varthabharthi


ಅನುಗಾಲ

ವಿಮರ್ಶೆಗೆ ಗೋಪಾಲಕೃಷ್ಣ ಅಡಿಗರ ಕಾಣ್ಕೆ

ವಾರ್ತಾ ಭಾರತಿ : 18 Mar, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಅಡಿಗರಿಗೆ ಪರಂಪರೆಯ ಕುರಿತು ಅಪಾರ ಗೌರವವಿತ್ತು. ಈ ಪರಂಪರೆಯಿಂದಲೇ ಅವರು ತಮ್ಮ ಪ್ರಯೋಗಗಳನ್ನು ಶೋಧಿಸಿದರು. ಅಗೆವ ಕೆಲಸ ನಡೆಯಬೇಕು, ಮೊದಲು ಕೋಶಾವಸ್ಥೆ ಮಣ್ಣು; ಕೆಳಕ್ಕೆ, ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ ಕಂಡೀತು ಗೆರೆಮಿರಿವ ಚಿನ್ನದದಿರು. ಅದನ್ನು ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ ಮತ್ತು ಅಲ್ಲಿ ದಕ್ಕಿದ ಹೊನ್ನ ಕಾಯಿಸಿ ಹಿಡಿದು ಬಡಿದು ಇಷ್ಟದೇವತಾ ವಿಗ್ರಹಕ್ಕೊಗ್ಗಿಸುವ ಅಸಲು ಕಸಬನ್ನು ಕಲಿಯಬೇಕು ಎಂಬುದು ಅವರ ನಿಲುವು.


ಭಾಗ-2

(ಕಳೆದ ವಾರದಿಂದ ಮುಂದುವರಿದಿದೆ)

ವ್ಯಂಗ್ಯವೆಂದರೆ ಅಡಿಗರ ಅತ್ಯಂತ ಅಭಿಮಾನಿ ಶಿಷ್ಯರು ಮತ್ತು ಅವರನ್ನು ಅತ್ಯಂತ ಗೌರವದಿಂದ ಕಾಣುವ ಲೇಖಕರು ಮತ್ತು ವಿಶೇಷವಾಗಿ ವಿಮರ್ಶಕರು ಅಡಿಗರ ಈ ಮಾತುಗಳನ್ನು ಲೆಕ್ಕಿಸದೆ ಅವರನ್ನು ಆರಾಧಿಸಿದರು; ಕೆಲವೊಮ್ಮೆ ಅತಿರೇಕವಾಗಿಯೂ. ಯಾವುದನ್ನು ಅಡಿಗರು ಅಲ್ಲಗಳೆದರೋ ಮತ್ತು ನಿರಾಕರಿಸಿದರೋ ಅದು ಅಡಿಗರ ಪರಂಪರೆಯಲ್ಲಿ ನಿರಾಕರಣೆಯಾಗಲಿಲ್ಲ. ಈ ವಿರೋಧಾಭಾಸವು ಈಗಲೂ ನಡೆಯುತ್ತಿದ್ದು ಅಡಿಗರು ತಮ್ಮ ಸಮಾಧಿಯಲ್ಲೇ ನರಳುವಂತಾಗಿದೆ. ಕೃತಿಗಿಂತ ಕೃತಿಕಾರ ಮುಖ್ಯನಾಗಬಾರದು ಮತ್ತು ಕೃತಿಕಾರ ಎಷ್ಟೇ ದೊಡ್ಡವನಾದರೂ ಆತನ ಕೃತಿಯ ಮೌಲ್ಯವಿವೇಚನೆಯ ಸಂದರ್ಭದಲ್ಲಿ ಕೃತಿಕಾರನ ನೆರಳು ವಿಮರ್ಶಕನ ಮೇಲೆ ಬೀಳಬಾರದೆಂದ ಅಡಿಗರ ನೀತಿ ಅವರ ಆರಾಧನೆಯ ವ್ಯಕ್ತಿನಿಷ್ಠ ನೆರಳಿನಲ್ಲಿ ಹಿಂದೆಬಿದ್ದದ್ದು ಸಾಹಿತ್ಯದ ಅದರಲ್ಲೂ ವಿಮರ್ಶೆಯ ದುರ್ದೈವ. ಸ್ಥೂಲವಾಗಿ ಇದು ಹೇಗಿದೆಯೆಂದರೆ ‘‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ’’ಎಂದು ಚಳುವಳಿ ಮಾಡುವವರು ‘‘ಬ್ರಿಟಿಷರೇ ನೀವು ತೊಲಗುವಾಗ ನಮ್ಮನ್ನೂ ಕರೆದುಕೊಂಡು ಹೋಗಿ’’ ಎಂಬ ಹಾಗಾಗಿದೆ.

