varthabharthi


ವೈವಿಧ್ಯ

ವಿಕೃತತೆಯೆಡೆಗೆ ದಲಿತರ ಮೇಲಿನ ದೌರ್ಜನ್ಯ

ವಾರ್ತಾ ಭಾರತಿ : 9 Mar, 2020
ರಘೋತ್ತಮ ಹೊ.ಬ., ಮೈಸೂರು

ವಾಸ್ತವವೆಂದರೆ ಹಿಂದೆ ದೌರ್ಜನ್ಯ ದಲಿತರ ಮೇಲೆ ಸಂಪ್ರದಾಯ ಎಂಬಂತೆ ವಾಸ್ತವ ಪರಿಸ್ಥಿತಿ ಎಂಬಂತೆ ನಡೆಯಲ್ಪಡುತ್ತಿತ್ತು. ಅರಿವಿನ ಕೊರತೆಯೂ ಅದರ ಹಿಂದಿತ್ತು. ಆದರೆ ಈಗ ಅರಿವು ಹೆಚ್ಚಾಗಿದೆ. ಅದರ ಜೊತೆ ವಿಕೃತಿಯೂ? ನಿಜಕ್ಕೂ ಇದು ಅಪಾಯಕಾರಿ ಬೆಳವಣಿಗೆ. ಹಾಗೆಯೇ ಸಾಧುವಲ್ಲದ ನಡೆ ಕೂಡ. ಯಾಕೆಂದರೆ ಯಾವುದೇ ಬಗೆಯ ದೌರ್ಜನ್ಯವನ್ನು ನಾವು ಸದಾ ಮಾಡುತ್ತೇವೆ, ಅದನ್ನು ಸದಾ ಜೀವಂತ ಇಡುತ್ತೇವೆ ಎನ್ನುವುದು ಸಾಧ್ಯವಿಲ್ಲದ ಮಾತು.

ಲಿತರ ಮೇಲೆ ದೌರ್ಜನ್ಯಗಳು ಹೊಸ ಹೊಸ ರೂಪದಲ್ಲಿ ಮುಂದುವರಿದಿವೆ. ತಾಜಾ ಉದಾಹರಣೆಯೊಂದರಲ್ಲಿ ಸಂಸತ್ತಿನಲ್ಲಿಯೇ ಸ್ವತಃ ಮಹಿಳಾ ಸದಸ್ಯರೊಬ್ಬರು ತನ್ನ ಮೇಲೆ ತಾನು ದಲಿತೆ ಎಂಬ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಸ್ಪೀಕರ್‌ಗೆ ದೂರು ನೀಡಿದ್ದಾರೆ. ನಮ್ಮ ರಾಜ್ಯದ ಹಾಸನ ಜಿಲ್ಲೆಯಲ್ಲೂ ಹಾಲಿ ಜಿ.ಪಂ. ಅಧ್ಯಕ್ಷೆ ತಾನು ದಲಿತ ಮಹಿಳೆ ಎಂಬ ಕಾರಣಕ್ಕೆ ಉಳಿದ ಸದಸ್ಯರು ಜಿ.ಪಂ. ಸಾಮಾನ್ಯ ಸಭೆಗಳಲ್ಲಿ ಭಾಗವಹಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಂದರೆ ದಲಿತ ಜನಪ್ರತಿನಿಧಿಗಳ ಮೇಲೆಯೇ ದೌರ್ಜನ್ಯ ಎಗ್ಗಿಲ್ಲದೆ ಮುಂದುವರಿದಿದೆ. ಇನ್ನು ಸಾಮಾನ್ಯ ದಲಿತರ ಪಾಡು? ಬಹುಶಃ ಅದನ್ನು ಹೇಳುವುದೇ ಬೇಡ. ಈ ನಡುವೆ ಸುಪ್ರೀಂ ಕೋರ್ಟ್ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ತೀರ್ಪು ನೀಡಿದೆ. ಆಳುವ ಸರಕಾರಗಳ ಚಿತಾವಣೆಯಿಲ್ಲದೆ ಕೋರ್ಟ್ ಇಂತಹ ತೀರ್ಪು ನೀಡುವುದಿಲ್ಲ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಯಾಕೆಂದರೆ ಮೀಸಲಾತಿ ಬಗೆಗಿನ ಈ ಪರಿಯ ತೀರ್ಪು ಬಂದು ಎರಡು ತಿಂಗಳು ಕಳೆಯುತ್ತಿದ್ದರೂ ಸರಕಾರ ಅತ್ತ ಗಮನಹರಿಸುತ್ತಿಲ್ಲವೆಂದರೆ ಮೇಲ್ಮನವಿ ಸಲ್ಲಿಸುವುದು, ಸಂವಿಧಾನಕ್ಕೆ ತಿದ್ದುಪಡಿ ತರುವುದು ಇಂತಹ ಕ್ರಮಗಳಿಗೆ ಮುಂದಾಗುತ್ತಿಲ್ಲವೆಂದರೆ ಸರಕಾರದ ಈ ಬಗೆಗಿನ ನಿಲುವುಗಳ ಬಗ್ಗೆ ಯಾರಿಗಾದರೂ ಅನುಮಾನ ಬರದಿರಲು ಸಾಧ್ಯವೇ ಇಲ್ಲ. ಆ ಮಟ್ಟಿಗೆ ದಲಿತರ ಸಮಸ್ಯೆಗಳು ಉತ್ತರವಿಲ್ಲದೆ ದನಿಯೂ ಇಲ್ಲದೆ ಮೂಲೆಗೆ ತಳ್ಳಲ್ಪಡುತ್ತಿದೆಯಾ? ಚಿಂತಿಸಬೇಕಾದ ವಿಷಯವಿದು.

