varthabharthi


ವೈವಿಧ್ಯ

ಪತ್ರಿಕಾ ವ್ಯವಸಾಯವನ್ನು ಬಾಧಿಸುವ ಪಂಚ ಭೂತಗಳು

ವಾರ್ತಾ ಭಾರತಿ : 23 Feb, 2020
ಗೌರೀಶ ಕಾಯ್ಕಿಣಿ

ಸತ್ಯದಷ್ಟು ಬೆರಗಿನ ದಿಗಿಲಿನ ಸುದ್ದಿ ಬೇರೆ ಯಾವುದೂ ಇಲ್ಲ-ಎಂಬ ಸಂಗತಿಯನ್ನೇ ಸುದ್ದಿಗಾರರು ಮರೆತಂತೆ ಆಗಿದೆ. ಸುದ್ದಿಗಾರ ಸದ್ದುಗಾರನಾಗಬಾರದು. ಸುಳ್ಳುಗಾರನೂ ಆಗಬಾರದು. ‘ಗಾರ’ನಿಗಿಂತ ಸುದ್ದಿಗೇ ಪ್ರಾಧಾನ್ಯವಿರಬೇಕು. ಕೊನೆಗೂ ಸುದ್ದಿಗಾರ ಹೇಗೇ ಇರಲಿ ಈ ಪಂಚ ಭೂತಗಳು ಪತ್ರಿಕಾ ವ್ಯವಸಾಯದಲ್ಲಿ ಇನ್ನೂ ಸದಾ ಜಾಗೃತವಾಗಿ ಊರ್ಜಿತವಾಗಿ ಉಳಿಯತಕ್ಕವೇ? ಅಂದಾಗ ಈ ಭೂತಾಟಿಕೆಯಿಂದ ಪತ್ರಿಕಾಕರ್ತರ ಬಿಡುಗಡೆಯ ಮಂತ್ರ ಯಾವುದು? ಮಾಂತ್ರಿಕರು ಯಾರು?

ಪತ್ರಿಕೋದ್ಯಮವನ್ನು ಬಾಧಿಸುವ ಪಂಚಭೂತಗಳು ಯಾವುವು? ಮುಂಬೈಯ ದೈನಿಕ ‘ನವ ಕಾಳ’ ಪತ್ರಿಕೆಯ ಸಂಪಾದಕ ಶ್ರೀ ನೀಲಕಂಠ ಖಾಡೀಲಕರರು ಪುಣೆಯಲ್ಲಿ ವಸಂತ ವ್ಯಾಖ್ಯಾನ ಮಾಲೆಯಲ್ಲಿ ಈ ಪ್ರಶ್ನೆಗಳನ್ನೆತ್ತಿಕೊಂಡು ಭೂತ ವಧೆಯ ಮೇಲೆ ಚೆನ್ನಾಗಿ ಬೆಳಕು ಬೀರಿದ್ದರು. ಅದರ ಸಾರಾಂಶವನ್ನು ಇಲ್ಲಿ ಕೊಡಲಾಗಿದೆ.

ನಾವು ದಿನಪತ್ರಿಕೆಗಳಲ್ಲಿ ದಿನದ ಸುದ್ದಿ ಓದುತ್ತೇವೆ. ನಿನ್ನೆಯ ಅಗ್ರಲೇಖನ ಇಂದಿನ ನಮ್ಮ ರಾಜಕೀಯ ಬುದ್ಧಿವಂತಿಕೆ ಆಗುತ್ತದೆ. ಕೆಲವು ಸಲ ಸುದ್ದಿಯ ಕೆಳಗೂ ಒಳಗೂ ಹಿಂದೂ ಮುಂದೂ ನಾವು ಓದುತ್ತೇವೆ. ಅದರಿಂದ ನಮ್ಮದೇ ಅಭಿಪ್ರಾಯ ಕಟ್ಟುತ್ತೇವೆ. ಆ ಬಗೆಗೆ ಹರಟೆ ಕೊಚ್ಚುತ್ತೇವೆ.

ಇಷ್ಟೆಲ್ಲ ಆಗಿಯೂ ಒಂದು ಪತ್ರಿಕೆ ಹೇಗೆ ಬದುಕುತ್ತದೆ, ಅದರ ಧೋರಣೆ-ಧಾರಣೆಗಳನ್ನು ಯಾರು ಹೇಗೆ ರೂಪಿಸುತ್ತಾರೆ.? ಈ ಬಗೆಗೆ ನಮಗೆ ದೀಪದ ಬುಡದಷ್ಟೇ ಕತ್ತಲೆ. (ವಿದ್ಯುದ್ದೀಪವಿದ್ದರೆ ಆ ಕತ್ತಲೆ ಕೆಳಗಲ್ಲ ಮೇಲೆ!)

ಶ್ರೀ ಖಾಡೀಲಕರರು ವರ್ಣಿಸಿದಂತೆ ಪಾರತಂತ್ರ್ಯದ ಕಾಲದಲ್ಲಿ ವೃತ್ತಪತ್ರಿಕೆಗಳು ಸ್ವ್ವತಂತ್ರವಿದ್ದವು. ಆದರೆ ಸ್ವಾತಂತ್ರ್ಯ ಬಂದ ನಂತರ ಪತ್ರಿಕೆಗಳು ಪರತಂತ್ರವಾಗ ಹತ್ತಿದೆ.! ಬ್ರಿಟಿಷ್ ಆಳರಸರನ್ನು ಟೀಕಿಸುವ ನಿರ್ಭಯ ನಿರ್ಭಿಡೆಯ ವೃತ್ತಿ ಇಂದು ಉಳಿದಿಲ್ಲ- ಅಂದರೆ ಸರಕಾರದ ಟೀಕೆ ನಡೆಯುತ್ತದೆ, ಆದರೆ ಅದರ ಇಂಗಿತ ಬೇರೆಯೇ ಇರುತ್ತದೆ.

ಈ ವಾತಾವರಣದಲ್ಲಿ ಪತ್ರಿಕೆಗಳನ್ನು ಬಾಧಿಸಿದ ಮೊದಲನೆಯ ಭೂತವು ಬಂಡವಾಳದಾರ. ವೃತ್ತಪತ್ರ ವ್ಯವಸಾಯದಲ್ಲಿ ಇಂದು ಬಂಡವಾಳದಾರ ನುಗ್ಗಿ ನಿಂತಿದ್ದಾನೆ. ಅವನ ಉದ್ದೇಶವೇನು? ಸರಕಾರದ ಮೇಲೆ ಒತ್ತಾಯ ತರುವುದು ಮತ್ತು ಜನತೆಯಲ್ಲಿ ದಿಗ್ಭ್ರಮೆ ಎಂಟು ಮಾಡುವುದು. ಇದಕ್ಕಾಗಿ ಬಂಡವಾಳದಾರರಿಗೆ ಪ್ರಸಿದ್ಧಿಯ ಒಂದು ಸಾಧನ, ಪ್ರಚಾರದ ಒಂದು ಆಯುಧ ಬೇಕು. ಪತ್ರಿಕೆಯ ಉದ್ದಿಮೆಯಲ್ಲಿ ಕನಿಷ್ಠ 25 ಲಕ್ಷ ರೂಪಾಯಿ ತೊಡಗಿಸಿದ ಈ ಭೂಪತಿ ಸುಮ್ಮನಿರುವುದು ಸಾಧ್ಯವೇ? ಇಂದು ಒಂದು ದಿನ ಪತ್ರಿಕೆ ನಡೆಸಲು ಕನಿಷ್ಠ 25 ಲಕ್ಷ ರೂಪಾಯಿ ಚೆಲ್ಲಬೇಕು ಮತ್ತು ಅದನ್ನು ಕಳೆದುಕೊಳ್ಳಲಿಕ್ಕೂ ಸಿದ್ಧರಿರಬೇಕು. ಈ ಶಕ್ತಿ ಬಂಡವಾಳದಾರನಿಗಲ್ಲದೆ ಇನ್ಯಾರಿಗೆ? ಬಡ ಸಂಪಾದಕನ ಸಂಪಾದನೆಯು ಬಡತನದಲ್ಲಿ ಒಂದು ವ್ಯಾಯಾಮ. ಹಿರಿಯ ಸಂಪಾದಕರ ಬಾಯಿಗೆ ನಾಣ್ಯದ ತೊಬರಿ.

