varthabharthi


ಅನುಗಾಲ

ಗೋಡೆ ಕಟ್ಟುವ ಕೆಲಸ

ವಾರ್ತಾ ಭಾರತಿ : 19 Feb, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಒಂದೆಡೆ ದೇಶವನ್ನು ಅಖಂಡ ಭಾರತವಾಗಿಸುವ ಘೋಷಣೆಯನ್ನು ಹೇಳುತ್ತ ಇನ್ನೊಂದೆಡೆ ಈಗಾಗಲೇ 1947ರಲ್ಲಿ ಆಗಿರುವ ವಿಭಜನೆ ಸಾಲದೆಂಬಂತೆ ದೇಶದವನ್ನು ಮತ್ತೆ ವಿಭಜಿಸಲು ಹಣಿಯುವ ಶಕ್ತಿಗಳಿಗೆ ಇದೇನೂ ಮಹಾಸಂಗತಿಯೆಂದು ಅನ್ನಿಸಲಿಕ್ಕಿಲ್ಲ. ಆದರೆ ಗೋಡೆಗಳೇ ನಿರ್ಮೂಲವಾಗಿ ನಿರ್ಮಲ ಭಾರತವನ್ನು ಕಟ್ಟಬೇಕೆಂದಿರುವ ಮನಸ್ಸುಗಳಿಗೆ ಈ ಗೋಡೆಕಟ್ಟುವ ಕಾಯಕವು ಅಹಂಕಾರದ, ದೌರ್ಜನ್ಯದ, ಪ್ರತ್ಯೇಕತಾವಾದದ, ಸಾಮಾಜಿಕ ವಿಭಜನೆಯ ಸ್ರೋತದಂತೆ ಕಾಣಿಸುತ್ತದೆ. ಈ ಗೋಡೆಯಿಂದ ಆಚೆಗೆ ಏನಿದೆಯೆಂದು ಕೇಳುವಷ್ಟು ವಿವೇಕ ನಮ್ಮ ಅಭಿನಯ ವಿವೇಕಾನಂದರಿಗೂ ಇಲ್ಲ; ಟ್ರಂಪ್‌ಗೂ ಇಲ್ಲ. ಆದ್ದರಿಂದ ಈ ಗೋಡೆ ಟ್ರಂಪ್ ಗುಜರಾತ್ ಬಿಟ್ಟುಹೋಗುವವರೆಗೆ ಮಾತ್ರ ಎಂಬ ಯೋಜನೆ ಫಲಕಾರಿಯಾಗಬಹುದು.


ಕುಮಾರವ್ಯಾಸ ಭಾರತದ ಉದ್ಯೋಗಪರ್ವದ ಎಂಟನೆಯ ಸಂಧಿಯಲ್ಲಿ ಕೃಷ್ಣನು ಹಸ್ತಿನಾವತಿಗೆ ಕೌರವನೊಂದಿಗೆ ಸಂಧಾನಕ್ಕೆ ಬರುವ ಪ್ರಸಂಗವಿದೆ. ಕೃಷ್ಣ ಆ ಕಾಲದ ಮಹಾಮಹಿಮ; ಒಂದರ್ಥದಲ್ಲಿ ದೊಡ್ಡಣ್ಣ. ಅವನು ಬರುತ್ತಾನೆಂದು ಮತ್ತು ತನ್ನಲ್ಲಿಗೇ ಬರುತ್ತಾನೆಂದು ಕೌರವನು ‘ತನ್ನರಮನೆಗೆ ಹರಿIಬಾರದಿರನೆಂದಖಿಳ ವಿಧದಲಿIಸಾರ ವಸ್ತುವ ತರಿಸಿಯಾರೋಗಣೆಗೆ ಮಾಡಿಸಿದII’’ ಕೃಷ್ಣನು ದೃತರಾಷ್ಟ್ರನ ಮನೆಗೆ ಭೇಟಿಕೊಟ್ಟು ಆನಂತರ ಕೌರವನ ಮನೆಗೆ ಬಂದನೆಂಬ ಸೂಚನೆಯಿದೆ-‘‘ಅವನಿಪನ ಬೀಳ್ಕೊಟ್ಟು ಕೌರವ ಭವನವನು ಬೀಳ್ಕೊಟ್ಟು.’’ ಆದರೆ ಊಟಕ್ಕೆ, ಉಳಿಯುವುದಕ್ಕೆ ಕೃಷ್ಣ ಎಲ್ಲ ಅತಿರಥ ಮಹಾರಥರ ಭವನಗಳನ್ನು ಬಿಟ್ಟು ‘‘ವಿದುರನ ಮನೆಗೆ ನಡೆತಂದ.’’ ಮುಂದಿನ ಕತೆಯನ್ನು ಗಮನಿಸಿದರೆ ಇದೇ ಮಹಾಭಾರತದ ತಿರುವು. ಕೃಷ್ಣನು ‘‘ತೊತ್ತಿನ ಮಗನ ಮನೆಯಲಿ ಹಸಿವ ನೂಂಕಿದ’’ ಸಿಟ್ಟಿನಲ್ಲಿ ಕೌರವನು ಜರೆದು ಅದಕ್ಕೆ ವಿದುರನಂತಹ ವಿದುರನೂ ಸಿಡಿದದ್ದು, ಕುರುಕ್ಷೇತ್ರ ಯುದ್ಧ ನಡೆದದ್ದು ಮತ್ತು ದ್ವಾಪರ ಯುಗವೇ ಅಂತ್ಯವಾದದ್ದು ಈಗ ಪುರಾಣ.