ಅಡಿಗರಿಗೆ ಪರಂಪರೆಯ ಕುರಿತು ಅಪಾರ ಗೌರವವಿತ್ತು. ಈ ಪರಂಪರೆಯಿಂದಲೇ ಅವರು ತಮ್ಮ ಪ್ರಯೋಗಗಳನ್ನು ಶೋಧಿಸಿದರು. ಅಗೆವ ಕೆಲಸ ನಡೆಯಬೇಕು, ಮೊದಲು ಕೋಶಾವಸ್ಥೆ ಮಣ್ಣು; ಕೆಳಕ್ಕೆ, ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ ಕಂಡೀತು ಗೆರೆಮಿರಿವ ಚಿನ್ನದದಿರು. ಅದನ್ನು ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ ಮತ್ತು ಅಲ್ಲಿ ದಕ್ಕಿದ ಹೊನ್ನ ಕಾಯಿಸಿ ಹಿಡಿದು ಬಡಿದು ಇಷ್ಟದೇವತಾ ವಿಗ್ರಹಕ್ಕೊಗ್ಗಿಸುವ ಅಸಲು ಕಸಬನ್ನು ಕಲಿಯಬೇಕು ಎಂಬುದು ಅವರ ನಿಲುವು. ಜಿ.ಎಚ್. ನಾಯಕರ ಸಮಕಾಲೀನ ಕೃತಿಯ ಕುರಿತು ಬರೆಯುವಾಗ ಅವರು ಈ ಅಂಶವನ್ನು ನೆನಪಿಸಿ ‘‘ಪರಂಪರೆಯನ್ನು ರೂಢಿಸಿಕೊಳ್ಳುವುದು ಅದರ ನಕಲುಗಳನ್ನು ತೆಗೆಯುತ್ತ ಹೋಗುವುದರಿಂದಲ್ಲ, ಅದಕ್ಕೆ ಹೊಸ ತಿರುವನ್ನೂ ಆಯಾಮವನ್ನೂ ಕೊಡುವುದರಿಂದ’’ ಎಂದರು. ಬೇಂದ್ರೆಯವರ ಕಾವ್ಯದ ಬಗ್ಗೆ ಬರೆಯುತ್ತಾ ಅವರು ‘‘ಹೀಗೆ ಬೆಳೆದ ನೂತನ ಸಾಹಿತ್ಯದ ಬೇರು ಭೂತಕಾಲದ ಸಾಹಿತ್ಯದಲ್ಲಿ ನೆಟ್ಟಿದ್ದರೂ ಬಂದ ಬೆಳೆ ಮಾತ್ರ ಭಿನ್ನವಾಗಿ ತನ್ನದೇ ಆದ ಒಂದು ವಿಶಿಷ್ಟ ರೂಪವನ್ನು ಪಡೆಯಿತು’’ ಎಂದಿದ್ದಾರೆ. ಅಡಿಗರಿಗೆ ಸಿದ್ಧ ಉಡುಪು ತಯಾರಾಗಬೇಕಾದರೆ ಅದರ ಹಿಂದೆ ಬಹಳಷ್ಟು ದರ್ಜಿ ಕೆಲಸವಿದೆಯೆಂಬ ಮತ್ತು ಇರಬೇಕೆಂಬ ಕಾಳಜಿ, ಮುತುವರ್ಜಿಯಿತ್ತು. ಎಲ್ಲವನ್ನೂ ಸುಲಭವಾಗಿ ಸಂಭಾಳಿಸಿ ಜನಪ್ರಿಯತೆಯನ್ನು ಹೊಂದುವ ಹಾದಿ ಅಡಿಗರದ್ದಲ್ಲ. ಅವರ ಪರಂಪರೆ ಅಥವಾ ಮಾರ್ಗದಲ್ಲಿರುವ ಬಹಳಷ್ಟು ಮಂದಿ ಈ ಅಂಶವನ್ನು ಮರೆತಿದ್ದಾರೆಂಬುದೇ ವಿಷಾದಕರ.

