮ ಸಾಂವಿಧಾನಿಕ ಹಕ್ಕು ಎಂದು ಹೇಳಿದರು.

ಎರಡನೇ ದಿನ ಹಿರಿಯ ಲೇಖಕರ ಸನ್ಮಾನ ಸಮಾರಂಭದಲ್ಲಿ ಮಾತಾಡಿದ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ‘‘ಈಗ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವಾದ ಸಂವಿಧಾನಕ್ಕೆ ಗಂಡಾಂತರ ಬಂದಿದೆ. ಪ್ರಶ್ನಿಸುವವರ ಕತ್ತು ಹಿಸುಕಲಾಗುತ್ತದೆ. ಲೇಖಕರು ಇದರ ವಿರುದ್ಧ ಧ್ವನಿಯೆತ್ತಬೇಕು’’ ಎಂದು ಮನವಿ ಮಾಡಿದರು.

ಕಲಬುರಗಿ ಸಾಹಿತ್ಯ ಸಮ್ಮೇಳನ ಎಂಬ ಜಾತ್ರೆಯ ಮೂರು ದಿನಗಳ ವಿದ್ಯಮಾನಗಳನ್ನು ಗಮನಿಸಿದರೆ ಈ ಸ್ವಾಯತ್ತ ಸಂಸ್ಥೆ ಯನ್ನು ನುಂಗಲು ಕೋಮುವಾದಿ ಶಕ್ತಿಗಳು ಹೊಂಚು ಹಾಕಿದಂತೆ ಕಾಣುತ್ತದೆ.

ಈಗಾಗಲೇ ಮಿಥಿಕ್ ಸೊಸೈಟಿಯಂತಹ ಪ್ರತಿಷ್ಠಿತ ಸಂಸ್ಥೆಗಳನ್ನು ಆಕ್ರಮಿಸಿರುವ ಈ ಕರಾಳ ಶಕ್ತಿಗಳು ಕನ್ನಡಿಗರ ಈ ಹೆಮ್ಮೆಯ ಸಂಸ್ಥೆಯನ್ನು ನುಂಗುವ ಅಪಾಯವಿದೆ. ಕಲಬುರಗಿ ಸಮ್ಮೇಳನದ ಮೊದಲ ದಿನದ ಉದ್ಘಾಟನಾ ಸಮಾರಂಭದಲ್ಲಿ ಮಾತಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ, ‘‘ಕನ್ನಡಾಂಬೆಯನ್ನು ಭಾರತ ಮಾತೆಯ ವಿರುದ್ಧ ಎತ್ತಿ ಕಟ್ಟಿದರೆ ಸಹಿಸಲ್ಲ’’ ಎಂದು ಪರೋಕ್ಷವಾಗಿ ಕನ್ನಡ ಅಸ್ಮಿತೆಯ ವಿರುದ್ಧ ಕನ್ನಡ ಚಳವಳಿಯ ವಿರುದ್ಧ ಬೆದರಿಕೆ ಭಾಷೆಯಲ್ಲಿ ಮಾತಾಡಿದ್ದು ಅವರ ಹಿಡನ್ ಅಜೆಂಡಾಕ್ಕೆ ಸಾಕ್ಷಿಯಾಗಿದೆ.

ಎನ್‌ಆರ್‌ಸಿ, ಸಿಎಎ ಕಾಯ್ದೆ ಜಾರಿಗೊಳಿಸಿ ಅಲ್ಪಸಂಖ್ಯಾತರ ಮಾತ್ರವಲ್ಲ ತಳ ಸಮುದಾಯಗಳನ್ನು ಮುಗಿಸುವ ಹುನ್ನಾರ ನಡೆದಿದೆ. ಈಗ ಸುಮ್ಮನಿದ್ದರೆ ಭವಿಷ್ಯದಲ್ಲಿ ವಾಕ್ ಸ್ವಾತಂತ್ರವನ್ನು ಕಳೆದುಕೊಳ್ಳುತ್ತೇವೆ ಎಂದು ಖರ್ಗೆ ಎಚ್ಚರಿಸಿದರು.