ಈ ನಡುವೆ ಭೀಕರ ಘಟನೆಯೊಂದರಲ್ಲಿ ರಾಜಸ್ಥಾನದ ನಾಗೋರ್ ಜಿಲ್ಲೆಯ ಆಟೋಮೊಬೈಲ್ ಸರ್ವೀಸ್ ಸೆಂಟರ್ ಒಂದರಲ್ಲಿ ಇಬ್ಬರು ದಲಿತ ಯುವಕರ ಮೇಲೆ ಅವರು ಗಲ್ಲಾ ಪೆಟ್ಟಿಗೆಯಲ್ಲಿ ಹಣ ಕದ್ದರು ಎಂದು ಆರೋಪ ಹೊರಿಸಿ ವಿಕೃತವಾಗಿ ಹಲ್ಲೆ ಮಾಡಲಾಗಿದೆ. ಯಾವ ಪರಿ ಎಂದರೆ ಅವರ ಮೇಲೆ ಹಲ್ಲೆ ಮಾಡಿರುವ 7 ಮಂದಿ ದೌರ್ಜನ್ಯಕೋರರ ಗುಂಪು ಸ್ಕ್ರೂಡ್ರೈವರ್ ಒಂದಕ್ಕೆ ಬಟ್ಟೆ ಸುತ್ತಿ ಅದನ್ನು ಪೆಟ್ರೋಲ್‌ನಲ್ಲಿ ಅದ್ದಿ ಅದಕ್ಕೆ ಬೆಂಕಿ ಹಚ್ಚಿ ಆ ಯುವಕರ ಮರ್ಮಾಂಗಗಳನ್ನು ಸುಟ್ಟಿದ್ದಾರೆ ಮತ್ತು ಮರ್ಮಾಂಗಗಳಿಗೆ ಚುಚ್ಚಿದ್ದಾರೆ. ಇನ್ನೂ ಭೀಕರತೆಯೆಂದರೆ ಈ ಸಂಪೂರ್ಣ ಘಟನೆಯನ್ನು ಆರೋಪಿಗಳು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವಿಕೃತತೆ ಮೆರೆದಿರುವುದು. ಪ್ರಶ್ನೆ ಏನೆಂದರೆ ಆ ಇಬ್ಬರು ದಲಿತ ಯುವಕರ ಮೇಲೆ ಈ ಪರಿಯ ಭೀಕರ ದೌರ್ಜನ್ಯ ಎಸಗಲು ಕಾರಣವೇನು? ಅಕಸ್ಮಾತ್ ಆ ಯುವಕರು ಕಳ್ಳತನ ಮಾಡಿಯೇ ಇದ್ದರು ಎಂದರೆ ಇದಕ್ಕೆ ಪೊಲೀಸ್ ವ್ಯವಸ್ಥೆ ಇರಲಿಲ್ಲವೇ? ನ್ಯಾಯಾಲಯ ಇರಲಿಲ್ಲವೇ? ಕಾನೂನು ಕೈಗೆತ್ತಿಕೊಳ್ಳಲು ಇವರು ಯಾರು?

