varthabharthi


ವೈವಿಧ್ಯ

ಆರೋಗ್ಯ ಭಾರತ...ಇನ್ನೂ ಬಲು ದೂರ

ವಾರ್ತಾ ಭಾರತಿ : 25 Feb, 2020
ಡಾ. ಶ್ರೀ ಭೂಷಣ್ ರಾಜು ಕನ್ನಡಕ್ಕೆ: ಕಸ್ತೂರಿ

ಏಮ್ಸ್ ಅನೇಕ ಸಮಸ್ಯೆಗಳಿಂದ ತತ್ತರಿಸುತ್ತಿವೆ ಎಂಬುದು ನಿಷ್ಠುರ ವಾಸ್ತವ. 2012-13ರಲ್ಲಿ ಏಮ್ಸ್‌ಗೆ ಸಂಶೋಧನೆಗೋಸ್ಕರ ಬಿಡುಗಡೆಯಾದ ಸಂಸ್ಥಾಗತ ನಿಧಿಗಳು ಕೇವಲ ರೂ. 1.31 ಕೋಟಿ. ಸಂಸ್ಥೆಯ ವಿದ್ಯಾರ್ಥಿಗಳು ಬಹುಮಂದಿ ವಿದೇಶಗಳಲ್ಲಿ ನೆಲೆಗೊಳ್ಳುವುದೋ, ಪ್ರಾಕ್ಟೀಸ್ ಕೈಗೊಳ್ಳುವುದೋ ನಡೆಯುತ್ತಿದೆ. ಕ್ರಮೇಣ ಏಮ್ಸ್‌ನಪ್ರತಿಷ್ಠೆ ಮಬ್ಬಾಗುತ್ತಿದೆ ಎಂಬುದು ಹಿರಿಯ ವೈದ್ಯ ತಜ್ಞರ ಅಭಿಪ್ರಾಯ. ವೈಜ್ಞಾನಿಕ ಅಂಶಗಳು, ರೋಗಪತ್ತೆಯಲ್ಲಿ ಸುಧಾರಿತ ಕಾರ್ಯವಿಧಾನ ತೋರುತ್ತಿದ್ದರೂ, ರೋಗಿ ಸಂರಕ್ಷಣೆಯಲ್ಲಿ ಆಲಸ್ಯ ಸಂಸ್ಥೆಯ ಪ್ರತಿಷ್ಠೆಯನ್ನು ಘಾಸಿಗೊಳಿಸುತ್ತಿವೆ.

ಆಧುನಿಕ ವೈದ್ಯಕೀಯ ರಂಗದಲ್ಲಿ ಬಂದ ಬದಲಾವಣೆಗಳಿಗೆ ಅನುಗುಣವಾಗಿ ವಿಸ್ತರಿಸುತ್ತಿರುವ ಜನಾವಶ್ಯಕತೆಗಳಿಗೆ ತಕ್ಕಂತೆ ಸ್ವಯಂ ಅಧಿಕಾರವುಳ್ಳ ಮತ್ತಷ್ಟು ವೈದ್ಯಕೀಯ ಸಂಸ್ಥೆಗಳು ಅಗತ್ಯ ಎಂದು ಭಾರತ ಸರಕಾರ ಗುರುತಿಸಿದೆ. ಈ ರೀತಿಯಲ್ಲಿ ಚಿಕಿತ್ಸಾ ರಂಗದಲ್ಲಿ ತಜ್ಞರಾದ ಮಾನವ ಸಂಪನ್ಮೂಲಗಳ ಕೊರತೆಯನ್ನೂ ಪರಿಹರಿಸಬೇಕು ಎಂಬ ಗುರಿಯೊಂದಿಗೆ ದೇಶಾದ್ಯಂತ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ (AIIMS)ಗಳನ್ನು ನಿರ್ಮಾಣ ಮಾಡಬೇಕೆಂದೂ ಸಂಕಲ್ಪಿಸಿದೆ. ಪ್ರಧಾನ ಮಂತ್ರಿ ಸ್ವಾಸ್ಥ ಸುರಕ್ಷಾ ಯೋಜನೆಯಡಿ ಇವನ್ನು ನಿರ್ಮಿಸಬೇಕೆಂದು ಯೋಚಿಸಿದೆ.

