varthabharthi


ವೈವಿಧ್ಯ

ಶೋಷಿತ ಮಹಿಳೆಯರ ಆತಂಕಗಳೂ ಆಳುವ ವರ್ಗಗಳ ನಿಷ್ಕ್ರಿಯತೆಯೂ

ವಾರ್ತಾ ಭಾರತಿ : 8 Mar, 2020
ನಾ. ದಿವಾಕರ

ಮಹಿಳೆಯರ ಸಬಲೀಕರಣವನ್ನು ಕೆಲವೇ ಕೆಲವು ಸಾಧಕರ ಹಿನ್ನೆಲೆಯಲ್ಲಿ ಕಾಣುವ ಪರಂಪರೆ ಭಾರತದ ನಾಗರಿಕ ಸಮಾಜದಲ್ಲಿ ಬೇರೂರಿದೆ. ತಮ್ಮ ನಿತ್ಯ ಬದುಕಿಗಾಗಿ ಮೈಲುಗಟ್ಟಲೆ ಉದ್ಯೋಗ ಅರಸಿ ವಲಸೆ ಹೋಗುವ ಅಸಂಖ್ಯಾತ ಮಹಿಳೆಯರ ಬವಣೆಯನ್ನು ನೀಗಿಸುವುದಿರಲಿ, ಗಮನಿಸುವ ಇಚ್ಛಾಶಕ್ತಿಯೂ ಸರಕಾರಗಳಲ್ಲಿ ಕಂಡುಬರುತ್ತಿಲ್ಲ. ಮಹಿಳಾ ಕೃಷಿ ಕಾರ್ಮಿಕರು, ಕಟ್ಟಡ ನಿರ್ಮಾಣದಲ್ಲಿ ಮತ್ತು ರಸ್ತೆ-ರೈಲು- ಮೆಟ್ರೋ ಕಾಮಗಾರಿಗಳಲ್ಲಿ ಕಡಿಮೆ ವೇತನ ಪಡೆದು ದುಡಿಯುವ ಮಹಿಳೆಯರು, ಪೌರ ಕಾರ್ಮಿಕರು, ಗ್ರಾಮೀಣ ಉದ್ಯೋಗಗಳಲ್ಲಿ ನಿರತರಾಗಿರುವವರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹೀಗೆ ಲಕ್ಷಾಂತರ ಮಹಿಳೆಯರು ಸಬಲೀಕರಣದ ವ್ಯಾಪ್ತಿಯಿಂದ ಹೊರಗುಳಿದಿದ್ದಾರೆ.

ನವ ಉದಾರವಾದ ಮತ್ತು ನವ ರಾಷ್ಟ್ರೀಯತೆಯ ಕಾರ್ಯಸೂಚಿಗಳು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಜಾರಿಯಾಗುತ್ತಿರುವ ಸಂದರ್ಭದಲ್ಲೇ ಭಾರತದ ಮಹಿಳೆಯರು, ವಿಶೇಷವಾಗಿ ಶೋಷಿತ ಮಹಿಳೆಯರು, ಮತ್ತೊಂದು ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಅಂಬೇಡ್ಕರ್ ಜಯಂತಿಯನ್ನು ದಲಿತ ಸಮುದಾಯ ಮಾತ್ರವೇ ಆಚರಿಸಬೇಕು ಎಂದು ಬಯಸುವ ಮೇಲ್ಜಾತಿ ಮನಸ್ಥಿತಿಯಂತೆಯೇ, ಮಹಿಳಾ ದಿನಾಚರಣೆಯನ್ನು ಮಹಿಳೆಯರೇ ಆಚರಿಸಬೇಕು ಎನ್ನುವ ಲಿಂಗ ಸೀಮಿತ ಪುರುಷ ಪ್ರಧಾನ ಮನಸ್ಥಿತಿ ಭಾರತೀಯ ಸಮಾಜವನ್ನು ಆವರಿಸುತ್ತಿದೆ. ಮಹಿಳೆಯರ ಸ್ವಾತಂತ್ರ್ಯ, ಸ್ವಾಯತ್ತತೆ, ಸುರಕ್ಷತೆ ಮತ್ತು ಘನತೆ ಎಲ್ಲವೂ ಆಕ್ರಮಣಕ್ಕೊಳಗಾಗಿರುವ ವಿಷಮ ಸನ್ನಿವೇಶದಲ್ಲಿ ಭಾರತದ ಮೂಲೆ ಮೂಲೆಗಳಲ್ಲೂ ಮಹಿಳೆಯರು ಹೋರಾಟ ನಿರತರಾಗಿದ್ದಾರೆ. ಗಾರ್ಮೆಂಟ್ ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶುಶ್ರೂಷಕಿಯರು ತಮ್ಮ ಸುಭದ್ರ ಜೀವನಕ್ಕಾಗಿ ಸತತ ಹೋರಾಟ ನಡೆಸುತ್ತಿದ್ದರೆ, ಕೇಂದ್ರ ಸರಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಜಾರಿಗೊಳಿಸಲಿರುವ ಎನ್‌ಆರ್‌ಸಿ ಪ್ರಕ್ರಿಯೆಯಿಂದ ತಮ್ಮ ನೆಲೆ ಕಳೆದುಕೊಳ್ಳುವ ಭೀತಿಯಲ್ಲಿ ಮುಸ್ಲಿಮ್ ಮಹಿಳೆಯರು, ಪ್ರಾಯಶಃ ಪ್ರಥಮ ಬಾರಿಗೆ, ಅತ್ಯಧಿಕ ಸಂಖ್ಯೆಯಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.

ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಯ ರಕ್ಷಣೆಗಾಗಿ ಹೋರಾಡುತ್ತಿರುವ ಈ ಮಹಿಳೆಯರೊಂದಿಗೆ ತಮ್ಮ ಘನತೆ ಮತ್ತು ಹೆಣ್ತನದ ರಕ್ಷಣೆಗಾಗಿ ಲಕ್ಷಾಂತರ ಸ್ತ್ರೀಯರು ಹೋರಾಟಕ್ಕೆ ಸನ್ನದ್ಧರಾಗುತ್ತಿದ್ದಾರೆ. ಮಹಿಳೆಯ ದೇಹದಲ್ಲಿ ಉಂಟಾಗುವ ಜೈವಿಕ ಪ್ರಕ್ರಿಯೆಗಳನ್ನು ಸಂಪ್ರದಾಯ-ಆಚರಣೆಗಳ ಚೌಕಟ್ಟಿನಲ್ಲಿ ನೋಡುವ ಮಟ್ಟಿಗೆ ಭಾರತದ ಪುರುಷ ಸಮಾಜ ಮತ್ತು ಆಡಳಿತ ವ್ಯವಸ್ಥೆ ನೈತಿಕ ಅವನತಿ ಹೊಂದಿದೆ. ಋತುಸ್ರಾವವಾದ ಮಹಿಳೆಯನ್ನು ಶಾಪಗ್ರಸ್ಥಳಂತೆಯೂ, ಬಹಿಷ್ಕೃತಳಂತೆಯೂ ನೋಡುವ ಒಂದು ವಿಕೃತ ಸಮಾಜದ ನಡುವೆ ಆಧುನಿಕ ಭಾರತ ವಿಶ್ವ ನಾಯಕನಾಗಲು ಮುನ್ನಡೆದಿದೆ. ಅಧಿಕಾರದ ಚುಕ್ಕಾಣಿ ಹಿಡಿದಿರುವ ರಾಜಕೀಯ ಪಕ್ಷ ತನ್ನ ಹಿಂದೂ ರಾಷ್ಟ್ರೀಯತೆಯ ಉನ್ಮಾದದಲ್ಲಿ ಭಾರತ ಮಾತೆಗೆ ಉಘೇಉಘೇ ಹೇಳುತ್ತಲೇ ಇಡೀ ಯುವ ಸಮೂಹವನ್ನು ಉನ್ಮತ್ತರನ್ನಾಗಿ ಮಾಡುತ್ತಿದೆ. ಆದರೆ ಭಾರತದಲ್ಲಿ ವಾಸಿಸುತ್ತಿರುವ ಮಾತೆಯರನ್ನು ಗುಂಡಿಕ್ಕಿ ಕೊಲ್ಲುವ ವಿಕೃತ ಮನಸುಗಳನ್ನು ಸಂರಕ್ಷಿಸುತ್ತಿದೆ. ತನ್ನ ಒಡಲಲ್ಲಿ ಜನಿಸಿದ ಹೆಣ್ಣು ಮಕ್ಕಳನ್ನು ರಕ್ಷಿಸಲಾಗದ ಭಾರತ ಮಾತೆಗೆ ಜೈಕಾರ ಹಾಕುವುದು ವಿಡಂಬನೆಯಂತೆ ಕಾಣುತ್ತದೆ. ವಿಮಾನ ಚಲಾಯಿಸುವ ಪೈಲಟ್, ರೈಲು ಚಲಾಯಿಸುವ ಚಾಲಕಿ, ಬಸ್ ಮತ್ತು ಲಾರಿ ಚಾಲಕಿ, ಔದ್ಯಮಿಕ ಸಂಸ್ಥೆಯ ಸಿಇಒ, ಸಾಫ್ಟ್‌ವೇರ್ ಉದ್ಯಮದ ಮಹಾರಾಣಿ ಹೀಗೆ ಮೇಲ್ವರ್ಗದ, ಮೇಲ್ದರ್ಜೆಯ ಮಹಿಳೆಯರನ್ನು ಮುಂದಿಟ್ಟುಕೊಂಡು ಮಹಿಳಾ ಸಬಲೀಕರಣದ ಜಪ ಮಾಡುವ ಆಳುವ ವರ್ಗಗಳಿಗೆ ಸಬಲೀಕರಣದ ಅರ್ಥವೇ ತಿಳಿದಿಲ್ಲ ಎಂದು ನಿಸ್ಸಂಶಯವಾಗಿ ಹೇಳಬಹುದು.