19ನೆಯ ಶತಮಾನದ ಲೇಖಕ ಜಾನ್ ರಸ್ಕಿನ್‌ನ ‘Unto this Last’ (ಅಂತ್ಯೋದಯ) ಕೃತಿಯ ಪ್ರೇರಣೆಯಿಂದಲೇ ಸಮಾಜದ ಕೊನೆಯ ದಲಿತನ ಅಭಿವೃದ್ಧಿಯಾಗುವ ವರೆಗೂ ಸಾಮಾಜಿಕ ನ್ಯಾಯ ಮತ್ತು ಸ್ವಾತಂತ್ರ್ಯ ಅರ್ಥಹೀನವೆಂದು ಮಹಾತ್ಮಾ ಗಾಂಧಿಯವರಿಗೆ ಮನವರಿಕೆಯಾಯಿತು. ಅಸ್ಪಶ್ಯತಾ ನಿವಾರಣೆ ಈ ನಿಟ್ಟಿನಲ್ಲಿ ಭಾರೀ ದೂರ ಸಾಗುವ ಹೆಜ್ಜೆಯಾಯಿತು. ಗುರುದೇವ ರವೀಂದ್ರನಾಥ ಟಾಗೋರ್ ಬರೆದ ‘Let My Country Awake’ ಕವಿತೆಯು ಜಗತ್ತನ್ನು ಸ್ವಂತ/ಸ್ವಾರ್ಥಹಿತದ ಗೋಡೆಗಳ ಮೂಲಕ ಒಡೆಯುವುದರ ಮತ್ತು ಕಿರಿದಾಗಿಸುವುದರ (Where the world has not been broken up into fragments by narrow domestic walls) ದುರಂತವನ್ನು ಸ್ಪಷ್ಟಪಡಿಸುತ್ತದೆ.

ತನ್ನ ಅಧಿಕಾರ, ಕಾಲದ ಆನಂತರ ಉಳಿಯಬೇಕಾದರೆ ತತ್ಕಾಲೀನ ಲಾಭವನ್ನು ಮೀರಿ ಯೋಚಿಸಬೇಕಾಗುತ್ತದೆ. ಅದು ಎಲ್ಲರಿಗೂ ಸಾಧ್ಯವಿಲ್ಲ. ಪ್ರಾಯಃ ಇಂತಹ ಮಹೋನ್ನತ ಧ್ಯೇಯ, ಉದ್ದೇಶಗಳನ್ನು ಹೊಂದಿರುವುದ ರಿಂದಲೇ ಮಹಾತ್ಮರಾಗಲು, ಗುರುದೇವರಾಗಲು ಸಾಧ್ಯ. ಉಳಿದವರೆಲ್ಲರೂ ಇತರರಿಗೆ ನಾಮ ಹಾಕಿದ ಅಂಕಿತ ನಾಮಗಳಷ್ಟೇ ಆಗಬಹುದು. ಎಲ್ಲ ಪ್ರಸಂಗಗಳ, ವ್ಯಕ್ತಿ-ಶಕ್ತಿಗಳ ನೆನಪಾಗುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸುತ್ತಿದ್ದಾರೆ. ತನ್ನ ದೇಶದಲ್ಲೇ ವಿವಾದಕ್ಕೊಳಗಾದವರು ವಿಶ್ವಮಟ್ಟದಲ್ಲಿ ಎಷ್ಟು ಎತ್ತರಕ್ಕೆ ಹೋಗಬಹುದೆಂದು ಸಾಮಾನ್ಯರೂ ಊಹಿಸಬಹುದು. ಆದರೆ ಪ್ರಚಾರವೇ ಪ್ರಸಿದ್ಧಿಯೆಂದು ತಿಳಿದವರಿಗೆ ಇದೆಲ್ಲ ಅರ್ಥವಾಗುವುದಿಲ್ಲ. ಇವರೆಲ್ಲ ಕ್ಷುದ್ರ ರಾಜಕಾರಣಿಗಳಾಗಿ ಮಾಧ್ಯಮಗಳಲ್ಲಿ ಅನಿವಾರ್ಯವಾಗುವ ತಮ್ಮ ಭಾವಚಿತ್ರ, ಮೆರವಣಿಗೆ ಹಾರದ ಭಾರ, ಇವನ್ನೇ ಸಾರ್ವಕಾಲಿಕ ಮೌಲ್ಯವೆಂದು ಬಗೆಯುತ್ತಾರೆ; ಭ್ರಮಿಸುತ್ತಾರೆ. ಟ್ರಂಪ್ ಅವರ ಭಾರತ ಭೇಟಿ ವಿವಾದಗಳನ್ನು ಸೃಷ್ಟಿಸದಿದ್ದರೂ ಈಗಾಗಲೇ ಸಾಕಷ್ಟು ಹಾಸ್ಯದ, ವ್ಯಂಗ್ಯದ ಹೊನಲನ್ನು ಹರಿಸಿದೆ. ಇದಕ್ಕೆ ಭಾರತ ಸರಕಾರ ಅಥವಾ ಭಾರತವನ್ನು ಸದ್ಯ ಆಳುವವರು ಬೇಕಷ್ಟು ಸಮರ್ಥನೆಯನ್ನು ಒದಗಿಸಿದ್ದಾರೆ. ನಮ್ಮ ಪ್ರಧಾನಿಯವರಿಗೆ ಗಾಂಧಿಯನ್ನು ನೆನಪಾಗುವುದು ಗಾಂಧಿಯ ಗುಜರಾತ್ ಮೂಲದಲ್ಲಿ ಮಾತ್ರವೇ ಆಗಿರುವುದು ಸೋಜಿಗ. ಅದನ್ನೇ ನೆನಪಾಗಿಟ್ಟುಕೊಂಡು ಯಾರೇ ರಾಷ್ಟ್ರ ನಾಯಕ ಬಂದರೂ ಗುಜರಾತ್‌ನಲ್ಲೇ ಅರಂಗೇಟ್ರಂ ಮಾಡಿಸುತ್ತಾರೆ. ಆನಂತರ ದಿಲ್ಲಿ, ರಾಷ್ಟ್ರಪತಿ, ಸಂಸತ್ ಇವೆಲ್ಲ. ಹಿಂದೆ ಜಪಾನ್ ಪ್ರಧಾನಿ ಬಂದಾಗಲೂ ಬುಲೆಟ್ ರೈಲಿನ ನೆಪದಲ್ಲಿ ಗುಜರಾತ್‌ಗೆ ಎಳೆದೊಯ್ದ ಪ್ರಧಾನಿ ಈಗ ಟ್ರಂಪ್ ಅವರನ್ನು ಅಕ್ಷರಶಃ ಗುಜರಾತ್‌ಗೆ ಹೊತ್ತೊಯ್ಯಲಿದ್ದಾರೆ.

ಟ್ರಂಪ್ ಗುಜರಾತ್‌ಗೆ ಬರುವುದು ಅವರ ಭಾರತ ಭೇಟಿಗಿಂತಲೂ ದೊಡ್ಡದಾಗಿ ಪ್ರಚಾರವಾಗುತ್ತಿದೆ. ಹಿಂದೆಲ್ಲ ಊರಿಗೆ ಬಂದವರು ಕೇರಿಗೆ ಬಾರದಿಹರೇ ಎಂಬಂತೆ ದೇಶಕ್ಕೆ ಆಗಮಿಸುವ ವಿಶ್ವನಾಯಕರು ರಾಷ್ಟ್ರ ರಾಜಧಾನಿಗೆ ಬಂದು ಇತರ ಅನೇಕ ಸ್ಥಳಗಳಿಗೆ ಭೇಟಿ ನೀಡುತ್ತಾರೆಂದು ನಿರೀಕ್ಷಿಸಲಾಗುತ್ತಿತ್ತು. ಆದರೆ ಈಗ ಕೇರಿಗೆ ಬಂದವರು ಊರಿಗೆ ಬಾರದಿಹರೇ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕಾದ ಪ್ರಸಂಗ ಎದುರಾಗಿದೆ. ಪರಿಸ್ಥಿತಿ ಗುಜರಾತ್ ಭಾರತದೊಳಗೋ, ಭಾರತ ಗುಜರಾತ್‌ನೊಳಗೋ ಎಂಬಂತಿದೆ. ಟ್ರಂಪ್ ಬರುತ್ತಿರುವುದು ಗಾಂಧಿಯ ಗುಜರಾತ್‌ಗಲ್ಲ; ಪಟೇಲರ ಗುಜರಾತ್‌ಗೂ ಅಲ್ಲ. ಅವರು ಆಗಮಿಸುವುದು ಮೋದಿ-ಶಾ ಅವರ ಗುಜರಾತ್‌ಗೆ. ಟ್ರಂಪ್‌ರನ್ನು ಗುಜರಾತ್‌ನಲ್ಲಿ ಅನಿವಾರ್ಯವಾಗಿ ಸಬರ್‌ಮತಿಗೆ, ಆನಂತರ ದಿಲ್ಲಿಗೆ ಆಗಮಿಸಿದಾಗ ರಾಜಘಾಟ್‌ಗೆ ಕರೆದೊಯ್ಯಬೇಕಾಗಬಹುದು. ಈ ಸ್ಥಳಗಳೆಲ್ಲ ಈಗ ಸರಕಾರಕ್ಕೆ ಕೌಪೀನಗಳಂತೆ ಮಾನರಕ್ಷಣೆಯ ಸಾಮಗ್ರಿಗಳು. ಪೂರ್ತಿ ಬೆತ್ತಲೆಯಾಗಲು ಸರಕಾರ ಸಿದ್ಧವಿರಲಾರದು!

ವಿಷಾದನೀಯ ಮತ್ತು ಹಾಸ್ಯಮಯ ಸಂಗತಿಗಳೆಂದರೆ ಡೊನಾಲ್ಡ್ ಟ್ರಂಪ್ ಗುಜರಾತ್‌ನಲ್ಲಿ ‘ಕಳೆಯುವ’ ಮೂರು ಘಂಟೆಗಳ ಸಮಯಕ್ಕೆ ಸುಮಾರು ನೂರು ಕೋಟಿ ರೂಪಾಯಿಗಳನ್ನು ‘ಕಳೆಯಲು’ ಗುಜರಾತ್ ಸರಕಾರ ಯೋಜಿಸಿದ್ದು ಮಾತ್ರವಲ್ಲ ಅದನ್ನು ಅನುಷ್ಠಾನಗೊಳಿಸಿದೆಯಂತೆ. ಅಹಮದಾಬಾದ್‌ನ ವಿಶ್ವದ ಅತೀದೊಡ್ಡ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಭಾರತ ಮತ್ತು ಅಮೆರಿಕದ ನಾಯಕರು ತಮ್ಮ ಬಾಂಧವ್ಯವನ್ನು ಮತ್ತಷ್ಟು ‘ಗಟ್ಟಿಗೊಳಿಸಲಿದ್ದಾರೆ’. ವಿಮಾನ ನಿಲ್ದಾಣದಿಂದ ಈ ಧರ್ಮಕ್ಷೇತ್ರಕ್ಕೆ ಹೋಗುವ ಹಾದಿಯನ್ನು ಈಗಾಗಲೇ (ರಾಜಕಾರಣಿಗಳ ಕಮಿಷನ್, ಗುತ್ತಿಗೆದಾರರ ಅಕ್ರಮಲಾಭವೂ ಸೇರಿದಂತೆ) ಸುಮಾರು 60 ಕೋಟಿ ರೂಪಾಯಿಗಳ ವೆಚ್ಚದಲ್ಲಿ ‘ಗಟ್ಟಿಗೊಳಿಸಲಾಗಿದೆ’ಯೆಂದು ಮಾಧ್ಯಮಗಳು ವರದಿ ಮಾಡಿವೆ. ಕೌರವನೂ ಕೃಷ್ಣನ ಭೇಟಿಯ ಸಂದರ್ಭದಲ್ಲಿ ಹಸ್ತಿನಾವತಿಯನ್ನು ಹೀಗೇ ಶೃಂಗರಿಸಿದ್ದನಲ್ಲವೇ? ಆದ್ದರಿಂದ ಇಷ್ಟೇ ಆಗಿದ್ದರೆ ಇದು ಈ ದೇಶದ ಅನಾದಿ ರಾಜಕಾರಣವೆಂದು ಸುಮ್ಮನಾಗಬಹುದಿತ್ತು. ಆದರೆ ಬಡತನವೆಂಬ ಈ ದೇಶದ ಗರ್ಭಗುಡಿಯು ಟ್ರಂಪ್ ಕಣ್ಣಿಗೆ ಕಾಣದಂತೆ ಎಲ್ಲೆಲ್ಲಿ ವಿದುರನ ಕುಟೀರಗಳಿವೆಯೋ ಅವು ಪಥಿಕರಿಗೆ ಕಾಣಿಸದಂತೆ ಗೋಡೆಗಳನ್ನು ಕಟ್ಟಲಾಗಿದೆಯಂತೆ. ಚೀನಾದ ಮಹಾಗೋಡೆ ಇದೇ ಕಾರಣಕ್ಕೆ ಕಟ್ಟಲಾಗಿದೆಯೆಂಬುದಕ್ಕೆ ಸಮರ್ಥನೆಯಿಲ್ಲ. ಬರ್ಲಿನ್‌ನಲ್ಲಿದ್ದ ಪೂರ್ವ-ಪಶ್ಚಿಮ ಜರ್ಮನಿಗಳನ್ನು ಪ್ರತ್ಯೇಕಿಸಿದ್ದ ಗೋಡೆಯನ್ನು ಅವು ಒಟ್ಟಾದಾಗ ತೆಗೆಯಲಾಗಿತ್ತು. ದೇಶದೇಶಗಳು ವಿಶ್ವದಲ್ಲಿ ಒಂದಾಗಬಯಸುವ ಈ ಕಾಲದಲ್ಲಿ ನಮ್ಮ ಜನರನ್ನು, ಸಮಾಜವನ್ನು, ದೇಶದೊಳಗಿನ ಪ್ರದೇಶಗಳನ್ನು ವಿಭಜಿಸಲು ಗೋಡೆಕಟ್ಟಲು ನಿರ್ಧರಿಸಿದ ನಾಗಾಲೋಟದ ವ್ಯಕ್ತಿಗೆ ನಿಜಕ್ಕೂ ಇಗ್ನೋಬಲ್ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು.

ಒಂದೆಡೆ ದೇಶವನ್ನು ಅಖಂಡ ಭಾರತವಾಗಿಸುವ ಘೋಷಣೆಯನ್ನು ಹೇಳುತ್ತ ಇನ್ನೊಂದೆಡೆ ಈಗಾಗಲೇ 1947ರಲ್ಲಿ ಆಗಿರುವ ವಿಭಜನೆ ಸಾಲದೆಂಬಂತೆ ದೇಶದವನ್ನು ಮತ್ತೆ ವಿಭಜಿಸಲು ಹಣಿಯುವ ಶಕ್ತಿಗಳಿಗೆ ಇದೇನೂ ಮಹಾಸಂಗತಿಯೆಂದು ಅನ್ನಿಸಲಿಕ್ಕಿಲ್ಲ. ಆದರೆ ಗೋಡೆಗಳೇ ನಿರ್ಮೂಲವಾಗಿ ನಿರ್ಮಲ ಭಾರತವನ್ನು ಕಟ್ಟಬೇಕೆಂದಿರುವ ಮನಸ್ಸುಗಳಿಗೆ ಈ ಗೋಡೆಕಟ್ಟುವ ಕಾಯಕವು ಅಹಂಕಾರದ, ದೌರ್ಜನ್ಯದ, ಪ್ರತ್ಯೇಕತಾವಾದದ, ಸಾಮಾಜಿಕ ವಿಭಜನೆಯ ಸ್ರೋತದಂತೆ ಕಾಣಿಸುತ್ತದೆ. ಈ ಗೋಡೆಯಿಂದ ಆಚೆಗೆ ಏನಿದೆಯೆಂದು ಕೇಳುವಷ್ಟು ವಿವೇಕ ನಮ್ಮ ಅಭಿನಯ ವಿವೇಕಾನಂದರಿಗೂ ಇಲ್ಲ; ಟ್ರಂಪ್‌ಗೂ ಇಲ್ಲ. ಆದ್ದರಿಂದ ಈ ಗೋಡೆ ಟ್ರಂಪ್ ಗುಜರಾತ್ ಬಿಟ್ಟುಹೋಗುವ ವರೆಗೆ ಮಾತ್ರ ಎಂಬ ಯೋಜನೆ ಫಲಕಾರಿಯಾಗಬಹುದು.