ಅಷ್ಟೊಂದು ಹಣ ಹಾಕಿದ ಮೇಲೆ ಅದರ ಯೋಗ್ಯ ಅಯೋಗ್ಯ ಪ್ರತಿಫಲ ಗಿಟ್ಟಿಸಿಕೊಳ್ಳಲು ಬಿಡುವುದು ಬಂಡವಾಳಗಾರಿಕೆಯ ಧರ್ಮವಲ್ಲ. ಈ ಅನರ್ಥದ ಮುನ್ಸೂಚನೆ ಲೋಕಮಾನ್ಯ ತಿಲಕರು 1889ರಲ್ಲಿಯೇ ಕೊಟ್ಟಿದ್ದುಂಟು. ಅಂದು ಅವರು ‘ಕೇಸರಿ’ ಪತ್ರಿಕೆಯ ಪ್ರಥಮ ಅಗ್ರ ಲೇಖನದಲ್ಲಿ ಬರೆದಿದ್ದರು. ‘‘ಪತ್ರಿಕಾ ವ್ಯವಸಾಯಕ್ಕೆ ಸಂಬಂಧವಿಲ್ಲದ ಮಂದಿ ಮುದ್ರಣಾಲಯಗಳನ್ನು ತೆರೆದು ಪತ್ರಿಕೆ ನಡೆಸಬಹುದು’’ ಎಂದಿದ್ದರು ಲೋಕ ಮಾನ್ಯರು.

ಪತ್ರಿಕಾ ವ್ಯವಸಾಯಕ್ಕೆ ಬಾಧಕವಾದ ಎರಡನೆಯ ಭೂತ ತೀರಾ ಹೊಸತು- ಅದು ರದ್ದಿ ತಂತ್ರ! ಹೆಚ್ಚು ಪುಟಗಳನ್ನು ಹಾಕಿ ಸಂಚಿಕೆ ತೆಗೆಯುವುದು. ಆ ಸಂಚಿಕೆಯನ್ನು ಓದುಗನು ರದ್ದಿ ಬೆಳೆಯನ್ನು ಗಮನದಲ್ಲಿ ಇಟ್ಟುಕೊಂಡು ಕೊಂಡುಕೊಳ್ಳುವನು. ಸಂಚಿಕೆಗಳು ಮಾರಿ ಹೋಗದಿದ್ದರೂ ವಿಕ್ರಯವಾಗಿವೆ ಎಂದು ಲೆಕ್ಕಪತ್ರದಲ್ಲಿ ಕಾಣಿಸುವುದು ಮತ್ತು ಪತ್ರಿಕಾ ಕಚೇರಿಯ ರದ್ದಿಯನ್ನು ಏಜೆಂಟನೇ ಮಾರಬೇಕೆಂದು ಗೊತ್ತು ಮಾಡಿಬಿಟ್ಟರೆ ಈ ರದ್ದಿ ತಂತ್ರ ಸಿದ್ಧವಾಗುತ್ತದೆ. ಈ ತಂತ್ರದಿಂದ ಕಾಗದದ ಕಳ್ಳಬೇಟೆ ನಡೆಸಲಿಕ್ಕೂ ಅನುಕೂಲ. ಅಲ್ಲದೆ ಅತಿ ದೊಡ್ಡ ಪ್ರಸಾರದ ಪತ್ರಿಕೆಯೆಂದು ಪ್ರಸಿದ್ಧಿ-ಪ್ರಶಸ್ತಿಗಳ ದೊಡ್ಡಸ್ತಿಕೆ ಬೇರೆ.

ಇಂದು ಧ್ಯೇಯವಿಲ್ಲ. ದೃಷ್ಟಿ ಇಲ್ಲ. ಪತ್ರಿಕೆಗಳು ರದ್ದಿಯ ತಂತ್ರದ ಬಲದಿಂದ ಯಶಸ್ವಿಯಾಗಿ ನಡೆಯುತ್ತವೆ!

