varthabharthi


ವೈವಿಧ್ಯ

ನೀರು ಮರುಬಳಕೆಯಾಗಲಿ

ವಾರ್ತಾ ಭಾರತಿ : 4 Mar, 2020
ಬಿಎನ್‌ವಿ ಪಾರ್ಥಸಾರಥಿ ಕನ್ನಡಕ್ಕೆ: ಕಸ್ತೂರಿ

ದೇಶದಲ್ಲಿನ ಪ್ರಮುಖ ನಗರಗಳಲ್ಲಿ ಸರಕಾರಗಳು, ಕೈಗಾರಿಕೆಗಳು, ಪ್ರಮುಖ ವಾಣಿಜ್ಯ ವರ್ತಕ ಸಮುದಾಯಗಳು, ಪೌರಸಂಘಗಳು ಸಾಮೂಹಿಕವಾಗಿ ಕೃಷಿ ಮಾಡಿ ಬಳಸಿದ ನೀರನ್ನು ಶುದ್ಧ ಗೊಳಿಸುವ ಕೇಂದ್ರಗಳನ್ನು ಸ್ಥಾಪಿಸಿ, ಶುದ್ಧೀಕರಿಸಿದ ನೀರನ್ನು ಮತ್ತೆ ಬಳಸಿಕೊಂಡಿದ್ದಾದರೆ ನಗರಗಳಲ್ಲಿ ಭೂಗರ್ಭ ಜಲಗಳ ಮೇಲಿನ ಒತ್ತಡ ತಗ್ಗುವ ಸಾಧ್ಯತೆ ಇದೆ. ಈ ಪ್ರಕ್ರಿಯೆಯಿಂದ ಭೂಗರ್ಭ ಜಲಗಳ ಕಲುಷಿತತೆ ಸಹ ಇಳಿಮುಖವಾಗುವ ಅವಕಾಶ ಇದೆ.

ಗಂಗಾನದಿಯ ನೀರು ಕುಡಿಯಲಾಗದು ಎಂದೂ, ಏಳು ಸ್ಥಳಗಳಲ್ಲಿ ಮಾತ್ರ ಶುದ್ಧೀಕರಿಸಿದ ಬಳಿಕ ಕುಡಿಯಬಹುದು ಎಂದೂ ಕೇಂದ್ರ ಕಲುಷಿತ ನಿಯಂತ್ರಣ ಶಾಖೆಯ ಅಂದಾಜು. ಗಂಗಾ ಪ್ರವಾಹ ಪ್ರಾಂತಗಳಾದ ಭಾಗೀರಥಿ, ರುದ್ರ ಪ್ರಯಾಗ್, ದೇವ ಪ್ರಯಾಗ್, ರಾಯವಾಲಾ, ರಿಷಿಕೇಶ್, ಬಿಜ್ನೋರ್, ಪಶ್ಚಿಮ ಬಾಂಗ್ಲಾದಲ್ಲಿನ ಡೈಮಂಡ್ ಹಾರ್ಬರ್‌ಗಳಲ್ಲಿನ ನೀರನ್ನು ಶುದ್ಧಿಯ ನಂತರ ಕುಡಿಯಲು ಬಳಸಿಕೊಳ್ಳಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಗಂಗಾನದಿ ತೀರದಲ್ಲಿ ಸುಮಾರು 1, 100 ಕೈಗಾರಿಕಾ ಸಂಸ್ಥೆಗಳು ತಾಜ್ಯಗಳನ್ನು ನದಿಯೊಳಗೆ ಬಿಡುತ್ತಿವೆ. ಕೇಂದ್ರ ಪರಿಸರ, ಜಲ ಸಂಪನ್ಮೂಲ ಸಚಿವಾಲಯಗಳು ಜಂಟಿ ಯೋಜನೆಗಳೊಂದಿಗೆ ಕೈಗಾರಿಕಾ ತ್ಯಾಜ್ಯಗಳು ಗಂಗಾನದಿಯೊಳಗೆ ಸೇರದಂತೆ ಕ್ರಮಗಳ ತೆಗೆದುಕೊಳ್ಳುವುದರಲ್ಲಿ ಬಹುಮಟ್ಟಿಗೆ ಸಫಲವಾಗಿವೆ. ಆದರೆ ಗಂಗಾನದಿಯೊಳಗೆ ನುಗ್ಗುತ್ತಿರುವ ಕೊಳಕು ನೀರು, ಕೀಟ ನಾಶಕಗಳು ಬೆರೆತ ವ್ಯವಸಾಯದ ತ್ಯಾಜ್ಯಗಳನ್ನು ನಿಯಂತ್ರಿಸುವುದರಲ್ಲಿ ಸಮಸ್ಯೆಗಳು ಎದುರಾಗುತ್ತಿವೆ. ಇವುಗಳೊಂದಿಗೆ ಜನವರಿ 2019ರ ಕುಂಭ ಮೇಳದ ತ್ಯಾಜ್ಯಗಳನ್ನು ಶುಭ್ರಗೊಳಿಸದೆ ಗಂಗಾ ನದಿಯಲ್ಲಿ ಬೆರೆಸಿದ್ದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಯಿತು.

ಕೇಂದ್ರ ಸರಕಾರ ಜೂನ್ 2014ರಲ್ಲಿ ರೂ. 20,000 ಕೋಟಿ ಅಂದಾಜಿನೊಂದಿಗೆ ‘ನಮಾಮಿ ಗಂಗೆ’ ಎಂಬ ಹೆಸರಿನಿಂದ ಗಂಗಾನದಿ ಪರಿಶುಭ್ರತೆಗೋಸ್ಕರ ಭಾರೀ ಯೋಜನೆ ಕೈಗೊಂಡಿತು. ಜೂನ್ 18ರವರೆಗೂ ಸರಕಾರ ಕೇವಲ ರೂ. 6,211.27 ಕೋಟಿ ನಿಧಿ ಮಂಜೂರು ಮಾಡಿತ್ತಾದರೂ, ಅದರಲ್ಲೂ 4,322.37 ಕೋಟಿ ಮಾತ್ರವೇ ಖರ್ಚಾಯಿತು. ಹಾಗಾಗಿ 2020ಕ್ಕೆ ಮುಗಿಯಬೇಕಾಗಿದ್ದ ಈ ಯೋಜನೆಯನ್ನು 2024ರವರೆಗೂ ಮುಂದುವರಿಸಬೇಕಾಗಿದೆ.

ಕಳೆದ ಮೂರು ದಶಕಗಳ ಅವಧಿಯಲ್ಲಿ ಗಂಗಾನದಿ ತೀರ ಪ್ರಾಂತದಲ್ಲಿ ಭೂಗರ್ಭ ಜಲಗಳು ಬೇಸಿಗೆಯಲ್ಲಿ ಸುಮಾರು ಶೇ.50 ತಗ್ಗಿರುವುದಾಗಿ ಸಂಶೋಧನೆಗಳು ತಿಳಿಸಿವೆ. ಪರಿಸರ ಬದಲಾವಣೆಗಳಿಂದ ಒಂದು ಕಡೆ ಹಿಮಾಲಯಗಳಿಂದ ಉತ್ಪನ್ನವಾಗುವ ಗಂಗಾನದಿ ಜಲ ಕ್ಷೀಣಿಸುತ್ತಿದ್ದರೆ, ಮತ್ತೊಂದೆಡೆ ಮಳೆ ಕಡಿಮೆಯಾಗುವುದು, ನೀರು ಕಲುಷಿತತೆಯಿಂದ ಸಮಸ್ಯೆ ಸಂಕೀರ್ಣವಾಗಿ ಬದಲಾಗಿದೆ. ಇದರೊಟ್ಟಿಗೆ ಭೂಗರ್ಭ ಜಲಸಂಪನ್ಮೂಲ ಕ್ಷೀಣತೆಯೂ ಜೊತೆಯಾಗಿದ್ದು, ಪರಿಸ್ಥಿತಿ ಹೀಗೇ ಮುಂದುವರಿದರೆ ಮತ್ತೆರಡು ದಶಕಗಳ ಕಾಲಕ್ಕೆ ಪ್ರಸ್ತುತ 1,569 ಮೈಲುಗಳುದ್ದಕ್ಕೂ ಹರಿವ ಗಂಗಾನದಿ ಅಸ್ತಿತ್ವಕ್ಕೆ ಗಂಡಾಂತರ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಅಪಾಯವನ್ನು ಗುರುತಿಸಿ ಗಂಗಾನದಿ ಹರಿವ 11 ರಾಜ್ಯಗಳ ದೀರ್ಘಕಾಲೀನ ಹಿತಾಸಕ್ತಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಗಂಗಾ ಸಂರಕ್ಷಣೆಗೆ ಸಮಷ್ಟಿಯಾಗಿ ಯೋಜನೆಯನ್ನು ರೂಪಿಸಿಕೊಳ್ಳಬೇಕಾದ ಅಗತ್ಯ ಇದೆ.

