varthabharthi


ವೈವಿಧ್ಯ

ಗ್ರಾಮ ಸ್ವರಾಜ್ಯ: ಒಂದು ಪ್ರಯೋಗ

ವಾರ್ತಾ ಭಾರತಿ : 24 Feb, 2020
ಪ್ರೊ. ಶಿವರಾಮಯ್ಯ, ಬೆಂಗಳೂರು

ನೆಲಮೂಲದಿಂದ ಈ ಬಗೆಯ ಚೇತನಗಳು ಆತ್ಮವಿಶ್ವಾಸದಿಂದ ಹುಟ್ಟಿ ಬೆಳೆದು ಬರಬೇಕು. ಗ್ರಾಮ ಸ್ವರಾಜ್ಯ ಸಾಧಿಸಬೇಕು. ಸರಕಾರಗಳ ಹಂಗಿಲ್ಲದೆ ಸಾಲ ಶೂಲಕ್ಕೆ ಕೈಮೈಯೊಡ್ಡದೆ ದೈನೇಶಿತನವನ್ನು ಬಿಟ್ಟು ಬಾಳಬೇಕು, ಮಾನವರಾಗೋಣ ನಾವು ಮೊದಲು ಮಾನವರಾಗೋಣ ಎಂಬ ಕವಿವಾಣಿಯೊಂದಿಗೆ ಗ್ರಾಮೀಣ ಜನ ಕೈಗೆ ಕೈ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆದರೆ ಮಾತ್ರ ಗ್ರಾಮ ಸ್ವರಾಜ್ಯ ಸಾಧ್ಯ.

ಭಾರತ ಕೃಷಿ ಪ್ರಧಾನ ರಾಷ್ಟ್ರ. ಶತ ಶತಮಾನಗಳಿಂದ ಇಲ್ಲಿ ಜನ ಕೃಷಿಯನ್ನೇ ನಂಬಿ ಬಾಳಿಕೊಂಡು ಬಂದಿದ್ದಾರೆ. ಆರಂಭ ಕೆಟ್ಟರೂ ಆರು ತಿಂಗಳು ಗಂಜಿ ಎಂದು ನಂಬಿ ಶ್ರದ್ಧೆಯಿಂದ ಕೃಷಿ ಮಾಡಿಕೊಂಡು ಬಂದಿದ್ದಾರೆ. ‘ರಾಜ್ಯಗಳಳಿಯಲಿ ರಾಜ್ಯಗಳುದಿಸಲಿ ನಮ್ಮೀ ಕಾರ್ಯವ ಬಿಡೆವು’ ಎಂದು ಕಾಯಕ ನಿರತರು ನಮ್ಮ ರೈತಾಪಿಗಳು. ಇಲ್ಲಿ ರೈತರೆಂದರೆ ಕೇವಲ ಜಮೀನು ಕಾಣಿಯುಳ್ಳವರಷ್ಟೇ ಅಲ್ಲ ಅವರೊಟ್ಟಿಗೆ ಸಹಾಯಕ್ಕಿರುವ ಸಕಲೆಂಟು ಕುಶಲ ಕಸುಬಿನವರೂ ಸೇರುತ್ತಾರೆ. ಕಮ್ಮಾರ, ಚಮ್ಮಾರ, ಬಡಗಿ, ಕುಂಬಾರ, ಅಗಸ, ತಳವಾರ, ದಲಿತ ಮುಂತಾಗಿ ಎಲ್ಲರೂ ಸೇರಿದರೆ ಒಂದು ಗ್ರಾಮ; ಮಹಾರಾಷ್ಟ್ರವಾದ ಭಾರತದ ಒಂದು ಮೈಕ್ರೊಘಟಕ.

