varthabharthi


ಬುಡಬುಡಿಕೆ

ಗಾಂಧಿಯವರು ದೊಡ್ಡ ಮೋದಿವಾದಿಯಾಗಿದ್ದರು....!

ವಾರ್ತಾ ಭಾರತಿ : 1 Mar, 2020
*ಚೇಳಯ್ಯ chelayya@gmail.com

ಕೊನೆಗೂ ಪತ್ರಕರ್ತ ಎಂಜಲು ಕಾಸಿಯನ್ನು ಅಮೆರಿಕದ ಅಧ್ಯಕ್ಷ, ಭಾರತದ ವಿಶ್ವಗುರು ಡೊಲಾಂಡ್ ಟ್ರಂಪ್ ಅವರನ್ನು ಸಂದರ್ಶನ ಮಾಡಲು ಕಳುಹಿಸಲಾಯಿತು.

‘‘ಸಾರ್, ನನಗೆ ಇಂಗ್ಲಿಷ್ ಬರಲ್ಲ ...’’ ಕಾಸಿ ಪ್ರಧಾನ ಸಂಪಾದಕರಲ್ಲಿ ಅಲವತ್ತುಕೊಂಡ.

‘‘ಮೋದಿಗೆ ಇಂಗ್ಲಿಷ್ ಬರತ್ತ..? ಆದ್ರೂ ಎಷ್ಟು ಚೆನ್ನಾಗಿ ಡೊಲಾಂಡ್ ಅವರತ್ರ ಮಾತುಕತೆ ನಡೆಸಿದರು....’’ ಪ್ರ.ಸಂ. ಗದರಿದರು.

‘‘ಅದು ಹಾಗಲ್ಲ ಸಾರ್....ಭಕ್ತರ ಪ್ರಕಾರ ಅವರು ಟೆಲಿಪತಿ ಮೂಲಕ ಡೊಲಾಂಡ್ ಜೊತೆ ಸಂಭಾಷಣೆ ಮಾಡುತ್ತಾರೆ. ಹಿಮಾಲಯದಲ್ಲಿ ಟೆಲಿಪತಿ ಕಲಿತುಕೊಂಡು ಬಂದಿರುವುದರಿಂದ ಮೋದಿಯವರಿಗೆ ಯಾವ ಭಾಷೆಯ ಅಗತ್ಯವೂ ಇಲ್ಲವಂತೆ...ಆದರೆ ನನಗೆ ಟೆಲಿಪತಿ ಬರಲ್ಲ ಸಾರ್....’’ ಕಾಸಿ ಅಸಹಾಯಕತೆ ವ್ಯಕ್ತಪಡಿಸಿದ.

‘‘ಟೆಲಿಪತ್ನಿಯೇ ಅವರಿಗಿಲ್ಲ...ಇನ್ನು ಟೆಲಿಪತಿ ಅವರಿಗೆ ಎಲ್ಲಿರಬೇಕಯ್ಯ....ಟೆಲಿಪತಿ ಇರುವುದರಿಂದ ಟೆಲಿಪತ್ನಿಯನ್ನು ತ್ಯಜಿಸಿದರೋ ಯಾರಿಗೆ ಗೊತ್ತು....ನೀನೇನು ತಲೆ ಕೆಡಿಸಿಕೊಳ್ಳಬೇಡ...ನೀನು ಡೊಲಾಂಡ್ ಬಳಿ ಪ್ರಶ್ನೆ ಕೇಳುವ ಅಗತ್ಯವೇ ಇಲ್ಲ....’’ ಪ್ರ.ಸಂ. ಸಮಸ್ಯೆ ಪರಿಹರಿಸಿದರು.

‘‘ಸಾರ್...ಮತ್ತೆ ಸಂದರ್ಶನ....?’’

‘‘ ನಾನು ಕೆಲವು ಪ್ರಶ್ನೆಗಳನ್ನು ಬರೆದುಕೊಡುತ್ತೇನೆ. ಅದನ್ನು ಮೋದಿಯವರು ಓದಿದ ಹಾಗೆ ತಪ್ಪು ತಪ್ಪಾಗಿ ಓದು. ಆಗ ಡೊಲಾಂಡ್‌ಗೆಖುಷಿ ಖುಷಿಯಾಗಿ ಅವರೂ ಅವರೂ ಹಿಂದಿಯಲ್ಲಿ ತಪ್ಪು ತಪ್ಪಾಗಿ ಉತ್ತರಿಸುತ್ತಾರೆ....ನಾವು ಅದನ್ನು ತಪ್ಪು ತಪ್ಪಾಗಿ ಪ್ರಿಂಟ್ ಮಾಡಿ ಮೋದಿ, ಡೊಲಾಂಡ್ ಸ್ನೇಹವನ್ನು ವಿಶ್ವಕ್ಕೆ ತೋರಿಸೋಣ...’’

‘‘ಅಂದರೆ ತಪ್ಪು ತಪ್ಪು ಮಾತನಾಡುವುದು ಅನಿವಾರ್ಯವ ಸಾರ್...’’

‘‘ಮಾರಾಯ...ನೀನೇನಾದರೂ ಸ್ಪಷ್ಟವಾಗಿ ಇಂಗ್ಲಿಷ್ ಹಿಂದಿ ಮಾತನಾಡಿ ಅನಾಹುತ ಮಾಡಬೇಡ....’’

‘‘ಸರಿಯಾಗಿ ಮಾತನಾಡಿದರೆ ಏನಾಗತ್ತೆ ಸಾರ್?’’

‘‘ಆಗುವುದೇನು....ಭಾರತ-ಅಮೆರಿಕದ ನಡುವಿನ ಸ್ನೇಹ ಸಂಬಂಧವೇ ಕುಸಿದು ಬೀಳಬಹುದು. ಉಭಯ ದೇಶಗಳ ನಡುವಿನ ಒಪ್ಪಂದ ಮತ್ತು ಸಂಬಂಧಗಳ ನಡುವೆ ಈ ತಪ್ಪು ಉಚ್ಛಾರಣೆ, ತಪ್ಪು ನಿರ್ಧಾರಗಳು ಪ್ರಧಾನ ಪಾತ್ರವಹಿಸಿವೆ....ಹೋಗು ಹೋಗು...’’ ಎಂದು ಕಾಸಿಯನ್ನು ಒದ್ದೋಡಿಸಿದರು. ಕಾಸಿ ನೇರವಾಗಿ ಡೊಲಾಂಡ್ ಮುಂದೆ ಅಡ್ಡ ಬಿದ್ದ.

****

‘‘ನೀವು ಏಂಜೆಲ್ ಕಾಸಿ ಅಲ್ವೇ?’’ ೊಲಾಂಡ್ ಗುರುತು ಹಿಡಿದೇ ಬಿಟ್ಟರು.

‘‘ಹೌದು ಸಾರ್...’’ ಕಾಸಿ ರೋಮಾಂಚನಗೊಂಡ.

‘‘ನಿಮ್ಮಂತಹ ಏಂಜಲ್‌ಕಾಸಿಗಳನ್ನು ನಾನು ಕೂಡ ಅಮೆರಿಕದಲ್ಲಿ ಸಾಕಿದ್ದೇನೆ....ಗುಡ್ ಪ್ರಶ್ನೆ ಕೇಳು....’’

‘‘ಸಾರ್...ಭಾರತದಲ್ಲಿ ಏನೇನು ವಿಶೇಷ ನೋಡಿದಿರಿ...?’’ ಕಾಸಿ ಕೇಳಿದ.

‘‘ಭಾರತದಲ್ಲಿ ಮೋದಿಯವರನ್ನು ನೋಡಿದೆ. ಅವರು ಕಟ್ಟಿದ ಗೋಡೆಯನ್ನು ನೋಡಿದೆ....ನನಗೆ ಮೋದಿ ಮತ್ತು ಅವರ ಗೋಡೆ ತುಂಬಾ ಇಷ್ಟವಾಯಿತು....ಆ ಗೋಡೆಯಾಚೆಗೆ ಮೋದಿಯವರು ಸಾಧಿಸಿದ ಅಪಾರ ಸಾಧನೆಗಳಿವೆ ಎಂದು ಗೊತ್ತಾಯಿತು. ಅದನ್ನು ನೋಡಿ ನನಗೆ ಮೋದಿಯ ಮೇಲೆ ಹೆಮ್ಮೆಯಾಯಿತು....’’

‘‘ಸಾರ್... ತಾಜ್‌ಮಹಲ್ ನೋಡಿದ್ರಾ...’’

‘‘ಅದನ್ನೂ ನೋಡಿದೆ....ಅದನ್ನು ಕಟ್ಟಿರುವುದು ಕೂಡ ಮೋದಿಯೇ ಅಂತೆ....ಬರೇ ಐದು ವರ್ಷಗಳಲ್ಲಿ ದಿಲ್ಲಿಯ ಕುತುಬ್ ಮಿನಾರ್‌ನ್ನು ಕೂಡ ಅವರೇ ಕಟ್ಟಿದರಂತೆ....ಫೆಂಟಾಸ್ಟಿಕ್....ಇಷ್ಟು ಸಣ್ಣ ಅವಧಿಯಲ್ಲಿ ತಾಜ್‌ಮಹಲ್, ಕುತುಬ್ ಮಿನಾರ್‌ಗಳನ್ನು ಕಟ್ಟಬೇಕಾದರೆ ಮೋದಿ ತುಂಬಾ ಟಫ್ ಇರಬೇಕು....’’ ಟ್ರಂಪ್ ಉತ್ತರಿಸಿದರು.

ಕಾಸಿಗೋ ಇಕ್ಕಟ್ಟು. ಡೊಲಾಂಡ್ ಹೇಳಿದ ಮೇಲೆ ನಿರಾಕರಿಸುವಂತಿಲ್ಲ. ಅದನ್ನು ಮೋದಿಯೇ ಕಟ್ಟಿರಬೇಕು, ಸುಳ್ಳೇಕೆ ಹೇಳುತ್ತಾರೆ? ಕಾಸಿ ಸಮಾಧಾನಿಸಿಕೊಂಡ.

ಅಷ್ಟರಲ್ಲೇ ಪಟೇಲ್ ಪ್ರತಿಮೆ ನೆನಪಾಯಿತು....

‘‘ಸಾರ್...ಯುನಿಟಿ ಆಫ್ ಸ್ಟಾಚ್ಯೂ ನೋಡಿದ್ರಾ....ಪಟೇಲರ ಪ್ರತಿಮೆ...’’

‘‘ಅದು ಮೇಡ್ ಇನ್ ಚೈನಾ ಆದುದರಿಂದ ಅದನ್ನು ನೋಡಲಿಲ್ಲ. ಈಗ ಚೀನಾದ ಮೂಲಕ ವಿಶ್ವಾದ್ಯಂತ ಕೊರೋನ ವೈರಸ್ ಹರಡಿದೆ. ಯೂನಿಟಿ ಆಫ್ ಸ್ಟಾಚ್ಯೂಮೂಲಕ ಕೊರೋನ ವೈರಸ್ ಹರಡಿದರೆ ಭಾರತ-ಅಮೆರಿಕದ ನಡುವಿನ ಸಂಬಂಧ ಕೆಡಬಹುದು ಎನ್ನುವ ಮುಂಜಾಗರುಕತೆಯಿಂದ ಗ್ರೇಟ್ ಮೋದಿಯವರು ಯುನಿಟಿ ಆಫ್ ಸ್ಟಾಚ್ಯೂ ಮತ್ತು ನನ್ನ ನಡುವೆ ದೊಡ್ಡ ಗೋಡೆ ಕಟ್ಟಿದ್ದಾರೆ...ಆದುದರಿಂದ ಸ್ಟಾಚ್ಯೂ ನೋಡಲಾಗಲಿಲ್ಲ....’’ ಡೊಲಾಂಡ್ ಹೇಳಿದರು.

‘‘ಗಾಂಧಿ ಆಶ್ರಮಕ್ಕೆ ಭೇಟಿ ಕೊಟ್ಟ ಅನುಭವವನ್ನು ಹೇಳಿ...’’ ಕಾಸಿ ಆಸಕ್ತಿಯಿಂದ ಕೇಳಿದ

 ‘‘ಗಾಂಧಿಯವರು ಮೋದಿಯವರ ಹಾಗೆಯೇ ಗ್ರೇಟ್....ಮೋದಿಯವರ ಹಾಗೆಯೇ ಉಪವಾಸ, ಹಿಮಾಲಯ, ಚಹಾ ಮಾರಾಟ...ಮೊದಲಾದ ಸಾಧನೆ ಮಾಡಿದ್ದಾರೆ ಎಂದು ಕೇಳಿದೆ...ಗಾಂಧಿಯವರು ದೊಡ್ಡ ಮೋದಿವಾದಿಯಾಗಿದ್ದರು ಎನ್ನುವುದನ್ನು ನನಗೆ ಮೋದಿಯವರೇ ತಿಳಿಸಿದರು....ಇದೇ ಸಂದರ್ಭದಲ್ಲಿ ಗಾಂಧಿಯವರ ರಿಲೇಟಿವ್ ಆಗಿರುವ ಗೋಡ್ಸೆ ಆಶ್ರಮವನ್ನು ನೋಡುವ ಆಸೆಯಾಯಿತು....’’

