varthabharthi


ಪ್ರಚಲಿತ

ಈ ಬೆಳಕಿನ ಕಿರಣಗಳು ಸದಾ ಪ್ರಜ್ವ ಲಿಸಲಿ

ವಾರ್ತಾ ಭಾರತಿ : 24 Feb, 2020
ಸನತ್ ಕುಮಾರ್ ಬೆಳಗಲಿ

ಕೋಮುವಾದದ ವಿರುದ್ಧ ಪ್ರಗತಿಪರ ಸಂಘಟನೆಗಳ ಹೋರಾಟದ ಸ್ವರೂಪವೂ ಬದಲಾಗಬೇಕಾಗಿದೆ. ಈವರೆಗೆ ಅವರು ಮಾಡುವ ಕ್ರಿಯೆಗೆ ನಾವು ಪ್ರತಿಕ್ರಿಯೆ ನೀಡುತ್ತಾ ಬಂದಿದ್ದೇವೆ. ಅವರು ಕೋಮು ಪ್ರಚೋದಕ ದುಷ್ಕೃತ್ಯ ಎಸಗಿದರೆ ನಾವು ತಕ್ಷಣ ಬೆಂಗಳೂರಿನ ಟೌನ್ ಹಾಲ್ ಮುಂದೆ ಹಾಗೂ ಆಯಾ ಜಿಲ್ಲೆಗಳ ಪ್ರಮುಖ ವೃತ್ತಗಳಲ್ಲಿ ಸಾಂಕೇತಿಕ ಪ್ರತಿಭಟನೆ ಮಾಡಿ ಸಮಾಧಾನ ಪಟ್ಟುಕೊಳ್ಳುತ್ತೇವೆ. ಎಂದಿನಂತೆ ಮತ್ತೆ ನಿತ್ಯದ ಕಾಯಕದಲ್ಲಿ ತೊಡಗುತ್ತೇವೆ.ಅವರು ಬೆಂಕಿ ಹಚ್ಚಿದಾಗ ಮತ್ತೆ ಸೇರಿ ಪ್ರತಿಭಟನೆ ಮಾಡುತ್ತೇವೆ. ಈ ವಿಧಾನ ಬದಲಾಗಬೇಕಾಗಿದೆ.


ಈ ಭಾರತ ಎಂಬುದೇ ತುಂಬ ಚಿತ್ರ, ವಿಚಿತ್ರವಾದ ದೇಶ. ಇಲ್ಲಿನ ಜನರ ಸೌಹಾರ್ದದ ಬದುಕು ಅನನ್ಯವಾದದ್ದು. ಶತಮಾನಗಳಿಂದ ಹಲವಾರು ಪೆಟ್ಟುಗಳನ್ನು ತಿಂದರೂ ತನ್ನತನ ಉಳಿಸಿಕೊಂಡಿದೆ. ಒಂದೆಡೆ ಬೆಂಕಿ ಹಚ್ಚುವವರಿದ್ದಾರೆ, ಇನ್ನೊಂದೆಡೆ ಆ ಬೆಂಕಿಯನ್ನು ನಂದಿಸುವವರೂ ಇಲ್ಲಿದ್ದಾರೆ. ಇದನ್ನು ನಾಝಿ ಹಿಟ್ಲರ್‌ನ ಮಾದರಿ ಹಿಂದೂ ರಾಷ್ಟ್ರವನ್ನಾಗಿ ಬದಲಿಸಲು ಹೊರಟಿದ್ದ ಭಾಗವತರು ಇತ್ತೀಚೆಗೆ ತಮ್ಮ ವರಸೆಯನ್ನು ಬದಲಿಸಿದ್ದಾರೆ. ಹಿಟ್ಲರ್‌ನ ರಾಷ್ಟ್ರೀಯವಾದವನ್ನು ನಾವು ಒಪ್ಪುವುದಿಲ್ಲ. ಆದರೆ ನಮ್ಮದು ರಾಷ್ಟ್ರೀಯತೆ. ರಾಷ್ಟ್ರವಾದ ಅಲ್ಲ ಎಂದಿದ್ದಾರೆ. ಅವರು ರಾಜಕೀಯ ತಂತ್ರಗಾರಿಕೆಯಿಂದ ಈ ಮಾತು ಹೇಳಿರಬಹುದು. ಇದರಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಫ್ಯಾಶಿಸಂ ತನ್ನ ಹಳೆಯ ವೇಷ ಕಳಚಿ ಹೊಸ ವೇಷವನ್ನು ಧರಿಸುತ್ತಿದೆ. ಎಪ್ಪತ್ತು, ಎಂಬತ್ತರ ದಶಕದ ಪ್ರಗತಿಪರರ ಪ್ರತಿರೋಧದ ಸ್ವರೂಪ ಬದಲಾಗಬೇಕಾದ ಕಾಲಘಟ್ಟವಿದು. ಈ ಬಗ್ಗೆ ಇನ್ನಷ್ಟು ಚಿಂತನೆ, ಅಧ್ಯಯನಗಳು ನಡೆಯಬೇಕಾಗಿದೆ.

