ಭೀಮ ಚಿಂತನೆ
ಸೋಪಾರೆ (ವಸಾಯಿ)ಯಲ್ಲಿ ಮಾಡಿದ ಭಾಷಣ
''ಅನ್ನ, ಶಿಕ್ಷಣ ಮತ್ತು ಅಧಿಕಾರಕ್ಕಾಗಿ ಬುದ್ಧಿಯ ಬಳಕೆಯಾಗಲಿ''

ಸನ್ಮಾನ್ಯ ಅಧ್ಯಕ್ಷರೆ, ಆತ್ಮೀಯ ಬಂಧು, ಭಗಿನಿಯರೇ,
ಶ್ರೀ ವನಮಾಳಿ ಅವರು ಹೇಳಿದಂತೆ ಈ ಸಭೆ ಮೊದಲೇ ನಡೆಯಬೇಕಿತ್ತು. ಆದರೆ ನಾನು ಮೂರನೇ ದುಂಡು ಮೇಜಿನ ಪರಿಷತ್‌ನ ಸಭೆಯಲ್ಲಿ ಪಾಲ್ಗೊಳ್ಳಲು ವಿದೇಶಕ್ಕೆ ಹೋಗಿದ್ದರಿಂದ ಇದೀಗ ಈ ಸಭೆಯನ್ನು ಆಯೋಜಿಸಲಾಗಿದೆ. ಇಲ್ಲಿನ ಚೇವ ಚಮ್ಮಾರ ಜನರು ಈ ಸಭೆಯನ್ನು ಆಯೋಜಿಸಿ ಈ ಭಾಗದ ಅಸ್ಪಶ್ಯರೊಂದಿಗೆ ಮಾತನಾಡುವ ಅವಕಾಶ ಮಾಡಿಕೊಟ್ಟಿದ್ದಕ್ಕೆ ಅವರಿಗೆ ನಾನು ಆಭಾರಿಯಾಗಿದ್ದೇನೆ.
ಮೊದಲನೇ ದುಂಡು ಮೇಜಿನ ಪರಿಷತ್‌ನ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೆ ನಾನು ಲಂಡನ್‌ಗೆ ಹೋಗಿದ್ದ ವೇಳೆ ನನ್ನದು ದಯನೀಯ ಸ್ಥಿತಿಯಾಗಿತ್ತು. ಆ ಸಭೆಯಲ್ಲಿ ಹಿಂದೂ-ಮುಸ್ಲಿಮ್ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಒಡಮೂಡಿದ್ದರಿಂದ ಅಸ್ಪಶ್ಯರ ವಾದ ಮಂಡಿಸಲು ಪ್ರಯಾಸಪಡಬೇಕಾಯಿತು. ಕೊನೆಯವರೆಗೂ ನಮ್ಮಲ್ಲಿ ಏಕಾಭಿಪ್ರಾಯ ಮೂಡದ ಕಾರಣ ಮೊದಲನೇ ವರ್ಷ ವಿನಾಕಾರಣ ವ್ಯರ್ಥವಾಯಿತು ಎಂದು ನಮ್ಮೆಲ್ಲರ ಭಾವನೆಯಾಗಿತ್ತು. ಇದರ ಜೊತೆಗೆ ಕಾಂಗ್ರೆಸ್ ಮತ್ತು ಅದರ ಸರ್ವಾಧಿಕಾರಿ ಮಹಾತ್ಮಾ ಗಾಂಧೀಜಿ ಅವರು ದುಂಡು ಮೇಜಿನ ಪರಿಷತ್ ಬಗ್ಗೆ ನಿರ್ಲಿಪ್ತರಾಗಿದ್ದರು. ಎರಡನೇ ದುಂಡು ಮೇಜಿನ ಪರಿಷತ್‌ನಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಅವರ ಸಂಗಡಿಗರು ಪಾಲ್ಗೊಂಡಿದ್ದರಿಂದ ಅದಕ್ಕೆ ಮಹತ್ವ ಲಭಿಸಿತು. ಎರಡನೇ ಪರಿಷತ್‌ನಲ್ಲಿ ಒಂದಿಷ್ಟು ಕೆಲಸ ಆಗಬಹುದು ಎಂದು ಎಲ್ಲ ಹಿಂದಿ ಮುಖಂಡರು ಆಶಯ ವ್ಯಕ್ತಪಡಿಸಿದ್ದರು. ಆದರೆ ಕೊನೆಗೆ ಅದೂ ಕೂಡ ವಿಫಲ ಆಯಿತು. ಅಂದಿನ ದುಂಡು ಮೇಜಿನ ಸಭೆಯಲ್ಲಿ ಎಲ್ಲ ಹಿಂದಿ ಸದಸ್ಯರು ಯಾವ ಪರಿ ಗೊಂದಲ ಹುಟ್ಟು ಹಾಕಿದರೆಂದರೆ ಒಂದೇ ಒಂದು ಪ್ರಶ್ನೆ ಕೂಡ ಪರಿಹಾರ ಕಾಣಲಿಲ್ಲ. ಈ ರೀತಿಯಾಗುವುದಕ್ಕೆ ಅಂದು ಒಬ್ಬರೇ ಒಬ್ಬರು ಕಾರಣರಾಗಿದ್ದರು. ಅದು ಮಹಾತ್ಮಾ ಗಾಂಧೀಜಿ.