ಪ್ರಸ್ತುತ ಗ್ರಾಮ ಜೀವನ ಅಲ್ಲೋಲ ಕಲ್ಲೋಲ ಆಗುತ್ತಿದೆ. ಗಾಂಧೀಜಿ ಯಾವ ಗ್ರಾಮ ಸ್ವರಾಜ್ಯವನ್ನು ಬಯಸಿ ಕನಸು ಕಟ್ಟಿದ್ದರೋ ಅದಿಂದು ಹಲವಾರು ಕಾರಣಗಳಿಂದಾಗಿ ನುಚ್ಚು ನೂರಾಗಿದೆ. ಅಂಬೇಡ್ಕರ್ ರಾಜ್ಯಾಂಗ ಗೆದ್ದಲು ತಿನ್ನುವಂತಾಗಿದೆ. ನೆಹರೂ ವೈಜ್ಞಾನಿಕತೆ, ವಿಚಾರವಾದ, ಬುದ್ಧ ಬಸವಣ್ಣರ ದಯಾಪರತೆ, ಕುವೆಂಪು ಸರ್ವ ಜನಾಂಗದ ಶಾಂತಿಯ ತೋಟ ಈಗ ಹಾಳು ಬೀಳುತ್ತಿದೆ. ಸ್ವಾತಂತ್ರ ಬಂದು 72 ಸಂವತ್ಸರಗಳು ಕಳೆದವು. ಕಟ್ಟುವೆವು ನಾವು ಹೊಸತು ನಾಡೊಂದನು ರಸದ ಬೀಡೊಂದನು ಎಂದು ಹೊರಟವರು ಮುಪ್ಪಡರಿ ಮೂಲೆ ಗುಂಪಾದರು. ಪಾಳು ದೇಗುಲದ ತುಂಬ ಬಾವಲಿಗಳದೇ ಹಾರಾಟವಾಗಿದೆ. ಗ್ರಾಮಗಳು ಪಾಳು ಬಿದ್ದವು, ಪಟ್ಟಣಗಳು ಕೊಂಪೆಗಳಾದವು.

