varthabharthi


ಅನುಗಾಲ

ಅರವಿಂದ್ ಕೇಜ್ರಿವಾಲ್ ಎಂಬ ದಿಳ್ಳೀಶ್ವರ

ವಾರ್ತಾ ಭಾರತಿ : 12 Feb, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕಳೆದ ಐದಾರು ವರ್ಷಗಳಿಂದ ಪ್ರಧಾನಿ ಮೋದಿ ಈ ದೇಶದ ಮತದಾರರ ಮೇಲೆ ಮಾಡಿದ ಮೋಡಿಯನ್ನು ಇಂದಿರಾಗಾಂಧಿಯ ಹೊರತಾಗಿ ಇನ್ಯಾವ ಪ್ರಧಾನಿಯೂ ಮಾಡಿರಲಾರರು. ಮೋದಿಯ ಈ ಮೋಡಿಯು ಭರವಸೆಗಳ ಅಲೆಗಳ ಮೇಲೆ ಸವಾರಿ ಮಾಡಿ ಅದೀಗ ಅವರ ಅಂಧಭಕ್ತರನ್ನು ಹೊರತುಪಡಿಸಿ ಉಳಿದೆಲ್ಲ ಮತದಾರರಿಗೆ ಅವಾಸ್ತವವೆಂದು ಕಾಣಲಾರಂಭಿಸಿದೆಯೆಂಬ ಸಂಶಯ ಮೋದಿಗೆ ಬಂದಿರಬಹುದೇನೋ? ಇತ್ತೀಚೆಗೆ ನಡೆದ (ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸ್‌ಗಡ, ಮಹಾರಾಷ್ಟ್ರ ಮುಂತಾದ) ರಾಜ್ಯಗಳ ಚುನಾವಣಾ ಫಲಿತಾಂಶಗಳನ್ನು ಗಮನಿಸಿದರೆ ಮೋದಿಯ ಸಿಂಹಾಸನ ತಕ್ಷಣ ಕುಸಿಯದಿದ್ದರೂ ಅಲುಗುತ್ತಿರುವುದು ಖಚಿತ. ಪ್ರಾಯಃ ಇದನ್ನು ಪರಿಗಣಿಸಿಯೇ ಮೋದಿ 2019ರ ಲೋಕಸಭಾ ಚುನಾವಣೆಯ ಆನಂತರ ತನ್ನ ಪರಮಾಪ್ತ ಅಮಿತ್ ಶಾರನ್ನು ತನ್ನ ವಾರಸುದಾರರಾಗಿ ಮಾಡಿದಂತಿದೆ. ಮೊದಲ ಬಾರಿಗೆ ಲೋಕಸಭೆಯನ್ನಲಂಕರಿಸಿದ ಶಾ ದೇಶದ ಗೃಹಮಂತ್ರಿ. ಇದೇನೂ ಅಚ್ಚರಿಯ ವಿಚಾರವಲ್ಲ. ಮೋದಿಯೇ ಮೊದಲ ಬಾರಿಗೆ ಸಂಸತ್ತನ್ನು ಪ್ರವೇಶಿಸಿ ನೇರ ಪ್ರಧಾನಿಯಾಗಿರುವುದರಿಂದ ಆನಂತರದ ನಡೆಗಳೆಲ್ಲ ಹೀಗೇ ಇರಬೇಕು.

