varthabharthi


ವೈವಿಧ್ಯ

ಒಕ್ಕಲಿಲ್ಲದ ಗ್ರಾಮದ ಒಂಟಿ ನಿವಾಸಿ

ವಾರ್ತಾ ಭಾರತಿ : 9 Mar, 2020
ಕವಿತಾ ಮುರಲೀಧರನ್ ಅನು: ರಾಜೇಂದ್ರ ಪೈ

ಎಂತೆಂತಹ ದುರಂತಗಳು ನಮ್ಮೆದುರೇ ಘಟಿಸಿದವು. ನೆರೆ ಬಂತು. ಭೂಮಿ ಚಲಿಸಿತು. ಸೇತುವೆಗಳು ಕೊಚ್ಚಿಹೋದವು. ಅರಣ್ಯ ನಾಶ, ಪ್ರಕೃತಿಯ ಆಗುಹೋಗುಗಳಲ್ಲಿ ಮಾನವನ ಹಸ್ತಕ್ಷೇಪ ಇತ್ಯಾದಿಗಳೇ ಈ ವಿನಾಶಕ್ಕೆ ಹೇತು ಎಂದು ವಿಜ್ಞಾನಿಗಳು ಪದೇ ಪದೇ ಎಚ್ಚರಿಸಿದ್ದರು. ನಾವು ಕೇಳಲಿಲ್ಲ. ಇಂತಹುದೇ ಹಿನ್ನೆಲೆಯಲ್ಲಿ ಕವಿತಾ ಮುರಲೀಧರನ್ ಬರೆದಿರುವ The old man and the lonely village ಲೇಖನವು ruralindia-online.orgಯಲ್ಲಿ 2019ರಲ್ಲಿ ಪ್ರಕಟವಾಗಿದೆ. (ಫೋಟೋ: ಸತೀಶ್ ಮತ್ತು ಕವಿತಾ ಮುರಲೀಧರನ್) ಲೇಖನ ಪ್ರಕಟವಾದ ನಂತರ ಕಂದಸ್ವಾಮಿಯ ಬಳಗ ಮತ್ತೆ ಮೀನಾಕ್ಷಿಪುರಂಗೆ ಮರಳಿತೇ? ಜಿಲ್ಲಾಧಿಕಾರಿ ಕೊಟ್ಟ ಮಾತನ್ನು ಉಳಿಸಿಕೊಂಡರೇ? ಇವೆಲ್ಲ ನಮಗೆ ತಿಳಿದಿಲ್ಲ. ಇವೆಲ್ಲವನ್ನು ತಿಳಿಯುವುದಕ್ಕಿಂತ ಈ ಲೇಖನವು ನೀಡುವ ಎಚ್ಚರಿಕೆಯನ್ನು ನಾವು ಗಮನಿಸಬೇಕಾಗಿದೆ. ಬುಲ್ಡೋಜರುಗಳಿಗೆ ಕೆಲಸ ಕೊಡುವುದನ್ನು ಕಡಿಮೆ ಮಾಡದಿದ್ದರೆ ಭವಿಷ್ಯದಲ್ಲಿ ನಮ್ಮ ಮಕ್ಕಳು ಕಂದಸ್ವಾಮಿಯ ಸಂಕಟವನ್ನು ಅನುಭವಿಸಬೇಕಾಗುತ್ತದೆ. ಈ ವ್ಯಥೆಯಿಂದಾದರೂ ನಾವು ಬದಲಾಗಬೇಕಾಗುತ್ತದೆ.

ಹೆಸರು: ಕಂದಸ್ವಾಮಿ

ವಯಸ್ಸು: 71 ವರ್ಷ

ವಿಳಾಸ: ಮೀನಾಕ್ಷಿಪುರಂ ಗ್ರಾಮ

ತೂತುಕುಡಿ ಜಿಲ್ಲೆ

ತಮಿಳುನಾಡು.