ಒಂದು ಕಡೆ ಮುಸ್ಲಿಮರು ಇನ್ನೊಂದು ಕಡೆ ಸ್ಪಶ್ಯ ಹಿಂದೂಗಳು, ಮಧ್ಯೆ ಅಸ್ಪಶ್ಯ ಸೇರಿದಂತೆ ಇತರ ವರ್ಗಗಳ ಪ್ರತಿನಿಧಿಯಾಗಿದ್ದ ನಾನು ಎನ್ನುವಂತಹ ವಿಚಿತ್ರ ಪರಿಸ್ಥಿತಿ ನಿರ್ಮಾಣದಿಂದ ನನ್ನ ಮನಸ್ಸಿನಲ್ಲಿ ಗೊಂದಲದ ಜಗತ್ತೇ ನಿರ್ಮಾಣವಾಗಿತ್ತು. ಅಸ್ಪಶ್ಯರಿಗೆ ಸಂಬಂಧಿಸಿದಂತೆ ಮಹಾತ್ಮಾ ಗಾಂಧೀಜಿ ಏನಾದರೂ ಪ್ರಸ್ತಾಪಿಸಬಹುದು ಎನ್ನುವ ಆಶಯ ನನಗಂತೂ ಇರಲಿಲ್ಲ. ಏಕೆಂದರೆ ಎರಡನೇ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಅವರೊಂದಿಗೆ ನಡೆದ ಭೇಟಿ ವೇಳೆ ಈ ಸಂಗತಿ ನನಗೆ ಮನದಟ್ಟಾಗಿತ್ತು. ಅಸ್ಪಶ್ಯರಿಗಾಗಿ ನಾನು ಮಂಡಿಸುವ ಯೋಜನೆಗೆ ಮಹಾತ್ಮಾ ಗಾಂಧೀಜಿ ತಮ್ಮ ವಿರೋಧ ವ್ಯಕ್ತಪಡಿಸಲಾರರು ಎಂದು ನಾನು ಭಾವಿಸಿದ್ದೆ. ಆದರೆ ಸಭೆಯಲ್ಲಿ ಎಲ್ಲವೂ ತದ್ವಿರುದ್ಧವಾಯಿತು. ‘‘ಬೇರೆಯವರ ಮನಸ್ಸಿಗೆ ಇಷ್ಟವಾಗುವ ಅಸ್ಪಶ್ಯರ ಯೋಜನೆಗೆ ನನ್ನ ವಿರೋಧ ಇಲ್ಲ’’ ಎಂದು ಭಾರತದಲ್ಲಿ ಮಹಾತ್ಮಾ ಗಾಂಧೀಜಿ ಸ್ಪಷ್ಟಪಡಿಸಿದ್ದರು. ಅಲ್ಲದೆ ವಚನ ನೀಡುವಷ್ಟರ ಮಟ್ಟಿಗೆ ಹೋಗಿದ್ದರು. ಆದರೆ ಅದೇ ಮಹಾತ್ಮಾ ಗಾಂಧೀಜಿ ಸಿಖ್ ಮತ್ತು ಮುಸ್ಲಿಮರ ವಿಚಾರದಲ್ಲಿ ಬಿಳಿ ಕಾಗದದ ಮೇಲೆ ಸಹಿ ಮಾಡಿಕೊಟ್ಟಂತೆ ತಮ್ಮ ಸಮ್ಮತಿ ಸೂಚಿಸಿದರೆ, ಅಸ್ಪಶ್ಯರಿಗೆ ಸೂಜಿ ಮೊನೆಯಷ್ಟು ಹಕ್ಕು ನೀಡುವುದಕ್ಕೆ ಸಿದ್ಧವಿಲ್ಲ ಎಂದು ಹೇಳಿಬಿಟ್ಟರು. ಮಹಾತ್ಮಾ ಗಾಂಧೀಜಿ ಅವರ ಈ ಪ್ರತಿಜ್ಞೆಯ ಫಲ ಎನ್ನುವಂತೆ ನಮ್ಮ ಸಮಾಜದ ಹಿತರಕ್ಷಣೆಗಾಗಿ ನಾನು ಅನಿವಾರ್ಯವಾಗಿ ಅಲ್ಪಸಂಖ್ಯಾತರ ಗುಂಪಿನೊಂದಿಗೆ ಗುರುತಿಸಿಕೊಳ್ಳಬೇಕಾಯಿತು.