ಸಾಹಿತ್ಯ ಸಾಮಾಜಿಕ ಕಾಳಜಿ ಮತ್ತು ಬದ್ಧತೆ ಹೊಂದಿರಬೇಕು.ಸರಕಾರದ ಅನುದಾನದಿಂದ ಅದರ ಸ್ವಾಯತ್ತತೆಗೆ ಧಕ್ಕೆ ಬಂದರೆ ಅದನ್ನು ಧಿಕ್ಕರಿಸಬೇಕು. ತುರ್ತುಸ್ಥಿತಿ ಕಾಲದಲ್ಲಿ ಮಹಾರಾಷ್ಟ್ರದ ಸಾಹಿತ್ಯ ಸಮ್ಮೇಳನದಲ್ಲಿ ಕವಿಯೊಬ್ಬರು ತುರ್ತುಸ್ಥಿತಿ ಖಂಡಿಸಿ ಕವನವೊಂದನ್ನು ಓದಿದ್ದರು, ಆಗ ಅಲ್ಲಿ ವೇದಿಕೆಯಲ್ಲಿದ್ದ ಮಹಾರಾಷ್ಟ್ರದ ಮಂತ್ರಿಯೊಬ್ಬರು ಈ ಸಮ್ಮೇಳನ ಸರಕಾರದ ಅನುದಾನದಿಂದ ನಡೆಯುತ್ತಿದೆ ಎಂದು ಆಕ್ಷೇಪಿಸಿದ್ದರು. ಆಗ ಮರಾಠಿ ಸಾಹಿತ್ಯ ಪರಿಷತ್‌ನ ಅಧ್ಯಕ್ಷರು ಅವರ ಕೈಗೆ ಖಾಲಿ ಚೆಕ್ ನೀಡಿ ನಿಮ್ಮ ಅನುದಾನ ಬೇಡ ಕೆಳಗಿಳಿಯಿರಿ ಎಂದು ಆರ್ಭಟಿಸಿದ್ದರು. ಆಗಿನಿಂದ ಮರಾಠಿ ಸಾಹಿತ್ಯ ಸಮ್ಮೇಳನಕ್ಕೆ ಸರಕಾರದ ಅನುದಾನ ಪಡೆಯುವುದಿಲ್ಲ.

ಜನರಿಂದ ಸಂಗ್ರಹಿಸಿದ ಹಣದಲ್ಲಿ ಸಮ್ಮೇಳನ ನಡೆಯುತ್ತದೆ. ಕರ್ನಾಟಕದಲ್ಲಿ ಅದು ಅಸಾಧ್ಯವೇನಲ್ಲ. ಕನ್ನಡಿಗರು ಮನಸ್ಸು ಮಾಡಿದರೆ ಕೋಟಿ, ಕೋಟಿ ರೂಪಾಯಿ ಕೂಡಿಸಿ ಕೊಡುತ್ತಾರೆ. ಪ್ರಭುತ್ವದ ಹಣ ನಿರಾಕರಿಸುವ ಸ್ವಾಭಿಮಾನ ಮತ್ತು ದಿಟ್ಟತನವನ್ನು ಕನ್ನಡ ಸಾಹಿತ್ಯ ಪರಿಷತ್ತು ತೋರಿಸಲಿ.

ಕನ್ನಡ ನಾಡು ನುಡಿ ಕುರಿತ ಗೋಷ್ಠಿಯಲ್ಲಿ ಮಾತಾಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್, ‘‘ಕಾನೂನು ಉಲ್ಲಂಘಿಸುವ ಅಪರಾಧಿಯನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಲಾಗುತ್ತದೆ. ಆದರೆ ಎಪ್ಪತ್ತು ವರ್ಷಗಳಿಂದ ಸಂವಿಧಾನವನ್ನು ವ್ಯವಸ್ಥಿತವಾಗಿ ಉಲ್ಲಂಘಿಸುತ್ತಿರುವ ಪ್ರಭುತ್ವಕ್ಕೆ ಶಿಕ್ಷೆ ಯಾವಾಗ?’’ ಎಂದು ಪ್ರಶ್ನಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಸ್ವಾಯತ್ತತೆಗೆ ಧಕ್ಕೆ ಬಂದಾಗ ಆಗಿನ ಅಧ್ಯಕ್ಷ ಚಂದ್ರಶೇಖರ ಪಾಟೀಲರು (ಚಂಪಾ) ಅಂದಿನ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರದ ಒತ್ತಡಕ್ಕೆ ಮಣಿದಿರಲಿಲ್ಲ. ಆದರೆ ಮನು ಬಳಿಗಾರರ ಬಗ್ಗೆ ಅಂತಹ ನಿರೀಕ್ಷೆ ಇಟ್ಟುಕೊಳ್ಳಲಾಗದಿದ್ದರೂ ಕನ್ನಡಿಗರ ಹೆಮ್ಮೆಯ ಕಸಾಪವನ್ನು ಆಳುವ ಪಕ್ಷಕ್ಕೆ ಒತ್ತೆ ಇಡುವ ಅವರ ವರ್ತನೆ ವ್ಯಾಪಕವಾಗಿ ಖಂಡನೆಗೆ ಗುರಿಯಾಗಿದೆ.

ಕನ್ನಡ ಸಾಹಿತ್ಯ ಪರಿಷತ್‌ನ ಇತಿಹಾಸದಲ್ಲಿ ಅಧ್ಯಕ್ಷರ ರಾಜೀನಾಮೆಗೆ ಸಮ್ಮೇಳನದಲ್ಲಿ ಬಹಿರಂಗವಾಗಿ ಒತ್ತಾಯ ಬಂದಿರುವುದು ಇದೇ ಮೊದಲ ಬಾರಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)