ಇಲ್ಲಿ ಇತ್ತೀಚೆಗೆ ಅಸದುದ್ದೀನ್ ಉವೈಸಿ ಅವರ ಪಕ್ಷದ ವಾರೀಸ್ ಪಠಾಣ್ ಆಡಿದ ಮಾತು ವಿವಾದದ ಅಲೆಯನ್ನು ಎಬ್ಬಿಸಿ ಎಫ್‌ಐಆರ್ ದಾಖಲಾಗಿದೆ. ನೂರು ಕೋಟಿ ಹಿಂದೂಗಳಿಗೆ 25 ಕೋಟಿ ಮುಸ್ಲಿಮರು ಸಮ ಎಂದು ಏನೇನೊ ಆತ ಮಾತಾಡಿದ್ದರು. ಆತ ಹೀಗೆ ಮಾತಾಡಿದ ಬೆನ್ನಲ್ಲೇ ಕೇಂದ್ರ ಸಚಿವ ಗಿರಿರಾಜ ಸಿಂಗ್, ‘ಭಾರತದ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳಿಸಿ ಅಲ್ಲಿನ ಹಿಂದೂಗಳನ್ನು ಭಾರತಕ್ಕೆ ಕರೆತರಬೇಕು’ ಎಂದು ಹೇಳಿದರು. ಈ ಗಿರಿರಾಜ ವಿರುದ್ಧ ಎಫ್‌ಐಆರ್ ದಾಖಲಾಗಲಿಲ್ಲ. ದಾಖಲಾಗುವ ಸೂಚನೆಗಳೂ ಇಲ್ಲ.

ಈ ಬೆಂಕಿ ಬಹಾದ್ದೂರರು ಹಾಳಾಗಿ ಹೋಗಲಿ, ನಮ್ಮ ಉತ್ತರ ಕರ್ನಾಟಕದ ಗದಗ್‌ನಲ್ಲಿ ಇನ್ನೊಂದು ಘಟನೆ ನಡೆಯಿತು. ಲಿಂಗಾಯತ ಮಠವೊಂದು ಬಸವ ತತ್ವಕ್ಕೆ ಮಾರು ಹೋಗಿರುವ ಮುಸ್ಲಿಮ್ ವ್ಯಕ್ತಿಗೆ ಲಿಂಗದೀಕ್ಷೆ ನೀಡಿ ತನ್ನ ಶಾಖಾ ಮಠಕ್ಕೆ ಪೀಠಾಧಿಪತಿಯನ್ನಾಗಿ ಮಾಡಲು ಮುಂದಾಗಿದೆ. ರೋಣ ತಾಲೂಕಿನ ಅಸೂಟಿ ಗ್ರಾಮದಲ್ಲಿ ಫೆಬ್ರವರಿ 26 ರಂದು ಈ ಪಟ್ಟಾಧಿಕಾರ ಕಾರ್ಯಕ್ರಮ ನಡೆಯಲಿದೆ. ಈ ಗ್ರಾಮದ ದಿವಾನ ರೆಹಮಾನ್ ಸಾಬ್ ಶರೀಫ ಎಂಬವರು ಲಿಂಗದೀಕ್ಷೆ ಪಡೆದು ಪೀಠಾಧಿಪತಿಯಾಗಲಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಕೊರ್ಣೇಶ್ವರ ಮಠದ ಶ್ರೀ ಮುರುಘಾರಾಜೇಂದ್ರ ಸ್ವಾಮಿಗಳು ಲಿಂಗದೀಕ್ಷೆ ನೀಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಬೆಂಕಿ ಬಹಾದ್ದೂರರು ಬೆಂಕಿ ಹಚ್ಚಲು ಎಷ್ಟೇ ಮಸಲತ್ತು ನಡೆಸಿದರೂ ಲಿಂಗಾಯತ ಮಠಗಳು ಸೌಹಾರ್ದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿವೆ. ಹನ್ನೆರಡನೇ ಶತಮಾನದ ಬಸವಣ್ಣನವರ ಪ್ರಭಾವ ಈ ಭಾಗದಲ್ಲಿ ದಟ್ಟವಾಗಿದೆ. ಕಲಬುರಗಿಯ ಬಂದೇ ನವಾಝ್ ದರ್ಗಾಕ್ಕೆ ಹಿಂದೂಗಳು ನಡೆದುಕೊಳ್ಳುವಂತೆ ಅನೇಕ ಮುಸ್ಲಿಮ್ ಕುಟುಂಬಗಳು ಬಸವಣ್ಣನ ತತ್ವಗಳಲ್ಲಿ ನಂಬಿಕೆ ಇಟ್ಟುಕೊಂಡು ಬದುಕುತ್ತಿವೆ. ನಮಾಝನ್ನೂ ಮಾಡುತ್ತಾರೆ. ಅದೇ ರೀತಿ ಲಿಂಗಾಯತರ ಮಠಗಳಿಗೂ ಹೋಗುತ್ತಾರೆ. ಗದುಗಿನ ಶ್ರೀ ತೋಂಟದಾರ್ಯ ಸಿದ್ದಲಿಂಗ ಸ್ವಾಮಿಗಳು ಬದುಕಿದ್ದಾಗ ಮಠದ ವಾರ್ಷಿಕ ಜಾತ್ರಾ ಮಹೋತ್ಸವ ಸಮಿತಿಗೆ ಮುಸ್ಲಿಮ್ ವ್ಯಕ್ತಿಯನ್ನು ಅಧ್ಯಕ್ಷನನ್ನಾಗಿ ಮಾಡಿ ಕೋಮುವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಪೌರತ್ವ ತಿದ್ದುಪಡಿ ಕಾಯ್ದೆ ತಂದು ಭಾರತದ 25 ಕೋಟಿ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳಿಸುತ್ತೇವೆ ಎಂಬುದು ಮೂರ್ಖರು ಆಡುವ ಮಾತು. ಈ ನೆಲದ ಮಣ್ಣಿನಲ್ಲಿ ಜನಿಸಿ ರಕ್ತದ ರಕ್ತವಾದ ಉಸಿರಿನ ಉಸಿರಾದ ಮುಸ್ಲಿಮ್ ಬಾಂಧವರನ್ನು ಬೆಳಗಾಗುವುದರಲ್ಲಿ ಪಾಕಿಸ್ತಾನಕ್ಕೆ ಕಳಿಸುತ್ತೇವೆ ಎಂದು ಹೇಳಲು ಅವರೇನೂ ತರಕಾರಿ ಮೂಟೆಗಳಲ್ಲ. ಇಲ್ಲಿನ ರಾಜಕೀಯ, ಸಂಸ್ಕೃತಿ, ಸಾಹಿತ್ಯ, ಸಂಗೀತ, ವ್ಯಾಪಾರ, ಉದ್ಯಮ, ದುಡಿಮೆಯ ಎಲ್ಲ ರಂಗಗಳಲ್ಲಿ ಹಾಸು ಹೊಕ್ಕಾಗಿ ಬೆರೆತಿರುವವರನ್ನು ಪ್ರತ್ಯೇಕಿಸಿ ಇನ್ನೊಂದು ದೇಶಕ್ಕೆ ಕಳಿಸುತ್ತೇವೆ ಎಂದು ಹೇಳುವುದು ಅವಿವೇಕವಲ್ಲದೆ ಮತ್ತೇನೂ ಅಲ್ಲ.

