varthabharthi


ವೈವಿಧ್ಯ

ಬರೀ ಘೋಷಣೆ, ಫಲಕಗಳೇ ಕೊರಳಿಗೆ ಉರುಳಾಗಿರುವ ಫ್ಯಾಶಿಸ್ಟ್ ಯುಗ

ವಾರ್ತಾ ಭಾರತಿ : 24 Feb, 2020
ಸುರೇಶ್ ಭಟ್ ಬಾಕ್ರಬೈಲ್

ಕನ್ಹಯ್ಯ ಕುಮಾರ್ ಪ್ರಕರಣದಿಂದ ಪ್ರಾರಂಭಿಸಿ ಬೀದರ್ ಶಾಲೆ, ಶರ್ಜಿಲ್ ಇಮಾಮ್ ಮತ್ತು ಇದೀಗ ಲಿಯೋನಾ ಮತ್ತು ಆರ್ದ್ರಾರನ್ನೊಳಗೊಂಡ ಈ ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗಿರುವ ದೇಶದ್ರೋಹದ ಸನ್ನಿ ಆಳುವ ಬಿಜೆಪಿ ಸರಕಾರದ ಕೆಲವೊಂದು ಕ್ರಮಗಳನ್ನು ಟೀಕಿಸುವ, ಪ್ರತಿಭಟಿಸುವ ಭಿನ್ನಮತೀಯರನ್ನು ಬಲಿಪಶುಗಳಾಗಿಸಿ ಸರಕಾರವನ್ನು ಯಾರೂ ಯಾವ ವಿಷಯದಲ್ಲೂ ಪ್ರಶ್ನಿಸಬಾರದೆಂಬ ಸಂದೇಶವನ್ನು ರವಾನಿಸುತ್ತಿದೆ.

ಇದೇ ಫೆಬ್ರವರಿ 20ರಂದು ಎಐಎಂಐಎಂ ಪಕ್ಷದವರು ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಿಎಎ ವಿರೋಧಿ ಪ್ರತಿಟನೆಯ ವೇಳೆ 18ರ ಹರೆಯದ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾ ಎಂಬಾಕೆ ವೇದಿಕೆಯಲ್ಲಿ ಮಾತನಾಡುತ್ತ ‘‘ಪಾಕಿಸ್ತಾನ್ ಜಿಂದಾಬಾದ್’’ ಎಂದಾಕ್ಷಣ ಪೊಲೀಸರು ಆಕೆಯನ್ನು ಬಂಧಿಸಿ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ. ವಾಸ್ತವವಾಗಿ ಕೆಲವೊಂದು ಮಹತ್ವದ ವಿಚಾರಗಳನ್ನು ಹೇಳಬಯಸಿದ್ದ ಆಕೆಗೆ ಆತುರವೋ, ಕಾತುರವೋ, ಪ್ರಚಾರದ ಹಂಬಲವೋ, ಗಲಿಬಿಲಿಯೋ, ಗೊಂದಲವೋ ಏನೋ ಒಂದು ಆಗಿರುವಂತೆ ಕಾಣುತ್ತದೆ. ಯಾಕೆಂದರೆ ಆಕೆ ಫೆೆಬ್ರವರಿ 16ರಂದು ತನ್ನ ಫೇಸ್‌ಬುಕ್ ಖಾತೆಯಲ್ಲಿ ಬರೆದಿರುವುದನ್ನು ನೋಡಿ: ‘‘ಹಿಂದೂಸ್ಥಾನ್ ಜಿಂದಾಬಾದ್, ಪಾಕಿಸ್ತಾನ ಜಿಂದಾಬಾದ್, ಬಾಂಗ್ಲಾದೇಶ್ ಜಿಂದಾಬಾದ್, ಶ್ರೀಲಂಕಾ ಜಿಂದಾಬಾದ್, ನೇಪಾಳ ಜಿಂದಾಬಾದ್, ಚೀನಾ ಜಿಂದಾಬಾದ್, ಅಫ್ಘಾನಿಸ್ತಾನ ಜಿಂದಾಬಾದ್, ಭೂತಾನ ಜಿಂದಾಬಾದ್.......... ಯಾವ ದೇಶವೇ ಇರಲಿ, ಎಲ್ಲಾ ದೇಶಗಳಿಗೂ ಜಿಂದಾಬಾದ್............ದೇಶ ಎಂದರೆ ಭೂಭಾಗ ಎಂದು ಮಕ್ಕಳಿಗೆ ಕಲಿಸಲಾಗುತ್ತದೆ. ಆದರೆ ಮಕ್ಕಳಾದ ನಾವು ನಿಮಗೆ ಹೇಳಬಯಸುವುದೇನೆಂದರೆ ದೇಶ ಅಂದರೆ ಅದರಲ್ಲಿ ವಾಸಿಸುವ ಜನ....ಎಲ್ಲರಿಗೂ ಪೌರತ್ವದ ಹಕ್ಕು ಇದೆ......... ಜನತೆಯ ಸೇವೆಯಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ಜಿಂದಾಬಾದ್.’’ ಅನ್ಯಾಯಯುತ ಕಾನೂನುಗಳ ವಿರುದ್ಧ ಪ್ರತಿಭಟನೆ ಮಾಡಿದರೆ ಘೋಷಣೆ ಕೂಗಿದರೆ, ಫಲಕ ಹಿಡಿದರೆ, ತಮ್ಮನ್ನು ತಾವೇ ದೇಶಭಕ್ತರೆಂದು ಘೋಷಿಸಿರುವ ಹಿಂಸಾಪ್ರಿಯರ ಬಾಯಲ್ಲಿ ದೇಶದ್ರೋಹಿಗಳೆಂದು ಕರೆಸಿಕೊಳ್ಳುವಂತ ಕೆಟ್ಟ ಕಾಲದಲ್ಲಿ ಇಂದು ನಾವಿದ್ದೇವೆ.