ವಿಳಾಸದಲ್ಲಿ ಮನೆ ನಂಬ್ರವಾಗಲೀ ರಸ್ತೆಯ ಹೆಸರನ್ನಾಗಲೀ ತಿಳಿಸದೆ ನೇರವಾಗಿ ಗ್ರಾಮದ ಹೆಸರನ್ನಷ್ಟೇ ನಮೂದಿಸಿರುವುದಕ್ಕೆ ಅಚ್ಚರಿಪಡಬೇಡಿ. ಎಂಟೇ ಎಂಟು ವರ್ಷಗಳ ಹಿಂದೆ ಗ್ರಾಮದ ಖಾಯಂ ವಾಸಿಗಳ ಸಂಖ್ಯೆ ಸುಮಾರು ಸಾವಿರದಿನ್ನೂರು. ಆದರೆ 2019 ರಲ್ಲಿ ಗ್ರಾಮದಲ್ಲಿರುವ ಏಕೈಕ ನಿವಾಸಿ ಶ್ರೀ ಕಂದಸ್ವಾಮಿ! ಕ್ಷಾಮದ ಕಾರಣ ಗ್ರಾಮಸ್ಥರೆಲ್ಲ ಗ್ರಾಮವನ್ನು ತೊರೆದರು. ಆದರೆ ಕಂದಸ್ವಾಮಿ ಉಳಿದುಕೊಂಡ ಹೆಚ್ಚೂಕಮ್ಮಿ ಐವತ್ತು ಕುಟುಂಬಗಳು ಗುಳೇಹೋಗಿ ಗ್ರಾಮವೇ ನಿರ್ಜನವಾಗಬೇಕಾದರೆ ಅದೆಂತಹ ಬರ ಕಾಡಿರಬೇಡ?

 ತನ್ನ ಮನೆಮಂದಿಯೂ ಇತರರಂತೆ ಗ್ರಾಮ ತೊರೆಯುವ ನಿರ್ಧಾರ ಮಾಡಿದಾಗ ಕಂದಸ್ವಾಮಿ ಸ್ಪಷ್ಟವಾಗಿ ಹೇಳಿಬಿಟ್ಟ: ‘‘ಇಪ್ಪತ್ತು ವರ್ಷಗಳ ಹಿಂದೆ ನನ್ನ ಧರ್ಮಪತ್ನಿ ವೀರಲಕ್ಷ್ಮಿಯು ಯಾವ ಮನೆಯಲ್ಲಿ ಕೊನೆಯ ಉಸಿರು ಎಳೆದಿರುವಳೋ ಅಲ್ಲಿಯೇ ನನ್ನ ಅಂತ್ಯವೂ ಆಗಲಿ. ನಾನು ಎಲ್ಲಿಗೂ ಬರುವುದಿಲ್ಲ...’’ ಸಂಬಂಧಿಕರ ಮಾತುಗಳಿಗೂ ಕಂದಸ್ವಾಮಿ ಕರಗಲಿಲ್ಲ. ಕಡೆಗೆ ಉಳಿದ ಎರಡನೆಯ ಮಗನೂ ಐದು ವರ್ಷಗಳ ಹಿಂದೆ ವಿವಾಹ ಮಾಡಿಕೊಂಡ. ಸಹಜವಾಗಿ ಬರದಿಂದ ನರಳುತ್ತಿರುವ ಹಳ್ಳಿಗೆ ಮದುಮಗಳನ್ನು ಕರೆತರಲಾಗದೇ ಅವನೂ ಗ್ರಾಮ ತೊರೆದ. ಕಂದಸ್ವಾಮಿ ಪೂರಾ ಒಬ್ಬಂಟಿ ಆದದ್ದು ಹೀಗೆ.

ಮೂರೇ ಮೂರು ಕಿಲೋಮೀಟರು ದೂರದ ಸೆಕ್ಕರಕ್ಕುಡಿ ಗ್ರಾಮದಲ್ಲಿಯೂ ನೀರಿನ ಅಭಾವವಿದೆ. ಆದರೆ ಇಲ್ಲಿಯಷ್ಟಲ್ಲ. ಸ್ವಲ್ಪ ಜನ ಅಲ್ಲಿ ನೆಲೆಸಿದ್ದಾರೆ. ನೀವೇನಾದರೂ ಸೆಕ್ಕರಕ್ಕುಡಿ ತಲುಪಿ ಮೀನಾಕ್ಷಿಪುರಂ ರಸ್ತೆ ಯಾವುದೆಂದು ಕೇಳಿದರೆ ಅಲ್ಲಿನ ಜನ ಆಶ್ಚರ್ಯದಿಂದ ನಿಮ್ಮನ್ನೇ ನೋಡುತ್ತಾರೆ. ‘‘ನೀವು ದೇವಸ್ಥಾನಕ್ಕೆ ಹೋಗುವುದಾ.. ಅದು ಬಿಟ್ರೆ ಅಲ್ಲಿ ಬೇರೇನಿದೆ ನಿಮಗೆ?’’ ಎಂದು ಮರುಪ್ರಶ್ನಿಸುತ್ತಾರೆ.

