varthabharthi


ವೈವಿಧ್ಯ

ಮನುಜ ಸಂಬಂಧಗಳ ಸೂಕ್ಷ್ಮ ತಂತುಗಳು

ವಾರ್ತಾ ಭಾರತಿ : 15 Mar, 2020
ನಾ. ದಿವಾಕರ

ಗುರಿ ತಲುಪುವ ಹಂಬಲ, ಶಿಖರವೇರುವ ಕಾತರ, ಹೊಸ ಲೋಕದ ಕನಸು ಗತ ಜೀವನದ ಎಲ್ಲ ಚುಕ್ಕೆಗಳನ್ನೂ ಅಳಿಸಿಹಾಕಿಬಿಡುತ್ತದೆ. ರಂಗೋಲಿಯಂತೆ. ರಂಗೋಲಿಗೆ ಚುಕ್ಕೆಗಳೇ ಆಧಾರ. ಆದರೆ ಚಿತ್ತಾರದಂತೆ ನೆಲದ ಮೇಲೆ ಮೂಡಿದ ರಂಗೋಲಿಯಲ್ಲಿ ಚುಕ್ಕೆಗಳನ್ನು ಗುರುತಿಸುವುದು ಹೇಗೆ? ಗೆರೆಗಳ ಅಡಿ ಹುಗಿದುಹೋಗಿರುತ್ತದೆ. ಗುಡಿಸಿದರೆ ರಂಗೋಲಿಯೇ ಮಾಯವಾಗುತ್ತದೆ. ಏನೇ ಮಾಡಿದರೂ ಚುಕ್ಕೆಗಳನ್ನು ಗುರುತಿಸಲಾಗುವುದಿಲ್ಲ. ಬದುಕೂ ಹಾಗೆಯೇ.

ಸಾವು ಎಂದರೆ ಬದುಕಿನ ಅಂತ್ಯವಲ್ಲ. ಮತ್ತೊಂದು ಬದುಕಿನ ಆರಂಭ. ಆರಂಭವಾಗುವ ಬದುಕು ಸತ್ತವನಿಗೆ ಸಂಬಂಧಿಸಿರುವುದಿಲ್ಲ. ಆದರೆ ಸತ್ತವನಿಂದಲೇ ಅಸ್ತಿತ್ವಕ್ಕೆ ಬಂದಿರುತ್ತದೆ. ಆದ್ದರಿಂದಲೇ ಸತ್ತವನಿಗೊಂದು ಪಿಂಡ ಪ್ರಧಾನ, ವರುಷಕ್ಕೊಮ್ಮೆ ನೆನಪು ಇತ್ಯಾದಿ. ಹೊಸ ಬದುಕು ರೂಪಿಸಿಕೊಳ್ಳುವವರ ಅಸ್ತಿತ್ವ ಸತ್ತ ವ್ಯಕ್ತಿಯ ಅಸ್ಥಿಯಲ್ಲಿರುತ್ತದೆ. ಆದರೆ ಆಸ್ತಿಯಿಲ್ಲದೆ ಅಸ್ಥಿಯಾಗುವವನಿಗೆ ಅಸ್ತಿತ್ವವೇ ಇರುವುದಿಲ್ಲ. ಏಕೆಂದರೆ ಹೊಸ ಬದುಕು ಕಂಡುಕೊಳ್ಳುವವರಿಗೆ ಅಸ್ಥಿ ಕೇವಲ ಬೂದಿ ಮಾತ್ರ. ಗಾಳಿ ಬಂದರೆ ತೂರಿಹೋಗುತ್ತದೆ, ಮಳೆ ಬಂದರೆ ಮಣ್ಣಲ್ಲಿ ಮಣ್ಣಾಗುತ್ತದೆ. ಕುಡಿಕೆಯಲ್ಲಿಟ್ಟು ನದಿಯಲ್ಲಿ ತೇಲಿಬಿಟ್ಟ ಅಸ್ಥಿ ತನ್ನ ಮೂಲ ಅಸ್ಮಿತೆಯನ್ನೇ ಕಳೆದುಕೊಳ್ಳುತ್ತದೆ. ಇಷ್ಟಾದರೂ ಮನುಜ ಸಂಬಂಧಗಳನ್ನು ಗ್ರಹಿಸಲಾಗುವುದಿಲ್ಲವಲ್ಲಾ! ಆಸರೆಗೂ ಪ್ರೀತಿಗೂ ಸೂಕ್ಷ್ಮ ಸಂಬಂಧ ಇರುತ್ತದೆ. ಸುರಕ್ಷತೆಗೂ ಸಂಬಂಧಗಳಿಗೂ ಸೂಕ್ಷ್ಮ ಸಂಬಂಧ ಇರುತ್ತದೆ. ಆಶ್ರಯಕ್ಕೂ ಗೌರವಕ್ಕೂ ಸೂಕ್ಷ್ಮ ಸಂಬಂಧ ಇರುತ್ತದೆ.

 ಆಸರೆಯ ಭರವಸೆ ಇಲ್ಲದೆ ಪ್ರಾಣಿಯೂ ಮನುಷ್ಯನನ್ನು ಪ್ರೀತಿಸುವುದಿಲ್ಲ. ಮನುಷ್ಯನೂ ಅಷ್ಟೇ ತನ್ನ ಉಪಯೋಗಕ್ಕೆ ಬಾರದ ಪ್ರಾಣಿಯನ್ನೂ ಪ್ರೀತಿಸುವುದಿಲ್ಲ. ಮಾನಸಿಕ ಸಾಂತ್ವನವೋ, ಸ್ಥಿರಾಸ್ತಿ ರಕ್ಷಣೆಯೋ, ಸಂಪತ್ತಿನ ಭದ್ರತೆಯೋ, ಜೀವ ರಕ್ಷಣೆಯೋ ಇದಾವುದೂ ಇಲ್ಲದೆ ಪ್ರಾಣಿಯನ್ನು ಮನುಷ್ಯ ಅಪ್ಪಿಕೊಳ್ಳಲಾರ. ಸ್ವಾರ್ಥ ಎನ್ನಬಹುದೇ? ಹಾಗೆನ್ನಲಾಗುವುದಿಲ್ಲ ಏಕೆಂದರೆ ಇದು ಮನುಷ್ಯನ ಸಹಜ ಗುಣ. ಪ್ರಾಣಿಗಳಿಗೆ ಇದು ತಿಳಿದಿರುವುದಿಲ್ಲ. ಪಾಪ, ಒಡೆಯನ ಬಗ್ಗೆ ಅಪಾರ ವಿಶ್ವಾಸ ಹೊಂದಿರುತ್ತದೆ. ಮನುಷ್ಯನಿಗೆ ಈ ವಿಶ್ವಾಸವೇ ಬಂಡವಾಳ. ಒಮ್ಮೆ ವಿಶ್ವಾಸ ಗಳಿಸಿಬಿಟ್ಟರೆ ಸಾಕು ತನ್ನ ಸುತ್ತಲಿರುವುದೆಲ್ಲವೂ ತನ್ನದೇ ಎಂದು ಬಾಚಿಕೊಳ್ಳಲಾರಂಭಿಸುತ್ತಾನೆ. ಈ ವಿಶ್ವಾಸ ಮೂಡುವುದಾದರೂ ಹೇಗೆ? ಪ್ರೀತಿ, ವಾತ್ಸಲ್ಯ, ಮಮತೆ, ಮಮಕಾರ ಹೀಗೆ ಸಂವೇದನಾಶೀಲ ಅಭಿವ್ಯಕ್ತಿಗಳ ಮೂಲಕ. ಆಸರೆ ನೀಡುವ ಭುಜಗಳು, ಆಶ್ರಯ ನೀಡುವ ಬಾಹುಗಳು ಈ ವಿಶ್ವಾಸದ ಭಂಡಾರಗಳು. ತಾನು ಆಶ್ರಯಿಸುವ ಬಾಹುಗಳು ದಷ್ಟಪುಷ್ಟವಾಗಿವೆ ಎಂದು ಖಾತರಿಯಾದ ಕೂಡಲೇ ಪ್ರೀತಿ ನಾಟಕೀಯವಾಗಿಬಿಡುತ್ತದೆ. ಏಕೆಂದರೆ ಕಪಟ ಪ್ರೀತಿಯನ್ನು ವಿಶ್ವಾಸದ ಛಾಯೆ ಆವರಿಸಿರುತ್ತದೆ.

 ಮನುಷ್ಯನ ಒಂದು ಗುಣ ಎಂದರೆ, ದುರ್ಗುಣವೂ ಆಗಬಹುದು, ತನಗೆ ದೊರೆತಿದ್ದನ್ನು ತನ್ನದೇ ಎಂದು ಭಾವಿಸಿ ಕೂಪ ನಿರ್ಮಿಸುವುದು. ತಾನು ತನ್ನದಲ್ಲದ ಶ್ರಮದಿಂದ ಗಳಿಸುವ ಪ್ರೀತಿ ವಿಶ್ವಾಸ ತನ್ನದಲ್ಲ, ಅದು ತನ್ನ ಹಕ್ಕೂ ಅಲ್ಲ ಎಂದು ಯಾರೂ ಭಾವಿಸುವುದಿಲ್ಲ. ಏಕೆಂದರೆ ತನ್ನದು ಎನ್ನುವ ಸ್ವಾರ್ಥದಲ್ಲಿ ಭವಿಷ್ಯದ ಭಂಡಾರ ಅಡಗಿರುತ್ತದೆ. ಮಕ್ಕಳಿಗೆ ಒಂದು ಬದುಕು ಕೊಟ್ಟಿರುತ್ತೇವೆ. ಅದೇನು ಒಂದೆರಡು ದಿನದ ಶ್ರಮವೇ? ಹಗಲಿರುಳು ನಿದ್ದೆಗೆಟ್ಟು, ಅನ್ನಾಹಾರ ತ್ಯಜಿಸಿ, ತಮ್ಮ ಸ್ವಂತ ಹಿತಾಸಕ್ತಿಗಳನ್ನು ಬದಿಗಿಟ್ಟು, ಬೇಕೆನಿಸಿದ್ದನ್ನೂ ಬೇಡವೆನ್ನುತ್ತಾ ಅಂಬೆಗಾಲಿನ ಹಂತದಿಂದ ಅಂಬಿಗನ ಹಂತದವರೆಗೆ ಶ್ರಮಿಸುವ ಹೆತ್ತವರ ಪ್ರತಿಯೊಂದು ರಕ್ತ ಕಣವೂ ಹೆತ್ತ ಮಕ್ಕಳ ಬೆಳವಣಿಗೆಗೆ ಇಂಧನವಾಗಿರುತ್ತದೆ. ಜೈವಿಕ ಪ್ರಕ್ರಿಯೆಯಲ್ಲಿ ಬೌದ್ಧಿಕ ಇಂಧನದ ಸಂಗ್ರಹ ಗಟ್ಟಿಯಾಗಿದ್ದರೂ ಭೌತಿಕ ಇಂಧನ ಕ್ಷೀಣಿಸುತ್ತಲೇ ಇರುತ್ತದೆ. ಈ ಇಂಧನವನ್ನು ಕಾಪಾಡುವ ಹೊಣೆ ಮಕ್ಕಳ ಮೇಲಿರುತ್ತದೆ. ಆದರೆ ಬಹುಪಾಲು ಸಂದರ್ಭಗಳಲ್ಲಿ ಹೆತ್ತವರೊಳಗಿನ ಈ ಇಂಧನ ಮಕ್ಕಳ ದೃಷ್ಟಿಯಲ್ಲಿ ತ್ಯಾಜ್ಯ ಎನಿಸಿಬಿಡುತ್ತದೆ.

