varthabharthi


ಅನುಗಾಲ

ಸುಖ-ದುಃಖಗಳ ಖಂಡಕಾವ್ಯ

ವಾರ್ತಾ ಭಾರತಿ : 4 Mar, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಆಧುನಿಕ ಕನ್ನಡ ಕಾವ್ಯದಲ್ಲಿ ಕಾಲ ಮತ್ತು ಪಂಥದ ದೃಷ್ಟಿಯಿಂದ ಬೇಂದ್ರೆ ಮತ್ತು ಅಡಿಗರಷ್ಟು ಪ್ರಭಾವವನ್ನು ಇತರ ಅಷ್ಟೇ ಶ್ರೇಷ್ಠ ಕವಿಗಳಾದ ಕುವೆಂಪು ಕೂಡ ಮಾಡಲಿಲ್ಲ. ಪುತಿನ, ಕೆಎಸ್‌ನ ಮುಂತಾದವರು ಶ್ರೇಷ್ಠತೆಯನ್ನು ಪಡೆದರೂ ತಮ್ಮ ಕಾಲದ ಕಾವ್ಯದ ಸರ್ವಜ್ಯೇಷ್ಠರಾಗಲಿಲ್ಲ. ಕಾವ್ಯಕ್ಕೊಂದು ಹಾದಿ ಇದ್ದರೆ ಹೀಗಿರಬೇಕು ಎಂಬ ಹಾಗೆ ಬೇಂದ್ರೆ ಮತ್ತು ಅಡಿಗರು ಸಂಪನ್ನರಾಗಿದ್ದರು. ಇವರ ಸೃಜನಶೀಲತೆಗೆ ಇಂಬುಗೊಟ್ಟ ಕಾಲ ಮತ್ತು ಪಂಥ ಬೇರೆ ಬೇರೆ ಆದ್ದರಿಂದಲೇ ನವೋದಯವು ಬೇಂದ್ರೆಗೆ ಎಷ್ಟು ಋಣಿಯೋ ನವ್ಯವೂ ಅಡಿಗರಿಗೆ ಅಷ್ಟೇ ಋಣಿ.


ಎಲ್ಲ ಕಾವ್ಯವೂ ಒಂದರ್ಥದಲ್ಲಿ ಸಮಾಜಶಾಸ್ತ್ರೀಯ ಅಧ್ಯಯನ. ನಾನು ಎಂಬಲ್ಲಿಂದ ಈ ಚರಾಚರ ಜಗತ್ತಿನವರೆಗೆ ವಿವಿಧ ದೇಶ-ಕಾಲ-ಹಂತಗಳನ್ನು ಮತ್ತು ಅಂತಹ ದೇಶ-ಕಾಲ-ಹಂತಗಳಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುವ ಸತತ ಕರ್ಮಕ್ರಿಯೆ ಇದು; ಕಳೆದುಕೊಳ್ಳುವ ಕ್ರಿಯೆಯೂ ಇದು. ಆದ್ದರಿಂದಲೇ ಕಾವ್ಯವನ್ನು ಆತ್ಮನಿವೇದನೆಯ ಹಂತದಿಂದ ಲೌಕಿಕದ ಮೂಲಕ ಹಾದು ಪಾರಮಾರ್ಥಿಕ ಅಥವಾ ಅಲೌಕಿಕದವರೆಗೆ ಕಾಲದ ಇಲ್ಲವೇ ಕಾಲ ಘಟ್ಟದ, ಸಮಾಜದ ಒಂದು ಹಂತ ಇಲ್ಲವೇ ಸ್ತರ/ಘಟ್ಟದ ಮೆಲುಕಾಗಿ ಕಾಣಬಹುದು. ಸ್ವಂತದ್ದನ್ನು ಸ್ವಂತವಾಗಿಯೇ ಇಟ್ಟುಕೊಂಡಾಗ ಅದು ವೈಯಕ್ತಿಕವಾಗಿಯೇ ಉಳಿಯುತ್ತದೆ; ಹೆಚ್ಚೆಂದರೆ ಗೋಳಾಗಿ ಕಾಣಿಸುತ್ತದೆ. ಆದರೆ ಅದು ವೈಯಕ್ತಿಕತೆಯನ್ನು ಮೀರಿದಾಗ ಸಾರ್ವಕಾಲಿಕವಾಗಿಯೋ ಸಾರ್ವತ್ರಿಕವಾಗಿಯೋ ಪರಿಣಮಿಸುತ್ತದೆ. ಹೀಗಾಗಬೇಕಾದರೆ ಬರೆಯುವ ಮನಸ್ಸಿನ ಗ್ರಹಿಕೆಯಲ್ಲಿ ಅಂತಹ ಕಾವು, ಸ್ಪಂದನ ಮತ್ತು ಸೃಜನಶೀಲತೆಯಿರಬೇಕು. ಅದನ್ನು ಸ್ವೀಕರಿಸುವ ಮನಸ್ಸೂ ಅದೇ ತರಂಗಾಂತರದಲ್ಲಿ ಕ್ರಿಯಾಶೀಲವಾದಾಗ ಅದು ಸ್ವೀಕೃತವಾಗುತ್ತದೆ. ಕೃತಿಯು ಪೂರ್ಣವಾಗುತ್ತದೆ; ಸಾರ್ಥಕವಾಗುತ್ತದೆ. ಹೀಗಲ್ಲವಾದರೆ ರಾಮಾಯಣ ಮಹಾಭಾರತಗಳಂತಹ ಒಂದು ಗೊತ್ತಾದ ಅಥವಾ ಕಾಲ್ಪನಿಕ ಕಾಲಘಟ್ಟದ ರಾಜವಂಶದ ಚರಿತ್ರೆಗಳು ಪುರಾಣವಾಗುತ್ತಿರಲಿಲ್ಲ; ಅದರಲ್ಲಿಲ್ಲ್ಲದ ಅಲೌಕಿಕತೆಯ ಹೂರಣವನ್ನು ಹೊರಗಳೆಯುವ ಸಮಾಜ ಸೃಷ್ಟಿಯಾಗುತ್ತಿರಲಿಲ್ಲ. ಆಧುನಿಕ ಕನ್ನಡ ಕಾವ್ಯದಲ್ಲಿ ಕಾಲ ಮತ್ತು ಪಂಥದ ದೃಷ್ಟಿಯಿಂದ ಬೇಂದ್ರೆ ಮತ್ತು ಅಡಿಗರಷ್ಟು ಪ್ರಭಾವವನ್ನು ಇತರ ಅಷ್ಟೇ ಶ್ರೇಷ್ಠ ಕವಿಗಳಾದ ಕುವೆಂಪು ಕೂಡ ಮಾಡಲಿಲ್ಲ. ಪುತಿನ, ಕೆಎಸ್‌ನ ಮುಂತಾದವರು ಶ್ರೇಷ್ಠತೆಯನ್ನು ಪಡೆದರೂ ತಮ್ಮ ಕಾಲದ ಕಾವ್ಯದ ಸರ್ವಜ್ಯೇಷ್ಠರಾಗಲಿಲ್ಲ. ಕಾವ್ಯಕ್ಕೊಂದು ಹಾದಿ ಇದ್ದರೆ ಹೀಗಿರಬೇಕು ಎಂಬ ಹಾಗೆ ಬೇಂದ್ರೆ ಮತ್ತು ಅಡಿಗರು ಸಂಪನ್ನರಾಗಿದ್ದರು. ಇವರ ಸೃಜನಶೀಲತೆಗೆ ಇಂಬುಗೊಟ್ಟ ಕಾಲ ಮತ್ತು ಪಂಥ ಬೇರೆ ಬೇರೆ ಆದ್ದರಿಂದಲೇ ನವೋದಯವು ಬೇಂದ್ರೆಗೆ ಎಷ್ಟು ಋಣಿಯೋ ನವ್ಯವೂ ಅಡಿಗರಿಗೆ ಅಷ್ಟೇ ಋಣಿ.