 ಇಂತಹ ವಿಷಮ ಸ್ಥಿತಿಯಲ್ಲೀಗ ಈ ಮಹಾನ್ ರಾಷ್ಟ್ರ ತೆವಳುತ್ತಿದೆ, ಗ್ರಾಮೀಣ ಜಗತ್ತು ತತ್ತರಿಸಿದೆ. ಅದರ ಉದ್ಧಾರ ಸಾಧ್ಯವೇ? ಸಾಧ್ಯವಾಗುವುದಾದರೆ ಅದು ಹೇಗೆ? ಅದಕ್ಕಾಗಿ ಪ್ರತಿಯೊಂದು ಗ್ರಾಮವೂ ಮೈ ಕೊಡವಿ ಎದ್ದೇಳಬೇಕಾಗಿದೆ. ಅನಾವೃಷ್ಟಿ, ಅತಿವೃಷ್ಟಿ, ಕ್ಷಾಮ ಡಾಮರಗಳನ್ನು ಎದುರಿಸಿ ನಿಲ್ಲಬೇಕಾಗಿದೆ. ಸರಕಾರದ ಹಂಗು ತೊರೆದು ಸಹಕಾರ ತತ್ವದ ಮೇಲೆ ಮಾನವ ಸಂವಿಧಾನ ಸೌಧ ನಿರ್ಮಾಣ ಮಾಡಬೇಕಾಗಿದೆ. ಗ್ರಾಮ ಸ್ವರಾಜ್ಯ ಗ್ರಾಮದಿಂದಲೇ ಆರಂಭ ಆಗಬೇಕಾಗಿದೆ, ಸರಕಾರಕ್ಕೆ ಕೈಯೊಡ್ಡಿ ಕ್ಯೂನಲ್ಲಿ ನಿಲ್ಲುವುದರಿಂದ ಸಾಧ್ಯವಿಲ್ಲ. ಅದಕ್ಕಾಗಿ ಗ್ರಾಮೀಣ ಜನ ಕಳೆದುಕೊಳ್ಳುವುದೇನೂ ಇಲ್ಲ; ಕೇವಲ ಸಹಕಾರ ಹಾಗೂ ಕಾಯಕ. ಇಂತಹ ಒಂದು ಸಹಕಾರ ತತ್ವದ ಸಾಕಾರವಾಗಬೇಕಾದರೆ ಪ್ರತಿಯೊಂದು ಗ್ರಾಮವೂ ಶಿಕ್ಷಣದಲ್ಲಿ ಸಂಘಟನೆಯಲ್ಲಿ, ಹೋರಾಟದಲ್ಲಿ ಮುಂದಡಿ ಇಡಬೇಕು. ಇಂತಹ ಅಪರೂಪದ ಆದರ್ಶದ ಪ್ರಯೋಗಕ್ಕೆ ರಾಮನಗರ ಜಿಲ್ಲೆಯ ಕೈಲಾಂಚ ಗ್ರಾಮ ಒಡ್ಡಿಕೊಳ್ಳುತ್ತಿದೆ. ಇದರ ಕಾರಣರಾದ ವ್ಯಕ್ತಿ ಪ್ರಭು ಜಯರಾಮ್. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕ್‌ನ ಅಧಿಕಾರಿಯಾಗಿದ್ದ ಜಯರಾಮ್ ಸ್ವಯಂ ನಿವೃತ್ತಿ ಹೊಂದಿ ಇಂತಹ ಒಂದು ಕನಸಿಗೆ ಸಾಕಾರ ಕೊಡಲು ಉದ್ಯುಕ್ತರಾಗಿದ್ದಾರೆ. ಅದಕ್ಕಾಗಿ ಇವರೊಂದು ಕಿರು ಸಂಹಿತೆಯನ್ನು ರೂಪಿಸಿಕೊಂಡಿದ್ದಾರೆ. ಗ್ರಾಮದ 6 ರಿಂದ 60 ವಯಸ್ಸಿನವರೆಗೆ ಇರುವ ಎಲ್ಲ ವಯಸ್ಸಿನ ಸ್ತ್ರೀಪುರುಷರನ್ನೊಳಗೊಂಡ ಒಂದು ಮಾನವ ಸಂವಿಧಾನ ಸೌಧ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಜಾತಿ ಮತ ರಹಿತ ಆರೋಗ್ಯವಂತ ಸದೃಢ ಮತ್ತು ವಿದ್ಯಾವಂತ ಸಮ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಗ್ರಾಮದ ಜನರನ್ನು ಸಂಘಟಿಸುವುದರಲ್ಲಿ ಕ್ರಿಯಾಶೀಲರಾಗಿದ್ದಾರೆ. ಇವರ ಗ್ರಾಮ ಸಂಘಟನೆಯ ಗೊತ್ತು ಗುರಿ ಎಂದರೆ ಮನುಜ ಮತ ವಿಶ್ವಪಥ ಎಂದ ಆಧುನಿಕ ಕವಿಯ ವಿಶ್ವಮಾನವ ಧರ್ಮವನ್ನು ಬಿತ್ತಿ ಬೆಳೆಯುವುದು; ಮನುಷ್ಯ ಕುಲ ತಾನೊಂದೆ ವಲಂ ಎಂದ ಆದಿಕವಿಯ ಮಾತನ್ನು ಸಾಕಾರಗೊಳಿಸುವುದು.

ಈ ಗ್ರಾಮೀಣ ಸಮ ಸಮಾಜ ನಿರ್ಮಾಣಕ್ಕಾಗಿ ಸಂವಿಧಾನ ಸೌಧದಲ್ಲಿ ಜನರನ್ನು ವಯಸ್ಸಿನ ಆಧಾರದಲ್ಲಿ ಆರು ವರ್ಗಗಳನ್ನಾಗಿ ವಿಂಗಡಿಸಲಾಗಿದೆ.