ವಾಸ್ತವವೆಂದರೆ ದಲಿತರ ಮೇಲೆ ಇಂತಹ ವಿಕೃತ ನಡವಳಿಕೆ ಇದೀಗ ಅಪಾಯಕಾರಿ ಅಸಹನೆಯ ಮಟ್ಟ ತಲುಪಿದೆ. ಯಾವ ಪರಿ ಎಂದರೆ ಮೊನ್ನೆ ನಮ್ಮ ರಾಜ್ಯದ ಮೈಸೂರು ಜಿಲ್ಲೆಯ ಕೆ.ಆರ್. ನಗರದ ಸಾಲಿಗ್ರಾಮ ಎಂಬ ಗ್ರಾಮದಲ್ಲಿ ದೌರ್ಜನ್ಯ ನಡೆದಾಗ ಅಲ್ಲಿಯ ಜನಪ್ರತಿನಿಧಿ ಒಂಚೂರು ಸ್ವನಿಯಂತ್ರಣದ ಇತಿ ಮಿತಿ ಇಲ್ಲದೆ ದಲಿತರ ಮೇಲೆ ದೌರ್ಜನ್ಯ ಅದು ನಿಮ್ಮ ಕರ್ಮ ಎಂಬಂತೆ ಹೇಳಿಕೆ ನೀಡುತ್ತಾರೆಂದರೆ!

ಇನ್ನು ಈಚೆಗೆ ಕೆಲವೊಂದು ಫೇಸ್‌ಬುಕ್ ಗುಂಪುಗಳಲ್ಲಿ ‘‘ಜೈಭೀಮ್’’ ಎಂದು ಗೌರವಪೂರ್ವಕವಾಗಿ ಸಂಬೋಧಿಸುವ ದಲಿತರನ್ನು ‘ಛೋಟ ಭೀಮ್’ಗಳು ಎಂದು ಅಪಹಾಸ್ಯ ಮಾಡುವ, ಜೈಭೀಮ್ ಯೂತ್ಸ್ ಹೆಸರಲ್ಲೇ ಗುಂಪುಗಳನ್ನು ರಚಿಸಿ ಅಲ್ಲಿ ದಲಿತರನ್ನು, ಅಂಬೇಡ್ಕರರನ್ನು ಅಪಮಾನಿಸುವ ಪರಿಪಾಠ ಎಗ್ಗಿಲ್ಲದೆ ನಡೆದಿದೆ. ಅಂದಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ದಲಿತರನ್ನು, ಅಂಬೇಡ್ಕರ್‌ರನ್ನು ಈ ಪರಿ ಅಪಮಾನಿಸುವ ಫೇಸ್‌ಬುಕ್ ಪ್ರೊಫೈಲ್‌ಗಳ ಬಹುತೇಕ ಹೆಸರುಗಳು ಹಿಂದುತ್ವವಾದಿ ಹೆಸರುಗಳ ರೂಪದಲ್ಲೇ ಇವೆ! ಹಾಗಿದ್ದರೆ ದಲಿತರು ಹಿಂದೂಗಳಲ್ಲವಾ? ಅವರು ಜೈಭೀಮ್ ಎಂದು ಅಂಬೇಡ್ಕರ್‌ರನ್ನು ಮತ್ತು ಅವರ ಸಿದ್ಧಾಂತವನ್ನು ಎತ್ತಿಹಿಡಿಯುವುದು ತಪ್ಪಾ?

ಮುಂದುವರಿದು ಮತ್ತೊಂದು ಘಟನೆಯಲ್ಲಿ ನನಗೆ ಪರಿಚಿತ ದಲಿತ ಪೋಷಕರೊಬ್ಬರ ಮಗ ಪ್ರಥಮ ಪಿಯುಸಿಯಲ್ಲಿ ಫೇಲ್ ಆಗಿದ್ದ. ವಿಚಾರಿಸಲು ಹೋದರೆ ಅವನ ಜೊತೆ ಸುಮಾರು ಎಂಟಕ್ಕೂ ಹೆಚ್ಚು ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ ಅಥವಾ ಫೇಲ್ ಮಾಡಲಾಗಿದೆ. ಅವರೆಲ್ಲರೂ ದಲಿತ ವಿದ್ಯಾರ್ಥಿಗಳೇ ಎಂಬುದು ಇಲ್ಲಿ ಗಮನಿಸತಕ್ಕ ವಿಚಾರ. ಆಶ್ಚರ್ಯವೆಂದರೆ ಅವರು ಓದುತ್ತಿದ್ದ ಕಾಲೇಜು ಹಿಂದುತ್ವ ಬೋಧಿಸುವ ಕಾಲೇಜು, ಹಿಂದೂ ನಾವೆಲ್ಲ ಒಂದು ಎಂದು ಸದಾ ಹೇಳುವ ಕಾಲೇಜು.! ಪ್ರಶ್ನೆ ಎಂದರೆ ದಲಿತರು ಹಿಂದೂಗಳಲ್ಲವೇ?