ಚಿರನಿದ್ರೆಗೆ ಜಾರಿರುವ ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪನವರಿಗೆ ಈ ವಿದ್ಯಮಾನಗಳಿಂದ ಬಹುಶಃ ಅಸಹ್ಯವಾಗುವಂತಹ ಆಘಾತ ಉಂಟಾಗುತ್ತಿರಬೇಕು. ತಾನೊಬ್ಬ ‘‘ವಿಶ್ವ ಮಾನವ’’ ಎಂದು ಘೋಷಿಸಿದ್ದ ಕುವೆಂಪು ಇಂದು ಬದುಕಿದ್ದಿದ್ದರೆ ಇವತ್ತಿನ ನಮ್ಮ ‘‘ಕಂಬಳಿಚೋರ’’ ಎಂಬ ಹೊಚ್ಚಹೊಸ ಬಿರುದಿಗೆ ಪಾತ್ರರಾಗಿರುವ (ಉತ್ತರ ಪ್ರದೇಶದಲ್ಲಿ ಪ್ರತಿಭಟನಾಕಾರರ ಕಂಬಳಿಗಳನ್ನು, ಆಹಾರವನ್ನು ಕಿತ್ತೊಯ್ದ ನಂತರ ಪೊಲೀಸರಿಗೆ ಈ ವಿಶೇಷ ಬಿರುದನ್ನು ದಯಪಾಲಿಸಲಾಗಿದೆ!), ಆಳುವವರ ಕಾಲಬುಡದಲ್ಲಿ ಹೊರಳಾಡುತ್ತಿರುವ ಪೊಲೀಸರು ತಕ್ಷಣ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಸೀದಾ ಜೈಲಿಗೆ ತಳ್ಳುತ್ತಿದ್ದರು ಎನ್ನುವುದರಲ್ಲಿ ಸಂದೇಹವೇ ಇಲ್ಲ. ಅದರ ಬೆನ್ನಿಗೇ ಇಂದು ಹಿಂದುತ್ವ ರಾಜಕಾರಣಕ್ಕೆ ಆಪ್ತರಾದ ಕಾರ್ಪೊರೇಟ್‌ಗಳ ಹಿಡಿತದಲ್ಲಿರುವ, ಅಧಿಕಾರದೆದುರು ಬಾಲಬಡಿಯುತ್ತಾ, ಜೊಲ್ಲು ಸುರಿಸುತ್ತಾ ತೆವಳುವ, ಸತ್ಯವನ್ನು ತಿರುಚಿ ಅರೆ ಸತ್ಯಗಳನ್ನು ಹರಡುವ ಮೂಲಕ ಅಮಾಯಕ ಸಾಮಾನ್ಯ ಪ್ರಜೆಗಳನ್ನು ದಿಕ್ಕು ತಪ್ಪಿಸುವುದರಲ್ಲ್ಲಿ ನಿಸ್ಸೀಮರಾಗಿ ಪರಿಣಮಿಸಿರುವ ರ್ಯಾಸ್ಕಲ್ ದೃಶ್ಯ ಮತ್ತು ಸುದ್ದಿ ಮಾಧ್ಯಮಗಳು ಕುವೆಂಪುರವರಿಗೆ ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟುತ್ತಿದ್ದುದರಲ್ಲಿಯೂ ಅನುಮಾನವಿಲ್ಲ. ಇನ್ನು ನಮ್ಮ ‘‘ದೇಶಭಕ್ತ’’ ಸಂಘಟನೆಗಳು ಮತ್ತು ಮಾಧ್ಯಮಗಳ ಅಪಪ್ರಚಾರಕ್ಕೆ ಬಲಿಯಾದ ಇನ್ನಿತರ ಕೆಲವು ಸಂಘಟನೆಗಳು ಹಾದಿಬೀದಿಗಳಲ್ಲಿ ಪ್ರತಿಭಟನೆ ನಡೆಸಿ, ಕುವೆಂಪು ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ತುಳಿದು ಬೆಂಕಿ ಹಚ್ಚುತ್ತಿದ್ದುದರಲ್ಲಿಯೂ ಸಂಶಯವಿಲ್ಲ.