2012ರ ಕಾಲದ ಸರಕಾರ ಭೋಪಾಲ್ (ಮಧ್ಯಪ್ರದೇಶ), ಭುವನೇಶ್ವರ (ಒಡಿಶಾ), ಜೋಧ್‌ಪುರ್ (ರಾಜಸ್ಥಾನ), ಪಟ್ನಾ (ಬಿಹಾರ), ರಾಯ್‌ಪುರ್ (ಛತ್ತಿಸ್‌ಗಡ), ರಿಷಿಕೇಶ್ (ಉತ್ತರಾಖಂಡ್)ಗಳಲ್ಲಿ, 2013ರಲ್ಲಿ ರಾಯ್‌ಬರೈಲಿ (ಉತ್ತರ ಪ್ರದೇಶ)ಗಳಲ್ಲಿ ಏಮ್ಸ್‌ಗಳನ್ನು ಆರಂಭಿಸಿತು. ಆ ಬಳಿಕ 2018ರಲ್ಲಿ ಮಂಗಳಗಿರಿ (ಆಂಧ್ರಪ್ರದೇಶ), ನಾಗಪುರ (ಮಹಾರಾಷ್ಟ್ರ), ಗೋರಖ್‌ಪುರ್ (ಉತ್ತರ ಪ್ರದೇಶ), ಭಟಿಂಡಾ (ಪಂಜಾಬ್), ಬೀಬಿನಗರ್ (ತೆಲಂಗಾಣ), ಕಲ್ಯಾಣಿ (ಪಶ್ಚಿಮಬಂಗಾಳ), ದೇವಗಡ (ಜಾರ್ಖಂಡ್)ಗಳಿಗೆ ಏಮ್ಸ್‌ಗಳನ್ನು ಘೋಷಿಸಲಾಯಿತು.

ಇವುಗಳಲ್ಲಿ ಹೊಸದಾಗಿ ವೈದ್ಯಕೀಯ ವಿದ್ಯಾರ್ಥಿಗಳ ಪ್ರವೇಶಕ್ಕೆ ಈ ವರ್ಷದಿಂದಲೇ ಅನುಮತಿ ನೀಡಿದ್ದಾರೆ. ಭವಿಷ್ಯತ್ತಿನಲ್ಲಿ ಮತ್ತಷ್ಟು ಏಮ್ಸ್‌ಗಳನ್ನು ಸ್ಥಾಪಿಸುವ ದಿಕ್ಕಿನತ್ತ ಯೋಜನೆಗಳನ್ನು ಸಿದ್ಧ ಮಾಡಿದ್ದಾರೆ. ಗುವಾಹಟಿ (ಅಸ್ಸಾಂ), ಸಾಂಬ, ಆವಂತಿಪುರ (ಜಮ್ಮು ಕಾಶ್ಮೀರ), ಬಿಲಾಸ್‌ಪೂರ್ (ಹಿಮಾಚಲ್ ಪ್ರದೇಶ), ಮಧುರೈ (ತಮಿಳುನಾಡು), ದರ್ಭಂಗ್ (ಬಿಹಾರ), ರಾಜ್‌ಕೋಟ್ (ಗುಜರಾತ್), ರೇವಾರಿ (ಹರ್ಯಾಣ)ಗಳಲ್ಲೂ ವಿವಿಧ ಹಂತಗಳಲ್ಲಿ ಏಮ್ಸ್‌ಗಳನ್ನು ಸ್ಥಾಪಿಸುವ ದಿಕ್ಕಿನತ್ತ ಕೇಂದ್ರ ಸಾಗುತ್ತಿದೆ.

ಕಾಗದದ ಮೇಲಂತೂ ಪ್ರಜೆಗಳ ಆರೋಗ್ಯ ರಕ್ಷಣೆಯೇ ಗುರಿಯಾಗಿ, ಪ್ರಾದೇಶಿಕ ಅಸಮಾನತೆಗಳನ್ನು ಕುಂದಿಸುವ ಗುರಿ ಯೊಂದಿಗೆ ಇವುಗಳ ಏರ್ಪಾಟನ್ನು ವೇಗವಾಗಿ ಪೂರ್ಣಗೊಳಿಸಲು ಹೊರಟಂತೆ ಇದೆ. ದೇಶದಲ್ಲಿ ವೈದ್ಯರ ನಿವೃತ್ತಿ ವಯಸ್ಸನ್ನು 65 ವರ್ಷಗಳಿಗೆ ಹೆಚ್ಚಿಸುವುದು, ಮತ್ತಷ್ಟು ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸುವುದು, ನರ್ಸಿಂಗ್ ಕೋರ್ಸ್ ಗಳ ಆರಂಭ, ಡಿಗ್ರಿ, ಪಿಜಿ ಹಂತಗಳಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ತಿದ್ದುಪಡಿಗಳ ಪ್ರತಿಪಾದನೆ, ತಜ್ಞರ ಕೊರತೆ ತುಂಬುವುದಕ್ಕೆ ವೈದ್ಯರಿಗೆ ಅನೇಕ ಅಂಶಗಳಲ್ಲಿ ಕೌಶಲವನ್ನು ಹೆಚ್ಚಿಸುವುದು, 70 ಮೆಡಿಕಲ್ ಕಾಲೇಜುಗಳನ್ನು ಉನ್ನತೀಕರಿಸುವುದು, ಸೂಪರ್ ಸ್ಪೆಷಾಲಿಟಿ ಬ್ಲಾಕ್‌ಗಳ ಏರ್ಪಾಟು- ಮತ್ತಿತರ ಕ್ರಮಗಳಿಗೆ ಸರಕಾರ ಮುಂದಾಗಿದೆ.