ವಿಶೇಷವೆಂದರೆ ಮೊದಲ ಬಾರಿಗೆ ಸಂಸತ್ತನ್ನು ಪ್ರವೇಶಿಸಿದವರಿಗೆ ಜ್ಞಾನ ಮತ್ತು ಅನುಭವಗಳಿವೆಯೆಂದು ಖಾತ್ರಿಯೇನಿಲ್ಲ. ಅವರು ಇತರರಿಂದ ಕಲಿಯುವುದು ಬೇಕಷ್ಟಿರುತ್ತದೆ. ಆದರೆ ಅಜ್ಞಾನ ಮತ್ತು ಅಹಂಕಾರದ ತತ್ವಗಳನ್ನೇ ಆದರ್ಶಗಳೆಂದು ಪರಿಭಾವಿಸಿದವರಿಗೆ ಲೋಕದ ಯಾವ ಸಾತ್ವಿಕ ಟೀಕೆಗಳೂ ಪಥ್ಯವಾಗುವುದಿಲ್ಲ. ವಿರೋಧ ಪಕ್ಷಗಳ ಕುರಿತು ಈ ಮಂದಿ ತೋರುವ ಅನಾದರ, ಹೇಳುವ ಮಾತುಗಳು ಯಾವ ಅಧಿಕಾರಸ್ಥರಿಗೂ ಭೂಷಣವಲ್ಲ. ಪ್ರಧಾನಿ ಮತ್ತು ಗೃಹಮಂತ್ರಿ ತೋರುವ ಈ ಗುಣಗಳನ್ನೇ ಸದ್ಗುಣಗಳೆಂದು ಬಗೆದು ಇತರ ಅನೇಕ ಮಂತ್ರಿಗಳೂ ನವಸಂಸದರೂ ಹಾಗೆಯೇ ವರ್ತಿಸುತ್ತಿದ್ದಾರೆ. ಈ ಪೈಕಿ ಗೃಹಮಂತ್ರಿಗೆ ಹೋಲಿಸಿದರೆ ಪ್ರಧಾನಿ ಸಂತರಂತೆ ಕಂಡರೆ ತಪ್ಪಿಲ್ಲ. ಶಕುನಿಗೆ ಹೋಲಿಸಿದರೆ ದುರ್ಯೋಧನನೂ ಸದ್ಗುಣಿಯೇ. (ಉವೈಸಿ ಎಂಬ ಹೈದರಾಬಾದ್‌ನ ಸಂಸದರು ಮಾತನಾಡುತ್ತಿರುವಾಗ ಅಮಿತ್ ಶಾ ಉವೈಸಿಗೆ ನೀವು ಇತರರು ಮಾತನಾಡುವುದನ್ನು ಕೇಳಲು ಕಲಿಯಬೇಕು ಎಂದರಂತೆ!)

ಇವು ಅಜ್ಞಾನ ಮತ್ತು ಅಹಂಕಾರದ ನಿಶಾನಿಗಳು. ಇವುಗಳಿಂದ ಹೊರಬಾರದೆ ದೇಶಹಿತ ಮತ್ತು ಸಮಾಜಹಿತ ಸಾಧನೆಯಾಗದು. ಪ್ರತಿಯೊಬ್ಬ ಅಜ್ಞಾನಿಯನ್ನೂ ಅಹಂಕಾರಿಯನ್ನೂ ಮಣಿಸಲು ಯಾರೋ ಒಬ್ಬನು ಇರುತ್ತಾನೆ. ಗುಡ್ಡೆಗೆ ಗುಡ್ಡೆ ಅಡ್ಡ ಎಂಬ ನಾಣ್ಣುಡಿಯಿದೆ. ಅಂತಹ ಸವಾಲಿಗೆ ಭಗವಂತನೇ ಹುಟ್ಟಿಬರುವುದಿಲ್ಲ. ಆತನಿಗೂ ಧರ್ಮಗ್ಲಾನಿಯಾದಾಗಲೆಲ್ಲ ಬಂದೂ ಬಂದೂ ಸುಸ್ತಾಗಿದೆ. ಆದ್ದರಿಂದ ಆತನು ಸಾಮಾನ್ಯರಿಂದಲೇ ಒಬ್ಬನನ್ನು ಆಯ್ಕೆಮಾಡಿಕೊಳ್ಳುತ್ತಾನೆ. ಬೈಬಲ್‌ನ ದೇವರು ಡೇವಿಡ್‌ನನ್ನು ಆಯ್ಕೆಮಾಡಿದಂತೆ!

ದೇಶಕ್ಕಲ್ಲದಿದ್ದರೂ ದೇಶದ ರಾಜಧಾನಿಯಾಗಿರುವ ದಿಲ್ಲಿಯೆಂಬ ಮಹಾನಗರಕ್ಕೆ ಅರವಿಂದ್ ಕೇಜ್ರಿವಾಲ್ ಎಂಬಾತ ಪ್ರವೇಶವಾದದ್ದು ಹೀಗೆ. ಬೈಬಲ್‌ನಲ್ಲಿ ಬರುವ ಡೇವಿಡ್ ಮತ್ತು ಗೋಲಿಯಾತ್ ಕತೆಗೆ ಸದ್ಯದ ಭಾರತೀಯ ಸ್ಥಿತಿಯಲ್ಲಿ ಕೇಜ್ರಿವಾಲ್ ಮತ್ತು ಮೋದಿಗಿಂತ ಒಳ್ಳೆಯ ಸಾಪೇಕ್ಷ ನಿದರ್ಶನ ಸಿಗಲಾರದು. ಮಕ್ಕಳ ಕತೆ ಟಾಮ್ ಮತ್ತು ಜೆರ್ರಿ ಕೂಡಾ ಒಂದು ಹೋಲಿಕೆಯಾಗಬಹುದು. ಮೋದಿ ಮತ್ತು ಅಮಿತ್ ಶಾ ಅವರಿಗೆ ತಮ್ಮ ಮೂಗಿನಡಿಯೇ ಅರವಿಂದ್ ಕೇಜ್ರಿವಾಲ್ ಬೆಳೆಯುತ್ತಿರುವುದು ಅಸಹನೀಯವೆಂಬುದಕ್ಕೆ ಬೇಕಷ್ಟು ಉದಾಹರಣೆಗಳಿವೆ.