ಗಾರ್ಮೆಂಟ್ ಕಾರ್ಖಾನೆಗಳಲ್ಲಿ ಒಳ ಉಡುಪುಗಳನ್ನು ಹೊಲಿಯುವ ಅಸಂಖ್ಯಾತ ಮಹಿಳೆಯರ ಬದುಕು ಬೀದಿ ಪಾಲಾಗುತ್ತಿರುವುದನ್ನು ಕಂಡೂ ಕಾಣದಂತಿರುವ ಪ್ರಭುತ್ವ, ಗುಜರಾತ್‌ನ ವಿಶ್ವವಿದ್ಯಾನಿಲಯವೊಂದರಲ್ಲಿ ಋತುಸ್ರಾವವಾಗಿರುವ ಮಹಿಳೆಯರು ದೇವಾಲಯ ಪ್ರವೇಶ ಮಾಡಿದ್ದಕ್ಕೆ ಅಡ್ಡಿಪಡಿಸಿ, ಒಳಉಡುಪು ಪರಿಶೀಲಿಸಿರುವ ಅಸಹ್ಯಕರ, ಅಮಾನವೀಯ ಘಟನೆಯ ಬಗ್ಗೆಯೂ ಅದೇ ನಿಷ್ಕ್ರಿಯತೆ ತೋರಿದೆ. ಶಬರಿಮಲೆಯಲ್ಲಿ ಬಹಿಷ್ಕೃತರಾದ ಋತುಮತಿಯಾಗುವ ಮಹಿಳೆಯರೂ ಅಷ್ಟೇ ನಿಕೃಷ್ಟರಾಗಿ ಕಾಣುತ್ತಾರೆ. ಬೇಟಿ ಪಡಾವೊ ಬೇಟಿ ಬಚಾವೋ (ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಅವರನ್ನು ರಕ್ಷಿಸಿ) ಎಂಬ ಬೃಹತ್ ಯೋಜನೆಯನ್ನು ಜಾರಿಗೊಳಿಸಿದ ಮೋದಿ ಸರಕಾರಕ್ಕೆ ಪಡಾವೋ ಎಂಬುದರ ಅರ್ಥವೇ ತಿಳಿದಿಲ್ಲ ಎನಿಸುತ್ತದೆ. ನಾಲ್ಕಕ್ಷರ ಕಲಿಯುವುದನ್ನೇ ವಿದ್ಯಾಭ್ಯಾಸ ಅಥವಾ ಸಾಕ್ಷರತೆ ಎಂದು ಭಾವಿಸಿರುವ ಆಳುವ ವರ್ಗಗಳಿಗೆ, ಮಹಿಳೆಯರ ಗೌರವಯುತ ಬದುಕಿಗೆ ಅಕ್ಷರ ಕಲಿಕೆಯೊಂದೇ ಸಾಲದು ಎಂಬ ಕಲ್ಪನೆಯೂ ಇಲ್ಲದಿರುವುದು ಆಡಳಿತ ನೀತಿಗಳಿಂದಲೇ ಸ್ಪಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಭಾರತದ ಎಲ್ಲ ಆಡಳಿತಾರೂಢ ಪಕ್ಷಗಳೂ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತವೆ. ಭಾರತದ ಸಮಸ್ತ ಮಹಿಳಾ ಸಂಕುಲದ ಪ್ರತಿನಿಧಿಗಳಂತೆಯೋ, ರಾಯಭಾರಿಗಳಂತೆಯೋ ಬಿಂಬಿಸಲ್ಪಡುವ ಅನೇಕ ಸಾಧಕರು ಇಂತಹ ಸೂಕ್ಷ್ಮವಿಚಾರಗಳ ಬಗ್ಗೆ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ. ಏಕೆಂದರೆ ಇಲ್ಲಿ ಮಹಿಳೆಯ ಅಸ್ಮಿತೆ ಪುರುಷ ಸಮಾಜದ ಅಹಮಿಕೆಗೆ ಮುಖಾಮುಖಿಯಾಗುತ್ತದೆ.

