varthabharthi


ವೈವಿಧ್ಯ

ಆಬಿದ್ ಸುರ್ತಿ: ಮುಂಬೈ ಶಹರಿನ ಜಲ ಸಂರಕ್ಷಕ

ವಾರ್ತಾ ಭಾರತಿ : 16 Mar, 2020
ರಾಜೇಂದ್ರ ಪೈ

  ಮುಂಬೈಯ ನಿವಾಸಿಯೊಬ್ಬರು ಫೇಸ್ ಬುಕ್ಕಲ್ಲಿ ಹೀಗೆ ಬರೆದಿದ್ದಾರೆ. ‘‘ಮುಂಬೈಯ ನನ್ನ ಸ್ನೇಹಿತರೇ, ನಿಮ್ಮ ಮನೆಯ ಕಾಲ್ ಬೆಲ್ ಸದ್ದು ಮಾಡಿತೆಂದು ಬಾಗಿಲು ತೆರೆದಾಗ ನಿಮ್ಮೆದುರು 84 ವರ್ಷ ವಯಸ್ಸಿನ ಅಜ್ಜ ನಿಂತಿದ್ದು ನಿಮ್ಮ ಮನೆಯ ನಲ್ಲಿಗಳು ಸರಿಯಾಗಿವೆಯೇ ಅಥವಾ ಸೋರುತ್ತಿವೆಯೇ ಎಂದು ಅವರು ನಿಮ್ಮನ್ನು ಪ್ರಶ್ನಿಸಿದರೆ ಅವರನ್ನು ಮನೆಯೊಳಗೆ ಕರೆಯಿರಿ. ಯಾಕೆಂದರೆ ಅವರು ಬೇರೆ ಯಾರೂ ಅಲ್ಲ. ಅವರು ಆಬಿದ್ ಸುರ್ತಿ. ಕಾರ್ಟೂನಿಸ್ಟ್, ಪರಿಸರವಾದಿ, ನಾಟಕಕಾರ, ಪತ್ರಕರ್ತ, ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ ವಿಜೇತ ಸಾಹಿತಿ ಆಬಿದ್’’

 ಹೌದು. 84ರ ಇಳಿವಯಸ್ಸಿನಲ್ಲಿ ಆಬಿದ್ ಮುಂಬೈಯಲ್ಲಿ ಮನೆ ಮನೆಗೆ ಹೋಗುತ್ತಾರೆ. ಸೋರುವ ನಲ್ಲಿಗಳಿಂದ ವ್ಯರ್ಥವಾಗಿ ಗಟಾರ ಸೇರುವ ನೀರನ್ನು ಉಳಿಸುವುದು ಮತ್ತು ಮನೆಮಂದಿಗೆ ನೀರಿನ ಮಹತ್ವ ತಿಳಿಹೇಳುವುದು ಅವರ ಪರಮ ಗುರಿ. ಅವರದೇ ಮಾತಿನಲ್ಲಿ ಹೇಳುವುದಾದರೆ. ‘‘ನಾನು ಫುಟ್‌ಪಾತ್‌ನಲ್ಲಿ ಬೆಳೆದವನು. ಬಡತನ ನನ್ನ ಬಾಲ್ಯ ಕಾಲದ ಸಾಥಿ. ನನ್ನ ಅಮ್ಮ ಬೆಳಗ್ಗೆ ನಾಲ್ಕು ಗಂಟೆಗೆ ಸಾರ್ವಜನಿಕ ನಲ್ಲಿಯ ಎದುರಿನ ಸರತಿಯ ಸಾಲಿನಲ್ಲಿ ಒಂದು ಬಕೆಟ್ ನೀರಿಗಾಗಿ ಗಂಟೆಗಟ್ಟಲೆ ಕಾದು ನಿಂತದ್ದನ್ನು ನೋಡಿದ್ದೇನೆ. ನೀರಿಗಾಗಿ ಮಾರಾಮಾರಿ ನೋಡನೋಡುತ್ತ ಬೆಳೆದವನು ನಾನು. ಬಾಲ್ಯದ ನೆನಪುಗಳು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಇಂದಿಗೂ ಉಳಿದಿವೆ. ನೀರಿಗಾಗಿ ಯುದ್ಧ ನಡೆಯುವ ದಿನಗಳು ಸನ್ನಿಹಿತವಾಗಿವೆ. ಇಷ್ಟಾದರೂ ಅನುಕೂಲಸ್ಥರು ತಮ್ಮ ಮನೆಯೊಳಗೆ ಇರುವ ಸೋರುವ ನಲ್ಲಿಗಳನ್ನು ರಿಪೇರಿ ಮಾಡದೆ ಅಸಡ್ಡೆ ತೋರಿಸುತ್ತಾರೆ. ಸೆಕೆಂಡ್‌ಗೆ ಒಂದೇ ಡ್ರಾಪ್ ಏನು ಮಹಾ ಎನ್ನುವ ಧೋರಣೆ ಅವರದ್ದು. ಸೆಕೆಂಡ್‌ಗೆ ಒಂದೇ ಹನಿ ಎಂದರೆ ದಿನಕ್ಕೆ ಎಷ್ಟಾಯ್ತು? ವರ್ಷವೊಂದಕ್ಕೆ ವ್ಯರ್ಥವಾದ ನೀರಿನ ಬೆಲೆಯೇನು? ಈ ರೀತಿ ವ್ಯರ್ಥವಾಗಿ ಸೋರಿ ಗಟಾರ ಸೇರುವ ನೀರನ್ನು ಉಳಿಸಲು ಓರ್ವ ಪ್ಲಂಬರ್ ಸಹಿತ ನಾನು ಮನೆ ಮನೆಗೆ ಹೋಗುತ್ತೇನೆ. ಇದಕ್ಕಾಗಿ ನಾನು Drop Dead Foundation ಹೆಸರಿನ ಸ್ವಯಂಸೇವಾ ಸಂಸ್ಥೆಯನ್ನು 2007ರಲ್ಲಿ ಸ್ಥಾಪಿಸಿದ್ದೇನೆ.