ಮಹಾತ್ಮಾ ಗಾಂಧೀಜಿ ಅಂದು ಒಂದು ಮಾತು ಹೇಳಿದ್ದರು. ‘‘ಸ್ಪಶ್ಯ ಮತ್ತು ಅಸ್ಪಶ್ಯ ವರ್ಗಕ್ಕೆ ನಾನೇ ಪ್ರತಿನಿಧಿಯಾಗಿದ್ದು, ಅವರ ಹಿತ ಯಾವುದರಲ್ಲಿ ಇದೆ ಎನ್ನುವ ಸ್ಪಷ್ಟ ಅರಿವು ನನಗೆ ಇದೆ. ಡಾ. ಅಂಬೇಡ್ಕರ್ ಅವರ ಬೆಂಬಲಕ್ಕೆ ಅಸ್ಪಶ್ಯ ಸಮಾಜ ಇಲ್ಲವೇ ಇಲ್ಲ. ಅಸ್ಪಶ್ಯ ವರ್ಗಕ್ಕಾಗಿ ಅವರು ಸಿದ್ಧಪಡಿಸಿದ ಅಭಿಪ್ರಾಯ ಮತ್ತು ಯೋಜನೆ ಇದು ಅವರ ಸ್ವಂತದ್ದು. ಅಸ್ಪಶ್ಯ ವರ್ಗದೊಂದಿಗೆ ಅವರ ಸಂಬಂಧವೇ ಇಲ್ಲ’’ ಎಂದು ಹೇಳಿದ್ದರು. ಗಾಂಧೀಜಿ ಅವರ ಈ ಹೇಳಿಕೆಗೆ ಅಂದಿನ ಭಾರತದಲ್ಲಿ ಸಾಕಷ್ಟು ಆಧಾರಗಳಿದ್ದವು. ಕಾಂಗ್ರೆಸ್ ಮತ್ತು ಹಿಂದೂ ಮಹಾಸಭಾದ ಕಾರ್ಯಕರ್ತರಿಂದ ಅಸ್ಪಶ್ಯರಲ್ಲಿ ಒಡಕು ಮೂಡಿಸುವ ಪ್ರಯತ್ನ ನಡೆದೇ ಇದ್ದ ಕಾರಣ ಚಮ್ಮಾರ ಜಾತಿಯಲ್ಲಿನ ಕೆಲ ಒಳಜಾತಿಗಳು ನನ್ನ ವಿರುದ್ಧವಾಗಿದ್ದವು. ಆ ವಿರೋಧಕ್ಕೆ ತಕ್ಕಂತೆ ಖೊಟ್ಟಿ ಸಭೆಗಳು, ಖೊಟ್ಟಿ ತಂತಿ ಸಂದೇಶಗಳು ಇಡೀ ವರ್ಷ ಮಳೆಯಂತೆ ಸುರಿದವು. ಇದೇ ಸಂದರ್ಭದಲ್ಲಿ ಚಮ್ಮಾರ ಜಾತಿಗಳು ಮಾಡಿರುವ ವಿರೋಧ ತಪ್ಪು ಎನ್ನುವುದು ಶ್ರೀ ವನಮಾಳಿ ಮತ್ತು ಚಾಂದೋರಕರ್ ಅವರಂತಹ ವ್ಯಕ್ತಿಗಳಿಗೆ ಮನದಟ್ಟಾಗಿ ನನ್ನನ್ನು ವಿರೋಧಿಸುವುದರಿಂದ ಚಮ್ಮಾರ ಜಾತಿಗೆ ಒಳ್ಳೆಯದು ಆಗುವುದಿಲ್ಲ ಎಂದು ಗೊತ್ತಾದ್ದರಿಂದ ನನ್ನ ಬೇಡಿಕೆಗಳನ್ನು ಬೆಂಬಲಿಸಿ ಅನೇಕ ಪತ್ರಗಳು ಮತ್ತು ಸಂದೇಶಗಳು ನನ್ನ ಕೈಸೇರಿದವು. ಅವುಗಳ ಪೈಕಿ ಚೇವ ಚಮ್ಮಾರ ಸಮಾಜದಿಂದ ಶ್ರೀ ವನಮಾಳಿ ಮತ್ತು ಚಾಂದೋರಕರ್ ಕಳುಹಿಸಿದ ಆ ತಂತಿ ಸಂದೇಶವನ್ನು ನಾನು ಮರೆಯಲು ಸಾಧ್ಯವಿಲ್ಲ.