ಇಲ್ಲಿ ಕ್ಷೀಣವಾಗಿ ಹರಿಯುತ್ತಿದ್ದ ನದಿಯ ನೀರನ್ನು ಕೈಗಾರಿಕೆಗಳು ನುಂಗಿಬಿಟ್ಟಿವೆ.

‘‘ಹಿಂದೆ ನಾನು ಐದೆಕರೆ ಕೃಷಿ ಜಮೀನಿನ ಒಡೆಯನಾಗಿದ್ದೆ. ನಾನು ಜೋಳ ಮತ್ತು ಹತ್ತಿ ಬೆಳೆಯುತ್ತಿದ್ದೆ. ಮಕ್ಕಳ ಶಿಕ್ಷಣ ಹಾಗೂ ಮದುವೆಯ ಖರ್ಚಿಗೆ ಹಣ ಸಾಲದೇ ಈ ಕೃಷಿ ಜಮೀನುಗಳನ್ನು ಮಾರಾಟ ಮಾಡಬೇಕಾಗಿ ಬಂತು. ಜಮೀನು ಮಾರಿ ಬಂದ ದುಡ್ಡಿನಲ್ಲಿ ನಾಲ್ವರು ಮಕ್ಕಳನ್ನು ಓದಿಸಿದೆ. ಮದುವೆ ಮಾಡಿದೆ. ಆದರೆ ಅವರು ನಂತರ ಇಲ್ಲಿರಲು ಇಚ್ಛಿಸಲಿಲ್ಲ.’’

ಹಿಂದೆ ಇಲ್ಲಿಯ ನಿವಾಸಿಯಾಗಿ ರಾಜಕೀಯ ಪಕ್ಷವೊಂದರ ಸಕ್ರಿಯ ಕಾರ್ಯಕರ್ತನಾಗಿ ಶ್ರಮಿಸಿದ್ದ ಪೆರುಮಾಳ್‌ಗೆ ಇದೀಗ 62 ವರ್ಷ ಪ್ರಾಯ. ಈತ ತನ್ನ ಬರಪೀಡಿತ, ನೀರಿಲ್ಲದ ಗ್ರಾಮವನ್ನು ತೊರೆದು ದೂರದ ಪಟ್ಟಣವನ್ನು ಸೇರಿದ್ದಾನೆ.

 ಮೀನಾಕ್ಷಿಪುರಂನಲ್ಲಿ ಎರಡು ದೇವಸ್ಥಾನಗಳಿವೆ. ಬರದಿಂದ ಗ್ರಾಮ ತೊರೆದವರು ಇಂದಿಗೂ ದೇವಳಗಳ ದರ್ಶನದ ನೆಪದಲ್ಲಿ ಗ್ರಾಮದ ಜತೆ ಒಡನಾಟವನ್ನು ಉಳಿಸಿಕೊಂಡಿದ್ದಾರೆ. ವಾರ್ಷಿಕ ಜಾತ್ರೆ-ಉತ್ಸವಗಳಲ್ಲಿ ಪಾಲ್ಗೊಳ್ಳಲು ಒಂದೆರಡು ದಿನಗಳ ಮಟ್ಟಿಗೆ ಬಂದುಹೋಗುತ್ತಾರೆ.

