varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 15 Mar, 2020
ಪಿ.ಎ.ರೈ

ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯೇ ಸರಕಾರದ ಗುರಿ - ಸ್ಮತಿ ಇರಾನಿ, ಕೇಂದ್ರ ಸಚಿವೆ.

ಎಲ್ಲರೂ ಎಂದರೆ ಅಮೆರಿಕ, ಅನಿಲ್ ಅಂಬಾನಿ, ಅದಾನಿಗಳಿರಬೇಕು.


ಹಲವು ಸೋಂಕುಗಳಿಂದ ತಮ್ಮನ್ನು ಕಾಪಾಡಿಕೊಳ್ಳುವುದು ಹೇಗೆ ಎನ್ನುವುದನ್ನು ಕಲಿಸಲು ಚೀನಾಕ್ಕೆ ತೆರಳಲು ಸಿದ್ಧನಿದ್ದೇನೆ - ಬಾಬಾರಾಮ್‌ದೇವ್, ಯೋಗ ಗುರು.

ದಯವಿಟ್ಟು ಅದನ್ನು ತಕ್ಷಣ ಮಾಡಿ. ಭಾರತದ ವೈದ್ಯಕೀಯ ಕ್ಷೇತ್ರವನ್ನು ಕಾಪಾಡಿ. ಮಾಸ್ಕ್ ಹಾಕದೇ ಹೋದರೆ ಇನ್ನೂ ಉತ್ತಮ.


ಬಿಜೆಪಿ ಅಧಿಕಾರಕ್ಕೆ ಬರಲು ನಾನೂ ಕಾರಣಕರ್ತ. ಅದಕ್ಕೆ ಯಡಿಯೂರಪ್ಪ ಜೂನ್ ನಂತರ ನನಗೆ ಸಚಿವ ಸ್ಥಾನ ನೀಡುವ ಭರವಸೆ ಕೊಟ್ಟಿದ್ದಾರೆ - ಆರ್. ಶಂಕರ್, ಮಾಜಿ ಸಚಿವ.
ಅಧಿಕಾರಕ್ಕೆ ಬರಲು ಮತದಾರರ ಪಾತ್ರವೇ ಇಲ್ಲ ಎಂದಾಯಿತು.


ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್‌ರ ನಡೆ ‘ಮಾಡುವುದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ’ ಎಂಬಂತಿದೆ - ಆರ್. ವಿಶ್ವನಾಥ, ಮಾಜಿ ಸಚಿವ.

ನಿಮ್ಮ ಗ್ರಹಚಾರದ ಮುಂದೆ ಅದೇನೂ ಅಲ್ಲ ಬಿಡಿ.


ಸಂವಿಧಾನ ಇರುವ ತನಕ ಭಾರತವನ್ನು ಹಿಂದೂ ದೇಶ ಮಾಡಲು ಸಾಧ್ಯವಿಲ್ಲ

- ಸ್ವಾಮಿ ಅಗ್ನಿವೇಶ್, ಹರ್ಯಾಣ ಮಾಜಿ ಶಾಸಕ.
ಅದಕ್ಕೇ ಸಂವಿಧಾನವನ್ನು ಇಲ್ಲವಾಗಿಸಲು ಹೊರಟಿರುವುದು.


ಸಂವಿಧಾನಕ್ಕೆ ಟೈಂ ಬಾಂಬ್ ಫಿಕ್ಸ್ ಆಗಿದೆ - ಸಿ.ಟಿ. ರವಿ, ಸಚಿವ.

ಶೃಂಗೇರಿಯಲ್ಲಿ ಪೆಟ್ರೋಲ್ ಬಾಂಬ್ ಬೆದರಿಕೆ ಒಡ್ಡಿದವರ ಕೈವಾಡವಿದೆಯಂತೆ.


ಮಾಜಿ ಪ್ರಧಾನಿ ವಾಜಪೇಯಿ ಕಾಲದ ಬಿಜೆಪಿ ಈಗ ಉಳಿದಿಲ್ಲ - ಸಿ.ಎಂ. ಇಬ್ರಾಹೀಂ, ಕಾಂಗ್ರೆಸ್ ಮುಖಂಡ.

