varthabharthi


ವೈವಿಧ್ಯ

ಹೈದರ್ ಮತ್ತು ಟಿಪ್ಪು

ವಾರ್ತಾ ಭಾರತಿ : 8 Mar, 2020

ಇಂದು ಹಿರಿಯ ಚಿಂತಕ ಪಿ. ಲಂಕೇಶ್ ಜನ್ಮದಿನದ ಪ್ರಯುಕ್ತ ಲಂಕೇಶ್ ಅವರು ಹೈದರಲಿ ಮತ್ತು ಟಿಪ್ಪು ಸುಲ್ತಾನ್ ಬಗ್ಗೆ ಮೇ 12-1993ರಂದು ಬರೆದ ಲೇಖನವನ್ನು ಇಂದಿನ ಸಂದರ್ಭಕ್ಕೆ ಪ್ರಸ್ತುತವೆಂದು ಇಲ್ಲಿ ಪ್ರಕಟಿಸಲಾಗಿದೆ.

 ‘‘ಮಗನೇ, ನಾನು ನನ್ನ ಪೂರ್ವಿಕರಿಂದ ಪಡೆದ ಒಂದು ಸಾಮ್ರಾಜ್ಯವನ್ನು ನಿನಗೆ ಬಿಡುತ್ತಿದ್ದೇನೆ. ಹಿಂಸೆಯಿಂದ ಗಳಿಸಿದ ರಾಜದಂಡ ಯಾವಾಗಲೂ ನಶ್ವರವಾಗಿದ್ದು ನೀನು ನಿನ್ನ ರಾಜ್ಯದ ಆಂತರಿಕ ವ್ಯವಹಾರದಲ್ಲಿ ಎಳ್ಳಷ್ಟು ಹೆದರಬೇಕಾಗಿಲ್ಲ; ಆದರೆ ನಿನ್ನ ದೃಷ್ಟಿಯನ್ನು ಬಹುದೂರದವರೆಗೆ ಒಯ್ಯುವುದು ಅತ್ಯವಶ್ಯಕ. ಔರಂಗಜೇಬನ ಮರಣದಿಂದ ಭಾರತವು ಏಶ್ಯದ ಸಾಮ್ರಾಜ್ಯಗಳಲ್ಲಿ ತನ್ನ ಸ್ಥಾನಮಾನವನ್ನು ಕಳೆದುಕೊಂಡಿದೆ. ಈ ಸುಂದರ ನಾಡು ಅಂತಃಕಲಹದಿಂದ ಹರಿದು ಹಂಚಿ ಹೋಗಿದೆ. ಹೀಗಾಗಿ ಜನ ದೇಶಪ್ರೇಮವನ್ನು ಕಳೆದುಕೊಂಡಿದ್ದಾರೆ. ಹಿಂದೂಗಳು ಶಾಸ್ತ್ರಾನುಭವದಿಂದ ಪಡೆದ ಶಾಂತಿಸೂತ್ರದಿಂದ ಮೃದುವಾಗಿ ತಮ್ಮ ನಾಡನ್ನು ರಕ್ಷಿಸಿಕೊಳ್ಳಲು ಅಸಮರ್ಥರಾಗಿದ್ದಾರೆ. ಆದ್ದರಿಂದ ನಾಡು ಪರಕೀಯರಿಗೆ ತುತ್ತಾಗಿದೆ. ದುರ್ಬಲ ಹಿಂದೂಗಳಿಗಿಂತ ಮಹಮ್ಮದೀಯರು ಹೆಚ್ಚು ಒಗ್ಗಟ್ಟಾಗಿ ಸಾಹಸಿಗಳೂ ಉದ್ಯಮಶೀಲರೂ ಆಗಿದ್ದಾರೆ. ಆದ್ದರಿಂದ ಅವರಿಗೆ ಹಿಂದೂ ದೇಶದ ರಕ್ಷಣೆಯ ಕೀರ್ತಿ ಸಲ್ಲಬೇಕಾಗಿದೆ. ಮಗನೇ ನಿನ್ನ ಪ್ರಯತ್ನಗಳನ್ನೆಲ್ಲ ಒಟ್ಟು ಗೂಡಿಸಿ ಕುರ್‌ಆನ್‌ನ್ನು ವಿಜಯಗೊಳಿಸು. ಯುರೋಪಿಯನ್ನರ ಅಸೂಯೆ ಎಂಬ ದೊಡ್ಡ ಅಡಚಣೆಯನ್ನು ನೀನು ಗೆಲ್ಲಬೇಕಾಗಿದೆ. ಇಂಗ್ಲಿಷರಾದರೂ ಈಗ ಭಾರತದಲ್ಲಿ ಸರ್ವ ಶಕ್ತರಾಗಿದ್ದಾರೆ. ಅವರನ್ನು ಯುದ್ಧದ ಮೂಲಕ ದುರ್ಬಲಗೊಳಿಸುವುದು ಅತ್ಯವಶ್ಯಕ. ಅವರು ಸ್ವಾಧೀನಪಡಿಸಿಕೊಂಡಿರುವ ಭೂಭಾಗದಿಂದ ಅವರ ಕಾಲ್ತೆಗೆಸಲು ಹಿಂದೂಸ್ಥಾನದ ಸಾಧನಸಂಪತ್ತು ಸಾಲದು. ಯುರೋಪಿಯನ್ ರಾಷ್ಟ್ರಗಳು ಒಂದರ ಮೇಲೊಂದು ಬೀಳುವಂತೆ ಮಾಡು. ಭಾರತೀಯ ಸೈನ್ಯಕ್ಕಿಂತಲೂ ಉತ್ತಮ ತರಬೇತಿಯಿಂದ ಕೂಡಿದ ಬ್ರಿಟಿಷ್ ಸೈನ್ಯವನ್ನು ಫ್ರೆಂಚರ ಸಹಾಯದಿಂದ ಮಾತ್ರ ಗೆಲ್ಲಬಲ್ಲೆ. ಯುರೋಪಿಯನ್ನರಿಗೆ ನಿಖರವಾದ ಚಾತುರ್ಯವಿದೆ. ಅವರ ಮೇಲೆ ಯಾವಾಗಲೂ ಅವರ ಅಸ್ತ್ರವನ್ನೇ ಪ್ರಯೋಗಿಸು....ಪರಾಕ್ರಮವು ನಮ್ಮನ್ನು ಸಿಂಹಾಸನಕ್ಕೆ ಏರಿಸಬಲ್ಲದು. ಆದರೆ ಚಕ್ರಾಧಿಪತ್ಯವನ್ನು ಕಾದುಕೊಳ್ಳಲು ಅದು ಸಾಲದು ಎಂಬುದನ್ನು ಎಲ್ಲಕ್ಕಿಂತಲೂ ಮುಖ್ಯವಾಗಿ ನೆನಪಿಡು. ಜನರ ಪುಕ್ಕಲುತನದಿಂದ ನಾವು ಸಿಂಹಾಸನವನ್ನು ಗೆಲ್ಲಬಹುದು. ಆದರೆ ಶೀಘ್ರವಾಗಿ ಅದನ್ನು ಅವರ ಪ್ರೀತಿಗೆ ಒಪ್ಪಿಸದೆ ಹೋದಲ್ಲಿ ಆ ರಾಜ್ಯವು ನಮ್ಮ ಕೈಬಿಟ್ಟು ಹೋಗಬಹುದು’’

ಇದನ್ನು ಹೇಳಿದವನು ಹೈದರಲಿ; ಹೇಳಿದ್ದು ಮಗ ಟಿಪ್ಪುವಿಗೆ ಸುಮಾರು 1780ರಲ್ಲಿ ಹೇಳಿ ಬರೆಸಿದ್ದು ಅದು. ಅದನ್ನು ಮತ್ತೊಮ್ಮೆ ಓದಿ. ಅನಕ್ಷರಸ್ಥನಾಗಿದ್ದ ಹೈದರ್‌ನ ಮಾತುಗಳ ಸತ್ಯ ಮತ್ತು ಜಾಣತನ ಗಮನಿಸಿ.

 ನಾನಾ ಜಾತಿಯ ಜನರ ಭಾರತ; ಅನೇಕ ಜಾತಿಯ ಜನರಿಂದ ಆಳಲ್ಪಟ್ಟು ಅವರ ನಡುವಿನ ಅಸೂಯೆ, ಕಂದಾಚಾರ, ನೀಚತನದಿಂದ ನಾಶವಾಗುತ್ತಿರುವ ದೇಶ, ರಾಜಗಾಂಭೀರ್ಯ, ವಂದಿಮಾಗದರು, ರಾಜ ಮರ್ಯಾದೆ, ತಾವೇ ಪ್ರತ್ಯಕ್ಷ ದೇವತೆಗಳು ಎಂಬ ಭ್ರಮೆ ಇತ್ಯಾದಿಗಳಲ್ಲಿ ಹೂತು ಹೋಗಿರುವ ರಾಜರುಗಳು, ಇವೆಲ್ಲದರ ಪ್ರತೀಕದಂತಿರುವ ಮೈಸೂರು ರಾಜ್ಯ. ನೂರಾರು ವರ್ಷಗಳಿಂದ ಹೈದರ್ ಬರುವವರೆಗೆ ಆಳಿರುವ ಮೈಸೂರಿನ ಒಡೆಯರುಗಳಲ್ಲಿ ದಿಟ್ಟತನ ತೋರಿದವರು ಇಬ್ಬರೇ ಇಬ್ಬರು- 1659ರಲ್ಲಿ ತೀರಿಕೊಂಡ ಕಂಠೀರವ ನರಸಿಂಹರಾಜ ಒಡೆಯರು, 1704ರವರೆಗೆ ಆಳಿದ ಚಿಕ್ಕದೇವರಾಜ- ಮಿಕ್ಕವರೆಲ್ಲ ಬರೀ ಪ್ರತ್ಯಕ್ಷ, ಪರೋಕ್ಷ ‘ದೇವತೆ’ಗಳೇ.

