varthabharthi


ಅನುಗಾಲ

ವಿಮರ್ಶೆಗೆ ಗೋಪಾಲಕೃಷ್ಣ ಅಡಿಗರ ಕಾಣ್ಕೆ

ವಾರ್ತಾ ಭಾರತಿ : 12 Mar, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕರ್ನಾಟಕ ಸಾಹಿತ್ಯ ಅಕಾಡಮಿಯು 2001ರಲ್ಲಿ ಪ್ರಕಟಿಸಿದ ‘ಶತಮಾನದ ಸಾಹಿತ್ಯ ವಿಮರ್ಶೆ’ ಕೃತಿಯ ಸಂಪಾದಕರು ಅಡಿಗರ ಕುರಿತಂತೆ ಬರೆದ ‘‘ಸಾಹಿತ್ಯ ವಿಮರ್ಶೆಯಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳದಿದ್ದರೂ ಅಡಿಗರು ಪ್ರತಿಪಾದಿಸಿದ ಸಾಮಾಜಿಕ-ಸಾಂಸ್ಕೃತಿಕ-ಸಾಹಿತ್ಯಿಕ ಆಶಯಗಳು ನವ್ಯ ವಿಮರ್ಶೆಯನ್ನು ಒಂದು ಹಂತದಲ್ಲಿ ನಿರ್ದೇಶಿಸಿದವು!’’ ಎಂಬ ಮಾತುಗಳು ಎಷ್ಟೇ ಪ್ರಾಮಾಣಿಕವಾಗಿದ್ದರೂ ಅಡಿಗರಿಗೆ ಒಂದು ರಿಯಾಯಿತಿಯ ಸ್ಥಾನವನ್ನು ನೀಡಿ ಅವರ ವಿಮರ್ಶಕ ಸ್ಥಾನಕ್ಕೆ ಚ್ಯುತಿ ತಂದಂತಿತ್ತು. ‘ಗಂಭೀರವಾಗಿ ತೊಡಗಿಸಿಕೊಳ್ಳುವುದು ಎಂದರೆ ಏನು?’ ಅದು ಆಕಾರವೇ, ರೂಪವೇ, ಪರಿಭಾಷೆಯ ಭಾರವೇ?


1955ರಷ್ಟು ಹಿಂದೆ ಅಡಿಗರು ‘ಶರದ್ಗೀತ’ ಎಂಬ ದೀರ್ಘ ಕವಿತೆಯಲ್ಲಿ ‘‘ನಿಮಗೆ ಕಾಣದ್ದು ಯಾವುದೋ ಅದನ್ನೇ ಕುರಿತು ಹೇಳುವುದು ಋಷಿ ಕೆಲಸ. ತನಗೆ ಕಾಣದ್ದು ಯಾವುದೋ ಅದನ್ನೇ ಹಾಡುವುದು ಕವಿ ಕೆಲಸ’’ ಎಂದರು. ತಕ್ಷಣದಲ್ಲೇ ಅದನ್ನು ಮುಂದುವರಿಸಿ ‘‘ಕಾಣ್ಕೆ ಕಣ್ಕಟ್ಟುಗಳ ನಡುವೆ ಗೆರೆ ಬಲು ತೆಳುವು’’ ಎಂದು ಹೇಳಿ ನಿಲ್ಲಿಸಿದರು. ಭೂತ-ವರ್ತಮಾನಗಳನ್ನು ಅಳೆದರೆ ಈ ಮಾತು ಋಷಿವಾಕ್ಯಕ್ಕೂ ಸರಿ; ಕವಿವಾಕ್ಯಕ್ಕೂ ಸರಿ.

ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ಗುರುತಿನ ಲಕ್ಷಣವಿರುತ್ತದೆ. ಅದೇ ಅವರ ಸರ್ವಸ್ವವೆಂದಲ್ಲ. ಎಲ್ಲ ವಿಭಾಗದಲ್ಲಿ ಪರಿಣತರಾದವರಿಗೂ ಯಾವುದೋ ಒಂದು ವಿಭಾಗದ ಪರಿಣತಿಯು ಹೆಚ್ಚು ಶೋಭಾಯಮಾನವಾಗಿ ಅದೇ ಅವರ ಚಹರೆಯಾಗಿರುತ್ತದೆ. ಇದಕ್ಕೆ ಉದಾಹರಣೆಗಳನ್ನು ನೀಡುತ್ತ ಲಂಬಿಸುವುದು ನನ್ನ ಉದ್ದೇಶವಲ್ಲದ್ದರಿಂದ ಅದನ್ನು ಈ ಪ್ರಸ್ತಾವನೆಗೆ ಹೊರತಾಗಿಸಿದ್ದೇನೆ.