ಅಡ್ಡಿಗಳೆಷ್ಟೋ........

ಎಷ್ಟೋ ಸ್ಥಳೀಯ ಸಮಸ್ಯೆಗಳ ಕಾರಣದಿಂದ ಕೆಲವು ಏಮ್ಸ್ ಗಳಿಗೆ ಸಂಬಂಧಿಸಿದ ಕೆಲಸಗಳು ವೇಗವಾಗಿ ಸಾಗುತ್ತಿಲ್ಲ. 2019-20 ರಲ್ಲಿ ರೂ. 5,100 ಕೋಟಿಗಳ ತನಕ ಖರ್ಚು ಮಾಡಿದರೂ, ಹೊಸದಾಗಿ ಮಂಜೂರು ಮಾಡಲಾದ 15 ಏಮ್ಸ್‌ಗಳ ಮೇಲೆ ಆರೋಗ್ಯ ಇಲಾಖೆ ತೃಪ್ತಿಕರವಾದ ಪ್ರಗತಿ ಸಾಧಿಸಲಾರದೆ ಹೋಗಿದೆ. ರಾಯ್‌ಬರೇಲಿ, ಕಲ್ಯಾಣ್, ಭಟಿಂಡಾ, ದೇವಗಡ, ಬೀಬಿನಗರ್, ಗೋರಖ್‌ಪುರಗಳಲ್ಲಿ 50 ಸೀಟ್‌ಗಳ ಎಂಬಿಬಿಎಸ್ (2019-20) ಮೊದಲ ಬ್ಯಾಚ್ ಆರಂಭಿಸಿದರು. ನಾಗಪುರ, ಭಟಿಂಡಾಗಳಲ್ಲಿ ಒಪಿಡಿ ಸೇವೆಗಳೂ ಆರಂಭವಾದವು. ಭೂಮಿ, ನೀರು, ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾಗಿದ್ದರಿಂದ ಬಹಳಷ್ಟು ಸಂಸ್ಥೆಗಳಲ್ಲಿ ನಿರ್ಮಾಣ ಕೆಲಸಗಳು ನಿಧಾನವಾಯಿತು ಎಂದು ಆರೋಗ್ಯ ಇಲಾಖಾಧಿಕಾರಿಗಳು ಹೇಳುತ್ತಿದ್ದಾರೆ. ರಾಯ್‌ಬರೇಲಿಯಲ್ಲಿ ಏಮ್ಸ್ ನಿರ್ಮಾಣ ನಿಂತು ಹೋಗಿದೆ. ಐವತ್ತು ಎಕರೆಗಳ ಹೆಚ್ಚುವರಿ ಭೂಮಿಗೆ ಸಂಬಂಧಿಸಿದ ಅಂಶ ಅಪರಿಹಾರ್ಯವಾಗಿ ಉಳಿದಿದೆ. ಜಲಸಂಪನ್ಮೂಲಗಳ ಸಂಗ್ರಹ ಪೂರ್ತಿಯಾಗಿಲ್ಲ. ಹಳೆ ಕಟ್ಟಡಗಳನ್ನು ಬೀಳಿಸಬೇಕಾಗಿದೆ. ಇಂತಹ ಅನೇಕ ಅಡ್ಡಿಗಳು ಕಾಡಿಸುತ್ತಿವೆ.

ಗೋರಖ್‌ಪುರದಲ್ಲಿ ತರಗತಿಗಳು ಆರಂಭವಾದರೂ, ಆಸ್ಪತ್ರೆ ನಿರ್ಮಾಣದ ಕೆಲಸಗಳು ಕೇವಲ ಶೇ.50ರಷ್ಟು ಪೂರ್ತಿಯಾಗಿವೆ. ಪ್ರಾಂಗಣದ ಮೂಲಕ ಹರಿಯುವ ಕಾಲುವೆಯ ತಿರುಗಿಸುವಿಕೆ ವೇಗವಾಗಿ ಪೂರ್ತಿ ಮಾಡಬೇಕಾಗಿದೆ. ಪ್ರವಾಹದ ನೀರನ್ನು ಬಾಹ್ಯ ಕಾಲುವೆಗೆ ಹೊರಳಿಸುವ ಕೆಲಸಗಳು ನಿಧಾನವಾಗಿ ಸಾಗುತ್ತಿದೆ. ಮಂಗಳಗಿರಿಯಲ್ಲಿ ನೀರಿನ ಸರಬರಾಜು ಪ್ರವಾಹದ ನೀರಿನ ಕಾಲುವೆ, ಪ್ರಾಂಗಣಕ್ಕೆ ಪ್ರಧಾನ ರಹದಾರಿ ವ್ಯವಸ್ಥೆ, ವಿದ್ಯುತ್ ಉಪಕೇಂದ್ರ ನಿರ್ಮಾಣ, ಕ್ಷಯ ರೋಗ ಚಿಕಿತ್ಸಾ ಕೇಂದ್ರದ ಹಳೇ ಕಟ್ಟಡ ಬೀಳಿಸುವಂತಹ ಕೆಲಸಗಳು ಅಲ್ಲಲ್ಲೇ ನಿಂತು ಹೋಗಿವೆ.

