varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 17 Feb, 2020
ಪಿ.ಎ.ರೈ

ಜೆಡಿಎಸ್‌ನವರು ಎಂದೂ ಭಾರತ್ ಮಾತಾ ಕೀ ಜೈ ಎಂದು ಹೇಳಿಲ್ಲ -ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ.
ನೀವೊಮ್ಮೆ ಜೋರಾಗಿ ಪಂಪ್‌ವೆಲ್ ಮಾತಾ ಕೀ ಜೈ ಅನ್ನಿ ನೋಡೋಣ ?

---------------------
ಬಿಜೆಪಿಯವರು ತಾವು ಹೇಳಲಾಗದ್ದನ್ನು ಆರೆಸ್ಸೆಸ್ ಮೂಲಕ ಹೇಳಿಸುತ್ತಿದ್ದಾರೆ- ಡಿ.ಕೆ.ಶಿವಕುಮಾರ್, ಶಾಸಕ.
ನೀವು ಹೇಳಲಾಗದ್ದನ್ನು ಭಿನ್ನಮತೀಯರ ಕೈಯಲ್ಲಿ ಹೇಳಿಸುತ್ತೀರಲ್ಲ, ಹಾಗೆಯೇ ಇರಬೇಕು.

  ---------------------
  ಗುರುಕುಲದ ರಕ್ಷಣೆ ಸಮಾಜದ ಜವಾಬ್ದಾರಿ - ಮೋಹನ್ ಭಾಗವತ್, ಆರೆಸ್ಸೆಸ್ ಸರಸಂಘ ಚಾಲಕ.

  ಸರಕಾರಿ ಶಾಲೆಗಳನ್ನು ಮುಚ್ಚಿಸುವ ಮೂಲಕ ಗುರುಕುಲಗಳನ್ನು ತೆರೆಯುವ ಯೋಜನೆ ಇರಬೇಕು.

---------------------
ಕೃಷ್ಣನ ನಾಡಾದ ಭಾರತವನ್ನು ಎಂದಿಗೂ ಕ್ರಿಸ್ತನ ನಾಡು ಮಾಡಲು ಬಿಡುವುದಿಲ್ಲ - ಕಲ್ಲಡ್ಕ ಪ್ರಭಾಕರ್ ಭಟ್, ಆರೆಸ್ಸೆಸ್ ನಾಯಕ.
ಈ ನಾಡು ಕ್ರಿಸ್ತನದೂ ಅಲ್ಲ, ಕೃಷ್ಣನದೂ ಅಲ್ಲ ಭೀಮ ಅಂಬೇಡ್ಕರ್ ಅವರದು.

---------------------

 ಜೆಡಿಎಸ್ ಶಾಸಕ ಕೆ.ಎಸ್.ಲಿಂಗೇಶ್ ಅಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದಿದ್ದರೆ ಇಂದು ಅವರ ಕ್ಷೇತ್ರದ ಎಲ್ಲ ನೀರಿನ ಟ್ಯಾಂಕ್‌ಗಳು ಭರ್ತಿಯಾಗುತ್ತಿದ್ದವು- ಬಿ.ಸಿ.ಪಾಟೀಲ್, ಸಚಿವ.  

ಅಂದರೆ ಜನರ ಕುಡಿಯುವ ನೀರಿನ ಟ್ಯಾಂಕ್ ಭರ್ತಿಯಾಗಬೇಕಾದರೆ ಆ ಕ್ಷೇತ್ರದ ಶಾಸಕರು ರಾಜೀನಾಮೆ ನೀಡುವುದು ಅಗತ್ಯ ಎಂದಾಯಿತು.

---------------------
ಆರ್ಥಿಕ ಹಿಂಜರಿತವಿದ್ದರೆ ಜನರು ಕುರ್ತಾ, ಧೋತಿ ಬದಲು ಕೋಟು ಧರಿಸುತ್ತಿದ್ದರೇ?- ವೀರೇಂದ್ರ ಸಿಂಗ್, ಬಿಜೆಪಿ ಸಂಸದ.  
ಅಂದರೆ ಏನನ್ನೂ ಧರಿಸದೆ ಬೆತ್ತಲೆ ತಿರುಗಿದಾಗಷ್ಟೇ ಒಪ್ಪಿಕೊಳ್ಳುತ್ತೀರಿ ಎಂದಾಯಿತು.

---------------------

ನನ್ನ ಹೆಂಡತಿಯ ಮೇಲೆ ನಾನು ಸಿಟ್ಟು ಮಾಡಿಕೊಂಡಿಲ್ಲ, ಇನ್ನು ಸಿಎಂ ಯಡಿಯೂರಪ್ಪರ ಮೇಲೆ ಸಿಟ್ಟು ಮಾಡಿಕೊಳ್ಳುತ್ತೇನೆಯೇ?- ಉಮೇಶ್ ಕತ್ತಿ, ಶಾಸಕ.  
ನಿಮ್ಮ ಹೆಸರಲ್ಲಿರುವ ಕತ್ತಿಯೇ ಎಲ್ಲಕ್ಕೂ ಕಾರಣ.