ಗೋಪಾಲಕೃಷ್ಣ ಅಡಿಗರು ನವ್ಯದ ಪ್ರಮುಖ ಕವಿ; ಪ್ರಾತಿನಿಧಿಕ ಕವಿ; ಉತ್ತಮ ಕವಿ. ಉತ್ತಮರೆಲ್ಲರೂ ಪ್ರಾತಿನಿಧಿಕವಾಗಿ ಅಥವಾ ಪ್ರಮುಖರಾಗಿ ಇರಬೇಕಾಗಿಲ್ಲ; ಹಾಗೆಯೇ ಪ್ರಮುಖರೆಲ್ಲರೂ ಪ್ರಾತಿನಿಧಿಕರೆಲ್ಲರೂ ಉತ್ತಮರಾಗಿರಬೇಕಾಗಿಲ್ಲ. ಈ ದೃಷ್ಟಿಯಿಂದ ಅಡಿಗರ ಸಾಧನೆ ದೊಡ್ಡದು ಮತ್ತು ಮಹತ್ವದ್ದು ಎಂಬ ಬಗ್ಗೆ ಎರಡು ಅಭಿಪ್ರಾಯವಿರದು. (ವಿರೋಧಿಸುವುದಕ್ಕಾಗಿಯೇ ವಿರೋಧಿಸುವವರನ್ನು ಮರೆತು ಮತ್ತು ಹೊರತುಪಡಿಸಿ ಈ ಮಾತನ್ನು ಹೊಣೆಯರಿತು ಆಡುತ್ತಿದ್ದೇನೆ.)

ಅಡಿಗರ ಕಾವ್ಯವೇ ಒಂದು ರೀತಿಯ ವಿಮರ್ಶೆ. ಆದ್ದರಿಂದ ಅವರು ತಮ್ಮ ಪದ್ಯಗಳಲ್ಲಿ, ಗದ್ಯ ಲೇಖನಗಳಲ್ಲಿ ಪ್ರಸ್ತ್ತಾವಿಸಿದ ಕೆಲವು ವಿಶಿಷ್ಟ ಪ್ರಯೋಗಗಳನ್ನು, ಪ್ರತಿಪಾದನೆಗಳನ್ನು (ಮಣ್ಣಿನ ವಾಸನೆ, ಸಾವಯವ ಶಿಲ್ಪದ ಸಮಗ್ರೀಕರಣ, ಪ್ರತಿಮಾವಿಧಾನ ಇತ್ಯಾದಿ) ಓದುಗರು ಮುಖ್ಯವಾಗಿ ಸಾಹಿತಿಗಳು ನೆನಪಿಟ್ಟುಕೊಂಡರೇ ವಿನಾ ಅವರ ಒಟ್ಟಾರೆ ವಿಮರ್ಶಾ ದೃಷ್ಟಿಯನ್ನಲ್ಲ. ಇದರಿಂದಾಗಿ ಅಡಿಗರು ಒಬ್ಬ ವಿಮರ್ಶಕರು ಮತ್ತು ವಿಮರ್ಶಾಲೋಕದಲ್ಲಿ ಅವರ ಸ್ಥಾನವೇನೆಂಬ ಮೌಲ್ಯಮಾಪನವು ನ್ಯಾಯಯುತವಾಗಿ ನಡೆದಿದೆಯೆಂದು ಅನ್ನಿಸುತ್ತಿಲ್ಲ. ಉದಾಹರಣೆಗೆ 1997ರಲ್ಲಿ ಬಂದ ಅಡಿಗರ ಸಮಗ್ರ ಕಾವ್ಯ ‘ಅನನ್ಯ’ದಲ್ಲಿ ಅವರ ಪದ್ಯೇತರ ಕೃತಿಗಳ ಕುರಿತು ಕೇವಲ ಮೂರು ಲೇಖನಗಳು ಪ್ರಕಟವಾಗಿವೆ. ಅಡಿಗರ ಕಾವ್ಯದ ಕುರಿತ ಕೃತಿಯಲ್ಲಿ ಅವರ ಗದ್ಯದ ಕುರಿತು ಲೇಖನಗಳಿರಬೇಕಾಗಿ(ರಲಿ)ಲ್ಲ. ಆದರೆ ಈ ಲೇಖನಗಳನ್ನು ಸೇರಿಸಿದ್ದರಿಂದ ಇನ್ನಷ್ಟು ಲೇಖನಗಳೇಕಿಲ್ಲ ಎಂಬ ಪ್ರಶ್ನೆ ಉದ್ಭವಿಸಿದ್ದು. ಕಾರಣ ಸರಳ. ಆ ಕುರಿತು ಇನ್ನಷ್ಟು ಲೇಖನಗಳಿರಲಿಲ್ಲ!