 ಈ ಬಾರಿಯ ದಿಲ್ಲಿಯ ವಿಧಾನಸಭಾ ಚುನಾವಣೆ ಸಾಕಷ್ಟು ಬೇಕಷ್ಟು ಸುದ್ದಿಮಾಡಿದೆ. ಹೀಗೆ ಸುದ್ದಿ ಮಾಡುವುದಕ್ಕೆ ಅರವಿಂದ್ ಕೇಜ್ರಿವಾಲ್ ಖಂಡಿತಾ ಕಾರಣರಲ್ಲ. ಈ ಸುದ್ದಿ ನಿರ್ಮಾಣಕ್ಕೆ ಪ್ರಧಾನಿ ಮೋದಿ ಮತ್ತು ಅವರಿಗಿಂತಲೂ ಹೆಚ್ಚಾಗಿ ಗೃಹಮಂತ್ರಿ ಅಮಿತ್‌ಶಾ ಕಾರಣರು.

ಅರವಿಂದ್ ಕೇಜ್ರಿವಾಲ್ ಗೋಕುಲದಲ್ಲಿ ಬೆಳೆದ ಕೃಷ್ಣನ ಹಾಗೆ ಎಂಬುದು ಉತ್ಪ್ರೇಕ್ಷೆಯಾದರೂ ಒಂದು ಸುಂದರವಾದ ರೂಪಕ. ಆತನನ್ನು ಸದೆಬಡಿಯಲು ಕಂಸನೆಂಬ ದುಷ್ಟನು ಸಂಬಂಧವನ್ನೂ ಎಣಿಸದೆ ಪ್ರಯತ್ನಿಸಿದ ಕತೆ ಗೊತ್ತಲ್ಲ! *

 ಗೂಗಲ್‌ನಲ್ಲಿ ಹುಡುಕಿದರೆ ಸಿಗಬಹುದಾದ ಮತ್ತು ಅನೇಕರು ಬಲ್ಲ ಕೆಲವು ಮಾಹಿತಿ ಇಲ್ಲಿದೆ. ಅರವಿಂದ್ ಕೇಜ್ರಿವಾಲ್ ಎಂಬ ಈ ವ್ಯಕ್ತಿ ಸುಶಿಕ್ಷಿತ ಮಧ್ಯಮ ವರ್ಗದ ವಿದ್ಯಾವಂತ ಕುಟುಂಬದ ಮೊದಲ ಮಗ. ಹುಟ್ಟು: 16.08.1968 ಹರ್ಯಾಣದ ಭಿವಾನಿ ಜಿಲ್ಲೆಯಲ್ಲಿ. ತಂದೆ ಮೆಸ್ರಾದ ಬಿರ್ಲಾ ತಾಂತ್ರಿಕ ವಿದ್ಯಾಲಯದ ವಿದ್ಯುತ್ ಇಂಜಿನಿಯರಿಂಗ್ ಪದವೀಧರನಾದರೆ ಈತ ಖರಗ್‌ಪುರದ ಐಐಟಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರ. 1989ರಲ್ಲಿ ಪದವಿ ಮುಗಿಸಿ ಅರವಿಂದ್ ಕೇಜ್ರಿವಾಲ್ ಜಮ್ಶೆಡ್‌ಪುರದ ಟಾಟಾ ಸ್ಟೀಲ್ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿದರು. ಅಲ್ಲಿ ದುಡಿಯುವಾಗಲೇ ಸಿವಿಲ್ ಸೇವಾ ಅಧ್ಯಯನಕ್ಕೆ ಪೀಠಿಕೆ. 1992ರಲ್ಲಿ ಹುದ್ದೆಗೆ ರಾಜೀನಾಮೆ. 1995ರಲ್ಲಿ ಭಾರತೀಯ ಕಂದಾಯ ಸೇವೆ (ಐಆರ್‌ಎಸ್)ಗೆ ಆಯ್ಕೆ. ಆಯಕರ ಇಲಾಖೆಯ ಜಂಟಿ ಆಯುಕ್ತರಾಗಿ ಹಲವು ವರ್ಷ ಸೇವೆ ಸಲ್ಲಿಸಿದರು. ಆನಂತರ ಸ್ವಯಂನಿವೃತ್ತಿ ಪಡೆದರು. ತನ್ನ ಗೆಳೆಯ ಸಿಸೋಡಿಯಾರೊಂದಿಗೆ ಸಾರ್ವಜನಿಕ ಜೀವನದಲ್ಲಿ ಭ್ರಷ್ಟತೆಯನ್ನು ತೊಡೆಯುವ ಹಲವು ಕಾರ್ಯಕ್ರಮಗಳನ್ನು ಯೋಜಿಸಿದರು. ಅಣ್ಣಾ ಹಝಾರೆ, ಅರುಣಾರಾಯ್ ಮುಂತಾದವರೊಂದಿಗೆ ವ್ಯವಸ್ಥೆಯ ಹುಳುಕುಗಳ ವಿರುದ್ಧ ಚಳವಳಿಯನ್ನು ಮಾಡಿದರು. ವಿದ್ಯಾರ್ಥಿದೆಸೆಯಿಂದಲೇ ನಾಯಕತ್ವದ ಎಲ್ಲ ಲಕ್ಷಣಗಳನ್ನೂ ಹೊಂದಿದ್ದ ಅರವಿಂದ್ ಭರವಸೆಯ ನಾಯಕತ್ವಕ್ಕಾಗಿ 2006ರಲ್ಲಿ ಪ್ರತಿಷ್ಠಿತ ರಾಮೊನ್ ಮ್ಯಾಗ್ಸಸೆ ಪ್ರಶಸ್ತಿ ಪಡೆದರು. ಈ ಪ್ರಶಸ್ತಿಯ ಅಷ್ಟೂ ಹಣವನ್ನು ಪಬ್ಲಿಕ್ ಕಾಸ್ ರಿಸರ್ಚ್ ಫೌಂಡೇಷನ್ ಎಂಬ ಸಂಸ್ಥೆಗೆ ದೇಣಿಗೆ ನೀಡಿದರು. (ಈ ಸಂಸ್ಥೆಯಲ್ಲಿ ಪ್ರಶಾಂತ್‌ಭೂಷಣ್, ಕಿರಣ್‌ಬೇಡಿ ಮುಂತಾದವರೂ ಇದ್ದರು. ಕಿರಣ್‌ಬೇಡಿ ಆನಂತರ ವಿವಾದಾಸ್ಪದ ರಾಜಕಾರಣಿಯಾದದ್ದು ಈಗ ಹಳೆಯ ಕತೆ!)