ಭವಿಷ್ಯದಲ್ಲಿ ನಮ್ಮ ದೇಶದಲ್ಲಿ ಸುಮಾರು 60 ಕೋಟಿ ಮಂದಿ ತೀವ್ರವಾದ ನೀರಿನ ಕೊರತೆಗೆ ಗುರಿಯಾಗುತ್ತಾರೆಂದು 2018ರಲ್ಲಿ ನೀತಿ ಆಯೋಗ ವರದಿ ಎಚ್ಚರಿಸಿತು. ದೇಶದಲ್ಲಿನ 21 ನಗರಗಳಲ್ಲಿ 2020 ಕಾಲಕ್ಕೆ ಭೂಗರ್ಭಜಲ ಪೂರ್ತಿಯಾಗಿ ಪಾತಾಳಕ್ಕೆ ಅಂಟುವ ಅಪಾಯ ಇದೆ ಎಂದು ಹೇಳಿತ್ತು. ನಮ್ಮ ದೇಶದ ಸರಾಸರಿ ವ್ಯಕ್ತಿಯೊಬ್ಬರಿಗೆ ವಾರ್ಷಿಕ ನೀರಿನ ಲಭ್ಯತೆ 1951ರಲ್ಲಿ 5,200 ಕ್ಯೂಬಿಕ್ ಮೀಟರ್‌ಗಳು ಇದ್ದರೆ 2050 ಕಾಲಕ್ಕೆ 1,100 ಕ್ಯೂಬಿಕ್ ಮೀಟರ್‌ಗಳ ಕನಿಷ್ಠ ಮಟ್ಟಕ್ಕೆ ತಲುಪುವ ಅಪಾಯ ಇದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಅಂತರ್‌ರಾಷ್ಟ್ರೀಯ ಪ್ರಮಾಣಗಳ ಪ್ರಕಾರ ಸರಾಸರಿಯಲ್ಲಿ ನೀರಿನ ಲಭ್ಯತೆ ಕನಿಷ್ಠ 1,100 ಕ್ಯೂಬಿಕ್ ಮೀಟರ್‌ಗಳು ಅಗತ್ಯ ಆಗುತ್ತದೆ. ಅಂದರೆ 2050ರ ಕಾಲಕ್ಕೆ ನಮ್ಮ ದೇಶ ತೀವ್ರ ಜಲಕ್ಷಾಮಕ್ಕೆ ಗುರಿಯಾಗಿರುವ ದೇಶಗಳ ಪಟ್ಟಿಯಲ್ಲಿ ಸೇರುವ ಅಪಾಯ ಇದೆ.

