varthabharthi


ವೈವಿಧ್ಯ

ಮುಸ್ಲಿಮರ ಮೇಲಿನ ದಾಳಿಗಳನ್ನು ತಡೆಯುವಲ್ಲಿ ದಿಲ್ಲಿ ಪೊಲೀಸರೇಕೆ ನಿಷ್ಕ್ರಿಯರಾಗಿದ್ದರು?

ವಾರ್ತಾ ಭಾರತಿ : 4 Mar, 2020
ಹರತೋಷ್ ಸಿಂಗ್ ಬಾಲ್ ಪಾಲಿಟಿಕಲ್ ಎಡಿಟರ್, ಕಾರವಾನ್ ಮ್ಯಾಗಝಿನ್

ಭಾರತಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯ ಸಂದರ್ಭದಲ್ಲೇ ದಿಲ್ಲಿಯಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ 46 ಜನರು ಮೃತಪಟ್ಟು, 250ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ನಾಲ್ಕು ಮಸೀದಿಗಳು ಬೆಂಕಿಗಾಹುತಿ ಯಾಗಿವೆ.

ಈಶಾನ್ಯ ದಿಲ್ಲಿಯ ಪ್ರದೇಶಗಳಲ್ಲಿ ಮೂರು ದಿನಗಳ ಕಾಲ ಅವಿರತವಾಗಿ ನಡೆದ ಹಿಂಸಾಚಾರ ಹೆಚ್ಚಾಗಿ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡಿತ್ತು ಎನ್ನುವುದು ಅಚ್ಚರಿಯನ್ನೇನೂ ಮೂಡಿಸಿಲ್ಲ. ಕಳೆದ ಆರು ವರ್ಷಗಳಿಂದಲೂ ಪ್ರಧಾನಿ ನರೇಂದ್ರ ಮೋದಿ, ಹಿಂದೂ ರಾಷ್ಟ್ರವಾದಿ ಬಿಜೆಪಿಯಲ್ಲಿನ ಅವರ ಸಹೋದ್ಯೋಗಿಗಳು, ಸಾಮಾಜಿಕ ಜಾಲತಾಣಗಳ ಅವರ ಟ್ರೋಲ್ ಪಡೆಗಳು ಮತ್ತು ಭಾರತದಲ್ಲಿಯ ಹೆಚ್ಚಿನ ಟಿವಿ ವಾಹಿನಿಗಳಿಂದ ದೇಶದಲ್ಲಿಯ ಮುಸ್ಲಿಮ್ ಅಲ್ಪಸಂಖ್ಯಾತರ ಬಗ್ಗೆ ದ್ವೇಷ, ಸಂಶಯ ಮತ್ತು ಹಿಂಸೆಯ ವಾತಾವರಣ ನಿರಂತರವಾಗಿ ನಿರ್ಮಾಣಗೊಳ್ಳುತ್ತಲೇ ಇದೆ.

ಮೋದಿ ಸರಕಾರವು ಅಂಗೀಕರಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ದಿಲ್ಲಿ ಹಿಂಸಾಚಾರಕ್ಕೆ ಮೂಲ ಕಾರಣವಾಗಿದೆ. ಭಾರತೀಯರು, ವಿಶೇಷವಾಗಿ ಮುಸ್ಲಿಮರು ಈ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ದಿಲ್ಲಿ ಹಿಂಸಾಚಾರಗಳಿಗೆ ಮುನ್ನ ನೆರೆಯ ಬಿಜೆಪಿ ಆಡಳಿತದ ಉತ್ತರ ಪ್ರದೇಶದಲ್ಲಿ ಸಿಎಎ ಕಿಚ್ಚಿಗೆ 19 ಜನರು ಬಲಿಯಾಗಿದ್ದರು.

 ಇತ್ತೀಚೆಗೆ ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಪಾಯಕಾರಿಯಾದ, ಕೋಮುವಾದ ದಿಂದ ಕೂಡಿದ್ದ ಪ್ರಚಾರದಲ್ಲಿ ತೊಡಗಿಕೊಂಡಿತ್ತು. ಸಿಎಎಗೆ ವಿರೋಧವನ್ನು ದೇಶದ್ರೋಹದೊಂದಿಗೆ ಸಮೀಕರಿಸಿದ್ದ ಬಿಜೆಪಿ ನಾಯಕರು ಪ್ರತಿಭಟನಾಕಾರರ ಹತ್ಯೆಗೂ ಕರೆ ನೀಡಿದ್ದರು. ಚುನಾವಣೆಯಲ್ಲಿ ಬಿಜೆಪಿ ಸೋತಿತ್ತು ಮತ್ತು ಪ್ರತಿಭಟನೆಗಳು ಮುಂದುವರಿದಿವೆ. ಫೆ.23ರಂದು ಬಿಜೆಪಿ ನಾಯಕ ಕಪಿಲ್ ಮಿಶ್ರಾರ ಪ್ರಚೋದನಾಕಾರಿ ಭಾಷಣದ ಬಳಿಕ ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.