ಇದರಿಂದಾಗಿ ಇಲ್ಲಿ ನೆಪ ಮಾತ್ರಕ್ಕೆ ದೊರೆ. ದಳವಾಯಿಗಳ ದರೋಡೆಕೋರ ಆಡಳಿತದಿಂದಾಗಿ ಲಂಚ, ಮೋಸ, ಕಳ್ಳತನ ಮಿತಿ ಮೀರಿದ್ದವು. ವಿಧವೆ ರಾಣಿ ದೇವಾಜಮ್ಮಣ್ಣಿ; ಆಡಳಿತ ಸೂತ್ರವೆಲ್ಲ ಇದ್ದದ್ದು ದಳವಾಯಿ ದೇವರಾಜಯ್ಯ ಮತ್ತು ಅವನ ತಮ್ಮ ನಂಜರಾಜಯ್ಯನ ಕೈಯಲ್ಲಿ. ಈ ಇಬ್ಬರ ದುರಾಡಳಿತದಲ್ಲಿ ಕೊಲೆ ಸುಲಿಗೆ ಹೇರಳವಾಗಿ ನಡೆಯುತ್ತಿದ್ದವು. ಲೂಟಿ ಮಾಡುವುದಕ್ಕಾಗಿಯೇ ನಂಜರಾಜಯ್ಯ ದಂಡೆತ್ತಿ ಹೋಗುತ್ತಿದ್ದ. ಆದರೆ ಲೂಟಿಯಿಂದ ಬಂದ ಸಂಪತ್ತು ರಾಜ್ಯದ ಬೊಕ್ಕಸಕ್ಕೆ ಸೇರುತ್ತಿರಲಿಲ್ಲ. ದಳವಾಯಿಗೆ ಮತ್ತು ಅವನ ಅನುಯಾಯಿಗಳಿಗೆ ಹೋಗುತ್ತಿತ್ತು. ಇಂತಹ ಒಂದು ‘ಯುದ್ಧ’ 1746ರಲ್ಲಿ ಬೆಂಗಳೂರಿನ ಬಳಿಯ (ಗಡಿ ಪಟ್ಟಣವಾಗಿದ್ದ) ದೇವನಹಳ್ಳಿಯ ಮೇಲೆ ನಡೆಯಿತು. ಅಲ್ಲಿ ನಂಜರಾಜಯ್ಯನಿಗೆ ಸ್ವಲ್ಪ ಕಷ್ಟಕ್ಕಿಟ್ಟು ಕೊಂಡಿತು; ಸುಲಭವಾಗಿ ಕಬಳಿಸಬಹುದು ಎಂದುಕೊಂಡಿದ್ದ ದೇವನಹಳ್ಳಿ ಧೈರ್ಯದಿಂದ ಮೈಸೂರಿನ ಸೈನ್ಯವನ್ನು ಎದುರಿಸಿತು. ಆದರೆ ಈ ಸವಾಲು ಹುಸಿಯಾದುದು, ಮೈಸೂರಿನ ಸೈನ್ಯ ಕೊನೆಗೂ ದೇವನಹಳ್ಳಿಯನ್ನು ಚಿಂದಿ ಮಾಡಿದ್ದು ಇಪ್ಪತ್ತೈದು ವರ್ಷದ ಒಬ್ಬ ಸೈನಿಕನಿಂದ. ಆತ ಹೈದರಲಿ. ಹೈದರ್ ಮೈಸೂರು ಸೈನ್ಯದಲ್ಲಿ ತನ್ನ ಶೌರ್ಯದಿಂದಲೇ ಮುಂದೆ ಬಂದಿದ್ದ. ತನ್ನ ಮಾವನ ಮೂಲಕ ಸೈನ್ಯಕ್ಕೆ ಸೇರಿದ್ದ ಹೈದರ್ ಆ ವಯಸ್ಸಿನಲ್ಲಿಯೇ ‘ವಿದೇಶಿ ತರಬೇತಿ’ಯ ಬಗ್ಗೆ ಹಿರಿಯ ಸೇನಾಧಿಕಾರಿಗೆ ಸಲಹೆ ಸೂಚನೆ ನೀಡಬಲ್ಲವನಾಗಿದ್ದ. ಆತ ಬೆಳೆಯುತ್ತಿದ್ದಾಗಲೇ ಮೈಸೂರಿನಲ್ಲಿ ದೊರೆ ಇಲ್ಲದೆ, ದಳವಾಯಿಗಳ ಅವಾಂತರದ ಲಾಭ ಪಡೆದು ಅನೇಕ ಪಾಳೆಯಗಾರರು ದಂಗೆ ಎದ್ದು ಮೈಸೂರಿನಿಂದ ಕಳಚಿಕೊಳ್ಳತೊಡಗಿದರು. ಆಗ ಹೈದರ್‌ನನ್ನು ಈ ದಂಗೆೆಕೋರರನ್ನು ಸದೆಬಡಿಯಲು ನೇಮಿಸಲಾಯಿತು. ಹೈದರ್ ಮಿಂಚಿನ ವೇಗದಲ್ಲಿ ಈ ಪುಂಡರನ್ನು ಹತ್ತಿಕ್ಕಿದ. ಅವರಿಂದ ಎತ್ತಿದ ಹಣದಲ್ಲಿ ಸೈನ್ಯ ಬಲಪಡಿಸಿದ. ಮೊತ್ತ ಮೊದಲ ಬಾರಿಗೆ ಭಾರತದ ಸೈನಿಕನೊಬ್ಬ ಫ್ರೆಂಚ್ ಯುದ್ಧ ತಂತ್ರಗಳನು,್ನ ಶಸ್ತ್ರಾಸ್ತ್ರಗಳನ್ನು ಅಭ್ಯಸಿಸಿ ಅನುಷ್ಠಾನಕ್ಕೆ ತರ ತೊಡಗಿದ್ದ. ಹೈದರ್‌ನನ್ನು ದಿಂಡಿಗಲ್ ಪ್ರದೇಶದ ಆಡಳಿತಗಾರನನ್ನಾಗಿ ನೇಮಿಸಲಾಯಿತು.

ಆದರೆ ಮೈಸೂರಿನ ಅರಮನೆಯ ಸ್ಥಿತಿಗತಿ ಸರಿ ಇರಲಿಲ್ಲ. ದಳವಾಯಿಯ ಭ್ರಷ್ಟತೆ, ದುಷ್ಟತನ ಹೆಚ್ಚಿತ್ತು. ಅವನನ್ನು ಪ್ರಶ್ನಿಸುವ ರಾಜನಿರಲಿಲ್ಲ. ರಾಜ್ಯದ ಖಜಾನೆ ಬರಿದಾಗಿತ್ತು. ಜನ ಬೇಸತ್ತಿದ್ದರು. ಅನೇಕ ತಿಂಗಳಿಂದ ಸೈನಿಕರಿಗೆ ಸಂಬಳ ಸಂದಾಯವಾಗದೆ ಇಡೀ ಸೈನ್ಯ ದಂಗೆಯೇಳುವ ಸಂಚಿನಲ್ಲಿತ್ತು. ಇದನ್ನೆಲ್ಲ ನೋಡಿ ಭಯಗೊಂಡ ದಳವಾಯಿ ದೇವರಾಜಯ್ಯ ಮತ್ತು ಸರ್ವಾಧಿಕಾರಿ ನಂಜರಾಜಯ್ಯ ಹೈದರ್‌ಗೆ ಕೂಡಲೇ ಬರಲು ಹೇಳಿಕಳಿಸಿದರು. ಮೈಸೂರಿಗೆ ಬಂದ ಹೈದರ್ ಕೂಡಲೇ ಸೈನಿಕರಿಗೆ ವೇತನ ಕೊಟ್ಟ; ದೇವರಾಜಯ್ಯ ಮತ್ತು ನಂಜರಾಜಯ್ಯ ಇಬ್ಬರನ್ನೂ ಕೆಳಗಿಳಿಸಿ ಆಡಳಿತ ಸೂತ್ರ ಹಿಡಿದುಕೊಂಡ-ಅದು 1762. ಹೈದರ್ ಹೀಗೆ ನಾಯಕನಾದ.