ನೆಹರೂ ಕಾಲದ ಕಾಂಗ್ರೆಸ್ ಈಗ ಉಳಿದಿದೆಯೇ?


ಯಡಿಯೂರಪ್ಪ ಇಲ್ಲದಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಝೀರೋ - ಎಸ್.ಆರ್. ಪಾಟೀಲ್, ವಿ.ಪ. ವಿರೋಧ ಪಕ್ಷದ ನಾಯಕ.
ಕಾಂಗ್ರೆಸ್ ಝೀರೋ ಆಗಿರುವುದಕ್ಕೆ ಯಾರು ಕಾರಣ ಎನ್ನುವುದನ್ನು ಮೊದಲು ಕಂಡುಕೊಳ್ಳಿ.


ಮಾತಿಗೆ ನಿಲುಕದ ಸಂದರ್ಭಗಳು ನನಗೆ ತುಂಬಾ ಇಷ್ಟ - ಅಮಿತಾಬಚ್ಚನ್, ನಟ.

ಬಹುಶಃ ಮೂಕ ಚಿತ್ರಗಳ ಬಗ್ಗೆ ಮಾತನಾಡುತ್ತಿರಬೇಕು.


ಮಹಾತ್ಮಾ ಗಾಂಧಿ ಚುನಾವಣೆಗೆ ನಿಂತರೂ ಸೋಲುವಂತಹ ಸ್ಥಿತಿಯಲ್ಲಿದ್ದೇವೆ - ಸಿ.ಟಿ. ರವಿ, ಸಚಿವ.

ಕೊಂದವರಿಗೆ ಸೋಲಿಸುವುದು ಕಷ್ಟವೇ?


ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಟಾಯ್ಲೆಟ್‌ಗೆ ಹೋಗಲೂ ಅಡ್ಡಿಯಾಗುತ್ತದೆ - ಜಗದೀಶ್ ಶೆಟ್ಟರ್, ಸಚಿವ.
ಚುನಾವಣಾ ಭಾಷಣದ ಹೆಸರಿನಲ್ಲಿ ವಿಸರ್ಜಿಸಿದರೆ ಸಾಕಾಗುವುದಿಲ್ಲವೇ?


ಕಾಂಗ್ರೆಸ್‌ನಲ್ಲಿದ್ದು ದೇಶ ಸೇವೆ ಮಾಡಲು ಅಸಾಧ್ಯ - ಜ್ಯೊೀತಿರಾದಿತ್ಯ ಸಿಂಧಿಯಾ, ಮಧ್ಯಪ್ರದೇಶ ಕಾಂಗ್ರೆಸ್‌ನಿಂದ ಹೊರಬಂದ ನಾಯಕ.

ಬಿಜೆಪಿಯಲ್ಲಿದ್ದು ಆರೆಸ್ಸೆಸ್ ಸೇವೆಯೇ ವಾಸಿಯಂತೆ.


ನಮ್ಮಲ್ಲಿ ಬಿಸಿಲು ಹೆಚ್ಚಿರುವುದರಿಂದ ಕೊರೋನ ಸೋಂಕು ಹರಡುವ ಸಾಧ್ಯತೆ ಕಡಿಮೆ - ಶ್ರೀರಾಮುಲು, ಸಚಿವ.

ಆದರೆ ನೀವು ಹರಡುತ್ತಿರುವ ಸೋಂಕನ್ನು ತಡೆಯಲು ಯಾವ ಬಿಸಿಲಿಗೂ ಸಾಧ್ಯವಿಲ್ಲ.


ಮುಂದಿನ ಮೂರು ವರ್ಷ ಯಡಿಯೂರಪ್ಪರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ - ವಿಜಯೇಂದ್ರ, ಬಿಜೆಪಿ ಯುವ ನಾಯಕ.

ಆ ಬಳಿಕ ಆ ಸ್ಥಾನವನ್ನು ತಮಗೆ ವಹಿಸಿಕೊಡುತ್ತಾರೆ ಎಂದು ಹೇಳುತ್ತಿದ್ದೀರಿ.


ದಿಲ್ಲಿ ಗಲಭೆ ಆರೋಪಿಗಳು ಯಾವುದೇ ಪಕ್ಷ, ಜಾತಿ, ಧರ್ಮದವರಾಗಿದ್ದರೂ ತಕ್ಕ ಶಾಸ್ತಿ ಮಾಡಲಾಗುವುದು - ಅಮಿತ್ ಶಾ, ಕೇಂದ್ರ ಸಚಿವ.

ಅಂದರೆ ಯಾವ ಪಕ್ಷದವರು, ಯಾವ ಧರ್ಮದವರು ಎನ್ನುವುದನ್ನೂ ಗುರುತಿಸಿ ಆಗಿರಬೇಕು.

‘ಮಧ್ಯಪ್ರದೇಶದ ವೈರಸ್’ ಮಹಾರಾಷ್ಟ್ರಕ್ಕೆ ಪ್ರವೇಶಿಸುವುದಿಲ್ಲ - ಸಂಜಯ್‌ರಾವತ್, ಶಿವಸೇನೆ ನಾಯಕ.

ದಿಲ್ಲಿಯ ವೈರಸ್ ಆಗಮಿಸದಂತೆ ನೋಡಿಕೊಳ್ಳಿ.


ನಮ್ಮಲ್ಲಿರುವುದು ಒಂದೇ ಗುಂಪು. ಅದು ಸೋನಿಯಾ ಗಾಂಧಿ ನೇತೃತ್ವದ ಗುಂಪು - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ.

ಬಿಜೆಪಿ ಗುಂಪು, ಆರೆಸ್ಸೆಸ್ ಗುಂಪುಗಳು ಕೂಡ ಇವೆ. ಸರಿಯಾಗಿ ತಪಾಸಣೆ ಮಾಡಿ.


ಡಿಕೆಶಿ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂಬ ವಿಷಯ ತಿಳಿದು ಆಶ್ಚರ್ಯವಾಯಿತು- ಕೆ.ಎಸ್. ಈಶ್ವರಪ್ಪ, ಸಚಿವ.

ನಿಮ್ಮನ್ನು ಮಾಡಬೇಕಾಗಿತ್ತೇ?


ಮಾಜಿ ಸ್ಪೀಕರ್ ರಮೇಶ್ ಕುಮಾರ್ ಎಷ್ಟು ಕೊಲೆ ಮಾಡಿಸಿದ್ದಾರೆ ಎಂಬ ಬಗ್ಗೆ ನನ್ನಲ್ಲಿ ಸಾಕ್ಷಿಗಳಿವೆ - ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ.
 ಮತ್ತೇಕೆ ಆ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಬಾರದು.


ನನಗೆ ತಮಿಳುನಾಡು ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆ ಇಲ್ಲ - ರಜನಿಕಾಂತ್, ನಟ.

ಯಾವುದಾದರೂ ಸಿನೆಮಾದಲ್ಲಿ ಮುಖ್ಯಮಂತ್ರಿಯಾಗಿ ಆಸೆ ತೀರಿಸಿಕೊಂಡರೆ ಆಯಿತು.


ನಾನು ಸಂಡೇ, ಮಂಡೇ ಲಾಯರ್ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ.

ಉಳಿದ ಸಮಯದಲ್ಲಿ ಲಯರ್.


ಐತಿಹಾಸಿಕ ಪ್ರಮಾದಗಳನ್ನು ಸರಿಪಡಿಸುವ ಮೂಲಕ ಭಾರತ ಬದಲಾಗುತ್ತಿದೆ - ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ.

ಸಂವಿಧಾನವನ್ನು ಮನುಸ್ಮತಿಯಾಗಿ ಬದಲಾಯಿಸುವ ಮೂಲಕ.


ಕೊರೋನ ವೈರಸ್ ಭೀತಿ ಇರುವುದರಿಂದ ರಾಜ್ಯ ಸರಕಾರ ಸದನ ನಡೆಸುವ ಬಗ್ಗೆಯೂ ಯೋಚಿಸಬೇಕು - ಪ್ರಕಾಶ್ ರಾಥೋಡ್, ಶಾಸಕ.

ರಾಜಕಾರಣಿಗಳ ವೈರಸ್‌ಗಳಿಗೆ ಹೆದರಿ ಸದನದೊಳಗೆ ಕಾಲಿಡಲು ಕೊರೋನ ವೈರಸ್ ಹೆದರುತ್ತಿದೆಯಂತೆ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು