varthabharthi


ವೈವಿಧ್ಯ

ವಿಶ್ವದ ಅತ್ಯಂತ ಕೆಟ್ಟ ವಾಸನೆ ಯಾವುದು?

ವಾರ್ತಾ ಭಾರತಿ : 2 Mar, 2020
ರಾಂಡಾಲ್ ಮನ್ರೊ

1998ರಲ್ಲಿ ಮೊನೆಲ್ ಕೆಮಿಕಲ್ ಸೆನ್ಸಡ್ ಸೆಂಟರ್‌ನಲ್ಲಿ ಮನಃಶಾಸ್ತ್ರಜ್ಞೆಯಾಗಿದ್ದ ಪಮೇಲಾ ಡಾಲ್ಟನ್‌ಗೆ ಒಂದು ದುರ್ವಾಸನೆ ಬಾಂಬ್ ತಯಾರಿಸುವ ಕೆಲಸ ವಹಿಸಿಕೊಡಲಾಯಿತು.

ವಿಭಿನ್ನ ಹಿನ್ನೆಲೆಯ ಹಾಗೂ ವಿಶ್ವದ ಬೇರೆ ಬೇರೆ ಭಾಗಗಳ ಮತ್ತು ಬೇರೆ ಬೇರೆ ವಾಸನೆಗಳನ್ನು ಮೂಸುತ್ತ ಹಾಗೂ ಬೇರೆ ಬೇರೆ ರೀತಿಯ ಆಹಾರಗಳನ್ನು ತಿನ್ನುತ್ತ ಬೆಳೆದ ಜನರು, ಯಾವ ವಾಸನೆಗಳು ಸುವಾಸನೆ, ಯಾವ ವಾಸನೆಗಳು ದುರ್ವಾಸನೆ ಎನ್ನುವ ಕುರಿತು ಸಂಪೂರ್ಣವಾಗಿ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು ಎಂಬ ಕುತೂಹಲಕಾರಿ ವಿಷಯ ಡಾಲ್ಟನ್ ನಡೆಸಿದ ಪ್ರಯೋಗಗಳಿಂದ ತಿಳಿದು ಬಂತು.

ಜಾಗತಿಕವಾಗಿ ಜನರು ಅಸಹ್ಯಪಡುವಂತಹ ಒಂದು ದುರ್ವಾಸನೆಯಾಗಿ ಆಕೆ ಕಂಡುಹಿಡಿದದ್ದನ್ನು ‘ಯುಎಸ್ ಗವರ್ನ್ ಮೆಂಟ್ ಸ್ಟಾಂಡರ್ಡ್ ಬಾತ್‌ರೂಮ್ ಮಾಲಡೊರ್’ ಎಂದು ಕರೆಯಲಾಯಿತು. ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಉತ್ಪನ್ನಗಳ ತೀವ್ರತೆಯನ್ನು ಪರೀಕ್ಷಿಸಲು ಅಮೆರಿಕದ ಸೇನೆ ಮೊಕ್ಕಾಂ ಹೂಡಿದ ಸ್ಥಳಗಳಲ್ಲಿರುವ ಪಾಯಿಖಾನೆಗಳ ದುರ್ವಾಸನೆಯನ್ನು ಅಣಕಿಸುವಂತಹ (ಅದೇ ಮಾದರಿಯ ದುರ್ವಾಸನೆ ಇರುವ) ಒಂದು ರಾಸಾಯನಿಕ ದ್ರವ್ಯ (ಸಬ್‌ಸ್ಟನ್ಸ್) ಇದಾಗಿತ್ತು. ಆಕೆ ಈ ದ್ರವವನ್ನು ತಾನು ತಯಾರಿಸಬೇಕಾಗಿದ್ದ ದುರ್ವಾಸನೆ ಬಾಂಬ್‌ಗೆ ಮೂಲವಾಗಿ ಆಯ್ಕೆ ಮಾಡಿಕೊಂಡರು. ಅಂತಿಮವಾಗಿ ಆಕೆಯ ಪ್ರಯೋಗಗಳ ಫಲವಾಗಿ ದೊರಕಿದ್ದನ್ನು ‘‘ಸ್ಟೆಂಚ್ ಸೂಪ್’’ ಎಂದು ಕರೆದರು.

ಇದು ವಿಶ್ವದಲ್ಲಿ ಇಷ್ಟರವರೆಗೆ ಸೃಷ್ಟಿಸಲಾದ ದುರ್ವಾಸನೆಗಳಲ್ಲಿ ಅತ್ಯಂತ ಗರಿಷ್ಠ ದುರ್ವಾಸನೆಯ ‘‘ಸೂಪ್’’ (ದ್ರವ) ಇರಬಹುದು.