  ಕಂದಸ್ವಾಮಿಯ ಬಳಿ ಮಾರಲಿಕ್ಕೆ ಈಗೇನು ಉಳಿದಿಲ್ಲ. ಆಸ್ತಿಪಾಸ್ತಿ ಇಲ್ಲ. ಜಮೀನೂ ಇಲ್ಲ. ಸದ್ಯ ಉಳಿದುಕೊಂಡಿರುವ ಗುಡಿಸಲೊಂದಿದೆ. ತಮಿಳುನಾಡು ಸರಕಾರ ನೀಡುತ್ತಿರುವ ವೃದ್ಧಾಪ್ಯ ವೇತನ ಪಡೆದುಕೊಳ್ಳಲು ನಮ್ಮ ಕಥಾನಾಯಕನಿಗೆ ಅರ್ಹತೆಯಿಲ್ಲ. ಐದು ಸಾವಿರ ರೂಪಾಯಿ ಬೆಲೆ ಬಾಳುವ ಗುಡಿಸಲು ಯಾ ಮನೆಯನ್ನು ಅರ್ಜಿದಾರರು ಹೊಂದಿದ್ದರೆ ಅವರು ವೃದ್ಧಾಪ್ಯ ವೇತನ ಹೊಂದಲು ಅರ್ಹರಾಗುವುದಿಲ್ಲವಂತೆ! ಸಾಲದೆಂಬಂತೆ ಕಂದಸ್ವಾಮಿಗೆ ‘ಸಂಪಾದಿಸುವ’ ಇಬ್ಬರು ಗಂಡು ಮಕ್ಕಳಿದ್ದಾರೆ. ತೂತುಕುಡಿ ಪಟ್ಟಣದಲ್ಲಿ ಅವರು ಸಂಪಾದಿಸುತ್ತಾರಲ್ಲವೇ?

  ಕಿರಿಯ ಮಗ ಬಾಲಕೃಷ್ಣನ್ ತಪ್ಪದೆ ಪ್ರತಿ ತಿಂಗಳು ತನ್ನ ತಂದೆಯನ್ನು ಭೇಟಿ ಮಾಡಿ ಸಾವಿರದೈನೂರು ರೂಪಾಯಿಗಳನ್ನು ನೀಡುತ್ತಾನೆ. ಈ ಹಣದಲ್ಲಿ ತಿಂಗಳ ಖರ್ಚು ಹೋಗಬೇಕು. ಸ್ನೇಹಿತನೊಬ್ಬ ಗ್ರಾಮವನ್ನು ಬಿಟ್ಟು ಹೋಗುವಾಗ ಕಂದಸ್ವಾಮಿಗೆ ಉಡುಗೊರೆಯಂತೆ ಬಿಟ್ಟುಹೋಗಿದ್ದ ಮೊಪೆಡ್ ಒಂದು ಸಂಗಾತಿಯಾಗಿ ಉಳಿದುಕೊಂಡುಬಿಟ್ಟಿದೆ. ಅದರ ಹೊಟ್ಟೆಗೆ ಹಾಕಲಿಕ್ಕೂ ಇದೇ ಸಾವಿರದೈನೂರರಲ್ಲಿಯೇ ಹೊಂದಿಸಿಕೊಳ್ಳಬೇಕು. ಈ ಸ್ಕೂಟರಿನಲ್ಲಿ ಮೂರು ದಿನಗಳಿಗೊಂದು ಸವಾರಿ. ಪಕ್ಕದ ಗ್ರಾಮಕ್ಕೆ ಹೋಗಿ ತನಗೆ ಬೇಕಾದುದನ್ನು ಖರೀದಿಸಿ ಮತ್ತೆ ಮನೆಗೆ ಮರಳುತ್ತಾನೆ ಕಂದಸ್ವಾಮಿ. ಕಂದಸ್ವಾಮಿಗೆ ಇರುವ ಸಂಗಾತಿ ಎಂದರೆ ಸರಕಾರ ನೀಡಿರುವ ಟಿ.ವಿ. ಸೆಟ್, ರಾಜ ಮತ್ತು ರಾಣಿ. ರಾಜ - ರಾಣಿ ಎರಡು ಅಲೆಮಾರಿ ನಾಯಿಗಳು. ಕಂದಸ್ವಾಮಿ ಹಾಕಿದ ಅನ್ನ ತಿಂದು ಕಂದಸ್ವಾಮಿಯ ಜತೆ ವಾಸಮಾಡುತ್ತಿವೆ.