 ಇದನ್ನೇ ಸಮರ್ಥಿಸುವಂತೆ ಕರ್ನಾಟಕ ಸಾಹಿತ್ಯ ಅಕಾಡಮಿಯು 2001ರಲ್ಲಿ ಪ್ರಕಟಿಸಿದ ‘ಶತಮಾನದ ಸಾಹಿತ್ಯ ವಿಮರ್ಶೆ’ ಕೃತಿಯ ಸಂಪಾದಕರು ಅಡಿಗರ ಕುರಿತಂತೆ ಬರೆದ ‘‘ಸಾಹಿತ್ಯ ವಿಮರ್ಶೆಯಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳದಿದ್ದರೂ ಅಡಿಗರು ಪ್ರತಿಪಾದಿಸಿದ ಸಾಮಾಜಿಕ-ಸಾಂಸ್ಕೃತಿಕ-ಸಾಹಿತ್ಯಿಕ ಆಶಯಗಳು ನವ್ಯ ವಿಮರ್ಶೆಯನ್ನು ಒಂದು ಹಂತದಲ್ಲಿ ನಿರ್ದೇಶಿಸಿದವು!’’ ಎಂಬ ಮಾತುಗಳು ಎಷ್ಟೇ ಪ್ರಾಮಾಣಿಕವಾಗಿದ್ದರೂ ಅಡಿಗರಿಗೆ ಒಂದು ರಿಯಾಯಿತಿಯ ಸ್ಥಾನವನ್ನು ನೀಡಿ ಅವರ ವಿಮರ್ಶಕ ಸ್ಥಾನಕ್ಕೆ ಚ್ಯುತಿ ತಂದಂತಿತ್ತು. ‘ಗಂಭೀರವಾಗಿ ತೊಡಗಿಸಿಕೊಳ್ಳುವುದು ಎಂದರೆ ಏನು?’ ಅದು ಆಕಾರವೇ, ರೂಪವೇ, ಪರಿಭಾಷೆಯ ಭಾರವೇ? ಬೇರಾವುದೇ ವಿಭಾಗದಲ್ಲಿ ಹೆಸರು ಪಡೆಯದವನು ವಿಮರ್ಶಕನಾಗುತ್ತಾನೆ ಎಂಬ ವ್ಯಂಗ್ಯವನ್ನು ಬದಿಗಿಟ್ಟು ಹೇಳಿದರೂ ಹೀಗೆ ಗಂಭೀರವಾಗಿ ತೊಡಗಿಸಿಕೊಂಡ ಲೇಖಕರು ಯಾರು? ಆಧುನಿಕ ಕನ್ನಡ ಸಾಹಿತ್ಯದಲ್ಲಿ (ಪಾಶ್ಚಾತ್ಯ ಸಾಹಿತ್ಯ ತತ್ವ, ಸಿದ್ಧಾಂತ, ಸಮೀಕರಣಗಳನ್ನು ಇಲ್ಲಿಗೆ ಎಳೆತಂದದ್ದನ್ನು ಬಿಟ್ಟರೆ) ಅಂತಹವರು ನಿರ್ದೇಶಿಸಿದ ವಿಮರ್ಶಾ ತತ್ವಗಳು ಯಾವುವು? ಈ ಸೂಕ್ಷ್ಮ ಎಳೆಗಳನ್ನು ಶೋಧಿಸದೆ ಹೀಗೆ ಹೇಳುವುದು ಅಡಿಗರನ್ನು ಉದ್ದೇಶಪೂರ್ವಕವಾಗಿ ಅಡ್ಡ ಪಂಕ್ತಿಯಲ್ಲಿ ಕೂರಿಸಿದಂತಾಗುತ್ತದೆ. ಒಳ್ಳೆಯ ವಿಮರ್ಶಕರಿದ್ದಾರೆ, ನಿಜ. ಆದರೆ ಯಾರೊಬ್ಬನನ್ನು ಒಂದು ಪ್ರಕಾರದಿಂದ ಹೊರಗಿಡಬೇಕಾದರೆ ಸಾಕಷ್ಟು ಸಮರ್ಥನೆ ಬೇಕಾಗುತ್ತದೆ. ಇಲ್ಲದಿದ್ದರೆ ಅದು ಕೆಟ್ಟ ಸಂಪ್ರದಾಯಕ್ಕೆ ಮತ್ತು ಗೀಳಿಗೆ ದಾರಿಮಾಡಿಕೊಡುತ್ತದೆ.