ಬಿಳಿಯ ಹಾಳೆಯ ಮೇಲೆ ಪತ್ರಿಕಾಕರ್ತ ಗೀಚಿದೊಡನೆ ಅದು ರದ್ದಿ ಆಯಿತು. ಬಿಳಿ ನ್ಯೂಸ್‌ಪ್ರಿಂಟ್ ಬೆಲೆ 12 ರೂಪಾಯಿಗೆ ಒಂದು ಕಿಲೋ. ಪತ್ರಿಕೆಗಳ ರದ್ದಿಯು ಒಂದು ರೂಪಾಯಿಗೆ ಒಂದು ಕಿಲೋದಂತೆ ಮಾರುತ್ತದೆ. ಪತ್ರಿಕಾ ವಿಕ್ರಯದ ಮತ್ತು ಪ್ರಸಾರದ ಅಂಕಿ ಸಂಖ್ಯೆಗಳನ್ನು ಹೆಚ್ಚಿಸುವುದಕ್ಕಾಗಿ ಬಂಡವಾಳಗಾರರು ಈ ರದ್ದಿ ತಂತ್ರದ ಪ್ರಯೋಗಗಳನ್ನು ಧಾರಾಳವಾಗಿ ಮಾಡುತ್ತಾರೆ.

ಪತ್ರಿಕೆಗಳನ್ನು ಕಾಡುವ ಮೂರನೆಯ ಭೂತ ಜಾಹೀರಾತುಗಳು ಮತ್ತು ಏಜೆಂಟರು. ಅನೇಕ ಮಾಸ ಪತ್ರಿಕೆಗಳು ಕೇವಲ ಇಂತಹ ಜಾಹೀರಾತು ಗಳಿಗಾಗಿಯೇ ನಡೆಯುತ್ತವೆ.

ಪತ್ರಿಕಾ ಪ್ರಪಂಚದಲ್ಲಿ ರಿಂಗಣ ಹಾಕುವ ನಾಲ್ಕನೆಯ ಭೂತ ರಾಜಕೀಯ ಧುರೀಣರದ್ದು. ಈ ಧುರೀಣರಿಗೆ ಪತ್ರಿಕೆಗಳಲ್ಲಿ ಆದಷ್ಟು ಹೆಚ್ಚು ಪ್ರಸಿದ್ಧಿ ಬೇಕು. ಅವರ ಮೇಲೆ ಟೀಕೆ ಟಿಪ್ಪಣಿ ಬಂದರೆ ಏನೇನೂ ಸಹಿಸಲಾಗದು. ಅಲ್ಲದೆ ಅವರ ವಿರೋಧಿಗಳ ಸುದ್ದಿ-ಪ್ರಸಿದ್ಧಿಯೂ ಅವರು ಕೃಪಾಪೋಷಣೆ ಕೊಡುವ ಪತ್ರಿಕೆಗಳಲ್ಲಿ ಬರಕೂಡದು. ಪತ್ರಿಕೆಯ ಸಂಪಾದಕ ಸಂಚಾಲಕರು ಈ ಕಡ್ಡಾಯಕ್ಕೆ ಮಣಿಯದಿದ್ದರೆ ಗುಂಡ ಪುಂಡರನ್ನು ಹಾಕಿ ಅವರನ್ನು ಚೆನ್ನಾಗಿ ಹೊಡೆಸುವುದೂ ಈ ಬೂಟಾಟಿಕೆಯ ಒಂದು ತಂತ್ರ!