 ಅಲ್ಲಿಂದ ಆತ ಮಾಡಿದ್ದು ಕುತೂಹಲಕರವಾಗಿದೆ. ಅದನ್ನು ಎರಡು ಮೂರು ಅಂಶಗಳಾಗಿ ಮಾಡಿ ಸಂಗ್ರಹಿಸಿ ಹೇಳುತ್ತೇನೆ. ಬ್ರಿಟಿಷರು ವ್ಯಾಪಾರಕ್ಕೆಂದು ಭಾರತಕ್ಕೆ ಬಂದವರು ನೆಲ ನುಂಗ ತೊಡಗಿದ್ದರು; ಅವರ ಯುದ್ಧ ತಂತ್ರ ಪ್ರಚಂಡ ರೀತಿಯದ್ದಾಗಿತ್ತು. ಇದನ್ನು ಗಮನಿಸಿದ ಹೈದರ್ ಫ್ರೆಂಚ್ ಯುದ್ಧತಂತ್ರಜ್ಞರನ್ನು ಕರೆಸಿ ತನ್ನ ಸೈನ್ಯಕ್ಕೆ ತರಬೇತಿ ನೀಡಿದ. ಟಿಪ್ಪು ಹೈದರ್‌ನ ನೆರಳಲ್ಲಿ, ಶ್ರೀಮಂತಿಕೆಯಲ್ಲಿ ಬೆಳೆದವನು. ಆದರೆ ಹೈದರ್‌ನ ಜನಸಂಪರ್ಕ, ಜೀವನಸಂಪರ್ಕ ಇಲ್ಲದವನು; ಸಿಟ್ಟು, ಅಸಹನೆ ಅವನ ವ್ಯಕ್ತಿತ್ವದ ಸ್ಥಾಯೀ ಗುಣಗಳು. ಟಿಪ್ಪುವಿಗೆ ಶಿಕ್ಷಣವಿದ್ದರೂ ನಿರಕ್ಷರಕುಕ್ಷಿ ಹೈದರ್‌ನಲ್ಲಿ ಇರುವ ವ್ಯವಹಾರ ಜ್ಞಾನ ಇರಲ್ಲಿಲ್ಲ.

ಹೈದರ್‌ನ ಗೆಲುವು ದಿಟ್ಟ ಸಾಮಾನ್ಯನ ಗೆಲುವು; ಟಿಪ್ಪುವಿನ ಸೋಲು ದೊರೆಯೊಬ್ಬನ ಸೋಲು.

 ಟಿಪ್ಪು ಹೈದರ್‌ನ ನೆರಳಲ್ಲಿ, ಶ್ರೀಮಂತಿಕೆಯಲ್ಲಿ ಬೆಳೆದವನು. ಆದರೆ ಹೈದರ್‌ನ ಜನಸಂಪರ್ಕ, ಜೀವನಸಂಪರ್ಕ ಇಲ್ಲದವನು; ಸಿಟ್ಟು, ಅಸಹನೆ ಅವನ ವ್ಯಕ್ತಿತ್ವದ ಸ್ಥಾಯೀ ಗುಣಗಳು. ಟಿಪ್ಪುವಿಗೆ ಶಿಕ್ಷಣವಿದ್ದರೂ ನಿರಕ್ಷರಕುಕ್ಷಿ ಹೈದರ್‌ನಲ್ಲಿ ಇರುವ ವ್ಯವಹಾರ ಜ್ಞಾನ ಇರಲ್ಲಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)