varthabharthi


ವೈವಿಧ್ಯ

ಕನಸುಗಳನ್ನು ಪೋಷಿಸುವವರಿದ್ದಾಗ, ಆಕಾಶವೂ ಮಿತಿಯಲ್ಲ

ವಾರ್ತಾ ಭಾರತಿ : 1 Mar, 2020
ಸದಾನಂದ ಆರ್.

ಮರದಿಂದ ಬಿದ್ದ ಸೇಬು ನ್ಯೂಟನ್‌ಗೆ ಸ್ಫೂರ್ತಿಯಾದರೆ, ಬೆಳಕಿಗಿಂತ ವೇಗವಾದುದು ಯಾವುದು ಎನ್ನುವ ಪ್ರಶ್ನೆ E-mc2ನ ಆವಿಷ್ಕಾರಕ್ಕೆ ದಾರಿಯಾಯಿತು. ಐನ್‌ಸ್ಟೀನ್ ಪೂರ್ಣ ಮಾಡದೆ ಬಿಟ್ಟುಹೋದ ಥಿಯರಿ ಯಾವುದು, ಅದು ಏಕೆ ಅರ್ಧದಲ್ಲೇ ನಿಂತು ಹೋಯಿತು? ನಾನೇ ಪೂರ್ಣಗೊಳಿಸುವುದಾದರೆ, ಹೇಗೆ ಅದನ್ನು ಪೂರ್ಣಗೊಳಿಸಬಹುದೆಂಬ ಕುತೂಹಲ ಅವರನ್ನು ಇಲ್ಲಿಯವರೆಗೂ ಕರೆತಂದಿತು. ಇಂದಿನ ಮಕ್ಕಳಲ್ಲಿ ಇಂತಹ ಕುತೂಹಲಗಳು ಮೂಡದೇ ಇದ್ದಲ್ಲಿ, ಭವಿಷ್ಯದ ಸಮಸ್ಯೆಗಳನ್ನು ಬಿಡಿಸಲು ಮಾನವ ಸಮಾಜ ಅಸಮರ್ಥವಾಗಿ ನಶಿಸಿ ಹೋಗಲಿದೆ...

ದಿನೈದು ವರ್ಷದ ಹುಡುಗನಿಗೊಂದು ಆಸೆ. ತಾನೊಂದು ಅಣುವನ್ನು ಛೇದಿಸುವ ಯಂತ್ರವನ್ನು ಸ್ಥಾಪಿಸಬೇಕು; ಅದರಿಂದ ಉಂಟಾಗುವ ಪರಿಣಾಮವನ್ನು ವಿಜ್ಞಾನ ಪ್ರದರ್ಶನವೊಂದರಲ್ಲಿ ಹಂಚಿಕೊಳ್ಳಬೇಕು. ಅವನು ಅಮ್ಮನ ಬಳಿ ಹೋಗಿ ಕೇಳಿದ: ಅಮ್ಮ, ಗ್ಯಾರೇಜ್‌ನಲ್ಲಿ ನಾನೊಂದು ಅಣುವನ್ನು ಛೇದಿಸುವ ಯಂತ್ರ ಸ್ಥಾಪಿಸಬೇಕೆಂದಿರುವೆ. ನೀನು ಅನುಮತಿ ನೀಡು. ಅಮ್ಮ ಹೇಳಿದಳು: ಆಗಲಿ. ಮೊದಲು ಅಲ್ಲಿರುವ ಹಳೆಯ ವಸ್ತುಗಳನ್ನು ಖಾಲಿ ಮಾಡು. ಖುಷಿಯಿಂದ ಹುಡುಗ ಗ್ಯಾರೇಜನ್ನು ಖಾಲಿ ಮಾಡಿದ. ಇಪ್ಪತ್ತೆರಡು ಮೈಲಿ ಉದ್ದದ ತಾಮ್ರದ ತಂತಿಯನ್ನು ಅಮ್ಮ-ಅಪ್ಪ ಜೊತೆಯಾಗಿ ಕಬ್ಬಿಣದ ಗಾಲಿಯೊಂದಕ್ಕೆ ಸುತ್ತಿಕೊಟ್ಟರು. ಹುಡುಗ ತನ್ನ ಶಿಕ್ಷಕರಲ್ಲಿ ಕಾಡಿ ಬೇಡಿ ವಿದ್ಯುತ್ ಪರಿವರ್ತಕ ತಂದ. ಕೊನೆಗೊಂದು ದಿನ ತನ್ನ ಪ್ರಯೋಗವನ್ನು ಮಾಡಿಯೇ ಬಿಟ್ಟ. ಅಣು ಛೇದನ ಯಂತ್ರ ಚಾಲೂ ಆದ ಕೂಡಲೇ, ಮನೆಯ ಎಲ್ಲಾ ಬಲ್ಬುಗಳು ಸುಟ್ಟು ಹೋದವು. ಅನೇಕ ಕಡೆ ವಿದ್ಯುತ್ ವೈರ್‌ಗಳು ಸುಟ್ಟು ಕರಕಲಾಗಿದ್ದವು!