ಇಂದು ಭಾರತದ ಮಹಿಳೆಯರು ಕೇವಲ ಅನ್ನ, ನೀರು, ಸೂರು ಮತ್ತು ಸೌಕರ್ಯಕ್ಕಾಗಿ ಹೋರಾಡುತ್ತಿಲ್ಲ. ಇದಕ್ಕೊಂದು ಉದಾಹರಣೆ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ. ಉದ್ಯೋಗ, ಅಧ್ಯಾತ್ಮ, ಆಡಳಿತ ವ್ಯವಸ್ಥೆ, ಶಿಕ್ಷಣ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಪ್ರಾತಿನಿಧ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದರೆ ಅದು ಪ್ರಭುತ್ವದ ಔದಾರ್ಯದಿಂದಲ್ಲ, ಭಾರತದ ಮಹಿಳೆಯರ ಸಾಧನೆ ಮತ್ತು ಛಲದಿಂದ ಎನ್ನುವುದನ್ನು ಪುರುಷ ಸಮಾಜ ಗ್ರಹಿಸಬೇಕಿದೆ. ಆದರೆ ಮಹಿಳೆಯರ ಈ ದಿಟ್ಟ ಮುನ್ನಡೆಯೇ ಅವರನ್ನು ಅನೇಕ ಸವಾಲುಗಳಿಗೆ ಮುಖಾಮುಖಿಯಾಗಿಸಿದೆ. ಟಿವಿ ಪರದೆಯ ಮೇಲೆ ಗುರೂಜಿಗಳು ಮಹಿಳೆಯರನ್ನು ಆಕರ್ಷಣೆಯ ಬಿಂದುಗಳಾಗಿ ಬಳಸಿಕೊಳ್ಳುತ್ತಿದ್ದರೆ, ರಾಜಕಾರಣಿಗಳು, ರಾಜಕೀಯ ಕಾರ್ಯಕರ್ತರು ತಮ್ಮ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಸಾಧಕ ಮಹಿಳೆಯರು ಇಲ್ಲಿಯೂ ಮೌನಿಗಳಾಗಿದ್ದಾರೆ. ಸೋಜಿಗ ಎನಿಸುವುದಿಲ್ಲವೇ?