ಕಾಶ್ಮೀರದಲ್ಲಿ ಏಮ್ಸ್‌ಗೋಸ್ಕರ ಪ್ರತಿಪಾದಿಸಲಾದ 15 ಎಕರೆಗಳ ಸ್ಥಳ ವ್ಯಾಜ್ಯದಲ್ಲಿ ಸಿಕ್ಕಿಕೊಂಡಿದೆ. ಬಿಹಾರದಲ್ಲಿ ಕೇಂದ್ರದ ಅಂಗೀಕಾರಕ್ಕೋಸ್ಕರ ಕಳುಹಿಸಬೇಕಾದ ಸ್ಥಳವನ್ನು ರಾಜ್ಯ ಸರಕಾರ ಇನ್ನೂ ಗುರುತಿಸಿಲ್ಲ. ರಾಜ್‌ಕೋಟ್, ದೇವಗಡ, ಬೀಬಿನಗರಗಳಲ್ಲಿ ಆಸ್ಪತ್ರೆಗಳು ಮಂಜೂರಾದರೂ ಸ್ಥಳೀಯ ಸಮಸ್ಯೆಗಳಿವೆ. ಹರ್ಯಾಣದಲ್ಲಿ ಏಮ್ಸ್ ನಿರ್ಮಾಣ ಅರಣ್ಯ ಭೂಮಿಗಳ ಪರಿವರ್ತನೆಗೋಸ್ಕರ ರಾಜ್ಯ ಸರಕಾರ ಮಾಡಿದ ಪ್ರಸ್ತಾಪವನ್ನು ಕೇಂದ್ರ ಪರಿಸರ ಇಲಾಖೆ ಅರಣ್ಯ ಸಲಹಾ ಸಮಿತಿ ತಿರಸ್ಕರಿಸಿದ್ದರಿಂದ ಇದರ ನಿರ್ಮಾಣ ನನೆಗುದಿಗೆ ಬಿದ್ದಿದೆ.

ಕೇಂದ್ರ ಸರಕಾರ 21 ಏಮ್ಸ್, 75 ಸರಕಾರಿ ಕಾಲೇಜುಗಳ ಸಮೇತ ಹಲವು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಬಲಯುತಗೊಳಿಸುವುದಕ್ಕೆ 2019-20ರಲ್ಲಿ ನಾಲ್ಕು ಸಾವಿರ ಕೋಟಿ ರೂ. ಗಳಿಗೂ ಹೆಚ್ಚಾಗಿ ಖರ್ಚು ಮಾಡಿದೆ. ಹೆಚ್ಚುವರಿಯಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಮುಂದಿನ 10 ವರ್ಷಗಳಲ್ಲಿ ಹಿಂದಿರುಗಿಸುವಂತಹ ರೂ. 3,500 ಕೋಟಿ ಸಾಲವಾಗಿ ಮಂಜೂರಾಗಿದೆ. ಇವುಗಳಲ್ಲಿ ಇದುವರೆಗೂ 1,100 ಕೋಟಿ ರೂ. ವಿನಿಯೋಗಿಸಿದ್ದಾರೆ. 2009-2019ವರೆಗೆ 15 ಹೊಸ ಏಮ್ಸ್‌ಗಳ ನಿರ್ಮಾಣಕ್ಕೆ ರೂ. 20,756 ಕೋಟಿಗಳವರೆಗೂ ಅನುಮತಿ ಲಭಿಸಿದ್ದು, ಅವನ್ನು 2020-23ರ ಮಧ್ಯೆ ಪೂರ್ತಿ ಮಾಡಬೇಕೆನ್ನುವುದು ಗುರಿ. ಆದರೆ ಹೊಸದಾಗಿ ರೂಪುಗೊಳ್ಳುತ್ತಿರುವ ಏಮ್ಸ್‌ಗಳು ಬಾಲಗ್ರಹಗಳನ್ನು ದಾಟಿ ರೂಪುಗೊಳ್ಳುವ ಸಾಧ್ಯತೆಗಳು ಕಡಿಮೆಯೇ. ಮೆಡಿಕಲ್ ಕಾಲೇಜುಗಳನ್ನು ಆಸ್ಪತ್ರೆಗೆ ಅನುಸಂಧಾನ ಮಾಡಿ ನಿರ್ಮಿಸಬೇಕು. ಅವು ಜನರಿಗೆ ಉಚಿತ ಸೇವೆ ಒದಗಿಸಿ, ನಂಬಿಕೆ ಬೆಳೆಸಿಕೊಳ್ಳಬೇಕು. ನಿರ್ಮಾಣ ಹಂತದಲ್ಲೇ ಅನೇಕ ತೊಡಕುಗಳಿಂದ ಕೊಳೆಯುತ್ತಿರುವ ಸಂಸ್ಥೆಗಳು ಎಷ್ಟು ವರ್ಷಗಳಿಗೆ ಉನ್ನತ ಮಟ್ಟಕ್ಕೆ ಸೇರುತ್ತವೆ ಎಂದು ಹೇಳಲಾರದ ಪರಿಸ್ಥಿತಿ ನೆಲೆಗೊಂಡಿದೆ. ಸಂಖ್ಯಾಪರವಾಗಿ ಎಷ್ಟು ಏಮ್ಸ್‌ಗಳ ನಿರ್ಮಾಣ ಮಾಡಿದರೂ, ಅವು ಪ್ರಜೆಗಳ ಆರೋಗ್ಯಕ್ಕೆ ಭದ್ರಬುನಾದಿ ಹಾಕದಿದ್ದರೆ ವ್ಯರ್ಥ. ಕೇಂದ್ರ-ರಾಜ್ಯ ಸರಕಾರಗಳ ಪಕ್ಷಾತೀತ ಸಮನ್ವಯ ಕೆಲಸದಿಂದಷ್ಟೇ ಇದು ಸಾಕಾರಗೊಳ್ಳುತ್ತದೆ.