ಇಷ್ಟಾದರೂ ಕ್ಯಾಲಿಫೋರ್ನಿಯ ನಗರದ ಶ್ರೀಮಂತರ ಮನೆಯ ಕೈತೋಟಗಳಲ್ಲಿ ಕೂಲಿ ಮಾಡುತ್ತಿದ್ದ ಅಪ್ಪ-ಅಮ್ಮನಿಗೆ ಮಗನ ಮೇಲೆ ಅಭಿಮಾನ. ಅವನು ಮಾಡುತ್ತಿರುವ ಪ್ರಯೋಗದ ತಲೆ-ಬುಡ ಅರ್ಥವಾಗದಿದ್ದರೂ, ಅವನ ಸಂತೋಷ ಕಂಡು ಹಿಗ್ಗುವ ಹಿರಿದಾಸೆ ಅವರದ್ದು. ಅವನನ್ನು ತಡೆಯಲಿಲ್ಲ. ಅನೇಕ ವೇಳೆ ಮಗ ಇಷ್ಟೆಲ್ಲಾ ಖರ್ಚಿನ ಬಾಬ್ತು ಇರುವ ಕೆಲಸವನ್ನು ಮಾಡದೆ, ಆಟವಾಡಿಕೊಂಡು ಇದ್ದರೆ ಸಾಕು ಎನ್ನುವ ಅಪೇಕ್ಷೆ ಅಮ್ಮನದು. ಏಕೆಂದರೆ ಅವರ ಬದುಕಿನಲ್ಲಿ ಸಾಕಷ್ಟು ಕಹಿಯನ್ನು ಉಂಡವರು. ಬಡತನದ ಬೇಗೆಯಲ್ಲಿ ಬೆಂದವರು. ಮಗನ ಸಂತಸದ ಮುಂದೆ ಸುಟ್ಟು ಹೋಗುವ ಫ್ಯೂಸ್ ಇಲ್ಲವೇ ಬಲ್ಬ್ ಅವರಿಗೆ ಮುಖ್ಯ ಅನಿಸಲೇ ಇಲ್ಲ.

ಇಷ್ಟಾಗಿಯೂ ಈ ಹುಡುಗ ಬರೀ ತರಲೆ ಮಾಡುತ್ತಿರಲಿಲ್ಲ. ಆತ ಡಾರ್ಕ್ ಮ್ಯಾಟರ್‌ನ ಬೆನ್ನು ಹತ್ತಿದ್ದ! ಇದರ ಇರುವಿಕೆಯನ್ನು ಊಹಿಸಲಾಗಿತ್ತಾದರೂ, ಅದರ ಇರುವಿಕೆಯ ಪುರಾವೆ ಪೂರ್ತಿಯಾಗಿ ಲಭ್ಯವಿರಲಿಲ್ಲ. ಉನ್ನತ ಹಂತದ ಪ್ರಯೋಗಾಲಯದಲ್ಲಿ ಮಾಡಬೇಕಿದ್ದ ಈ ಪ್ರಯೋಗವನ್ನು ಬಡ ಮಾಲಿಯ ಮಗನೋರ್ವ ಹಳೆ ವಸ್ತುಗಳನ್ನು ಬಳಸಿಕೊಂಡು ಮಾಡಿ ನೋಡಿದ್ದ. ಇವನ ಹೆಸರು ಮಿಚಿಯೋ ಕಾಕು. ಇವನು ಅಂದು ಹುಡುಕಿದ್ದ ಡಾರ್ಕ್ ಮ್ಯಾಟರ್ ಇಲ್ಲವೇ ಡಾರ್ಕ್ ಎನರ್ಜಿ ಇಂದಿಗೆ ಪೂರ್ಣವಾಗಿ ಅರ್ಥವಾಗುವಲ್ಲಿ ಇವನ ಕೊಡುಗೆ ಸಾಕಷ್ಟು ಇದೆ. ಈಗ ಇವರಿಗೆ 71ರ ಹರೆಯ. ಅದೇ ಎಳೆ ಹುಡುಗನ ಕೌತುಕ ಮತ್ತು ಉತ್ಸಾಹ ಈಗಲೂ ಇವರಲ್ಲಿ ತುಂಬಿತುಳುಕುತ್ತದೆ.

