varthabharthi


ವೈವಿಧ್ಯ

ಹಕ್ಕಿ ಜ್ವರ ಇರಲಿ ಎಚ್ಚರ

ವಾರ್ತಾ ಭಾರತಿ : 10 Mar, 2020
ಡಾ. ಮುರಲೀ ಮೋಹನ್, ಚೂಂತಾರು

ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲೂ ಹೆಚ್ಚು ಸದ್ದು ಮಾಡುತ್ತಿರುವ ಕೊರೋನ ವೈರಸ್‌ನ ಜೊತೆ ಹಕ್ಕಿಜ್ವರವೂ ಸಾಕಷ್ಟು ಸದ್ದು ಮಾಡುತ್ತಿದೆ. ಇನ್‌ಪ್ಲುಯೆಂಜಾ ಎಂಬ ವೈರಾಣುವಿನ ಸೋಂಕಿನಿಂದ ಹರಡುವ ಈ ಜ್ವರ ಸಾಮಾನ್ಯವಾಗಿ ಕೋಳಿ ಮತ್ತು ಹಕ್ಕಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಕೋಳಿ, ಬಾತುಕೋಳಿ, ಎಮು, ವಲಸೆ ಹಕ್ಕಿಗಳು ಮತ್ತು ಹಂದಿಯನ್ನು ಹೊರತು ಪಡಿಸಿ ಇತರ ಪ್ರಾಣಿಗಳಲ್ಲಿ ಈ ಕಾಯಿಲೆ ಕಂಡು ಬಂದ ನಿದರ್ಶನಗಳಿಲ್ಲ. ಹಕ್ಕಿಜ್ವರವನ್ನು ವೈಜ್ಞಾನಿಕವಾಗಿ ಆಂಗ್ಲಭಾಷೆಯಲ್ಲಿ ‘ಏವಿಯನ್ ಇನ್‌ಪ್ಲುಯೆಂಜಾ’ ಅಥವಾ ‘ಬರ್ಡ್ಸ್ ಪ್ಲೂ’ ಎಂದು ಕರೆಯುತ್ತಾರೆ.