ಕೌಶಲ್ಯದ ಕೊರತೆ

ದೇಶದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಏಮ್ಸ್‌ಗಳು ಸಮಸ್ಯೆಗಳಿಂದ ಒದ್ದಾಡುತ್ತಿರುವ ಹಿನ್ನೆಲೆಯಲ್ಲಿ, ಇವಕ್ಕೆ ಮೂಲ ಸಂಸ್ಥೆಯಾಗಿ ಭಾವಿಸುವ ದಿಲ್ಲಿ ಏಮ್ಸ್‌ನ ಆಂತರಿಕ ಕಾರ್ಯ ವಿಧಾನ, ವೈಫಲ್ಯಗಳನ್ನು ಪರಿಶೀಲಿಸಬೇಕಾಗಿದೆ. ಭಾರತದ ಅತ್ಯುನ್ನತ ಆರೋಗ್ಯ ಸಂಸ್ಥೆ, ವೈದ್ಯಕೀಯ ಶಿಕ್ಷಣ-ಸಂಶೋಧನೆಯಲ್ಲಿ ಕೌಶಲ್ಯವನ್ನು ಹೆಚ್ಚಿಸುವ ಬೋಧನಾಸ್ಪತ್ರೆಯಾಗಿ ಬೆಳೆಯಲಿ ಎಂದು ಆಶಿಸಿದರೂ, ಬೋಧನೆ, ಸಂಶೋಧನೆಗೆ ಸೂಕ್ತ ಪ್ರಾಧಾನ್ಯ ಕಲ್ಪಿಸಲಾರದ ಒಂದು ದೊಡ್ಡ ಆಸ್ಪತ್ರೆಯಾಗಿ ಮಾತ್ರವೇ ಅಭಿವೃದ್ಧಿ ಹೊಂದಿದೆ ಎಂದು 2018ರಲ್ಲಿ ಕಾಗ್ ಏಮ್ಸ್ ಬಗ್ಗೆ ಬಿಡುಗಡೆ ಮಾಡಿದ ಅಧ್ಯಯನ ವರದಿಯಲ್ಲಿ ಸ್ಪಷ್ಟಪಡಿಸಿದೆ.

ಏಮ್ಸ್‌ಗೆ ಒದಗಿಸಲಾದ ನಿಧಿಯಲ್ಲಿ ಕೇವಲ ಶೇ.2 ಮಾತ್ರವೇ ಸಂಶೋಧನೆಗಾಗಿ ಖರ್ಚು ಮಾಡುತ್ತಿರುವುದಾಗಿ ಅದು ತಿಳಿಸಿದೆ. ಅನೇಕ ಸಂಶೋಧನೆಗಳು ಬಹುರಾಷ್ಟ್ರೀಯ ಕಂಪೆನಿಗಳೊಂದಿಗೆ ಕುದುರಿಸಿಕೊಂಡ ಒಪ್ಪಂದದ ಭಾಗವಾಗಿ ನಡೆಯುತ್ತಿರುವವೇ ಹೊರತು, ಏಮ್ಸ್ ಅಧ್ಯಾಪಕರಾದ ಸಂಶೋಧಕರ ಮೂಲಕ ನಡೆಯುತ್ತಿಲ್ಲ. ಒಂದು ಕಡೆ ನಮ್ಮ ದೇಶ ವೈದ್ಯರ ಕೊರತೆಯಿಂದ ತತ್ತರಿಸುತ್ತಾ ಪರ್ಯಾಯಗಳನ್ನು ಹುಡುಕುವ ಪ್ರಯತ್ನದಲ್ಲಿರುವಾಗ ಏಮ್ಸ್‌ನಲ್ಲಿ ಶಿಕ್ಷಣ ಪಡೆದ ವೈದ್ಯರಲ್ಲಿ ಶೇ.49 ವಿದೇಶಗಳಿಗೆ ಹೊರಟು ಹೆಗಿದ್ದಾರೆ ಎನ್ನುವುದು ಕಟುಸತ್ಯ.