ಕವಿ ಅಡಿಗರು ತಮ್ಮ ವಿಮರ್ಶೆ ಮತ್ತಿತರ ಗದ್ಯ ಲೇಖನಗಳಲ್ಲಿ ಪ್ರತಿಪಾದಿಸಿದ ‘‘ಸಾಮಾಜಿಕ-ಸಾಂಸ್ಕೃತಿಕ-ಸಾಹಿತ್ಯಿಕ ಆಶಯಗಳು’’ ಅಸಾಮಾನ್ಯವಾದವು ಮತ್ತು ಅನನ್ಯವಾದವೂ ಹೌದು. ಅವರ ‘ಮಣ್ಣಿನ ವಾಸನೆ’ಯೆಂಬ ಲೇಖನವು ಅವರ ದೀರ್ಘಕವನಗಳಂತೆಯೇ ಓದಿಸುತ್ತದೆ. ಅಲ್ಲಿ ಈ ನೆಲಕ್ಕೆ ತಾನು ಅಂಟಿದ ಆಪ್ತತೆಯಿದೆ. ಆದರೆ ಅದು ಮಣ್ಣು-ನೆಲ ಎಂಬ ತಾಂತ್ರಿಕ ನೆಲೆಯಿಂದ ಮೇಲಿದೆ. ಅದು ಒಟ್ಟು ಬೌದ್ಧಿಕ-ಭೌತಿಕ ಬೇರುಗಳಲ್ಲಿ ವ್ಯವಹರಿಸುವ ಅವಿನಾ ಸಂಬಂಧದ ಕುರಿತು ಮಾತನಾಡುತ್ತದೆ. ಮಣ್ಣೆಂದರೆ ಮಣ್ಣಲ್ಲ. ಸಾಹಿತ್ಯದ ಮಟ್ಟಿಗೆ ಅದು ಕೃತಿಯ ಮೇಳಗಾನದಲ್ಲಿ ಬೆರೆತು ಒಂದಾಗುವ ಆದರೂ ತನ್ನ ಸ್ಥಾನ ವೈಶಿಷ್ಟ್ಯಗಳನ್ನು ಕಾಯ್ದಿಟ್ಟುಕೊಳ್ಳುವ ಸ್ವರ. ಅದು ತನ್ನ ಕಾವ್ಯಸೃಷ್ಟಿಯ ಕುರಿತ ಮೀಮಾಂಸೆಯೂ ಹೌದು. ಇದನ್ನೇ ಅವರು ‘‘ಇಡೀ ಕವನವನ್ನೇ ಒಂದು ಘಟಕವಾಗಿ, ಒಂದು ಸರ್ವಾಂಗ ಪರಿಪೂರ್ಣ ಶರೀರವನ್ನಾಗಿ ಕವಿ ರಚಿಸುವುದೂ ಅದನ್ನು ಹಾಗೆಯೇ ಪರಿಭಾವಿಸಿ ಬೆಲೆ ಕಟ್ಟಲು ಯತ್ನಿಸುವುದೂ ಕೃತಿ ರಚನೆಗೆ ಹೇಗೋ ಹಾಗೆ ಕಾವ್ಯ ಸಾಹಿತ್ಯಗಳ ಅಭ್ಯಾಸ ವಿಮರ್ಶೆಗೂ ಈಗ ಅತ್ಯಗತ್ಯವಾದ ಕೆಲಸ’’ ಎನ್ನುತ್ತಾರೆ. ಲೇಖನದ ಕೊನೆಯ ಭಾಗದಲ್ಲಿ ಅವರು ಇವೆಲ್ಲವನ್ನೂ ಒಟ್ಟಾಗಿಸಿ ‘‘ಮಣ್ಣಿನ ವಾಸನೆ ಎಲ್ಲಿ ಇಲ್ಲವೋ ಅಲ್ಲಿ ಜೀವವಿಲ್ಲ. ಮಣ್ಣಿಗೂ ಜೀವಕ್ಕೂ ಅವಿಚ್ಛಿನ್ನ ಸಂಬಂಧ. ಜೀವ ಪ್ರಪಂಚಕ್ಕೆ ಸೇರಿದ ಸಾಹಿತ್ಯದಲ್ಲಿ ಎಂತೆಂತಹ ಉದಾತ್ತವಾದ ವಿಚಾರಗಳೂ, ಕಲ್ಪನೆಗಳೂ ಇರಲಿ, ಅಲ್ಲಿ ಈ ಪಾರ್ಥಿವ ಲೋಕದ ವಾಸನೆ ಹೊಡೆಯುತ್ತಿದ್ದರೆ ಮಾತ್ರ ಅದು ನಿಜವಾದದ್ದೂ ಸಾರ್ಥಕವಾದದ್ದೂ ಆಗಬಲ್ಲದು. ಈ ಮಣ್ಣಿನ ವಾಸನೆ ಇಲ್ಲದ್ದು ಅದು ಮೃತ್ಯುಲೋಕಕ್ಕೆ ಅಥವಾ ಅಮೃತ ಲೋಕಕ್ಕೆ ಸೇರಿದ್ದಲ್ಲದೆ, ನಮ್ಮ ಈ ಬಡ ಮೃಣ್ಮಯ ಲೋಕಕ್ಕೆ ಸೇರಿದ್ದಂತೂ ಅಲ್ಲ.’’ ಎಂಬ ಸೂತ್ರ ವಾಕ್ಯಗಳೊಂದಿಗೆ ಮಂಡಿಸುತ್ತಾರೆ. ಮೃತ್ಯು-ಅಮೃತ-ಮೃಣ್ಮಯ ಎಂಬ ಮೂರು ಪದಗಳಲ್ಲಿ ಅವರು ಸ್ವರ್ಗ-ನರಕಗಳೆಂಬ ತಾತ್ವಿಕ ನಂಬಿಕೆಗಳ ನಡುವಿರುವ ಈ ವಾಸ್ತವ ಲೋಕದ ಇರವನ್ನು ಮತ್ತು ಅರಿವನ್ನು ಮೂಡಿಸುತ್ತಾರೆ.

  ಅಡಿಗರು ತಮ್ಮ ಸಮಕಾಲೀನರ ಮತ್ತು ಆನಂತರದವರ ಕುರಿತು ಬರೆದದ್ದೇ ಹೆಚ್ಚು. ಸಾಂದರ್ಭಿಕವಾಗಿ ಬೇಂದ್ರೆ, ತೀನಂಶ್ರೀ, ಗೋವಿಂದ ಪೈ, ರಾಜರತ್ನಂ, ಕಾರಂತ ಹೀಗೆ ಪರಂಪರೆಯ ಹರಿಕಾರರ ಕುರಿತು ಬರೆದಿದ್ದಾರಾದರೂ ಅವರು ಹೊಸತಿಗೆ ಒತ್ತು ನೀಡಿ ಅದನ್ನು ಬೆಳೆಸಬೇಕೆಂಬ ತವಕದಲ್ಲಿದ್ದರು. ಜಿಎಸ್‌ಎಸ್, ಮಾವಿನಕೆರೆ, ಅನಂತಮೂರ್ತಿ, ಚಿತ್ತಾಲ, ನಾಡಿಗ, ಲಂಕೇಶ, ಕಂಬಾರ, ಜಿ.ಎಚ್.ನಾಯಕ, ಆಲನಹಳ್ಳಿ, ಲಕ್ಷ್ಮ್ಮಣರಾವ್, ಇವರ ಮತ್ತು ತಾವು ಒರೆವ ನವ್ಯದ ಪಂಥಕ್ಕೆ ಹೊಂದುವ ಮಾರ್ಗಸೂಚಿಗಳ ಮತ್ತು ಅದಕ್ಕೆ ಪೂರಕ ಹಾಗೂ ಸ್ಪರ್ಧೆಯೊಡ್ಡುವ ಸಂಘಟನೆ, ಚಳುವಳಿ ಇವುಗಳ ಕುರಿತಂತೆ ಬರೆದರು. ಅವರ ಆಕ್ಷೇಪಗಳು ಯಾವತ್ತೂ ಕರಾರುವಾಕ್ಕು ಆದರೆ ನವಿರು. ಒಂದು ತಲೆಮಾರಿನ ಸಾಕ್ಷಿಪ್ರಜ್ಞೆಯಂತೆ ಬರೆದರೂ ಅವರು ಸಂಖ್ಯಾ ಬಾಹುಳ್ಯಕ್ಕೆ ಎಂದೂ ಪ್ರಾಮುಖ್ಯತೆ ನೀಡಲಿಲ್ಲ. ವಿಮರ್ಶಕನೊಬ್ಬ ಸದಾ ಕಾಯುತ್ತಿರಬೇಕು ಎಂಬ ಎಚ್ಚರ ಅವರಿಗಿತ್ತು. ಎಲ್ಲದಕ್ಕೂ ಮತ್ತು ಯಾವಾಗಲೂ ಅವರು ಪ್ರತಿಕ್ರಿಯಿಸಿದ ನಿದರ್ಶನಗಳಿಲ್ಲ.