ಏಕೆ ಹೀಗಾಗುತ್ತದೆ? ಕಾರಣ ಇಷ್ಟೇ. ಹೆತ್ತವರ ಅವಿರತ ದುಡಿಮೆ, ಅಹರ್ನಿಶಿ ಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನಗಳು ಮಕ್ಕಳಲ್ಲೇ ಹೆಚ್ಚುವರಿ ಇಂಧನವನ್ನು ಸೃಷ್ಟಿಮಾಡಿರುತ್ತವೆ. ತಮ್ಮ ಬದುಕಿನ ಬಂಡಿಯನ್ನು ತಾವೇ ಸಾಗಿಸುವ ಸಾಮರ್ಥ್ಯ ಗಳಿಸಿಬಿಟ್ಟಿರುತ್ತಾರೆ. ಬಿರಬಿರನೆ ನಡೆದುಬಿಡುತ್ತಾರೆ. ತನ್ನ ಈ ಕುಡಿಯ ಹೆಗಲ ಮೇಲೆ ಕೈಯಿಟ್ಟು ಆಸರೆ ಬಯಸುವ ಹೆತ್ತವರ ಬಯಕೆ ಕಮರಿಹೋಗುತ್ತದೆ. ಆಸರೆ ಬಯಸಿ ಅಪ್ಪಿಕೊಂಡಿದ್ದ ಬಾಹುಗಳು ಮಕ್ಕಳ ದೃಷ್ಟಿಯಲ್ಲಿ ಬಂಧನದ ಸರಳುಗಳಂತೆ ಕಾಣುತ್ತವೆ. ನೀನು ನಡೆಯುತ್ತಿರುವ ಹಾದಿ ಕಲ್ಲು ಮುಳ್ಳುಗಳಿಂದ ತುಂಬಿದೆ ಎಂದು ಬುದ್ಧಿ ಹೇಳುವ ಹೆತ್ತವರ ದನಿ ಮಕ್ಕಳಿಗೆ ಶತ್ರು ಪಾಳಯದ ರಣಘೋಷದಂತೆ ಕಾಣುತ್ತದೆ. ಮಡಿಲಲ್ಲಿ ಹೊತ್ತ ಮಿತ್ರ ಹೃದಯ ಕಡಲಿನಲ್ಲಿ ಮುಳುಗುತ್ತಿರುವ ನಾವೆಯಂತೆ ಕಾಣುತ್ತದೆ. ಈ ಸಂದರ್ಭದಲ್ಲಿ ನೆರವಿಗೆ ಧಾವಿಸಿದರೆ ತಾವೂ ಮುಳುಗಿಹೋಗುತ್ತೇವೆ ಎಂಬ ಭೀತಿಯಿಂದ ಮಕ್ಕಳು ದಂಡೆಯಲ್ಲೇ ಕುಳಿತು ರೋದಿಸುತ್ತಾರೆ. ಈ ರೋದನದ ಹಿಂದೆ ತಮ್ಮ ಉಳಿವಿನ ಸ್ವಾರ್ಥವೇ ಹೆಚ್ಚಾಗಿರುತ್ತದೆ. ಹೆತ್ತವರ ಅಳಿವು ಅನಿವಾರ್ಯವೇನೋ ಎನಿಸಿಬಿಡುತ್ತದೆ.