 ನಾವು ಜೋಳ ತಿನ್ನುವವರು. ಅಕ್ಕಿ ನಮ್ಮ ಪ್ರಮುಖ ಆಹಾರವಲ್ಲ. ಕೆಲವರು ಉದ್ದನ್ನು ಬೆಳೆಸುತ್ತಿದ್ದರು ಆದರೀಗ ಎಲ್ಲವೂ ಭಣಭಣ. ಖಾಲಿ ಖಾಲಿ. ಎಲ್ಲವೂ ಬಂಜರು. ಕುಮಾರಿ ಜಯಲಲಿತಾ ತೀರಿಕೊಂಡ ಮೂರು ವರ್ಷಗಳ ನಂತರವೂ ಆಕೆಯ ಫೋಟೋ ಇರುವ ಕ್ಯಾಲೆಂಡರ್ ಕಂದಸ್ವಾಮಿಯ ಮನೆಗೋಡೆ ಮೇಲಿದೆ. ಆದರೆ ಕಂದಸ್ವಾಮಿ ಮಾತ್ರ ಎಂಜಿಆರ್ ಆರಾಧಕ. ‘‘ನಾನು ಕೊನೆಯವರೆಗೂ ಎಂಜಿಆರ್ ಅಭಿಮಾನಿಯಾಗಿರುತ್ತೇನೆ’’ ಎನ್ನುತ್ತಾನೆ ಕಂದಸ್ವಾಮಿ. ಹಾಗಂತ ಕಳೆದ ಕೆಲವು ವರ್ಷಗಳಲ್ಲಿ ಮೀನಾಕ್ಷಿಪುರಂ ಹೆಸರಿನ ಹಳ್ಳಿಗೆ ಯಾವುದೇ ರಾಜಕೀಯ ಪಕ್ಷದ ನೇತಾರ ಮುಖ ತೋರಿಸಿಲ್ಲ. ವರ್ಷದ ಹಿಂದೆ ಟಿವಿ ಚಾನಲೊಂದು ಕಂದಸ್ವಾಮಿಯ ಒಂಟಿ ಜೀವನದ ಬಗ್ಗೆ ಕಾರ್ಯಕ್ರಮವನ್ನು ಪ್ರದರ್ಶಿಸಿದೆ. ಇದನ್ನು ಅನುಸರಿಸಿ ಅಧಿಕಾರಿಗಳ ದಂಡೊಂದು ಬಂದುಹೋಗಿದೆ. ಇದರ ನಂತರ ಕಂದಸ್ವಾಮಿಗೆ ‘ನೀರಿನ ಸಂಪರ್ಕ’ವೂ ದೊರಕಿದೆ. ನೀರಿನ ಪಾಲು ಕೇಳಲು ಯಾರೂ ಇಲ್ಲದ ಕಾರಣ ಕಂದಸ್ವಾಮಿಗೆ ಬೇಕಾದಷ್ಟು ನೀರು ಲಭಿಸುತ್ತಿದೆಯಂತೆ.

 ಬರದ ಕಾರಣದಿಂದ ಊರು ಬಿಟ್ಟವರು ಮತ್ತೆ ತಮ್ಮ ತಮ್ಮ ಮನೆಗಳಿಗೆ ಮರಳಬೇಕು.. ಅವರ ವಾಸ್ತವ್ಯಕ್ಕೆ ಬೇಕಾದ ವ್ಯವಸ್ಥೆಗಳನ್ನು ಸರಕಾರದ ವತಿಯಿಂದ ಏರ್ಪಡಿಸಲಾಗುವುದು... ಎಂದು ತೂತುಕುಡಿ ಜಿಲ್ಲಾಧಿಕಾರಿ ಸಂದೀಪ್ ಘೋಷಿಸಿದ್ದಾರೆ.

ಮತ್ತೆ ಗ್ರಾಮಸ್ಥರು ಗ್ರಾಮಕ್ಕೆ ಮರಳುವ ಕನಸು ಕಾಣುತ್ತ ಕಂದಸ್ವಾಮಿ ತನ್ನ ಜಗಲಿಯ ಗೋಡೆಗೊರಗಿ ಕುಳಿತಲ್ಲೇ ತೂಕಡಿಸುತ್ತಾನೆ.

ಮೂಲ: ruralindiaonline.org

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)