ಕೈಗೆ ಸಿಕ್ಕಿದ್ದೆಲ್ಲ ಒಳ್ಳೆಯದೆಂಬ ತರ್ಕ ಅವರದ್ದಲ್ಲ. ಕವಿಯೂ ವಿಮರ್ಶಕನೂ ಆಗಿದ್ದ ಅಡಿಗರು ‘ವಿಮರ್ಶಕ’ ಎಂಬ ಒಂದು ಪದ್ಯವನ್ನು ಬರೆದಿದ್ದಾರೆ. ಇಲ್ಲಿ ಕುವೆಂಪು ಹೇಳಿದ ‘‘ನಾನೇರುವೆತ್ತರಕೆ ನೀನೇರಬಲ್ಲೆಯಾ?’’ ಎಂಬ ಧಾಟಿ (ಇದು ಆ ಪದ್ಯದ ವಿಮರ್ಶೆಯಲ್ಲ; ಅಲ್ಲೂ ವಿಮರ್ಶಕನಿಗೆ ಸಲ್ಲಬೇಕಾದ ಗೌರವವಿದ್ದು ಅಂತಿಮವಾಗಿ ಸೃಜನಶೀಲತೆಗೆ ವಿಮರ್ಶೆ ಪಕ್ಕವಾದ್ಯವೇ ವಿನಾ ಅದೇ ಕೇಂದ್ರವಾಗದೆಂಬ ಮತ್ತು ಕಾವ್ಯ ಸ್ಥಾಯಿ/ಶಾಶ್ವತ, ವಿಮರ್ಶೆ ಸಂಚಾರಿ ಎಂಬ ಪರೋಕ್ಷ ನೀತಿಯಿದೆ!) ಸ್ವಲ್ಪಸುಧಾರಿಸಿದೆ. ಅಡಿಗರು ‘‘ನಾನೇರುವೆತ್ತರಕ್ಕೆ ನೀನು ಕೂಡಾ ಏರಿ ನೆಳಲಂತೆ ನಾನಿಳಿಯುವಾಳಕ್ಕು ನುಸುಳಿ ನುಗ್ಗಿದಿಗಂತದೆಡೆಗೆ ನಾ ಬಿಚ್ಚಿದ ರೆಕ್ಕೆಗೆ ರೆಕ್ಕೆ ಹಚ್ಚಿ ಹೊಸ ದಿಗಂತಗಳನ್ನು ಪತ್ತೆ ಹಚ್ಚಿ’’ ಎಂಬ ಸಾಲುಗಳಲ್ಲಿ ಬರುವ ‘ನೀನು ಕೂಡಾ ಏರಿ’, ‘ನೆಳಲಂತೆ, ನಾನಿಳಿಯುವಾಳಕ್ಕು ನುಸುಳಿ’, ‘ನಾ ಬಿಚ್ಚಿದ ರೆಕ್ಕೆಗೆ ರೆಕ್ಕೆ ಹಚ್ಚಿ’ ಈ ಮಾತುಗಳಲ್ಲಿ ಯಾರು ಆಕೃತಿ ಯಾರು ನೆರಳು ಎಂಬುದು ಸೂಚಿತವಾಗಿದೆ. ವಿಮರ್ಶಕನ ಪೋಷಕ ಪಾತ್ರ ಚಿತ್ರಿತವಾಗಿದೆ.