ನನ್ನ ಸ್ನೇಹಿತರು ನನಗೆ ಬುದ್ಧಿ ಹೇಳ್ತಾರೆ. ಆಬಿದ್ ಈ ಪ್ರಾಯದಲ್ಲಿ ಏನಿದೆಲ್ಲ? ನನ್ನ ಮನೆಯಿಂದ ಗಂಗೆ ಹರಿಯುತ್ತಿದ್ದಾಳೆಯೇ? After all ಹನಿ ನೀರಿಗಾಗಿ ಯಾಕಿಷ್ಟು ಗಾಬರಿ?

ನಾನು ಮಾಡುತ್ತಿರುವ ಕೆಲಸದ ಮಹತ್ವ ಮತ್ತು ಆ ಕೆಲಸ ಮಾಡುವುದರಿಂದ ನನಗೆ ದೊರೆಯುವ ಆನಂದದ ಅರಿವು ಅವರಿಗಿಲ್ಲ. ನಾನು ಈ ಕೆಲಸದಿಂದ ಸಂಪಾದಿಸಿಲ್ಲ. ಬದಲಿಗೆ ನನ್ನ ಕಿಸೆಯಿಂದ ವ್ಯಯಿಸುತ್ತಿದ್ದೇನೆ. ನೀರಿನ ಜಾಗೃತಿಗಾಗಿ ನನ್ನ ಉಳಿತಾಯ, ಕೇಂದ್ರ ಸಾಹಿತ್ಯ ಪ್ರಶಸ್ತಿಯ ಮೊತ್ತವನ್ನು ಖರ್ಚು ಮಾಡಿದ್ದೇನೆ. ಫಲಾಪೇಕ್ಷೆಯಿಲ್ಲದೆ ಸಮಾಜದ ಸೇವೆ ಮಾಡುತ್ತಿರಬೇಕಾದರೆ ದೇವರೇ ನಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಅಂತೆಯೇ ನನ್ನ ಕೆಲಸಕ್ಕೆ ಬೇಕಾದ ಆರ್ಥಿಕ ಬೆಂಬಲಕ್ಕೆ ದೇವರೇ ನನ್ನ ಜತೆ ನಿಂತ ಹಾಗಿದೆ. ಒಂದು ವೇಳೆ ನನಗಿದು ಸಾಧ್ಯ ಎಂದಾದರೆ ನಿಮಗೂ ಸಾಧ್ಯ.

ದಣಿವರಿಯದೇ ವಿವರಿಸುತ್ತಲೇ ಹೋಗುವ ಎಂಬತ್ತನಾಲ್ಕರ ಯುವಕ ಆಬಿದ್ ಕಣ್ಣುಗಳು ಸಾರ್ಥಕತೆಯಿಂದ ಹೊಳೆಯುತ್ತವೆ.

ಬಾಗಿಲು ಮುಚ್ಚುತ್ತಿದ್ದರು!