 ಓರ್ವ ವಿಜ್ಞಾನ ಲೇಖಕಿಯಾಗಿರುವ ಮೇರಿರೋಚ್ ಎಂಬಾಕೆ ಈ ಸ್ಟೆಂಚ್ ಸೂಪನ್ನು ಮೂಸಿ ನೋಡುವ ಧೈರ್ಯ ವಹಿಸಿದ ಕೆಲವೇ ಕೆಲವು ಮಂದಿ ಮನುಷ್ಯರಲ್ಲಿ ಒಬ್ಬಾಕೆ. 2016ರಲ್ಲಿ ಪ್ರಕಟವಾದ ಆಕೆಯ ‘‘ಗ್ರಂಟ್ ದಿ ಕ್ಯೂರಿಯಸ್ ಸಾಯನ್ಸ್ ಆಫ್ ಹ್ಯೂಮನ್ ಲಿಟ್‌ವಾರ್’’ ಎಂಬ ಪುಸ್ತಕದಲ್ಲಿ ಆಕೆ ಈ ಸ್ಟಂಚ್ ಸೂಪ್‌ನ ದುರ್ವಾಸನೆಯನ್ನು ‘‘ಕೊಳೆತು ನಾರುವ ನೀರುಳ್ಳಿಗಳ ಸಿಂಹಾಸನದಲ್ಲಿ ಕುಳಿತಿರುವ ಸೈತಾನ’’ ಎಂದು ವರ್ಣಿಸಿದ್ದಾರೆ.

ಹಾಗಾದರೆ, ಸ್ಟೆಂಚ್ ಸೂಪ್’ ವಿಶ್ವದಲ್ಲೇ ಅತ್ಯಂತ ಕೆಟ್ಟ ವಾಸನಾ ದ್ರವ್ಯವೇ ಎಂದು ಕೇಳಿದರೆ ವಿಜ್ಞಾನಿಗಳು, ಹೌದು ಎನ್ನುವುದು ಕಷ್ಟ ಎನ್ನುತ್ತಾರೆ. ಯಾಕೆಂದರೆ ಕೆಟ್ಟ ವಾಸನೆಗಳ ಸಂಶೋಧನೆ ಸುಲಭವಲ್ಲ. ಉದಾಹರಣೆಗೆ, ರಸಾಯನ ಶಾಸ್ತ್ರಜ್ಞರು ‘ಥಿಯೋಸಿಟೋಟ್’ ಎಂಬ ಒಂದು ರಾಸಾಯನಿಕ ದ್ರವ್ಯದ ಕತೆ ಹೇಳುತ್ತಾರೆ.

ಜರ್ಮನಿಯ ಫ್ರೀಬರ್ಗ್ ಒಂದು ಪ್ರಯೋಗಾಲಯದಲ್ಲಿ ಈ ದ್ರವ್ಯದ ಕುರಿತು ಸಂಶೋಧನೆ ನಡೆಯುತ್ತಿತ್ತು. ಇದರ ಒಂದು ಪ್ರಕ್ರಿಯೆ ಉಂಟುಮಾಡಿದ ಒಂದು ವಾಸನೆ ಎಷ್ಟು ಕೆಟ್ಟದಾಗಿತ್ತೆಂದರೆ ಅದು ಪ್ರಯೋಗಾಲಯದಿಂದ ಹೊರಗೆ ಬಂದು ನಗರದಾದ್ಯಂತ ವ್ಯಾಪಿಸಿ ಭಾರೀ ಸಂಖ್ಯೆಯ ಜನರು ಕಂಗಾಲಾಗಿ ತಮ್ಮ ನಿವಾಸಗಳನ್ನು ತೊರೆದು ದೂರ ಹೋಗಬೇಕಾಯಿತು. ಅಲ್ಲದೆ ಬೀದಿಗಳಲ್ಲಿದ್ದ ನೂರಾರು ಜನರು ಅಸ್ವಸ್ಥರಾದರು.

ಥಿಯೋಸಿಟೋನ್‌ನ ಈ ಘಟನೆಯಿಂದ ಒಂದು ಪ್ರಶ್ನೆ ಏಳುತ್ತದೆ; ಹಾಗಾದರೆ ಒಂದು ಕೆಟ್ಟ ವಾಸನೆ ಎಷ್ಟು ದೂರದ ವರೆಗೆ ಹರಡಬಹುದು? 1889ರಲ್ಲಿ ಆ ಪ್ರಯೋಗಾಲಯದಿಂದ ಹೊರಗೆ ಬಂದ ವಾಸನೆ ಅದು ಚದುರಿ ಹೋಗುವ ಮೊದಲು ಸುಮಾರು ಅರ್ಧ ಮೈಲು ದೂರಕ್ಕೆ ವ್ಯಾಪಿಸಿತು.

ಒಂದು ವಾಸನೆ ವಿಶ್ವದಾದ್ಯಂತ ಹರಡಿ ಇಡೀ ಭೂಮಿ ಮೂಗಿಗೆ ನಾರುವಂತೆ ಮಾಡಬಲ್ಲಷ್ಟು ಶಕ್ತಿಶಾಲಿಯಾಗಬಹುದೇ?