ಗುಜರಾತ್‌ನ ಆಡಳಿತಶಕ್ತಿಗಳು ಇನ್ನೂ ಒಂದಷ್ಟು ಮುಂದೆ ಸಾಗಿದ್ದಾರೆ. ಅವರು ಅಲ್ಲಿನ ಅನೇಕ ಸ್ಲಮ್‌ನಿವಾಸಿಗಳನ್ನು ಜಾಗಬಿಟ್ಟು ಹೋಗುವಂತೆ ನೋಟಿಸ್ ನೀಡಿದ್ದಾರೆ. ಆರ್ಕಿಮಿಡೀಸ್ ತನಗೊಂದು ಸನ್ನೆಯನ್ನೂ ಭೂಮಿಯ ಹೊರಗೆ ನಿಲ್ಲಲು ಜಾಗವನ್ನೂ ನೀಡಿದರೆ ಭೂಮಿಯನ್ನೇ ಎತ್ತಬಹುದೆಂದು ಹೇಳಿದ್ದನಂತೆ. ಈ ಮಂದಿಗೆ ಭೂಮಿಯ ಹೊರಗೆ ಒಂದಿಷ್ಟು ಜಾಗವನ್ನು ನೀಡಿದ್ದರೆ ಟ್ರಂಪ್ ಬಂದು ಹೋಗುವ ವರೆಗೆ ಅವರನ್ನು ಅಲ್ಲಿ ನೆಲೆಯೂರಿಸಬಹುದಿತ್ತು. ಆದರೆ ವಿಶ್ವಮಾನ್ಯ ವಿಶ್ವಗುರು ಭಾರತಕ್ಕೆ ಈ ಸಾಧನೆಯಿಲ್ಲ; ಸಾಧನಗಳಿಲ್ಲ. ಆದ್ದರಿಂದ ಅವರನ್ನು ಅತಂತ್ರರನ್ನಾಗಿಸಲು ಮಾತ್ರ ಸಾಧ್ಯ. ನತದೃಷ್ಟ ಬಡವರಿಗೆ ಇಲ್ಲೇ ಸ್ವರ್ಗ, ಇಲ್ಲೇ ನರಕ!

ಒಂದು ವೇಳೆ ಈ ಗೋಡೆಗಳಿಲ್ಲದಿದ್ದರೆ ಈ ದಲಿತರನ್ನು, ಅಸಹಾಯಕರನ್ನು ತೋರಿಸಿ ಅಮೆರಿಕದಿಂದ ಭಾರತವು ಒಂದಿಷ್ಟು ಸಹಾಯವನ್ನಾದರೂ ಬೇಡಬಹುದಿತ್ತೇನೋ? ಪ್ರಚಾರಪ್ರಿಯ ಟ್ರಂಪ್ ಅದನ್ನು ನೀಡುತ್ತಿದ್ದನೇನೋ? ಆದರೆ ಈ ಗೋಡೆಗಳು ಅಂತಹ ಸಾಧ್ಯತೆಯನ್ನೂ ಇಲ್ಲವಾಗಿಸಿವೆ. ಟ್ರಂಪ್ ಈಗಾಗಲೇ ಭಾರತವನ್ನು ‘ಅಭಿವೃದ್ಧಿಶೀಲ’ (ಆರ್ಥಿಕವಾಗಿ ಬೆಳೆೆಯುತ್ತಿರುವ) ಸ್ಥಾನಮಾನದಿಂದ ‘ಅಭಿವೃದ್ಧಿಹೊಂದಿದ’ ರಾಷ್ಟ್ರವಾಗಿ ‘ಮೇಲೇರಿ’ಸಿರುವುದರಿಂದ (ಕರಾವಳಿಯ ಭೂತಾರಾಧನೆಯಲ್ಲಿ ವಿಷ್ಣುಮೂರ್ತಿ ದೈವದ ಒತ್ತೆಕೋಲದಲ್ಲಿ ದೈವ ನಡೆದಾಡುವ ಅಗ್ನಿವೇದಿಕೆಗೆ ‘ಮೇಲೇರಿ’ ಎಂದು ಹೇಳುತ್ತಾರೆಂದು ಕೇಳಿದ್ದೇನೆ!) ನಾವು ಒಳಗೇನೂ ಬಟ್ಟೆ ಹಾಕದಿದ್ದರೂ ಮೇಲಿನಿಂದ ಕೋಟು ತೊಟ್ಟು ನಡೆಯುವುದಕ್ಕೆ ಅಡ್ಡಿಯಿಲ್ಲ. ಇರಾಕಿನ ಸದ್ದಾಮ್‌ಹುಸೈನ್‌ನನ್ನೂ ಅಮೆರಿಕ ಹೀಗೆಯೇ ಮೇಲೇರಿಸಿತ್ತು!