ಡ್ರಾಪ್ ಡೆಡ್ ಫೌಂಡೇಶನ್‌ನ ಉದ್ದೇಶ ಹಾಗೂ ನೀರಿನ ಮಹತ್ವವನ್ನು ಒಳಗೊಂಡ ಮುದ್ರಿತ ಕರಪತ್ರವನ್ನು ಮುನ್ನಾದಿನವೇ ಅಸೋಸಿಯೇಷನ್ ಮೂಲಕ ಫ್ಲಾಟುಗಳಿಗೆ ತಲುಪಿಸಿದ ಹೊರತಾಗಿಯೂ ಆಬಿದ್ ತಂಡಕ್ಕೆ ಮನೆಯೊಳಗೆ ಕಾಲಿಡಲು ಬಿಡದೆ ಬಾಗಿಲು ಮುಚ್ಚುತ್ತಿದ್ದರು. ಜನರ ಸಂಶಯ ನಿವಾರಿಸಲು ತನ್ನ ಮತ್ತು ಪ್ಲಂಬರನ ಜೊತೆಯಲ್ಲಿ ಸ್ವಯಂಸೇವಾ ಸಂಸ್ಥೆಯ ಸ್ವಯಂ ಸೇವಕಿಯಾಗಿರುವ ಸುಂದರ ತರುಣಿಯೊಬ್ಬಳನ್ನು ಕರೆದುಕೊಂಡು ಹೋಗಲಾರಂಭಿಸಿದರು. ಐಡಿಯಾ ಯಶಸ್ವಿಯಾಯಿತು. ತರುಣಿ ಬೆಲ್ ಒತ್ತಿ ಎದುರು ನಿಂತರೆ ಆಕೆಯ ಹಿಂದೆ ಆಬಿದ್! ಮುಚ್ಚಿದ ಬಾಗಿಲುಗಳು ತೆರೆದುಕೊಂಡವು. ಸೋರುತ್ತಿರುವ ನಲ್ಲಿಗಳು ರಿಪೇರಿಯಾದವು. ನೀರು ಉಳಿತಾಯವಾಯಿತು!

ಇದು ನನ್ನ ಆರಾಧನೆ

‘‘ನಮ್ಮ ಮನೆಯ ನಲ್ಲಿಯನ್ನು ಧರ್ಮಾರ್ಥ ರಿಪೇರಿ ಮಾಡುವುದರಿಂದ ನಿಮಗೇನು ಲಾಭ?’’ ಮನೆಯೊಂದರ ವಾಲಕರು ಆಬಿದ್‌ರನ್ನು ಪ್ರಶ್ನಿಸಿದರು.

  ‘‘ಏನಿಲ್ಲ ನೀರ ಕಾಳಜಿ...’’ ಎಂದುತ್ತರಿಸಿದರವರು. ಪ್ಲಂಬರ್ ಮನೆಯೊಳಗೆ ನಲ್ಲಿ ರಿಪೇರಿ ಮಾಡುತ್ತಲೇ ಇದ್ದ. ಎರಡೇ ನಿಮಿಷದಲ್ಲಿ ಯಜಮಾನರು ಮತ್ತದೇ ಪ್ರಶ್ನೆಯನ್ನು ತಿರುಗಿಸಿ ಕೇಳಿದರು. ‘‘ನಿಮ್ಮ ಅಜೆಂಡಾ ಏನು? ಯಾವ ಪಕ್ಷದವರು ನೀವು?’’

‘‘ನಾನು ಯಾವುದೇ ರಾಜಕೀಯ ಪಕ್ಷದವನಲ್ಲ’’ ಎಂದರು ಆಬಿದ್. ಯಜಮಾನರಿಗೆ ಸಮಾಧಾನವಾಗಲಿಲ್ಲ. ಐದೇ ನಿಮಿಷಲ್ಲಿ ಮತ್ತದೇ ಪ್ರಶ್ನೆ ಕೇಳಿದರು!

ಈ ಸಲ ಆಬಿದ್ ಉತ್ತರಿಸುವ ಬದಲಿಗೆ ಮರುಪ್ರಶ್ನಿಸಿದರು: ‘‘ನೀವು ನಮಾಝ್ ಮಾಡುತ್ತೀರಾ?’’ ಯಜಮಾನರು ದಿನಕ್ಕೆ ಐದು ಸಲ ನಮಾಝ್ ಮಾಡುತ್ತಿರುವುದಾಗಿ ಹೆಮ್ಮೆಯಿಂದ ಹೇಳಿದರು. ಆಬಿದ್ ಮತ್ತೆ ಕೇಳಿದರು ‘‘ಯಾಕೆ ನಮಾಝ್ ಮಾಡುತ್ತೀರಿ?’’

‘‘ದೇವರನ್ನು ಸಂತೋಷಪಡಿಸಲು’’

‘‘ಸರಿಯಾಗಿ ಹೇಳಿದಿರಿ. ನಿಮ್ಮ ಆರಾಧನೆಯಿಂದ ನೀವು ದೇವರನ್ನು ಸಂತೋಷಪಡಿಸುವಿರಿ. ಇದು ನನ್ನ ಆರಾಧನೆ. ನನ್ನ ಆರಾಧನೆಯಿಂದ ದೇವರು ಮತ್ತು ಅವನ ಆರಾಧಕರು ಸಂತೋಷಪಡುತ್ತಾರೆ ಎಂದು ನಂಬಿದ್ದೇನೆ...’’ ಎಂದುತ್ತರಿಸಿದರು ಆಬಿದ್.

(ಮೇರೀ ಬಂದಗೀ ಸೇ ಖುದಾ ಭೀ ಖುಷ್ ಔರ್ ಉಸ್ಕಾ ಬಂದಾ ಭೀ ಖುಷ್...)

ಈ ಸಲ ಯಜಮಾನರು ಮರುಪ್ರಶ್ನಿಸಲಿಲ್ಲ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)