---------------------

ಮೀಸಲಾತಿ ನಿರ್ಮೂಲನೆ ಬಿಜೆಪಿ, ಆರೆಸ್ಸೆಸ್‌ನ ಡಿಎನ್‌ಎ ಯಲ್ಲಿಯೇ ಇದೆ - ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ.
ಮೀಸಲಾತಿ ನಿರ್ಮೂಲನೆಯಾಗುತ್ತದೋ ಇಲ್ಲವೋ, ಕಾಂಗ್ರೆಸ್ ಅಂತೂ ನಿರ್ಮೂಲದ ಹಾದಿಯಲ್ಲಿದೆ.

---------------------

ನನಗೂ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇದೆ - ಬಿ.ಸಿ.ಪಾಟೀಲ್, ಸಚಿವ.
ಹೊಸ ಸಿನೆಮಾದಲ್ಲಿ ಮುಖ್ಯಮಂತ್ರಿಯಾಗಿ ಅಭಿನಯಿಸಿ ಆಸೆ ತೀರಿಸಿಕೊಳ್ಳಿ.

---------------------
ನನ್ನ ಯೋಗ್ಯತೆಗೆ ಸಚಿವ ಸ್ಥಾನವಲ್ಲ, ಮುಖ್ಯಮಂತ್ರಿ ಸ್ಥಾನವೇ ಸಿಗಬೇಕು -  ಉಮೇಶ್ ಕತ್ತಿ, ಶಾಸಕ.
  ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎನ್ನುವ ನಿಮ್ಮ ಹೋರಾಟಕ್ಕೆ ಇದು ಕಾರಣವೇ?

---------------------
ನಾನು ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ.
ಆದರೆ ಬೇರೆಯೇ ಹೊಸ ತಪ್ಪನ್ನು ಮಾಡುತ್ತೀರಿ ಎಂದಾಯಿತು.

---------------------

ದಿಲ್ಲಿಯಲ್ಲಿ ಮತ್ತೆ ಆಪ್ ಅಧಿಕಾರಕ್ಕೆ ಬಂದಿರುವುದು ಬಿಜೆಪಿಗೆ ಆದ ಹಿನ್ನಡೆ ಅಲ್ಲ - ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ.
ಪಾಕಿಸ್ತಾನಕ್ಕೆ ಆದ ಹಿನ್ನಡೆ ಎಂದು ಸ್ಪಷ್ಟವಾಗಿ ಹೇಳಿ ಬಿಡಿ.

---------------------
ಬಿಜೆಪಿ ಚುನಾವಣೆಗಳ ಫಲಿತಾಂಶ ಏನೇ ಬಂದರೂ ಸ್ವಾಗತಿಸುತ್ತದೆ- ಸಿ.ಟಿ.ರವಿ, ಸಚಿವ.
  ಸ್ವಾಗತಿಸದೇ ತಿರಸ್ಕರಿಸುವುದಕ್ಕಾಗುತ್ತದೆಯೇ?

---------------------

ಶಾಸಕ ಕುಮಟಳ್ಳಿಗೆ ಸಚಿವ ಸ್ಥಾನ ನೀಡದಿದ್ದರೆ ಸಿಎಂ ಯಡಿಯೂರಪ್ಪ ವಚನ ಭ್ರಷ್ಟರಾಗುತ್ತಾರೆ - ಬಸನಗೌಡ ಪಾಟೀಲ್ ಯತ್ನಾಳ, ಶಾಸಕ.
ಭ್ರಷ್ಟಾತಿ ಭ್ರಷ್ಟರಿಂದಲೇ ರಚನೆಯಾಗಿರುವ ಸರಕಾರದಲ್ಲಿ ವಚನಭ್ರಷ್ಟರಾಗುವುದು ತಪ್ಪೇನಿಲ್ಲ.

---------------------

ಮೂರು ವರ್ಷಗಳಲ್ಲಿ ಕರ್ನಾಟಕವನ್ನು ಸುವರ್ಣ ರಾಜ್ಯ ಮಾಡುವ ಸಂಕಲ್ಪ ಮಾಡಲಾಗಿದೆ - ಎನ್. ರವಿಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ.
ಕರ್ನಾಟಕದ ಹೆಸರು ಬದಲಿಸುವ ಉದ್ದೇಶವಿರಬೇಕು.

---------------------
ಕಾಂಗ್ರೆಸ್‌ಗೆ ಈಗ ಹೋರಾಟದ ಸಮಯ - ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ.

 ಹೋರಾಡುವುದಕ್ಕೆ ಅಲ್ಲಿ ಕಾರ್ಯಕರ್ತರು ಬೇಡವೇ?