ವಿವಿಧ ವಾಸನೆಗಳ ಶಕ್ತಿಯನ್ನು ಅಳೆಯಲು ಅವುಗಳ ‘‘ವಾಸನೆ ಪತ್ತೆ ಹಚ್ಚುವ ಹೊಸ್ತಿಲು’’ ಎಂಬ ಒಂದು ಮಾನದಂಡವನ್ನು ಬಳಸಲಾಗುತ್ತದೆ. ಉದಾಹರಣೆಗೆ ಗ್ಯಾಸೊಲಿನ್‌ನ ಈ ಹೊಸ್ತಿಲು ಪ್ರತಿ ಘನ ಮೀಟರ್‌ಗೆ ಸುಮಾರು ಒಂದು ನೂರು ಮೈಕ್ರೋ ಗ್ರಯಾಮ್ ಇದೆ. ಎತ್ತರವಾದ ಒಂದು ಪ್ರದೇಶದಿಂದ ಒಂದು ಗ್ಯಾಲನ್‌ನಷ್ಟು ಗ್ಯಾಸೊಲಿನ್ ಆವಿಯಾಗಿ ಗಾಳಿಗೆ ಸೇರಿಕೊಂಡರೆ ಸುಮಾರು 600 ಅಡಿಗಳಷ್ಟು ದೂರಕ್ಕೆ ಎಲ್ಲ ಕಡೆಗಳಲ್ಲೂ ಅದರ ವಾಸನೆ ಬರುತ್ತದೆ.

ಗ್ಯಾಸೊಲಿನ್‌ಗಿಂತ ಹೆಚ್ಚು ವಾಸನೆ ಇರುವ ಇಥೈಲ್ ಮೆರ್ಕಪ್ಟನ್ ಎಂಬ ದ್ರವವನ್ನು ನೈಸರ್ಗಿಕ ಅನಿಲ (ಅಡುಗೆ ಗ್ಯಾಸ್) ಸೋರಿಕೆಯಾದಾಗ, ಅದು ನಮಗೆ ತಿಳಿಯುವುದಕ್ಕಾಗಿ ವಾಸನೆ ಬರಲು ಬಳಸಲಾಗುತ್ತದೆ. ಈ ದ್ರವ್ಯದ ಒಂದು ಕೊಳಕ್ಕೆ ಸಮನಾದ ಪ್ರಮಣ ವಾತಾವರಣದಲ್ಲಿ ಸೇರಿಕೊಂಡರೆ ಇಡೀ ಭೂಮಿ ಯಾದ್ಯಂತ ಗ್ಯಾಸ್ ಸೋರಿಕೆಯಾದಾಗ ಬರುವ ವಾಸನೆ ಬರುತ್ತದೆ.ಇಂತಹ ಒಂದು ದೊಡ್ಡ ಕೊಳದಷ್ಟು ಮಿಥೈಲ್ ಮೆರ್ಕಪ್ಟನ್ ಇಡೀ ಜಗತ್ತಿನ ತುಂಬ ಗ್ಯಾಸ್‌ನ ವಾಸನೆ ಬರುವಂತೆ ಮಾಡಬಲ್ಲದು.

ಆದರೆ ಎಲ್ಲ ವಾಸನೆಗಳು ಕೆಟ್ಟವಲ್ಲ. ವೆನಿಲಿನ್ ಎಂಬುದು ಅಂತಹ ಒಂದು ದ್ರವ. ಅದರ ವಾಸನೆ ಪತ್ತೆ ಹೊಸ್ತಿಲು ಒಂದು ಘನ ಮೀಟರ್‌ಗೆ ಪ್ರಾಯಶಃ 0.1 ಅಥವಾ 0.2 ಅಂದರೆ, ಒಂದು ಅಥವಾ ಎರಡು ತೈಲಟ್ಯಾಂಕರ್‌ನಷ್ಟು ವೆನಿಲಿನ್‌ನನ್ನು ವಾತಾವರಣಕ್ಕೆ ಸೇರಿಸಿದರೆ ಇಡೀ ಭೂಮಿ ವೆನಿಲಾ (ಐಸ್‌ಕ್ರೀವ್ನ) ಪರಿಮಳದಿಂದ ಕೂಡಿರುತ್ತದೆ.

ಒಟ್ಟಿನಲ್ಲಿ, ರಸಾಯನಶಾಸ್ತ್ರದ ಅನಂತ ವಿಶ್ವದಲ್ಲಿ, ಭವಿಷ್ಯ ಯಾವ್ಯಾವ ರೀತಿಯ ವಾಸನೆಗಳ, ವಾಸನಾದ್ರವ್ಯಗಳ ಆವಿಷ್ಕಾರವಾಗಲಿದೆಯೋ? ಯಾರಿಗೆ ಗೊತ್ತು?

ಕೃಪೆ:NYT, DeccanHerald

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)