1. ಕುವೆಂಪು ಪುಟಾಣಿ ತಂಡ - 1 ನೇ ತರಗತಿಯಿಂದ 4ನೇ ತರಗತಿವರೆಗೆ

2. ಬಸವಣ್ಣ ಬಾಲ ವಿಹಾರ ತಂಡ - 5ನೇ ತರಗತಿಯಿಂದ 7ನೇ ತರಗತಿವರೆಗೆ

3. ಗಾಂಧೀಜಿ ಉದಯೋನ್ಮುಖ ತಂಡ - 8ನೇ ತರಗತಿಯಿಂದ 10ನೇ ತರಗತಿವರೆಗೆ

4. ಅಂಬೇಡ್ಕರ್ ಯುವ ಸ್ಫೂರ್ತಿ ತಂಡ - ಪದವಿಪೂರ್ವ, ಪದವಿ, ಸ್ನಾತಕೋತ್ತರ

5. ಮದರ್ ತೆರೇಸಾ ಸಂಸಾರ ನೌಕಾ ತಂಡ - ಉದ್ಯೋಗಸ್ಥರು

6. ಅಬ್ದುಲ್ ಕಲಾಂ ಹಿರಿಯ ಚೇತನ ತಂಡ - ನಿವೃತ್ತರು

ಈ ತಂಡಗಳಲ್ಲಿ ಸ್ತ್ರೀಪುರುಷ ಎಲ್ಲರಿಗೂ ಸಮಾನ ಸ್ಥಾನವಿದೆ. ತಂಡಗಳು ನಿರ್ವಹಿಸಬೇಕಾದ ಕಾರ್ಯಸೂಚಿ:

 ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಧ್ಯಾನಮಂದಿರ, ವಾಚನಾಲಯ, ಶಿಕ್ಷಣ, ಉದ್ಯೋಗ, ಪ್ರವಾಸ, ಪ್ರಚಾರ, ಸಂಘಟನೆ, ತರಬೇತಿ, ಮಹಿಳೆ ಮತ್ತು ಮಕ್ಕಳ ಬಗ್ಗೆ, ಆಹಾರ ಸ್ವಚ್ಛತೆ ಕಾಪಾಡುವ ಬಗ್ಗೆ.

ಇದಕ್ಕಾಗಿ ಪ್ರತಿ ರವಿವಾರ ಗ್ರಾಮೀಣ ವೇದಿಕೆಯಲ್ಲಿ ಗ್ರಾಮಸಭೆ, ತಿಂಗಳಿಗೊಮ್ಮೆ ಬೆಳದಿಂಗಳ ಕಾರ್ಯಕ್ರಮ ನಡೆಸಲಾಗುವುದು.

ಅಗೋಚರ ಶಕ್ತಿಗಳಲ್ಲಿ ನಂಬಿಕೆ ಇಲ್ಲದ ಇದರ ಸದಸ್ಯರಿಗೆ ಹೆತ್ತು ಹೊತ್ತು ಸಾಕಿ ಸಲುಹಿದ ಅಜ್ಜ ಅಜ್ಜಿ, ತಂದೆ ತಾಯಿ, ಗುರು ಹಿರಿಯರು ಹಾಗೂ ಪ್ರಕೃತಿಯ ಸಂಸ್ಮರಣೆಯೇ ಪ್ರೇರಣ ಶಕ್ತಿ ಭಕ್ತಿ ಎಲ್ಲವೂ! ಕವಿವಾಣಿಯಲ್ಲಿ ಹೇಳುವುದಾದರೆ :

ಆನಂದಮಯ ಈ ಜಗಹೃದಯ:

ಏತಕೆ ಭಯ? ಮಾಣೊ !

ಸೂರ್ಯೋದಯ ಚಂದ್ರೋದಯ

ದೇವರ ದಯ ಕಾಣೊ !

ಈ ಬಗೆಯ ಪ್ರಕೃತಿ ಆರಾಧನೆಯನ್ನು ನಾವು ರೂಢಿಸಿಕೊಂಡರೆ ಯಾವ ಭಯವೂ ಇಲ್ಲ.