ಕೇಜ್ರಿವಾಲ್ ಸಸ್ಯಾಹಾರಿ. ಅವರ ಪತ್ನಿಯೂ ಐಆರ್‌ಎಸ್ ಆಯ್ಕೆಯ ಆದಾಯಕರ ಇಲಾಖೆಯ ಆಯುಕ್ತರಾಗಿ 2016ರಲ್ಲಿ ಸ್ವಯಂನಿವೃತ್ತಿ ಪಡೆದವರು. ಇಬ್ಬರು ಮಕ್ಕಳ ಪುಟ್ಟ ಸಂಸಾರ. ಡಯಾಬೆಟಿಕ್ ಆಗಿರುವ ಕೇಜ್ರಿವಾಲ್ ವಿಪಾಸನಾದಂತಹ ಆಧ್ಯಾತ್ಮಿಕ ಪದ್ಧ್ದತಿಯನ್ನು ಅನುಸರಿಸುವವರು. ಕಫದ ಸಮಸ್ಯೆಗಾಗಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ಇಂದಿನ ಮಾನದಂಡದಲ್ಲಿ ಸರಳ ವ್ಯಕ್ತಿ.

ತಾತ್ವಿಕ ಭಿನ್ನಾಭಿಪ್ರಾಯಗಳಿಂದಾಗಿ ಅಣ್ಣಾ ಹಝಾರೆಯವರ ತಂಡದಿಂದ ಭಿನ್ನರಾದ ಅರವಿಂದ್ ತಮ್ಮದೇ ಚಳವಳಿಯನ್ನೂ ಸಂಘಟನೆಯನ್ನೂ ಕಟ್ಟಿದರು. 2013ರಲ್ಲಿ ಬೆಂಗಳೂರಿನಲ್ಲಿ ಸಮಾನಮನಸ್ಕರ ಆಪ್ (ಆಮ್ ಆದ್ಮಿ ಪಾರ್ಟಿ) ಸ್ಥಾಪನೆಯಾಯಿತು. ಅದೇ ವರ್ಷ ದಿಲ್ಲಿಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಒಟ್ಟು 70 ಸ್ಥಾನಗಳ ಪೈಕಿ ಈ ಪಕ್ಷ 28 ಸ್ಥಾನಗಳನ್ನು ಗೆದ್ದಿತು. ವಿಶೇಷವಾಗಿ ಅರವಿಂದ್ ಕೇಜ್ರಿವಾಲ್ ಆಗಿನ ದಿಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ಚುನಾವಣೆಯಲ್ಲಿ ಮಣಿಸಿದರು. ಭಾಜಪ ಅತ್ಯಂತ ದೊಡ್ಡ ಪಕ್ಷವಾಗಿ (30 ಸ್ಥಾನ) ಹೊರಹೊಮ್ಮಿದರೂ ಇತರ ಪಕ್ಷಗಳ ಬೆಂಬಲದೊಂದಿಗೆ ಅರವಿಂದ್ ಸರಕಾರ ರಚಿಸಿದರು. ಅಲ್ಲಿಂದಲೇ ಅವರು ಭಾಜಪಕ್ಕೆ ನುಂಗಲಾರದ ತುತ್ತಾದರು. ಭ್ರಷ್ಟಾಚಾರ ನಿರ್ಮೂಲನೆಯ ತಮ್ಮ ಕನಸಿನ ಕೂಸಾದ ಜನಲೋಕಪಾಲ್ ಮಸೂದೆಯನ್ನು 2014ರ ಫೆಬ್ರವರಿಯಲ್ಲಿ ಮಂಡಿಸಿದಾಗ ಅದಕ್ಕೆ ಕಾಂಗ್ರೆಸ್ ಮತ್ತು ಭಾಜಪ ಇವೆರಡೂ ವಿರೋಧವನ್ನು ಮಾಡಿದ್ದರಿಂದ ಸೋಲಾಯಿತು. ಇದರಿಂದ ಭ್ರಮನಿರಸನರಾದ ಅರವಿಂದ್ ರಾಜೀನಾಮೆ ನೀಡಿ ವಿಧಾನಸಭೆಯನ್ನು ವಿಸರ್ಜಿಸಿದರು. ಮುಂದೆ ಒಂದು ವರ್ಷ ದಿಲ್ಲಿಯು ಕೇಂದ್ರ ಸರಕಾರದ ಆಡಳಿತದಲ್ಲಿತ್ತು. 2015ರಲ್ಲಿ ನಡೆದ ಚುನಾವಣೆಯಲ್ಲಿ ಅರವಿಂದ್ ನಾಯಕತ್ವದ ಆಪ್ ಪಕ್ಷ 67 ಸ್ಥಾನಗಳನ್ನು ಗಳಿಸುವ ಮೂಲಕ ಅಭೂತಪೂರ್ವ ಯಶಸ್ಸನ್ನು ಕಂಡರು. ಆನಂತರದ ಅವಧಿಯಲ್ಲಿ ಜನಲೋಕಪಾಲ್ ಮಸೂದೆಯನ್ನು ತಂದರು. ಕೇಂದ್ರಸರಕಾರದ ತಾರತಮ್ಯದ ಮತ್ತು ಸರ್ವಾಧಿಕಾರಿ ಧೋರಣೆಯೊಂದಿಗೆ ಸತತ ಜಗಳವಾಡಿದರು. ಆದರೆ ಆಡಳಿತದಲ್ಲಿ ಸಾಕಷ್ಟು ಪಾರದರ್ಶಕತೆಯನ್ನು ತಂದರು. ಮೊಹಲ್ಲ ಕ್ಲಿನಿಕ್‌ಗಳೆಂಬ ಜನಸಾಮಾನ್ಯರಿಗೆ ಬೇಕಾದ ಆರೋಗ್ಯ ಕೇಂದ್ರಗಳನ್ನು, ಉಚಿತ ವಿದ್ಯುತ್, ನೀರು, ಶಿಕ್ಷಣ, ಹಾಗೆಯೇ ಅನುಕೂಲಕರವಾದ ರಸ್ತೆ ಮತ್ತು ಮಹಿಳೆಯರಿಗೆ ಉಚಿತ ಪ್ರಯಾಣ ಇತ್ಯಾದಿಗಳನ್ನು ನೀಡಿ ದಿಲ್ಲಿಯ ಅಭಿವೃದ್ಧಿ ಪರ್ವದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದರು. ಪ್ರಾಯಃ ಕಾನೂನು ಮತ್ತು ವ್ಯವಸ್ಥೆಯಲ್ಲಿ ಕೇಂದ್ರದ ಹಸ್ತಕ್ಷೇಪ ಮತ್ತು ರಾಜ್ಯಪಾಲರ ಅನಗತ್ಯ ನಿಯಂತ್ರಣವಲ್ಲದಿದ್ದರೆ ಇನ್ನಷ್ಟು ಅಭಿವೃದ್ಧಿಯಾಗುತ್ತಿತ್ತೇನೋ?