ವಾರದ ಬಳಿಕ ಈಗ ಹಿಂದೂ ಗುಂಪುಗಳಿಗೆ ಕುಮ್ಮಕ್ಕು ನೀಡಿದ್ದರಲ್ಲಿ ಮತ್ತು ಮುಸ್ಲಿಮರನ್ನು ಗುರಿಯಾಗಿಸಿಕೊಡು ನಡೆದ ದಾಳಿಗಳಲ್ಲಿ ದಿಲ್ಲಿ ಪೊಲೀಸರ ಪಾತ್ರದ ಕುರಿತು ಮೂಲಭೂತ ಪ್ರಶ್ನೆಗಳು ತಲೆಯೆತ್ತಿವೆ. ಮಿಶ್ರಾರ ದಿಲ್ಲಿಗೆ ಬೆಂಕಿ ಹಚ್ಚಿದ್ದ ಭಾಷಣ ನಡೆಯುತ್ತಿದ್ದಾಗ ಈಶಾನ್ಯ ದಿಲ್ಲಿಯ ಉಪ ಪೊಲೀಸ್ ಆಯುಕ್ತ ವೇದಪ್ರಕಾಶ ಅವರ ಪಕ್ಕದಲ್ಲಿಯೇ ನಿಂತುಕೊಂಡಿದ್ದರು. ಆದರೆ ಪ್ರಚೋದನಾಕಾರಿ ಭಾಷಣವನ್ನು ತಡೆಯುವ ಗೋಜಿಗೆ ಹೋಗಿರಲಿಲ್ಲ. ಮರುದಿನ ಗುಂಪುಗಳು ಬೀದಿಗಳಲ್ಲಿ ಕಾರ್ಯಾಚರಣೆಗಿಳಿದಾಗ ಇದೇ ವೇದಪ್ರಕಾಶ ಮತ್ತು ಇತರ ಪೊಲೀಸ್ ಅಧಿಕಾರಿಗಳು ದಿಲ್ಲಿ ಪೊಲೀಸರನ್ನು ಮತ್ತು ಅವರ ಬೆಂಬಲವನ್ನು ಪ್ರಶಂಸಿಸಿ ಘೋಷಣೆಗಳನ್ನು ಕೂಗುತ್ತಿದ್ದವರೊಡನೆ ಕೈಕುಲುಕುತ್ತಿದ್ದರು!

ಹಿರಿಯ ಪೊಲೀಸ್ ಅಧಿಕಾರಿಗಳು ಹಿಂದೂ ಗುಂಪುಗಳಿಗೆ ಬೆಂಬಲ ಮತ್ತು ಮುಸ್ಲಿಮರ ಬಗ್ಗೆ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದು ಈಗ ಗುಟ್ಟಾಗಿ ಉಳಿದಿಲ್ಲ. ಕಳೆದ ಮೂರು ದಶಕಗಳಿಂದಲೂ ‘‘ಜೈ ಶ್ರೀರಾಮ್’’ ಎನ್ನ್ನುವುದು ಒಂದು ರೀತಿಯಲ್ಲಿ ಹಿಂದೂ ರಾಷ್ಟ್ರವಾದಿ ಗುಂಪುಗಳ ಯುದ್ಧಘೋಷಣೆಯಾಗಿದೆ. ಈಶಾನ್ಯ ದಿಲ್ಲಿಯ ಮುಸ್ಲಿಮ್ ಬಡಾವಣೆಗಳಲ್ಲಿ ದಿಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿದ್ದಾಗ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಿದ್ದರು ಎಂಬ ವರದಿಗಳಿವೆ. ಫೆ.25ರಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವೀಡಿಯೊ ರಸ್ತ್ತೆಯಲ್ಲಿ ಬಿದ್ದಿದ್ದ ಗಾಯಾಳು ಯುವಕರ ಸುತ್ತ ನಿಂತಿದ್ದ ಪೊಲೀಸರು ಅವರನ್ನು ನಿಂದಿಸುತ್ತಿರುವ ಮತ್ತು ಬಲವಂತದಿಂದ ಅವರು ರಾಷ್ಟ್ರಗೀತೆಯನ್ನು ಹಾಡುವಂತೆ, ವಂದೇಮಾತರಂ ಹೇಳುವಂತೆ ಮಾಡಿದ್ದಕ್ಕೆ ಸಾಕ್ಷಿಯಾಗಿತ್ತು. ಗಾಯಾಳುಗಳ ಪೈಕಿ ಕದಮಪುರಿಯ ನಿವಾಸಿ ಫೈಝಾನ್ ಎಂಬಾತ ಜ.27ರಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.