ವಾಸ್ತವವೆಂದರೆ ಹಿಂದೆ ದೌರ್ಜನ್ಯ ದಲಿತರ ಮೇಲೆ ಸಂಪ್ರದಾಯ ಎಂಬಂತೆ ವಾಸ್ತವ ಪರಿಸ್ಥಿತಿ ಎಂಬಂತೆ ನಡೆಯಲ್ಪಡುತ್ತಿತ್ತು. ಅರಿವಿನ ಕೊರತೆಯೂ ಅದರ ಹಿಂದಿತ್ತು. ಆದರೆ ಈಗ ಅರಿವು ಹೆಚ್ಚಾಗಿದೆ. ಅದರ ಜೊತೆ ವಿಕೃತಿಯೂ? ನಿಜಕ್ಕೂ ಇದು ಅಪಾಯಕಾರಿ ಬೆಳವಣಿಗೆ. ಹಾಗೆಯೇ ಸಾಧುವಲ್ಲದ ನಡೆ ಕೂಡ. ಯಾಕೆಂದರೆ ಯಾವುದೇ ಬಗೆಯ ದೌರ್ಜನ್ಯವನ್ನು ನಾವು ಸದಾ ಮಾಡುತ್ತೇವೆ, ಅದನ್ನು ಸದಾ ಜೀವಂತ ಇಡುತ್ತೇವೆ ಎನ್ನುವುದು ಸಾಧ್ಯವಿಲ್ಲದ ಮಾತು. ಮನುಷ್ಯ ವಿಕಾಸ ಆದಂಗೆ ಜ್ಞಾನವು ಕೂಡ ವಿಕಾಸವಾಗುತ್ತದೆ. ಆ ಜ್ಞಾನದ ಜೊತೆಗೆ ನೊಂದವರು ಕೂಡ ಬೆಳೆದಿರುತ್ತಾರೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಹಾಗೆಯೇ ಈ ದೌರ್ಜನ್ಯವನ್ನು ನಾವು ಅಧಿಕಾರದಿಂದ ಮುಂದುವರಿಸುತ್ತೇವೆ ಎಂಬುದು ಕೂಡ ಸಾಧ್ಯವಿಲ್ಲದ ಮಾತು. ಯಾಕೆಂದರೆ ಯಾವ ಸಂವಿಧಾನ ಒಬ್ಬರಿಗೆ ಉತ್ಕೃಷ್ಟ ರಾಜಕೀಯ ಅಧಿಕಾರ ಒದಗಿಸುತ್ತದೆಯೋ ಅದೇ ಸಂವಿಧಾನ ಮತ್ತೊಬ್ಬರಿಗೆ ವಿಶೇಷವಾಗಿ ಶೋಷಿತ ವರ್ಗದ ಜನರಿಗೆ ರಕ್ಷಣಾತ್ಮಕ ಅಂಶಗಳನ್ನು ಒದಗಿಸುತ್ತದೆ. ಉದಾ: ಎಸ್ಸಿ /ಎಸ್ಟಿ ದೌರ್ಜನ್ಯ ತಡೆ ಕಾಯ್ದೆ. ಹೀಗಿರುವಾಗ ಒಬ್ಬರ ಮೇಲೆ ಸದಾ ದೌರ್ಜನ್ಯ ಎಸಗುತ್ತೇವೆ, ಅವರನ್ನು ತುಳಿದು ನಾವು ಮುಂದೆ ಬರುತ್ತೇವೆ ಎಂಬುದು ಕೂಡ ಸಾಧ್ಯವಿಲ್ಲದ ಮಾತು.

ಬದಲಿಗೆ ಭಾರತೀಯರಾದ ನಾವು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಬದುಕಿದರೆ, ಒಬ್ಬರ ಹಕ್ಕು ಗೌರವಗಳನ್ನು ಮತ್ತೊಬ್ಬರು ಗೌರವಿಸಿ ಬದುಕಿದರೆ? ಖಂಡಿತ ಅಲ್ಲಿ ಬದಲಾವಣೆಯ ನವ ಮನ್ವಂತರ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ದಲಿತರ ಹಕ್ಕು ಗೌರವಗಳು ರಕ್ಷಿಸಲ್ಪಡಲಿ. ಅವರ ಮೇಲಿನ ದೌರ್ಜನ್ಯ ಕಡಿಮೆಯಾಗಲಿ ಎಂಬುದೇ ಸದ್ಯದ ಕಳಕಳಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)