ಭಾರತದಲ್ಲಿ ಇಂದು ಹೆಣ್ಣು ಹೆಚ್ಚು ಶೋಷಣೆಗೊಳಗಾಗುತ್ತಿದ್ದಾಳೆ, ಹೆಣ್ತನ ಅಪಾಯದಲ್ಲಿದೆ. ಹೆಣ್ತನವನ್ನು ಉಳಿಸಿಕೊಳ್ಳಲು ಹೋರಾಡುವ ಮಹಿಳೆಯರು ಅಪರಾಧಿಗಳಂತೆ ಕಾಣುತ್ತಿದ್ದಾರೆ. ತಮ್ಮ ದೇಹದಲ್ಲಿ ಉಂಟಾಗುವ ಜೈವಿಕ ಪ್ರಕ್ರಿಯೆಗೆ ಮಹಿಳೆಯರು ನಿರ್ಬಂಧ, ನಿಷೇಧ, ಬಹಿಷ್ಕಾರ ಮುಂತಾದ ಶಿಕ್ಷೆ ಎದುರಿಸಬೇಕಾಗಿದೆ. ಮತ್ತೊಂದೆಡೆ ಪುರುಷರಲ್ಲಿ ಉಂಟಾಗುವ ಜೈವಿಕ ಪ್ರಕ್ರಿಯೆಗೂ ಮಹಿಳೆಯೇ ಬಲಿಯಾಗುತ್ತಿದ್ದಾಳೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಹೈದರಾಬಾದ್ ಬಳಿ ಮಹಿಳೆಯೊಬ್ಬರು ವಿಕೃತ ಕಾಮಿಗಳ ಕಾಮತೃಷೆಗೆ ಬಲಿಯಾದಳು. ಕೆಲವೇ ದಿನಗಳ ನಂತರ ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಯಿತು. ಇದು ನ್ಯಾಯವಿತರಣೆಯ ಒಂದು ಮಾರ್ಗ ಎಂದು ಪ್ರಭುತ್ವ ಮತ್ತು ನಾಗರಿಕ ಸಮಾಜ ಸಮ್ಮತಿಸಿ ಈ ಇಡೀ ಘಟನೆಯೇ ಭೂಗತವಾಗಿಬಿಟ್ಟಿದೆ. ನೈಜ ಅಪರಾಧಿಗಳು ಎನ್‌ಕೌಂಟರ್‌ನಲ್ಲಿ ಸತ್ತವರೋ ಅಥವಾ ಮತ್ತಾವುದೋ ಅಧಿಕಾರ ವಲಯದ ಕೌಂಟರ್‌ನಲ್ಲಿ ಅಡಗಿ ಕುಳಿತವರೋ ಎನ್ನುವುದು ನಿಗೂಢವಾಗಿಯೇ ಉಳಿಯುತ್ತದೆ. ಇದೇ ಸಮಯದಲ್ಲಿ ಉನ್ನಾವೊದಲ್ಲಿ ಒಬ್ಬ ಮಹಿಳೆ ಅತ್ಯಾಚಾರಕ್ಕೀಡಾಗಿ ಸಜೀವ ದಹನದ ಶಿಕ್ಷೆಯನ್ನೂ ಅನುಭವಿಸಬೇಕಾಯಿತು. ಪ್ರತಿಭಟನೆಯ ದನಿಗಳ ನಡುವೆಯೇ ಎರಡೂ ಪ್ರಕರಣಗಳು ನನೆಗುದಿಗೆ ಬಿದ್ದಿವೆ. ಮತ್ತೊಂದೆಡೆ ಏಳು ವರ್ಷದ ಹಿಂದೆ ನಡೆದ ನಿರ್ಭಯಾ ಪ್ರಕರಣಕ್ಕೆ ಈಗ ನ್ಯಾಯ ಒದಗಿಸಲಾಗುತ್ತಿದೆ.

 ಭಾರತದ ನ್ಯಾಯಾಲಯಗಳಲ್ಲಿ 1,28,000 ಅತ್ಯಾಚಾರ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ ಎನ್ನುವುದೇ ಭಾರತೀಯ ಪ್ರಭುತ್ವಕ್ಕೆ ಸ್ತ್ರೀ ಸಂವೇದನೆ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಶಬರಿಮಲೆಗೆ ಸ್ತ್ರೀಯರ ಪ್ರವೇಶದ ವಿವಾದವೂ ನ್ಯಾಯಾಂಗದ ಅಂಗಳದಲ್ಲಿದ್ದು ಇದಕ್ಕೆ ಪ್ರಾಶಸ್ತ್ಯ ನೀಡುವ ವ್ಯವಧಾನವನ್ನೂ ನ್ಯಾಯಾಂಗ ಕಳೆದುಕೊಂಡಿದೆ. ಸರಾಸರಿ ದಿನಕ್ಕೆ 90 ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ ಎಂದು ಸರಕಾರದ ಅಂಕಿಅಂಶಗಳೇ ಹೇಳುತ್ತವೆ. 2017ರಲ್ಲಿ ನಡೆದ 33,000 ಅತ್ಯಾಚಾರ ಪ್ರಕರಣಗಳಲ್ಲಿ ಶೇ. 30ರಷ್ಟು ಅಪ್ರಾಪ್ತ ಬಾಲಕಿಯರೇ ಬಲಿಯಾಗಿದ್ದಾರೆ. ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಶೇ 20ಕ್ಕಿಂತಲೂ ಕಡಿಮೆ ಇರುವುದು ನ್ಯಾಯ ವ್ಯವಸ್ಥೆಯನ್ನು ಅಣಕಿಸುವಂತಿದೆ. (ಅಂಕಿಅಂಶಗಳು-ರಾಷ್ಟ್ರೀಯ ಅಪರಾಧಗಳ ಬ್ಯೂರೋ). ಇದು ವರದಿಯಾಗಿರುವ ಅಂಕಿಅಂಶಗಳು. ಭಾರತದಲ್ಲಿ ಮಹಿಳೆಯರ ಸಮಸ್ಯೆ ಎಂದರೆ ಕೇವಲ ಅತ್ಯಾಚಾರ, ದೌರ್ಜನ್ಯ, ಲೈಂಗಿಕ ಕಿರುಕುಳ ಮಾತ್ರವೇ ಅಲ್ಲ ಎನ್ನುವುದನ್ನು ಗ್ರಾಮೀಣ ಮಹಿಳೆಯರ ಬದುಕಿನಲ್ಲಿ ಕಾಣಬಹುದು. ದೇಶದ ಕೃಷಿ ಮತ್ತು ಗ್ರಾಮೀಣ ಉತ್ಪಾದನೆಯಲ್ಲಿ, ಗಣನೀಯ ಕೊಡುಗೆ ಸಲ್ಲಿಸುವ ಕೋಟ್ಯಂತರ ಮಹಿಳೆಯರು ದಿನನಿತ್ಯ ತಮ್ಮ ಬದುಕಿಗಾಗಿ ಹೋರಾಡಬೇಕಿದೆ. ಅಸ್ಪಶ್ಯ ಸಮುದಾಯದ ಮಹಿಳೆಯರು ಒಂದೆಡೆ ಜಾತಿ ದೌರ್ಜನ್ಯ ಮತ್ತೊಂದೆಡೆ ಪುರುಷ ಸಮಾಜದ ಕಿರುಕುಳ ಎದುರಿಸಬೇಕಿದೆ. ಇದು ನ್ಯಾಯಾಂಗದ ಅಂಗಳದಲ್ಲಿ ಕಾಣದ ವಿದ್ಯಮಾನವಾದ್ದರಿಂದ ಮಾಧ್ಯಮಗಳಲ್ಲೂ ಕಾಣುವುದಿಲ್ಲ.

ಮಹಿಳೆಯರ ಸಬಲೀಕರಣವನ್ನು ಕೆಲವೇ ಕೆಲವು ಸಾಧಕರ ಹಿನ್ನೆಲೆಯಲ್ಲಿ ಕಾಣುವ ಪರಂಪರೆ ಭಾರತದ ನಾಗರಿಕ ಸಮಾಜದಲ್ಲಿ ಬೇರೂರಿದೆ. ತಮ್ಮ ನಿತ್ಯ ಬದುಕಿಗಾಗಿ ಮೈಲುಗಟ್ಟಲೆ ಉದ್ಯೋಗ ಅರಸಿ ವಲಸೆ ಹೋಗುವ ಅಸಂಖ್ಯಾತ ಮಹಿಳೆಯರ ಬವಣೆಯನ್ನು ನೀಗಿಸುವುದಿರಲಿ, ಗಮನಿಸುವ ಇಚ್ಛಾಶಕ್ತಿಯೂ ಸರಕಾರಗಳಲ್ಲಿ ಕಂಡುಬರುತ್ತಿಲ್ಲ. ಮಹಿಳಾ ಕೃಷಿ ಕಾರ್ಮಿಕರು, ಕಟ್ಟಡ ನಿರ್ಮಾಣದಲ್ಲಿ ಮತ್ತು ರಸ್ತೆ-ರೈಲು- ಮೆಟ್ರೋ ಕಾಮಗಾರಿಗಳಲ್ಲಿ ಕಡಿಮೆ ವೇತನ ಪಡೆದು ದುಡಿಯುವ ಮಹಿಳೆಯರು, ಪೌರ ಕಾರ್ಮಿಕರು, ಗ್ರಾಮೀಣ ಉದ್ಯೋಗಗಳಲ್ಲಿ ನಿರತರಾಗಿರುವವರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹೀಗೆ ಲಕ್ಷಾಂತರ ಮಹಿಳೆಯರು ಸಬಲೀಕರಣದ ವ್ಯಾಪ್ತಿಯಿಂದ ಹೊರಗುಳಿದಿದ್ದಾರೆ. ಕನಿಷ್ಠ ವೇತನ, ಮೂಲ ಸೌಕರ್ಯಗಳು ಮತ್ತು ಉದ್ಯೋಗ ಭದ್ರತೆ ಮುಂತಾದ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವುದಿರಲಿ, ಆಲಿಸಲೂ ಸರಕಾರಗಳು ಸಿದ್ಧವಾಗಿಲ್ಲ. ಗ್ರಾಮೀಣ-ಕೃಷಿ ಕ್ಷೇತ್ರದಲ್ಲಿ ತೊಡಗಿರುವ ಮಹಿಳೆಯರ ಸಂಕಷ್ಟಗಳ ಪರಿವೆಯೂ ಸರಕಾರಗಳಿಗೆ ಇಲ್ಲ.