‘ಮೇಘದೂತ’ದಂತಹ ಖಂಡಕಾವ್ಯವನ್ನು ಕಾಳಿದಾಸನಿಂದ ಕನ್ನಡಕ್ಕೆ ತಂದ ಬೇಂದ್ರೆ ಅದನ್ನು ಅನುವಾದಿಸಿದ್ದಷ್ಟೇ ಅಲ್ಲ; ಕನ್ನಡೀಕರಿಸಿದರು. ಇದರಿಂದಾಗಿ ಕನ್ನಡ ಮೇಘದೂತವು ಒಂದು ಶ್ರೇಷ್ಠ ಖಂಡಕಾವ್ಯವಾಯಿತು. ಯಕ್ಷನ ವಿರಹದ ನೋವು ನಮ್ಮ ನಿಮ್ಮದೂ ಆಗಿದೆ. ಅದು ನಡೆಯುವುದು ಯಾವುದೋ ಜಗತ್ತಿನಲ್ಲಾದರೂ, ಅದು ನಮ್ಮ-ನಿಮ್ಮ ನೆರೆಮನೆಯಂತಾಗಿದೆ. ಏಕಕಾಲಕ್ಕೆ ವಾಸ್ತವತೆಯನ್ನು ಅನೂಹ್ಯತೆಯನ್ನೂ ಮೆರೆಯಬಲ್ಲ ಮತ್ತು ಮರೆಯಬಲ್ಲ ತಾಕತ್ತು ಅದಕ್ಕಿದೆ. ಜೋಗಿಯಂತಹ ಅಪೂರ್ಣ ಖಂಡಕಾವ್ಯದಲ್ಲಿ ಈ ಮಾಂತ್ರಿಕತೆಯಿರುವುದರಿಂದಲೇ ಅದು ಹೆಣ್ಣೊಬ್ಬಳ ಕರೆಯ ಕಥೆಯಾಗಿ ಉಳಿಯದೆ ಒಂದು ಜಗತ್ತನ್ನು ಅದರ ಎಲ್ಲ ಭಯಾನಕತೆ ವಿಹ್ವಲತೆಗಳೊಂದಿಗೆ ಕ್ರಿಯಾಶೀಲತೆಯೊಂದಿಗೆ ಸೃಷ್ಟಿ ಮಾಡುತ್ತದೆ. ಇಂತಹ ಮಾಂತ್ರಿಕದಂಡವನ್ನು ಬೇಂದ್ರೆ ತಮ್ಮ ‘ಸಖೀಗೀತ’ದಲ್ಲಿ ತೋರಿದರು. ‘ಸಖ್ಯದ ಅಖ್ಯಾನ’ವೆಂದೇ ಬೇಂದ್ರೆ ಹೇಳಿದರೂ ಅದು ಬೇಂದ್ರೆಯವರ ಒಳಮನುಷ್ಯನ ಜೀವನಕಥೆಯೂ ಅದರ ಒಂದು ಮೌಖಿಕ ಮಿಮರ್ಶೆಯೂ ಹೌದು. ಸಖಿ ನಿಜಾರ್ಥದಲ್ಲಿ ನಿಮಿತ್ತ. ಮಸುಕಾಗುವ ಜೀವನದ ರಮ್ಯತೆ ಆಳದಲ್ಲಿ ತನ್ನ ಹೊಳಪನ್ನು ಕಾಯ್ದುಕೊಳ್ಳುವ ನಿಗೂಢತೆಯನ್ನು ಪ್ರಕಟಿಸುವುದೇ ಇಂತಹ ಕಾವ್ಯಗಳ ಉದ್ದೇಶವಿರಬಹುದೆಂದೇ ಕಾಣಿಸುತ್ತದೆ. ಈ (ಸಖೀ) ‘‘ಗೀತವು ಅರ್ಧಕ್ಕೆ ನಿಂತಿದೆ’’ಯೆಂದು ಕವಿ ಹೇಳಿದರೂ ಗೀತ ನಿಲ್ಲುವುದೇ ಇಲ್ಲ. ಅದು ಮನಸ್ಸು-ಬುದ್ಧಿ-ಹೃದಯ-ಭಾವ-ವಿಚಾರಗಳ ನೆಲೆಯಲ್ಲಿ ಪ್ರವಹಿಸುತ್ತಲೇ ಇದೆ. ಆಗೀಗ ‘ಕೆಣಕುವ ಕಷ್ಟ’ (ಇವು ಬೇಂದ್ರೆಯವರ ಪದಗಳು) ಸಾಮಾನ್ಯರಲ್ಲಿ ವ್ಯಥೆಯಾದರೆ ಅಸಾಮಾನ್ಯರಲ್ಲಿ ಅಪೂರ್ವ ಕಾವ್ಯವಾಗುತ್ತದೆ. ಕವಿಯು ಅನುಭವಿಸಿದ ಪಾಡು ಓದುಗನಿಗೆ ತಲುಪುವಾಗ ಹಾಡಾಗುತ್ತದೆ. ಕಂಬಾರರು ಬರೆದಂತೆ ನಾದಗಳು ನುಡಿಯಾಗುತ್ತದೆ; ನುಡಿಯಾಗುತ್ತವೆ. ಕನ್ನಡ ನುಡಿ ಇಂತಹ ವ್ಯಷ್ಟಿ-ಸಮಷ್ಟಿಗಳ ಪ್ರಮಾಣದಲ್ಲಿ ಶ್ರೀಮಂತವಾಗುತ್ತದೆ.

ಇದೇ ಕಾಲದಲ್ಲಿ ಮಂಜೇಶ್ವರ ಗೋವಿಂದ ಪೈಗಳು ‘ಗೊಲ್ಗೊಥಾ’, ‘ವೈಶಾಖಿ’ ಎಂಬ ಎರಡು ಖಂಡ ಕಾವ್ಯಗಳನ್ನು ಬರೆದರು. ಕಡೆಂಗೋಡ್ಲು, ಪಂಜೆಯವರು ಖಂಡಕಾವ್ಯಗಳಂತೆಯೇ ಕಥನ ಕಾವ್ಯಗಳನ್ನೂ ಬರೆದರು. ನವ್ಯದ ಪ್ರವೇಶವಾದ ಆನಂತರ ಎಕ್ಕುಂಡಿಯವರಂತಹವರಿಂದ ಕಥನ ಕಾವ್ಯ ರಚನೆಯಾದರೂ ಖಂಡ ಕಾವ್ಯ ಅಪರೂಪವಾಗತೊಡಗಿತು. ಅಡಿಗರು ಖಂಡಕಾವ್ಯ ಬರೆಯಲಿಲ್ಲ. ಆದರೆ ತಮ್ಮ ಕಾವ್ಯದಲ್ಲಿ ಪೌರಾಣಿಕ ಪ್ರತಿಮೆಗಳಿಂದ ಮೊದಲ್ಗೊಂಡು ಆಧುನಿಕತೆಯ ಭೀಕರತೆಯವರೆಗೆ ವ್ಯಾಪಕವಾಗುವ ವಾಸ್ತವತೆಯ ಅರಿವನ್ನು ನೀಡಿದರು. ಅವರ ಕಾವ್ಯವೇ ಒಂದು ‘ಮಂತ್ರಗಂಬಳಿ’ಯಾಯಿತು. ಅವರ ಭಾಷೆಯ ಘನತೆ ಅನೇಕ ಇತರ ಕವಿಗಳ ಈಗಾಗಲೇ ಇದ್ದ (ಮತ್ತು ಕೆಲವೊಮ್ಮೆ ಮತ್ತು ಕೆಲವರಲ್ಲದರೂ ಸುಪ್ತವಾಗಿದ್ದ!) ಅರಿವನ್ನು ವಿಸ್ತರಿಸಿತು; ಕಾವ್ಯವನ್ನು ಬರೆಯುವ, ನೋಡುವ ಪದ್ಧತಿಯನ್ನು ಬದಲಾಯಿಸಿತು. ಅವರು ‘ಭೂಮಿಗೀತ’ವನ್ನು ಬರೆದರೂ ಅದು ತಾಂತ್ರಿಕವಾಗಿ ಗೀತವಲ್ಲ. ಬೇಂದ್ರೆಯವರ ಸಖೀಗೀತದಂತೆ ವೈಯಕ್ತಿಕ-ಸಾಮುದಾಯಿಕ ನೋವು ನಲಿವುಗಳ ಗೀತವಲ್ಲ. ಅದು ಬದುಕಿನ ಬೇರೆ ಬೇರೆ ಹಂತಗಳಲ್ಲಿ ಭಿನ್ನರೀತಿಯಲ್ಲಿ ಎಲ್ಲರಿಗೂ ತಾಯಿಯಂತಿರುವ ಭೂಮಿಯ ತೋಳತೊಟ್ಟಿಲಲ್ಲಿ ಜೋಕಾಲಿಯಾಡುವ ಮಗುವಿನ ಮನಸ್ಸಿನಿಂದ ಬದುಕಿನ ಅನುಭವವಿಸ್ತಾರವನ್ನು ತಾಯಿಯ ಸುಖಕ್ಕಾಗಿ ಮತ್ತು ಭವಿಷ್ಯದ ಒಳಿತಿಗಾಗಿ ಮೀಸಲಾಗಿಡುವ ಪಕ್ವಮನಸ್ಸಿನವರೆಗೆ ಭೂಮಿಯೊಂದಿಗಿನ ಮುಖಾಮುಖಿಯ ಹಾಡಲ್ಲ; ಗೀತವಲ್ಲ; ಸಂಕೀರ್ಣ ಶೋಧನಾ ಕಾವ್ಯ. ಭೂಮಿಗೀತದಲ್ಲಿ ಅಡಿಗರು ಸಖೀಗೀತದ ಬೇಂದ್ರೆಗಿಂತ ಹೆಚ್ಚು ಸಾಮಾಜಿಕರೆಂದೆನಿಸದಿದ್ದರೂ ಹೆಚ್ಚು ಸಮಾಜಮುಖಿಯೆನಿಸುತ್ತಾರೆ.

ಇಂತಹ ಆತ್ಮವಿಸ್ತಾರವನ್ನು ಕನ್ನಡದಲ್ಲಿ ಇತರರೂ ಮಾಡಿದ್ದಾರೆ. ಆದರೆ ಇಷ್ಟು ಗಾಢವಾಗಿ, ಪ್ರಭಾವಶಾಲಿಯಾಗಿ ಮಾಡಿಲ್ಲವೆಂದರ್ಥ. ಗೋವಿಂದ ಪೈಗಳ ‘ಗೊಲ್ಗೊಥಾ’ ಮತ್ತು ‘ವೈಶಾಖಿ’ಗಳಾಗಲೀ, ಪುತಿನ ಅವರ ನಾಟಕಗಳ ಕಾವ್ಯವಾಗಲೀ ಈ ರೀತಿಯ ಹಂದರವನ್ನೇ ಹೊಂದಿದಂತಲ್ಲವಾದ್ದರಿಂದ ಅವುಗಳನ್ನು ಈ ಸೂತ್ರದ ಆಧಾರದಲ್ಲಿ ನಿರಾಕರಿಸುವುದೂ ಸಲ್ಲ.

ಕುಟುಂಬವೂ ಒಂದು ಸಾಮಾಜಿಕ ವ್ಯವಸ್ಥೆ. ವ್ಯಕ್ತಿಗಿಂತ ಒಂದು ಮೆಟ್ಟಲು ಮೇಲಿನದ್ದು. ನವೋದಯದ ನಂತರ ನವ್ಯ ಕಾವ್ಯ ಕನ್ನಡದಲ್ಲಿ ಕಿಕ್ಕಿರಿದಾಗ ನಾನೆಂಬ ಸ್ವಕೀಯವು ಸರ್ವಸಮ್ಮತವಾಗುವ ಸಾಧ್ಯತೆಯಿತ್ತು. ಆದರೆ ಕುವೆಂಪು-ಬೇಂದ್ರೆ-ಅಡಿಗ-ಪುತಿನ-ಕೆಎಸ್‌ನರಂತಹ ಕೆಲವರಾದರೂ ಈ ಕೌಟುಂಬಿಕ ವ್ಯವಸ್ಥೆಯ ಅಂಗಗಳಾಗಿ ವ್ಯಕ್ತಿಯಿರಬೇಕೆಂದು ಬಯಸಿದರು. ಆದ್ದರಿಂದಲೇ ‘‘ನಾ ನಿನಗೆ ನೀನೆನಗೆ ಜೇನಾಗುವಾ’’ ಎನ್ನುವಾಗಲೂ ರಸದೇವಗಂಗೆಯೆಂಬ ಅಮೂರ್ತ ಬೃಹತ್ತನ್ನು ಸೃಷ್ಟಿಸಿಕೊಂಡು ಅಲ್ಲಿ ‘‘ಮೀನಾಗುವಾ’’ ಎಂದು ಕುವೆಂಪು ಬರೆದರು. ಅಡಿಗರು ಮೊದಮೊದಲು ಸಮಾಜವನ್ನು, ಅದರ ಚೌಕಟ್ಟುಗಳನ್ನು ವ್ಯಾಪಕವಾಗಿ ಹೆಣೆದರು ಮತ್ತು ಶಕ್ತಿಕೇಂದ್ರಗಳಿಗೆ ಮುಖಾಮುಖಿಯಾಗಿ ಸ್ವಂತಿಕೆಯನ್ನು ನಿಲ್ಲಿಸಿ ಪರೀಕ್ಷಿಸಿದರು. ಆದರೆ ನಂತರದ ಕಾವ್ಯದಲ್ಲಿ ಅವರಿಗೆ ಕೌಟುಂಬಿಕ ಇಲ್ಲವೇ ಖಾಸಗಿ ಇಲ್ಲವೇ ಏಕಾಂತದ ಸಂಬಂಧಗಳು ಆಪ್ತವೆನಿಸಿದಂತೆ ಕಂಡು ಬರುತ್ತದೆ.

ಕೂಪಮಂಡೂಕದ ಸಖನಿರಲಿ, ವರ್ಧಮಾನದ ತಲೆಮಾರುಗಳಿರಲಿ, ಚಿಂತಾಮಣಿಯಲ್ಲಿ ಕಂಡ ಮುಖದ ‘ನನ್ನರ್ಧ’ವಾಗಲಿ, ಮೌನದ ಸುವರ್ಣ ಪುತ್ಥಳಿ ಮುಂತಾಗಿ ವ್ಯಕ್ತವಾದ, ಅಭಿವ್ಯಕ್ತವಾದ ಈ ಆಪ್ತತೆ ಕೊನೆಗೆ ಅಪ್ಪ, ಬೆಕ್ಕು, ನಾಯಿಗಳಿಗೂ ಅನ್ವಯಿಸಿ ಪ್ರಕಟವಾಗಿದೆ. ಪ್ರತಿಭೆ ಮತ್ತು ಪಕ್ವತೆ ಉಜ್ವಲವಾಗಿರುವಾಗ ಕಂಡುಬರುವ ಅಭಿವ್ಯಕ್ತಿ ಅಸ್ತಮಾನದಲ್ಲಿರುವುದಿಲ್ಲ. ಈ ಕ್ಷೀಣತೆಯ ನಡುವೆಯೂ ಮೌಲ್ಯದ ಸ್ಥಿರೀಕರಣ ನಡೆಯುವುದನ್ನು ಅಡಿಗರ ಕಾವ್ಯದಲ್ಲಿ ಕಾಣಬಹುದು. ಬೇಂದ್ರೆ ಇಂತಹ ಸ್ಥಿತಿಯ ಹೊತ್ತಿಗೆ ಅಮೂರ್ತ ಆಧ್ಯಾತ್ಮದತ್ತ ವಾಲಿದರು. ಅವರ ಬರಹ ಉಜ್ವಲವಾಗಿದ್ದಾಗ ಅವರ ಸಖೀಗೀತ ಮುಂತಾದ ಕಾವ್ಯಗಳು ಪ್ರಕಟವಾಗಿದ್ದವು. ಕುಟುಂಬ ವ್ಯವಸ್ಥೆಗೆ ಹೊಂದಾಣಿಕೆಯೇ ಆಧಾರ. ಇದನ್ನು ಪ್ರೀತಿಯೆಂದು ಗುರುತಿಸಿದ ಕವಿಗಳು ಅನೇಕರಿದ್ದರು. ತೀನಂಶ್ರೀಯವರ ‘ಒಲುಮೆ’ ಎಂಬ ಕಾವ್ಯ ಸಂಕಲನದಲ್ಲಿ ಈ ಪ್ರೀತಿಯ ಕೊಡುಕೊಳ್ಳುವಿಕೆ ಸ್ಪಷ್ಟವಿದೆ. ‘‘ನೋಡಿರುವೆ ನಾನೆಷ್ಟೂ ಜನರನೀಧರಣಿಯಲಿ ಮುಸುಕಲಿಲ್ಲವು ನನ್ನವರ ಮಾಯೆ’’ ಎಂದು ಹೇಳಿದ ಕವಿ ನಂತರ ‘‘ನೀನು ಮಾತ್ರವದೆಂತು ನನ್ನ ಚೈತನ್ಯವನ್ನು ಸೆರೆಗೈದು ಪ್ರೇಮದಲಿ ಬಂಧಿಸಿರುವೆ!.’’ ಎಂದರು. ಅದೇ ಕವಿತೆಯಲ್ಲಿ ಮುಂದೆ ‘‘ನಿನ್ನನರಿತಿರಲಿಲ್ಲ, ಕಂಡು ಕೇಳಿರಲಿಲ್ಲ, ಬಂಧುಬಳಗವು ಮೊದಲೆ ನೀನಲ್ಲವು.॥

‘ಸಖ-ದೂತಿ’ ಎಂಬ ಕವನದಲ್ಲಿ ತೀನಂಶ್ರೀಯವರು ‘‘ನನ್ನ ಕವನದಲ್ಲಿ ನನಗೆ ಸಖನೇ, ನನ್ನ ಸುಯ್ಯಲೆ ದೂತಿಯೇ!’’ ಎನ್ನುತ್ತಾರೆ.
ಈ ಕೌಟುಂಬಿಕ ಆಪ್ತತೆಯ ಅಭಿವ್ಯಕ್ತಿಯೇ ಇಂತಹ ಕಾವ್ಯದ ಪರಮೋದ್ದೇಶವಲ್ಲ. ಈ ಆಪ್ತತೆಯನ್ನು ನೆನಪಾಗಿಟ್ಟುಕೊಂಡು, ಮಾಧ್ಯಮವನ್ನಾಗಿಟ್ಟುಕೊಂಡು, ರೂಪಕವಾಗಿಟ್ಟುಕೊಂಡು, ಬದುಕಿನ ಅರ್ಥವನ್ನು ಅನ್ವೇಷಿಸುವುದು, ಅದಕ್ಕೊಂದು ಅರ್ಥವನ್ನು ನೀಡುವುದು, ಬದುಕನ್ನು ದರ್ಶಿಸುವುದು ಎಲ್ಲ ಉತ್ತಮ ಕಾವ್ಯಗಳಂತೆ ಇಲ್ಲೂ ಚರಮೋದ್ದೇಶವಾಗಿರುತ್ತದೆ.

ಈ ದೃಷ್ಟಿಯಿಂದ ಬೇಂದ್ರೆಯವರ ಸಖೀಗೀತ ಬಹಳ ಮುಖ್ಯವಾದ ಖಂಡ ಕಾವ್ಯ. ಇದು ನೀಡುವ ದರ್ಶನ, ಮಾಡುವ ಪ್ರಭಾವ-ಇವುಗಳಲ್ಲಿ ಭಾಷೆ ಬಹು ಮುಖ್ಯ ಕೆಲಸವನ್ನು ಮಾಡುತ್ತದೆ. ‘‘ಪಟ್ಟ ಪಾಡೆಲ್ಲವು ಹುಟ್ಟು ಹಾಡಾಗುತ ಹೊಸದಾಗಿ ರಸವಾಗಿ ಹರಿಯುತ್ತಿವೆ’’ ಎಂಬಾಗ ಭಾಷೆ ಕಾವ್ಯದ ಮೂಲಕ ಮಾಡುವ ಬದಲಾವಣೆ ಬರಿಯ ಬಾಹ್ಯರೂಪದ್ದಲ್ಲ. ಬದಲಿಗೆ ಅಂತರಂಗದ್ದೆಂದು ಅರ್ಥವಾಗಬೇಕಾದರೆ ‘ಪಟ್ಟ ಪಾಡೆಲ್ಲವು’ ‘ಹುಟ್ಟು ಹಾಡಾಗುತ’, ‘ಹೊಸದಾಗಿ ರಸವಾಗಿ ಹರಿಯುತ್ತಿವೆ’ ಎಂದು ಮೂರು ಪದಪುಂಜಗಳಾಗಿ ವಿಂಗಡಿಸಬೇಕಾಗುತ್ತದೆ. ‘ಪಟ್ಟ ಪಾಡು’ ವೈಯಕ್ತಿಕ. ಅದು ಹುಟ್ಟು ಹಾಡಾಗುತ್ತದೆ. ಅಲ್ಲಿ ಪರಿವರ್ತನೆ, ರೂಪಾಂತರ ಮತ್ತು ಪುನರ್ಜನ್ಮ ಎಲ್ಲವೂ ಅಡಗಿದೆ. ಹಾಡಾಗುವುದಷ್ಟೇ ಅಲ್ಲ; ಅದು ‘ಹುಟ್ಟು’ ಹಾಡಾಗುತ್ತದೆ. ಮುಂದೆ ‘ಹೊಸದಾಗಿ ರಸವಾಗಿ ಹರಿಯುತ್ತಿವೆ.’ ಈ ‘ರಸ’ ಹೊಸದು. ಈ ರಸ ಬದುಕಿನದ್ದೂ ಹೌದು; ಕಾವ್ಯದ್ದೂ ಹೌದು. ರಸ ಮಡುಗಟ್ಟಿ ಘನೀಭವಿಸಿ ನಿಲ್ಲುವುದಿಲ್ಲ. ಅದು ಹರಿಯುತ್ತದೆ.

ಇಲ್ಲಿ ಚೈತನ್ಯ, ಸಂಚಲನ, ನಿರಂತರತೆ ಇವೆಲ್ಲವೂ ಅಡಗಿದೆ. ವ್ಯಷ್ಟಿಯಿಂದ ಸಮಷ್ಟಿಗೆ ರಸಪ್ರಜ್ಞೆ ಸಾಗುತ್ತದೆ. ಇದು ಕಾವ್ಯದ ಮೀಮಾಂಸೆಯೂ ಹೌದು. ಬದುಕಿನ ಮೀಮಾಂಸೆಯೂ ಹೌದು. ಬೇರೊಬ್ಬ ಕವಿಯಲ್ಲಿ ಪ್ರಾಯಃ ಬಹುಸುಲಭವಾಗಿ ದುಃಖಗೀತವಾಗಬಹುದಾಗಿದ್ದ ಭಾವ ಇಲ್ಲಿ ಸಖೀಗೀತವಾಗಿದೆ. ಸುಖಗೀತವಾಗಿದೆ. ಇವೆಲ್ಲ ಒಂದು ಅಪೂರ್ಣ ಅಭಿಮತಗಳು. ಸಖೀಗೀತದ ಸಂಗೀತದ ಭಾವ-ಭಾಷೆ ಇವು ನವ್ಯದ ಹೊತ್ತಿಗೆ ಅಡಿಗರ ಮೂಲಕ ಇನ್ನಷ್ಟು ಗಟ್ಟಿಯಾದವು. ಪೂರ್ವಾರ್ಧದ ನವ್ಯರಲ್ಲೂ ಈ ಖಂಡಕಾವ್ಯ, ಕಥನ ಕಾವ್ಯ, ಸುಖ-ದುಃಖಗಳ ಗೀತ, ಹಾಡು ಇಂತಹ ಛಾಪು ಇತ್ತು. ಮೇಲೆ ಹೇಳಿದ ಎಕ್ಕುಂಡಿಯವರ ಕಾವ್ಯ, ಸುಮತೀಂದ್ರ ನಾಡಿಗರ ದಾಂಪತ್ಯ ಗೀತ, ಪಂಚಭೂತಗಳು ಹೀಗೆ ಹಲವು ಖಂಡಕಾವ್ಯಗಳು ಬಂದಿವೆ. ಬರಬರುತ್ತ ಅದು ಕಾಣದಾಗಿದೆ. ಇವುಗಳ ಸೃಷ್ಟಿ ಮತ್ತು ಅಪರೂಪ ವಾಗುವಿಕೆಯ ಕುರಿತು ಇನ್ನಷ್ಟು ಅಧ್ಯಯನ ನಡೆಯಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)