---------------------

ದೇಶದಲ್ಲಿ ಪ್ರಧಾನಿ ಮೋದಿಗೆ ಸರಿಸಾಟಿಯಾದ ನಾಯಕ ಯಾರೂ ಇಲ್ಲ - ಉಮಾಭಾರತಿ, ಬಿಜೆಪಿ ನಾಯಕಿ.
ಹೌದು, ಇಷ್ಟು ಬೇಗ ದೇಶವನ್ನು ಮುಳುಗಿಸಿದ ಇನ್ನೊಬ್ಬ ಪ್ರಧಾನಿ ಇರಲು ಸಾಧ್ಯವೇ ಇಲ್ಲ.

---------------------

ವಿದ್ಯುನ್ಮಾನ ಮತ ಯಂತ್ರಗಳನ್ನು ತಿರುಚುವುದು ಸಾಧ್ಯವೇ ಇಲ್ಲ - ಸುನಿಲ್ ಅರೋರಾ, ಮುಖ್ಯ ಚುನಾವಣಾ ಆಯುಕ್ತ.
ಪ್ರಯತ್ನಿಸಿ ವಿಫಲರಾಗಿ ನೀಡಿದ ಹತಾಶ ಹೇಳಿಕೆಯಂತಿದೆ.

---------------------
ಪ್ರಜಾಪ್ರಭುತ್ವ ಹಾಗೂ ಬಹುತ್ವ ವ್ಯವಸ್ಥೆಯಲ್ಲಿ ಭಾರತ - ಅಮೆರಿಕ ಸಮಾನ ದೃಷ್ಟಿಕೋನ ಹೊಂದಿದೆ - ನರೇಂದ್ರ ಮೋದಿ, ಪ್ರಧಾನಿ.
ಹೌದು, ಎರಡೂ ದೇಶಗಳ ನಾಯಕರೂ ಅದರ ಬಗ್ಗೆ ನಂಬಿಕೆಯನ್ನು ಇಟ್ಟಿಲ್ಲ.\

---------------------
ನನ್ನನ್ನು ಸಚಿವನನ್ನಾಗಿ ಮಾಡಿ ಎಂದು ನಾನು ಗೋಗರೆಯುವುದಿಲ್ಲ- ಎಚ್.ವಿಶ್ವನಾಥ್, ಮಾಜಿ ಶಾಸಕ.

ಗೋಗರೆಯುವ ಇನ್ನೊಂದು ವಿಧಾನ ಇದು.

---------------------
 ನೆಲಕ್ಕ ಬಿದ್ದ ಬೀಜ, ಹೃದಯ ಸ್ಪರ್ಶಿ ಮಾತು ಯಾವತ್ತೂ ಉತ್ತಮ ಫಲ ಕೊಡದಿರಲು ಸಾಧ್ಯವಿಲ್ಲ - ಕೋಟ ಶ್ರೀನಿವಾಸ ಪೂಜಾರಿ, ಸಚಿವ.

ಆದರೆ ನೆಲಕ್ಕೆ ಬಿದ್ದ ವಿಷ ಬೀಜ, ಕೋಮುವಾದಿ ಮಾತು ಉತ್ತಮ ಫಲಕೊಡುವುದು ಹೇಗೆ ಸಾಧ್ಯ ?

---------------------
 ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ‘ಗೋಲಿ ಮಾರೋ’, ‘ಇಂಡೋ-ಪಾಕ್ ಮ್ಯಾಚ್’ಗಳಂತಹ ದ್ವೇಷ ಭಾಷಣಗಳಿಂದ ಬಿಜೆಪಿ ಸೋತಿರಬಹುದು - ಅಮಿತ್ ಶಾ, ಕೇಂದ್ರ ಸಚಿವ.
ಇವಿಎಂನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳದೇ ಇರುವ ಸಾಧ್ಯತೆಯೂ ಕಾಣುತ್ತದೆ.

---------------------

 ಕಾಂಗ್ರೆಸ್ ಪಕ್ಷವನ್ನು ಉಳಿಸಿ ಬೆಳೆಸಬೇಕಿದ್ದರೆ ಸರ್ಜಿಕಲ್ ಆ್ಯಕ್ಷನ್ ಅನಿವಾರ್ಯ- ವೀರಪ್ಪ ಮೊಯ್ಲಿ, ಕಾಂಗ್ರೆಸ್ ನಾಯಕ.
ಸರ್ಜಿಕಲ್ ದಾಳಿ ನಡೆಸಲು ಮೋದಿಯವರು ತುದಿಗಾಲಲ್ಲಿ ನಿಂತಿದ್ದಾರೆ.

---------------------

ದಿಲ್ಲಿ ಚುನಾವಣೆ ಬೆಂಗಳೂರು ಕಾರ್ಪೊರೇಶನ್ ಮಟ್ಟದ್ದು, ಅದಕ್ಕೆ ಅಷ್ಟೊಂದು ಮಹತ್ವ ಕೊಡುವ ಅಗತ್ಯ ಇಲ್ಲ - ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ.
ಕೊನೆಗೂ ಬಿಜೆಪಿ ಕಾರ್ಪೊರೇಶನ್ ಕಸದ ಲಾರಿ ಸೇರಿ ಬಿಟ್ಟಿತು ನೋಡಿ.

---------------------

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು