varthabharthi


ಸುಗ್ಗಿ

ಮಗುತನ ಜತನ 04

ಮಕ್ಕಳ ಕುರಿತ ರಾಷ್ಟ್ರೀಯ ನೀತಿ ಮತ್ತು ಕಾಯ್ದೆಗಳು

ವಾರ್ತಾ ಭಾರತಿ : 27 Feb, 2020

ಭಾರತದಲ್ಲಿ ಮಕ್ಕಳ ಮತ್ತು ಹದಿಹರೆಯದವರ ನರ ಮತ್ತು ಮಾನಸಿಕ ಆರೋಗ್ಯದ ವಿಷಯದಲ್ಲಿ ಒಂದು ಆರೋಪವಿದೆ. ಅದೇನೆಂದರೆ, ಸಮಸ್ಯೆಯು ತೀವ್ರತರವಾಗಿರುವಷ್ಟು ತೀವ್ರತರವಾದಂತಹ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಸರಕಾರವು ಕೈಗೆತ್ತಿಕೊಳ್ಳದೇ ಇರುವುದು. ಅದರಲ್ಲೂ ಮಕ್ಕಳ ಮತ್ತು ಹದಿಹರೆಯದವರು ಸದ್ಯಕ್ಕೆ (2019 -20) ಸರಿಸುಮಾರು 435 ಸಂಖ್ಯೆಯಲ್ಲಿದ್ದಾರೆ. ಮಕ್ಕಳಿಗಾಗಿಯೇ ವಿಶೇಷವಾಗಿ 1937ರಲ್ಲಿಯೇ ಸಲಹಾ ಸಮಿತಿಯು ಸ್ವಾತಂತ್ರ ಪೂರ್ವ ಬ್ರಿಟಿಷ್ ರಾಜ್ ಭಾರತದಲ್ಲಿ ಅಗತ್ಯವಿದೆ ಎಂದು ಅಸ್ತಿತ್ವಕ್ಕೆ ಬಂದಿತು. ಇಂಡಿಯನ್ ಕೌನ್ಸಿಲ್ ಫಾರ್ ಮೆಂಟಲ್ ಹೈಜಿನ್ 1940ರಲ್ಲಿ ಮಾಡಿದ ಪ್ರಾರಂಭಿಕ ಪ್ರಯತ್ನ. 1980ರವರೆಗೂ 120 ಮಕ್ಕಳ ವಿಶೇಷ ಚಿಕಿತ್ಸಾಲಯಗಳು ಭಾರತದಲ್ಲಿ ಸ್ಥಾಪಿತಗೊಂಡವು. ಆದರೆ ಅದರ ನಿರ್ವಾಹಕರು ಬರೀ 400 ಮಂದಿ ಮಾತ್ರ. 1991 ರಿಂದ 1995ರ ನಡುವೆ ನ್ಯಾಷನಲ್ ಅಥಾರಿಟೀಸ್ ಆಫ್ ಮೆಡಿಕಲ್ ಸೈನ್ಸಸ್ ಗಮನೀಯವಾಗಿ ಮಕ್ಕಳ ಮತ್ತು ಹದಿಹರೆಯದವರ ನರ ಮತ್ತು ಮಾನಸಿಕ ಆರೋಗ್ಯದ ಕಡೆಗೆ ನಿಗಾ ವಹಿಸುವಲ್ಲಿ ಒಂದಿಷ್ಟು ಕೆಲಸ ಮಾಡಿವೆ. ಮಕ್ಕಳಿಗೆ ಸಂಬಂಧಪಟ್ಟಂತೆ ಭಾರತವು ಕಾಲ ಕಾಲಕ್ಕೆ ಅನೇಕ ರಾಷ್ಟ್ರೀಯ ನಿಯಮಾವಳಿಗಳನ್ನು ರೂಪಿಸಿದೆ.