‘‘ಗೋಡ್ಸೆ ಆಶ್ರಮವಾ....’’ ಕಾಸಿ ಬೆಚ್ಚಿ ಬಿದ್ದು ಕೇಳಿದ.

‘‘ಹೌದು...ಅಮೆರಿಕದಲ್ಲಿ ಮೋದಿಯವರು ಗೋಡ್ಸೆ ಆಶ್ರಮದ ಬಗ್ಗೆ ತುಂಬಾ ಮಾತನಾಡಿದ್ದರು. ಅವರ ತ್ಯಾಗ ಬಲಿದಾನ....ಎಲ್ಲವೂ ನನಗೆ ಇಷ್ಟವಾಯಿತು. ಮುಖ್ಯವಾಗಿ ಅವರು ಆ ಕಾಲದಲ್ಲಿ ಬಂದೂಕು ಬಳಸಿರುವುದು ಭಾರತ ದೇಶ ತಂತ್ರಜ್ಞಾನದಲ್ಲಿ ಎಷ್ಟು ಮುಂದಿತ್ತು ಎನ್ನುವುದನ್ನು ಹೇಳುತ್ತದೆ....ಗೋಡ್ಸೆ ಆಶ್ರಮಕ್ಕೆ ಬೇಕಾಗುವ ಎಲ್ಲ ಶಸ್ತ್ರಾಸ್ತ್ರಗಳನ್ನು ಅಮೆರಿಕ ಪೂರೈಸುತ್ತದೆ ಎಂದು ನಾನು ಭರವಸೆ ನೀಡಿದ್ದೇನೆ....ಹಾಗೆಯೇ ಗೋಡ್ಸೆ ಆಶ್ರಮದ ಅದ್ಭುತ ಕಾರ್ಯಕ್ರಮಗಳನ್ನು ನಾನು ಟಿವಿಯ ಮೂಲಕವೇ ನೋಡಿದೆ....’’

‘‘ಏನು ನೋಡಿದ್ರಿ....ಸಾರ್?’’ ಕಾಸಿ ಹೌಹಾರಿ ಪ್ರಶ್ನಿಸಿದ.

‘‘ಅದೇ ದಿಲ್ಲಿಯಲ್ಲಿ ನಡೆದ ಕಾರ್ಯಕ್ರಮಗಳು. ನನಗೆ ಬಹಳ ಇಷ್ಟವಾಯಿತು. ಭಾರತ ಈ ಮೂಲಕ ವಿಶ್ವ ವಿಖ್ಯಾತವಾಗಿದೆ. ನಾವು ಸಿರಿಯ, ಇರಾಕ್‌ನಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೆ ಮೋದಿಯವರು ತಮ್ಮದೇ ದೇಶದಲ್ಲಿ ಹಮ್ಮಿಕೊಂಡಿದ್ದಾರೆ...ಗ್ರೇಟ್ ಮೋದಿ...ಮೋದಿಯವರು ತುಂಬಾ ಟಫ್....ಮುಂದೆ ಇಂತಹ ಕಾರ್ಯಕ್ರಮಕ್ಕೆ ಬೇಕಾಗುವ ಸಕಲ ಬೆಂಬಲವನ್ನು ನೀಡುವ ಕುರಿತಂತೆಯೂ ಭರವಸೆ ಕೊಟ್ಟಿದ್ದೇನೆ...ಜೈ ಗಾಂಧಿ, ಜೈ ಗೋಡ್ಸೆ, ಜೈ ಮೋದಿ...’’ ಎನ್ನುತ್ತಾ ಡೊಲಾಂಡ್ ಟ್ರಂಪ್ ತಮ್ಮ ಸಂದರ್ಶನವನ್ನು ಮುಗಿಸಿದರು.

‘‘ಅಮೆರಿಕ ಮಾತೆಗೆ ಜಯವಾಗಲಿ’’ ಎನ್ನುತ್ತಾ ಕಾಸಿಯೂ ತನ್ನ ದೇಶಪ್ರೇಮವನ್ನು ಘೋಷಿಸಿ ಅಲ್ಲಿಂದ ಪತ್ರಿಕಾ ಕಚೇರಿಗೆ ತೆರಳಿದ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)