ಟ್ರಂಪ್ ಭಾರತಕ್ಕೆ ಬರುವುದು ಪ್ರೀತಿಯಿಂದಲೂ ಅಲ್ಲ; ರಾಜಕಾರಣದ ಕರ್ತವ್ಯದಿಂದಲೂ ಅಲ್ಲ. ಶುದ್ಧ ಪ್ರಚಾರಕ್ಕೆ. ಈಗಾಗಲೇ ಅವರಿಗೆ ಭಾರತದಲ್ಲಿ 50-60 ಲಕ್ಷ ಜನರು ಸ್ವಾಗತಕ್ಕಾಗಿ ಸೇರುತ್ತಾರೆಂಬ ಭರವಸೆಯನ್ನು ನೀಡಲಾಗಿದೆಯಂತೆ! ‘ಹೌಡಿ ಮೋಡಿ’ಗೆ ಇದೊಂದು ರೀತಿಯ ಪ್ರತೀಕಾರ ಅಥವಾ ವಿನಿಮಯತಂತ್ರ! ಆದರೆ ಇದು ಹೊರಗಿನ ವಿದ್ಯಮಾನವಷ್ಟೇ ಹೊರತು ನೈಜವಲ್ಲ. ಟ್ರಂಪ್ ಮತ್ತು ಅಮೆರಿಕ ವೈಯಕ್ತಿಕವಾಗಿ ಎಷ್ಟೇ ಮೂರ್ಖರಾದರೂ ಒಟ್ಟಾಗಿ ಬುದ್ಧಿವಂತರು. ಭಾರತ ಇದಕ್ಕೆ ತದ್ವಿರುದ್ಧ. ವೈಯಕ್ತಿಕವಾಗಿ ಎಷ್ಟೇ ಬುದ್ಧಿವಂತರಾದರೂ ಒಟ್ಟಾದಾಗ ಮೂರ್ಖರಂತೆ ವರ್ತಿಸುತ್ತಾರೆ! ಅಮೆರಿಕ ತನ್ನ ವ್ಯಾಪಾರಿ ಬುದ್ಧಿಯನ್ನು ಎಂದೂ ತೊರೆದದ್ದಿಲ್ಲ. ವಿಶ್ವದ ಎಲ್ಲ ಬಡ ಮತ್ತು ಬೆಳೆಯುತ್ತಿರುವ ದೇಶಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿ ಅವುಗಳನ್ನು ಬಡಿದಾಡಿಸಿ ಇನ್ನಷ್ಟು ಬಡವಾಗಿಸಿ ಅವರನ್ನು ಸಾಲದ ಶೂಲಕ್ಕೆ ನೇತುಹಾಕುವುದೇ ಅಮೆರಿಕದ ಶಾಶ್ವತ ಸಿದ್ಧಾಂತವೆಂದು ಕಳೆದ ಅನೇಕ ದಶಕಗಳ ಅದರ ಅಂತರ್‌ರಾಷ್ಟ್ರೀಯ ರಾಜಕಾರಣ ಹೇಳಿದೆ. (ಎಷ್ಟೇ ಒಳ್ಳೆಯ ಅಧ್ಯಕ್ಷರು ಬಂದಾಗಲೂ ಅಮೆರಿಕ ಈ ಹಾದಿಯನ್ನು ತೊರೆಯದಂತೆ ಅದರ ಪೆಂಟಗಾನ್, ಎಫ್‌ಬಿಐ, ಸಿಐಎಗಳು ವ್ಯೆಹರಚಿಸಿವೆ.) ತೈಲ ನೀತಿ, ಯುದ್ಧಸಿಕ್ತ ದೇಶಗಳ ಗುತ್ತಿಗೆಯನ್ನು ಹಿಡಿಯುವ ತಂತ್ರಗಳಲ್ಲೂ ಅಮೆರಿಕ ವಿಶ್ವದ ಇತರ ಎಲ್ಲ ರಾಷ್ಟ್ರಗಳಿಂದ ಮುಂದಿದೆ.