ಮುಸ್ಲಿಮರನ್ನು ಮುಖ್ಯ ವಾಹಿನಿಯಿಂದ ಪ್ರತ್ಯೇಕಿಸಲು ಬೆಂಕಿ ಬಹಾದ್ದೂರರು ನಾನಾ ಮಸಲತ್ತು ನಡೆಸಿದ್ದಾರೆ. ಮುಸ್ಲಿಮರಿಗೆ ಮಕ್ಕಳು ಜಾಸ್ತಿ. ಅವರ ಜನಸಂಖ್ಯೆ ಹೆಚ್ಚಾಗುತ್ತದೆ. ಕೊಲ್ಲಿ ರಾಷ್ಟ್ರಗಳಿಂದ ಅವರಿಗೆ ಹಣ ಹರಿದು ಬರುತ್ತದೆ. ಹೀಗೆ ಏನೇನೋ ಕತೆ ಕಟ್ಟುತ್ತಾರೆ. ತಮ್ಮ ತಾಯಿನಾಡನ್ನು ಬಿಟ್ಟು ಅಮೆರಿಕ ಮತ್ತಿತರ ದೇಶಗಳಲ್ಲಿ ದುಡ್ಡಿಗಾಗಿ ನೆಲೆಸಿ ಅಲ್ಲಿನ ಪೌರತ್ವ ಪಡೆದುಕೊಂಡಿರುವ ಮೇಲ್ಜಾತಿಯ, ಮೇಲ್ವರ್ಗಗಳ ಜನ ತಾವು ಕಂಫರ್ಟ್ ರೆನ್‌ನಲ್ಲಿದ್ದು ತಮ್ಮ ಮಾತೃಭೂಮಿಯಲ್ಲಿ ಕೋಮು ದ್ವೇಷವನ್ನು, ಮತಾಂಧತೆಯನ್ನು ಬೆಂಬಲಿಸುತ್ತಾರೆ. ಇಂತಹವರೇ ನಮ್ಮ ಪ್ರಧಾನ ಸೇವಕರು ಅಲ್ಲಿ ಹೋದಾಗ, ‘ಮೋದಿ, ಮೋದಿ’ ಎಂದು ಕಿರುಚಾಡುತ್ತಾರೆ. ರಾಜದೀಪ್ ಸರ್ದೇಸಾಯಿ ಅವರಂತಹ ಪತ್ರಕರ್ತರ ಮೇಲೆ ಹಲ್ಲೆ ಮಾಡುತ್ತಾರೆ.