ಭಾರತದಲ್ಲಿ ಶೇ.15 ಆಹಾರೋತ್ಪತ್ತಿಗೆ, ಶೇ. 85 ಕುಡಿವ ನೀರಿನ ಅಗತ್ಯಕ್ಕೆ ಭೂಗರ್ಭ ಜಲವನ್ನು ವಿನಿಯೋಗಿಸಲಾಗುತ್ತಿದೆ. ನಗರಗಳಲ್ಲಿನ ಭೂಮಿಗಳನ್ನು ಪೂರ್ತಿಯಾಗಿ ಕಟ್ಟಡಮಯ ಮಾಡುವುದು, ಜಲ ಸಂಪನ್ಮೂಲಗಳನ್ನು ದುರುಪಯೋಗ ಪಡಿಸುವುದರಿಂದ ಭೂಗರ್ಭಜಲ ಪಾತಾಳ ಸೇರಿಕೊಂಡಿದೆ. ಸಾವಯವ ಸಹಜ ಕೃಷಿಯನ್ನು ಬಿಟ್ಟು ರಾಸಾಯನಿಕಗಳು, ಕೃತ್ರಿಮ ಗೊಬ್ಬರಗಳನ್ನು ಯದ್ವಾತದ್ವಾ ಬಳಸಿದ್ದರಿಂದ ಭೂಸಾರ ತಗ್ಗಿದೆ. ಸಾಗುವಳಿ ನೀರಿನ ಅಗತ್ಯ ಹೆಚ್ಚಿದ್ದರಿಂದ ಭೂಗರ್ಭ ಜಲದ ಮೇಲೆ ಒತ್ತಡ ಅಧಿಕವಾಗಿ ಅವು ಇಳಿಮುಖವಾಗಿವೆ. ಇದರೊಂದಿಗೆ ನದಿಗಳಲ್ಲಿ ನೀರಿನ ಕಲುಷಿತತೆಯಿಂದ ಸಮಸ್ಯೆ ವಿಪರೀತಕ್ಕೆ ಹೋಗಿದೆ. ನಗರಗಳಲ್ಲಿ ಕೈಗಾರಿಕಾ ತ್ಯಾಜ್ಯಗಳನ್ನು ಶುದ್ಧೀಕರಿಸದೇ ಬಿಡುವುದರಿಂದ ಭೂಗರ್ಭ ಜಲಗಳೂ ಕಲುಷಿತಗೊಂಡಿವೆ. ಚೆನ್ನೈ, ಬೆಂಗಳೂರು, ದಿಲ್ಲಿ ನಗರಗಳಲ್ಲಿ ಸಮಸ್ಯೆ ತೀವ್ರರೂಪ ತಾಳಿದೆ. ಭಾರತದಲ್ಲಿ ಉಪಯೋಗಿಸಿದ ನೀರನ್ನು ಶುದ್ಧೀಕರಿಸಿ ಮರಳಿ ಬಳಕೆ ಮಾಡುವುದು ತಂಬಾ ಕಡಿಮೆಯೇ. ಬಹುಮಟ್ಟಿಗೆ ಬಳಸಿದ ನೀರನ್ನು ನೇರವಾಗಿ ಕೆರೆಗಳು, ನದಿಗಳಿಗೆ ಬಿಟ್ಟು ಬಿಡುತ್ತಾರೆ. ರಾಜಧಾನಿ ದಿಲ್ಲಿ ನಗರದ ಮನೆಗಳಲ್ಲಿ ಬಳಸಿದ ನೀರಿನಲ್ಲಿ ಶೇ.90 ಯಮುನಾ ನದಿಯಲ್ಲಿ ಬೆರೆಯುವುದರಿಂದ ಅದು ವಿಶ್ವದಲ್ಲಿನ ಕಲುಷಿತವಾದ ನದಿಗಳ ಪಟ್ಟಿಯಲ್ಲಿ ಒಂದು ಎನಿಸಿಕೊಂಡಿದೆ.