ಏಮ್ಸ್‌ನಲ್ಲಿ ಸಿಬ್ಬಂದಿ ಕೊರತೆಯ ಕಾರಣದಿಂದ ಕೆಲವು ಶಸ್ತ್ರಚಿಕಿತ್ಸೆಗಳಿಗೋಸ್ಕರ ರೋಗಿಗಳು ವರ್ಷಗಟ್ಟಲೆ ಕಾದಿರಬೇಕಾದ ಪರಿಸ್ಥಿತಿ ಇದೆ ಎಂದರೆ ಉತ್ಪ್ರೇಕ್ಷೆ ಅಲ್ಲ. ಔಟ್ ಪೇಷೆಂಟ್ ವಿಭಾಗದಲ್ಲಿ ಕೇವಲ ಒಬ್ಬ ವೈದ್ಯ ಒಬ್ಬ ರೋಗಿಗೆ ನಾಲ್ಕರಿಂದ ಒಂಬತ್ತು ನಿಮಿಷಗಳನ್ನು ಮಾತ್ರವೇ ನೀಡುತ್ತಿರುವುದಾಗಿ ಒಂದು ಅಧ್ಯಯನ ತಿಳಿಸಿದೆ. ಕಾಗ್ ವರದಿ ಹಲವು ಅಂಶಗಳಲ್ಲಿ ಏಮ್ಸ್‌ನ್ನು ಆಕ್ಷೇಪಿಸಿದೆ. ಅನೇಕ ಲೋಪಗಳು ಎತ್ತಿ ತೋರಿಸಿದೆ. ದೇಶದ ಪ್ರಜಾರೋಗ್ಯಕ್ಕಾಗಿ ವೌಲಿಕ ಸೌಕರ್ಯಗಳ ಆಧುನೀಕರಣಕ್ಕೆ ನಾಯಕತ್ವ ವಹಿಸುವುದರಲ್ಲಿ ಏಮ್ಸ್ ವಿಫಲವಾಗಿದೆ ಎನ್ನುವುದೇ ಕಾಗ್ ವರದಿ ಸಾರಾಂಶ.

ಚಿಕಿತ್ಸಾ ಕೇಂದ್ರಗಳ ರಚನೆಯಲ್ಲಿ ಆಲಸ್ಯ, ಉಪಕರಣಗಳ ಖರೀದಿಯಲ್ಲಿ ಎಡವಟ್ಟುಗಳನ್ನು ಗುರುತಿಸಿದೆ. ಸಂಸ್ಥಾಗತವಾದ ಭ್ರಷ್ಟಾಚಾರ, ಆರ್ಥಿಕ ದುರುಪಯೋಗ ಇಂತಹ ಹಲವು ಕೇಸ್‌ಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ.

ಏಮ್ಸ್ ಅನೇಕ ಸಮಸ್ಯೆಗಳಿಂದ ತತ್ತರಿಸುತ್ತಿವೆ ಎಂಬುದು ನಿಷ್ಠುರ ವಾಸ್ತವ. 2012-13ರಲ್ಲಿ ಏಮ್ಸ್‌ಗೆ ಸಂಶೋಧನೆಗೋಸ್ಕರ ಬಿಡುಗಡೆಯಾದ ಸಂಸ್ಥಾಗತ ನಿಧಿಗಳು ಕೇವಲ ರೂ. 1.31 ಕೋಟಿ. ಸಂಸ್ಥೆಯ ವಿದ್ಯಾರ್ಥಿಗಳು ಬಹುಮಂದಿ ವಿದೇಶಗಳಲ್ಲಿ ನೆಲೆಗೊಳ್ಳುವುದೋ, ಪ್ರಾಕ್ಟೀಸ್ ಕೈಗೊಳ್ಳುವುದೋ ನಡೆಯುತ್ತಿದೆ. ಕ್ರಮೇಣ ಏಮ್ಸ್‌ನ ಪ್ರತಿಷ್ಠೆ ಮಬ್ಬಾಗುತ್ತಿದೆ ಎಂಬುದು ಹಿರಿಯ ವೈದ್ಯ ತಜ್ಞರ ಅಭಿಪ್ರಾಯ. ವೈಜ್ಞಾನಿಕ ಅಂಶಗಳು, ರೋಗಪತ್ತೆಯಲ್ಲಿ ಸುಧಾರಿತ ಕಾರ್ಯವಿಧಾನ ತೋರುತ್ತಿದ್ದರೂ, ರೋಗಿ ಸಂರಕ್ಷಣೆಯಲ್ಲಿ ಆಲಸ್ಯ ಸಂಸ್ಥೆಯ ಪ್ರತಿಷ್ಠೆಯನ್ನು ಘಾಸಿಗೊಳಿಸುತ್ತಿವೆ.