ಎರಡನೇ ದುಂಡು ಮೇಜಿನ ಪರಿಷತ್‌ನ ಸಭೆಯ ಬಳಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ತನ್ನ ತೀರ್ಮಾನವನ್ನು ಸರಕಾರ ಬೇಗನೆ ಪ್ರಕಟಿಸಿತು. ಅದರಲ್ಲಿ ಅಸ್ಪಶ್ಯರಿಗೆ ಸ್ವತಂತ್ರ ಮತಕ್ಷೇತ್ರಗಳನ್ನು ನೀಡಿ ಸ್ವರಾಜ್‌ದಲ್ಲಿ ಅವರ ಸ್ವಾತಂತ್ರಕ್ಕೆ ಮಾನ್ಯತೆ ನೀಡಲಾಗಿತ್ತು. ಸರಕಾರ ತನ್ನ ತೀರ್ಮಾನ ಪ್ರಕಟಿಸಿದ ಬಳಿಕ ಗಾಂಧೀಜಿ ಪ್ರತಿಜ್ಞೆಗೆ ಅನುಗುಣವಾಗಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದರ ಪರಿಣಾಮವಾಗಿ ಪುಣೆ ಒಪ್ಪಂದ ಏರ್ಪಟ್ಟಿತು. ಆ ಒಪ್ಪಂದದ ಪ್ರಕಾರ ನಮಗೆ ಲಭಿಸಿರುವ ರಾಜಕೀಯ ಮಹತ್ವ ಮತ್ತು ಹಕ್ಕುಗಳ ಪಾಲನೆ ಮಾಡುವುದು ಈಗ ನಿಮ್ಮ ಕರ್ತವ್ಯವಾಗಿದೆ. ತಮ್ಮ ಜಾತಿಯ ಮುಖಂಡ ಯಾವ ರೀತಿ ಮಾರ್ಗದರ್ಶನ ನೀಡುತ್ತಾನೆ ಆ ರೀತಿ ನಡೆಯುವುದು ಹಿಂದೂ ಧರ್ಮೀಯರ ಗುಣ. ಅದೇ ರೀತಿ ನೀವು ಕೂಡ ನಿಮ್ಮ ಮುಖಂಡರ ಮೇಲೆ ನಂಬಿಕೆ ಇಡಿ. ಹಿಂದೂ ಜನರಾಗಲಿ ಅಥವಾ ಅವರ ಮುಖಂಡರಾಗಲಿ, ಇಲ್ಲವೇ ಯುವಕರಾಗಲಿ ನಿಮಗಾಗಿ ಏನಾದರೂ ಮಾಡಿಯಾರೆಂದು ನಾನು ಭಾವಿಸುವುದಿಲ್ಲ. ನಿಮ್ಮನ್ನು ದೇವಸ್ಥಾನಗಳಿಗೆ ಇವರು ಕರೆದುಕೊಂಡು ಹೋಗುವುದು ಅಥವಾ ತಮ್ಮ ಕೆರೆ-ಬಾವಿಗಳಿಂದ ಕುಡಿಯುವುದಕ್ಕೆ ನೀರು ಕೊಡುತ್ತಾರೆ ಎನ್ನುವುದು ಶುದ್ಧ ಮೋಸದ ವಿಚಾರ. ಸನಾತನಿಗಳ ಮರ್ಜಿ ಹಿಡಿದು ಅಸ್ಪಶ್ಯತೆ ನಿರ್ಮೂಲನೆ ಮಾಡುತ್ತಿರುವ ಇವರಿಗೆ ಭಾರತದ ಭೌಗೋಳಿಕ ನಕಾಶೆಯತ್ತ ದೃಷ್ಟಿ ಕೂಡ ಹೋಗಿಲ್ಲ. ಒಂದು ವೇಳೆ ಇವರು ನಕಾಶೆ ನೋಡಿದರೆ ನಮ್ಮ ದೃಷ್ಟಿಕ್ಷೇಪ ಕೇವಲ ವಿಂಧ್ಯಾದ್ರಿವರೆಗೆ ಮಾತ್ರ ಸೀಮಿತವಾಗಿದೆ ಎನ್ನುವುದು ಅರ್ಥವಾಗುತ್ತದೆ.