ಅಡಿಗರ ಸಮಗ್ರ ಗದ್ಯ ಲೇಖನಗಳು 1977ರಲ್ಲಿ ಪ್ರಕಟವಾಗಿದ್ದರೂ ಇನ್ನಷ್ಟು ಲೇಖನಗಳನ್ನು ಸೇರಿಸಿದ ಕೃತಿ ‘ಸಾಕ್ಷಿಪ್ರಜ್ಞೆ’ 2004ರಲ್ಲಿ ಪ್ರಕಟವಾಯಿತು. ಇದರಲ್ಲಿ 43 ಲೇಖನಗಳು ವಿಮರ್ಶೆಗಳು. ಇವುಗಳ ಪೈಕಿ ಕೆಲವು ಮುನ್ನುಡಿಗಳಾದರೆ ಉಳಿದವು ಅವರ ಶೈಲಿಯ ವಿಮರ್ಶೆಗಳೇ. ಇನ್ನೂ ಹಲವು ಮುನ್ನುಡಿಗಳು (ಕುಂಇಿಹಿತ್ಲು ರಾಮಚಂದ್ರ ಅವರ ‘ಬಿದ್ದಗರಿ’, ಸುಬ್ರಾಯ ಚೊಕ್ಕಾಡಿಯವರ ‘ತೆರೆ’ ಸೇರಿದಂತೆ ಇನ್ನೂ ಅನೇಕ ಕೃತಿಗಳಿಗೆ ಬರೆದ ಮುನ್ನುಡಿಗಳು, ಇತರ ಲೇಖನಗಳು ಈ ಕೃತಿಯಲ್ಲಿಲ್ಲ!) ಇವಲ್ಲದೆ ಈ ಕೃತಿಯಲ್ಲಿ ಸಾಮಾಜಿಕ-ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ 37 ಲೇಖನಗಳು, ಶಿಕ್ಷಣ-ಸಂಸ್ಕೃತಿ ಕುರಿತಂತೆ 37 ಲೇಖನಗಳು, ತಮ್ಮ ಜೀವನ ಕುರಿತಂತೆ 3 ಲೇಖನಗಳಿವೆ. (ಅಡಿಗರ ಆತ್ಮಚರಿತ್ರೆ ನೆನಪಿನ ಗಣಿಯಿಂದ ಕೂಡಾ ಒಂದು ಆತ್ಮ ವಿಮರ್ಶೆಯೇ!)

ಇವುಗಳಲ್ಲಿ ಮೊದಲ 43 ಲೇಖನಗಳು ಶುದ್ಧಾಂಗ ವಿಮರ್ಶೆಗಳೇ. ಗಮನಿಸಬೇಕಾದ್ದೆಂದರೆ ಅಡಿಗರು ಸಾಹಿತ್ಯದ ಸಾಮಾನ್ಯ ಗುಣಲಕ್ಷಣಗಳ ಕುರಿತು ಬರೆಯುವಾಗಲಾಗಲೀ ಬಿಡಿಕೃತಿಗಳ ಕುರಿತು ಬರೆಯುವಾಗಲಾಗಲೀ ಯಾವುದೇ ಪೂರ್ವಾಗ್ರಹಗಳನ್ನಿಟ್ಟುಕೊಂಡವರಲ್ಲ. ನಾವು ಅತ್ಯಂತ ಅಭಿಮಾನದಿಂದ, ಗೌರವದಿಂದ ಕಾಣುವ ಒಬ್ಬ ಲೇಖಕನ ಕುರಿತೂ ವಿಮರ್ಶಿಸುವಾಗ ಸಂಬಂಧಿಸಿದ ಕೃತಿಯ ಗುಣಾವಗುಣಗಳನ್ನು ಹೇಳುವುದೇ ನಿಜವಾದ ಮತ್ತು ಸರಿಯಾದ ವಿಮರ್ಶೆ. ಅಡಿಗರು ಇದನ್ನೇ ‘ಮಣ್ಣಿನ ವಾಸನೆ’ ಲೇಖನದಲ್ಲಿ ‘‘ಗುಣ ಅವಗುಣಗಳ ವಿವೇಕವೇ ವಿಮರ್ಶೆ’’ ಎಂದರು. ಇಂದು ಬರುವ ಭಾರೀ ರಾಶಿಯ ವಿಮರ್ಶೆಗಳನ್ನು ಹೋಲಿಸಿ ಹೇಳುವುದಾದರೆ ನವೋದಯ ಮತ್ತು ಆನಂತರ ಅಡಿಗರ ಹಾಗೆ ಬರೆಯುತ್ತಿದ್ದವರಲ್ಲಿದ್ದ ಪ್ರಾಮಾಣಿಕತೆ ಮತ್ತು ದಕ್ಷತೆ ಈಗ ಕಾಣುವುದಿಲ್ಲ. ಅನೇಕ ವಿಮರ್ಶೆಗಳು ಆಯಾಯ ವ್ಯಕ್ತಿಯ/ಕೃತಿಯ/ಸಂದರ್ಭದ ಅಭಿನಂದನಾ ಪತ್ರದಂತೆಯೋ, ಪ್ರಶಸ್ತಿ ಪತ್ರದಂತೆಯೋ, ಇಲ್ಲ ಶಿಫಾರಸು ಪತ್ರದಂತೆಯೋ ಇರುವುದನ್ನು ಕಾಣಬಹುದು. ಅಡಿಗರೇ ಇದನ್ನು ‘‘ವಿಮರ್ಶೆ ಎಂದರೆ ಪ್ರಶಸ್ತಿ ಎಂಬ ರೂಢಮೂಲ ಭಾವನೆ ತೊಲಗದೆ ನಮ್ಮ ಕಾವ್ಯ ವಿಮರ್ಶೆ ಬೆಳೆಯಲಾರದೆಂಬ ಮಾತು ನಿರ್ವಿವಾದ’’ ಎಂದು ಬರೆದರು. ಅವರಿಗೂ ಮೊದಲೇ ಬರೆದ ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟು, ದ್ರೌಪದಿಯ ಸಿರಿಮುಡಿ, ಅಥವಾ ಅಡಿಗರ ಭಾವತರಂಗಕ್ಕೆ ಬೇಂದ್ರೆ ಬರೆದ ಮುನ್ನುಡಿ ಇವನ್ನು ಗಮನಿಸಿದರೆ ಯಾವುದೇ ಕೃತಿ ಮತ್ತು ಕೃತಿಕಾರನ ವ್ಯಾಪ್ತಿಯನ್ನು ಗುರುತಿಸುವಾಗಲೂ ಅದರ/ಅವರ ಮಿತಿಯನ್ನೂ ಗುರುತಿಸುವುದನ್ನು ಕಾಣಬಹುದು. ಈ ಪರಂಪರೆಯನ್ನು ಸ್ವಲ್ಪ ಮಟ್ಟಿಗಾದರೂ ಕುರ್ತಕೋಟಿ ಮುಂದುವರಿಸಿದರು.

ಒಂದು ಉದಾಹರಣೆಯನ್ನು ನೀಡುವುದಾದರೆ ಅಡಿಗರು 1969ರಲ್ಲಿ ಬರೆದ, ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ ಕೃತಿಯ ವಿಮರ್ಶೆಯನ್ನು ಗಮನಿಸಬಹುದು. ಲೇಖನವು ಆರಂಭವಾಗುವುದು ಹೀಗೆ: ‘‘ಕನ್ನಡದ ಗಣ್ಯ ಕಾದಂಬರಿಗಳಲ್ಲೊಂದಾದ ಮರಳಿ ಮಣ್ಣಿಗೆ ಮೊದಲ ಬಾರಿಗೆ ಪ್ರಕಟವಾದಾಗ ಅದನ್ನು ತಲ್ಲೀನತೆಯಿಂದ ಓದಿ ಸಂತೋಷಪಟ್ಟಿದ್ದ ನಾನು ಈಗ ಮತ್ತೊಮ್ಮೆ ಓದಿ ಮುಗಿಸಿ ಅದೇ ರೀತಿಯ ಸಂತೋಷವನ್ನು ಪುನಃ ಅನುಭವಿಸಿ ಆ ಸಂತೋಷದ ಲಕ್ಷಣಗಳನ್ನೂ, ಪರಿಮಿತಿಯನ್ನೂ, ಪ್ರಕಾರವನ್ನೂ ಇಲ್ಲಿ ಗುರುತಿಸಲು ಯತ್ನಿಸುತ್ತಿದ್ದೇನೆ.’’ ಕೃತಿಯ ಹಲವು ಹಂತಗಳನ್ನು, ಮುಖಗಳನ್ನು, ಮಜಲುಗಳನ್ನು, ಗುಣಾವಗುಣಗಳನ್ನು ವಿವೇಕಯುತವಾಗಿ ವಿಶ್ಲೇಷಿಸಿದ ಆನಂತರ ಅಡಿಗರು ಲೇಖನವನ್ನು ಮುಗಿಸುವುದು ಹೀಗೆ: ‘‘ಹೃದ್ಯವಾಗಿ ಪುಟದಿಂದ ಪುಟಕ್ಕೆ ನಮ್ಮನ್ನು ಕೊಂಡೊಯ್ಯಬಲ್ಲ ಕಥನರೀತಿ ಭಾಷಾಶೈಲಿ ಇವುಗಳಿಂದಾಗಿ ಮರಳಿ ಮಣ್ಣಿಗೆ ಯಾವಾಗಲೂ ಸಂತೋಷ ಕೊಡುವಂತಹ ಕೃತಿಯಾಗಿ, ಉಳಿಯುತ್ತದಲ್ಲದೇ ಕಾರಂತರ ಕೃತಿಗಳಲ್ಲೇ ಉತ್ತಮವಾದವುಗಳಲ್ಲಿ ಒಂದೆಂದು ಹೇಳುವುದು ಸಾಧ್ಯವಿಲ್ಲ; ಅತ್ಯುತ್ತಮ ಕಲಾಕೃತಿ ಖಂಡಿತಾ ಅಲ್ಲ.’’ ನೆನಪಿಡಿ: ಇದನ್ನು ಬರೆದಾಗ ಕಾರಂತರು ಕನ್ನಡದ ಅಗ್ರಗಣ್ಯ ಕಾದಂಬರಿಕಾರೆಂದು ಪ್ರತಿಷ್ಠಾಪಿಸಲ್ಪಟ್ಟವರು. ಆಗಲೂ ಈಗಲೂ ಅವರ ಬೆಟ್ಟದಂತಹ ವ್ಯಕ್ತಿತ್ವದೆದುರು ವಿಸ್ಮಯರಾಗಿ ‘‘ಅವರನ್ನಳೆಯಲು ನಾವು ಯಾರು?’’ ಎಂಬ ಹಾಗೆ ಇಲ್ಲವೇ ಆರಾಧನಾಭಾವದಲ್ಲಿ ಬರೆದವರೇ ಹೆಚ್ಚು.

ಅಡಿಗರ ವಿಮರ್ಶೆಯ ಮುಖ್ಯ ಅಂಶವೆಂದರೆ ಅವರ ಪದ್ಯವೊಂದರಲ್ಲಿ ಅವರು ಹೇಳಿದ ‘‘ಅನ್ಯರೊರೆದುದನೆ, ಬರೆದುದನೆ ನಾ ಬರೆಬರೆದು ಬಿನ್ನಗಾಗಿದೆ ಮನವು ಬಗೆಯೊಳಗನೇ ತೆರೆದು ನನ್ನ ನುಡಿಯೊಳೆ ಬಣ್ಣಬಣ್ಣದಲಿ ಬಣ್ಣಿಸುವ ಪನ್ನತಿಕೆ ಬರುವನಕ ನನ್ನ ಬಾಳಿದು ನರಕ’’ ಎಂಬ ಮಾತುಗಳು ಅವರ ವಿಮರ್ಶೆಗೂ ಸಲ್ಲುತ್ತವೆ. ಅವರು ಆದರ್ಶಗಳನ್ನು, ತತ್ವಗಳನ್ನು, ವಿಮರ್ಶಾವಿಧಾನಗಳನ್ನು ಕಡತಂದವರಲ್ಲ. ಭಾಷೆಯಲ್ಲಿ ಸ್ವೋಪಜ್ಞತೆಯನ್ನು, ಆತ್ಮಾಭಿವ್ಯಕ್ತಿಯನ್ನು ಪ್ರದರ್ಶಿಸಿದವರು. ಅವರ ಭಾಷೆ ಎಂದೂ ಪದಭಾರ ಜರ್ಝರಿತವಾಗಲಿಲ್ಲ. (ಹಾಗೆ ನೋಡಿದರೆ ಅವರ ಕಾವ್ಯದ ಕೆಲವು ಭಾಗಗಳಾದರೂ ಹೀಗೆ ಮತ್ತು ವಿಶೇಷವಾಗಿ ಪೌರಾಣಿಕ ಪ್ರತಿಮೆಗಳ ಪದಜಂಗುಳಿಯಿಂದ ಜರ್ಝರಿತವಾಗಿವೆ.) ಅಡಿಗರ ವಿಮರ್ಶಾವಿಧಾನದಲ್ಲಿ ಬಹು ಮುಖ್ಯವಾಗಿ ಕಾಣುವ ಒಂದು ಲಕ್ಷಣವೆಂದರೆ ಅವರು