ದೊಡ್ಡ ಸಂಖ್ಯೆಯಲ್ಲಿ ಬರುವ ರೋಗಿಗಳಿಗೆ ಸರಿಯಾದ ವಸತಿಗಳನ್ನು ಕಲ್ಪಿಸುವುದರಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ. ಒಪಿಡಿ ನಿರ್ವಹಣೆ ಮೇಲೆ ಕಟುಟೀಕೆಗಳಿವೆ. ರಾಜ್ಯ ಮಟ್ಟದಲ್ಲಿನ ಆಸ್ಪತ್ರೆಗಳು ಎಂದಾದರೂ ಸಂಕೀರ್ಣ ಕೇಸ್‌ಗಳನ್ನು ಏಮ್ಸ್‌ಗೆ ಕಳುಹಿಸಬೇಕು ಎಂದುಕೊಂಡರೆ, ಅದಕ್ಕೆ ಸೂಕ್ತ ವ್ಯವಸ್ಥೆ ಇಲ್ಲ. ಸಣ್ಣಪುಟ್ಟ ರೋಗಿಗಳನ್ನು ಸೇರಿಸಿಕೊಳ್ಳುತ್ತಿರುವುದರಿಂದ ಏಮ್ಸ್ ಸಾಮಾನ್ಯ ಆಸ್ಪತ್ರೆಯಾಗಿ ಬದಲಾಗುತ್ತಿದೆ. ಸಂಸ್ಥೆಯಲ್ಲಿನ ಅನೇಕ ಅಕ್ರಮಗಳೂ ಹೊರ ಬೀಳುತ್ತಿವೆ. ದೇಶದಲ್ಲಿ ಏಮ್ಸ್‌ನಂತಹ ಮತ್ತಷ್ಟು ಸಂಸ್ಥೆಗಳ ಅಗತ್ಯ ಖಂಡಿತಾ ಇದೆ. ಆದರೆ ಅತ್ಯುತ್ತಮ ಸಂಸ್ಥೆಗಳು, ಅದ್ಭುತ ವ್ಯಕ್ತಿಗಳ ಸಮೀಕರಣದಿಂದ ತಲೆ ಎತ್ತಬಲ್ಲವೇ ಹೊರತು, ಕೇವಲ ಮಾನವ ಸಂಪನ್ಮೂಲಗಳ ಸಂಗಮದಿಂದ ಅಲ್ಲ.

ಅಧ್ಯಾಪಕರ ಕೊರತೆ- ಅರೆಬರೆ ಸೌಕರ್ಯಗಳು

ಉನ್ನತ ಗುರಿಗಳೊಂದಿಗೆ ದೇಶದಲ್ಲಿನ ವಿವಿಧ ಪ್ರಾಂತಗಳಲ್ಲಿ ಹೊಸದಾಗಿ ಏಮ್ಸ್‌ಗಳ ನಿರ್ಮಾಣ ಮಾಡುವುದು ಒಳ್ಳೆಯದೇ ಆದರೂ- ಅವುಗಳ ಕಾರ್ಯನೀತಿ ಪ್ರಗತಿ ಅಷ್ಟಕ್ಕಷ್ಟೆ. ಬೋಧಕರ ಕೊರತೆ, ಮೂಲಭೂತ ಸೌಕರ್ಯಗಳ ಕೊರತೆ ಗುಣಮಟ್ಟರಹಿತ ಥಿಯೇಟರ್‌ಗಳಂತಹ ಲೋಪಗಳಿಂದ ಆರು ನಗರಗಳಲ್ಲಿನ ಏಮ್ಸ್ ಗಳು ಕೊಳೆಯುತ್ತಿವೆ. ಭೋಪಾಲ್, ಭುವನೇಶ್ವರ್, ಜೋಧಪುರ, ಪಟ್ನಾ, ರಾಯಪೂರ್, ರಿಷಿಕೇಶ್‌ಗಳಲ್ಲಿನ ಏಮ್ಸ್‌ಗಳ ಆರೋಗ್ಯ ಸೇವೆಗಳನ್ನು ಪರಿಶೀಲಿಸಿದ ಪಾರ್ಲಿಮೆಂಟರಿ ಕಮಿಟಿ, ಮಾನವ ಸಂಪನ್ಮೂಲ ಕೊರತೆ ಕಾರಣದಿಂದ ಅಲ್ಲಿ ಏರ್ಪಾಟು ಮಾಡಿದ ಮೂಲಭೂತ ಸೌಕರ್ಯಗಳೂ ನಿರುಪಯುಕ್ತವಾಗುತ್ತವೆ ಎಂದು ಎಚ್ಚರಿಸಿದೆ.