ಇನ್ನು ಸುಪ್ರೀಂ ಕೋರ್ಟ್ ಪತ್ರಿಕೆ ವ್ಯವಸಾಯದ ಬೆನ್ನಿಗೆ ನಿಂತ ಐದನೇ ಭೂತ ಟೈಮ್ಸ್‌ನಂತಹ ದೊಡ್ಡ ಪತ್ರಿಕೆಗಳು ವರಿಷ್ಠ ನ್ಯಾಯಾಲಯದಲ್ಲಿ ಹೋಗಿ ತಮ್ಮ ಪುಟಸಂಖ್ಯೆ ಬೆಳೆಸಿಕೊಳ್ಳಬಲ್ಲವು. ಆದರೆ ಸಣ್ಣ ಪತ್ರಿಕೆಗಳ ಹಣದ ಚೀಲ ಅಲ್ಲಿಯ ತನಕ ನಿಲುಕುವಷ್ಟೂ ಉದ್ದವಿರುವುದಿಲ್ಲ. ತೆಪ್ಪಗೆ ಕೂತು ಬಿಡಬೇಕಾಗುತ್ತದೆ. ಒಂದು ದೊಡ್ಡ ಪತ್ರಿಕೆಯ ಹಕ್ಕಿನ ರಕ್ಷಣೆ ಮಾಡುವಾಗ ಅನೇಕ ಸಣ್ಣ ಪತ್ರಿಕೆಗಳ ಹಕ್ಕುಗಳು ಕಾಲಡಿಗೆ ಬೀಳುತ್ತವೆ. ಸ್ವತಂತ್ರ ಭಾರತದಲ್ಲಿ ನ್ಯಾಯದ ಕಣ್ಣಿಗೆ ಎಲ್ಲರೂ ಸಮಾನರು. ನ್ಯಾಯದೇವತೆಯ ಕಣ್ಣಿಗಂತೂ ಪಟ್ಟಿಯೇ ಕಟ್ಟಿದೆ. ಆದರೆ ನ್ಯಾಯಾಧೀಶರ ಕಣ್ಣಿಗೆ ತಾರತಮ್ಯ ತೋರದೆ ಹೋದೀತೇ?

ಇದೆಲ್ಲ ಭೂತ ಬಾಧೆಯ ಪರಿಣಾಮವೇನು? ಇಂದು ಪತ್ರಿಕೆಗಳ ಪ್ರಸಾರ ಬೆಳೆದಿದೆ. ಆದರೆ ಪ್ರಭಾವ ಕಡಿಮೆಯಾಗಿದೆ. ಪತ್ರಿಕೆಗಳ ಮೇಲಿನ ಜನತೆಯ ವಿಶ್ವಾಸ ಹಾರಿಹೋಗಿದೆ. ಇಂದು ಪತ್ರಿಕಾ ವ್ಯವಸಾಯ ನೀರಸವಾಗ ಹತ್ತಿದೆ. ಕಿವಿಗಡಚಿಕ್ಕುವಂತಾಗಿದೆ ಅಥವಾ ಬೇಸರದ್ದಾಗಿದೆ. ವ್ಯವಸಾಯದಲ್ಲಿ ಗುಣವತ್ತತೆಯ ಮೇಲೆ ನಡೆಯುವ ಸ್ಪರ್ಧೆ ಮುಗಿಯಲು ಬಂದಿದೆ.

ಸತ್ಯದಷ್ಟು ಬೆರಗಿನ ದಿಗಿಲಿನ ಸುದ್ದಿ ಬೇರೆ ಯಾವುದೂ ಇಲ್ಲ-ಎಂಬ ಸಂಗತಿಯನ್ನೇ ಸುದ್ದಿಗಾರರು ಮರೆತಂತೆ ಆಗಿದೆ. ಸುದ್ದಿಗಾರ ಸದ್ದುಗಾರನಾಗಬಾರದು. ಸುಳ್ಳುಗಾರನೂ ಆಗಬಾರದು. ‘ಗಾರ’ನಿಗಿಂತ ಸುದ್ದಿಗೇ ಪ್ರಾಧಾನ್ಯವಿರಬೇಕು. ಕೊನೆಗೂ ಸುದ್ದಿಗಾರ ಹೇಗೇ ಇರಲಿ ಈ ಪಂಚ ಭೂತಗಳು ಪತ್ರಿಕಾ ವ್ಯವಸಾಯದಲ್ಲಿ ಇನ್ನೂ ಸದಾ ಜಾಗೃತವಾಗಿ ಊರ್ಜಿತವಾಗಿ ಉಳಿಯತಕ್ಕವೇ? ಅಂದಾಗ ಈ ಭೂತಾಟಿಕೆಯಿಂದ ಪತ್ರಿಕಾಕರ್ತರ ಬಿಡುಗಡೆಯ ಮಂತ್ರ ಯಾವುದು? ಮಾಂತ್ರಿಕರು ಯಾರು?

(1992ರಲ್ಲಿ ಬರೆದ ಲೇಖನ) 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)