 ನ್ಯಾಷನಲ್ ಪಾಲಿಸಿ ಫಾರ್ ಚಿಲ್ಡ್ರನ್ (1974), ನ್ಯಾಷನಲ್ ಪಾಲಿಸಿ ಆನ್ ಎಜುಕೇಶನ್ (1986), ನ್ಯಾಷನಲ್ ಪಾಲಿಸಿ ಆನ್ ಚೈಲ್ಡ್ ಲೇಬರ್ (1987), ಮೆಂಟಲ್ ಹೆಲ್ತ್ ಆ್ಯಕ್ಟ್ (1987), ನ್ಯಾಷನಲ್ ನ್ಯೂಟ್ರಿಶಿಯನ್ ಪಾಲಿಸಿ (1993), ನ್ಯಾಷನಲ್ ಟ್ರಸ್ಟ್ ಫಾರ್ ವೆಲ್ಫೇರ್ ಆಫ್ ಪರ್ಸನ್ ವಿತ್ ಆಟಿಸಂ, ಸೆರೆಬ್ರಲ್ ಪಾಲ್ಸಿ, ಮೆಂಟಲ್ ರಿಟಾರ್ಡೇಶನ್ ಆ್ಯಂಡ್ ಮಲ್ಟಿಪಲ್ ಡಿಸೆಬಲಿಟಿ ಆ್ಯಕ್ಟ್ 1999, ಚಾರ್ಟರ್ ಫಾರ್ ಚಿಲ್ಡ್ರನ್ (2004), ನ್ಯಾಷನಲ್ ಪ್ಲಾನ್ ಆಫ್ ಆ್ಯಕ್ಶನ್ ಫಾರ್ ಚಿಲ್ಡ್ರನ್ (2005); ಇಷ್ಟೆಲ್ಲಾ ಬಂದರೂ ಯಾವುದೇ ಒಂದು ಪಾಲಿಸಿಯು ‘ಮಕ್ಕಳ ಮತ್ತು ಹದಿಹರೆಯದವರ ಮಾನಸಿಕ ಆರೋಗ್ಯವನ್ನು’ ತನ್ನಲ್ಲಿ ಪಾಲಿಸಿಯಾಗಿ ಅನುಷ್ಠಾನಗೊಳಿಸಿಲ್ಲ. ರಾಷ್ಟ್ರೀಯ ಆರೋಗ್ಯ ನೀತಿ (2002, 2016) ಮತ್ತು ರಾಷ್ಟ್ರೀಯ ಮಾನಸಿಕ ಆರೋಗ್ಯ ನೀತಿ (2014); ಈ ಎರಡೂ ಮಕ್ಕಳ ಮಾನಸಿಕ ಆರೋಗ್ಯದ ವಿಷಯದಲ್ಲಿ ಕೊಟ್ಟಿರುವ ಗಮನ ಅತ್ಯಂತ ಕಡಿಮೆ ಅಥವಾ ಏನೇನೂ ಸಾಲದು.