E=mc2 ಡಾರ್ಕ್ ಮ್ಯಾಟರ್ ಮತ್ತು ಡಾರ್ಕ್ ಎನರ್ಜಿಯ ಕುರಿತು ಅರ್ಥ ಮಾಡಿಕೊಳ್ಳಲು ಒಂದಿಷ್ಟು ವಿವರಗಳು ಬೇಕಾಗುತ್ತವೆ. ಭೌತಶಾಸ್ತ್ರದ ಪಠ್ಯಗಳಲ್ಲಿ ಗುರುತ್ವಾಕರ್ಷಣಾ (ಗ್ರಾವಿಟೇಶನ್) ಶಕ್ತಿಯ ಕುರಿತು ತಿಳಿಯುತ್ತೇವೆ. ಅದೇ ರೀತಿಯಲ್ಲಿ ಎಲೆಕ್ಟ್ರೋ-ಮ್ಯಾಗನೆಟಿಕ್ ಶಕ್ತಿ, ಅಣು (ನ್ಯೂಕ್ಲಿಯರ್) ಶಕ್ತಿ (ಪ್ರಬಲ ಮತ್ತು ದುರ್ಬಲ)ಯ ಬಗ್ಗೆ ಅರಿಯುತ್ತೇವೆ. ಇವು ನಮ್ಮ ವಿಶ್ವವನ್ನು ನಿಯಂತ್ರಿಸುತ್ತಿರುವ ನಾಲ್ಕು ಮೂಲಭೂತ ಶಕ್ತಿಗಳಾಗಿವೆ. ನ್ಯೂಟನ್ ನಮಗೆ ಗುರುತ್ವಾಕರ್ಷಣ ಶಕ್ತಿ ಕುರಿತು ತಿಳಿಸಿದರೆ, ಮೈಕೆಲ್ ಫಾರೆಡೆ ಎಲೆಕ್ಟ್ರೋ ಮ್ಯಾಗ್ನಿಟಿಕ್ ಶಕ್ತಿಯ ಕುರಿತು ತಿಳಿಸಿಕೊಟ್ಟ. ಐನ್‌ಸ್ಟೀನ್ ಮೊದಲಾದ ವಿಜ್ಞಾನಿಗಳು ನ್ಯೂಕ್ಲಿಯರ್(ಅಣು) ಶಕ್ತಿಯ ಕುರಿತು ತಿಳಿಸಿಕೊಟ್ಟರು. ಬಹಳ ವರ್ಷಗಳವರೆಗೆ, ಜಗತ್ತನ್ನು ಆಳುತ್ತಿರುವುದು ಈ ನಾಲ್ಕು ಶಕ್ತಿಗಳು ಮಾತ್ರ ಎನ್ನುವ ಆಲೋಚನೆ ವಿಜ್ಞಾನಿಗಳಲ್ಲಿ ಇತ್ತು. ಐನ್‌ಸ್ಟೀನ್‌ನ ಸೂತ್ರದ ರಚನೆಯಾದ ಮೇಲೆ, ಜಗತ್ತಿನ ಉಗಮದ ಕುರಿತು ಮತ್ತಷ್ಟು ಪ್ರಶ್ನೆಗಳು ಮೂಡಿದವು. ಮಹಾಸ್ಫೋಟದಿಂದ (ಬಿಗ್ ಬ್ಯಾಂಗ್) ಜಗತ್ತು ಆರಂಭಗೊಂಡಿತ್ತು ಎನ್ನುವುದು ಬಹುತೇಕ ಒಪ್ಪಿತವಾದ ವಿಚಾರವಾಗಿತ್ತು. ಸ್ಫೋಟದ ನಂತರ ವಿಶ್ವ ಇಂದಿಗೂ ವಿಸ್ತಾರಗೊಳ್ಳುತ್ತಿದೆ ಎನ್ನುವುದನ್ನು ಪ್ರಯೋಗಗಳು ದೃಢೀಕರಿಸಿದವು. ಆದರೂ ಈ ವಿಶ್ವ ವಿವಿಧ ಆಕಾಶಕಾಯಗಳು ಗುರುತ್ವಾಕರ್ಷಣದ ಶಕ್ತಿಯಿಂದ ಒಂದೆಡೆ ನಿಲ್ಲುತ್ತಿಲ್ಲವೇಕೇ? ಹೀಗೆ ಹಿಗ್ಗುತ್ತಾ ಹೋಗಲು ಕಾರಣವೇನು? ಒಂದು ವೇಳೆ ಈ ಹಿಗ್ಗುವಿಕೆ ಹೀಗೆಯೇ ಮುಂದುವರಿದರೆ, ವಿಶ್ವದ ಭವಿಷ್ಯವೇನು? ಹೀಗೆ ಅನೇಕ ಪ್ರಶ್ನೆಗಳು ಮೂಡಿದವು.