ಕಳೆದ ವಾರದ ಹಿಂಸಾಚಾರಕ್ಕೂ ಮುನ್ನ ದಿಲ್ಲಿ ಪೊಲೀಸರಿಂದ ಇಂತಹುದೇ ನಡವಳಿಕೆಗಳು ಕಂಡು ಬಂದಿದ್ದವು. ಜ.30ರಂದು ಶಾಹೀನ್‌ಬಾಗ್‌ನಲ್ಲಿ ವ್ಯಕ್ತಿಯೋರ್ವ ಸಿಎಎ ವಿರೋಧಿ ಪ್ರತಿಭಟನಾಕಾರರತ್ತ ಗುಂಡು ಹಾರಿಸಿದಾಗಲೂ ಪೊಲೀಸರು ಸುಮ್ಮನೆ ನಿಂತು ನೋಡುತ್ತಿದ್ದರು.

ಪೊಲೀಸರ ಈ ಪಕ್ಷಪಾತಿ ಧೋರಣೆ ಅವರು ತಾವು ಸೇರಿದ ಬಹುಸಂಖ್ಯಾತ ಸಮಾಜದ ಪರವಾಗಿ ತಾರತಮ್ಯದಿಂದ ವರ್ತಿಸುತ್ತಾರೆ ಎನ್ನುವ ಸರಳ ಪ್ರಶ್ನೆಯಲ್ಲ. ತಮ್ಮ ಪಕ್ಷಪಾತದ ನಡವಳಿಕೆ ತಮ್ಮನ್ನು ಮೋದಿ ಸರಕಾರ ಮತ್ತು ಆಡಳಿತ ಪಕ್ಷದ ಪುರಸ್ಕಾರಕ್ಕೆ ಪಾತ್ರರನ್ನಾಗಿಸುತ್ತದೆ ಎಂದು ಅವರು ನಂಬಿಕೊಂಡಿರುವಂತಿದೆ. ಈ ಹಿಂದಿನ ಭಾರೀ ಪ್ರಮಾಣದ ಕೋಮು ಹಿಂಸಾಚಾರಗಳಲ್ಲಿ, ವಿಶೇಷವಾಗಿ 2002ರ ಗುಜರಾತ್ ಕೋಮು ಗಲಭೆ ಮತ್ತು 1984ರ ದಿಲ್ಲಿಯ ಸಿಖ್‌ಹತ್ಯಾಕಾಂಡದ ಸಂದರ್ಭದಲ್ಲಿಯ ವಿದ್ಯಮಾನಗಳು ಅವರ ಈ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿರುವಂತಿದೆ.

ಗುಜರಾತ್ ದಂಗೆಗಳ ಸಂದರ್ಭದಲ್ಲಿ ತಮ್ಮ ಪ್ರದೇಶಗಳಲ್ಲಿ ಗಲಭೆಗಳು ನಡೆಯಲು ಅವಕಾಶ ನೀಡದಿರುವ ಪಣ ತೊಟ್ಟಿದ್ದ ನಿಷ್ಠುರ ಪೊಲೀಸ್ ಅಧಿಕಾರಿಗಳನ್ನು ಗಲಭೆಯ ಬೆನ್ನಲ್ಲೇ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಮತ್ತು ಅವರ ನಿಷ್ಠಾವಂತ ಹಾಗೂ ಆಗಿನ ರಾಜ್ಯ ಗೃಹಸಚಿವ ಅಮಿತ್ ಶಾ ಅವರು ಎತ್ತಂಗಡಿ ಮಾಡಿದ್ದರು. ಈ ಅಧಿಕಾರಿಗಳು ಈಗಲೂ ಸರಕಾರಕದಿಂದ ಕಿರುಕುಳ ಅನುಭವಿಸುತ್ತಿದ್ದಾರೆ.