ಆದರೂ ಕುವೆಂಪು ಅವರಂತೆಯೇ ಇಲ್ಲೂ ಒಂದು ಸಾಮರಸ್ಯದ, ಸಮನ್ವಯತೆಯ ಧೋರಣೆಯಿದೆ: ‘‘ಒಳಗಣ್ಣಿನಲ್ಲೋಲದಲ್ಲಿ ಮೂಡುವ ನೀನು ಹೊರಗಿನವನಂತೂ ಅಲ್ಲ; ನನ್ನೊಳಗಿನವ;’’ ಮತ್ತು ‘‘ಒರೆಗಿಕ್ಕುವ, ಸಾಣೆ ಹಿಡಿವ, ತೂಗುವ, ಅಳೆವ ಕಾರುಬಾರೆಲ್ಲವೂ ನಿನ್ನದೇ;’’ ಅಷ್ಟು ಮಾತ್ರವಲ್ಲ, ‘‘ನಿದ್ದೆ ಮಂಪರಿನಲ್ಲಿ ಸೂಜಿಚುಚ್ಚಿ ಎಚ್ಚರಿಸಿದವ, ಇಷ್ಟುದ್ದ ದಬ್ಬಳ ಹಿಡಿದು ಊದಿಕೊಂಡಾಗೆಲ್ಲ ಚುಚ್ಚಿ ಅನವಶ್ಯಕ ಗಾಳಿ ಹೊರಗಟ್ಟಿದವ’’ ಮತ್ತು ಮುಂದೆ ‘‘ನನ್ನ ವಿಗ್ರಹ ಮುಕ್ಕು ಮಾಡಿ ತದನಂತರವೆ ಬೀದಿಗೆಳೆದವನೆ, ಕೊಂದವನೆ, ಕೊಂದು ಬದುಕಿಸಿದವನೆ, ಜನ್ಮಶನಿಯೇ, ಜಿಗಣೆಗೆಣೆಯ, ಗುರುವೇ’’ ಎಂಬ ಹಂತಕ್ಕೆ ಏರುತ್ತದೆ. ಅಡಿಗರು ತಮ್ಮ ಕಾವ್ಯದಲ್ಲಿ ಹೇಳಿದ ‘‘ದೊಡ್ಡದೊಡ್ಡ ಮಾತು ಬೆಲೂನು ಹಿಗ್ಗುವಾಗೆಲ್ಲ ತಾಗಿಸು ನಿಜದ ಸೂಜಿಮೊನೆ’’, ‘‘ಹೊನ್ನ ಕಾಯಿಸಿ ಹಿಡಿದು ಬಡಿದು ಇಷ್ಟದೇವತಾ ವಿಗ್ರಹಕ್ಕೊಗ್ಗಿಸುವ ಅಸಲು ಕಸಬು’’ ಇವೆಲ್ಲ ಅವರಿಗೆ ವಿಮರ್ಶಕನಲ್ಲೂ ಕಂಡಿದೆ. ಕವಿಯೂ ವಿಮರ್ಶಕನೂ ಆಗಿರುವವನು ಮಾತ್ರವೇ ‘‘ನಿನಗೆ ನೀನೇ ಗೆಳೆಯ, ನಿನಗೆ ನೀನೇ’’ ಆಗಬಲ್ಲ. ಎರಡು ವಿದ್ಯುತ್ ತಂತಿಗಳಲ್ಲಿ ಆಯ್ಕೆ ಬಂದಾಗೆಲ್ಲ ಅವುಗಳಲ್ಲಿ ಯಾವುದರಲ್ಲಿ ವಿದ್ಯುತ್ ಇದೆ ಯಾವುದು ಜಡ ಎಂಬ ಅರಿವಿರಬೇಕು. ಎರಡರಲ್ಲೂ ವಿದ್ಯುತ್ ಹರಿಯುತ್ತಿದ್ದರೆ ಯಾವುದನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನೂ ಆತ ತಿಳಿದಿರಬೇಕು.