ಈ ಪ್ರಶ್ನೆಗಳ ಬೆನ್ನು ಹತ್ತಿಹೋದ ವಿಜ್ಞಾನಿಗಳಿಗೆ ತಿಳಿದಿರುವ ನಾಲ್ಕು ಶಕ್ತಿಗಳಿಗಿಂತ ಬಲವಾದ ಇನ್ನೊಂದು ಶಕ್ತಿಯಿರುವುದರ ಅರಿವು ಆಯಿತು. ಇದು ಈ ಶಕ್ತಿಗಳಿಗೆ ವಿರುದ್ಧವಾದ (ಆಂಟಿ) ಶಕ್ತಿಯಾಗಿದೆ. ಇದನ್ನು ಡಾರ್ಕ್ ಎನರ್ಜಿ ಎನ್ನುತ್ತಾರೆ. ಸೈದ್ಧಾಂತಿಕವಾಗಿ ಈ ಡಾರ್ಕ್ ಎನರ್ಜಿಯ ಇರುವಿಕೆ ಪತ್ತೆಯಾಯಿತಾದರೂ, ಪ್ರಾಯೋಗಿಕವಾಗಿ ಅದರ ಇರುವಿಕೆಯನ್ನು ಸಾಬೀತುಪಡಿಸಲು ಕಷ್ಟವಾಗುತಿತ್ತು. ಇದನ್ನು ಸಾಧಿಸಲೆಂದೆ ಈ ಹೈಸ್ಕೂಲ್ ಓದುತ್ತಿದ್ದ ಪೋರ, ಮನೆಯ ಗ್ಯಾರೇಜ್‌ನಲ್ಲಿ ಅಣು ಛೇದನ ಪ್ರಯೋಗವನ್ನು ಮಾಡಿದ್ದು.

ಬಡ ಅಪ್ಪ-ಅಮ್ಮ ಪೋಷಿಸಿದ ಮಗನ ಕನಸು ಅವನನ್ನು ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಕರೆದುಕೊಂಡು ಹೋಯಿತು. ಡಾರ್ಕ್ ಎನರ್ಜಿಯ ಇರುವಿಕೆಯನ್ನು ತನ್ನ ಅಣು ಛೇದ ಯಂತ್ರದ ಮೂಲಕ ಪತ್ತೆಹಚ್ಚಿದನ್ನು ಕಾಕು ರಾಷ್ಟ್ರೀಯ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಹಂಚಿಕೊಂಡರು. ಇದನ್ನು ಗಮನಿಸಿದ ಖ್ಯಾತ ವಿಜ್ಞಾನಿಯೋರ್ವರು ಇವನಿಗೆ ಕಾಲೇಜು ಅಧ್ಯಯನ ಕೈಗೊಳ್ಳಲು ವಿದ್ಯಾರ್ಥಿ ವೇತನ ಸಿಗುವಂತೆ ಮಾಡಿದರು. ಮುಂದೆ ಇದೇ ವಿಜ್ಞಾನಿ ಹೈಡ್ರೋಜನ್ ಬಾಂಬ್ ತಯಾರಿಕೆಗೆ ಕೈಜೋಡಿಸುವಂತೆ ಕೇಳಿದಾಗ, ಖಡಾಖಂಡಿತವಾಗಿ ಇಲ್ಲವೆಂದು ಹೇಳಿಬಿಟ್ಟನು. ಏಕೆಂದರೆ ಐನ್‌ಸ್ಟೀನ್ ಬಿಟ್ಟು ಹೋದ ಸಿದ್ಧಾಂತವನ್ನು ಪೂರ್ಣಗೊಳಿಸಬೇಕೆಂಬ ಮಹಾದಾಸೆ ತನ್ನದು, ಬಾಂಬ್ ತಯಾರಿಕೆಗೆ ಬೇಕಿರೋದು ಒಬ್ಬ ಸಮರ್ಥ ಇಂಜಿನಿಯರ್ ಮಾತ್ರ, ವಿಜ್ಞಾನಿಯಲ್ಲ ಎಂದು ತನ್ನ ಗುರುವಿಗೆ ಸ್ಪಷ್ಟವಾಗಿ ಹೇಳಿದ ಕಾಕು ಥಿಯರಿಟಿಕಲ್ ಫಿಜಿಕ್ಸ್‌ನಲ್ಲಿ ಹೆಚ್ಚಿನ ಶ್ರಮಕ್ಕೆ ಮುಂದಾದರು.