ಇಂತಹ ಸಮೂಹಸನ್ನಿಯ ಪ್ರತಿಕ್ರಿಯೆಗಳಿಗೆ ಹೇತುವಾಗಿರುವ ರಾಷ್ಟ್ರೀಯವಾದದ ಕುರಿತು ಒಂದೆರಡು ಮಾತುಗಳು ಪ್ರಸ್ತುತವಿವೆ. ಆರೆಸ್ಸೆಸ್ ಮುಖ್ಯಸ್ಥ ಭಾಗವತ್ ಈಗ ರಾಷ್ಟ್ರೀಯವಾದ ಎಂಬ ಪದ ಬೇಡ, ಅದು ನಾಝಿಸಂ, ಹಿಟ್ಲರಿಸಂ ಅನ್ನಿಸಿಕೊಳ್ಳುತ್ತದೆ ಎಂದು ಹೇಳಲಾರಂಭಿಸಿದ್ದಾರೆ! ಭಾಗವತರಿಗೆ ಈ ವಿಷಯ ಇದುವರೆಗೆ ಗೊತ್ತಿರಲಿಲ್ಲವೆಂದು ಆರೆಸ್ಸೆಸ್‌ನ ಚರಿತ್ರೆ ತಿಳಿಯದ ಜನ ಭಾವಿಸಬೇಕೆಂಬುದು ಅವರ ಮನೀಚ್ಛೆಯಾಗಿರಬಹುದು. ಆದರೆ ದ್ವಿಮುಖ ನೀತಿಗೆ ಇನ್ನೊಂದು ಹೆಸರಾಗಿರುವ ಆರೆಸ್ಸೆಸ್ ಹೇಳುವುದೊಂದು ಮಾಡುವುದಿನ್ನೊಂದು ಎನ್ನುವುದು ಒಂದು ತೆರೆದ ರಹಸ್ಯ. ಭಾಗವತರ ಹೇಳಿಕೆಯನ್ನು ಗಮನಿಸಿದರೆ ಇನ್ನುಮುಂದೆ ಅವರ ಅನುಚರರು ‘‘ರಾಷ್ಟ್ರೀಯವಾದ’’ ಶಬ್ದವನ್ನು ಬಾಯಲ್ಲಿ ಉಚ್ಚರಿಸದೆ ಕೇವಲ ಕಾರ್ಯರೂಪದಲ್ಲಿ ಬಳಸಲಿರುವಂತೆ ತೋರುತ್ತದೆ. ಏಕೆಂದರೆ ರಾಷ್ಟ್ರವಾದ ಇಲ್ಲವೆಂದರೆ ಹಿಂದುತ್ವವಾದ ಇಲ್ಲವೆಂದರ್ಥ. ಅಂದರೆ ಸಂಘಪರಿವಾರ ಅಪ್ರಸ್ತುತ ಎಂದರ್ಥ. ಸದ್ಯದಲ್ಲಂತೂ ಇದು ಸಾಧ್ಯವೇ ಇಲ್ಲ. ಹಿಟ್ಲರ್, ಮುಸ್ಸೋಲಿನಿ ಮುಂತಾದವರ ರಾಷ್ಟ್ರವಾದ ತನ್ನಿಂತಾನೇ ಕೊನೆಗೊಳ್ಳಲಿಲ್ಲ, ಅದನ್ನು ಸದೆಬಡಿಯಲು ಪ್ರಗತಿಪರ ಶಕ್ತಿಗಳ ಹಸ್ತಕ್ಷೇಪ ಬೇಕಾಯಿತು. ಇರಲಿ, ಈಗ ಅಮೂಲ್ಯಳ ವಿಷಯಕ್ಕೆ ಮರಳೋಣ.

ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಕಡೆಗಣಿಸಲಾಗಿದೆ

1984ರಲ್ಲಿ ಇಂದಿರಾ ಗಾಂಧಿ ಹತ್ಯೆಗೀಡಾದ ಸಂದರ್ಭದಲ್ಲಿ ಚಂಡಿಗಢದಲ್ಲಿ ಇಬ್ಬರು ಸಿಖ್ಖರು ಖಲಿಸ್ತಾನ್ ಜಿಂದಾಬಾದ್, ಹಿಂದೂಸ್ಥಾನ್ ಮುರ್ದಾಬಾದ್ ಎಂದು ಘೋಷಣೆ ಕೂಗಿದ್ದರು. ಪ್ರತ್ಯೇಕ ರಾಷ್ಟ್ರ ಖಲಿಸ್ತಾನಕ್ಕೆ ಬೆಂಬಲ ಸೂಚಿಸುವುದನ್ನು ರಾಷ್ಟ್ರವಿರೋಧಿ ಕೃತ್ಯವೆಂದು ಪರಿಗಣಿಸಲಾಗುತ್ತಿದ್ದ ಕಾಲವದು. ಯಥಾಪ್ರಕಾರ ಅವರನ್ನು ಬಂಧಿಸಿ ದೇಶದ್ರೋಹದ ಕೇಸು ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ಕೆಳಕೋರ್ಟು ಆ ಇಬ್ಬರೂ ಸಿಖ್ಖರು ತಪ್ಪಿತಸ್ಥರೆಂದು ತೀರ್ಪು ನೀಡಿತ್ತು. ಇದರ ವಿರುದ್ಧದ ಮೇಲ್ಮನವಿ ಅಂತಿಮವಾಗಿ 1995ರಲ್ಲಿ ಸರ್ವೋಚ್ಚ ನ್ಯಾಯಾಲಯದ ಅಂಗಳಕ್ಕೆ ತಲುಪಿತ್ತು. ಆಗ ಕೆಳಕೋರ್ಟಿನ ತೀರ್ಪನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟು .......... ಇವರ ಘೋಷಣೆಗಳಿಗೆ ಸಿಖ್ಖ್ ಸಮುದಾಯದವರಾಗಲಿ, ಇತರ ಸಮುದಾಯಗಳ ಜನರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಂತಹ ಘೋಷಣೆಗಳನ್ನು ಒಂದೆರಡು ಬಾರಿ ಕೂಗಿದ್ದನ್ನು ಬಿಟ್ಟರೆ ಬೇರೆ ಯಾವ ಕೃತ್ಯವೂ ನಡೆಯದಿದ್ದ ಕಾರಣ ಕೇವಲ ಘೋಷಣೆಗಳನ್ನು ಆಧರಿಸಿ ಇವರ ಮೇಲೆ ದೇಶದ್ರೋಹದ ಅಪರಾಧವನ್ನು ಹೊರಿಸಬಹುದೆೆಂದು ಯೋಚಿಸಲು ಕಷ್ಟವಿದೆ...... ಪೊಲೀಸರು ಈ ಬೇಜವಾಬ್ದಾರಿಯ ಘೋಷಣೆಗಳಿಗೆ ಅತಿಯಾದ ಮಹತ್ವ ನೀಡಬಾರದಿತ್ತು, ಅಗತ್ಯಕ್ಕಿಂತ ಅತಿಯಾದ ಅರ್ಥ ಕಲ್ಪಿಸಬಾರದಿತ್ತೆಂದು ತೋುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ.