ಹಾಗಾದರೆ ಅಡಿಗರ ವಿಮರ್ಶೆ ನಿರ್ಲಿಪ್ತವೇ? ಅಲ್ಲ. ಅವರಿಗೂ ಪೂರ್ವಾಗ್ರಹಗಳಿದ್ದವು. ಪುರುಷೋತ್ತಮನ ರೂಪರೇಖೆ ಕೆತ್ತುವ ಹಂಬಲದಲ್ಲೂ ಅವರ ಮನುಷ್ಯಗುಣ ಅನಾವರಣಗೊಳ್ಳುತ್ತಿತ್ತು. ಕನ್ನಡದಲ್ಲಿ ಆಗಲೇ ಜ್ಯೇಷ್ಠರೆಂದೂ ಶ್ರೇಷ್ಠರೆಂದೂ ಪ್ರತಿಷ್ಠಾಪಿಸಿದವರ ಕುರಿತು ಅವರು ಕಹಿಯಾಗಿಯೇ ನಡೆದುಕೊಂಡ ಉದಾಹರಣೆಗಳಿವೆ. ಕುವೆಂಪು ಕಾವ್ಯ ಕುರಿತ ಅವರ ಅನಾದರ ಬಹಳ ಸಲ ಬಹಿರಂಗವಾಗಿತ್ತು. ಬೇಂದ್ರೆಯವರನ್ನು ‘ತಮ್ಮನ್ನು ಪ್ರಭಾವಿಸಿದ ಕವಿ’ಯೆಂದು ಒಪ್ಪಿಕೊಂಡ ಅಡಿಗರು ಬೇಂದ್ರೆ ಪಂಥಕ್ಕೆ ಹೊರತಾದ ಯಾವ ಕವಿಯನ್ನೂ ಒಪ್ಪುವುದು ಕಷ್ಟಸಾಧ್ಯವಿತ್ತು. ಈ ಧೋರಣೆ ಅವರ ಹಾದಿಯ ಇತರ ಅನೇಕ ಸಾಹಿತಿಗಳಲ್ಲೂ ಇತ್ತು; ಇದೆ. ಕುವೆಂಪು ಕುರಿತು ಬೇಂದ್ರೆ ಬರೆದ ‘ಜಗದ ಕವಿ’, ‘ಯುಗದ ಕವಿ’, ‘ರಾಮಾಯಣದಿಂದೆ ಕೈಮುಗಿದ ಕವಿ’ ಎಂಬಿತ್ಯಾದಿ ನುಡಿಗಳನ್ನು ಹೇಳುವಾಗ ಪದ್ಯದ ಪಂಥ ಬೇರೆಯಾದರೂ ಅಂತಸ್ಸತ್ವ, ಮತ್ತು ಅಂತಸತ್ಯ ಒಂದೇ ಎಂಬುದನ್ನು ಬೇಂದ್ರೆ ಒಪ್ಪಿದ್ದರು; ಆದರೆ ಬೇಂದ್ರೆಯವರ ಅಭಿಮಾನಿ ವಿಮರ್ಶಕರು ಈ ನಡೆ-ನುಡಿಯನ್ನು ಒಪ್ಪಲಿಲ್ಲ; ಒಪ್ಪುವುದಿಲ್ಲ. ಪ್ರಾಯಃ ಆಧುನಿಕ ವಿಮರ್ಶಕರು ಕುವೆಂಪು ಕಾದಂಬರಿಗಳನ್ನು ಅತ್ಯಂತ ಮೆಚ್ಚುಗೆಯಿಂದ ಮತ್ತು ಹೊಗಳುವಾಗ ಅವುಗಳ ಶ್ರೇಷ್ಠತೆಯನ್ನು ಒಪ್ಪಿ ತಮ್ಮ ಪ್ರಬುದ್ಧ ಗ್ರಹಿಕೆಯನ್ನು ಮೆರೆದಿದ್ದಾರೆಂದು ಒಪ್ಪಿಕೊಂಡರೂ ಇದೇ ವಿಮರ್ಶೆ ಅವರಿಂದ ಕುವೆಂಪು ಕಾವ್ಯಕ್ಕೆ ಮತ್ತು ಮಹಾಕಾವ್ಯಕ್ಕೆ ದಕ್ಕಲಿಲ್ಲವೆಂಬುದನ್ನೂ ಗಮನಿಸಬೇಕು. (ಇಲ್ಲೇ ಬೇಂದ್ರೆ-ಅಡಿಗರ ಮಾದರಿ ಆನಂತರದವರಿಗೆ ತಪ್ಪುಕಲ್ಪನೆಯನ್ನು ನೀಡಿದ್ದು!)

(ಮುಂದುವರಿಯುವುದು)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)