ಕಾಕು ಜಗತ್ತಿನ ಎಲ್ಲವನ್ನು ವಿವರಿಸುವ ಸಿದ್ಧಾಂತದ ಅನ್ವೇಷಣೆಯಲ್ಲಿ ತೊಡಗಿಕೊಂಡವರು. ಯುನಿಫೈಡ್ ಥಿಯರಿ ಎಂದು ಕರೆಯಲ್ಪಡುವ ಈ ಸಿದ್ಧಾಂತವನ್ನೇ ಐನ್‌ಸ್ಟೀನ್ ಅರ್ಧಕ್ಕೆ ಬಿಟ್ಟು ಹೋಗಿದ್ದು. ಜಗತ್ತಿನ ಎಲ್ಲಾ ಆಗುಹೋಗುಗಳನ್ನು ವಿವಿಧ ಸ್ಥರದಲ್ಲಿ ವಿವರಿಸುವ ಸಿದ್ಧಾಂತಗಳು ಈಗ ಲಭ್ಯವಿವೆ. ಆದರೆ ಜಗತ್ತಿನ ಎಲ್ಲಾ ಭೌತಿಕ ವಿದ್ಯಮಾನಗಳನ್ನು ಒಂದೇ ಸಿದ್ಧಾಂತದಲ್ಲಿ ವಿವರಿಸಲು ಸಾಧ್ಯವಾದರೆ? ಹೀಗೆ ಹೇಳಲು ಸಾಧ್ಯವಾದರೆ, ಜಗತ್ತಿನ ವಿಕಾಸವನ್ನು ಅರ್ಥ ಮಾಡಿಕೊಳ್ಳುವಲ್ಲಿ ಪ್ರಮುಖ ಹೆಜ್ಜೆ ಇರಿಸಿದಂತಾಗುತ್ತದೆ. ಬಿಗ್‌ಬ್ಯಾಂಗ್‌ನಿಂದ ಜಗತ್ತಿನ ಆರಂಭವಾಯಿತು ಎನ್ನುವುದು ಬಹುತೇಕ ವಿಜ್ಞಾನಿಗಳ ಅಭಿಮತ. ಈ ಬಿಗ್‌ಬ್ಯಾಂಗ್ ಆಗುವ ಮೊದಲು ಜಗತ್ತು ಹೇಗಿತ್ತು? ಇತ್ತೋ ಇಲ್ಲವೋ? ಇದ್ದಲ್ಲಿ, ಹೇಗಿತ್ತು? ಇಲ್ಲದಿದ್ದಲ್ಲಿ ಏಕೆ ಇರಲಿಲ್ಲ? ಹೀಗೆ ಅನೇಕ ಪ್ರಶ್ನೆಗಳು ಎದುರಾಗುತ್ತವೆ.