ಹಿಂದೂ ಸಮಾಜ ಮತ್ತು ಧರ್ಮದ ಬಗ್ಗೆ ನನಗೆ ಚಿಂತೆ ಇಲ್ಲ. ಅಸ್ಪಶ್ಯ ಸಮಾಜದಲ್ಲಿ ನಾನು ಹುಟ್ಟಿದ್ದೇನೆ ಮತ್ತು ಆ ಸಮಾಜದ ಹಿತಾಸಕ್ತಿಯ ರಕ್ಷಣೆ ಮಾತ್ರ ನನಗೆ ಮುಖ್ಯವಾಗಿದ್ದು, ನಾನೀಗ ಅದನ್ನೇ ಮಾಡುತ್ತಿದ್ದೇನೆ. ಧರ್ಮ ಮತ್ತು ಸಾಮಾಜಿಕ ವಿಷಯಗಳನ್ನು ದೂರ ಇರಿಸಿ, ಅನ್ನ, ಶಿಕ್ಷಣ ಮತ್ತು ರಾಜಕೀಯ ಅಧಿಕಾರ ಪಡೆಯುವ ನಿಟ್ಟಿನಲ್ಲಿ ನಿಮ್ಮ ಬುದ್ಧಿಮತ್ತೆ ಖರ್ಚಾಗಲಿ. ಕೆಲವು ದಿನಗಳ ಹಿಂದೆ ಇಲ್ಲಿನ ಸಾರ್ವಜನಿಕ ಬಾವಿ, ಶಾಲೆಗಳಲ್ಲಿ ಪ್ರವೇಶ ಪಡೆಯುವುದಕ್ಕೆ ವಿನಂತಿಯ ಭಿತ್ತಿಪತ್ರ ಅಂಟಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ನನ್ನ ಪ್ರಕಾರ ವಿನಂತಿಗೆ ಅರ್ಥವೇ ಇಲ್ಲ. ಮುನ್ಸಿಪಾಲಿಟಿಯಲ್ಲಿ ಮತ್ತು ಲೋಕಲ್ ಬೋರ್ಡ್‌ಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನಿಮ್ಮ ನಿಜವಾದ ಪ್ರತಿನಿಧಿಗಳು ವಾದ ಮಾಡಿದ್ದೇ ಆದಲ್ಲಿ ಹಿಂದೂಗಳ ಬಾವಿ, ಶಾಲೆಗಳನ್ನು ನಮಗೆ ಮುಕ್ತಗೊಳಿಸಬೇಕಾಗುತ್ತದೆ. ಕನಿಷ್ಠ ಇದಕ್ಕಾಗಿಯಾದರೂ ನೀವು ಇಂತಹ ಪ್ರತಿನಿಧಿಗಳನ್ನು ತಯಾರು ಮಾಡುವ ಇಲ್ಲವೇ ಆಯ್ಕೆ ಮಾಡುವತ್ತ ಗಮನ ಹರಿಸಿ. ಮಹಾತ್ಮಾ ಗಾಂಧೀಜಿ ಅವರಂತೂ ಅಸ್ಪಶ್ಯರಿಗಾಗಿ ದೇವಸ್ಥಾನಗಳನ್ನು ಮುಕ್ತಗೊಳಿಸುವ ಉಪಾಯ ಶೋಧಿಸುವುದರಲ್ಲಿ ತಲ್ಲೀನರಾಗಿದ್ದಾರೆ. ಹಿಂದೂಗಳು ದೇವಸ್ಥಾನ ಮುಕ್ತಗೊಳಿಸುತ್ತಾರೋ ಅಥವಾ ದೇವಸ್ಥಾನಗಳಿಗೆ ಬೀಗ ಜಡಿಯುತ್ತಾರೋ ಅದು ನನಗೆ ಗೊತ್ತಿಲ್ಲ. ಆದರೆ ಹಿಂದೂ ಯುವಕರು ಜರ್ಮನಿಯ ರಾಜಕಾರಣ ಅಧ್ಯಯನ ಮಾಡಿದರೆ ಅಲ್ಲಿನ ನಾಝಿ ಪಕ್ಷ ಕಮ್ಯುನಿಸ್ಟರ ವಿರುದ್ಧ ಹೋರಾಡುತ್ತಿರುವ ವಿಚಾರ ಅರಿವಿಗೆ ಬರುತ್ತದೆ.