ಇದರಿಂದಾಗಿ ಭಾಜಪ ಮತ್ತು ವಿಶೇಷವಾಗಿ ಮೋದಿ-ಶಾದ್ವಯರು ಹೇಗಾದರೂ ಅರವಿಂದ್ ಕೇಜ್ರಿವಾಲ್‌ರನ್ನು ಕೆಳಗಿಳಿಸಬೇಕೆಂದು ಪಣತೊಟ್ಟರು. ಇದು 2020ರ ದಿಲ್ಲಿ ವಿಧಾನಸಭೆಗೆ ವಿಶೇಷ ಕಳೆಕಟ್ಟಿತು. ಅಮಿತ್ ಶಾ ಸ್ವತಃ ಮತ್ತು ತನ್ನ ಸಂಸದರೊಂದಿಗೆ ದಿಲ್ಲಿಯಲ್ಲಿ ನೂರಾರು ರ್ಯಾಲಿಗಳನ್ನು ಮಾಡಿದ್ದಲ್ಲದೆ, ಮೋದಿಯವರನ್ನೂ ಪ್ರಚಾರ ಕಣಕ್ಕಿಳಿಸಿದರು.

ಕೊನೆಗೂ ಫಲಿತಾಂಶ ಬಂದಾಗ ಆಪ್ 62 ಸ್ಥಾನಗಳನ್ನೂ ಭಾಜಪ 8 ಸ್ಥಾನಗಳನ್ನೂ ಗಳಿಸಿದವು. ಕೊನೆಯ ನಗೆ ಅರವಿಂದರದ್ದೇ ಆಗಿದೆ. *