ಇತರರನ್ನು ಉಲ್ಲೇಖಿಸಿದ್ದು ಬಹುಕಡಿಮೆ. ಸಾಮಾನ್ಯವಾಗಿ ನಮ್ಮ ವಿಮರ್ಶಕರು ಅಲ್ಲಿ ಇಲ್ಲಿ ಇತರರು (ಬಹುಪಾಲು ಹಿರಿಯರು) ಹೇಳಿದ್ದನ್ನು ಉಲ್ಲೇಖಿಸಿ ‘ನಂದೂ ಅದೇಯ’ ಎಂಬ ಹಾಗೆ ಅನುಮೋದಿಸುತ್ತ ಗುಂಪಿನ ಗೋವಿಂದರಾಗಿ ರಥಯಾತ್ರೆಯಲ್ಲಿ ಹಗ್ಗವೆಳೆಯುತ್ತ ಸಾಗುವುದೇ ಹೆಚ್ಚು. ಅವರಿವರು ಹೇಳಿದ್ದು ಸರಿ, ನಿಮ್ಮದೇನು ಎಂದು ಪ್ರಶ್ನಿಸಬೇಕೆಂದನ್ನಿಸಿದರೂ ಅಂತಹ ವಿಮರ್ಶಕರಿಗೆ ಸಂದಿರುವ ಅಧಿಕೃತತೆಯೇ ಕಾರಣವಾಗಿ ಹೇಳಲು ಹಿಂಜರಿಯುವವರೇ ಹೆಚ್ಚು. ಹೀಗಾಗಿ ನಮ್ಮ ಅನೇಕ ವಿಮರ್ಶಾ ವಿಧಾನಗಳು ಕಾರ್ಪೊರೇಟ್ ವಾರ್ಷಿಕ ವರದಿಗಳಂತೆ ಒಂದು ಚೌಕಟ್ಟಿಗೆ ಬದ್ಧವಾಗಿವೆ. ಅಡಿಗರು ‘ಸಾಕ್ಷಿ’ ಎಂಬ ಸಾಹಿತ್ಯ ಪತ್ರಿಕೆಯನ್ನು ಅನೇಕ ವರ್ಷಗಳ ಕಾಲ ಸಂಪಾದಿಸಿದರು. ಆದರೂ ಅವರ ಲೇಖನಗಳು ಪತ್ರಿಕೆಯಲ್ಲಿ ಬಹು ಕಡಿಮೆ ಸಂಖ್ಯೆಯಲ್ಲಿದ್ದವು. ಈ ಪತ್ರಿಕೆ ಉದ್ದೇಶವಿದ್ದದ್ದೇ ಕನ್ನಡ ಸಾಹಿತ್ಯದ ವಿಮರ್ಶಾಪ್ರಜ್ಞೆಯನ್ನು ಬೆಳೆಸುವುದು. ಆದರೆ ಅವರು ಅದರಲ್ಲಿ ಸಫಲರಾಗದೆ ನಿರಾಶರಾದರು.

ಅವರೇ ಹೇಳುವಂತೆ ‘‘ನಮ್ಮಲ್ಲಿ ಸಾಹಿತ್ಯಶಾಸ್ತ್ರ ಪರಿಣತರಾದ, ಸಹಾನುಭೂತಿಪರರಾದ, ರಸಾನುಭವ, ಸಾಮರ್ಥ್ಯವುಳ್ಳ ವಿಮರ್ಶಕರ ಸಂಖ್ಯೆ ಈಗ ತೀರ ಪರಿಮಿತವಾಗಿರುವುದು ವಿಷಾದಕರ.’’ ಈ ಪರಿಸ್ಥಿತಿ ಅಡಿಗರು ಬರೆದ 1953ಕ್ಕಿಂತ ಆನಂತರವೂ ವಿಶೇಷ ಬದಲಾಗಿಲ್ಲವೆಂಬುದು ಅವರೇ 1962ರಲ್ಲಿ ಬರೆದ ‘‘ಕನ್ನಡದಲ್ಲಿ ಉತ್ತಮ ವಿಮರ್ಶೆ ಬರುತ್ತಿಲ್ಲ. ನಿಜವಾಗಿ ವಿಮರ್ಶಾ ಸಾಹಿತ್ಯ ಬೆಳೆಯಲೇ ಇಲ್ಲ. ಇದೊಂದು ದೊಡ್ಡ ಕೊರತೆ ಎಂಬ ಮಾತು ಈಗ್ಗೆ ಅನೇಕ ವರ್ಷಗಳಿಂದ ಕೇಳಿ ಬರುತ್ತಿದೆ. ಈ ಮಾತು ಬಹಳ ಮಟ್ಟಿಗೆ ನಿಜವೂ ಹೌದು. ಇದಕ್ಕೆ ಮುಖ್ಯ ಕಾರಣ ನಮ್ಮಲ್ಲಿ ಉತ್ತಮ ಸಾಹಿತ್ಯ ವಿಮರ್ಶೆಗೆ ಸಮರ್ಥರಾದವರು ಇಲ್ಲ ಎಂಬುದಲ್ಲ. ಅಂತಹ ವಿಮರ್ಶೆಗೆ ಬೇಕಾದ ನೈತಿಕ ಧೈರ್ಯ ತಕ್ಕಷ್ಟು ಬೆಳೆಯಲಿಲ್ಲ ಎಂಬುದೇ ಆಗಿದೆ. ಸಾಹಿತಿಗಳ ಸಂಖ್ಯೆ ತಕ್ಕಷ್ಟು ಕಡಿಮೆಯಾಗಿದ್ದು, ಅವರಲ್ಲಿ ಒಬ್ಬರು ಇನ್ನೊಬ್ಬರಲ್ಲಿ ವೈಯಕ್ತಿಕ ಸಂಬಂಧ ಹೊಂದಿದವರಾಗಿದ್ದು ವಿಮರ್ಶೆಯಲ್ಲಿ ಅಪ್ರಿಯವಾದ ಒಂದು ಮಾತು ಬಂದರೆ ಸ್ನೇಹಕ್ಕೆ ಸಂಚಕಾರ ಬಂದೀತು ಎಂಬ ಆತಂಕ, ಅಧಿಕಾರಸ್ಥ ಸಾಹಿತಿಗಳ ಕೃತಿಗಳ ಬಗ್ಗೆ ಮನಸ್ಸಿಗೆ ಅನ್ನಿಸಿದ್ದನ್ನೇ ಹೇಳಿದರೆ ಅದರಿಂದ ಬರಬಹುದಾದ ಪ್ರತೀಕಾರದ ಭಯ-ಇವು ಪ್ರಾಮಾಣಿಕವಾದ ವಿಮರ್ಶೆಯ ಬೆಳವಣಿಗೆ ಕುಂಠಿತವಾಗುವಂತೆ ಮಾಡಿದವು. ಆದ ಕಾರಣ ಈ ವರೆಗಿನ ನಮ್ಮ ವಿಮರ್ಶೆ ಸ್ನೇಹಿತರ ಬಗ್ಗೆ ದಾಕ್ಷಿಣ್ಯ, ದೊಡ್ಡವರ ಬಗ್ಗೆ ಭಯ, ಮೂರನೆಯವರ ಬಗ್ಗೆ ಔದಾಸೀನ್ಯ ಅಥವಾ ನಿಷ್ಕಾರಣ ವಿರೋಧ- ಇವುಗಳಿಂದ ಮಲಿನವಾಗಿದೆ. ಎಂದರೆ ವಿಮರ್ಶನಕಾರ್ಯ ವ್ಯಕ್ತಿನಿಷ್ಠವಾಗಿತ್ತೇ ಹೊರತು ಕೃತಿನಿಷ್ಠವಾಗಿರಲಿಲ್ಲ. ಸಾಮಾನ್ಯವಾಗಿ ಪರಸ್ಪರ ಪ್ರಶಂಸೆಯಲ್ಲಿ ಅಥವಾ ಕಾವ್ಯ ಮೀಮಾಂಸೆಯ ಅಮೂರ್ತ ರೂಪದಲ್ಲಿ ವಿಮರ್ಶಕ ತನ್ನ ಶಕ್ತಿಯನ್ನು ವಿನಿಯೋಗಿಸಿ ಪ್ರಸಿದ್ಧನಾಗಬೇಕಿತ್ತು’’ ಎಂಬ ಸಾಲುಗಳು ಸಾಕ್ಷಿ. (ಮುಂದುವರಿಯುವುದು)

(07/03/2020ರಂದು ಕರ್ನಾಟಕ ಸಾಹಿತ್ಯ ಅಕಾಡಮಿಯ ಆಶ್ರಯದಲ್ಲಿ ಪುತ್ತೂರಿನಲ್ಲಿ ನಡೆದ ‘‘ಗೋಪಾಲಕೃಷ್ಣ ಅಡಿಗರ ಸಾಹಿತ್ಯದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ’’ ಎಂಬ ವಿಚಾರ ಸಂಕಿರಣದಲ್ಲಿ ಮಾಡಿದ ಭಾಷಣದ ಲಿಖಿತ ರೂಪದ ಮೊದಲ ಭಾಗ. ಉಳಿದದ್ದು ಮುಂದಿನ ವಾರ.)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)