ಇನ್‌ಪ್ಲುಯೆಂಜಾ ವೈರಸ್‌ಗಳಲ್ಲಿ ಇನ್‌ಪ್ಲುಯೆಂಜಾ ಎ. ಬಿ. ಸಿ. ಎಂದು ಮೂರು ನಮೂನೆಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ ಮನುಷ್ಯರಲ್ಲಿ ಉಂಟಾಗುವ ಹೆಚ್ಚಿನ ಪ್ಲೂ ಪ್ರಕರಣಗಳಿಗೆ ಇನ್‌ಪ್ಲುಯೆಂಜಾ ‘ಎ’ ಕಾರಣವಾಗಿದೆ. ಇನ್‌ಪ್ಲುಯೆಂಜಾ ‘ಎ’ ಮತ್ತು ‘ಬಿ’ ವೈರಸ್‌ಗಳು ಮನುಷ್ಯರಲ್ಲಿ ಹೆಚ್ಚು ತೀವ್ರವಾದ ಮತ್ತು ವ್ಯಾಪಕವಾದ ಪ್ಲೂ ಸೋಂಕನ್ನು ಉಂಟುಮಾಡುತ್ತದೆ. ಇನ್‌ಪ್ಲುಯೆಂಜಾ ‘ಸಿ’ ವೈರಾಣುವಿನಿಂದ ಉಂಟಾಗುವ ಸೋಂಕು ಸೀಮಿತವಾದ ಪ್ರದೇಶಗಳಲ್ಲಷ್ಟೇ ಉಂಟಾಗುತ್ತವೆ ಮತ್ತು ಹೆಚ್ಚೇನು ತೊಂದರೆಯನ್ನು ಉಂಟು ಮಾಡುವುದಿಲ್ಲ. ಈ ಇನ್‌ಪ್ಲುಯೆಂಜಾ ವೈರಸ್‌ಗಳು ಗೋಲಾಕಾರವಾಗಿದ್ದು, ಅವುಗಳ ಹೊರಗಿನ ಕವಚದಲ್ಲಿ ಹೀಮಾಗ್ಲುಟನಿನ್ ಮತ್ತು ನ್ಯೂರಮಿನಿಡೇಸ್ ಎಂಬ ಎರಡು ಗೈಕೋಪ್ರೊಟೀನ್ ಇರುತ್ತದೆ. ವೈರಾಣು ತಾನು ಸೋಂಕುವ ಜೀವಕಣಗಳನ್ನು ಪ್ರವೇಶಿಸಲು ಹೀಮಾಗ್ಲುಟಿನ್ ನೆರವಾಗುತ್ತದೆ ಮತ್ತು ಆ ಜೀವಕೋಶದೊಳಗೆ ಹುಟ್ಟಿದ ಹೊಸ ವೈರಾಣುಗಳು ಹೊರಗೆ ಬರಲು ನ್ಯೂರಮಿನಿಡೇಸ್ ಸಹಾಯ ಮಾಡುತ್ತದೆ. ವೈರಾಣುವಿನ ಹೊರ ಕವಚದಲ್ಲಿರುವ ಈ ಪ್ರೊಟೀನ್‌ಗಳಿಗನುಗುಣವಾಗಿ ಇನ್‌ಪ್ಲುಯೆಂಜಾ ವೈರಸ್‌ನ ಉಪನಮೂನೆಗಳನ್ನು ಹೆಸರಿಸಲಾಗಿದೆ. ಇನ್‌ಪ್ಲುಯೆಂಜಾ ‘ಎ’ ವೈರಾಣುವಿನಲ್ಲಿ ಒಟ್ಟು 16 ಬಗೆಯ ಹೀಮಗ್ಲುಟಮಿನ್ ವಿಧಗಳಿರುತ್ತದೆ. (H1–16) ಮತ್ತು ಒಂಬತ್ತು ನ್ಯೂರಮಿನಿಡೇಸ್ (N1–9) ವಿಧಗಳಿರುತ್ತದೆ. ಈ ಪ್ರೊಟೀನ್‌ಗಳ ಆಧಾರದ ಮೇಲೆ ಹಲವಾರು ಉಪನಮೂನೆಗಳನ್ನು ಇನ್‌ಪ್ಲುಯೆಂಜಾ ವೈರಾಣುವಿನಲ್ಲಿ ಗುರುತಿಸಲಾಗಿದೆ. ಇವುಗಳಲ್ಲಿ , H1N1 (ಹಂದಿಜ್ವರ) ಸಾಮಾನ್ಯವಾಗಿ ಕಾಣಿಸುವ ಪ್ಲೂ ರೋಗವಾಗಿದೆ. ಅದೇ ರೀತಿ ಇನ್‌ಪ್ಲುಯೆಂಜಾ ಎ ವೈರಾಣುವಿನ H5N1 ಎಂಬ ಉಪಪ್ರಭೇದ ಸಾಮಾನ್ಯವಾಗಿ ಕೋಳಿ ಮತ್ತು ಹಕ್ಕಿಗಳನ್ನು ಹೆಚ್ಚು ಕಾಡುತ್ತದೆ. ಈ ಕಾರಣಕ್ಕಾಗಿಯೇ ಈ ಜ್ವರವನ್ನು ‘ಹಕ್ಕಿಜ್ವರ’ ಅಥವಾ ‘ಕೋಳಿಜ್ವರ’ ಎಂದು ಕರೆಯಲಾಗುತ್ತದೆ. ಒಟ್ಟಿನಲ್ಲಿ ಪ್ಲೂ ಸೋಂಕು ಮನುಷ್ಯರನ್ನಷ್ಟೇ ಕಾಡುವುದಲ್ಲದೆ, ಹಕ್ಕಿ ಮತ್ತು ಹಲವು ಪ್ರಾಣಿಗಳನ್ನೂ ಕಾಡುತ್ತದೆ. ಅದಲ್ಲದೇ ಇವುಗಳ ನಡುವೆ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಹರಡುತ್ತಿರುತ್ತದೆ. ಪ್ಲೂ ವೈರಾಣುಗಳಲ್ಲಿ ಉಂಟಾಗುವ ರೂಪಾಂತರಗಳು ಮತ್ತು ಮನುಷ್ಯ, ಹಕ್ಕಿ ಮತ್ತು ಪ್ರಾಣಿಗಳು ಪರಸ್ಪರ ನಿಕಟಗೊಳ್ಳುವುದು ಈ ಹರಡುವ ಪ್ರಕ್ರಿಯೆಗೆ ನೆರವಾಗುತ್ತದೆ. ಆಹಾರಕ್ಕಾಗಿ ಬೇರೆ ಬೇರೆ ರೀತಿಯ ಹಕ್ಕಿಗಳು ಮತ್ತು ಪ್ರಾಣಿಗಳೊಂದಿಗೆ ಮನುಷ್ಯನ ಸಂಪರ್ಕ ಹೆಚ್ಚಿದಂತೆ ಈ ಹರಡುವಿಕೆ ಹೆಚ್ಚಾಗುತ್ತದೆ. ಪಶು ಮತ್ತು ಪಕ್ಷಿಗಳನ್ನು ತೀರ ಇಕ್ಕಟ್ಟಿನಲ್ಲಿ ಒತ್ತಿಟ್ಟು ಸಾಕುವುದು, ಅವುಗಳ ಆರೋಗ್ಯದ ಬಗ್ಗೆ ನಿಗಾವಹಿಸದಿರುವುದು ಈ ರೋಗ ಹರಡುವಿಕೆಗೆ ಸಹಾಯ ಮಾಡುತ್ತದೆ.