ದಿಲ್ಲಿಯ ಚುನಾವಣೆ ಹಲವಾರು ಕಾರಣಗಳಿಂದಾಗಿ ಒಂದು ಸ್ಥಿತ್ಯಂತರವನ್ನು ಮಾಡಿದೆ. ಭಾಜಪ ಮತ್ತು ಮುಖ್ಯವಾಗಿ ಅಮಿತ್ ಶಾ ತನ್ನ ಪಗಡೆದಾಳಗಳನ್ನು ಆಳಪಾತಾಳಗಳಲ್ಲಿ ಆಡಿದರು. ಉತ್ತರಪ್ರದೇಶದ ಯೋಗಿ ಮುಖ್ಯಮಂತ್ರಿಯ ಸಹಿತ ಎಲ್ಲ ಕೇಸರಿನಾಯಕರು ಮತೀಯ ಧ್ರುವೀಕರಣ ಮತ್ತು ಮತಾಂಧತೆಯ ಮೂಲಕ ದಿಲ್ಲಿಯ ಜನರನ್ನು ಪ್ರತ್ಯೇಕಿಸಲು ವ್ಯೆಹ ರಚಿಸಿದರು. ಜೊತೆಗೇ ಸಿಎಎ ವಿರುದ್ಧದ ಚಳುವಳಿಯನ್ನು ಉಗ್ರವಾಗಿ ವಿರೋಧಿಸುವ ಮೂಲಕ ಹಿಂದೂ ಮತಬ್ಯಾಂಕುಗಳನ್ನು ಸೃಷ್ಟಿಸಲು ಯತ್ನಿಸಿದರು. ಅರವಿಂದ್ ಕೇಜ್ರಿವಾಲ್‌ರನ್ನು ನಿತ್ಯ ಹಳಿದರು; ಭಯೋತ್ಪಾದಕನೆಂದೂ ಆತಂಕವಾದಿಯೆಂದೂ ಪ್ರಚಾರಮಾಡಿದರು. (ಹಿಂದೆ ಮೋದಿಯನ್ನು ಕಾಂಗ್ರೆಸಿಗರು ವೈಯಕ್ತಿಕವಾಗಿ ಟೀಕೆ ಮಾಡಿ ಅದರ ಪರಿಣಾಮವಾಗಿ ಸೋಲು ಕಂಡಿದ್ದನ್ನು ಭಾಜಪವೇ ಮರೆತಂತಿದೆ! ಇಷ್ಟಕ್ಕೂ ದಿಲ್ಲಿಯ ಕಾನೂನು ಮತ್ತು ವ್ಯವಸ್ಥೆ ಕೇಂದ್ರದ ನಿಯಂತ್ರಣದಲ್ಲಿದೆಯೇ ಹೊರತು ದಿಲ್ಲಿ ರಾಜ್ಯದ ಆಡಳಿತದಲ್ಲಿಲ್ಲ!) ಪ್ರಾಯಃ ಯಾವನೇ ರಾಜಕೀಯ ಮುಖಂಡನೂ ಈ ಸವಾಲುಗಳನ್ನು ಉಗ್ರವಾದ ಟೀಕೆಗಳಿಂದಲೇ ಎದುರಿಸುತ್ತಿದ್ದರು. ಆದರೆ ಕೇಜ್ರಿವಾಲ್ ಇವುಗಳಿಗೆ ಪ್ರತಿಟೀಕೆಗಳನ್ನು ಮಾಡಲು ಹೋಗಲಿಲ್ಲ. ಬದಲಾಗಿ ತಾನು ಕೈಗೊಂಡ ಅಭಿವೃದ್ಧಿಯ ಮಂತ್ರವನ್ನೇ ಕೇಂದ್ರೀಕರಿಸಿ ಪ್ರಚಾರಮಾಡಿದ್ದಾರೆ. ಪ್ರತ್ಯೇಕತೆಯ ವಿರುದ್ಧ ಅಭಿವೃದ್ಧಿ ಎಂಬಂತೆ ಈ ಸೆಣಸಾಟ ನಡೆದಿದೆ. ಇನ್ನೂ ವಿಶೇಷವೆಂದರೆ ಒಂದೆಡೆ ಭಾಜಪವು ಚುನಾವಣೆ ಮುಗಿದ ತಕ್ಷಣ ಸಿಎಎಯ ವಿರುದ್ಧ ಶಾಹೀನ್‌ಬಾಗ್‌ನಲ್ಲಿ ನಡೆಯುವ ಚಳವಳಿಯನ್ನು ನಾಶಮಾಡುತ್ತೇವೆ ಎಂದು ಉಗ್ರಪ್ರತಾಪದ ಭಯವನ್ನು ಸೃಷ್ಟಿಸಿದಾಗಲೂ ಸಿಎಎ ಕರಿತಾದ ವಿವಾದವನ್ನು ಕೇಜ್ರಿವಾಲ್ ಮೈಮೇಲೆಳೆದುಕೊಳ್ಳಲೇ ಇಲ್ಲ. (ಇದು ಸರಿಯೋ ತಪ್ಪೋ ಮುಖ್ಯವಲ್ಲ. ಜಾತ್ಯತೀತರನ್ನು ಕಂಗೆಡಿಸಿದ ಈ ಮೌನದ ಹೆಜ್ಜೆ ಗೆಲುವಿನ ತಂತ್ರದಲ್ಲಿ ಕೆಲಸಮಾಡಿದೆ!) ಕಾಂಗ್ರೆಸ್ ಮತ್ತು ಭಾಜಪವನ್ನು ಸಮಾನ ದೂರದಲ್ಲಿಟ್ಟ ಕೇಜ್ರಿವಾಲ್ ಇವರ ನಡುವೆ ತನ್ನ ಶಕ್ತಿಯನ್ನು ತೋರಿದ್ದಾರೆ. ಜನರೂ ಅಷ್ಟೇ: ಕಾಂಗ್ರೆಸನ್ನು ಮತ್ತು ಆಪ್‌ನ್ನು ಹಂಚಿಕೊಂಡರೆ ಅದರ ಲಾಭ ಭಾಜಪಕ್ಕೆ ಆಗುತ್ತದೆಯೆಂದು ತಿಳಿದವರಂತೆ ಈ ಬಾರಿ ಆಮೂಲಾಗ್ರವಾಗಿ ಬೆಂಬಲಿಸಿದ್ದಾರೆ. ದಿಲ್ಲಿಯ ಜನರು ಪ್ರತ್ಯೇಕತೆಯನ್ನು ಸಾರಾ ಸಗಟಾಗಿ ವಿರೋಧಿಸಿದ್ದಾರೆ; ಸೋಲಿಸಿದ್ದಾರೆ. ಅಭಿವೃದ್ಧಿಯನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸಿನ ಭ್ರಷ್ಟ ಆಡಳಿತದಿಂದ ದೇಶವನ್ನು ಮುಕ್ತಿಗೊಳಿಸಿ ಅಭಿವೃದ್ಧಿಯ ಭರವಸೆಯನ್ನು ನೀಡಿ ಅಧಿಕಾರಕ್ಕೆ ಬಂದ ಮೋದಿ ಪ್ರತ್ಯೇಕತೆಯನ್ನು ಪ್ರಚೋದಿಸಿದ್ದರ ಪರಿಣಾಮ, ಫಲಿತಾಂಶವನ್ನು ಈಗಾಗಲೇ ಕಂಡಿದ್ದಾರೆ; ಕಾಣುತ್ತಿದ್ದಾರೆ.