ಕಾಕು ಈ ನಿಟ್ಟಿನಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದ್ದಾರೆ. ಯುನಿಫೈಡ್ ಥಿಯರಿಯಾಗಿ ಅವರು ‘ಸ್ಟ್ರಿಂಗ್ ಥಿಯರಿ’ ಅನ್ನು ನೀಡಿದ್ದಾರೆ. ಇದರ ಪ್ರಕಾರ ನಮ್ಮ ಭೌತಿಕ ಜಗತ್ತಿನ ಎಲ್ಲಾ ಎನರ್ಜಿಗಳು ಅಣುವಿನೊಳಗಿರುವ ಉಪ-ಅಣುಗಳ (ಸಬ್ ಆಟಿಮಿಕ್) ಚಲನೆಯಿಂದಾಗುವ ಪರಿಣಾಮದ ಫಲವಾಗಿವೆ. ಸಂಗೀತ ಕಛೇರಿಯಲ್ಲಿ ಹೇಗೆ ವಿವಿಧ ಶಬ್ದಗಳು ಹಿತವಾಗಿ ಬೆರೆತು ಸೊಗಸಾದ ಸಂಗೀತವಾಗಿ ಕೇಳುತ್ತದೆಯೋ, ಅದೇ ರೀತಿಯಲ್ಲಿ ನಾವು-ನೀವು ಇರುವ ಜಗತ್ತು ಇಂತಹ ಸಂಗೀತ ಗೋಷ್ಠಿಯಾಗಿರುತ್ತದೆ. ಒಂದೊಂದು ತಾಳ, ಒಂದೊಂದು ಶೃತಿಯಲ್ಲಿ ಜಗತ್ತಿನ ಎಲ್ಲಾ ಶಕ್ತಿಗಳು ಮತ್ತು ವಸ್ತುಗಳು ಮಿಡಿಯುತ್ತವೆ. ಗುರುತ್ವಾಕರ್ಷಣಾ ಶಕ್ತಿ, ಅಣುಶಕ್ತಿ ಹೀಗೆ ಎಲ್ಲವೂ ಅಣುಗಳ ಒಳಗಿರುವ ವಿವಿಧ ಕಣಗಳ ನಡುವಿನ ಸೌಹಾರ್ದಯುತ (ಕೆಲವು ಬಾರಿ ಅಸೌಹಾರ್ದಯುತ) ನಡವಳಿಕೆಯ ಫಲವಾಗಿರುತ್ತದೆ. ಆದರೆ ಇದೇ ಎಲ್ಲವನ್ನೂ ವಿವರಿಸುವ ಯೂನಿಫೈಡ್ ಥಿಯರಿ ಎನ್ನುವುದರ ಕುರಿತು ಪೂರ್ಣ ಒಮ್ಮತ ಮೂಡಿಲ್ಲವಾದರೂ, ಸದ್ಯಕ್ಕೆ ಭೌತಶಾಸ್ತ್ರಜ್ಞರ ಪಾಲಿಗೆ ಮುಖ್ಯವಾದ ಥಿಯರಿಗಳಲ್ಲಿ ಇದು ಅಗ್ರಸ್ಥಾನದಲ್ಲಿದೆ.