ಈ ಬಾರಿಯೂ ಅಷ್ಟೇ: ಭಾರತಕ್ಕೆ ಬರುವ ಮೊದಲೇ ಅಮೆರಿಕ ಭಾರತದ ನೌಕಾಪಡೆಗೆ ಅಗತ್ಯವಾದ 24 ಹೆಲಿಕಾಪ್ಟರ್‌ಗಳನ್ನು ಪೂರೈಸುವ ಒಪ್ಪಂದವನ್ನು ಅಂತಿಮಗೊಳಿಸಿದೆ. ಇವುಗಳ ಬೆಲೆ 2.4 ಬಿಲಿಯನ್ ಅಮೆರಿಕನ್ ಡಾಲರ್‌ಗಳು. ಶಾಂತಿಸ್ಥಾಪನೆಯ ಮಾತುಗಳನ್ನಾಡುತ್ತಲೇ ಹೀಗೆ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಮೂಲಕ ನಾವು ಅಮೆರಿಕವನ್ನು ಇನ್ನಷ್ಟು ಶ್ರೀಮಂತಗೊಳಿಸುತ್ತಿದ್ದೇವೆಂಬ ಮತ್ತು ಬುದ್ಧಿಹೀನತೆಯ ದೃಢೀಕರಣ ಪತ್ರವನ್ನು ಟ್ರಂಪ್ ಅವರಿಂದಲೂ ಪಡೆಯುತ್ತಿದ್ದೇವೆಂಬ ಧನ್ಯತಾಭಾವವನ್ನು ಹೊಂದಬಹುದು. ಭವಿಷ್ಯದಲ್ಲಿ ನಮ್ಮನ್ನು ಇಷ್ಟು ಸುದೃಢಗೊಳಸಿದ ಟ್ರಂಪ್ ಅವರ ಪ್ರತಿಮೆ ನಮ್ಮ ದೇಶದಲ್ಲಿ ಅದರಲ್ಲೂ ಗಾಂಧಿಯ ಗುಜರಾತ್‌ನಲ್ಲಿ ಸ್ಥಾಪನೆಯಾದರೂ ಅಚ್ಚರಿಯಿಲ್ಲ.

ಕನ್ನಡದ ಕವಿ ಗೋಪಾಲಕೃಷ್ಣ ಅಡಿಗರು ಕಾವ್ಯದ ಮೂಲಕ ಕನ್ನಡವನ್ನು ಕಟ್ಟುವ ಕೆಲಸ ಮಾಡಿದರು. ಜೊತೆಗೇ ‘‘ಕಟ್ಟುವೆವು ನಾವು ಹೊಸ ನಾಡೊಂದನು,-ರಸದ ಬೀಡೊಂದನು’’ ಎಂದರು. ಇನ್ನೊಂದು ಕವಿತೆಯಲ್ಲಿ ‘‘ನರರ ನಡುವಿನಡ್ಡ ಗೋಡೆಗಳನು ಕುಟ್ಟಿ ಕೆಡಹುವೆೆವು’’ ಎಂದರು. ದುರದೃಷ್ಟವಶಾತ್ ಕವಿಕಾಣ್ಕೆಯ ಸತ್ಯ ಜನರಿಗೆ ಮನದಟ್ಟಾಗುತ್ತಿಲ್ಲ. ಎದೆಗು ಎದೆಗು ನಡುವಿರುವ ಹಿರಿಗಡಲಿಗೆ ಸೇತುವೆ ಕಟ್ಟುವ ಬದಲು ಕ್ಷುದ್ರ ಉದ್ದೇಶಗಳ ಈಡೇರಿಕೆಗಾಗಿ ಮನೆಗಳ ಮನಗಳ ನಡುವೆ ಗೋಡೆಕಟ್ಟಲು ಮನಸ್ಸುಮಾಡಿದ್ದೇವೆ. ಸ್ವಾತಂತ್ರ್ಯವೆಂದರೆ ರಾಜಕೀಯ ಸ್ವಾತಂತ್ರ್ಯ ಮತ್ತು ನಮ್ಮವರಿಂದಲೇ ನಾವು ಅವಮಾನಿತರಾಗುವುದೆಂದಷ್ಟೇ ತಿಳಿದಿದ್ದೇವೆ. ಪರಿಣಾಮದಲ್ಲಿ ವಿದುರನ ಸ್ಥಾನಮಾನ ಬದಲಾಗುವುದಿಲ್ಲ; ಕೃಷ್ಣಸಾಮೀಪ್ಯ ದಕ್ಕುವುದಿಲ್ಲ; ಕೌರವನ ವಿಜೃಂಭಣೆ ಕೊನೆಗಾಣುವುದಿಲ್ಲ. ಗಾಂಧಿ ಮತ್ತು ಟಾಗೋರ್ ಸಮಾಧಿಯೊಳಗೆ ನರಳುವುದು ನಿಲ್ಲುವುದಿಲ್ಲ.
 ... Into that heaven of freedom, my Father, let my country awake’ (ಅಲ್ಲಿಯಾ ಬಂಧನ ರಹಿತ ಸುಖದ ಸ್ವರ್ಗದಲಿ, ಪಾಲಿಸೈ ಪಿತ! ನಮ್ಮ ನಾಡೆಚ್ಚರಿರಲಿ.) ಎಂಬ ಟಾಗೋರರ ಮಾತುಗಳು ಸತ್ಯವಾಗುವ ಕಾಲಕ್ಕೆ ಕಾಯೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)