ಈ ನಡುವೆ ನಮ್ಮ ದೇಶವನ್ನು ಬದುಕಿಸಿದ್ದು ನಮ್ಮ ಜನತೆಯ ವಿವೇಕ ಮತ್ತು ಈ ನೆಲದಲ್ಲಿ ಆಳವಾಗಿ ಬೇರು ಬಿಟ್ಟ ಸೌಹಾರ್ದದ ಸಂಸ್ಕೃತಿ. ಈಗ ಕ್ರಮೇಣ ಇದೆಲ್ಲ ಬದಲಾಗುತ್ತಿದೆ ಎಂಬುದೂ ನಿಜ. ನಮ್ಮ ಹಳ್ಳಿಗಳು ಈಗ ಮೊದಲಿನಂತೆ ಉಳಿದಿಲ್ಲ. ಅಲ್ಲೂ ಅಸಹನೆಯ ಹೊಗೆಯಾಡುತ್ತಿದೆ. ಹೊಸ ಪೀಳಿಗೆಯ ಮೆದುಳಿನಲ್ಲಿ ವಿಷವನ್ನು ತುಂಬಲಾಗುತ್ತಿದೆ. ಇವುಗಳ ನಡುವೆ ಮುಸ್ಲಿಮರಿಗೆ ಲಿಂಗದೀಕ್ಷೆಯಂತಹ ಕಾರ್ಯಕ್ರಮಗಳೂ ನಡೆಯುತ್ತಿವೆ. ಸೂಫಿ ಸಂತರ ಉರೂಸುಗಳಿಗೆ ಜಾತಿ, ಧರ್ಮಗಳ ಭೇದವಿಲ್ಲದ ಸಾವಿರ, ಸಾವಿರ ಸಂಖ್ಯೆಯಲ್ಲಿ ಜನ ಬರುತ್ತಲೇ ಇರುತ್ತಾರೆ. ಈಗ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಹೋರಾಟಗಳಲ್ಲಿ ಅಲ್ಪಸಂಖ್ಯಾತರ ಜೊತೆ ತಳ ಸಮುದಾಯಗಳ ಜನರೂ ಬರುತ್ತಿದ್ದಾರೆ. ಆ ಸಂಖ್ಯೆ ಇನ್ನೂ ಹೆಚ್ಚಾಗಬೇಕಾಗಿದೆ.

ಕೋಮುವಾದದ ವಿರುದ್ಧ ಪ್ರಗತಿಪರ ಸಂಘಟನೆಗಳ ಹೋರಾಟದ ಸ್ವರೂಪವೂ ಬದಲಾಗಬೇಕಾಗಿದೆ. ಈವರೆಗೆ ಅವರು ಮಾಡುವ ಕ್ರಿಯೆಗೆ ನಾವು ಪ್ರತಿಕ್ರಿಯೆ ನೀಡುತ್ತಾ ಬಂದಿದ್ದೇವೆ. ಅವರು ಕೋಮು ಪ್ರಚೋದಕ ದುಷ್ಕೃತ್ಯ ಎಸಗಿದರೆ ನಾವು ತಕ್ಷಣ ಬೆಂಗಳೂರಿನ ಟೌನ್ ಹಾಲ್ ಮುಂದೆ ಹಾಗೂ ಆಯಾ ಜಿಲ್ಲೆಗಳ ಪ್ರಮುಖ ವೃತ್ತಗಳಲ್ಲಿ ಸಾಂಕೇತಿಕ ಪ್ರತಿಭಟನೆ ಮಾಡಿ ಸಮಾಧಾನ ಪಟ್ಟುಕೊಳ್ಳುತ್ತೇವೆ. ಎಂದಿನಂತೆ ಮತ್ತೆ ನಿತ್ಯದ ಕಾಯಕದಲ್ಲಿ ತೊಡಗುತ್ತೇವೆ.ಅವರು ಬೆಂಕಿ ಹಚ್ಚಿದಾಗ ಮತ್ತೆ ಸೇರಿ ಪ್ರತಿಭಟನೆ ಮಾಡುತ್ತೇವೆ. ಈ ವಿಧಾನ ಬದಲಾಗಬೇಕಾಗಿದೆ.