ಗೃಹಗಳು, ಕೈಗಾರಿಕೆಗಳಲ್ಲಿ ಬಳಸಿದ ನೀರಿನ ಬಗ್ಗೆ ಸರಕಾರಗಳು ಲಕ್ಷ ನೀಡುತ್ತಿಲ್ಲ. ಮಹಾರಾಷ್ಟ್ರದಲ್ಲಿನ ನಾಗಪುರ ನಗರದಲ್ಲಿ 525 ಮಿಲಿಯನ್ ಲೀಟರ್‌ಗಳ ನೀರಿನ ಬಳಕೆ ಇರುವಾಗ ಅದರಲ್ಲಿ 480 ಮಿಲಿಯನ್ ಲೀಟರ್ ಬಳಸಿದ ನೀರನ್ನು ಶುದ್ಧೀಕರಿಸಿ ಥರ್ಮಲ್ ವಿದ್ಯುಚ್ಛಕ್ತಿ ಉದ್ದಿಮೆಗಳಿಗೆ ವಿಕ್ರಯಿಸುತ್ತಿದ್ದಾರೆ. ಮುಂಬೈ ಮಹಾನಗರದಲ್ಲಿ ರಾಸಾಯನಿಕಗಳು, ಕೈಗಾರಿಕಾ ತ್ಯಾಜ್ಯಗಳಿಂದ ಕೂಡಿದ ನೀರನ್ನು ತಂತ್ರಜ್ಞಾನ ಉಪಯೋಗಿಸಿ ವೈಜ್ಞಾನಿಕ ವಿಧಾನದಿಂದ ಅತಿ ಕಡಿಮೆ ಖರ್ಚಿನಿಂದ ಶುದ್ಧಗೊಳಿಸಿ ಪುನರ್ ಬಳಸುವ ದಿಕ್ಕಿನತ್ತ ಇತ್ತೀಚೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ದೇಶದಲ್ಲಿನ ಪ್ರಮುಖ ನಗರಗಳಲ್ಲಿ ಸರಕಾರಗಳು, ಕೈಗಾರಿಕೆಗಳು, ಪ್ರಮುಖ ವಾಣಿಜ್ಯ ವರ್ತಕ ಸಮುದಾಯಗಳು, ಪೌರಸಂಘಗಳು ಸಾಮೂಹಿಕವಾಗಿ ಕೃಷಿ ಮಾಡಿ ಬಳಸಿದ ನೀರನ್ನು ಶುದ್ಧ ಗೊಳಿಸುವ ಕೇಂದ್ರಗಳನ್ನು ಸ್ಥಾಪಿಸಿ, ಶುದ್ಧೀಕರಿಸಿದ ನೀರನ್ನು ಮತ್ತೆ ಬಳಸಿಕೊಂಡಿದ್ದಾದರೆ ನಗರಗಳಲ್ಲಿ ಭೂಗರ್ಭ ಜಲಗಳ ಮೇಲಿನ ಒತ್ತಡ ತಗ್ಗುವ ಸಾಧ್ಯತೆ ಇದೆ. ಈ ಪ್ರಕ್ರಿಯೆಯಿಂದ ಭೂಗರ್ಭ ಜಲಗಳ ಕಲುಷಿತತೆ ಸಹ ಇಳಿಮುಖವಾಗುವ ಅವಕಾಶ ಇದೆ.

ಈ ಕ್ರಮಗಳೊಂದಿಗೆ ಮಳೆ ನೀರನ್ನು ಕಾಪಾಡಿದರೆ ಭೂಗರ್ಭ ಜಲ ಸಂಗ್ರಹ ಹೆಚ್ಚುವ ಸಾಧ್ಯತೆಯೂ ಇದೆ. ನೀರಿನ ಮರುಬಳಕೆಯ ಬಗ್ಗೆ ಸರಕಾರಗಳು ದೀರ್ಘಕಾಲೀನ ಯೋಜನೆಗಳನ್ನು ತೆಗೆದುಕೊಂಡು ಬಂದರೆ, ದೇಶದಲ್ಲಿ ಜಲಸಿರಿ ಥಳ ಥಳಿಸುತ್ತದೆ. ನಮ್ಮ ಪ್ರಯತ್ನಗಳು ಈಗಲಾದರೂ ಈ ವಿಷಯದಲ್ಲಿ ಶಾಶ್ವತ ಪ್ರತಿಪಾದನೆಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಾರೆಂದು ಆಶಿಸೋಣ!

(ಕೃಪೆ: eenadu)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)