ಕೇಜ್ರಿವಾಲ್ ಭಾರತದ ಆಶಾಕಿರಣವಾಗುತ್ತಾರೋ ಹೇಳಲಾಗದು. ಆದರೆ ಇಂತಹ ಶಕ್ತಿಗಳೇ ಈ ದೇಶದ ವಿನಾಶವನ್ನು ತಡೆಗಟ್ಟಬಲ್ಲವರು. (ಈ ಅಂಕಣದಲ್ಲಿ ಅರವಿಂದ್ ಕೇಜ್ರಿವಾಲ್ ಕುರಿತು ನಾನೇಕೆ ಬರೆಯುತ್ತಿಲ್ಲ ಎಂದು ನನ್ನ ಅಭಿಮಾನಿ ಓದುಗರನೇಕರು ಕಳೆದ ಕೆಲವು ತಿಂಗಳುಗಳಲ್ಲಿ ಪ್ರಶ್ನಿಸಿದ್ದಾರೆ. ನನಗೆ ಯಾವ ಸಜ್ಜನರೂ ಅಸ್ಪಶ್ಯರಲ್ಲ. ಆದರೆ ಕಳೆದ ಕೆಲವು ತಿಂಗಳುಗಳಿಂದ ದಿಲ್ಲಿಯ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಭವಿಷ್ಯ ಏನಾಗುತ್ತದೋ ಎಂದು ಆತಂಕಿಸಿದವರಲ್ಲಿ ನಾನೂ ಒಬ್ಬ. ದೇಶಕ್ಕೆ ದೇಶವೇ ಮತೀಯ ಧ್ರುವೀಕರಣಕ್ಕೆ ಮತ್ತು ಮತಾಂಧತೆಗೆ ಒಲಿಯುತ್ತಿರುವ ಕ್ಷಣಗಳಲ್ಲಿ ನನ್ನ ಮಾತುಗಳು ವ್ಯರ್ಥ ಮತ್ತು ಸುಳ್ಳಾಗುವ ಭೀತಿಯಿಂದ ಸುಮ್ಮನಿದ್ದೆ. ಆದರೆ 2020ರ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಗಳಿಸಿದ ಭಾರೀ ಯಶಸ್ಸನ್ನು ಗಮನಿಸಿದಾಗ ದೇಶದಲ್ಲಿ ಮಳೆ-ಬೆಳೆಗೆ ಕಾರಣವಾಗಬಲ್ಲ ಆಶಾದಾಯಕ ವಾತಾವರಣ ಪೂರ್ಣ ನಶಿಸಿಲ್ಲವೆನ್ನುವುದು ಖಾತ್ರಿಯಾಗಿದೆ. ಇದೊಂದು ನುಡಿನಮನದಂತಿದ್ದರೆ ಅದು ಸಾಂದರ್ಭಿಕ ಅಗತ್ಯವೆಂದು ಹೇಳಬಲ್ಲೆ.)

ದಿಲ್ಲಿಯ ಜನರು ಪ್ರತ್ಯೇಕತೆಯನ್ನು ಸಾರಾ ಸಗಟಾಗಿ ವಿರೋಧಿಸಿದ್ದಾರೆ; ಸೋಲಿಸಿದ್ದಾರೆ. ಅಭಿವೃದ್ಧಿಯನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸಿನ ಭ್ರಷ್ಟ ಆಡಳಿತದಿಂದ ದೇಶವನ್ನು ಮುಕ್ತಿಗೊಳಿಸಿ ಅಭಿವೃದ್ಧಿಯ ಭರವಸೆಯನ್ನು ನೀಡಿ ಅಧಿಕಾರಕ್ಕೆ ಬಂದ ಮೋದಿ ಪ್ರತ್ಯೇಕತೆಯನ್ನು ಪ್ರಚೋದಿಸಿದ್ದರ ಪರಿಣಾಮ, ಫಲಿತಾಂಶವನ್ನು ಈಗಾಗಲೇ ಕಂಡಿದ್ದಾರೆ; ಕಾಣುತ್ತಿದ್ದಾರೆ.

ಕೇಜ್ರಿವಾಲ್ ಭಾರತದ ಆಶಾಕಿರಣವಾಗುತ್ತಾರೋ ಹೇಳಲಾಗದು. ಆದರೆ ಇಂತಹ ಶಕ್ತಿಗಳೇ ಈ ದೇಶದ ವಿನಾಶವನ್ನು ತಡೆಗಟ್ಟಬಲ್ಲವರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)