ಕಾಕು ಅವರು ವಿಜ್ಞಾನವನ್ನು ಎಲ್ಲರಿಗೂ ಅದರಲ್ಲೂ ಮಕ್ಕಳಿಗೆ ಪರಿಚಯಿಸುವ ಕಾರ್ಯದಲ್ಲಿ ಬಹಳ ಹಿಂದಿನಿಂದಲೂ ತೊಡಗಿಸಿಕೊಂಡಿದ್ದಾರೆ. ಅವರ ಪ್ರಕಾರ ಪ್ರತಿಯೊಬ್ಬ ಯಶಸ್ವಿ ವಿಜ್ಞಾನಿಯೊಳಗೆ ಓರ್ವ ಕುತೂಹಲವಿರುವ ಹತ್ತು ವರ್ಷದ ಹುಡುಗನಿರುತ್ತಾನೆ. ಎಲ್ಲಿಯವರೆಗೆ ಈ ಹುಡುಗ ಜೀವಂತವಿರುತ್ತಾನೋ, ಅಲ್ಲಿಯವರೆಗೆ ವಿಜ್ಞಾನಿ ಮುನ್ನಡೆಯುತ್ತಾನೆ, ತನ್ಮೂಲಕ ವಿಜ್ಞಾನ ಮುನ್ನಡೆಯುತ್ತದೆ. ಇಂತಹ ಎಳೆವಯಸ್ಸಿನ ಮಕ್ಕಳಲ್ಲಿ ಕುತೂಹಲ ಮೂಡಿಸುವುದು ಮುಖ್ಯ ಎನ್ನುವುದು ಅವರ ವಾದ. ಮಕ್ಕಳಲ್ಲಿರುವ ಸಹಜ ಕುತೂಹಲಗಳನ್ನು ಪೋಷಿಸುವ ಹೊಣೆಗಾರಿಕೆ ಶಿಕ್ಷಕರದ್ದು ಮತ್ತು ಪೋಷಕರದ್ದು. ಅವರೇ ನೀಡುವ ಉದಾಹರಣೆ ಹೀಗಿದೆ: ಒಮ್ಮೆ ಅವರ ಶಿಕ್ಷಕರು ಪಾಠ ಮಾಡುತ್ತಾ ಹೇಳಿದರಂತೆ: ಭೂಮಿ ಸರಿಯಾದ ಜಾಗದಲ್ಲಿದೆ. ಸ್ವಲ್ಪ ಮುಂದೆ ಇದ್ದರೆ, ಸೂರ್ಯನ ಶಾಖಕ್ಕೆ ಸಿಲುಕಿ ಬೆಂಗಾಡಾಗಿರುತ್ತಿತ್ತು; ಸ್ವಲ್ಪ ಹಿಂದೆ ಇದ್ದರೆ, ಪೂರ್ಣವಾಗಿ ಹಿಮ ಆವರಿಸಿದ ಹಿಮದ ಮರಳುಗಾಡಾಗಿರುತ್ತಿತ್ತು. ಕಾಕುಗೆ ಹೌದಲ್ಲ. ಇದು ಎಂತಹ ಅದ್ಭುತ! ಇದನ್ನು ಅರಿಯಬೇಕು ಅನ್ನಿಸಿದ್ದೆ ತಡ, ಸ್ಕೂಲಿನ ಲೈಬ್ರರಿಯನ್ನು ಹೊಕ್ಕು, ಸೌರವ್ಯೆಹದ ಕುರಿತು ಓದಲು ಆರಂಭಿಸಿದರು; ಈ ಓದೆ ಅಣುಛೇದನ ಯಂತ್ರದ ನಿರ್ಮಾಣಕ್ಕೆ, ಮುಂದೆ ಸ್ಟ್ರಿಂಗ್ ಥಿಯರಿ ಅನ್ವೇಷಣೆಗೆ ಕಾರಣವಾಯಿತು.

ಮರದಿಂದ ಬಿದ್ದ ಸೇಬು ನ್ಯೂಟನ್‌ಗೆ ಸ್ಫೂರ್ತಿಯಾದರೆ, ಬೆಳಕಿಗಿಂತ ವೇಗವಾದುದು ಯಾವುದು ಎನ್ನುವ ಪ್ರಶ್ನೆ ಉಞ್ಚ2ನ ಆವಿಷ್ಕಾರಕ್ಕೆ ದಾರಿಯಾಯಿತು. ಐನ್‌ಸ್ಟೀನ್ ಪೂರ್ಣ ಮಾಡದೆ ಬಿಟ್ಟುಹೋದ ಥಿಯರಿ ಯಾವುದು, ಅದು ಏಕೆ ಅರ್ಧದಲ್ಲೇ ನಿಂತು ಹೋಯಿತು? ನಾನೇ ಪೂರ್ಣಗೊಳಿಸುವುದಾದರೆ, ಹೇಗೆ ಅದನ್ನು ಪೂರ್ಣಗೊಳಿಸಬಹುದೆಂಬ ಕುತೂಹಲ ಅವರನ್ನು ಇಲ್ಲಿಯವರೆಗೂ ಕರೆತಂದಿತು. ಇಂದಿನ ಮಕ್ಕಳಲ್ಲಿ ಇಂತಹ ಕುತೂಹಲಗಳು ಮೂಡದೇ ಇದ್ದಲ್ಲಿ, ಭವಿಷ್ಯದ ಸಮಸ್ಯೆಗಳನ್ನು ಬಿಡಿಸಲು ಮಾನವ ಸಮಾಜ ಅಸಮರ್ಥವಾಗಿ ನಶಿಸಿ ಹೋಗುತ್ತದೆ ಎನ್ನುವುದು ಕಾಕು ಅವರ ಅಭಿಪ್ರಾಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)