 ಮಕ್ಕಳ ಮಾನಸಿಕ ಆರೋಗ್ಯ ಯೋಜನೆ

ಭಾರತದ ಬಹುತೇಕ ರಾಜ್ಯಗಳಲ್ಲಿ ಸಿಎಎಂ ಎಚ್ (ಚಿಲ್ಡ್ರನ್, ಅಡೋಲಸೆಂಟ್ ಮೆಂಟಲ್ ಹೆಲ್ತ್) ಅಂದರೆ ಮಕ್ಕಳ ಮತ್ತು ಹದಿಹರೆಯದವರ ಮಾನಸಿಕ ಆರೋಗ್ಯದ ಕುರಿತಾಗಿ ಕೆಲಸವನ್ನೇ ಮಾಡಿಲ್ಲ ಅಥವಾ ಮಾಡಿದ್ದರೂ ಗುರುತರವಾಗಿಲ್ಲ. ಹಾಗೆ ನೋಡಲು ಹೋದರೆ ಕೇರಳದಲ್ಲಿ ಒಂದಿಷ್ಟು ಕೆಲಸಗಳಾಗಿವೆ. ಮಕ್ಕಳ ಮತ್ತು ಹದಿಹರೆಯದವರ ಮಾನಸಿಕ ಆರೋಗ್ಯದ ಬಗ್ಗೆ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಸರಕಾರಗಳು ಗಂಭೀರವಾಗಿ ರೂಪಿಸದೇ ಹೋದ ಪಕ್ಷದಲ್ಲಿ ಮುಂದೆ ಮಾನಸಿಕವಾಗಿ ಆರೋಗ್ಯವಾಗಿರುವಂತಹ ಸಮಾಜವನ್ನು ಕಾಣುವುದು ಕಷ್ಟವಾಗುವುದು ಮತ್ತು ಪ್ರಗತಿ ಹಾಗೂ ಅಭಿವೃದ್ಧಿಯು ಸಹಜವಾಗಿಯೇ ಕುಂಠಿತವಾಗುವುದು. ಶಾಲೆಗಳಲ್ಲಿ ಆರೋಗ್ಯ ಕಾರ್ಯಕ್ರಮ, ಶಿಕ್ಷಕರಿಗೆ ಅಗತ್ಯವಿರುವಂತಹ ಜಾಗೃತಿ ಶಿಬಿರಗಳು, ವ್ಯಕ್ತಿವಿಕಾಸ ಶಿಬಿರಗಳು, ಮಕ್ಕಳಿಗೆ ಮಾನಸಿಕ ಸಬಲೀಕರಣದ ಕಾರ್ಯಕ್ರಮಗಳು; ಹೀಗೆ ಕೆಲವು ಬಗೆಯ ಕಾರ್ಯಕ್ರಮಗಳನ್ನು ಶಾಲೆಯನ್ನು ಆಧರಿಸಿಕೊಂಡು ನಿಮ್ಹಾನ್ಸ್ ಮಾಡುತ್ತಿದೆ. ಇವುಗಳು ನಡೆಸುವ ಕಾರ್ಯಕ್ರಮಗಳಲ್ಲಿ ಮನೋಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ, ತಮ್ಮ ಮನಸ್ಥಿತಿಯನ್ನು ತಾವೇ ತಿಳಿದುಕೊಳ್ಳುವಂತಹ ಅವಲೋಕನ, ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಬಂಧಗಳು, ತನ್ನ ಸಮವಯಸ್ಕರೊಡನೆ ಮತ್ತು ಶಿಕ್ಷಕರು ಹಾಗೂ ಇತರ ಹಿರಿಯರೊಡನೆ ಸಂಬಂಧಗಳು; ಇಂತಹ ವಿಷಯಗಳ ಬಗ್ಗೆ ಒಂದಿಷ್ಟು ಬೆಳಕು ಚೆಲ್ಲಲಾಗುತ್ತಿದೆ. ಅದೂ ಈ ಕಾರ್ಯಕ್ರಮಗಳು ಎಲ್ಲೋ ಒಂದಿಷ್ಟು ನಗರ ಭಾಗದ ಶಾಲೆಗಳಲ್ಲಿ, ಅದರಲ್ಲೂ ಇದರ ಬಗ್ಗೆ ಅರಿವಿರುವಂತಹ ಸಂಸ್ಥೆಗಳಲ್ಲಿ ನಡೆಯುತ್ತಿವೆ. ಏನೂ ಆಗದೇ ಇರುವಂತಹ ಜಾಗಗಳಲ್ಲಿ ಏನೋ ಒಂದಿಷ್ಟು ಆಗುತ್ತಿದೆ ಎಂದು ಸಮಾಧಾನ ಪಟ್ಟುಕೊಳ್ಳುವಷ್ಟು ಹಾಗೂ ಅಲ್ಪತೃಪ್ತಿ ಪಟ್ಟುಕೊಳ್ಳುವಷ್ಟು ಸಣ್ಣ ಮತ್ತು ಸರಳ ವಿಷಯವಲ್ಲ ಈ ಮಾನಸಿಕ ಆರೋಗ್ಯ ಎನ್ನುವುದು. ಕೆಲವು ಸಣ್ಣ ಅಥವಾ ಮಧ್ಯಮ ದೃಢತೆಯ ಸ್ವಯಂ ಪ್ರೇರಿತ ಸಂಘ ಸಂಸ್ಥೆಗಳು ಮುಂದಾಗಿರುವುದು ಬಿಟ್ಟರೆ ಸರಕಾರದ ಒಲವು, ನಿಲುವು ಮತ್ತು ಕೆಲಸಗಳು ಏನೇನೂ ಸಾಲುವಂತಿಲ್ಲ. ಬೆಂಗಳೂರು, ಮುಂಬೈ, ದಿಲ್ಲಿ, ಚೆನ್ನೈನಂತಹ ನಗರ ಪ್ರದೇಶಗಳಲ್ಲಿ, ಅದೂ ಅಲ್ಪಕಾಲ ನಡೆದು ಮುಗಿದು ಹೋಗುತ್ತವೆ. ಮಕ್ಕಳ ಮತ್ತು ಹದಿಹರೆಯದವರ ಮಾನಸಿಕ ಆರೋಗ್ಯದ ಕುರಿತಾಗಿ ಪ್ರಣಾಳಿಕೆಯನ್ನು ಹೊಂದಿರುವ ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮವು ರಾಷ್ಟ್ರೀಯ ಹದಿಹರೆಯದವರ ಆರೋಗ್ಯ ಕಾರ್ಯಕ್ರಮದ್ದೇ. ಆದರೆ ಕಾಣುತ್ತಿರುವಂತೆ ಏನು ಕೆಲಸವಾಗುತ್ತಿದೆ? 