ಹೀಗಿರುವಾಗ ಇಂದು ಇದೇ ರೀತಿಯಾದ ಬೇಜವಾಬ್ದಾರಿ ಕೆಲಸ ಮಾಡಿದ ಅಮೂಲ್ಯ ಲಿಯೋನಾ ಮೇಲೆ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿರುವುದು ಸ್ಪಷ್ಟವಾಗಿ ನ್ಯಾಯಾಂಗ ಉಲ್ಲಂಘನೆಯೆಂದು ನನಗನಿಸುತ್ತದೆ. ಕೆಳಕೋರ್ಟು ಸಹ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಗಮನದಲ್ಲಿ ಇಟ್ಟುಕೊಳ್ಳದೆ ಲಿಯೋನಾಳನ್ನು ಯಾಂತ್ರಿಕವಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದಂತಿದೆ. ಪೊಲೀಸರು ಮತ್ತು ಕೆಳಕೋರ್ಟಿನ ಈ ನಡೆ ಹಿಂದುತ್ವವಾದಿಗಳು ದೇಶಪ್ರೇಮಕ್ಕೆ ತಮ್ಮದೇ ಆದ ವ್ಯಾಖ್ಯಾನ ನೀಡಿ ಇಂದು ದೇಶಾದ್ಯಂತ ಸೃಷ್ಟಿಸಿರುವ ಸಮೂಹಸನ್ನಿಯ ವಾತಾವರಣಕ್ಕೆ ಪುಷ್ಟಿ ನೀಡಿದಂತಾಗಿದೆ. ಕನ್ಹಯ್ಯ ಕುಮಾರ್ ಪ್ರಕರಣದಿಂದ ಪ್ರಾರಂಭಿಸಿ ಬೀದರ್ ಶಾಲೆ, ಶರ್ಜಿಲ್ ಇಮಾಮ್ ಮತ್ತು ಇದೀಗ ಲಿಯೋನಾ ಮತ್ತು ಆರ್ಧ್ರಾರನ್ನೊಳಗೊಂಡ ಈ ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗಿರುವ ದೇಶದ್ರೋಹದ ಸನ್ನಿ ಆಳುವ ಬಿಜೆಪಿ ಸರಕಾರದ ಕೆಲವೊಂದು ಕ್ರಮಗಳನ್ನು ಟೀಕಿಸುವ, ಪ್ರತಿಭಟಿಸುವ ಭಿನ್ನಮತೀಯರನ್ನು ಬಲಿಪಶುಗಳಾಗಿಸಿ ಸರಕಾರವನ್ನು ಯಾರೂ ಯಾವ ವಿಷಯದಲ್ಲೂ ಪ್ರಶ್ನಿಸಬಾರದೆಂಬ ಸಂದೇಶವನ್ನು ರವಾನಿಸುತ್ತಿದೆ. ಬಾಯ್ಮುಚ್ಚಿ ಸಹಿಸಿಕೊಳ್ಳಿ, ಇಲ್ಲವಾದರೆ.... ಎಂಬ ಬೆದರಿಕೆಯ ತೂಗುಗತ್ತಿಯನ್ನು ಜನರ ನೆತ್ತಿಯ ಮೇಲೆ ತೂಗಹಾಕಲಾಗುತ್ತಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ಪೊಲೀಸ್ ಮತ್ತು ಆಡಳಿತ ವ್ಯವಸ್ಥೆಯಿರುವ ಈ ಕಾಲವನ್ನು ಫ್ಯಾಶಿಸ್ಟ್ ಯುಗ, ನಾಝಿ ಯುಗವೆಂದು ಕರೆಯದೆ ಇನ್ನೇನೆಂದು ಕರೆಯಬೇಕು?

ಆಧಾರ: thewire.inನಲ್ಲಿ ಪ್ರಕಟವಾದ ಶ್ರುತಿಸಾಗರ್ ಯಮುನನ್‌ರ ಲೇಖನ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)