ಒಂದೇ ದೇಶದ ಜನರು ನ್ಯಾಯಕ್ಕಾಗಿ ರಕ್ತಪಾತ ಮಾಡುತ್ತಿದ್ದಾರೆ. 1863ರಲ್ಲಿ ಅಮೆರಿಕದಲ್ಲಿ ನಿಗ್ರೋಗಳನ್ನು ಗುಲಾಮಗಿರಿಯಿಂದ ಮುಕ್ತ ಮಾಡುವುದಕ್ಕಾಗಿ ಉತ್ತರ ಮತ್ತು ದಕ್ಷಿಣದ ಬಿಳಿಯರು ಪರಸ್ಪರ ಬಡಿದಾಡಿಕೊಂಡಿರುವ ವಿಚಾರ ಈ ಹಿಂದಿ ತರುಣರಿಗೆ ಅರ್ಥವಾಗುವುದಿಲ್ಲ. ಅಸ್ಪಶ್ಯತೆಯ ನಿರ್ಮೂಲನೆಗಾಗಿ ನಾಲ್ಕಾರು ಹಿಂದೂ ಯುವಕರು ನಾಲ್ಕೈದು ಸನಾತನಿಗಳ ತಲೆ ತೆಗೆದುಹಾಕಿದ್ದರೆ ಒಂದಿಷ್ಟು ರಕ್ತ ಹರಿಸಿದ್ದರೆ ಏನಾದರೂ ಅವಘಡ ಆಗುತ್ತಿತ್ತೇ? ಆದರೆ ಇಲ್ಲಿಯವರಿಗೆ ನಿಜವಾಗಿಯೂ ಅಸ್ಪಶ್ಯತೆ ನಿರ್ಮೂಲನೆಯಾಗುವುದು ಬೇಕಿಲ್ಲ. ಇರಲಿ.... ಹಿಂದೂ ಧರ್ಮ ಮತ್ತು ಆ ಸಮಾಜಕ್ಕೆ ಏನು ಬೇಕಾದರೂ ಆಗಲಿ. ಅಸ್ಪಶ್ಯತೆ ನಿವಾರಣೆಯಾಗಲಿ ಅಥವಾ ಮೊದಲಿನಂತೆ ಅದು ಮುಂದುವರಿಯಲಿ ಅದರ ಬಗ್ಗೆ ನೀವು ಚಿಂತೆ ಮಾಡುವ ಅಗತ್ಯವಿಲ್ಲ. ನಮ್ಮೆಳಗಿನ ಮಹಾರ್-ಚಮ್ಮಾರ ಭೇದ ತೊಲಗಿಸಿ ಸಂಘಟಿತರಾಗಿ ಮತ್ತು ರಾಜಕೀಯ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ನಿಮ್ಮ ತನು-ಮನ-ಧನ ಸಮರ್ಪಣೆಯಾಗಲಿ ಎಂದು ಹೇಳಿ ನನ್ನ ಮಾತಿಗೆ ವಿರಾಮ ನೀಡುತ್ತೇನೆ.
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