2014ರಲ್ಲಿ ಭಾರತ ಸರಕಾರವು ರಾಷ್ಟ್ರೀಯ ಆರೋಗ್ಯ ಸಂಸ್ಥೆಯಲ್ಲಿ ಮಾನಸಿಕ ಆರೋಗ್ಯದ ಕಾರ್ಯಕ್ರಮವನ್ನೂ ರೂಪುಗೊಳಿಸಿದೆ. ಪೌಷ್ಟಿಕಾಂಶಗಳನ್ನು ಉತ್ತಮಗೊಳಿಸುವ, ಲೈಂಗಿಕ ಆರೋಗ್ಯ ಇತ್ಯಾದಿ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿಯೇ ರೂಪಿಸಿದೆ. ಆದರೆ ಇವುಗಳನ್ನು ಅನುಷ್ಠಾನಕ್ಕೆ ತರಲು ಅನೇಕ ಇತಿಮಿತಿಗಳಿದ್ದು ನಿರ್ಲಕ್ಷಕ್ಕೆ ಒಳಗಾಗಿದೆ. ಏನು ಆ ಸಮಸ್ಯೆಗಳೆಂದರೆ, ಮಾನಸಿಕ ಆರೋಗ್ಯವನ್ನು ಹಲವು ಕಾರ್ಯಕ್ರಮಗಳಲ್ಲಿ ಒಂದು ಸಣ್ಣ ಭಾಗವಾಗಿ ಅಳವಡಿಸಿಕೊಂಡಿರುವ ಕಾರಣದಿಂದ ಬೇಕಾದಷ್ಟು ಹೆಚ್ಚಿನ ಗಮನವನ್ನು ನೀಡಲಾಗುತ್ತಿಲ್ಲ. ಎರಡನೆಯದಾಗಿ ಈ ಯೋಜನೆಯು ಹದಿನೈದರಿಂದ ಹತ್ತೊಂಬತ್ತು ವರ್ಷದವರನ್ನು ಮಾತ್ರ ಮುಟ್ಟುತ್ತಿದ್ದು, ಹತ್ತರಿಂದ ಪ್ರಾರಂಭವಾಗುವ ಕಿಶೋರರನ್ನು ಗಮನಿಸುತ್ತಿಲ್ಲ. ಸೊನ್ನೆಯಿಂದ ಹತ್ತು ವರ್ಷದವರೆಗಿನ ಮಕ್ಕಳಲ್ಲಿಯೇ ಮಾನಸಿಕವಾದ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಏಕೆಂದರೆ ಆಗಾಗಲೇ ನಿರ್ಮಾಣವಾದ ಮನಸ್ಥಿತಿಯ ಬುನಾದಿಯ ಮೇಲೆ ಮುಂದೆ ವರ್ತನೆಗಳ, ಮಾನಸಿಕ ಸ್ಥಿತಿಗಳ ಆಧಾರಿತವಾದ ವ್ಯಕ್ತಿತ್ವವನ್ನು ನಿರ್ಮಾಣ ಮಾಡಿಕೊಂಡು ಹೋಗುತ್ತಿರುತ್ತಾರೆ. ಮಾನಸಿಕ ಆರೋಗ್ಯದ ಬಗ್ಗೆ ತೀರಾ ತಡವಾಗಿ ಗಮನಿಸಿದರೆ, ತಮಗಿರುವ ತೊಂದರೆಗಳನ್ನು ತಿಳಿಯಬಹುದೇ ವಿನಹ ಅದನ್ನು ನಿವಾರಿಸಿಕೊಳ್ಳಲು ಕಷ್ಟವಾಗಬಹುದು. ಹಾಗಾಗಿ ಮಾನಸಿಕ ಸಮಾಲೋಚನೆ ಸಣ್ಣ ಮಗುವಿನಿಂದಲೇ ಪ್ರಾರಂಭವಾಗಬೇಕು. ಮೂರನೆಯದಾಗಿ ಮಾನಸಿಕ ಸಮಸ್ಯೆಗಳ ಜಗತ್ತು ಬಹಳ ದೊಡ್ಡದಾಗಿದ್ದು, ಒಬ್ಬೊಬ್ಬರಿಗೂ ಒಂದೊಂದು ಭಿನ್ನ ರೀತಿಯ ಸಮಸ್ಯೆಗಳಿರುತ್ತವೆ. ಆದರೆ ಇವುಗಳ ಬಗ್ಗೆ ಅರಿವಿರದ ಕಾರಣ ಸಮಗ್ರವಾಗಿ ತಿಳುವಳಿಕೆ ನೀಡುತ್ತಾರೆ ಅಥವಾ ಸ್ಥೂಲ ಸ್ವರೂಪದ ಪರಿಚಯವಾಗಿರುತ್ತದೆ. ಇದು ಅಷ್ಟೇನೂ ಪ್ರಯೋಜನವಲ್ಲ. ಮಾನಸಿಕ ಆರೋಗ್ಯದ ಬಗ್ಗೆ ನೀಡುವ ತಿಳುವಳಿಕೆಯೆಂದರೆ ಜನರಲ್ ನಾಲೆಜ್ (ಸಾಮಾನ್ಯ ಜ್ಞಾನ) ರೀತಿಯಲ್ಲ. ಇದೊಂದು ಆತ್ಮಾವಲೋಕನಕ್ಕೆ ಅಗತ್ಯವಿರುವ ಪ್ರಾಯೋಗಿಕ ವಿಜ್ಞಾನ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)