 ಈ ಎಲ್ಲ ಸಮಸ್ಯೆಗಳಿಗೆ ಕಾರಣ ಎಂದರೆ ಮಹಿಳೆಯರು ಸಾಂವಿಧಾನಿಕ ಅಧಿಕಾರ ಕೇಂದ್ರಗಳಲ್ಲಿ ಪ್ರಾತಿನಿಧ್ಯ ಕಳೆದುಕೊಳ್ಳುತ್ತಿರುವುದು. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಕಾಯ್ದೆ ಎರಡು ದಶಕಗಳಿಂದಲೂ ಧೂಳು ತಿನ್ನುತ್ತಿದೆ. ಬೇಟಿ ಪಡಾವೋ ಘೋಷಣೆಯ ಮೂಲಕ, ಗರ್ಭಿಣಿೆಯರಿಗೆ ಆರು ಸಾವಿರ ರೂ. ತುಣುಕು ಬಿಸಾಡುವ ಮೂಲಕ ಮಹಿಳೆಯರ ಆತ್ಮೋದ್ಧಾರ ಮಾಡಲು ಮುಂದಾಗಿರುವ ಕೇಂದ್ರ ಸರಕಾರ ಮಹಿಳಾ ಮೀಸಲಾತಿಯ ಬಗ್ಗೆ ಚಕಾರವೆತ್ತದೆ ಇರುವುದು, ಭಾರತದ ಆಡಳಿತ ವ್ಯವಸ್ಥೆಯಲ್ಲಿನ ಪುರುಷ ಪ್ರಧಾನ ಧೋರಣೆಗೆ ಸಾಕ್ಷಿಯಾಗಿದೆ. ಯಾವುದೇ ರಾಜಕೀಯ ಪಕ್ಷಗಳೂ ಮಹಿಳಾ ಮೀಸಲಾತಿಗಾಗಿ ಹೋರಾಟ ರೂಪಿಸದೆ ಇರುವುದು ಭಾರತೀಯ ಸಮಾಜವನ್ನು ಇಂದಿಗೂ ನಿಯಂತ್ರಿಸುವ ಊಳಿಗಮಾನ್ಯ ಪಿತೃಪ್ರಧಾನ ವ್ಯವಸ್ಥೆಯ ಜೀವಂತಿಕೆಯ ದ್ಯೋತಕವಾಗಿದೆ. ಮೂಲಭೂತವಾದಿ ಮತಧಾರ್ಮಿಕ ಶಕ್ತಿಗಳಿಂದ ವಸ್ತ್ರ ಸಂಹಿತೆಯ ಬೆದರಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ವಲಯದಲ್ಲೂ ಹೆಣ್ತನಕ್ಕೆ ಅಪಾಯ ಎದುರಾಗುತ್ತಿದೆ. ಗುಜರಾತ್‌ನ ಕಛ್ ಜಿಲ್ಲೆಯಲ್ಲಿರುವ ಸಹಜಾನಂದ್ ಬಾಲಕಿಯರ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿಯರು ಋತುಸ್ರಾವದ ಸಮಯದಲ್ಲಿ ದೇವಾಲಯ ಪ್ರವೇಶಿಸಿದ್ದರು ಎಂಬ ಕಾರಣಕ್ಕೆ ಸಂಸ್ಥೆಯ ಆಡಳಿತ ಮಂಡಲಿ, ಯುವತಿಯರ ಒಳಉಡುಪುಗಳನ್ನು ಪರಿಶೀಲಿಸಿದೆ. ಸ್ವತಂತ್ರ ಭಾರತದ ಅತಿದೊಡ್ಡ ಕಪ್ಪುಚುಕ್ಕೆ ಎನ್ನಬಹುದಾದ ಈ ಘಟನೆಯ ಬಗ್ಗೆ ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವಾಗಲೀ, ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಾಗಲೀ ಚಕಾರ ಎತ್ತದೆ ಇರುವುದು, ಭಾರತೀಯ ಸಮಾಜದ ಪಿತೃಪ್ರಧಾನ ಧೋರಣೆಗೆ ಸಾಕ್ಷಿಯಾಗಿದೆ.