2018 ಆಗಸ್ಟ್‌ನಲ್ಲಿ ಪಾರ್ಲಿಮೆಂಟ್‌ನಲ್ಲಿ ಪ್ರವೇಶಗೊಳಿಸಿದ ಕಮಿಟಿ ವರದಿ, ಆರು ಏಮ್ಸ್‌ಗಳಿಗೆ ಮಂಜೂರು ಮಾಡಿದ 1,830 ಬೋಧಕರ ಪೋಸ್ಟ್‌ಗಳಲ್ಲಿ 884 (ಶೇ.48) ಖಾಲಿಯಾಗಿವೆ ಎಂದೂ, ಹಲವು ಸೂಪರ್ ಸ್ಪೆಷಾಲಿಟಿ ವಿಭಾಗಗಳಲ್ಲಿ ಬೋಧಕರು ಇಲ್ಲ ಎಂದು ತಿಳಿದು ಬಂದಿದೆ. ಮಂಜೂರು ಮಾಡಿದ 22,656 ಬೋಧಕೇತರ ಪೋಸ್ಟ್‌ಗಳಲ್ಲಿ 13,788 (ಶೇ.60) ಕೂಡ ಭರ್ತಿ ಮಾಡಲಿಲ್ಲ ಎಂದೂ, ಸಿಬ್ಬಂದಿ ಕೊರತೆಯೂ ಸೇರಿ ವೈದ್ಯರು ತೀವ್ರವಾದ ಒತ್ತಡದಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿಗಳು ತಲೆ ಎತ್ತುತ್ತಿವೆ ಎಂದು ಎಚ್ಚರಿಸಿದೆ. ರಿಷಿಕೇಶ್ ಏಮ್ಸ್‌ನಲ್ಲಿ ಆಪರೇಶನ್ ಥಿಯೇಟರ್‌ಗಳಲ್ಲಿ ಮೂಲಭೂತ ಸೌಕರ್ಯಗಳಾದ ಗ್ಯಾಸ್ ಪೈಪ್‌ಲೈನ್‌ಗಳು, ಕೊಳಕು ನೀರಿನ ಮಾರ್ಗಗಳಿಗೋಸ್ಕರ ಯಾವುದೇ ಏರ್ಪಾಟುಗಳೂ ಇಲ್ಲ ಎಂದು ಕಮಿಟಿ ಉಲ್ಲೇಖಿಸಿತು. ಜೋಧಪುರ ಏಮ್ಸ್‌ನಲ್ಲಿ ಒಂದು ಮಾಡ್ಯುಲರ್ ಆಪರೇಶನ್ ಥಿಯೇಟರೂ ಕೆಲಸ ಮಾಡುವ ಸ್ಥಿತಿಯಲ್ಲಿಲ್ಲ ಎಂದು ತಿಳಿಸಿದೆ. ಆರು ಏಮ್ಸ್‌ಗಳು ಎದುರಿಸುತ್ತಿರುವ ಸವಾಲುಗಳು ಅನೇಕ ಪಾಠಗಳು ಕಲಿಸಿರುವುದಾಗಿ ಪ್ರಜಾರೋಗ್ಯ ತಜ್ಞರು ಹೇಳುತ್ತಿದ್ದಾರೆ. ಈ ಸಂಸ್ಥೆಗಳನ್ನು ಅತ್ಯುತ್ತಮ ಕೇಂದ್ರಗಳನ್ನಾಗಿ ರೂಪಿಸಬೇಕು ಎಂದು ಭಾವಿಸಿದ್ದರೂ-ಅಧ್ಯಾಪಕರ ಕೊರತೆ, ಅರೆಕೊರೆ ಸೌಕರ್ಯಗಳು, ಅತೀ ಸಾಮಾನ್ಯ ಸೇವೆಗಳು ಸಮಸ್ಯೆಗಳಾಗಿ ಬದಲಾಗಿವೆ.

(ಲೇಖಕರು ಹೈದರಾಬಾದ್ ಏಮ್ಸ್ ನೆಫ್ರಾಲಜಿ ವಿಭಾಗದ ಮುಖ್ಯಸ್ಥರು)

eenadu(ಕೃಪೆ: )

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)