ನಾನೇನು ಮಾಡಲು ಸಾಧ್ಯವಿತ್ತು? ಈ ಪ್ರಶ್ನೆ ಎಷ್ಟು ಮಾರ್ಮಿಕ ಅಲ್ಲವೇ? ಏಕೆ ಸಾಧ್ಯವಾಗುವುದಿಲ್ಲ. ಎಳೆ ವಯಸ್ಸಿನಲ್ಲಿ ಪ್ರತಿಹೆಜ್ಜೆಯಲ್ಲೂ ನೊಗದಂತೆ ಆಸರೆ ನೀಡುವ ಹೆಗಲು ಸವೆದುಹೋಗುತ್ತಿರುವಾಗ ತಾನು ಆಶ್ರಯಿಸಿದ ಸೂರು ಕುಸಿಯುತ್ತಿದೆ ಎಂಬ ಕನಿಷ್ಠ ಪ್ರಜ್ಞೆಯಾದರೂ ಮೂಡಬೇಕಲ್ಲವೇ? ಮೂಡುವು ದಿಲ್ಲ. ಏಕೆಂದರೆ ಭವಿಷ್ಯದ ಹೆಜ್ಜೆಗಳನ್ನು ದೃಢಪಡಿಸಿಕೊಳ್ಳಲು ಭೂತಕಾಲದ ಹೆಜ್ಜೆಗಳು ಅಡ್ಡಗೋಡೆಗಳಂತೆ ನಿಂತು ಬಿಡುತ್ತವೆ. ನಿನ್ನದೇ ಉತ್ಪನ್ನ ನೀನು ಸಂರಕ್ಷಿಸಿದೆ ಎನ್ನುವ ಮಾರುಕಟ್ಟೆ ಧೋರಣೆ ಮಕ್ಕಳಲ್ಲಿ ಬೇರೂರಿಬಿಡುತ್ತದೆ. ಹೌದಲ್ಲವೇ ಹೆತ್ತವರ ಹುಟ್ಟು ಹೇಗೆ ನಿಗೂಢ ಮತ್ತು ಆಕಸ್ಮಿಕವೋ ಮಕ್ಕಳ ಹುಟ್ಟೂ ಅಷ್ಟೇ. ಯಾವುದೂ ಪೂರ್ವ ನಿರ್ಧರಿತವಲ್ಲ. ಯಾವುದೇ ಪೂರ್ವ ಯೋಜಿತವಲ್ಲ. ಎಲ್ಲರ ಪಯಣವೂ ಆಕಸ್ಮಿಕವೇ. ಪಯಣದ ಅಂತ್ಯವೂ ಆಕಸ್ಮಿಕವೇ. ಕಾಲ್ಗಳಲ್ಲಿ ಶಕ್ತಿ ಇರುವ ಗೂಳಿ ಗುರಿ ಮುಟ್ಟಲು ದಾಪುಗಾಲು ಹಾಕುತ್ತವೆ. ಕೃಷ ದೇಹದ ಗೋವು ಕುಂಟುತ್ತಾ ತೆವಳುತ್ತಾ ಸಿಕ್ಕ ಹುಲ್ಲನ್ನು ಮೇಯುತ್ತಾ ಮುನ್ನಡೆಯುತ್ತದೆ. ಗೂಳಿ ಗೆಲ್ಲುವುದೋ, ಗೋವು ಗೆಲ್ಲುವುದೋ ಎನ್ನುವುದು ಅಪ್ರಸ್ತುತವಾಗಿಬಿಡುತ್ತದೆ. ಗುರಿಮುಟ್ಟುವುದೊಂದೇ ಧ್ಯೇಯವಾದರೆ ಗುರಿ ತೋರಿಸಿದವರೂ ಅಪ್ರಯೋಜಕರಾಗಿಬಿಡುತ್ತಾರೆ.

ಗುರಿ ತಲುಪುವ ಹಂಬಲ, ಶಿಖರವೇರುವ ಕಾತರ, ಹೊಸ ಲೋಕದ ಕನಸು ಗತ ಜೀವನದ ಎಲ್ಲ ಚುಕ್ಕೆಗಳನ್ನೂ ಅಳಿಸಿಹಾಕಿಬಿಡುತ್ತದೆ. ರಂಗೋಲಿಯಂತೆ. ರಂಗೋಲಿಗೆ ಚುಕ್ಕೆಗಳೇ ಆಧಾರ. ಆದರೆ ಚಿತ್ತಾರದಂತೆ ನೆಲದ ಮೇಲೆ ಮೂಡಿದ ರಂಗೋಲಿಯಲ್ಲಿ ಚುಕ್ಕೆಗಳನ್ನು ಗುರುತಿಸುವುದು ಹೇಗೆ? ಗೆರೆಗಳ ಅಡಿ ಹುಗಿದುಹೋಗಿರುತ್ತದೆ. ಗುಡಿಸಿದರೆ ರಂಗೋಲಿಯೇ ಮಾಯವಾಗುತ್ತದೆ. ಏನೇ ಮಾಡಿದರೂ ಚುಕ್ಕೆಗಳನ್ನು ಗುರುತಿಸಲಾಗುವುದಿಲ್ಲ. ಬದುಕೂ ಹಾಗೆಯೇ. ಮಕ್ಕಳ ಬದುಕಿನಲ್ಲಿ ಚುಕ್ಕೆಗಳನ್ನಿಡುತ್ತಾ, ಒಂದಕ್ಕೊಂದನ್ನು ಜೋಡಿಸುತ್ತಾ ರಂಗುರಂಗಿನ ಚಿತ್ತಾರದ ರಂಗೋಲಿಯನ್ನು ಬಿಡಿಸಿದ ನಂತರ ಚುಕ್ಕೆ ಇಟ್ಟ ಕೈಗಳು ನಿಕೃಷ್ಟವಾಗಿಬಿಡುತ್ತವೆ. ಚುಕ್ಕೆ ಜೋಡಿಸಿದ ಹೃದಯ ಅನಗತ್ಯ ಎನಿಸಿಬಿಡುತ್ತದೆ. ಏಕೆಂದರೆ ಹೊಸ ಲೋಕದಲ್ಲಿ ರಂಗೊಲಿಯ ಮೂಲ ಯಾರಿಗೂ ಬೇಕಾಗುವುದಿಲ್ಲ. ರಂಗುರಂಗಿನ ಚಿತ್ತಾರ ಮಾತ್ರವೇ ಹೊಳೆಯುತ್ತಿರುತ್ತದೆ. ಆಹಾ ಎಷ್ಟು ಸುಂದರವಾಗಿದೆ! ಎಂದು ಹುಬ್ಬೇರಿಸುವವರಿಗೆ ಆ ಸೌಂದರ್ಯದ ಹಿಂದೆ ಅಡಗಿರುವ ಶ್ರಮ, ವೇದನೆ, ನೋವು ಏಕೆ ಬೇಕು? ಆದರೆ ಹುಬ್ಬೇರಿಸುವ ಮಟ್ಟಿಗೆ ಬೆಳೆದುನಿಂತವರಿಗೆ ಇದರ ಪರಿವೆ ಇರಬೇಕಲ್ಲವೇ?

ಮತ್ತದೇ ಪ್ರಶ್ನೆ. ಅಸ್ತಿ ಮತ್ತು ಆಸ್ಥಿಯ ನಡುವಿನ ಸೂಕ್ಷ್ಮ ಗೆರೆಗಳು. ಈ ಗೆರೆಗಳನ್ನು ಕೂಡಿಸುವುದಾದರೂ ಏಕೆ? ಬದುಕಿರುವಾಗಲೇ ವಿಸರ್ಜಿಸಲಾದ ಭಾವನೆಗಳನ್ನು ಸುಟ್ಟ ದೇಹದ ಅಸ್ಥಿಯಲ್ಲಿ ಕಾಣುವ ಕ್ರೌರ್ಯ ಮತ್ತು ಸ್ವಾರ್ಥ ಮನುಜ ಸಂಬಂಧಗಳನ್ನು ವ್ಯಾವಹಾರಿಕವಾಗಿಸುತ್ತಿದೆ. ಅದಕ್ಕೇ ಹೆತ್ತೊಡಲು ವೈರಿಯಂತೆ ಕಾಣುತ್ತದೆ. ಅಸ್ತಿತ್ವ ಮತ್ತು ಅಸ್ಮಿತೆಯ ಶೋಧದಲ್ಲಿ ಬದುಕಿನ ಸಿಕ್ಕುಗಳನ್ನು ಎಳೆಎಳೆಯಾಗಿ ಬಿಡಿಸಲು ಕುಳಿತಾಗ ತೋಚುವುದು ಇಷ್ಟೇ, ಸ್ವಾರ್ಥ ಜಗತ್ತಿನಲ್ಲಿ ಮನುಷ್ಯ ಬದುಕುತ್ತಾನೆ ಮಾನವ ಸಂವೇದನೆ ಸತ್ತುಹೋಗುತ್ತದೆ. ಸಂವೇದನೆಯ ಸೋಂಕಿಲ್ಲದ ಒಂದು ಪಯಣ ತನ್ನದೇ ಸ್ವಾರ್ಥದ ಭದ್ರಕೋಟೆಯ ನಡುವೆ ಮುಂದುವರಿಯುತ್ತದೆ. ಸತ್ಯ ಮಿಥ್ಯೆಯ ನಡುವಿನ ಸಂಘರ್ಷದಲ್ಲಿ ಸತ್ಯ ಗೆಲುವು ಸಾಧಿಸಲೇಬೇಕು. ಆದರೆ ಬದುಕು ಕ್ರೂರ ರಣಾಂಗಣವಾದಾಗ ಮಿಥ್ಯೆ ರಾರಾಜಿಸುತ್ತದೆ. ಸತ್ಯದ ಸಮಾಧಿಯಡಿ ಅಸ್ತಿಯ ಧೂಳು ಮಣ್ಣಾಗುತ್ತದೆ. ಒಂದು ಸಾವು ಮತ್ತೊಂದು ಬದುಕಿನ ಆರಂಭಕ್ಕೆ ಮುನ್ನುಡಿಯಾಗುತ್ತದೆ. ಅಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)