ಗುಜರಾತ್‌ನ ದಕ್ಷ ಪೊಲೀಸ್ ಅಧಿಕಾರಿಗಳು ಅನುಭವಿಸಿದ್ದು ದಿಲ್ಲಿ ಪೊಲೀಸ್‌ನ ಪ್ರತಿಯೊಬ್ಬ ಅಧಿಕಾರಿಗೂ ಚೆನ್ನಾಗಿ ಗೊತ್ತಿದೆ. ಗುಜರಾತ್‌ನಲ್ಲಿದ್ದಂತೆ ಇಲ್ಲಿಯೂ ಪೊಲಿಸರು ನೇರವಾಗಿ ಮೋದಿ ಸರಕಾರದ ಅಧೀನದಲ್ಲಿದ್ದಾರೆ. ಅದೇ ಶಾ ಈಗ ಕೇಂದ್ರದಲ್ಲಿ ಗೃಹಸಚಿವರಾಗಿದ್ದಾರೆ.

ಇತ್ತೀಚೆಗೆ ದಿಲ್ಲಿಯಲ್ಲಿ ಗುಂಪುಗಳೊಂದಿಗೆ ಮುಸ್ಲಿಮರ ಮೇಲೆ ದಾಳಿಗಳನ್ನು ನಡೆಸಿದ್ದ ಹೆಚ್ಚಿನ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿಖ್ ನರಮೇಧದಲ್ಲಿ ತಪ್ಪಿತಸ್ಥರಾಗಿದ್ದು ಯಾವುದೇ ದಂಡನೆಯಿಲ್ಲದೆ ಪಾರಾಗಿದ್ದ ಅದೇ ಹಿರಿಯ ಅಧಿಕಾರಿಗಳ ಗರಡಿಯಲ್ಲಿ ಪಳಗಿದವರಾಗಿದ್ದಾರೆ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.

 ಮೋದಿ ಸರಕಾರದ ಸಂದೇಶ ನಿರಂತರ ಮತ್ತು ಸ್ಪಷ್ಟವಾಗಿದ್ದು, ಅದು ಪೊಲೀಸರಾಚೆಗೂ ತಲುಪಿದೆ. ದಿಲ್ಲಿ ಹಿಂಸಾಚಾರದ ವೇಳೆ ನಿಷ್ಕ್ರಿಯತೆಗಾಗಿ ಪೊಲೀಸರನ್ನು ತರಾಟೆಗೆತ್ತಿಕೊಂಡು, ದಂಗೆಗಳಲ್ಲಿ ಹಿಂದೂ ರಾಷ್ಟ್ರವಾದಿ ರಾಜಕಾರಣಿಗಳ ಪಾತ್ರದ ಬಗ್ಗೆ ತನಿಖೆಗೆ ಆದೇಶಿಸಿದ್ದ ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ್ ಅವರನ್ನು ಅದೇ ದಿನ ರಾತ್ರಿ ಪಂಜಾಬ್‌ಗೆ ವರ್ಗಾವಣೆಗೊಳಿಸಿದ್ದು ಇನ್ನೂ ಹಚ್ಚಹಸಿರಾಗಿದೆ.

ದಿಲ್ಲಿ ಹಿಂಸಾಚಾರಕ್ಕೆ ಉತ್ತರದಾಯಿಗಳಾದ ಪೊಲೀಸರು ಯಾವುದೇ ಕಾನೂನು ಕ್ರಮವನ್ನು ಎದುರಿಸುವುದಿಲ್ಲ. ಅವರು ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಂಡಿರದಿರಬಹುದು, ಆದರೆ ಅವರು ಬಿಜೆಪಿಯ ಬೆಂಬಲಕ್ಕೆ ನಿಂತಿದ್ದರು. ಇನ್ನು ಮಂದೆ ಮೋದಿ ಪಕ್ಷದ ಆಡಳಿತವಿರುವ ದೇಶದ ಯಾವುದೇ ಭಾಗದಲ್ಲಿ ಕೇಸರಿ ಗುಂಪುಗಳು ಮುಸ್ಲಿಮರನ್ನು ಗುರಿಯಾಗಿಸಿಕೊಂಡಾಗ ಪೊಲೀಸರು ಅವುಗಳ ದಾರಿಗೆ ಅಡ್ಡ ಬರುವುದಿಲ್ಲ ಎನ್ನುವುದಂತೂ ಗ್ಯಾರಂಟಿಯಾಗಿದೆ.

ಕೃಪೆ: caravanmagazine.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)