ರೋಗ ಲಕ್ಷಣಗಳು:

ಹಕ್ಕಿಜ್ವರ ಅಥವಾ ಕೋಳಿಜ್ವರ ಬಹಳ ಬೇಗನೆ ಹರಡುತ್ತದೆ. ಒಂದು ಕೋಳಿಯಲ್ಲಿ ವೈರಾಣು ಕಾಣಿಸಿಕೊಂಡರೆ 48 ಗಂಟೆಗಳ ಒಳಗೆ, ಗುಂಪಿನ ಎಲ್ಲಾ ಕೋಳಿಗಳೂ ಸೋಂಕಿಗೆ ಬಲಿಯಾಗಬಹುದು. ಸೋಂಕಿಗೆ ಒಳಗಾದ ಹಕ್ಕಿಗಳ ಮಲ, ಮೂತ್ರ, ಸಿಂಬಳ, ನೀರು, ಸಣ್ಣ ರೋಗಾಣುವಿನಿಂದ (H5N1) ಕೂಡಿರುತ್ತದೆ. ಹಕ್ಕಿಗಳು ವಾಸಿಸುವ ಸ್ಥಳ, ಅಲ್ಲಿನ ಗಾಳಿ ಸೇರಿದಂತೆ ಎಲ್ಲದರಲ್ಲೂ ವೈರಾಣು ಕೂಡಿರುತ್ತದೆ. ಈ ವೈರಾಣು ಮಾನವ ದೇಹಕ್ಕೆ ಗಾಳಿಯ ಮೂಲಕ ಸೇರಿದರೆ ಅಪಾಯ ತಪ್ಪಿದ್ದಲ್ಲ. ಆದರೆ ಈ ರೋಗ ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ. ಆದಾಗ್ಯೂ ಹಕ್ಕಿಗಳ ಸಂಪರ್ಕಕ್ಕೆ ಹೋದಾಗ ಅತೀ ಎಚ್ಚರಿಕೆ ಅಗತ್ಯ. ಹಕ್ಕಿಜ್ವರದ ಸೋಂಕಿಗೆ ಒಳಗಾದ ವ್ಯಕ್ತಿಗಳಲ್ಲಿ 2-3 ದಿನಗಳಲ್ಲಿ ರೋಗ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಅತಿಯಾದ ಜ್ವರ, ನೆಗಡಿ, ಕೆಮ್ಮು, ಶೀತ, ತಲೆನೋವು, ಗಂಟಲು ಕೆರೆತ, ಸ್ನಾಯು ಸೆಳೆತ, ಉಸಿರಾಟದ ತೊಂದರೆ ರೋಗದ ಲಕ್ಷಣಗಳಾಗಿರುತ್ತದೆ. ಕೆಲವೊಮ್ಮೆ ಸತತ ವಾಂತಿ, ಭೇದಿ ಮತ್ತು ವಿಪರೀತ ಸುಸ್ತು ಇರಬಹುದು, ವಿಪರೀತ ತಲೆನೋವು, ಯಾವುದರಲ್ಲೂ ನಿರಾಸಕ್ತಿ ಮತ್ತು ಸ್ನಾಯು ಸೆಳೆತವೂ ಇರಬಹುದು.

ಮುಂಜಾಗ್ರತೆಯೇನು?:

♦ ಹಕ್ಕಿ ಜ್ವರ ಇರುವ ಪ್ರದೇಶಗಳಲ್ಲಿ ಮನೆ, ಫಾರಂಗಳಲ್ಲಿ ಕೋಳಿ ಸಾಕಣೆ ಮಾಡುವವರು, ಮೊಟ್ಟೆ ಮಾರುವವರು, ಕೋಳಿ ಮಾಂಸ ಮಾರಾಟ ಮಾಡುವವರು ಸಾಕಷ್ಟು ಎಚ್ಚರಿಕೆವಹಿಸಬೇಕು. ಕೋಳಿಗಳ ಸಂಪರ್ಕ ಹಾಗೂ ಅವು ವಾಸಿಸುವ ಸ್ಥಳಗಳಿಗೆ ಹೋಗುವಾಗ ಮುಖಕವಚ ಧರಿಸತಕ್ಕದ್ದು.

♦ ಮನೆಗೆ ಮರಳಿದ ಬಳಿಕ, ಚೆನ್ನಾಗಿ ಸೋಪಿನ ದ್ರಾವಣ ಅಥವಾ ಉಪ್ಪಿನ ದ್ರಾವಣ ಬಳಸಿ ಕೈ ತೊಳೆಯತಕ್ಕದ್ದು.

♦ ಕೋಳಿ ಮಾಂಸ ಸೇವನೆಯಿಂದ ಹಕ್ಕಿಜ್ವರ ಬರುವುದಿಲ್ಲ. ಕೋಳಿ ಮಾಂಸವನ್ನು ಚೆನ್ನಾಗಿ ಬೇಯಿಸದಿದ್ದರೆ ಮತ್ತು ಹಸಿ ಮೊಟ್ಟೆ ಸೇವನೆಯಿಂದ ಮಾತ್ರ ರೋಗ ಬರುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕಾಗಿಯೇ ಕೋಳಿ ಮಾಂಸ ಮತ್ತು ಮೊಟ್ಟೆಯನ್ನು 70 ಡಿಗ್ರಿ ಗ್ರೇಡ್‌ಗಳಿಗೂ ಅಧಿಕ ಉಷ್ಠಾಂಶದಲ್ಲಿ ಬೇಯಿಸಿ ಸೇವಿಸಬೇಕು.

♦ ಒಂದೊಮ್ಮೆ ಕೋಳಿಗಳಿಗೆ H5N1 ಸೋಂಕು ತಗಲಿದ್ದರೆ ಅಂತಹ ಕೋಳಿಗಳನ್ನು ವೈಜ್ಞಾನಿಕವಾಗಿ ನಾಶಪಡಿಸಿ ಈ ಕೋಳಿಗಳ ಮೊಟ್ಟೆಯನ್ನು ಒಡೆದು ಭೂಮಿಯಲ್ಲಿ ಹೂಳಬೇಕು. ಆಗ ಮಾತ್ರ ಸೋಂಕನ್ನು ಸಂಪೂರ್ಣಾಗಿ ನಾಶಪಡಿಸಲು ಸಾಧ್ಯವಾಗುತ್ತದೆ.

♦ ಹಕ್ಕಿಜ್ವರ ಮನುಷ್ಯನಿಗೆ ತಗಲುವ ಸಾಧ್ಯತೆ ಇಲ್ಲದಿಲ್ಲ. ಶಂಕಿತ ವ್ಯಕ್ತಿಯು ಬಳಸಿದ ಕೈವಸ್ತ್ರ, ಟವೆಲ್, ಲೋಟ, ತಟ್ಟೆ ಬಳಸಬಾರದು. ಶಂಕಿತ ವ್ಯಕ್ತಿಯ ಸಾಂಗತ್ಯದಿಂದ ದೂರವಿರಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)