ಇಂತಹ ಒಂದು ವಿಷಮ ಪರಿಸ್ಥಿತಿಯಲ್ಲಿ ನಾವು ಮತ್ತೊಂದು ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ವಾಕ್ ಸ್ವಾತಂತ್ರ್ಯದ ಹರಣ ಅವ್ಯಾಹತವಾಗಿ ನಡೆಯುತ್ತಿರುವ ಸಂದರ್ಭದಲ್ಲಿ ಶೋಷಿತ, ಅವಮಾನಿತ, ಅವಕಾಶವಂಚಿತ, ದೌರ್ಜನ್ಯಕ್ಕೀಡಾದ ಮಹಿಳಾ ಸಂಕುಲ ತನ್ನ ಅಸ್ತಿತ್ವ, ಅಸ್ಮಿತೆ ಮತ್ತು ಹೆಣ್ತನದ ಘನತೆಗಾಗಿ ಹೋರಾಡುತ್ತಿದೆ. ಮತ್ತೊಂದೆಡೆ ರಾಜಕೀಯ ಅಧಿಕಾರ ಮತ್ತು ಸಾಂಸ್ಕೃತಿಕ ಅಧಿಪತ್ಯದ ಅಹಮಿಕೆಯಲ್ಲಿ ಪುರುಷ ಸಮಾಜ ಹೆಣ್ಣಿನ ಘನತೆಯನ್ನೇ ನಿರಾಕರಿಸಿ ತನ್ನ ಪಾರಮ್ಯ ಸಾಧಿಸುತ್ತಿದೆ. ಓರ್ವ ಮಹಿಳೆ ಕೇಂದ್ರ ಹಣಕಾಸು ಸಚಿವೆಯಾಗಿದ್ದರೂ ಮಹಿಳಾ ಕಾರ್ಮಿಕ ಸಮೂಹದ ಬೇಡಿಕೆಗಳು ಈಡೇರದೆ ಇರುವುದು ಪುರುಷ ಪ್ರಧಾನ ಧೋರಣೆಯ ವ್ಯಾಪ್ತಿ ಮತ್ತು ಆಳವನ್ನು ಬಿಂಬಿಸುತ್ತದೆ. ರಾಜಕೀಯ ಅಧಿಕಾರ, ಸಾಂಸ್ಕೃತಿಕ ಪ್ರಾತಿನಿಧ್ಯ ಮತ್ತು ಸಾಮಾಜಿಕ ಅವಕಾಶಗಳಿಂದ ವಂಚಿತರಾಗುತ್ತಿರುವ ಮಹಿಳಾ ಸಮೂಹ ತನ್ನ ಹೆಣ್ತನದ ಘನತೆಗಾಗಿ ಹೋರಾಡುತ್ತಲೇ ಸಮಾಜೋ ಆರ್ಥಿಕ ಹಕ್ಕುಗಳಿಗಾಗಿ ಹೋರಾಡಬೇಕಿದೆ. ಸಂವೇದನೆ ಇಲ್ಲದ ಸಮಾಜದಲ್ಲಿ ಮಾನವೀಯತೆಗಾಗಿ ಹುಡುಕಾಡುತ್ತಲೇ ಮಹಿಳಾ ಹೋರಾಟ ಮುನ್ನಡೆಯಬೇಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)