ಎಡಪಂಥೀಯ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮನೆಮನೆಗೆ ಹೋಗಿ ಮನೆಯ ಬಾಗಿಲು ಮಾತ್ರವಲ್ಲ ಮನದ ಬಾಗಿಲು ತಟ್ಟಿ ಎನ್‌ಆರ್‌ಸಿ ಅಪಾಯದ ಬಗ್ಗೆ ತಿಳಿಸಿಹೇಳಬೇಕು. ನಮಗೆಲ್ಲ ಆಸರೆ ನೀಡಿದ ಬಹುಮುಖಿ ಭಾರತದ ಮನೆಗೆ ಎದುರಾದ ಗಂಡಾಂತರದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಸಂಘಿಗಳು ತಮ್ಮ ಸಿದ್ಧಾಂತದ ಪ್ರಚಾರಕ್ಕಾಗಿ ಅನೇಕ ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ. ಅವರಿಗೆ ಸಾಕಷ್ಟು ಸಂಪನ್ಮೂಲಗಳೂ ಇವೆ.

ಪ್ರಗತಿಪರ ಸಂಘಟನೆಗಳಿಗೆ ಅದು ಕಷ್ಟವಾಗಬಹುದು. ಆದರೆ ಜನರ ಬಳಿ ಹೋದರೆ ಜನರು ನಂಬಿದರೆ ಕೈ ಬಿಡುವುದಿಲ್ಲ. ಇಂದಿಗೂ ಎಡಪಂಥೀಯ ಪಕ್ಷಗಳ ಬಳಿ ಹಲವಾರು ಬಲಿಷ್ಠ ಕಾರ್ಮಿಕ ಸಂಘಟನೆಗಳಿವೆ. ಬ್ಯಾಂಕ್ ಮತ್ತು ಜೀವವಿಮೆ ನೌಕರ ಸಂಘಟನೆಗಳು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿವೆ. ಈ ಸಂಪನ್ಮೂಲಗಳನ್ನು ಜನಜಾಗೃತಿಗಾಗಿ ವ್ಯಯಿಸಿದರೆ ತಪ್ಪಿಲ್ಲ. ಸಾವಿರಾರು ವಿದ್ಯಾವಂತ ಯುವಕರನ್ನು ಪೂರ್ಣಾವಧಿ ಕಾರ್ಯಕರ್ತರನ್ನಾಗಿ ಮಾಡಿ ಅವರಿಗೆ ಸೈದ್ಧಾಂತಿಕ ತರಬೇತಿ ನೀಡಿ ಜನರ ಬಳಿ ಕಳಿಸಿದರೆ ಫ್ಯಾಶಿಸ್ಟರ ಗೋಬೆಲ್ಸ್ ಪ್ರಚಾರವನ್ನು ಹಿಮ್ಮೆಟ್ಟಿ ಸಬಹುದು. ಮನುಷ್ಯ ಪ್ರೀತಿಯ ಬೆಳಕಿನ ದೀಪ ನಂದಿ ಹೋಗದಂತೆ ಕಾಪಾಡಬಹುದು. ಈ ಬಗ್ಗೆ ಪ್ರಗತಿಪರ, ಎಡಪಂಥೀಯ ಸಂಘಟನೆಗಳಲ್ಲಿ ಗಂಭೀರ ಚಿಂತನೆ ನಡೆಯಬೇಕಾಗಿದೆ.

ಇಂತಹ ಪ್ರಕ್ರಿಯೆಗೆ ಚಾಲನೆ ದೊರೆತರೆ ಇತರ ಸೆಕ್ಯುಲರ್ ಪಕ್ಷಗಳು, ಸಂಘಟನೆಗಳು, ದಲಿತ ಅಲ್ಪಸಂಖ್ಯಾತ ಸಂಘಟನೆಗಳು ಸೌಹಾರ್ದ ಬಯಸುವ ಮಧ್ಯಮ ವರ್ಗದ ಜನರು, ವ್ಯಾಪಾರಸ್ಥರು, ಉದ್ಯಮಿಗಳು ಕೈ ಜೋಡಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)