ಈ ಗ್ರಾಮ ಸಂಘಟನೆಯ ವಿಶ್ವ ಮಾನವ ಧರ್ಮದ ಗುರಿಗಳನ್ನು ಸಂಕ್ಷಿಪ್ತವಾಗಿ ಹೀಗೆ ಸಂಗ್ರಹಿಸಬಹುದು:

1. ಜಾತಿಗಳ ನಿರ್ಮೂಲನೆ,

2. ಮೌಢ್ಯಗಳ ನಿರ್ಮೂಲನೆ,

3. ಭ್ರಷ್ಟಾಚಾರ ನಿರ್ಮೂಲನೆ,

4. ರೋಗ ರುಜಿನಗಳ ನಿರ್ಮೂಲನೆ,

5. ಮದ್ಯಪಾನ, ಧೂಮಪಾನ ನಿರ್ಮೂಲನೆ,

6. ಬಡತನ ನಿರ್ಮೂಲನೆ ಹಾಗೂ ಪರಿಸರ ಸಂರಕ್ಷಣೆ.

ಇದಿಷ್ಟು ಪ್ರಭು ಜಯರಾಮ್ ರೂಪಿಸಿರುವ ಮಾನವ ಸಂವಿಧಾನ ಸೌಧದ ಮೂಲ ಸಂಹಿತೆ. ಇದನ್ನು ತಮ್ಮ ಗ್ರಾಮ ಕೈಲಾಂಚದಲ್ಲಿ ಕಳೆದ ವರ್ಷದಿಂದ ಕಾರ್ಯಗತಗೊಳಿಸುತ್ತಿದ್ದಾರೆ. ರಾಜ್ಯದ ಹಾಗೂ ರಾಷ್ಟ್ರದ ಪ್ರತಿಯೊಂದು ಗ್ರಾಮದಲ್ಲೂ ಈ ಬಗೆಯ ಮಾನವ ಸಂವಿಧಾನ ಸೌಧವನ್ನು ನಿರ್ಮಾಣ ಮಾಡಬೇಕೆಂಬುದು ಈ ಕಾರ್ಯ ಸಂಘಟಕರ ತೀವ್ರ ಅಭೀಪ್ಸೆ.

ನಿಜ, ನೆಲಮೂಲದಿಂದ ಈ ಬಗೆಯ ಚೇತನಗಳು ಆತ್ಮವಿಶ್ವಾಸದಿಂದ ಹುಟ್ಟಿ ಬೆಳೆದು ಬರಬೇಕು. ಗ್ರಾಮ ಸ್ವರಾಜ್ಯ ಸಾಧಿಸಬೇಕು. ಸರಕಾರಗಳ ಹಂಗಿಲ್ಲದೆ ಸಾಲ ಶೂಲಕ್ಕೆ ಕೈಮೈಯೊಡ್ಡದೆ ದೈನೇಶಿತನವನ್ನು ಬಿಟ್ಟು ಬಾಳಬೇಕು, ಮಾನವರಾಗೋಣ ನಾವು ಮೊದಲು ಮಾನವರಾಗೋಣ ಎಂಬ ಕವಿವಾಣಿಯೊಂದಿಗೆ ಗ್ರಾಮೀಣ ಜನ ಕೈಗೆ ಕೈ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆದರೆ ಮಾತ್ರ ಗ್ರಾಮ ಸ್ವರಾಜ್ಯ ಸಾಧ್ಯ. ಆತ್ಮವಿಶ್ವಾಸ ಇಲ್ಲದ ಮನುಷ್ಯರನ್ನು ಯಾವ ಸರಕಾರ, ಯಾವ ದೈವವೂ ಮೇಲೆತ್ತಲಾರದು. ಆತ್ಮ ತೇಜೋಬಲವೇ ಬಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)